Thursday, February 28, 2008

ಅವಳು ಹೇಳಿದ್ದು..


ಕಣ್ದಾವರೆ ಕುಡಿನೋಟ, ಪಿಸು ಮಾತ ತುಂಟಾಟ
ಮುಂಗುರುಳ ಮೃದುಲಾಸ್ಯ,ತುಟಿಯಂಚು ಮಂದಹಾಸ
ಗಾಢಾಂಧಕಾರ ಸೀಳಿದ ಬೆಳ್ಳಿಕೋಲ ಹೊಳಹು
ಸಾರಿವೆಯಾ ನನಸಾಗುವ ಕನಸ ಸಂಭ್ರಮವನ್ನು?

ಹೆಪ್ಪುಗಟ್ಟಿದ ಮಾತು, ಮಡುಗಟ್ಟಿದ ಮೌನ
ಕಾಲದ ಬಿಂಬ ಕಣ್ರೆಪ್ಪೆಯಲೇ ಪ್ರತಿಮೆ
ಭಾವದೊರತೆ ಮೊಗದಿ ಉಕ್ಕಿದಾ ಸಾಗರ
ಹುಸಿಯೇ ನಲ್ಲನ ಬರುವಿಕೆಯ ನಿರೀಕ್ಷೆ?

ಮೈತಬ್ಬಿದಾ ವೇಲು,ಇಳಿಬಿದ್ದ ಹೆರಳು
ಹಿನ್ನೆಲೆಯ ಅವ್ಯಕ್ತಭಾವ, ಮರೆಮಾಚಿದ ಸತ್ಯ
ಕಾಲನಾಳದಿ ಸಮಾಧಿಯಾದ ಚಿದಂಬರ ರಹಸ್ಯ
ಅರಿಯದ ನಿರಾಭರಣ ನೀರೆಯ ತುಮುಲಾಟದ ಕಥೆ, ವ್ಯಥೆ

(ನನ್ನ ಪ್ರಥಮ ಪ್ರಯತ್ನ. ಅಲ್ಲಲ್ಲಿ ತಿದ್ದಿ,ಸೂಚನೆ ನೀಡಿದ ಅಕ್ಕನಿಗೆ ಧನ್ಯವಾದಗಳು)

Friday, February 22, 2008

ನಾದಮಯ..ಈ ಲೋಕವೆಲ್ಲ

ಸುರೇಶ ತನ್ನ ಹಳೆಯ ಟಿ.ವಿ.ಎಸ್ ಎಕ್ಸೆಲ್ ಅನ್ನು ಗಾಂಧಿ ಬಜಾರಿನ ಸಂದಿಗೊಂದಿಯಲ್ಲಿ ತಿರುಗಿಸಿ, ಎಚ್.ಬಿ.ಸೇವಾಸಮಾಜ ರೋಡಿನ ತುದಿಯಲ್ಲಿದ್ದ ನೀಲಿ ಮನೆಯ ಬಾಗಿಲ ಮುಂದೆ ನಿಂತಾಗ ಗಡಿಯಾರ ೭.೧೫ ತೋರುತ್ತಿತ್ತು. ಗಡಿಬಿಡಿಯಿಂದ ಹೆಲ್ಮೆಟ್ ತೆಗೆದು, ಹ್ಯಾಂಡ್ ಲಾಕ್ ಮಾಡಿ, ಪುಸ್ತಕ ತೆಗೆದುಕೊಂಡು ನಿಧಾನವಾಗಿ ಮಾಳಿಗೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಭಾಗ್ವತರ ಸಣ್ಣ ರೂಮಿನಿಂದ ಹಾರ್ಮೋನಿಯಮ್ ಸದ್ದೂ, ತಾಳಮಾಲಿಕೆಯ ಸದ್ದೂ, ಅಲೆ ಅಲೆಯಾಗಿ ತೇಲಿ ಬಂದು ಅವನ ಕಿವಿಗೆ ಅಪ್ಪಳಿಸತೊಡಗಿತು.
ಶೂ ಬಿಚ್ಚಿ, ನಿಧಾನಕ್ಕೆ ಬಾಗಿಲು ತೆರೆದು ರೂಮಿನೊಳಕ್ಕೆ ಅಡಿಯಿಟ್ಟವನಿಗೆ ಸಂಗೀತ ಲೋಕ ನಿಧಾನವಾಗಿ ಅನಾವರಣಗೊಳ್ಳತೊಡಗಿತು. ೬.೩೦ ರ ಕ್ಲಾಸಿನ ಪುಷ್ಪಮಾಲಾ ಅಕ್ಕ ಆಗಲೇ ಒಂದು ರೌಂಡ್ ತಾಲೀಮು ನಡೆಸಿ, ಎರಡನೆಯದಕ್ಕೆ ರೆಡಿಯಾಗುತ್ತಿದ್ದರು. ಭಾಗ್ವತರು ಹಾರ್ಮೋನಿಯಮ್ ಹಿಡಿದು, ತಾಳಮಾಲಿಕೆಯ ವೇಗವನ್ನು ಅಡ್ಜಸ್ಟ್ ಮಾಡುತ್ತಿದ್ದರು. ಸುರೇಶ, ಕಣ್ಣಿನಲ್ಲೇ ಒಂದು ನಮಸ್ಕಾರ ಮಾಡಿ, ನೆಲದ ಮೇಲೆ ಹಾಸಿದ್ದ ಜಮಖಾನೆಯ ಮೇಲೆಯೇ ಪುಷ್ಪಮಾಲಳ ಪಕ್ಕ ಕುಳಿತುಕೊಂಡ. ಹಾರ್ಮೋನಿಯಮ್ಮಿನ ಹಮ್ಮಿಂಗ್ ಶಬ್ದ ಒಂದು ವಿಲಕ್ಷಣವಾದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಭಾಗ್ವತರು ನಿಧಾನಕ್ಕೆ "ಕಲ್ಯಾಣ ಕೃಷ್ಣಾ, ಕಮನೀಯ ಕೃಷ್ಣಾ, ಕಾಳಿಂಗ ಮರ್ಧನ ಶ್ರೀಕೃಷ್ಣಾ" ಎಂದು ಜಿಂಝೋಟಿ ರಾಗದಲ್ಲಿ ಭಜನೆ ಹೇಳಿಕೊಡಲು ಶುರುಮಾಡಿದರು. ಅದನ್ನು ಪುನರಾವರ್ತಿಸುತ್ತಿದ್ದಿದ್ದು ಪುಷ್ಪಲತಾ ಆಗಿದ್ದರೂ, ಸುರೇಶನ ಮನಸ್ಸು ಅಪ್ರಯತ್ನಪೂರ್ವಕವಾಗಿ ಅವಳಿಗೆ ಸಾಥ್ ನೀಡುತ್ತಿತ್ತು. ಭಜನೆ ಮುಗಿದು ಪುಷ್ಪಮಾಲಾ ಅಕ್ಕ ಎದ್ದು ಹೋದರೂ, ಸುರೇಶನಿಗೆ ಇನ್ನೂ ಜಿಂಝೋಟಿ ರಾಗದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ. ಹಿಂದೊಮ್ಮೆ ಆ ರಾಗವನ್ನು ಕಲಿಸಿಕೊಡಿ ಎಂದು ಅವನು ಭಾಗ್ವತರನ್ನು ಕೇಳಿಕೊಂಡಿದ್ದ. ಆದರೆ ಜಿಂಝೋಟಿ ರಾಗ ಸ್ವಲ್ಪ ಕ್ಲಿಷ್ಟವಾಗಿದ್ದುದರಿಂದ ಭಾಗ್ವತರು ಅದನ್ನು ನಿರಾಕರಿಸಿದ್ದರು. ಅಂಥ ಕ್ಲಿಷ್ಟ ರಾಗಗಳನ್ನು ಕಲಿಯಲು ಸುರೇಶ ಇನ್ನೂ ಹೆಚ್ಚಿನ ಸಮಯ ಕಾಯಬೇಕಾಗಿತ್ತು.

ಸುರೇಶನಿಗೆ ಶಾಸ್ತ್ರೀಯ ಸಂಗೀತದ ಹುಚ್ಚು ಯಾವಾಗ ಹಿಡಿಯಿತೆಂದು ತಿಳಿದುಕೊಳ್ಳಲು ನೀವು ಈಗೊಂದು ಆರು ವರ್ಷದ ಹಿಂದೆ ಹೋಗಬೇಕು. ಸುರೇಶನಿಗೆ ಸಂಗೀತದ ಹಿನ್ನೆಲೆಯೇನೂ ಇರಲಿಲ್ಲ. ಅರ್ಧಮರ್ಧ ಬರುತ್ತಿದ್ದ ಹಿಂದಿ ಹಾಡುಗಳನ್ನು ಕೆಟ್ಟ ಸ್ವರದಲ್ಲಿ ಕಿರುಚಿ ಹಾಡುವುದಕ್ಕೇ ಅವನ ಸಂಗೀತ ಜ್ನಾನ ಸೀಮಿತವಾಗಿತ್ತು. ಆದರೆ ಕಾಲೇಜಿನಲ್ಲಿರುವಾಗ "ಸ್ಪಿಕ್ ಮೆಕೆ" ಯವರು ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಭಾ ಅತ್ರೆಯವರ ಗಾಯನ ಸುರೇಶನ ಮೇಲೆ ಎಷ್ಟು ಅಚ್ಚಳಿಯದಂತ ಪ್ರಭಾವವನ್ನು ಉಂಟುಮಾಡಿತ್ತೆಂದರೆ, ಆವತ್ತಿನಿಂದ ಸುರೇಶನಿಗೆ ಶಾಸ್ತ್ರೀಯ ಸಂಗೀತದ ಮುಂದೆ ಉಳಿದಿದೆಲ್ಲಾ ಗೌಣ ಎಂದನ್ನಿಸಲು ಶುರುವಾಯಿತು. ಆವಾಗಲಿಂದ, ಅಪ್ಪ ಕೊಡುತ್ತಿದ್ದ ತಿಂಗಳ ಖರ್ಚಿನಲ್ಲೇ ಆದಷ್ಟು ಉಳಿಸಿ ಸಾಧ್ಯವಾದಷ್ಟು ಕ್ಯಾಸೆಟ್ ಗಳನ್ನು ಕೊಂಡು ತಂದು ಪದೇ ಪದೇ ಕೇಳಲು ಶುರುಮಾಡಿದ್ದ. ಶಾಸ್ತ್ರೀಯ ಸಂಗೀತದ ಮೇಲೆ ಇವನು ಬೆಳೆಸಿಕೊಂಡಿದ್ದ ಗೀಳು, ಅವನ ಅಪ್ಪ ಅಮ್ಮನಿಗೂ ಆಶ್ಚರ್ಯ ತಂದಿತ್ತು. ಬೆಂಗಳೂರಿಗೆ ಬಂದು ಕೆಲಸ ಮಾಡಿ, ಕೈಯಲ್ಲಿ ಒಂದೆರಡು ಕಾಸು ಆಡತೊಡಗಿದ ಮೇಲೆ, ಅವರಿವರನ್ನು ಕೇಳಿ ಭಾಗ್ವತರ ಅಡ್ರೆಸ್ ಪಡೆದುಕೊಂಡು, ಅವರ ಹತ್ತಿರ ಸಂಗೀತ ಕಲಿಯಲು ಶುರುಮಾಡಿದ್ದ. ಸಂಗೀತದ ಹಿನ್ನೆಲೆಯೇ ಇಲ್ಲದ, ಅಷ್ಟೊಂದೇನೂ ಒಳ್ಳೆ ಕಂಠವೂ ಇಲ್ಲದ ಸುರೇಶನಿಗೆ ಸಂಗೀತ ಹೇಳಿಕೊಡಲು ಭಾಗ್ವತರು ಮೊದಲು ಸ್ವಲ್ಪ ಹಿಂಜರಿದರೂ, ಸುರೇಶ ಒತ್ತಾಯ ಮಾಡಿದ ನಂತರ, ಅವನ ಉತ್ಸುಕತೆಯನ್ನು ನೋಡಿ ಪ್ರತೀ ಶನಿವಾರ ೭.೩೦ ಗಂಟೆಗೆ ಅವನ ಕ್ಲಾಸನ್ನು ನಿಗದಿ ಮಾಡಿದ್ದರು.

ಭಾಗ್ವತರು ಈಗ ಕರೆ ಎರಡರ ಶೃತಿ ಹಿಡಿದು ರೆಡಿ ಆಗಿದ್ದರು. ಸುರೇಶ ಪುಸ್ತಕ ತೆಗೆದು, ದುರ್ಗಾ ರಾಗವನ್ನು ಹಾಡಲು ಶುರು ಮಾಡಿದ. ಆರೋಹಣ, ಅವರೋಹಣ, ಸ್ವರ ಗೀತೆ ಆದಮೇಲೆ ಹಿಂದಿನ ವಾರ ಕಲಿಸಿಕೊಟ್ಟ ಆಲಾಪವನ್ನು ತಾಳಮಾಲಿಕೆಯ ಜೊತೆ ಶುರುಮಾಡಿದ. ಒಂದೆರಡು ಆವರ್ತನೆಯಾಗುವುದರಲ್ಲಿ ಸುರೇಶನ ಕಂಠ ಒಂದು ಹದಕ್ಕೆ ಬಂದಿತ್ತು. ಆದರೂ ಮಧ್ಯದಲ್ಲಿ ಎರಡು ಸಲ ತಾಳ ತಪ್ಪಿದ. ಭಾಗ್ವತರು ಮತ್ತೆ ಸರಿಯಾಗಿ ಹೇಳಿಕೊಟ್ಟರು. ಹಾಗೇ ಮುಂದುವರೆಸಿಕೊಂಡು ಹೋದವನು, "ಸಾ" ದಿಂದ "ಹಿಮ ನಗ ನಂದಿನಿ, ಭವ ಭಯ ಕೌಂದಿನಿ" ಎಂದು ಅಂತರಾವನ್ನು ಶುರು ಮಾಡುವುದರ ಬದಲು ನಿಷಾದಕ್ಕೇ ಎಳೆದು ಹಾಡಲು ಶುರುಮಾಡಿಬಿಟ್ಟ. ಭಾಗ್ವತರು ಈಗ ಹಾರ್ಮೋನಿಯಮ್ ನಿಲ್ಲಿಸಿಬಿಟ್ಟರು. ಮತ್ತೆ ಹಿಂದಿನಿಂದ ಆಲಾಪ ಶುರು ಮಾಡಬೇಕಾಯಿತು. ಎರಡು ಮೂರು ಪ್ರಯತ್ನದ ನಂತರವೂ ಭಾಗ್ವತರಿಗೆ ತೃಪ್ತಿಯಾಗುವಂತೆ ಸುರೇಶನಿಗೆ ಹಾಡಲು ಸಾಧ್ಯವಾಗಲೇ ಇಲ್ಲ. ಈಗ ನಿಷಾದಕ್ಕಿಂತ ಸ್ವಲ್ಪ ಈಚೆ ಅಂತರಾವನ್ನು ಶುರುಮಾಡುತ್ತಿದ್ದರೂ, ಸರಿಯಾಗಿ "ಸಾ" ಹಚ್ಚಲು ಅವನು ವಿಫಲನಾಗುತ್ತಿದ್ದ. ಹಾರ್ಮೋನಿಯಮ್ ಅಲ್ಲಿ "ಸಾ" ಮತ್ತು "ನಿ" ಯನ್ನು ಬಿಡಿ ಬಿಡಿಯಾಗಿ ಹಿಡಿದು ತೋರಿಸಿದಾಗ ಸರಿಯಾಗಿಯೇ ಹಾಡುತ್ತಿದ್ದವನು, ಅವುಗಳ ಜೊತೆ ಇನ್ಯಾವುದೋ ಸ್ವರ ಸೇರಿಕೊಂಡಾಗ, ಅಥವಾ ಎರಡೂ ಸ್ವರಗಳನ್ನು ಒಟ್ಟಿಗೆ ಹಾಡುವಾಗ ಮಾತ್ರಾ ಗಲಿಬಿಲಿಯಾಗಿ ತಪ್ಪು ತಪ್ಪಾಗಿ ಯಾವುದೋ ಸ್ವರ ಹಾಡಿ ಬಿಡುತ್ತಿದ್ದ. ಇನ್ನೂ ಮೂರು ನಾಲ್ಕು ವಿಫಲ ಪ್ರಯತ್ನಗಳ ಬಳಿಕ, ಭಾಗ್ವತರಿಗೆ ಇದು ಬರೀ ಗಾಳಿಯಲ್ಲಿ ಗುದ್ದಾಟ ಮಾಡಿದ ಹಾಗೇ ಅನ್ನಿಸಿರಬೇಕು. "ಇವತ್ತಿಗೆ ಕ್ಲಾಸ್ ಸಾಕು. "ನಿ" ಮತ್ತು "ಸಾ" ಗಳನ್ನು ನೀನು ಸರಿಯಾಗಿ ಗುರುತಿಸದ ಹೊರತು ಮುಂದಕ್ಕೆ ಕಲಿಯುವ ಪ್ರಮೇಯವೇ ಇಲ್ಲ. ಒಂದು ಕೆಲಸ ಮಾಡು. ಹಿಂದೆ ಹೇಳಿಕೊಟ್ಟಿದ್ದ ಅಲಂಕಾರಗಳನ್ನು ಮತ್ತೆ ಪ್ರಾಕ್ಟೀಸ್ ಮಾಡಿಕೊಂಡು ಬಾ. ಮುಂದಿನ ವಾರ ನೋಡೋಣ" ಎಂದವರೇ, ಹಾರ್ಮೋನಿಯಮ್ಮಿನ ಬಾತೆಗಳನ್ನು ಮುಚ್ಚಿ, ಬದಿಗಿಟ್ಟರು. ಸುರೇಶನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅವನಿಗೆ ಅಪಾರವಾದ ನಿರಾಸೆಯಾಗಿತ್ತು. ಸಪ್ಪೆ ಮುಖ ಹೊತ್ತು ಹಿಂದಿರುಗಿದ.

