Thursday, January 31, 2008

ಅಬ್ಬಲಿಗೆ ದಂಡೆ


ಸಂಧ್ಯಾಳಿಗೆ ಆವತ್ತು ಶಾಲೆಯಿಂದ ಮನೆ ತಲುಪಲು ಎಲ್ಲಿಲ್ಲದ ಅವಸರ. ನಿಧಾನಕ್ಕೆ ಹೆಜ್ಜೆ ಹಾಕುತ್ತಿದ್ದ ತಮ್ಮನಿಗೆ ಬೈದು, ಅವನ ಕೈಹಿಡಿದುಕೊಂಡು ಸ್ವಲ್ಪ ಜೋರಾಗಿ ಹೆಜ್ಜೆ ಹಾಕಿದಳು. ದಿನವೂ, ರಸ್ತೆ ಬದಿ ಇದ್ದ ಕೌಳಿ ಮಟ್ಟಿಗಳನೆಲ್ಲಾ ಹುಡುಕಿ ಇದ್ದ ಬದ್ದ ಹಣ್ಣುಗಳನೆಲ್ಲಾ ಕೊಯ್ದುತಿಂದು, ನಿಧಾನಕ್ಕೆ ಅಕ್ಕ-ತಮ್ಮ ಮನೆ ತಲುಪುತ್ತಿದ್ದರಿಂದ, ಇವತ್ತು ಅಕ್ಕ ಅವಸರ ಮಾಡಿದೊಡನೆಯೇ ಮನೆಯಲ್ಲಿ ಎನೋ ವಿಶೇಷವಿರಬೇಕೆಂದು ತಮ್ಮನಿಗೆ ಅನಿಸಿತು. ಆದರೂ ಅಕ್ಕನನ್ನು ಕೇಳಲು ಧೈರ್ಯ ಸಾಕಾಗದೇ, ಸುಮ್ಮನೇ ಅವಳ ಜೊತೆ ಕಾಲುಹಾಕಿದ.


ಈಗೊಂದು ೮ ವರ್ಷದ ಹಿಂದೆ ಸಂಧ್ಯಾಳ ತಂದೆ, ರಾಂಭಟ್ಟರ ತೋಟದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಲು ಘಟ್ಟದ ಕೆಳಗಿನಿಂದ ಸಂಸಾರ ಸಮೇತ ಬಂದಿದ್ದವನು, ವರುಷದ ಮೂರೂ ಕಾಲವೂ ಕೈತುಂಬ ಕೆಲಸವಿದ್ದರಿಂದ, ಭಟ್ಟರ ತೋಟದ ಮೂಲೆಯಲ್ಲಿರುವ ಪಂಪ್ ಹೌಸ್ ಪಕ್ಕದಲ್ಲೆ ಒಂದು ಸಣ್ಣ ಗುಡಿಸಲಿನಂತ ಮನೆ ಕಟ್ಟಿಕೊಂಡು ಅಲ್ಲೇ ಉಳಿದುಕೊಂಡಿದ್ದನು. ಸಂಧ್ಯಾಳ ಅಮ್ಮ, ರಾಂಭಟ್ಟರ ಮನೆಯಲ್ಲೇ ಖಾಯಂ ಕೆಲಸಕ್ಕೆ ಸೇರಿಕೊಂಡಿದ್ದಳು. ಭಟ್ಟರ ಮನೆ ಸದಾ ಮೂರು ಹೊತ್ತು ಆಳುಗಳಿಂದ ಗಿಜಿಗಿಜಿಗುಡುತ್ತಿತ್ತು. ಎಂಟು ಎಕರೆ ತೋಟ, ಸುಮಾರು ೨೫-೩೦ ದನಗಳಿದ್ದ ಕೊಟ್ಟಿಗೆ ಇದ್ದ ಮನೆಗೆ ಒಂದಷ್ಟು ಆಳುಗಳ ಅವಶ್ಯಕತೆ ಸದಾ ಇದ್ದೇ ಇರುತ್ತಿತ್ತು.