ಸೌತ್ ಎಂಡ್ ಸರ್ಕಲ್ಲಿನ ಕಡೆ ವೇಗವಾಗಿ ಹೋಗುತ್ತಿದ್ದವನ ಮನಸ್ಸೆಲ್ಲ ತುಂಬಾ ಆ ನಿರಾಶೆಯೇ ತುಂಬಿಕೊಂಡಿತ್ತು. ಹಿಂದೆಲ್ಲಾ ಅವನು ಎಲ್ಲವನ್ನೂ ಸರಿಯಾಗೇ ಹಾಡುತ್ತಿದ್ದ. ಈಗೊಂದು ತಿಂಗಳಿಂದ ಆಫೀಸಿನಲ್ಲಿ ಕೆಲಸ ಹೆಚ್ಚಾದುದರಿಂದ ಪ್ರಾಕ್ಟೀಸ್ ಮಾಡಲು ಜಾಸ್ತಿ ಸಮಯ ಸಿಕ್ಕಿರಲಿಲ್ಲ. ಈ ವಾರ ಸರಿಯಾಗಿ ಪ್ರಾಕ್ಟೀಸ್ ಮಾಡಿ ಮುಂದಿನ ವಾರದ ಕ್ಲಾಸಲ್ಲಿ ಸರಿಯಾಗಿ ಹಾಡೇ ಹಾಡುತ್ತೇನೆಂಬ ದೃಢ ನಿರ್ಧಾರ ಮಾಡಿ ಗಾಡಿಯ ಎಕ್ಸಲರೇಟರನ್ನು ಇನ್ನೂ ಜಾಸ್ತಿ ಮಾಡಿದ. ಸೌತ್ ಎಂಡ್ ಸರ್ಕಲ್, ಫೋರ್ತ್ ಬ್ಲಾಕು, ಬನ್ನೇರುಘಟ್ಟ ರಸ್ತೆ ದಾಟಿ, ಬಿ.ಟಿ.ಎಂ ನ ಮುಖ್ಯ ಸಿಗ್ನಲ್ಲಿಗೆ ಬಂದಾಗ ಸಮಯ ೮.೩೦ ದಾಟಿತ್ತು. ಸಿಗ್ನಲ್ಲಿನಲ್ಲಿ ೧೦ ನಿಮಿಷ ಕಾಯ್ದು, ರೂಮ್ ಸೇರಿದಾಗ ಸುರೇಶನಿಗೆ ಇವತ್ತು ತನ್ನದೇ ಅಡುಗೆ ಪಾಳಿ ಎಂಬುದು ನೆನಪಾಯಿತು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಗೆಳೆಯರ ಜೊತೆ ಸುರೇಶ ಒಂದು ಡಬಲ್ ಬೆಡ್ ರೂಮಿನ ಮನೆಯೊಂದರಲ್ಲಿ ಇರುತ್ತಿದ್ದ. ದಿನಕ್ಕೊಬ್ಬರಂತೆ ಅಡುಗೆ ಪಾಳಿ ವಹಿಸಿಕೊಂಡಿದ್ದರು. ಇವತ್ಯಾಕೋ ಸುರೇಶನಿಗೆ ಅಡುಗೆ ಮಾಡುವ ಮೂಡೇ ಇರಲಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಿಂದಲೇ ಒಂದಷ್ಟು ಬೀನ್ಸ್, ಕಾರೆಟ್ ಹೆಚ್ಚಿ ಹಾಕಿ, ಬೇಳೆಯ ಜೊತೆ ಒಂದು ಕುಕ್ಕರಿನಲ್ಲೂ, ಅಕ್ಕಿ ತೊಳೆದು ಇನ್ನೊಂದು ಕುಕ್ಕರಿನಲ್ಲೂ ಇಟ್ಟ.

ಊಟವಾದ ಮೇಲೆ ಹಾರ್ಮೋನಿಯಮ್ ಹಿಡಿದು ಒಂದಷ್ಟು ಅಭ್ಯಾಸ ಮಾಡಬೇಕೆಂದು ಅಂದುಕೊಂಡವನು, ರೂಮ್ ಮೇಟ್ ಗಳೆಲ್ಲಾ ಆಗಲೇ ಮಲಗಲು ತಯಾರಾಗುತ್ತಿರುವುದನ್ನು ಕಂಡು ಹಿಂಜರಿದ. ಗುರುಗಳಿಗೆ ಗುರುತಿದ್ದ ಯಾವುದೋ ಅಂಗಡಿಯಿಂದ ಹಳೆಯ ಒಂದು ಸೆಕೆಂಡ್ ಹಾಂಡ್ ಹಾರ್ಮೋನಿಯಮನ್ನು ಸುರೇಶ, ಕಮ್ಮಿ ಬೆಲೆಗೆ ಖರೀದಿಸಿದ್ದ. ಹಳೆಯ ಆ ಹಾರ್ಮೋನಿಯಮ್ಮಿನ ಮನೆಗಳೆಲ್ಲಾ ಸವೆದು ಸವೆದು ಇನ್ನೇನು ಜೀರ್ಣಾವಸ್ಥೆಯಲ್ಲಿದ್ದವು. ಹಳೆಯದಾಗಿದ್ದಕ್ಕೋ ಏನೋ, ಅದರಿಂದ ಹೊರಡುತ್ತಿದ್ದ ಸದ್ದು ಸ್ವಲ್ಪ ಕರ್ಕಶವಾಗಿಯೇ ಕೇಳುತ್ತಿತ್ತು. ರವಿವಾರದಂದು ಅಭ್ಯಾಸ ಮಾಡುವಾಗ ಒಂದೆರಡು ಸಲ, ಪಕ್ಕದ ಮನೆಯ ದಪ್ಪ ದೇಹದ ಮುಸ್ಲಿಮ್ ಆಂಟಿ ಇವರ ಮನೆಗೆ ಬಂದು ಕಂಪ್ಲೇಂಟ್ ಬೇರೆ ಮಾಡಿದ್ದಳು. ಆವತ್ತಿನಿಂದ ಸುರೇಶ ಸ್ವಲ್ಪ ಜಾಸ್ತಿನೇ ಜಾಗರೂಕನಾಗಿದ್ದ. ಹಾರ್ಮೋನಿಯಮ್ ಶುರು ಮಾಡಿ ಒಂದಷ್ಟು ಅಭ್ಯಾಸಮಾಡಬೇಕೆಂದು ಅವನ ಮನಸ್ಸು ತೀವ್ರವಾಗಿ ತುಡಿಯುತ್ತಿದ್ದರೂ, ಅನಿವಾರ್ಯವಾಗಿ ಅದನ್ನು ಹತ್ತಿಕ್ಕಬೇಕಾಯಿತು. ರಾತ್ರಿಯಿಡೀ ಸುರೇಶನಿಗೆ ನಿದ್ದೆಯೇ ಹತ್ತಲಿಲ್ಲ. ದುರ್ಗಾ ರಾಗದ ಸ್ವರಗಳು ಇನ್ನೂ ಕಿವಿಯಲ್ಲೇ ಗುಂಯ್ ಗುಡುತ್ತಲೇ ಇತ್ತು. ಸುಮಾರು ೧೨ ಗಂಟೆಯ ತನಕ ಹಾಸಿಗೆಯಲ್ಲೇ ಹೊರಳಾಡಿದವನು, ತಡೆಯಲು ಆಗದೇ, ಮೆಲ್ಲಗೆ ಎದ್ದು ಹಾಲ್ ಗೆ ಬಂದು,ಮುದ್ರಿಸಿಕೊಂಡು ಬಂದಿದ್ದ ಕ್ಯಾಸೆಟ್ಟನ್ನು,ಟೇಪ್ ರೆಕಾರ್ಡರಿನಲ್ಲಿ ತುರುಕಿದ. ವಾಲ್ಯೂಮನ್ನು ಸಾಧ್ಯವಾದಷ್ಟು ಕಮ್ಮಿಯಲ್ಲಿಟ್ಟು, ಮನಸ್ಸಿನಲ್ಲೇ ಕ್ಯಾಸೆಟ್ಟಿನಲ್ಲಿದ್ದಂತೆಯೇ ಪುನರಾವರ್ತಿಸಲು ಶುರುಮಾಡಿದ. ಈ ಸಲ "ನಿ" ಮತ್ತು "ಸಾ" ಸರಿಯಾಗಿ ಬಂದಹಾಗೆ ಅನಿಸಿತು. ಸಂತೃಪ್ತಿಯೆನಿಸಿ, ಟೇಪ್ ರೇಕಾರ್ಡರ್ ಆರಿಸಿ ಮುಸುಕೆಳೆದು ಮಲಗಿಬಿಟ್ಟ.

ಮಾರನೆಯ ದಿನ ರವಿವಾರ, ರೂಮ್ ಮೇಟ್ ಗಳೆಲ್ಲಾ ಎಷ್ಟೋ ಒತ್ತಾಯ ಮಾಡಿದರೂ, ಅವರ ಜೊತೆ ಸಿನೆಮಾಕ್ಕೆ ಹೋಗದೇ, ಮನೆಯಲ್ಲೇ ಉಳಿದುಕೊಂಡ. ಈಗ ಸುರೇಶನಿಗೆ ಸಂಗೀತ ಅಭ್ಯಾಸ ಮಾಡಲು ಒಳ್ಳೆಯ ವಾತಾವರಣ ಸಿಕ್ಕಿತ್ತು. ಮನೆಯ ಕಿಟಕಿ, ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ಹಾರ್ಮೋನಿಯಮ್ ಹಿಡಿದುಕುಳಿತ. ಮೊದಲನೆಯ ಕ್ಲಾಸಿನಲ್ಲಿ ಹೇಳಿಕೊಟ್ಟ ಅಲಂಕಾರಗಳಿಂದ ಹಿಡಿದು, ಇಲ್ಲಿಯ ತನಕ ಆದ ಎಲ್ಲಾ ರಾಗಗಳನ್ನು ಒಂದೊಂದಾಗಿ ಮತ್ತೆ ಹಾರ್ಮೋನಿಯಮ್ಮಿನ ಸಹಕಾರದೊಂದಿಗೆ ಹಾಡಲು ಶುರು ಮಾಡಿದ. ಇನ್ನೇನು ದುರ್ಗಾ ರಾಗ ಶುರುಮಾಡುವ ಹೊತ್ತಿಗೆ ಯಾರೋ ಬಾಗಿಲು ತಟ್ಟಿದ ಹಾಗಾಯಿತು. ರಸಭಂಗವಾದಂತನಿಸಿ, ತುಸು ಸಿಟ್ಟಿನಿಂದಲೇ ಬಾಗಿಲು ತೆಗೆದು ನೋಡಿದ. ನೋಡಿದರೆ, ಇಡೀ ರಾತ್ರಿ ಕಾಲನಿಯನ್ನು ಕಾವಲು ಕಾಯುತ್ತಿದ್ದ ಗೂರ್ಖಾ ಎದುರು ನಿಂತಿದ್ದ. ಸುರೇಶನನ್ನು ನೋಡಿದವನೇ "ಪೇಟಿ ಬಜಾರಹೆತೇ ಸಾಬ್? " ಎಂದು ಹುಳ್ಳಗೆ ನಕ್ಕ. ಸುರೇಶನಿಗೆ ಅವನ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂತಾದರೂ, ಹೇಗೋ ಸಾವರಿಸಿಕೊಂಡು "ಕ್ಯಾ ಚಾಹಿಯೆ?" ಎಂದು ಸಿಟ್ಟಿನಲ್ಲೇ ಕೇಳಿದ. ಸುರೇಶನ ಸಿಟ್ಟನ್ನು ಗಮನಿಸಿದಂತೆ ಗೂರ್ಖಾ, "ಪಾಂಚ್ ರುಪಯ್ಯಾ ಸಾಬ್" ಎಂದು ದೀನ ಮುಖ ಮಾಡಿ ಕೈಚಾಚಿದ. ಪ್ರತೀ ತಿಂಗಳೂ ಎಲ್ಲಾ ಮನೆಯಿಂದಲೂ ಹೀಗೆ ೫ ರುಪಾಯಿ ತೆಗೆದುಕೊಂಡು ಹೋಗುವುದು ಅವನಿಗೆ ಅಭ್ಯಾಸವಾಗಿ ಹೋಗಿತ್ತು. ಸಧ್ಯ ಇವನು ತೊಲಗಿದರೆ ಸಾಕೆಂದು ಅನಿಸಿ, ಪ್ಯಾಂಟ್ ಜೇಬಿನಿಂದ ೫ ರುಪಾಯಿಯ ನಾಣ್ಯ ತೆಗೆದು ಅವನ ಕೈಗಿತ್ತ. ಗೂರ್ಖಾ ಅವನಿಗೊಂದು ಸಲಾಮ್ ಹೊಡೆದು ಹಾಗೇ ತಿರುಗಿ ಹೋಗಿಬಿಟ್ಟ. ಅವನು ಸಲಾಮ್ ಹೊಡೆದಿದ್ದು ತನಗೋ ಅಥವಾ ತಾನು ಕೊಟ್ಟ ೫ ರುಪಾಯಿಗೋ ಅನ್ನುವ ಗೊಂದಲದಲ್ಲೇ ಇದ್ದವನಿಗೆ ಗಾಳಿಗೆ ಧೊಪ್ಪನೆ ಬಾಗಿಲು ಮುಚ್ಚಿಕೊಂಡಾಗಲೇ ಎಚ್ಚರವಾಗಿದ್ದು.

ಮತ್ತೆ ಹಾಡಲು ಕುಳಿತವನಿಗೆ ಸಲೀಸಾಗಿ ಸ್ವರಗಳು ಒಲಿದುಬರಲು ಶುರುಮಾಡಿದವು. ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಸುರೇಶನ ದೊಡ್ಡ ಗಂಟಲಿಗೆ ವಿಚಿತ್ರವಾದ ಹಿನ್ನೆಲೆ ಒದಗಿಸಿತ್ತು. ಯಾವುದೋ ಲಹರಿಯಲ್ಲಿದ್ದವನಂತೆ, ಅತ್ಸುತ್ಸಾಹದಲ್ಲಿ ನೋಡು ನೋಡುತ್ತಿದ್ದಂತೆಯೇ ಆಲಾಪವನ್ನು ಮುಗಿಸಿ, ಲಯ ಸರಗಮ್ ಗಳನ್ನೂ ಹಾಡಿಬಿಟ್ಟ. ಎಲ್ಲಾ ಸರಿಯಾಗಿ ಬಂದ ಹಾಗೆ ತೋರಿತು. ಆದರೂ ಮನಸ್ಸಿನಲ್ಲಿ ಏನೋ ಸಂಶಯ, ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂದು. ಸರಿ, ಟೇಪ್ ರೆಕಾರ್ಡರಿನಲ್ಲಿ ಹೊಸದೊಂದು ಕೆಸೆಟ್ ತುರುಕಿ, ರೆಕಾರ್ಡ್ ಬಟನ್ ಒತ್ತಿ ಮತ್ತೊಮ್ಮೆ ಹಾಡಲು ಶುರು ಮಾಡಿದ. ಈ ಸಲ ಹಾಡುವಾಗ ಅವನ ಕಂಠ ಸ್ವಲ್ಪ ನಡುಗುತ್ತಿತ್ತು. ಹಾರ್ಮೋನಿಯಮ್ಮಿನ ಮೇಲೆ ಓಡಾಡುತ್ತಿದ್ದ ಬೆರಳುಗಳು ಬೆವೆಯುತ್ತಿದ್ದವು. ಹೇಗೋ ಹೇಗೋ ಹಾಡಿ ಮುಗಿಸಿದವನು, ಭಯದಿಂದಲೇ ಕೆಸೆಟ್ ರಿವೈಂಡ್ ಮಾಡಿ ಕೇಳತೊಡಗಿದ. ಕೆಸೆಟ್ಟಿನಲ್ಲಿ ಹಾರ್ಮೋನಿಯಮ್ಮಿನ ಸದ್ದೇ ಪ್ರಬಲವಾಗಿ, ಸುರೇಶನ ಧ್ವನಿ ಅಸ್ಪಷ್ಟವಾಗಿ ಗೊಣಗಿದಂತೆ ಕೇಳುತ್ತಿತ್ತು. ತಾನು ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂಬುದು ಸುರೇಶನಿಗೆ ಗೊತ್ತೇ ಆಗುತ್ತಿರಲಿಲ್ಲ. "ದರಿದ್ರ ಹಾರ್ಮೋನಿಯಮ್ಮು" ಎಂದು ಮನಸ್ಸಿನಲ್ಲೇ ಶಪಿಸಿ ಅದನ್ನು ಗೋಡೆಯ ಬದಿ ನೂಕಿದ. ಅವನು ನೂಕಿದ ರಭಸಕ್ಕೆ ಹಾರ್ಮೋನಿಯಮ್ಮಿನ ಬಾತೆ ತೆಗೆದುಕೊಂಡುಬಿಟ್ಟಿತು. ಬಾತೆ ತೆರೆದುಕೊಂಡ ಹಾರ್ಮೋನಿಯಮ್ಮು, ತನ್ನ ದುಸ್ತಿತಿಯನ್ನೇ ನೋಡಿ ಹಲ್ಲು ಬಿಟ್ಟುಕೊಂಡು ನಗುತ್ತಾ, ಅಣಕಿಸುತ್ತಿದಂತೆ ಭಾಸವಾಯಿತು ಸುರೇಶನಿಗೆ.

ಅವತ್ತು ಇಡೀ ದಿನ, ಮತ್ತೆ ಹಾಡಲು ಮನಸ್ಸಾಗಲಿಲ್ಲ ಸುರೇಶನಿಗೆ. ಮನಸ್ಸಿನಲ್ಲಿ, ತನ್ನ ಸಾಮರ್ಥ್ಯದ ಬಗ್ಗೆಯೇ ಒಂದು ಅವ್ಯಕ್ತ ಭಯ ಕಾಡುತ್ತಿತ್ತು. ಸಂಗೀತವೆಂದರೇ ಒಂದು ರೀತಿಯ ದಿಗಿಲೆನಿಸಲು ಶುರುವಾಗಿತ್ತು. ಒಂದು ಕ್ಷಣ, ಈ ಸಂಗೀತದ ಗೀಳಿಗೆ ಬಿದ್ದು ತಪ್ಪು ಮಾಡಿದೆನೇನೋ ಅನ್ನಿಸಿತು. ಆದರೂ, ಒಳ್ಳೆ ಹಾಡುಗಾರನಾಗಬೇಕೆಂಬ ಅವನ ಕನಸನ್ನು ಅವನು ಅಷ್ಟು ಬೇಗ ಮರೆಯಲು ಸಿದ್ಧವಿರಲಿಲ್ಲ.ಮುಂದಿನ ವಾರ ಕ್ಲಾಸಿಗೆ ಹೋಗುವದಕ್ಕಿಂತ ಮುಂಚೆ ಒಂದು ತಾಸು ಇನ್ನೊಮ್ಮೆ ಮನೆಯಲ್ಲೇ ಅಭ್ಯಾಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ.

ಆದರೆ, ಆ ಶನಿವಾರ ಭಾಗ್ವತರು ೫ ಗಂಟೆಗೇ ಫೋನ್ ಮಾಡಿ, ೬.೩೦ ರ ಪುಷ್ಪಮಾಲಾ ಕ್ಲಾಸಿಗೆ ಬರುತ್ತಿಲ್ಲವಾದುದರಿಂದ, ಸುರೇಶನಿಗೇ ಆ ಸಮಯಕ್ಕೆ ಕ್ಲಾಸಿಗೆ ಬರಲು ಹೇಳಿಬಿಟ್ಟರು. ಸುರೇಶ ಈಗ ನಿಜವಾಗಲೂ ದಿಗಿಲುಬಿದ್ದ. ಅವನಿಗೆ ಇನ್ನೂ ಆಫೀಸಿನ ಕೆಲಸ ಮುಗಿಸಿ ಹೊರಬೀಳಲು ಮುಕ್ಕಾಲು ಗಂಟೆಯಂತೂ ಬೇಕಾಗಿತ್ತು. ಇನ್ನು ಅಭ್ಯಾಸ ಮಾಡುವ ಪ್ರಮೇಯವೇ ಇಲ್ಲ. ಹೇಗೋ ಹೇಗೋ ಬೇಗ ಕೆಲಸ ಮುಗಿಸಿ ಹೊರಟವನಿಗೆ ಬಿ.ಟಿ.ಎಂ ಸಿಗ್ನಲ್ಲಿನಲ್ಲೇ ಆರು ಗಂಟೆ ಆಗಿಬಿಟ್ಟಿತ್ತು. ಸಣ್ಣಗೆ ಝುಮುರು ಮಳೆ ಹನಿ ಬೇರೆ ಬೀಳುತ್ತಿತ್ತು. ಲೇಟ್ ಆಗಿ ಹೋದರೆ, ತನಗಾಗಿ ಭಾಗ್ವತರು ಕಾಯುತ್ತಿರುತ್ತಾರೆ ಎಂಬ ಭಾವನೆಯೇ ಸುರೇಶನಿಗೆ ಇನ್ನೂ ದಿಗಿಲುಕ್ಕಿಸಿತು. ಯಾವು ಯಾವುದೋ ಬೀದಿಗಳಲ್ಲಿ ನುಗ್ಗಿ, ಶಾರ್ಟ್ ಕಟ್ ಹಿಡಿದು ಅಂತೂ ೬.೩೦ ಕ್ಕೆ ಗಾಂಧಿ ಬಜಾರ್ ತಲುಪಿ ನಿಟ್ಟುಸಿರು ಬಿಟ್ಟ.

ಭಾಗ್ವತರು ಇವತ್ತು ಒಳ್ಳೆಯ ಮೂಡಲ್ಲಿ ಇದ್ದ ಹಾಗೆ ಕಂಡಿತು. ಮಳೆಯಲ್ಲಿ ತೊಯ್ದುಕೊಂಡು ಬಂದಿದ್ದ ಸುರೇಶನಿಗೆ ಭಾಗ್ವತರ ಹೆಂಡತಿ ಬಿಸಿ ಬಿಸಿ ಚಹ ಬೇರೆ ಮಾಡಿಕೊಟ್ಟರು. ಟ್ರಾಫಿಕ್ಕಿನಲ್ಲಿ ಸಿಕ್ಕಿ ನಲುಗಿ, ಮಳೆಯಲ್ಲಿ ತೊಯ್ದು ಹಿಂಡಿಯಾಗಿದ್ದ ಸುರೇಶ, ಚಹ ಕುಡಿದು ಸುಧಾರಿಸಿಕೊಂಡ. ಭಾಗ್ವತರಿಗೆ ಹಿಂದಿನ ವಾರ ನಡೆದಿದ್ದೆಲ್ಲವೂ ಮರೆತು ಹೋಗಿತ್ತು. ಹೆದರುತ್ತಲೇ, ಸುರೇಶ ಹಿಂದಿನದೆಲ್ಲದನ್ನೂ ನೆನಪಿಸಿದ. "ಸರಿ ಮತ್ತೆ, ಅಲಂಕಾರ ಶುರು ಮಾಡು" ಎಂದು ಹೇಳಿದಾಗ "ಇಲ್ಲ. ಇನ್ನೊಂದು ಅವಕಾಶ ಕೊಡಿ. ಈ ಸಲ ಖಂಡಿತ ಸರಿಯಾಗಿ ಹಾಡುತ್ತೇನೆ" ಎಂದು ಗೋಗರೆದ. ತನ್ನಲ್ಲಿ ಇಂಥ ಆತ್ಮವಿಶ್ವಾಸ ಎಲ್ಲಿಂದ ಬಂದಿತೆಂಬುದೇ ಗೊತ್ತಾಗದೇ ಸುರೇಶನಿಗೆ ಒಂದು ಕ್ಷಣ ಸೋಜಿಗವಾಯಿತು. ಭಾಗ್ವತರು ಒಮ್ಮೆ ನಕ್ಕು "ಸರಿ" ಎಂದು ಬಿಟ್ಟರು.

ಅಳುಕುತ್ತಲೇ ಹಾಡಲು ಶುರು ಮಾಡಿದ. ಒಂದೊಂದಾಗಿ ಸ್ವರಗಳನ್ನು ಹಾಡುತ್ತಿದ್ದಂತೆಯೇ, ಭಾಗ್ವತರು ತಲೆ ಆಡಿಸಿ ಸಮ್ಮತಿ ಸೂಚಿಸತೊಡಗಿದರು. ಸುರೇಶನಿಗೆ ಈಗ ಇನ್ನೂ ಧೈರ್ಯ ಬಂತು. ಹಾವಿನಂತೆ ಬಳುಕುತ್ತಾ ಹಾರ್ಮೋನಿಯಮ್ಮಿನ ಮನೆಗಳ ಮೇಲೆ ಹರಿದಾಡುತ್ತಿದ್ದ ಭಾಗ್ವತರ ಬೆರಳುಗಳನ್ನೇ ನೋಡುತ್ತಿದ್ದವನಿಗೆ ಯಾವುದೋ ಬೇರೆಯೇ ಲೋಕಕ್ಕೆ ಪ್ರವೇಶವಾದ ಅನುಭವವಾಗಿ, ತನ್ನನ್ನು ತಾನೇ ಮರೆತು ಮೈದುಂಬಿ ಹಾಡತೊಡಗಿದ. ಈಗ ಅವನ ಕಣ್ಣಿಗೆ ಎದುರು ಕುಳಿತಿದ್ದ ಭಾಗ್ವತರು ಕಾಣುತ್ತಿರಲಿಲ್ಲ. ಅವರ ಹಾರ್ಮೋನಿಯಮ್ಮಿನ ಸದ್ದು ಮಾತ್ರಾ ಅಸ್ಪಷ್ಟವಾಗಿ ಕ್ಷೀಣವಾಗಿ ಕೇಳಿಸುತ್ತಿತ್ತು. ಸುರೇಶ ಪ್ರವೇಶಿಸಿದ್ದ ಹೊಸ ಲೋಕದಲ್ಲಿ ಹಲವಾರು ಜನರು ನಿಂತುಕೊಂಡು, ಬೇರೆ ಬೇರೆ ಶೃತಿಗಳಲ್ಲಿ ಹಾಡುತ್ತಿದ್ದರು. ಹಿಂದೆಲ್ಲೋ ಅವರೆಲ್ಲರನ್ನೂ ಎಲ್ಲೋ ನೋಡಿದ ಅನುಭವವಾಯಿತಾದರೂ, ಯಾರನ್ನೂ ಬಿಡಿ ಬಿಡಿಯಾಗಿ ಗುರುತಿಸಲಾಗಲಿಲ್ಲ. ನೋಡು ನೋಡುತ್ತಿದ್ದಂತೆಯೇ, ಅವರ ಬಿಂಬಗಳು ಸುರೇಶನ ಕಣ್ಣ ಮುಂದೇ ಎದ್ದೆದ್ದು ಕುಣಿಯತೊಡಗಿದವು. ಸುರೇಶನ ಕಣ್ಣಿಗೆ ಕತ್ತಲು ಕವಿದಂತಾಗಿ, ತಲೆ ತಿರುಗತೊಡಗಿತು .ದುರ್ಗಾ ರಾಗದ ಸ್ವರಗಳು, ಸೌತ್ ಎಂಡ್ ಸರ್ಕಲ್ಲಿನಲ್ಲಿ ಸದಾ ಹೂವು ಮಾರುತ್ತಾ ನಿಂತಿರುತ್ತಿದ್ದ ಪುಟ್ಟ ಬಾಲೆಯ ಧ್ವನಿ, ಕುಕ್ಕರಿನ ಶಿಳ್ಳೆಯ ಸದ್ದು, ಪಕ್ಕದಮನೆಯ ಮುಸ್ಲಿಮ್ ಆಂಟಿಯ ಕೀರಲು ಧ್ವನಿ, ಗೂರ್ಖಾನ "ಸಲಾಂ ಸಾಬ್" ಎಂಬ ಗಡಸು ಧ್ವನಿ, ಹಳೆಯ ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಬಿ.ಎಂ.ಟಿ.ಸಿ ಬಸ್ಸಿನ ಕರ್ಕಶ ಹಾರ್ನ್, ಎಲ್ಲವೂ ಸೇರಿ ಕಲಸುಮೇಲೋಗರವಾಗಿ, ಅವನ ಕಿವಿಯಲ್ಲಿ ಅನುರಣಿಸತೊಡಗಿದವು. ಆ ಯಾತನೆಯನ್ನು ತಾಳಲಾಗದೇ ಸುರೇಶ ಕಿವಿಮುಚ್ಚಿಕೊಂಡ. ಸುರೇಶ ಅನುಭವಿಸುತ್ತಿದ್ದ ಯಾತನೆಗಳಿಗೆಲ್ಲಾ ಸಾಕ್ಷಿಯೆಂಬಂತೆ ಅವನ ಕೆಂಪು ಹೊದಿಕೆಯ ಸಂಗೀತ ಪುಸ್ತಕ ಅನಾಥವಾಗಿ ಬಿದ್ದುಕೊಂಡು ಮನೆಯ ಸೂರನ್ನೇ ದಿಟ್ಟಿಸುತ್ತಿತ್ತು. ಭಾಗ್ವತರ ಹಾರ್ಮೋನಿಯಮ್ಮು ಈಗ ಮೌನದ ಮೊರೆ ಹೊಕ್ಕಿತ್ತು. ಇವ್ಯಾವುದರ ಪರಿವೆಯೇ ಇಲ್ಲದಂತೆ ತಾಳಮಾತ್ರಿಕೆ ಮಾತ್ರಾ ಒಂದೇ ತಾಳದಲ್ಲಿ ಮಿಡಿಯುತ್ತಾ, ಸುರೇಶನ ಶೋಕಗೀತೆಗೆ ಸಾಥ್ ನೀಡುತಿತ್ತು.

Saturday, February 16, 2008

ಗಣೇಶನ ಮದುವೆ

ಮಂಗಳವಾರ ಬೆಳಿಗ್ಗೆ ಬೇಗ ಎದ್ದು, ಇನ್ನೂ ಮುಖ ತೊಳೆಯುತ್ತಿರುವಂತೆಯೇ, ನನ್ನವಳು "ರೀ, ಇವತ್ತಿನ ಪೇಪರ್ ನೋಡಿದ್ರಾ, ಗಣೇಶನ ಮದುವೆ ಆಯಿತಂತೆ ಕಣ್ರೀ" ಎಂದು ಹಾಲ್ ನಿಂದಲೇ ಕೂಗಿಕೊಂಡಳು. ಇನ್ನೂ ನಿದ್ದೆಕಣ್ಣಲ್ಲಿದ್ದ ನಾನು ಅವಳ ಕೂಗಿಗೆ ಬೆಚ್ಚಿಬಿದ್ದೆ. ಸುಮಾರಾಗಿ ಯಾವ ವಿಷಯಕ್ಕೂ ಎಕ್ಸೈಟ್ ಆಗದವಳು ಇವತ್ತು ಇಷ್ಟು ದೊಡ್ಡ ದನಿಯಲ್ಲಿ ಕೂಗಿಕೊಂಡಿದ್ದನ್ನು ಕೇಳಿ ಏನೋ ವಿಶೇಷವಿರಬೇಕೆಂದು ಅನ್ನಿಸಿತು. "ಯಾವ ಗಣೇಶನೇ ? ಅದೇ ಪಾರ್ವತಿ-ಈಶ್ವರನ ಮಗನಿಗಾ? ಕಲಿಗಾಲ ಕಣೇ.. ಏನು ಬೇಕಾದರೂ ಆಗಬಹುದು" ಎಂದು ಇದ್ದಲಿಂದಲೇ ಕೂಗಿದೆ. "ನಿಮ್ಮ ತಲೆ.... ನಮ್ಮ ಗೋಲ್ಡನ್ ಸ್ಟಾರ್ ಗಣೇಶನಿಗೆ ಮದುವೆಯಾಯ್ತಂತೆ ಕಣ್ರೀ. ಪೇಪರ್ನಲ್ಲಿ ಫೋಟೋ ಹಾಕಿದ್ದಾರೆ ನೋಡಿ" ಮಾರುತ್ತರ ಬಂತು. "ಓ ಅವನಿಗಾ?" ನಾನು ಸಮಾಧಾನ ಪಟ್ಟೆ.