ತೋಟದ ಮೂಲೆಯಲ್ಲಿ, ಮನೆ ಪಕ್ಕ ಸಂಧ್ಯಾಳ ಅಮ್ಮ ಬೇಸಿಗೆಯಲ್ಲಿ ಒಂದಷ್ಟು ತರಕಾರಿ ಪಾತಿಗಳನ್ನೂ, ಹೂವಿನ ಗಿಡಗಳನ್ನು ಬೆಳೆಸುತ್ತಿದ್ದಳು. ತೋಟದಲ್ಲಿ ಧಾರಾಳವಾಗಿ ಸಿಗುತ್ತಿದ್ದ ನೀರು, ಗೊಬ್ಬರಗಳನ್ನು ಉಪಯೋಗಿಸಿಕೊಂಡು ತರಕಾರಿ, ಹೂಗಿಡಗಳು ಸೊಕ್ಕಿ ಬೆಳೆಯುತ್ತಿದ್ದವು. ಈ ವರ್ಷ, ಸಂಧ್ಯಾಳ ಅಮ್ಮ ಬೆಂಡೆ ಗಿಡಗಳ ಜೊತೆ ಒಂದಷ್ಟು ಅಬ್ಬಲಿಗೆ ಗಿಡಗಳನ್ನೂ ನೆಟ್ಟಿದ್ದರು. ಮೊದಲೊಂದಷ್ಟು ದಿನ ಬೆಳೆಯಲೋ ಬೇಡವೋ ಎಂಬಂತೆ ಪಿರಿಪಿರಿಯಾಗಿ ಎದ್ದು ನಿಂತಿದ್ದ ಅಬ್ಬಲಿಗೆ ಗಿಡಗಳು, ತಿಂಗಳು ಕಳೆಯುತ್ತಿದಂತೆಯೇ ಹಲವಾರು ಹೂಬಿಡಲು ಶುರು ಮಾಡಿದವು. ಸಂಧ್ಯಾಳಿಗೆ ಮೊದಲಿನಿಂದಲೂ ಅಬ್ಬಲಿಗೆ ಹೂಗಳೆಂದರೆ ಪಂಚಪ್ರಾಣ. ಇವತ್ತು ಸಂಜೆ ಅಮ್ಮ ಅಬ್ಬಲಿಗೆ ಹೂವಿನ ದಂಡೆ ಮಾಡಿಕೊಡುವುದಾಗಿ ಹೇಳಿದ್ದುದರಿಂದಲೇ, ಸಂಧ್ಯಾ ಮನೆ ಸೇರಲು ಅಷ್ಟು ತವಕಿಸುತ್ತಿದ್ದುದು.


ಆನುವಂಶೀಯವಾಗಿಯೋ ಏನೋ, ಸಂಧ್ಯಾಳ ತಲೆಕೂದಲು ರೇಷ್ಮೆಯ ತರ ನುಣುಪು ನುಣುಪಾಗಿದ್ದು, ಅಚ್ಚಕಪ್ಪು ಬಣ್ಣದಿಂದ ಕಂಗೊಳಿಸುತ್ತಿದ್ದವು. ದಪ್ಪಗೆ, ಮೊಳಕಾಲಿನ ತನಕ ಬರುತ್ತಿದ್ದ ಅವಳ ಕೂದಲುಗಳು, ಅವಳ ಸಹಪಾಠಿಗಳೆಲ್ಲರಲ್ಲೂ ಅಸೂಯೆ ಹುಟ್ಟಿಸುತ್ತಿದ್ದದು ಸಂಧ್ಯಾಳಿಗೆ ಎಷ್ಟೋ ಸಲ ಅನುಭವಕ್ಕೆ ಬಂದಿತ್ತು. ಸಂಧ್ಯಾಳ ಅಮ್ಮನಿಗೂ ಹಿಂದೆ ಇದೇ ತರಹ ಉದ್ದನೆಯ ಕೂದಲು ಇತ್ತಂತೆ. ಆದರೆ ಅವಳಮ್ಮ ಅದನ್ನು ಸರಿಯಾಗಿ ಆರೈಕೆ ಮಾಡದೇ ಬರ್ತಾ ಬರ್ತಾ ಕೂದಲೆಲ್ಲಾ ಉದುರಿ, ಈಗ ಮೋಟು ಜಡೆಯಾಗಿತ್ತು. ಸಂಧ್ಯಾಳಿಗೆ ಮಾತ್ರ ತನ್ನ ಉದ್ದನೆಯ ತಲೆಕೂದಲಿನ ಬಗ್ಗೆ ತುಂಬಾ ಹೆಮ್ಮೆ. ಪ್ರತೀ ೧೫ ದಿನಕ್ಕೊಮ್ಮೆ ಮತ್ತಿ ಗಿಡದ ಎಲೆಗಳನ್ನು ಕೊಯ್ದು ತಂದು, ನೀರಿನಲ್ಲಿ ನೆನೆಸಿ, ಆ ಎಲೆಗಳಿಂದ ಒಂದು ತರಹದ ಲೋಳೆ ಲೋಳೆಯಾದ ದ್ರಾವಣವನ್ನು ತಯಾರಿಸಿ ಅದನ್ನು ತಲೆಕೂದಲಿಗೆ ಹಾಕಿ ಸ್ನಾನ ಮಾಡುತ್ತಿದ್ದಳು. ಅವಳ ಕ್ಲಾಸ್ ಮೇಟ್ ಆದ ಮೇಷ್ಟ್ರ ಮಗಳು ನಯನಾ ವಾರಕ್ಕೊಮ್ಮೆ "ಸನ್ ಸಿಲ್ಕ್" ಶಾಂಪೂ ಹಾಕಿ ಸ್ನಾನ ಮಾಡುತ್ತಿದ್ದರೂ, ಅವಳ ಕೂದಲು ಸಂಧ್ಯಾಳಷ್ಟು ಹೊಳಪಿಲ್ಲದಕ್ಕೆ, ತಾನು ಬಳಸುವ ಮತ್ತಿ ಎಲೆಯ ನ್ಯಾಚುರಲ್ ಶಾಂಪುವೇ ಕಾರಣವೆಂದು ಸಂಧ್ಯಾ ಬಲವಾಗಿ ನಂಬಿದ್ದಳು. ತಲೆಸ್ನಾನ ಮಾಡಿದ ೧೫ ದಿನಕ್ಕೊಮ್ಮೆ ಮಾತ್ರ, ಸಂಧ್ಯಾ ಸ್ವಲ್ಪ ಕಿರಿಕಿರಿ ಅನುಭವಿಸಬೇಕಿತ್ತು. ಒದ್ದೆಯಾದ ತಲೆಕೂದಲನೆಲ್ಲಾ ಚೆನ್ನಾಗಿ ಉಜ್ಜಿ, ಸ್ವಲ್ಪ ಹೊತ್ತು ಬಿಸಿಲನಲ್ಲಿ ಹರಡಿ, ನಂತರ ತೆಳ್ಳನೆಯ ಟವೆಲ್ ಉಪಯೋಗಿಸಿ ಕೂದಲನೆಲ್ಲಾ ಮೇಲೆತ್ತಿ ತುರುಬು ಕಟ್ಟಿಕೊಂಡರೂ, ಕೆಲವೊಮ್ಮೆ ಸಂಜೆಯಾದರೂ ಕೂದಲು ಒಣಗುತ್ತಿರಲಿಲ್ಲ. ಆಗೆಲ್ಲ ಸಂಧ್ಯಾಳಿಗೆ ಸಂಜೆಯಾದಂತೆ ಅಸಾಧ್ಯ ತಲೆನೋವು ಬಂದುಬಿಡುತ್ತಿತ್ತು. ಹಾಗೆ ತಲೆನೋವಿನ ಶೂಲೆ ಅವಳನ್ನು ಬಾಧಿಸಿದಾಗಲೆಲ್ಲಾ, ತಲೆಕೂದಲನ್ನೆಲ್ಲ ಕತ್ತರಿಸಿ ಭಟ್ಟರ ಮನೆಯ ಸುಮಾಳಂತೆ "ಬಾಬ್ ಕಟ್" ಮಾಡಿಕೊಳ್ಳಬೇಕೆಂದು ಸಂಧ್ಯಾಗೆ ಅನ್ನಿಸುವುದಿತ್ತು.