ನನ್ನವಳು ಗೋಲ್ಡನ್ ಸ್ಟಾರ್ ಗಣೇಶನ ಕಟ್ಟಾ ಅಭಿಮಾನಿ. ಕಾಮೆಡಿ ಟೈಮ್ ಕಾಲದಿಂದಲೂ ಅವನನ್ನು ಮೆಚ್ಚಿದವಳು. ನನಗೆ ಇಷ್ಟವಿಲ್ಲದಿದ್ದರೂ,ದುಂಬಾಲು ಬಿದ್ದು, ಮುಂಗಾರು ಮಳೆ, ಹುಡುಗಾಟ, ಚೆಲ್ಲಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಎಲ್ಲಾ ಚಿತ್ರಗಳಿಗೂ ನನ್ನನ್ನು ಕರೆದುಕೊಂಡು ಹೋಗಿ ನನಗೆ ಚಿತ್ರಹಿಂಸೆ ಕೊಟ್ಟಿದ್ದಳು . ಸಿನೆಮಾ ನೋಡುವಾಗ ಮಾತ್ರ ಚಕಾರವೆತ್ತಲೂ ಬಿಡದವಳು, ಸಿನೆಮಾ ಮುಗಿದ ನಂತರ ಎರಡು ದಿನಗಳಗಟ್ಟಲೇ ಗಣೇಶನ ಗುಣಗಾನ ಮಾಡಿ ನನ್ನ ಹೊಟ್ಟೆ ಉರಿಸಿದ್ದಳು. ಈಗ ನೋಡಿದರೆ ಅವನ ಮದುವೆ ವಿಷಯ ಗೊತ್ತಾಗಿದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ಮೂಡ್ ಹಾಳುಮಾಡುವುದರಲ್ಲಿ ಸಂಶಯವೇ ಇಲ್ಲ ಅನ್ನಿಸಿ ಹಾಲ್ ಕಡೆ ನಡೆದೆ.

ದಿನಾ ಬೆಳಿಗ್ಗೆ ನನಗಿಂತಲೂ ಬೇಗ ಎದ್ದು, ಒಬ್ಬಳಿಗೇ ಸ್ಟ್ರಾಂಗ್ ಕಾಫಿ ಮಾಡಿಕೊಂಡು, ಹಾಲ್ ನಲ್ಲಿದ್ದ ಸೋಫಾದ ಮೇಲೆ ಪವಡಿಸಿಕೊಂಡು ಪೇಪರ್ ಓದುವುದು ಅವಳ ದಿನಚರಿ. ಪೇಪರು ನನ್ನ ಕೈಗೆ ಬಂದರೆ ಅದು ಅರ್ಧ ತಾಸು ಕದಲುವುದಿಲ್ಲವೆನ್ನುವುದು ಅವಳ ಕಂಪ್ಲೇಂಟು. ಅದಕ್ಕೇ ನನಗಿಂತಲೂ ಮುಂಚೆ ಅವಳು ಪೇಪರ್ ಓದಿ ಬಿಡಬೇಕು. ಇವತ್ತೂ ಅಷ್ಟೇ.. ಕಾಲು ಮೇಲೆ ಕಾಲು ಹಾಕಿಕೊಂಡು, ಮುಖಪುಟದಲ್ಲಿ ಹಾಕಿದ್ದ ಗಣೇಶನ ಮದುವೆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳನ್ನು ನೋಡಿ ನಗು ಬಂತು. ಆದರೂ ಸಾವರಿಸಿಕೊಂಡು "ಅಲ್ವೇ, ನಾನು ಈಗ ತಾನೆ ಎದ್ದಿದೀನಿ. ಆಫೀಸಿಗೆ ಬೇಗ ಹೋಗ್ಬೇಕು. ಕಾಫಿ ಮಾಡಿ ತಂದುಕೊಡೋದು ಬಿಟ್ಟು, ಅದ್ಯಾವುದೋ ಸುಟ್ಟ ಬದನೇಕಾಯಿ ಮುಖದ ಹೀರೋನ ಮದುವೆಯಾಯ್ತು ಅಂತ ಬಾಯಿಬಿಟ್ಟುಕೊಂಡು ಫೋಟೋ ನೋಡ್ತಾ ಇದ್ದೀಯಲ್ಲೇ ? ಗಂಡನ ಮೇಲೆ ಸ್ವಲ್ಪಾನೂ ಕಾಳಜಿಯಿಲ್ವಾ ನಿನಗೆ?" ಎಂದು ರೇಗಿಸಿದೆ. "ನಿಮಗೆ ಕಾಫಿ ತಾನೇ ಬೇಕು ? ತಂದು ಕೊಡ್ತಿನಿ ಇರಿ. ನನ್ನ ಗಣೇಶಂಗೆ ಮಾತ್ರಾ ಏನೂ ಹೇಳ್ಬೇಡಿ ನೀವು" ಎಂದವಳೇ, ಪೇಪರನ್ನು ನನ್ನ ಕೈಯಲ್ಲಿ ತುರುಕಿ, ದಡಕ್ಕನೇ ಎದ್ದು ಅಡುಗೆ ಮನೆಗೆ ಕಡೆಗೆ ನಡೆದಳು.

ನಿಧಾನವಾಗಿ ಸೋಫಾದ ಮೇಲೆ ಕುಳಿತು ಪೇಪರ್ ತೆಗೆದವನಿಗೆ ರಾಚಿದ್ದು ದಂಪತಿಗಳ ನಗುಮುಖದ ಚಿತ್ರ. ಜೋಡಿ ಚೆನ್ನಾಗಿದೆ ಅನ್ನಿಸಿತು. "ಜೋಡಿ ಸಕ್ಕತ್ತಾಗಿ ಇದೆಯಲ್ಲೇ ?" ಇವಳಿಗೆ ಕೇಳಿಸುವಂತೆ ದೊಡ್ಡದಾಗಿ ಹೇಳಿದೆ. "ಕರ್ಮ, ಕರ್ಮ.. ಅಲ್ರೀ, ಹೋಗಿ ಹೋಗಿ, ಅದ್ಯಾವುದೋ ಡೈವೋರ್ಸ್ ಆದ ಹುಡುಗಿಯನ್ನು ಮದುವೆ ಆಗಿದ್ದಾನಲ್ರೀ ಅವನು ? ಇಡೀ ಕರ್ನಾಟಕದಲ್ಲಿ ಮತ್ಯಾರೂ ಹುಡುಗಿಯರು ಸಿಕ್ಕಲಿಲ್ವಾ ಅವನಿಗೆ? ಕರ್ಮಕಾಂಡ.." ಅಂತ ಉರಿದುಕೊಂಡಳು. ನಂಗ್ಯಾಕೋ ಅವಳನ್ನು ಇನ್ನೂ ಸ್ವಲ್ಪ ರೇಗಿಸೋಣ ಅನ್ನಿಸಿತು. ಮೆಲ್ಲಗೆ ಅಡುಗೆ ಮನೆಯ ಕಡೆ ಪಾದ ಬೆಳೆಸಿದೆ. "ಅಲ್ವೇ, ಅವನು ಪ್ರೀತಿ ಮಾಡಿ ಮದುವೆಯಾಗಿದ್ದಂತೆ ಕಣೇ, ಅದರಲ್ಲೇನು ತಪ್ಪು? ಪ್ರೀತಿ ಮಾಡೋವ್ರು ಚಂದನೆಲ್ಲಾ ನೋಡ್ತಾರಾ? ಅದಲ್ದೇ ಇವಳು ನೋಡೋಕ್ಕೆ ಚೆನ್ನಾಗೇ ಇದ್ದಾಳಲ್ಲೇ." ನಾನು ಮೆಲ್ಲಗೆ ಉಸುರಿದೆ. ಫಿಲ್ಟರನಲ್ಲಿದ್ದ ಡಿಕಾಕ್ಷನ್ ಗೆ ಸ್ವಲ್ಪ ಜಾಸ್ತಿನೇ ಹಾಲು,ಸಕ್ಕರೆ ಬೆರೆಸಿ ನನ್ನ ಕೈಗಿತ್ತವಳೇ "ಅವಳೆಂತಾ ಚೆನ್ನಾಗಿದಾಳೆ ? ನಮ್ಮ ಗಣೇಶಂಗೆ ಒಂದು ಚೂರೂ ಸರಿಯಾದ ಜೋಡಿಯಲ್ಲ. ಸ್ವಲ್ಪ ವಯಸ್ಸಾದ ಹಾಗೆ ಬೇರೆ ಕಾಣ್ಸ್ತಾಳೆ." ಎಂದು ಮೂಗು ಮುರಿದಳು.

"ನನಗಂತೂ ಅವಳು ಫೋಟೋದಲ್ಲಿ ನಿನಗಿಂತಾ ಚೆನ್ನಾಗಿ ಕಾಣ್ತಾಳೆ ಕಣೇ" ನಾನು ಬ್ರಹ್ಮಾಸ್ತ್ರ ಪ್ರಯೋಗಿಸಿದೆ. "ಹ್ಮ್.. ಕಾಣ್ತಾರೆ ಕಾಣ್ತಾರೆ.. ನನ್ನ ಬಿಟ್ಟು ಉಳಿದವರೆಲ್ಲರೂ ನಿಮಗೆ ಚೆನ್ನಾಗೇ ಕಾಣ್ತಾರೆ. ನಾನು ಇಲ್ಲಿ ಇಡೀ ದಿನ ಮನೆಲ್ಲಿದ್ದು ಕತ್ತೆ ತರ ಚಾಕರಿ ಮಾಡ್ತಿನಿ. ನೀವು ಕಂಡ ಕಂಡ ಸುಂದರಿಯರ ಹಿಂದೆ ಜೊಲ್ಲು ಸುರಿಸಿಕೊಂಡು ಹೋಗಿ. ಈ ಕರ್ಮಕ್ಕೆ ಮದುವೆ ಬೇರೆ ಕೇಡು ನಿಮಗೆ" ಅವಳ ಕಂದು ಕಂಗಳಲ್ಲಿ ಕಿಡಿ ಹಾರಿತು. "ಅಲ್ವೇ, ಅವಳ ಜಡೆ ತುಂಬಾ ಉದ್ದ ಇದೆ ಕಣೇ. ನೋಡು.." ನಾನು ಪೇಪರ್ ಅವಳ ಮುಂದೆ ಹಿಡಿದೆ. ಜಡೆ ನನ್ನವಳ ವೀಕ್ ಪಾಯಿಂಟು. ಮದುವೆಯಾದಾಗಲೇ ಸ್ವಲ್ಪ ಗಿಡ್ಡ ಇದ್ದ ಕೂದಲು, ಬರ್ತಾ ಬರ್ತಾ ಉದುರಿ, ಈಗ ಮೋಟುಜಡೆಯಾಗಿತ್ತು. ಅದಕ್ಕೆ ಇವಳು ಮಾಡಿದ ಆರೈಕೆ ಒಂದೆರಡಲ್ಲ. ೧೫ ದಿನಕ್ಕೊಮ್ಮೆ ಶಾಂಪೂ ಬದಲಿಸುತ್ತಿದ್ದಳು. ಹಾಗೆಲ್ಲಾ ಪದೇ ಪದೇ ಶಾಂಪೂ ಬದಲಿಸಬಾರದೆಂದು ಸಲಹೆ ಕೊಟ್ಟ ನನಗೆ "ನೀವು ಸುಮ್ಮನಿರಿ, ನಿಮಗೇನೂ ಗೊತ್ತಾಗಲ್ಲ" ಎಂದು ಗದರಿ ಬಾಯಿಮುಚ್ಚಿಸಿದ್ದಳು. "ಅವಳು ಹಾಕ್ಕೊಂಡಿದ್ದು ಚೌರಿ ಕಣ್ರೀ, ನೀವು ಅದನೆಲ್ಲಾ ಎಲ್ಲಿ ಸರಿಯಾಗಿ ನೋಡ್ತೀರಾ? ಈಗ ಇಲ್ಲಿಗೆ ಬಂದಿದ್ದು ಯಾಕೆ? ನನ್ನ ರೇಗಿಸೋಕಾ? ನನಗೆ ಬೇಕಾದಷ್ಟು ಕೆಲಸವಿದೆ. ನೀವು ಹಾಲ್ ಗೆ ಹೋಗಿ ಕುಕ್ಕರುಬಡೀರಿ, ಹೋಗಿ" ಎಂದು ನನ್ನನ್ನು ಹೊರದಬ್ಬಲು ಪ್ರಯತ್ನಿಸಿದಳು. ನಾನು ಕದಲಲಿಲ್ಲ. ಹಾಗೆ ನೋಡಿದರೆ, ಸಿಟ್ಟು ಬಂದಾಗ ನನ್ನವಳು ತುಂಬಾನೇ ಮೋಹಕವಾಗಿ ಕಾಣುತ್ತಾಳೆ. ಅದಕ್ಕೆಂದೇ ನಾನು ಆಗಾಗ ಅವಳನ್ನು ರೇಗಿಸುವುದುಂಟು. ಮೆಲ್ಲಗೆ ಕಾಫಿ ಕುಡಿಯುತ್ತಾ ಅವಳ ಮುಖವನ್ನೇ ದಿಟ್ಟಿಸಿದೆ.

ನನ್ನ ಅತ್ತೆಯ ಮೂರು ಹೆಣ್ಣು ಮಕ್ಕಳಲ್ಲಿ, ನನ್ನವಳೇ ಸ್ವಲ್ಪ ಕಪ್ಪು. ಆದರೂ ಮುಖದಲ್ಲೇನೋ ಅಪೂರ್ವ ಕಳೆ. ಸ್ವಲ್ಪ ಅಗಲವಾದ ಹಣೆ, ಆಳವಾದ ಸಣ್ಣ ಕಣ್ಣುಗಳು, ತಿದ್ದಿ ತೀಡಿದಂತಿದ್ದ ಹುಬ್ಬುಗಳು, ನೀಳವಾದ ಮೂಗು, ತುಂಬುಗೆನ್ನೆ. ನಕ್ಕಾಗ ಎರಡೂ ಕೆನ್ನೆಗಳಲ್ಲಿ ಗುಳಿ ಬಿದ್ದು ಅಪೂರ್ವವಾದ ಸೌಂದರ್ಯವನ್ನು ಹೊರಸೂಸುತ್ತಿದ್ದವು. ಅವಳ ಕಂದು ಕಣ್ಣುಗಳಲ್ಲಿ ಅದೇನೋ ಕಾಂತಿ ಅಯಸ್ಕಾಂತದಂತೆ ಸೆಳೆಯುತ್ತಿತ್ತು. ಇವತ್ತು ಹಣೆಗೆ ಒವಲ್ ಶೇಪಿನ ಪುಟ್ಟ ಸ್ಟಿಕರ್ರೊಂದನ್ನು ಅಂಟಿಸಿಕೊಂಡಿದ್ದಳು. ಉಪ್ಪಿಟ್ಟಿಗೆಂದು ಮೆಣಸಿನಕಾಯಿ ಹೆಚ್ಚುತ್ತಿದ್ದವಳು, ಆಗಾಗ ಹಣೆಯ ಮೇಲೆ ಮೂಡಿದ್ದ ಬೆವರು ಹನಿಗಳನ್ನು ಕೈಯಿಂದ ಒರೆಸಿಕೊಳ್ಳುತ್ತಿದ್ದಳು. ಅವಳ ಪುಟ್ಟ ಚಲನವಲನಗಳಲ್ಲೂ ಅದೇನೋ ಮೋಹಕತೆ.

ನಾನಿನ್ನೂ ಅಲ್ಲೇ ನಿಂತು ಅವಳನ್ನೇ ನೋಡುತ್ತಿರುವುದು ಅವಳಿಗೆ ಸ್ವಲ್ಪ ಮುಜುಗರ ತಂದಿರಬೇಕು. ಅವಳಿಗೆ ಸ್ವಲ್ಪ ಜಾಸ್ತಿಯೇ ನಾಚಿಕೆ ಸ್ವಭಾವ. ಮದುವೆಯಾಗಿ ವರ್ಷವಾದರೂ, ಪಬ್ಲಿಕ್ ಜಾಗಗಳಲ್ಲಿ ನಾನು ಕೈ ಹಿಡಿದುಕೊಂಡರೆ ನಾಚಿ ತಟ್ಟನೇ ಕೈ ಹಿಂದೆ ತೆಗೆದುಕೊಳ್ಳುತ್ತಿದ್ದಳು. "ನನ್ನ ಮುಖದ ಮೇಲೆ ಕೋತಿ ಕುಣಿತಾ ಇದೆಯೇನ್ರೀ? ಹಾಲ್ ಗೆ ಹೋಗಿ ಆ ದರಿದ್ರ ಪೇಪರನ್ನೇ ಓದಿ ಹೋಗಿ" ಎಂದು ಬೆನ್ನಿನ ಮೇಲೊಂದು ಗುದ್ದಿ ನನ್ನನ್ನು ಬಲವಂತವಾಗಿ ಹೊರದಬ್ಬಿದಳು. ಹೈಸ್ಕೂಲಿನಲ್ಲಿ ನನ್ನವಳು ಖೋಖೋ ಚೆನ್ನಾಗಿ ಆಡುತ್ತಿದ್ದಳಂತೆ. ಈಗಲೂ ನನ್ನನ್ನು ಅಟ್ಟಿಸಿಕೊಂಡು ಬಂದು ಬೆನ್ನಿಗೆ ಗುದ್ದುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ ಅವಳು.