ಇವತ್ತು ಶಾಲೆಯಲ್ಲಿ ಸಂಧ್ಯಾ ಅಬ್ಬಲಿಗೆ ಹೂವಿನ ವಿಷಯ ಎತ್ತಿದಾಗ, ಅವಳ ಬೆಂಚ್ ಮೇಟ್ ಆಗಿದ್ದ ಶಾಲಿನಿ ಕೂಡ, ತನಗೊಂದು ಅಬ್ಬಲಿಗೆ ದಂಡೆ ತಂದುಕೊಡೆಂದು ದುಂಬಾಲು ಬಿದ್ದಳು. ಸಂಧ್ಯಾಳಿಗೆ ಮೊದಲು ಸ್ವಲ್ಪ ಕಸಿವಿಸಿಯಾಗಿ ನಿರಾಕರಿಸಿದರೂ, ಶಾಲಿನಿ ತಾನು ತಿಂಗಳ ಹಿಂದೆ ತಂದುಕೊಟ್ಟ, ಎರಡು ಸಂಪಿಗೆ ಹೂವುಗಳ ನೆನಪು ಮಾಡಿದ ಮೇಲೆ ವಿಧಿಯಲ್ಲದೆ ಒಪ್ಪಬೇಕಾಯಿತು. ಆದರೂ ಒಳಗೊಳಗೇ, ಎರಡು ಸಂಪಿಗೆ ಹೂವುಗಳಿಗೆ ಒಂದು ಅಬ್ಬಲಿಗೆ ದಂಡೆ ಯಾವುದರಲ್ಲೂ ಸಮವಲ್ಲವೆಂದು ಅವಳ ಮನಸ್ಸು ಒಂದೇಸಲ ರೋದಿಸುತ್ತಲೇ ಇತ್ತು. ಒಲ್ಲದ ಮನಸ್ಸಿನಿಂದಲೇ, ತನ್ನ ಎರಡು ಜಡೆಗಳಿಗೊಂದರಂತೆ ಎರಡು ದಂಡೆ, ಶಾಲಿನಿಗೊಂದು ಸೇರಿ ಮೂರು ದಂಡೆ ಮಟ್ಟಲು ಅಮ್ಮನಿಗೆ ಹೇಳಬೇಕೆಂದು ಸಂಧ್ಯಾ ನಿರ್ಧರಿಸಿಕೊಂಡಳು.