೧೦ ನಿಮಿಷದಲ್ಲಿ ಉಪ್ಪಿಟ್ಟು ರೆಡಿ. ನನಗೆ ಉಪ್ಪಿಟ್ಟೆಂದರೆ ಸ್ವಲ್ಪ ಅಲರ್ಜಿ. ಆದರೆ ಇವಳಿಗೆ ಮಾತ್ರ ಉಪ್ಪಿಟ್ಟೆಂದರೆ ಪಂಚಪ್ರಾಣ. ನಿಧಾನವಾಗಿ ಉಪ್ಪಿಟ್ಟು ತಿನ್ನುತ್ತಿದ್ದವಳನ್ನು ಮತ್ತೆ ಕೆಣಕಿದೆ. "ಅಲ್ವೇ ? ಗಣೇಶ ನಿನ್ನ ಮದುವೆ ಆಗಲಿಲ್ಲ ಅಂತಾ ಬೇಜಾರಾ ನಿಂಗೆ?". ಈ ಸಲ ಅವಳು ರೆಡಿಯಾಗಿದ್ದಳು. "ಏನು ಮಾಡೋದು? ನಿಮ್ಮನಾಗಲೇ ಮದುವೆಯಾಗಿ ಬಿಟ್ಟಿದ್ದೀನಲ್ಲಾ? ಅದಲ್ದೇ ಗಣೇಶನ ಮದುವೆ ಬೇರೆ ಆಗಿ ಹೋಯ್ತು. ಇಲ್ಲದೇ ಹೋದರೆ ಟ್ರೈ ಮಾಡಬಹುದಿತ್ತು. ಛೇ.." ಎಂದು ಮುಖ ಊದಿಸಿದಳು. "ದುನಿಯಾ ಪಿಚ್ಚರಲ್ಲಿ ಲೂಸ್ ಮಾದನ ಪಾರ್ಟ್ ಮಾಡಿದ್ನಲ್ಲಾ. ಅವನೂ ಈಗ ಹೀರೋ ಅಂತೆ ಕಣೇ. ಅವನಿಗಿನ್ನೂ ಮದ್ವೆ ಆಗಿಲ್ಲ ನೋಡು. ಟ್ರೈ ಮಾಡ್ತೀಯಾ?" ನಾನು ಬಿಡಲು ತಯಾರಿರಲಿಲ್ಲ. "ಥೂ, ಅವನೂ ಒಂದು ಹೀರೋನೇನ್ರಿ ? ಮಂಗನ ತರ ಇದಾನೆ ನೋಡೋಕೆ. ಎಂತೆಂಥವ್ರೆಲ್ಲಾ ಹೀರೋ ಆಗ್ತಾರಪ್ಪಾ ಈ ಕಾಲದಲ್ಲಿ" ಎಂದು ನಿಡುಸುಯ್ದಳು. "ನಿನ್ನ ಗಣೇಶ ಇನ್ನೇನು ಸುರಸುಂದರಾಂಗನಾ? ಕುರುಚಲು ಗಡ್ಡ, ಕೆದರಿದ ಕೂದಲು, ದೇವ್ರಿಗೇ ಪ್ರೀತಿ ಅವನ ಅವತಾರ. ಒಂದು ನಾಲ್ಕು ಹಾಡು ಹಾಡಿ, ಎರಡು ಹೀರೋಯಿನ್ ಜತೆ ಕುಣಿದುಬಿಟ್ಟು, ನಾಲ್ಕು ವಿಲ್ಲನ್ನುಗಳಿಗೆ ಹೊಡೆದುಬಿಟ್ರೆ ಸಾಕು, ತಲೆ ಮೇಲೆ ಕುಳಿಸ್ಕೊತೀರಾ ನೀವುಗಳು. ಬುದ್ಧಿನೇ ಇಲ್ಲ ಹೆಣ್ಣಮಕ್ಕಳಿಗೆ" ನಾನಂದೆ. ನಾನು ಹೆಣ್ಣು ಜಾತಿಗೇ ಬೈಯ್ದಿದ್ದು ನನ್ನವಳಿಗೆ ಬಹಳ ಕೋಪ ತರಿಸಿತು ಅನ್ನಿಸುತ್ತೆ. ಮುಖ ಕೆಂಪಗೆ ಮಾಡಿಕೊಂಡು "ರೀ, ನೀವು ನನ್ನ ಗಣೇಶಂಗೆ ಮಾತ್ರಾ ಏನೂ ಹೇಳಬೇಡಿ. ಅವನು ಎಷ್ಟು ಒಳ್ಳೆಯವನು ಗೊತ್ತಾ? ಮುಂಗಾರು ಮಳೆ ಹಂಡ್ರೆಡ್ ಡೇಸ್ ಸಮಾರಂಭದಲ್ಲಿ ನನ್ನ ಹತ್ತಿರ ಎಷ್ಟು ಚೆನ್ನಾಗಿ ಮಾತಾಡ್ದಾ ಗೊತ್ತಾ? ಎಷ್ಟು ಪ್ರೀತಿ, ಎಷ್ಟು ವಿನಯ. ನೋಡೋಕ್ಕೂ ಸ್ಮಾರ್ಟ್ ಆಗಿ ಇದಾನೆ. ನಿಮಗಿಂತಾ ಸಾವಿರ ಪಾಲು ಬೆಟರ್ರು" ಅಂದವಳೇ ಉಪ್ಪಿಟ್ಟಿನ ಬಟ್ಟಲನ್ನು ಅಲ್ಲಿಯೇ ಬಿಟ್ಟು ಸಿಟ್ಟು ಮಾಡಿಕೊಂಡು ಒಳಗೆ ನಡೆದಳು. ನನಗೆ ಉಪ್ಪಿಟ್ಟು ಗಂಟಲಲ್ಲೇ ಸಿಕ್ಕಿಕೊಂಡ ಹಾಗಾಯಿತು. "ನಿನ್ನಂತಾ ಮದುವೆಯಾದ ಹುಡುಗಿಯರಿಗೇ ಈ ತರ ಹುಚ್ಚುತನ ಇದ್ರೆ, ಇನ್ನು ಮದುವೆಯಾಗದೇ ಇರೋ ಹೆಣ್ಣುಮಕ್ಕಳಿಗೆ ಇನ್ನೆಷ್ಟು ಕ್ರೇಜ್ ಇರಬೇಡಾ ? ನಿಮ್ಮಂತೋರ ಕಾಟ ತಡೆಲಿಕ್ಕಾಗದೇ, ಅವ್ನು ರಾತ್ರೋ ರಾತ್ರಿ ಮದ್ವೆಯಾಗಿದ್ದು" ಎಂದು ಕೂಗಿ ನಾನು ಬಟ್ಟಲನ್ನು ಕುಕ್ಕಿದೆ. ನನ್ನ ಅಹಂಗೂ ಸ್ವಲ್ಪ ಪೆಟ್ಟು ಬಿದ್ದಿತ್ತು.

ಸ್ನಾನ ಮುಗಿಸಿಕೊಂಡು ಬಂದರೂ, ಇವಳು ತಣ್ಣಗಾದ ಲಕ್ಷಣ ಕಾಣಲಿಲ್ಲ. ಮುಗುಮ್ಮಾಗಿ ಸೋಫ಼ಾದ ಮೇಲೆ ಕುಳಿತುಕೊಂಡೇ ಇದ್ದಳು. ಮತ್ತೆ ಮಾತಾಡಿಸಿದರೇ ಸಿಟ್ಟು ಉಲ್ಬಣಿಸಬಹುದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೆ. ನನ್ನವಳಿಗೆ ಸಿಟ್ಟು ಬರುವುದು ತುಂಬಾನೇ ಕಮ್ಮಿ. ಬಂದರೂ ಬಹಳ ಬೇಗ ಇಳಿದುಹೋಗುತ್ತಿತ್ತು. ನಾನು ನೋಡಿದವರೆಲ್ಲರಲ್ಲೂ ಅತ್ಯಂತ ಸಹನಾಮೂರ್ತಿ ಅಂದರೆ ಇವಳೇ. ಇವತ್ಯಾಕೋ ನಾನೇ ಅವಳನ್ನು ಕೆಣಕಿ ಸಿಟ್ಟು ಬರಿಸಿದ್ದೆ. ಆಫೀಸಿಗೆ ಹೊರಟು ನಿಂತರೂ ಅವಳ ಮೂಡ್ ಸರಿಯಾದ ಹಾಗೆ ಕಾಣಲಿಲ್ಲ. ದಿನವೂ ಬಾಗಿಲಿನ ತನಕ ಬಂದು ಬೈ ಹೇಳಿ ಹೋಗುತ್ತಿದ್ದವಳು, ಇವತ್ತು ಪತ್ತೆಯೇ ಇಲ್ಲ. ಲಂಚ್ ಬ್ರೇಕಿನಲ್ಲಿ ಮನೆಗೆ ಎರಡು ಸಲ ಕಾಲ್ ಮಾಡಿದೆ. ಅರ್ಧಕ್ಕೇ ಕಟ್ ಮಾಡಿದಳು. ಇದ್ಯಾಕೋ ಸ್ವಲ್ಪ ಸೀರಿಯಸ್ ಆದ ಲಕ್ಷಣ ಕಾಣಿಸಿ, ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯಿತು.

ಸಂಜೆ, ಸ್ವಲ್ಪ ಮುಂಚೆಯೇ ಮನೆಗೆ ಹೋದೆ. ಬಾಗಿಲು ತೆಗೆದವಳೇ, ಮುಖ ಕೂಡ ನೋಡದೇ ವಾಪಸ್ ಹೋದಳು. ನಾನು ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಬಿಸಿ ಕಾಫಿ ರೆಡಿಯಾಗಿತ್ತು. ಅವಳಿಗಾಗಿ ಹುಡುಕಿದೆ. ಬೆಡ್ ರೂಮಿನಲ್ಲಿ ಯಾವುದೋ ಕಾದಂಬರಿ ಹಿಡಿದು ಕುಳಿತಿದ್ದಳು. ಮೆಲ್ಲಗೆ ಅವಳ ಬಳಿ ಹೋಗಿ ಕುಳಿತು ಅವಳ ಮುಖವನ್ನೇ ನೋಡತೊಡಗಿದೆ. ತಿರುಗಿ, ಕಣ್ಣು ಹುಬ್ಬಿನಲ್ಲೇ ಒಮ್ಮೆ "ಏನು?" ಎಂದು ಪ್ರಶ್ನಿಸಿದವಳು, ಮತ್ತೆ ಕಾದಂಬರಿಯಲ್ಲಿ ಮುಖ ಹುದುಗಿಸಿದಳು. ಕಾದಂಬರಿಯನ್ನು ಅವಳ ಕೈಯಿಂದ ಕಸಿದು, ಮುಖವನ್ನು ನನ್ನ ಬಳಿ ತಿರುಗಿಸಿಕೊಂಡು "ನಿನ್ನ ಕಾಫಿ ಆಯ್ತಾ?" ಎಂದು ಕೇಳಿದೆ. ತಲೆ ಅಲ್ಲಾಡಿಸಿದಳು. "ನಿನ್ನ ಹತ್ತಿರ ಮಾತಾಡಬೇಕು. ಬಾ" ಎಂದು ಅವಳನ್ನು ಹಾಲಿಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕುಳಿಸಿದೆ. "ನಿನಗೊಂದು ವಿಷಯ ಹೇಳಬೇಕು. ನೀನು ತಮಾಷೆ ಮಾಡಬಾರದು" ಎಂದೆ. ಅವಳೇನೂ ಮಾತಾಡಲಿಲ್ಲ. ಆದರೇ ಅವಳ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. "ನಾನು ಎಂಜಿನೀಯರಿಂಗ್ ಮಾಡುವಾಗ, ನನಗೆ ಅನು ಪ್ರಭಾಕರ್ ಮೇಲೆ ಸಿಕ್ಕಾಪಟ್ಟೆ ಕ್ರಷ್ ಇತ್ತು, ಗೊತ್ತಾ? ಅವಳ ಎಲ್ಲಾ ಪಿಕ್ಚರ್ ಗಳನ್ನೆಲ್ಲಾ ತಪ್ಪದೇ ನೋಡುತ್ತಿದ್ದೆ. ನನ್ನ ರೂಮಿನಲ್ಲೂ ಅವಳ ಫೋಟೊಗಳನ್ನು ಅಂಟಿಸಿಕೊಂಡಿದ್ದೆ. ನಿಂಗೆ ಸಮೀರ್ ಗೊತ್ತಲ್ಲಾ, ಅವನು ಬಂದು ಅನುಪ್ರಭಾಕರಳ ಮದುವೆಯಾದ ಸುದ್ದಿ ಹೇಳಿದಾಗ ನನಗೆ ಎಷ್ಟು ಬೇಜಾರಾಗಿತ್ತು ಗೊತ್ತಾ? ತಿಂಗಳುಗಟ್ಟಲೇ ಶೇವ್ ಮಾಡದೇ ಗಡ್ಡ ಬಿಟ್ಟುಕೊಂಡು ದೇವದಾಸ್ ತರಹ ಅಲೆದುಕೊಂಡಿದ್ದೆ" ಎಂದು ಹೇಳಿ ಬೆಡ್ ರೂಮಿನಲ್ಲಿಟ್ಟಿದ್ದ ನನ್ನ ಹಳೇ ಡೈರಿಯೊಂದನ್ನು ತೆಗೆದುಕೊಂಡು ಬಂದೆ. ಅದರಲ್ಲಿ ಅನು ಪ್ರಭಾಕರ್, ಅವಳ ಗಂಡನ ಜೊತೆಯಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋ ಒಂದನ್ನು ನಾನು ಪತ್ರಿಕೆಯೊಂದರಿಂದ ಕಟ್ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ನನ್ನವಳಿಗೆ ತೋರಿಸಿ, ಮುಗ್ಧನಂತೆ ಮುಖ ಮಾಡಿ "ಈಗ ಹೇಳು, ಈ ಫೋಟೋದಲ್ಲಿರುವವನಿಗಿಂತಾ ನಾನು ಚೆನ್ನಾಗಿಲ್ವಾ? ಎಂದು ಕೇಳಿದೆ. ನನ್ನವಳ ಮುಖದಲ್ಲೆಲ್ಲಾ ಈಗ ನಗುವಿನ ಹೊನಲು. "ನಿಮ್ಮ ತಲೆ" ಎಂದವಳೇ ತಲೆಯ ಮೇಲೊಂದು ಮೊಟಕಿ, ಫೋಟೋವನ್ನು ಕಸಿದುಕೊಂಡು ಮತ್ತೆ ಡೈರಿಯೊಳಕ್ಕೆ ತುರುಕಿ, " ನೀವು ಅನು ಪ್ರಭಾಕರನನ್ನು ಮದುವೆಯಾಗ್ದೇ ಇದ್ದಿದ್ದು ಒಳ್ಳೆದೇ ಆಯಿತು ಬಿಡಿ. ಇಲ್ಲಾಂದ್ರೇ ನಿಮಗೆ ನನ್ನಷ್ಟು ಒಳ್ಳೆ ಹೆಂಡತಿ ಸಿಗುತ್ತಿರಲಿಲ್ಲ ಅಲ್ವಾ?" ಎಂದಂದು ಕಣ್ಣು ಮಿಟುಕಿಸಿದಳು. ನಾನು ಗೋಣು ಆಡಿಸಿದೆ. "ರೀ... ಒಗ್ಗರಣೆ ಹಾಕಿದ ಅವಲಕ್ಕಿ ಮಾಡಿದರೆ ತಿಂತೀರಾ ?" ಎಂದು ಸಂಧಾನ ಬೆಳೆಸಿದಳು. ಅವಳಿಗೆ ಗೊತ್ತು, ನನಗೆ ಒಗ್ಗರಣೆ ಹಾಕಿದ ಅವಲಕ್ಕಿ ಅಂದರೆ ಬಹಳ ಪ್ರೀತಿಯೆಂದು. ಅವಳು ಯಾವಾಗ ಮಾಡ್ತೀನೇಂದ್ರೂ ನಾನು ಅದನ್ನು ನಿರಾಕರಿಸುತ್ತಿರಲಿಲ್ಲ.

ರಾತ್ರಿ ಊಟ ಮಾಡುತ್ತಿರುವಾಗ ಏನೋ ನೆನಪಾದಂತೆ "ಅಲ್ಲಾರೀ, ಅದು ಹೇಗೆ ನಿಮಗೆ ಅನು ಪ್ರಭಾಕರ ಹಿಡಿಸಿದ್ಳು ?ಈಗ ಅದ್ಯಾವುದೋ ಝೀ ಟೀವಿ ಸೀರಿಯಲ್ಲಲ್ಲಿ ಬರ್ತಾಳಲ್ಲಾ. ನನಗಂತೂ ಅವಳು ಸಿಕ್ಕಾಪಟ್ಟೆ ಓವರ್ ಆಕ್ಟಿಂಗ್ ಮಾಡ್ತಾಳೆ ಅನ್ನಿಸುತಪ್ಪಾ. ನೋಡೋಕೆ ಬೇರೆ ಗಂಡುಬೀರಿ ತರ ಕಾಣ್ತಾಳೆ" ಎಂದಳು. ನಾನು ತಣ್ಣಗೆ "ನಿನ್ನ ಗಣೇಶ್ ಮತ್ತಿನ್ಯೇನು? ಅವಂದೂ ಓವರ್ ಆಕ್ಟಿಂಗ್ ಅಲ್ವಾ ?ಎಂದೆ. ನನ್ನನ್ನೊಮ್ಮೆ ದುರುಗುಟ್ಟಿದವಳು ಮರುಕ್ಷಣದಲ್ಲೇ ನಾನು ನಗುತ್ತಿದ್ದದ್ದನ್ನು ನೋಡಿ, ತಾನೂ ನಕ್ಕಳು. ಪುಣ್ಕಕ್ಕೆ ನಾನು ಅವಳ ಎದುರು ಕುಳಿತಿದ್ದೆ. ಅವಳ ಪಕ್ಕದಲ್ಲೇನಾದ್ರೂ ಕುಳಿತಿದ್ದರೆ ಬೆನ್ನ ಮೇಲೆ ಒಂದು ಗುದ್ದು ಖಂಡಿತ ಬೀಳುತ್ತಿತ್ತು. "ರೀ..,ಕೇಳೋಕೆ ಮರೆತೋಯ್ತು. ಮುಂದಿನ ತಿಂಗಳು ಗಣೇಶ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಕೊತಾನಂತೆ.ನಾವೂ ಹೋಗೋಣ್ವಾ ?" ಎಂದು ಮುಖ ನೋಡಿದಳು. ನಾನು ನಿರುತ್ತರನಾದೆ.

Thursday, February 14, 2008

ಮೆಜೆಸ್ಟಿಕ್ ಮಾಲಕಂಸ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಮಾಲಕಂಸ್ ರಾಗ ಬಹಳ ಪ್ರಚಲಿತ ರಾಗ. ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದ ಈ ರಾಗ, ರಾತ್ರಿ ರಾಗಗಳಲ್ಲಿ ಅತ್ಯಂತ ಜನಪ್ರಿಯ ರಾಗ ಕೂಡ. ಇದೇ ಸ್ವರ ಪ್ರಸ್ಥಾನ ಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇದೂ ಕೂಡ ಆ ಪದ್ಧತಿಯಲ್ಲಿ ಅತ್ಯಂತ ಜನಪ್ರಿಯ ರಾಗ.

ಯೂಟ್ಯೂಬಲ್ಲಿ ಹುಡುಕುತ್ತಿರುವಾಗ ಮಾಲಕಂಸ್ ರಾಗದ ಮೇಲೆ ಆಧಾರವಾದ ಎರಡು ಒಳ್ಳೆಯ ಚಿತ್ರಗೀತೆಗಳ ಕ್ಲಿಪ್ ಗಳು ಸಿಕ್ಕವು. ನನಗೆ ಇವು ತುಂಬಾ ಹಿಡಿಸಿದವು. ಬಹುಷ ಎಲ್ಲರಿಗೂ ಇಷ್ಟವಾಗಬಹುದು.

ಮೊದಲನೆಯದು ತೆಲುಗಿನ ಪ್ರಸಿದ್ಧ ಚಿತ್ರ "ಶಂಕರಾಭರಣಂ" ಚಿತ್ರದ ಹಾಡು. ತ್ಯಾಗರಾಜರ ಪ್ರಸಿದ್ಧ ಕೀರ್ತನೆಯಾದ "ಸಾಮಜ ವರಗಮನಾ", ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹಿಂದೋಳ ರಾಗದ ಅತ್ಯುತ್ತಮ ನಿದರ್ಶನ ಈ ಹಾಡಿನಲ್ಲಿ ಇದೆ ಅಂದರೆ ತಪ್ಪಾಗಲಾರದು. ಎಷ್ಟು ಸಲ ಕೇಳಿದರೂ, ಮತ್ತೆ ಮತ್ತೆ ಕೇಳುವಂತೆ ಮಾಡುವ ಮೋಡಿ ಈ ಹಾಡಿನಲ್ಲಿದೆ.

ಎರಡನೆಯದು, ಹಿಂದಿ ಚಿತ್ರವೊಂದರ ಹಾಡು. ಹಾಡಿನಲ್ಲಿ ಇಬ್ಬರು ಕಥಕ ನೃತ್ಯಗಾತಿಯವರ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದು ಯಾವ ಚಿತ್ರ, ಮತ್ತು ಹಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೇ ಹಾಡಿನ ಸಾಹಿತ್ಯ ಮಾತ್ರ ಮನಸೆಳೆಯುತ್ತದೆ. ಮಾಲಕಂಸ್ ರಾಗದ ಪಕಡ್ ಮತ್ತು ರಾಗದ ಸೂಕ್ತ ಪರಿಚಯವನ್ನು ಈ ಹಾಡು ಅತ್ಯಂತ ಸಮರ್ಪಕವಾಗಿ ಮಾಡಿಕೊಡುತ್ತದೆ.ಹಾಡು ಕೇಳುತ್ತಿದಂತೆಯೇ, ಮಾಲಕಂಸ್ ರಾಗದ ಮಾಧುರ್ಯ ನಿಮ್ಮನ್ನು ಮಾಯಾಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ.

ನಿಮಗೆ ಹಾಡುಗಳು ಇಷ್ಟವಾದರೆ ನಾನು ಧನ್ಯ.

Saturday, February 9, 2008

ಉಡುಪಿ ಬಸ್ಸೂ....ನಿಂಬೂ ಪೆಪ್ಪರ್ಮಿಂಟೂ

ಸುಶ್ಮಾ ಮತ್ತು ಸುಶಾಂತರಿಗೆ ಟಾಟಾ ಮಾಡಿ, ಚಿಕ್ಕಪ್ಪನ ಸ್ಕೂಟರನ್ನೇರಿ ಪುಟ್ಟ, ಬೆಳಗಾವಿ ಬಸ್ ಸ್ಟಾಂಡ್ ಗೆ ಬಂದಾಗ ಇನ್ನೂ ಬೆಳಿಗ್ಗೆ ೫.೪೫. ಬೆಳಗ್ಗಿನ ಇಬ್ಬನಿಗೆ, ಕೆಂಪು ಸ್ವೆಟರ್ ಮೇಲೆಲ್ಲಾ ಆದ ಸಣ್ಣನೆಯ ನೀರಿನ ಪದರವನ್ನು ಒರೆಸಿಕೊಂಡಾಗ ಪುಟ್ಟನಿಗೆ ಚಡ್ಡಿ ಜೇಬಿನಲ್ಲಿ ಕರ್ಚೀಫ಼್ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಲ್ಲೇ ಹಾಕಿದ್ದ ಕುರ್ಚಿ ಸಾಲುಗಳ ಮೇಲೂ, ಪಕ್ಕದಲ್ಲೂ, ಮೂಟೆಗಳಂತೆ ಉರುಳಿಕೊಂಡು ಗಟ್ಟಿಯಾಗಿ ಹೊದ್ದು ಮಲಗಿದ್ದ ಜನಗಳ ನಡುವೆಯೇ ಹೇಗೋ ದಾರಿಮಾಡಿಕೊಂಡು ಬಸ್ ಸ್ಟಾಂಡ್ ನ ಮುಂಭಾಗಕ್ಕೆ ಪುಟ್ಟ ಚಿಕ್ಕಪ್ಪನ ಕೈ ಹಿಡಿದು ಬಂದಾಗ ೬ ಗಂಟೆಯ ಬೆಳಗಾಂ-ಉಡುಪಿ ಬಸ್ಸು ತಯಾರಾಗಿತ್ತು. ಅಚ್ಚ ಕೆಂಪು ಮೈಯುದ್ದಕ್ಕೂ ಕ.ರಾ.ಸಾ.ಸಂ ಎಂದು ಕಪ್ಪು ಬಣ್ಣದಲ್ಲಿ ಬಳಿದಿದ್ದ ಬಸ್ಸು, ಒಂಟಿ ಸಲಗದ ತರಹ ಮೂಲೆಯಲ್ಲಿ ರಾಜನ ತರಹ ನಿಂತಿತ್ತು.

ಪುಟ್ಟನನ್ನು ಬಸ್ ಹತ್ತಿಸಿ, ಬಾಗಿಲಲ್ಲೇ ನಿಂತಿದ್ದ ಕಂಡಕ್ಟರನ ಹತ್ತಿರ ಟಿಕೆಟ್ ಮಾಡಿಸಿ, ಪುಟ್ಟನ ಮೇಲೆ ಸ್ವಲ್ಪ ನಿಗಾ ಇಡುವಂತೆಯೂ, ಅವನನ್ನು ಮುಂಡಗೋಡಲ್ಲಿ ಸರಿಯಾಗಿ ಇಳಿಸಿ ಅಂತಲೂ ಹೇಳಿ, ಚಿಕ್ಕಪ್ಪ ತನ್ನ ಕೈಯಲ್ಲಿದ್ದ ಡೆಕ್ಕನ್ ಹೆರ್‍ಆಲ್ಡ್ ಪತ್ರಿಕೆಯನ್ನೂ, ದಾರಿಖರ್ಚಿಗೆಂದು ೫ ರುಪಾಯಿ ನೋಟೊಂದನ್ನು ಪುಟ್ಟನ ಕೈಯಲ್ಲಿ ತುರುಕಿ,ಯಾವುದೋ ಗಡಿಬಿಡಿಯಲ್ಲಿ ಇರುವಂತೆ ಹೋಗಿಬಿಟ್ಟರು. ಪುಟ್ಟ ಅದರಿಂದೇನು ವಿಚಲಿತನಾದಂತೆ ಕಾಣಲಿಲ್ಲ. ಅವನ ಮನಸ್ಸು ಆಗಲೇ ಚಿಕ್ಕಪ್ಪ ಕೊಟ್ಟ ೫ ರುಪಾಯಿಯನ್ನು ಹೇಗೆ ಖರ್ಚು ಮಾಡಬೇಕೆಂದು ಗಿರಕಿ ಹೊಡೆಯುತ್ತಲೇ ಇತ್ತು. ನೋಟನ್ನು ಕಿಸೆಗೆ ತುರುಕಿ,ಸಾಧ್ಯವಾದಷ್ಟು ಮುಂದೆ ಹೋಗಿ, ಒಳ್ಳೆ ಸೀಟೊಂದನ್ನು ಆಯ್ಕೆ ಮಾಡಿಕೊಂಡು ಪ್ರತಿಷ್ಟಾನಗೊಂಡುಬಿಟ್ಟ.

ಈಗೊಂದು ವಾರದ ಹಿಂದೆ, ಚಿಕ್ಕಪ್ಪ ಸಂಸಾರ ಸಮೇತ ಊರಿಗೆ ಬಂದವರು ವಾಪಸ್ ಹೋಗುವಾಗ ಪುಟ್ಟನನ್ನೂ ತಮ್ಮ ಜೊತೆ ಕರೆದುಕೊಂಡು ಬಂದಿದ್ದರು. ಚಿಕ್ಕಪ್ಪನ ಮಕ್ಕಳಾದ ಸುಶ್ಮಾ ಮತ್ತು ಸುಶಾಂತರ ಜೊತೆ ಆಡಲು ಸಿಗುತ್ತದೆ ಎಂಬ ಕಾರಣಕ್ಕೆ ಪುಟ್ಟನೂ ಕೂಡ ಅಮ್ಮನ ನಿರಾಕರಣೆಯ ಮಧ್ಯೆಯೂ, ಹಠ ಮಾಡಿ ಅವರ ಜೊತೆ ಹೊರಟು ಬಂದಿದ್ದ.ಇಡೀ ವಾರ ಹೇಗೆ ಕಳೆಯಿತೆಂದೇ ಪುಟ್ಟನಿಗೆ ಗೊತ್ತಾಗಿರಲಿಲ್ಲ. ಟೀವಿಯಲ್ಲಿ ಬರುತ್ತಿದ್ದ ನಾನಾ ಚಾನೆಲ್ಲಗಳು, ಚಿಕ್ಕಪ್ಪ ಕರೆದುಕೊಂಡು ಹೋಗಿದ್ದ ಥೀಮ್ ಪಾರ್ಕ್, ಸುಶಾಂತ್ ಮತ್ತು ಸುಶ್ಮಾರ ಜೊತೆ ಚಪ್ಪರಿಸಿಕೊಂಡು ತಿಂದಿದ್ದ ಪಿಸ್ತಾ ಐಸ್ ಕ್ರೀಮ್, ಪಕ್ಕದ ಮನೆಯ ಪುಟ್ಟ ಪಮೆರಿಯನ್ ನಾಯಿ, ಇವೆಲ್ಲಗಳ ಮಧ್ಯೆ ಪುಟ್ಟನಿಗೆ ಮನೆ, ಅಮ್ಮ ಮತ್ತು ಅಪ್ಪ ಮರೆತೇ ಹೋಗಿದ್ದರು. ನಿನ್ನೆ ಅಮ್ಮನ ಹತ್ತಿರ ಫೋನಿನಲ್ಲಿ ಮಾತಾಡಿದ ಬಳಿಕ ಚಿಕ್ಕಪ್ಪ, ಚಿಕ್ಕಮ್ಮನ ಹತ್ತಿರ ಪುಟ್ಟನನ್ನು ನಾಳೆ ಬೆಳಿಗ್ಗೆಯ ಬಸ್ಸಿಗೆ ಕಳುಹಿಸಿಕೊಡುವುದಾಗಿ ಹೇಳುತ್ತಿದ್ದಾಗ, ಪುಟ್ಟನಿಗೆ ಒಂಥರಾ ಬೇಸರವಾಗಿತ್ತು. ಇನ್ನೊಂದು ನಾಲ್ಕು ದಿನ ಅಲ್ಲೇ ಉಳಿಯಬೇಕೆಂದು ಮನಸ್ಸಿದ್ದರೂ, ವಿಧಿ ಇಲ್ಲದೆ ಪುಟ್ಟ ಭಾರದ ಹೆಜ್ಜೆಗಳನಿಟ್ಟು ಚಿಕ್ಕಪ್ಪನ ಜೊತೆ ಹೊರಟು ಬಂದಿದ್ದ.

ನಿಧಾನಕ್ಕೆ ಬಸ್ಸಿನಲ್ಲಿ ಜನ ತುಂಬಲಾರಂಬಿಸಿದರು. ಪುಟ್ಟ ಕುಳಿತ ಸೀಟ್ ನಿಂದ ಡ್ರೈವರ್ ಸೀಟ್ ಸ್ಪಷ್ಟವಾಗಿ ಕಾಣುತ್ತಿತ್ತು. ಪುಟ್ಟನಿಗೆ ಮುಂಚಿನಿಂದಲೂ ಬಸ್ ಡ್ರೈವರ್ ಅಂದರೆ ಅದೇನೋ ಖುಶಿ. ಇಡಿ ಬಸ್ಸು ತನ್ನದೆಂಬಂತೆ ಗತ್ತಿನಲ್ಲಿ ಕುಳಿತು, ಆಗಾಗ ಹಾರ್ನ್ ಮಾಡುತ್ತಾ, ದೊಡ್ಡನೆಯ ಸ್ಟೀರಿಂಗ್ ವೀಲ್ ತಿರುಗಿಸುತ್ತಾ ಬಸ್ಸು ಚಲಿಸುತ್ತಿದ್ದ ಡ್ರೈವರಂದಿರು ಪುಟ್ಟನಿಗೆ ಸಿನೆಮಾದಲ್ಲಿ ತೋರಿಸುವ ಹೀರೊಗಳಿಗಿಂತ ಗ್ರೇಟ್ ಅನ್ನಿಸಿಬಿಡುತ್ತಿತ್ತು. ಹಿಂದೊಮ್ಮೆ ಮನೆಗೆ ಬಂದಿದ್ದ ಯಾರೋ ನೆಂಟರು, ಪುಟ್ಟನ ಚುರುಕುತನವನ್ನು ನೋಡಿದ ಬಳಿಕ, ಅಪ್ಪನ ಹತ್ತಿರ ನಿಮ್ಮ ಮಗ ಮುಂದೆ ಡಾಕ್ಟರ್ರೋ, ಎಂಜಿನೀಯರ್ರೋ ಆಗುತ್ತಾನೆ ಎಂದಾಗ ಪುಟ್ಟ ತಟ್ಟನೆ "ಇಲ್ಲಾ, ನಾನು ದೊಡ್ಡವನಾದ ಮೇಲೆ ಬಸ್ ಡ್ರೈವರ್ ಆಗುತ್ತೇನೆ" ಎಂದು ಹೇಳಿ ಅಪ್ಪನ ಕೋಪಕ್ಕೆ ತುತ್ತಾಗಿದ್ದ. ನೆಂಟರು ಹೋದ ಮೇಲೆ ಅಪ್ಪ, ಪುಟ್ಟನಿಗೆ ಚೆನ್ನಾಗಿ ಬೈದ ಮೇಲೆ, ಬಹಿರಂಗವಾಗಿ ಡ್ರೈವರ್ ಆಗುತ್ತೇನೆ ಎಂದು ಹೇಳುವುದನ್ನು ಪುಟ್ಟ ನಿಲ್ಲಿಸಿದ್ದ. ಆದರೂ ಅವನ ಸುಪ್ತಮನಸ್ಸಿನಲ್ಲಿ, ದೊಡ್ಡವನಾದ ಮೇಲೆ ಆದರೆ ಬಸ್ಸಿನ ಅಥವ ಲಾರಿಯ ಡ್ರೈವರ್ರೇ ಆಗಬೇಕು ಎಂದಿತ್ತು.