ಸಂಧ್ಯಾಳ ಕೂದಲು ದಪ್ಪಕ್ಕೆ, ಉದ್ದವಿದ್ದುದರಿಂದ, ಅವಳಮ್ಮ ಸದಾ ಎರಡು ಜಡೆಗಳನ್ನು ಹೆಣೆದು, ಅದನ್ನು ನಾಲ್ಕು ಮಡಿಕೆಗಳಾಗಿ ಮಡಿಸಿ, ತುದಿಯಲ್ಲಿ ರಿಬ್ಬನ್ ಕಟ್ಟುತ್ತಿದ್ದರು. ಶನಿವಾರದಂದು ಮಾತ್ರ ಯುನಿಫ಼ಾರ್ಮ ಇಲ್ಲವಾಗಿದ್ದರಿಂದ, ಅಮ್ಮ ಒಂದೇ ಜಡೆ ಹೆಣೆದು ಅವಳ ಶ್ರಮವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಳು. ದಿನಾ ಬೆಳಿಗ್ಗೆ ೭.೪೫ ಕ್ಕೆ ಆಕಾಶವಾಣಿಯಲ್ಲಿ ಚಿತ್ರಗೀತೆಗಳು ಶುರು ಆಗುತ್ತಿದ್ದಂತೆಯೇ, ಸಂಧ್ಯಾ ರಿಬ್ಬನ್ ಮತ್ತು ಬಾಚಣಿಕೆ ಹಿಡಿದು ಅಮ್ಮನ ಮುಂದೆ ಪ್ರತ್ಯಕ್ಷವಾಗುತ್ತಿದ್ದಳು. ಎರಡನೇ ಚಿತ್ರಗೀತೆ ಮುಗಿದು "ಫಿನೊಲೆಕ್ಸ್" ಪೈಪಿನ ಜಾಹಿರಾತು ಬರುವಷ್ಟರಲ್ಲಿ, ಅಮ್ಮ ಜಡೆ ಹೆಣೆದು ಮುಗಿಸುತ್ತಿದ್ದರು. ಬೆಳಗ್ಗಿನ ಹೊತ್ತು, ಕೆಲಸದ ಒತ್ತಡದಲ್ಲಿ ಸ್ವಲ್ಪವೂ ಪುರುಸೊತ್ತಿರದ ಸಂಧ್ಯಾಳ ಅಮ್ಮ, ಮಗಳಿಗಾಗಿ ಹೇಗೋ ಒಂದು ೧೦ ನಿಮಿಷ ಹೊಂದಿಸಿಕೊಳ್ಳುತ್ತಿದ್ದಳು.

ದಿನಕ್ಕಿಂತಲೂ ಬೇಗ ಮನೆ ಮುಟ್ಟಿದ ಮೇಲೆ ಸಂಧ್ಯಾ, ಕೈಕಾಲು ತೊಳೆದದ್ದೇ, ತಮ್ಮನನ್ನು ಒಬ್ಬನೇ ಮನೆಯಲ್ಲೇ ಬಿಟ್ಟು, ಅಬ್ಬಲಿಗೆ ಗಿಡಗಳ ಬಳಿಗೆ ಹೂಬುಟ್ಟಿ ಹಿಡಿದುಕೊಂಡು ಓಡಿದಳು. ಅಮ್ಮ ಭಟ್ಟರ ಮನೆಯ ಕೊಟ್ಟಿಗೆ ಕೆಲಸ ಮುಗಿಸಿಬರುವುದರೊಳಗೆ, ಒಳ್ಳೆಯ ಅಬ್ಬಲಿಗೆ ಮೊಗ್ಗುಗಳನ್ನು ಕೊಯ್ದು ರಾಶಿ ಹಾಕಿಕೊಂಡು ಬಂದಳು. ದಂಡೆ ಕಟ್ಟಲು, ತೋಟದ ಬುಡದಲ್ಲಿದ್ದ ಕಾಡುಬಾಳೆ ಗಿಡದ ನಾರುಪಟ್ಟೆಯನ್ನು ಹಿಂದಿನ ದಿನವೇ, ಸಂಧ್ಯಾಳ ಅಮ್ಮ ತಂದು ನೀರಿನಲ್ಲಿ ನೆನೆಸಿ ಇಟ್ಟಿದ್ದಳು. ಅಮ್ಮ ಮನೆಗೆ ಬಂದ ಕೂಡಲೇ, ಅವಳಿಗೆ ದುಂಬಾಲು ಬಿದ್ದು ಎರಡು ಉದ್ದನೆಯ ಮತ್ತು ಒಂದು ಸ್ವಲ್ಪ ಗಿಡ್ಡನೆಯ ದಂಡೆ ಕಟ್ಟಿಸಿಕೊಂಡಳು. ಚಕ ಚಕನೆ ಹೂವುಗಳನ್ನು ಪೋಣಿಸುತ್ತಿದ್ದ ಅಮ್ಮನ ಕೈಗಳನ್ನೇ ಸಂಧ್ಯಾ ಬೆರಗಿನಿಂದ ನೋಡುತ್ತಿದ್ದಂತೆಯೇ, ಅಮ್ಮ ಮೂರೂ ದಂಡೆಗಳನ್ನು ಕಟ್ಟಿಮುಗಿಸಿಬಿಟ್ಟಿದ್ದಳು. ಒಂದು ಸಲ ದಂಡೆಗಳನ್ನು ಮನತೃಪ್ತಿಯಾಗುವಂತೆ ನೋಡಿ, ತಾನು ಆ ದಂಡೆಗಳನ್ನು ಮುಡಿದುಕೊಂಡರೆ ಹೇಗೆ ಕಾಣಿಸಬಹುದೆಂದು ಕಲ್ಪಿಸಿಕೊಂಡು ಸಂಧ್ಯಾ ರೋಮಾಂಚನಗೊಂಡಳು. ನಂತರ ಮೆಲ್ಲಗೆ ದಂಡೆಗಳನ್ನು ಎತ್ತಿಕೊಂಡು, ಬಾವಿಕಟ್ಟೆಯ ಪಕ್ಕದಲ್ಲಿ ಕಟ್ಟಿಹಾಕಿದ್ದ ಬಿದಿರಿನ ಗಳಕ್ಕೆ ನೇತುಹಾಕಿದಳು. ಬೆಳಿಗ್ಗೆ ಮುಂಚೆ ಬೀಳುವ ಇಬ್ಬನಿಗೆ ಅಬ್ಬಲಿಗೆ ಹೂವುಗಳು ಸರಿಯಾಗಿ ಅರಳಿ, ಫ಼್ರೆಶ್ ಆಗಿ ಕಾಣಲಿ ಅಂತಲೇ ಅವಳು ಹಾಗೆ ಮಾಡಿದ್ದು.


ರಾತ್ರಿಯಾದರೂ ಇನ್ನೂ ಸಂಧ್ಯಾಳ ಅಪ್ಪ ಮನೆಗೆ ಬಂದಿರಲಿಲ್ಲ. ಸಂಧ್ಯಾ ಮತ್ತು ಅವಳ ತಮ್ಮ ಊಟ ಮುಗಿಸಿ, ಬೇಗನೇ ಮಲಗಿಕೊಂಡರು. ಅಮ್ಮ ಊಟ ಮಾಡದೇ, ಬಾಗಿಲ ಬಳಿಯೇ ಚಾಪೆ ಹಾಸಿಕೊಂಡು ಕಾಯುತ್ತಿದ್ದಳು. ಸಂಧ್ಯಾಳಿಗೆ ಹಾಸಿಗೆಗೆ ತಲೆ ಕೊಟ್ಟ ಕೂಡಲೇ ನಿದ್ರಾದೇವಿ ಆವರಿಸಿಕೊಂಡಳು. ರಾತ್ರಿ ನಿದ್ದೆಯಲ್ಲಿ ಸಂಧ್ಯಾಳಿಗೆ, ತಾನು ಅಬ್ಬಲಿಗೆ ದಂಡೆ ಮುಡಿದುಕೊಂಡು ಇಡೀ ಶಾಲೆಯಲ್ಲೆಲ್ಲಾ ಮೆರೆದಂತೆಯೂ, ಅವಳ ಸಹಪಾಠಿಗಳೆಲ್ಲಾ ಅವಳನ್ನು ನೋಡೀ ಕರುಬಿದಂತೆಯೂ, ಶಾಲಿನಿ ಕೂಡ ತನ್ನ ಮೋಟು ಜಡೆಗೆ ಸಂಧ್ಯಾ ತಂದು ಕೊಟ್ಟ ಅಬ್ಬಲಿಗೆ ದಂಡೆಯನ್ನು ಮುಡಿದುಕೊಂಡು ಹೆಮ್ಮೆ ಪಡುತ್ತಿರುವಂತೆಯೂ ಕನಸುಬಿತ್ತು. ಪಾಠ ಮಾಡುತ್ತಿದ್ದ ಸುಶೀಲಾ ಟೀಚರ್ ಕೂಡ ಸಂಧ್ಯಾಳನ್ನು ತನಗೊಂದು ಅಬ್ಬಲಿಗೆ ದಂಡೆ ತಂದುಕೊಡೆಂದು ಕೇಳಿಕೊಂಡಾಗ, ನಿದ್ದೆಯಲ್ಲಿಯೇ ಸಂಧ್ಯಾಳಿಗೆ ತುಟಿಯ ಮೇಲೊಂದು ಕಿರುನಗೆ ಅಪ್ರಯತ್ನಪೂರ್ವಕವಾಗಿ ಸುಳಿಯಿತು. ಇದ್ದಕಿದ್ದ ಹಾಗೆ, ಯಾರೋ ಜೋರಾಗಿ ಅಳುತ್ತಿದ್ದ ಶಬ್ದ ಕೇಳಿ ತಟ್ಟನೇ ಅವಳಿಗೆ ಎಚ್ಚರವಾಯಿತು. ಕಣ್ಣುಜ್ಜಿಕೊಂಡು ನೋಡಿದರೆ, ಅಮ್ಮ ಚಾಪೆಯ ಮೇಲೆ ಕುಳಿತಿಕೊಂಡು ದೊಡ್ಡ ಸ್ವರದಲ್ಲಿ ಅಳುತ್ತಿದ್ದಳು. ಅವಳ ಕೈಯಲ್ಲಿದ್ದ ಕೆಲವು ಕೆಂಪು ಗಾಜಿನ ಬಳೆಗಳು ಬಾಗಿಲಿನ ಬುಡದಲ್ಲಿ ಚೂರುಚೂರಾಗಿ ಬಿದ್ದಿರುವುದು ಸಂಧ್ಯಾಳ ಕಣ್ಣಿಗೆ ದೀಪದ ಬೆಳಕಿನಲ್ಲಿ ಗೋಚರವಾಯಿತು. ತೂರಾಡುತ್ತಾ ಮಂಚದ ಮೇಲೆ ಕುಳಿತಿಕೊಂಡು ಅಪ್ಪ, ಅವಾಚ್ಯ ಶಬ್ದಗಳಿಂದ ಅಮ್ಮನನ್ನು ನಿಂದಿಸುತ್ತಿದ್ದರು. ಅಪರೂಪಕೊಮ್ಮೆ ಹೀಗೆ ಕುಡಿದುಕೊಂಡು ಬಂದಾಗ ಸಂಧ್ಯಾಳ ಅಪ್ಪ, ವಿನಾಕಾರಣ ಅಮ್ಮನ ಮೇಲೆ ಕೈಮಾಡಿ ಯಾವುದೋ ಸಿಟ್ಟನ್ನು ತೀರಿಸಿಕೊಳ್ಳುತ್ತಿದ್ದರು. ಸಂಧ್ಯಾಳಿಗೆ ತುಂಬಾ ಬಾಯಾರಿಕೆಯಾಗುತ್ತಿತ್ತು. ಎದ್ದು ಅಡುಗೆಮನೆಗೆ ಹೋಗಬೇಕಂದವಳು ಪಕ್ಕದಲ್ಲೇ ಅಪ್ಪ ಕುಳಿತಿರುವುದನ್ನು ನೋಡಿ ಧೈರ್ಯ ಸಾಲದೇ ಮಗ್ಗಲು ಬದಲಿಸಿದಳು. ತಮ್ಮ, ಪಕ್ಕದಲ್ಲಿ ಕೈಕಾಲುಗಳನ್ನು ಎರಡೂ ದಿಕ್ಕಿಗೆ ಬೀಸಾಡಿ ಮಲಗಿದ್ದುದು ಕಂಡಿತು. ಸ್ವಲ್ಪ ಹೊತ್ತಿನಲ್ಲೇ ಅಪ್ಪ, ಮಂಚದ ಮೇಲೆಯೇ ಮಲಗಿ ಗೊರಕೆ ಹೊಡೆಯಲು ಶುರು ಮಾಡಿದರು.