ಬಸ್ಸಿನಲ್ಲಿ ಯಾವುದೇ ಖಾಲಿ ಸೀಟ್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಂಡಕ್ಟರ್ ಸೀಟಿ ಊದಿದ ತಕ್ಷಣವೇ, ಮಿಲಿಟರಿ ಮೀಸೆ ಹೊತ್ತಿದ್ದ ಡ್ರೈವರು ಬಸ್ಸನ್ನು ಚಾಲೂ ಮಾಡಿ ಪುಟ್ಟ ಬೆರಗುಗಣ್ಣಿಂದ ಗಮನಿಸುತ್ತಿದ್ದಂತೆಯೇ ಗೇರ್ ಬದಲಿಸಿ, ನಿಮಿಷಾರ್ಧದಲ್ಲಿ ಬಸ್ ಸ್ಟಾಂಡ್ ನ ಹೊರಬಿದ್ದಿದ್ದ. "ಹೊಟೇಲ್ ವಂದನಾ ಪ್ಯಾಲೇಸ್" ನ್ನು ದಾಟಿ ಬಸ್ಸು ಪಿ.ಬಿ ರೋಡಿಗೆ ಬಂದು ಸೇರಿದ್ದರೂ, ಪುಟ್ಟನ ಕಣ್ಣುಗಳು ಡ್ರೈವರನನ್ನು ಬಿಟ್ಟು ಕದಲಿರಲಿಲ್ಲ. ಕಾಲಿಗೆ ತೊಟ್ಟಿದ್ದ ಚಪ್ಪಲಿಯನ್ನು ಪಕ್ಕದಲ್ಲಿ ಬಿಚ್ಚಿಟ್ಟು, ಸೀಟಿನ ಮೇಲೆ ಸಣ್ಣ ಮೆತ್ತೆಯೊಂದನ್ನು ಹಾಸಿಕೊಂಡು,ಆಗಾಗ ಕಿಡಕಿಯಿಂದ ಆಚೀಚೆ ನೋಡುತ್ತಾ ನಿರಾಳವಾಗಿ ಬಸ್ಸು ಚಲಿಸುತ್ತಿದ್ದ ಡ್ರೈವರನ ಠೀವಿಯನ್ನು ನೋಡುತ್ತಿದ್ದ ಪುಟ್ಟನಿಗೆ ಅವನೊಬ್ಬ "ಎಕ್ಸ್ ಪರ್ಟ್ ಡ್ರೈವರ್" ಅನ್ನಿಸಿದ ಮೇಲೇ ಅವನ ಕಣ್ಣುಗಳು ಡ್ರೈವರ್ ಸೀಟ್ ನಿಂದ ಕದಲಿದ್ದು.

ಬಸ್ಸು ಒಂದೇ ವೇಗದಲ್ಲಿ ಹೆದ್ದಾರಿಯನ್ನು ನುಂಗುವಂತೆ ಓಡುತ್ತಿತ್ತು. ಮುಂದಿನ ಸೀಟಿನವರ್ಯಾರೋ ಕಿಡಕಿ ಬಾಗಿಲನ್ನು ಸ್ವಲ್ಪ ಸರಿಸಿದ್ದರಿಂದ,ತಣ್ಣನೆಯ ಗಾಳಿ ಪುಟ್ಟನೆಯ ಮುಖಕ್ಕೆ ರಾಚುತ್ತಿತ್ತು. ಚಿಕ್ಕಪ್ಪ ಕೊಟ್ಟು ಹೋಗಿದ್ದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯನ್ನು ತಿರುವಿ ಹಾಕಲು ಪುಟ್ಟ ಪ್ರಯತ್ನಿಸಿದ. ಈ ವರ್ಷ ತಾನೇ ಇಂಗ್ಲೀಷ್ ಕಲಿಯಲು ಶುರು ಮಾಡಿದ್ದ ಪುಟ್ಟನಿಗೆ ಅಷ್ಟೊಂದೇನೂ ಇಂಗ್ಲೀಷ್ ಶಬ್ದಗಳು ಗೊತ್ತಿರಲಿಲ್ಲ. ಆದರೂ ಮುಖ್ಯ ಪತ್ರಿಕೆಯ ಜೊತೆಯಿದ್ದ ಬಣ್ಣ ಬಣ್ಣದ ಸಾಪ್ತಾಹಿಕದಲ್ಲಿ, ಮಕ್ಕಳು ಬಿಡಿಸಿದ್ದ ಚಿತ್ರಗಳನ್ನು ನೋಡುತ್ತಾ ಕುಳಿತವನಿಗೆ, ಅದರ ಎರಡನೇ ಪುಟದಲ್ಲಿ, ಅಂಕೆಗಳಿಂದ ಗೆರೆ ಎಳೆದು ಪೂರ್ತಿಮಾಡಬೇಕಾದ ಚಿತ್ರವೊಂದು ಕಂಡಿತು. ಆದರೆ ಗೆರೆ ಎಳೆಯಲು ತನ್ನ ಹತ್ತಿರ ಪೆನ್ಸಿಲ್ ಅಥವ ಪೆನ್ ಇಲ್ಲದಿರುವುದು ಅನುಭವಕ್ಕೆ ಬಂದ ಕೂಡಲೇ, ಸುಮ್ಮನೇ ಮನಸ್ಸಿನಲ್ಲಿ ಆ ಚಿತ್ರದಲ್ಲಿ ಯಾವ ಪ್ರಾಣಿಯಿರಬಹುದೆಂದು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ಕುಳಿತ. ಇಂಗ್ಲೀಷ್ ಪತ್ರಿಕೆಯನ್ನು ಹಿಡಿದುಕೊಂಡು ಯೋಚಿಸುತ್ತಿದ್ದನ್ನು ಪುಟ್ಟನನ್ನು ನೋಡಿ, ಅವನ ಪಕ್ಕದಲ್ಲಿ ಕುಳಿತ ಮಧ್ಯವಯಸ್ಸಿನ ಹಿರಿಯರು ಕುತೂಹಲದಿಂದ ಪ್ರಶ್ನಿಸಲು ಶುರು ಮಾಡಿದರು. "ಊರು ಯಾವುದು ? ಇಲ್ಲಿ ಯಾಕೆ ಬಂದಿದ್ದೆ ? ಎಷ್ಟನೇಯ ತರಗತಿ ? ಇಂಗ್ಲೀಷ್ ಮೀಡಿಯಮ್ಮಾ ಅಥವಾ ಕನ್ನಡ ಮೀಡಿಯಮ್ಮಾ ? " ಅಂತೆಲ್ಲಾ ಕೇಳಲು ಶುರು ಮಾಡುತ್ತಿದ್ದಂತೆಯೇ ಪುಟ್ಟನಿಗೆ ಯಾಕೋ ಸ್ವಲ್ಪ ಕಿರಿಕಿರಿಯಾದಂತನಿಸಿ ಅವರ ಪ್ರಶ್ನೆಗಳಿಗೆಲ್ಲಾ ಸರಿಯಾಗಿ ಉತ್ತರಿಸಲಿಲ್ಲ. ಪುಟ್ಟನ ಅನ್ಯಮಸ್ಕತೆಯನ್ನು ಗಮನಿಸಿದ ಹಿರಿಯರು ಮುಂದೆ ಪ್ರಶ್ನೆ ಕೇಳಲು ಹೋಗಲಿಲ್ಲ. ಪುಟ್ಟನಿಗೆ ಮಾತ್ರ ಪತ್ರಿಕೆಯಲ್ಲಿದ್ದ ಚಿತ್ರ ಬಾತುಕೋಳಿಯದ್ದೋ ಅಥವ ನಾಯಿಮರಿಯದ್ದೋ ಎಂದು ಕೊನೆಗೂ ನಿರ್ಧರಿಸಲಾಗದೇ, ರೇಗಿ ಹೋಗಿ ಪತ್ರಿಕೆಯನ್ನು ಮುಚ್ಚಿಬಿಟ್ಟ.

ಬಸ್ಸು ಈಗ ಹಿರೇಬಾಗೇವಾಡಿಯ ದೊಡ್ಡ ಏರನ್ನು ಹತ್ತಿಳಿದು, ಸುಸ್ತಾದಂತೆ ನಿಧಾನವಾಗಿ ಮತ್ತೆ ಸಮತಟ್ಟಾದ ನೆಲದಲ್ಲಿ ಓಡಲು ಶುರು ಮಾಡಿತ್ತು. ಹೆದ್ದಾರಿಯನ್ನು ವರ್ಷಾನುಗಟ್ಟನೇ ಕಾಲದಿಂದ ಕಾಯುತ್ತಿವೆಯೆನೋ ಅನ್ನಿಸುವಂತೆ ದೈತ್ಯಾಕಾರದ ಹುಣಿಸೇಮರಗಳು ದಾರಿಯ ಎರಡು ಪಕ್ಕದಲ್ಲೂ ಸಾಲಾಗಿ ನಿಂತಿದ್ದವು. ನಿಧಾನಕ್ಕೆ ಮೇಲೇರುತ್ತಿದ್ದ ಸೂರ್ಯ, ಪುಟ್ಟನನ್ನು ನೋಡಲು ನಾಚಿಕೆಯಾಗುತ್ತಿದೆಯೋ ಎಂಬಂತೆ ಆಗಾಗ ಈ ಮರಗಳ ಮಧ್ಯದಿಂದ ಇಣುಕಿ, ಪುಟ್ಟನ ಮುಖದ ಮೇಲೆ ಲಾಸ್ಯವಾಡುತ್ತಿದ್ದ. ಬಸ್ ಡ್ರೈವರ್, ನಿಮಿಷಕೊಮ್ಮೆ ವೇಗ ನಿಯಂತ್ರಕರಂತೆ ಅಡ್ಡಡ್ಡವಾಗುತ್ತಿದ್ದ ಲಾರಿಗಳನ್ನು ಅತ್ಯುತ್ಸಾಹದಿಂದ ಹಿಂದಿಕ್ಕುವುದರಲ್ಲಿ ಮಗ್ನನಾಗಿದ್ದ. ಪ್ರತಿಯೊಂದು ಲಾರಿಯನ್ನು ಹಿಂದೆ ಹಾಕುತ್ತಿದಂತೆಯೂ, ಪುಟ್ಟನಿಗೆ ತಾನೇ ಆ ಲಾರಿಯನ್ನು ಹಿಂದೆ ಹಾಕಿದಂತೆ ಸಂಭ್ರಮವಾಗುತ್ತಿತ್ತು. ಪಕ್ಕದಲ್ಲಿ ಕುಳಿತಿದ್ದ ಹಿರಿಯರು, ಆಗಲೇ ಬಾಯಿ ಕಳೆದುಕೊಂಡು ನಿದ್ದೆ ಮಾಡಲು ಶುರು ಮಾಡಿಬಿಟ್ಟಿದ್ದರು. ಪುಟ್ಟ ಒಮ್ಮೆ ಬಸ್ಸಿನ ಸುತ್ತೆಲ್ಲಾ ಕಣ್ಣಾಡಿಸಿದ. ಎಲ್ಲರೂ ಕಣ್ಣುಮುಚ್ಚಿಕೊಂಡು ಸಣ್ಣ ಗೊರಕೆ ಹೊಡೆಯುತ್ತಲೋ, ಅಥವಾ ಅರೆನಿದ್ರೆಯಲ್ಲಿಯೋ ಇದ್ದಂತೆ ಕಂಡಿತು. ಒಂದು ಕ್ಷಣ, ಪುಟ್ಟನಿಗೆ ಇಡೀ ಬಸ್ಸಿನಲ್ಲಿ ತಾನೊಬ್ಬನೇ ಎಚ್ಚರವಾಗಿ ಇದ್ದಿರುವಂತೆ ಅನುಭವವಾಗಿ ವಿಲಕ್ಷಣ ಭಯವಾಯಿತು. ತಕ್ಷಣವೇ ಸಾವರಿಸಿಕೊಂಡು, ಡ್ರೈವರ್ ನನ್ನೇ ತದೇಕಚಿತ್ತದಿಂದ ನೋಡುತ್ತಾ ಕುಳಿತ.

ಸ್ವಲ್ಪ ಸಮಯದಲ್ಲೇ ಬಸ್ಸು ಕಿತ್ತೂರಿನ ಬಸ್ ಸ್ಟಾಂಡ್ ನಲ್ಲಿ "ಯು" ಟರ್ನ್ ಹೊಡೆದು, "ಉಪಹಾರ ದರ್ಶಿನಿ"ಯ ಮುಂದೆ ನಿಂತಿತು. ಕಂಡಕ್ಟರು "೨೦ ನಿಮಿಷ ಟೈಮ್ ಇದೆ ನೋಡ್ರಿ, ತಿಂಡಿ ಮಾಡೋರು ಮಾಡಿಬನ್ನಿ" ಎಂದು ದೊಡ್ಡ ದನಿಯಲ್ಲಿ ಕೂಗಿ ಡ್ರೈವರ್ ನ ಜೊತೆ ಇಳಿದುಹೋದ. ನಿದ್ರೆಯಲ್ಲಿದ್ದ ಪ್ರಯಾಣಿಕರೆಲ್ಲರೂ, ಆಕಳಿಸುತ್ತಾ, ಒಬ್ಬೊಬ್ಬರಾಗಿ ಇಳಿದುಹೋದರು. ಪುಟ್ಟನಿಗೆ ಯಾಕೋ ಕೆಳಕ್ಕಿಳಿವ ಧೈರ್ಯವಾಗಲಿಲ್ಲ. ಚಿಕ್ಕಮ್ಮ ಬೆಳಿಗ್ಗೆ ಬೆಳಿಗ್ಗೆ ಮಾಡಿಕೊಟ್ಟಿದ್ದ ೩ ಇಡ್ಲಿಗಳು ಅವನ ಹೊಟ್ಟೆಯಲ್ಲಿನ್ನೂ ಭದ್ರವಾಗಿ ಕುಳಿತಿದ್ದವು. ಹಾಗೇ ಬಸ್ ಸ್ಟಾಂಡ್ ಗೋಡೆಗಳ ಮೇಲೆಲ್ಲಾ ಕಲ್ಲಿನಲ್ಲಿ ಕೆತ್ತಿದ್ದ "ದ.ಸಂ.ಸ" ನ ಘೋಷಣೆಗಳನ್ನೂ, ಸವದತ್ತಿ ಎಲ್ಲಮ್ಮನ ಜಾತ್ರೆಯ ಪೋಸ್ಟರಗಳನ್ನೇ ನೋಡುತ್ತಾ ಕುಳಿತ. ನಿಧಾನವಾಗಿ ಪ್ರಯಾಣಿಕರೆಲ್ಲರೂ ಉಪಹಾರ ಮುಗಿಸಿಕೊಂಡು ಸ್ವಸ್ಥಾನ ಸೇರುತ್ತಿದಂತೆಯೇ, ಬಸ್ಸು ಕಿತ್ತೂರನ್ನು ಹಿಂದೆ ಹಾಕಿ ಓಡಲಾರಂಭಿಸಿತು. ಪುಟ್ಟ ಮತ್ತೊಮ್ಮೆ ಬಸ್ಸಿನ ತುಂಬೆಲ್ಲಾ ಕಣ್ಣಾಡಿಸಿದ. ಬಹಳಷ್ಟು ಪ್ರಯಾಣಿಕರು ಎಚ್ಚರದಿಂದಿದ್ದು, ಮೊದಲಿಗಿಂತ ಉತ್ಸಾಹದಲ್ಲಿದ್ದ ಹಾಗೆ ಕಂಡರು.