ಸಂಧ್ಯಾಳ ಕನಸೆಲ್ಲಾ ಹಾರಿಹೋಗಿತ್ತು . ಕಣ್ಣು ಮುಚ್ಚಿಕೊಂಡು ನಿದ್ದೆ ಮಾಡಲು ಪ್ರಯತ್ನಿಸಿದರೂ, ಒಂದೇ ಶ್ರುತಿಯಲ್ಲಿ ಬಿಕ್ಕಳಿಸುತ್ತಿದ್ದ ಅಮ್ಮನ ಧ್ವನಿ ಆ ನಡುರಾತ್ರಿಯಲ್ಲಿ ಕಿವಿಯನ್ನು ಕೊರೆಯುತ್ತಿತ್ತು. ತನ್ನ ಮತ್ತು ಅಮ್ಮನ ನಿದ್ದೆ ಹಾಳು ಮಾಡಿ, ತಣ್ಣಗೆ ಮಲಗಿ ಗೊರಕೆ ಹೊಡೆಯುತ್ತಿದ್ದ ಅಪ್ಪನ ಮೇಲೆ ಅವಳಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಅಳುತ್ತಿದ್ದ ಅಮ್ಮನನ್ನು ಸಮಾಧಾನ ಪಡಿಸಬೇಕೆಂದು ಒಂದು ಕ್ಷಣ ಅನ್ನಿಸಿದರೂ, ಅವಳ ಪಾಡಿಗೆ ಅವಳನ್ನು ಬಿಡುವುದು ಲೇಸೆನಿಸಿ ಸುಮ್ಮನಾದಳು. ಇದೇ ಗುಂಗಿನಲ್ಲೇ ಇದ್ದವಳಿಗೆ ನಿದ್ದೆ ಬಂದು ಆವರಿಸಿಕೊಂಡಿದ್ದು ಗೊತ್ತೇ ಆಗಲಿಲ್ಲ.


ಬೆಳಿಗ್ಗೆ ಸ್ವಲ್ಪ ತಡವಾಗಿಯೇ ಎದ್ದ ಸಂಧ್ಯಾಳಿಗೆ, ಅಮ್ಮ ನೀರೊಲೆಗೆ ಬೆಂಕಿಯೊಡ್ಡುವುದರಲ್ಲಿದ್ದುದು ಕಾಣಿಸಿತು. ಚಳಿ ಕಾಯಿಸಿಕೊಳ್ಳಲು ಒಲೆಯ ಬುಡದ ಬಳಿಗೆ ಹೋಗಿ ಕುಳಿತುಕೊಂಡಾಗ ಮೆಲ್ಲಗೆ ತಲೆಸವರಿದ ಅಮ್ಮನ ಕೈ ಮೇಲೆ, ಗಾಜಿನ ಬಳೆಗಳಿಂದಾದ ಸಣ್ಣ ಗೀರು ಕಂಡಿತು. ಬೆಂಕಿ ಕಾಯಿಸುತ್ತಾ, ಅಮ್ಮನ ಮೊಗದ ಮೇಲೆ ನಿನ್ನೆಯ ದುಃಖದ ಛಾಯೆಯೇನಾದರೂ ಕಾಣಿಸಬಹುದೇ ಎಂದು ಹುಡುಕಿದವಳಿಗೆ ನಿರಾಶೆಯಾಯಿತು. ಅಮ್ಮ ಎಂದಿನಂತೆ ನಗುನಗುತ್ತಾ ಲವಲವಿಕೆಯಿಂದ ಇದ್ದ ಹಾಗೆ ಕಾಣಿಸಿತು. ಎಂಥಾ ನೋವನ್ನೂ ನುಂಗಿ ಸದಾ ನಗುತ್ತಾ, ಮಕ್ಕಳನ್ನೂ ನಗಿಸುತ್ತಾ ಇದ್ದ ಅಮ್ಮನ್ನನ್ನು ನೋಡಿ ಸಂಧ್ಯಾಳಿಗೆ ಬಹಳ ಹೆಮ್ಮೆಯೆನಿಸಿತು.


ಮರುಕ್ಷಣವೇ, ಬಾವಿಕಟ್ಟೆಯ ಪಕ್ಕ ನೇತುಹಾಕಿದ್ದ ಅಬ್ಬಲಿಗೆ ದಂಡೆಗಳ ನೆನಪಾಗಿ, ಹಿಂಬಾಗಿಲಿನ ಕಡೆ ಓಡಿದಳು. ಅವಳ ಆಶ್ಚರ್ಯಕ್ಕೆ, ಅಬ್ಬಲಿಗೆ ದಂಡೆಗಳು ಅಲ್ಲಿಂದ ಕಣ್ಮರೆಯಾಗಿದ್ದವು. ಸಂಧ್ಯಾಳಿಗೆ ಒಮ್ಮೆ ಹೃದಯವೇ ಬಾಯಿಗೆ ಬಂದಂತಾಯಿತು. ಗಾಳಿಗೇನಾದರೂ ಹಾರಿ ಅತ್ತಿತ್ತ ಬಿದ್ದಿರಬಹುದೇ ಎಂದು ಸುತ್ತಮುತ್ತಲೆಲ್ಲಾ ಹುಡುಕಿದಳು. ಎಲ್ಲಿಯೂ ದಂಡೆಗಳ ಪತ್ತೆ ಇರಲಿಲ್ಲ. ತಕ್ಷಣ ಅಮ್ಮನ ಬಳಿ ಒಡಿ, ಅವಳನ್ನು ಕೇಳಿದಳು. ಅಮ್ಮನಿಂದ ಯಾವುದೇ ಉತ್ತರ ಬರಲಿಲ್ಲ. ಇನ್ನೂ ಎರಡು ಸಲ ಜೋರಾಗಿ ಕೂಗಿ ಕೇಳಿದಾಗ, ಅಮ್ಮನಿಂದ ಶುಷ್ಕ ನೋಟವೊಂದನ್ನು ಬಿಟ್ಟರೆ ಇನ್ಯಾವುದೇ ಪ್ರತಿಕ್ರಿಯೆ ಬರದ್ದರಿಂದ, ಸಂಧ್ಯಾಳಿಗೆ ದುಃಖ ತಡೆಯಲಾರದೇ ಅಳುವೇ ಬಂದುಬಿಟ್ಟಿತು. ಅಳುತ್ತಿದ್ದ ಸಂಧ್ಯಾಳನ್ನು ಸಮಾಧಾನ ಪಡಿಸಲಾಗದೇ, ಅವಳಮ್ಮ ಹಿಂಬಾಗಿಲಿಗೆ ಕರೆದುಕೊಂಡು ಬಂದು, ಬಾವಿಯಲ್ಲಿ ತೇಲುತ್ತಿರುವ, ಚೂರುಚೂರಾಗಿದ್ದ ಅಬ್ಬಲಿಗೆ ದಂಡೆಗಳನ್ನು ತೋರಿಸಿದಳು. ರಾತ್ರಿ ಕುಡಿದುಬಂದ ಅಪ್ಪನ ದೃಷ್ಟಿಗೆ ಬಿದ್ದ ಅಬ್ಬಲಿಗೆ ದಂಡೆಗಳು, ಅವನ ಆವೇಶಕ್ಕೆ ಸಿಕ್ಕಿ, ನಲುಗಿಹೋಗಿದ್ದವು. ಸಂಧ್ಯಾಳ ಅಮ್ಮನ ಅಸಹಾಯಕತೆಯನ್ನು ಸಾಂಕೇತಿಕವಾಗಿ ಬಿಂಬಿಸುತ್ತಿವೆಯೋ ಎಂಬಂತೆ, ಶುಭ್ರ ಸ್ಪಟಿಕದಂತಿದ್ದ ಬಾವಿನೀರಿನಲ್ಲಿ ನಿರ್ವಿಣ್ಣವಾಗಿ ತೇಲುತ್ತಿದ್ದ ದಂಡೆಗಳನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಸಂಧ್ಯಾಳಿಗೆ, ಅಮ್ಮ "ಅಳಬೇಡ ಮರಿ, ಮುಂದಿನ ವಾರ ಮತ್ತೆ ದಂಡೆಕಟ್ಟಿದರಾಯಿತು ಬಿಡು" ಎಂದಿದ್ದು, ಕಿವಿಗೆ ಬೀಳಲೇ ಇಲ್ಲ.


ಅಬ್ಬಲಿಗೆ ಹೂವು - ಕನಕಾಂಬರ ಹೂವು

ದಂಡೆ - ಒತ್ತೊತ್ತಾಗಿ ಪೋಣಿಸಿದ ಸಣ್ಣ ಹೂವಿನ ಮಾಲೆ

4 comments:

ಶಾಂತಲಾ ಭಂಡಿ (ಸನ್ನಿಧಿ) said...

ಪಾಪ ಕಣೋ ಸಂಧ್ಯಾ.....
ಮುಂದಿನ ಕತೆಯಲ್ಲಿ ಸಂಧ್ಯಾಗೆ ಒಂದು ದಂಡೆ ಮುಡಿಸು ಮತ್ತೆ, ಪಾಪ ಅಲ್ವಾ ಸಂಧ್ಯಾ? ಯಾಕೋ ಇಂಥಾ ಅಳು ಬರೋ ಕತೇನೆಲ್ಲಾ ಬರೀತೀಯಾ? ಒಂದಿಷ್ಟು ಸುಖದ ಮಧ್ಯೇ ಕಷ್ಟಾನ ಪೋಣ್ಸು. ಆಗ ಇಷ್ಟು ಬೇಜಾರಾಗಲ್ಲ. ಹಿಂಗೆ ಎಲ್ಲಾ ಕಷ್ಟನೂ ಒಂದೇ ಕಡೇ ಪೋಣಿಸ್ಬೇಡ ಕಣೋ..ಓದಕ್ಕೆ ತುಂಬಾ ಕಷ್ಟ ಆಗತ್ತೆ. ಅದೂ ಹಿಂಗೆ ಮುದ್ದುಪುಟಾಣೆಗಳ ಕಷ್ಟ ಅಂದ್ರೆ... ಅಳು ಬರ್ತಿದೆ ಕಣೋ...

Unknown said...

ಅಕ್ಕಾ, ಬೇಜಾರಾಗಡಾ.

ಅಬ್ಬಲಿಗೆ ಗಿಡ ಸಿಕ್ಕಾಪಟ್ಟೆ ಹೂವು ಬಿಡ್ತಾ ಇದ್ದು. ಮುಂದಿನ ವಾರ ಮತ್ತೆ ದಂಡೆ ಕಟ್ಟಲು ಬತ್ತು :-)
ಸಿಕ್ಕಾಪಟ್ಟೆ ಗೋಳಿನ ಕಥೆ ಆಗೋತು ಅನ್ನಿಸ್ತಾ ?

ಪಯಣಿಗ said...

ನನ್ನ ಮಧುವನದ ಮೊದಲ ಪಯಣದಲ್ಲಿ ಸಿಕ್ಕ ಆಲ್ಕೊಹಾಲಿನ ಅಬ್ಬರಕ್ಕೆ ನುಜ್ಜುಗುಜ್ಜಾದ ಹೂ-ಮನಸಿನ ನೋವಿನ ಕಥೆ ಮನ ಮಿಡಿಯಿತು.

ಮು೦ದಿನವಾರದ ನಿಮ್ಮ ದ೦ಡೆಯ ಅ೦ದ ನೋಡಲು ಮತ್ತೆ ಪಯಣ!

ತೇಜಸ್ವಿನಿ ಹೆಗಡೆ said...

ಕಥೆಯ ವಿಷಯ ಮತ್ತು ನಿರೂಪಣೆ ಎರಡೂ ಚೆನ್ನಾಗಿದ್ದು.