ವಿಶಾಲವಾದ ಬಯಲನ್ನು ಸೀಳಿಕೊಂಡು ನಿಂತಿದ್ದ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಪುಟ್ಟನಿಗೆ ಆಕರ್ಷಣೀಯವಾಗಿದ್ದೇನೂ ಕಾಣದೇ ಸ್ವಲ್ಪ ಬೇಜಾರಗತೊಡಗಿತು. ಹಾಗೆ ಕಿಟಕಿಯನ್ನು ಸ್ವಲ್ಪ ತೆರೆದು, ತಣ್ಣಗೆ ಬೀಸುತ್ತಿದ್ದ ತಂಗಾಳಿಗೆ ಮೈಯೊಡ್ಡಿ ಕಣ್ಣು ಮುಚ್ಚಿದವನಿಗೆ, ಸಣ್ಣ ಜೊಂಪು ಆವರಿಸಿಕೊಂಡಿದ್ದು ಗೊತ್ತಾಗಲೇ ಇಲ್ಲ. ಜನರ ಗಲಾಟೆ ಕೇಳಿ ತಟ್ಟನೇ ಎಚ್ಚರವಾದವನಿಗೆ ಮೊದಲು ಕಂಡಿದ್ದು, "ಧಾರವಾಡ ಬಸ್ ನಿಲ್ದಾಣ" ಎಂದು ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡು. ಬಸ್ಸಿನಲ್ಲಿ ಇದ್ದ ಬಹಳಷ್ಟು ಪ್ರಯಾಣಿಕರು ಆಗಲೇ ಇಳಿದುಹೋಗಿ, ಅವರ ಜಾಗಕ್ಕೆ ಬೇರೆಯವರು ಬಂದಿದ್ದರು. ಪುಟ್ಟನ ಪಕ್ಕಕ್ಕೆ ಈಗ ಯಾವುದೋ ಹೆಂಗಸು ತನ್ನ ಪುಟ್ಟ ಮಗುವಿನ ಜೊತೆ ಬಂದು ಕುಳಿತಿದ್ದಳು. ಅವಳ ಗಂಡ ಕಿಟಕಿ ಪಕ್ಕದಲ್ಲಿ ನಿಂತು ಅವಳಿಗೆ ಏನೇನೋ ಸೂಚನೆಗಳನ್ನು ನೀಡುತ್ತಿದ್ದ. ಪುಟ್ಟನಿಗೆ ಸ್ವಲ್ಪ ಬಾಯಾರಿಕೆ ಆದಂತೆ ಅನಿಸಿತು. ನಿಲ್ದಾಣದ ತುಂಬೆಲ್ಲಾ, ಅವನದೇ ವಯಸ್ಸಿನ ಹುಡುಗರು ಸಣ್ಣ ಬುಟ್ಟಿಗಳಲ್ಲಿ ಶೇಂಗಾ, ಕಡಲೇಕಾಳು,ಹೆಚ್ಚಿದ್ದ ಸವತೇಕಾಯಿ ಮುಂತಾದವುಗಳನ್ನು ಇಟ್ಟುಕೊಂಡು ಓಂದು ಬಸ್ಸಿನಿಂದ ಇನ್ನೊಂದು ಬಸ್ಸಿಗೆ ಅಲೆಯುತ್ತಿದ್ದರು. ಅವರನ್ನು ನೋಡಿ, ಪುಟ್ಟನಿಗೆ ಒಂದು ಸಲ ಅಯ್ಯೋ ಅನಿಸಿತು. ಹಾಗೇ, ಸರಿಯಾಗಿ ಓದದಿದ್ದಾಗ ಅಮ್ಮ "ಓದದೇ ಹೋದರೆ, ಮುಂದೆ ಕೆಲಸ ಸಿಗದೇ, ನೀನೂ ಅವರ ತರಾನೇ ಬಸ್ಸಿಂದ ಬಸ್ಸಿಗೆ ಅಲೆಯಬೇಕಾಗುತ್ತೆ ನೋಡು" ಎಂದು ಹೆದರಿಸಿದ್ದು ನೆನಪಾಯ್ತು.

ಇಷ್ಟರಲ್ಲಿ ಪುಟ್ಟನಿಗೆ ಜೇಬಿನಲ್ಲಿದ್ದ ೫ ರುಪಾಯಿಯ ನೋಟು ಜ್ನಾಪಕಕ್ಕೆ ಬಂತು.ಅದನ್ನು ಹೇಗೆ ಬಳಸಬೇಕೆಂದು ಅವನಿನ್ನೂ ನಿರ್ಧರಿಸಿರಲಿಲ್ಲ. ಬಸ್ಸಿನ ಪಕ್ಕದಲ್ಲೇ ಇದ್ದ ಅಂಗಡಿಯೊಂದರಲ್ಲಿ, ಉದ್ದ ಬಾಟಲಿಗಳಲ್ಲಿ ಶೇಖರಿಸಿಟ್ಟಿದ್ದ ಬಣ್ಣ ಬಣ್ಣದ ಶರಬತ್ತನ್ನು ಕುಡಿಯಬೇಕೆಂದು ಅವನಿಗೆ ತೀವ್ರವಾಗಿ ಅನಿಸಿದರೂ, ಯಾಕೋ ಕೆಳಗಿಳಿದು ಹೋಗಿ ಬರಲು ಹಿಂಜರಿಕೆಯಾಯಿತು.ಬಸ್ಸಿನೊಳಗೇ ಹತ್ತಿ ಮಾರುತ್ತಿದ್ದ ಹುಡುಗನ ಬಳಿಯಲ್ಲಿ, ೮-೧೦ ನಿಂಬೂ ಪೆಪ್ಪರ್ಮಿಂಟ್ ಗಳ ಪ್ಯಾಕೆಟೊಂದನ್ನು ಕೊಂಡು, ಅವನು ವಾಪಸ್ ಮಾಡಿದ ೨ ರುಪಾಯಿ ನೋಟು ಮತ್ತೆ ೧ ರುಪಾಯಿಯ ನಾಣ್ಯವನ್ನು ಭದ್ರವಾಗಿ ಜೇಬಿಗೆ ಸೇರಿಸಿದ. ತಿಳಿ ಕೆಂಪು ಬಣ್ಣದ ಪೆಪ್ಪರ್ ಮಿಂಟ್ ಗಳು ನಿಧಾನವಾಗಿ ಪುಟ್ಟನ ಬಾಯಲ್ಲಿ ಒಂದೊಂದಾಗಿ ಕರಗಿ, ಅವನ ನಾಲಿಗೆಯನ್ನೆಲ್ಲಾ ರಂಗೇರಿಸುತ್ತಿದ್ದಂತೆಯೇ ಬಸ್ಸು ನಿಧಾನವಾಗಿ ಮುಂದೆ ಚಲಿಸಿತು.

ಸ್ವಲ್ಪ ಸಮಯದಲ್ಲೇ, ಬಸ್ಸು ಮುಖ್ಯ ರಸ್ತೆಯನ್ನು ಬಿಟ್ಟು ಬಲಕ್ಕೆ ತಿರುಗಿ, ಹೆಚ್ಚು ಜನವಸತಿಯಿಲ್ಲದಿದ್ದ ಜಾಗದಲ್ಲಿ ಮುಂದುವರಿಯತೊಡಗಿತು. ಗುಡ್ಡಗಳನೆಲ್ಲಾ ಕಡಿದು ಮಾಡಿದ್ದ ಅಗಲವಾದ ರಸ್ತೆಯಲ್ಲಿ ಬಸ್ಸು ಈಗ ಇನ್ನೂ ವೇಗವಾಗಿ ಸಾಗುತ್ತಿತ್ತು. ಡ್ರೈವರ್ ಈಗ ಬರೀ ಒಂದೇ ಕೈಯನ್ನು ಸ್ಟೀರಿಂಗ್ ಮೇಲೆ ಇಟ್ಟು, ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೊತೆ ಮಾತಾಡಲು ಶುರು ಮಾಡಿದ್ದ. ಪಕ್ಕದಲ್ಲಿ ಕುಳಿತಿದ್ದ ಮಗು, ಪುಟ್ಟನನ್ನು ನೋಡಿ ಸಣ್ಣಗೆ ನಗುತ್ತಿತ್ತು.ಅದರ ಜೊತೆ ಆಟವಾಡುತ್ತಾ ಪುಟ್ಟನಿಗೆ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ.

ಬಸ್ಸು ಈಗ ಮತ್ತೆ ಪಟ್ಟಣದ ಒಳಗೆ ನುಗ್ಗಿ, ವಿಶಾಲವಾದ ಬಸ್ ಸ್ಟಾಂಡ್ ಒಳಕ್ಕೆ ಪ್ರವೇಶಿಸಿತು. ಬೆಳಗಾವಿಗೆ ಹೋಗುವಾಗ ಪುಟ್ಟ, ಹುಬ್ಬಳ್ಳಿಯ ಈ ಹೊಸ ಬಸ್ ಸ್ಟಾಂಡನ್ನು ಚಿಕ್ಕಪ್ಪನ ಜೊತೆ ಒಂದು ರೌಂಡ್ ಹಾಕಿದ್ದ. ಧೂಳೆಬ್ಬಿಸುತ್ತಾ ಬಸ್ಸು ಒಳನುಗ್ಗುತ್ತಿದ್ದಂತೆಯೇ, ನೂರಾರು ಜನರು ಬಸ್ಸಿನ ಹಿಂದೆಯೇ ಓಡಿಬಂದರು. ನಾ ಮುಂದೆ, ತಾ ಮುಂದೆ ಎಂದು ನುಗ್ಗಿ, ಸೀಟ್ ಹಿಡಿಯಲು ಜನರು ಹರಸಾಹಸ ಪಡುತ್ತಿದ್ದರು. ಕೆಳಕ್ಕಿಳಿಯುತ್ತಿದ್ದ ಪ್ರಯಾಣಿಕರಿಗೂ, ಮೇಲೇರಿ ಬರಲು ಹವಣಿಸುತ್ತಿದ್ದ ಪ್ರಯಾಣಿಕರಿಗೂ ಮಧ್ಯ ಸಣ್ಣ ಘರ್ಷಣೆ ಉಂಟಾಗಿದ್ದು, ಅವರು ಮಾಡುತ್ತಿದ್ದ ಗಲಾಟೆಯಿಂದಲೇ ಗೊತ್ತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲೇ ಬಸ್ಸು ಸಂಪೂರ್ಣವಾಗಿ ತುಂಬಿಹೋಯಿತು. ಮೇಲಿಂದ ಒಂದು ಸೂಜಿ ಬಿದ್ದರೂ, ಅದು ನೆಲಕ್ಕೆ ಬೀಳದಷ್ಟು ಒತ್ತೊತ್ತಾಗಿ ಜನರು ನಿಂತುಕೊಂಡಿದ್ದರು. ಪುಟ್ಟನಿಗೆ ಯಾಕೋ ಉಸಿರಾಡಲೂ ಕಷ್ಟವಾದಂತೆ ಅನಿಸಿ, ಬಸ್ಸು ಮುಂದೆ ಹೋದರೇ ಸಾಕು ಅನ್ನುವಂತ ಪರಿಸ್ಥಿತಿ ಬಂತು.

ಒಂದು ರೌಂಡ್ ಟಿಕೆಟ್ ಮಾಡಿ ಹೋದ ಮೇಲೆ ಅರ್ಧ ತಾಸಾದರೂ, ಕಂಡಕ್ಟರ್ ಮತ್ತು ಡ್ರೈವರ್ ರ ಪತ್ತೆಯೇ ಇರಲಿಲ್ಲ. ಬಸ್ಸು ಈಗ ಕಿಕ್ಕಿರಿದು ತುಂಬಿತ್ತು. ಕಿಟಕಿ ತೆಗೆದಿದ್ದರೂ, ಅದರಿಂದ ಬರುತ್ತಿದ್ದ ತಂಗಾಳಿಯೆಲ್ಲವೂ, ಅರೆಕ್ಷಣದಲ್ಲಿ ಬಿಸಿಗಾಳಿಯಾಗಿ ಬಿಡುತ್ತಿತ್ತು. ಬಸ್ಸಿನೊಳಗಿದ್ದ ಪ್ರಯಾಣಿಕರ ಸಹನೆ ಮೀರುತ್ತಿದ್ದಿದ್ದು ಅವರ ಗೊಣಗಾಟಗಳಿಂದ ಪುಟ್ಟನಿಗೆ ಅನುಭವಕ್ಕೆ ಬಂತು. ತಾಳ್ಮೆಗೆಟ್ಟ ಒಂದಿಬ್ಬರು ಪ್ರಯಾಣಿಕರು ಕಂಟ್ರೋಲ್ ರೂಮ್ ಗೆ ಹೋಗಿ ಗಲಾಟೆ ಮಾಡಿ, ಅಂತೂ ಕಂಡಕ್ಟರ್ ಮತ್ತು ಡ್ರೈವರ್ ನನ್ನು ಕರೆದುಕೊಂಡು ಬಂದರು. ಬಸ್ಸು ನಿಧಾನಕ್ಕೆ ಮುಂದೆ ಹೊರಡುತ್ತಿದ್ದಂತೆಯೇ, ಎಲ್ಲಾ ಪ್ರಯಾಣಿಕರಂತೆ ಪುಟ್ಟನೂ ಸಮಾಧಾನದ ನಿಟ್ಟುಸಿರು ಬಿಟ್ಟ.

ಚೆನ್ನಮ್ಮನ ಸರ್ಕಲ್ ಹತ್ತಿರ ಬರುತ್ತಿದ್ದಂತೆಯೇ ಇನ್ನೊಂದು ನಾಲ್ಕಾರು ಜನರು ಬಸ್ಸನ್ನು ನಿಲ್ಲಿಸಿ ಹತ್ತಿಕೊಂಡರು. ಪುಟ್ಟನಿಗೆ ತಾನು ಯಾವುದೋ ಸಂತೆಯಲ್ಲಿ ಸಿಕ್ಕಿಕೊಂಡ ಹಾಗೆ ಅನುಭವವಾಯಿತು. ಸ್ವಲ್ಪ ಸಮಯದಲ್ಲೇ, ಹಿಂದಿನ ಸೀಟಿನಲ್ಲಿ ಕುಳಿತವರಿಬ್ಬರಿಗೂ, ಕಂಡಕ್ಟರ್ ನಿಗೂ ಲಗೇಜ್ ವಿಷಯದಲ್ಲಿ ಜಗಳ ಶುರುವಾಯಿತು. ಎರಡು ಕಡೆಯವರೂ ಸುಮಾರು ಹೊತ್ತು ತಾರಕ ಸ್ವರದಲ್ಲಿ ಕೂಗಾಡಿ, ಪುಟ್ಟನ ನೆಮ್ಮದಿ ಕೆಡಿಸಿದರು. ಗಾಯದ ಮೇಲೆ ಬರೆಯಿಟ್ಟಂತೆ, ಚಿತ್ರ ವಿಚಿತ್ರ ವೇಷ ಧರಿಸಿ ಪಕ್ಕದಲ್ಲಿ ಕುಳಿತಿದ್ದ ಲಂಬಾಣಿ ಹೆಂಗಸು, ತನ್ನ ಜೊತೆ ತನ್ನಿಬ್ಬರು ಮಕ್ಕಳನ್ನೂ ಅದೇ ಸೀಟಿನಲ್ಲಿ ಕುಳಿಸಿಕೊಂಡಳು. ಪುಟ್ಟನಿಗೆ ಈಗ ಮಿಸುಕಾಡಲೂ ಆಗದಷ್ಟು ಜಾಗದ ಕೊರತೆಯಾಯಿತು.ಬಸ್ಸು ಆದಷ್ಟು ಬೇಗ ಮುಂಡಗೋಡು ಸೇರಲೆಂದು ಅವನು ಮನಸ್ಸು ತವಕಿಸಿತು.

ನುಣುಪಾದ ಹೆದ್ದಾರಿಯನ್ನು ಬಿಟ್ಟು, ಬಸ್ಸು ತಡಸ ಕ್ರಾಸಲ್ಲಿ ಬಲಕ್ಕೆ ತಿರುಗಿ ಕಚ್ಚಾ ರಸ್ತೆಯನ್ನು ಪ್ರವೇಶಿಸಿದ್ದು ಬಸ್ಸು ಮಾಡುತ್ತಿದ್ದ ಕುಲುಕಾಟಗಳಿಂದಲೇ ಗೊತ್ತಾಗುತ್ತಿತ್ತು. ಬರಗಾಲದಿಂದ ಈಗ ಚೇತರಿಸಿಕೊಂಡಿದೆಯೆನೋ ಅನ್ನುವಂತೆ ನೆಲವೆಲ್ಲಾ ಬರೀ ಕುರುಚಲು ಗಿಡಗಳಿಂದಲೇ ತುಂಬಿ ಹೋಗಿತ್ತು. ಇನ್ನೇನು ನೆತ್ತಿಯ ಮೇಲೆ ಬಂದಿದ್ದ ಸೂರ್ಯ ಉತ್ಸಾಹದಿಂದ ಬೆಳಗುತ್ತಿದ್ದ. ಪ್ರಖರವಾದ ಬಿಸಿಲು ಪುಟ್ಟನ ಮುಖವನ್ನು ಸುಡುತ್ತಾ ಇತ್ತು. ಪುಟ್ಟನಿಗೆ ತಾನು ಬಸ್ಸಿನ ಆಚೆ ಬದಿಗೆ ಕುಳಿತಿಕೊಂಡಿರಬೇಕಿತ್ತು ಅಂತ ಬಲವಾಗಿ ಅನ್ನಿಸಲು ಶುರುವಾಯಿತು. ಕೈಕಾಲುಗಳನ್ನು ಅಲ್ಲಾಡಿಸಲೂ ಆಗದೇ, ಬಿಸಿಲಿಗೆ ಬಾಡುತ್ತಾ, ನಿರುತ್ಸಾಹದಲ್ಲಿ ಶೂನ್ಯವನ್ನೇ ದಿಟ್ಟಿಸುತ್ತಾ ಕುಳಿತ.

ಬೆಳಿಗ್ಗೆ ತಿಂದಿದ್ದ ಇಡ್ಲಿಗಳು ಈಗ ಕರಗಿ ಪುಟ್ಟನ ಹೊಟ್ಟೆ ಚುರುಗುಡಲು ಶುರುವಾಗಿತ್ತು. ಹಿಂದೆ ತೆಗೆದುಕೊಂಡಿದ್ದ ನಿಂಬೂ ಪೆಪ್ಪರ್ಮಿಂಟ್ ಗಳಲ್ಲಿ ಒಂದಷ್ಟಾದರನ್ನಾದರೂ ಉಳಿಸಿಕೊಳ್ಳಬೇಕಾಗಿತ್ತು ಅಂತ ಪುಟ್ಟನಿಗೆ ಅನಿಸಿತೊಡಗಿತು. ಬಸ್ಸು ಸಧ್ಯದಲ್ಲೇನಾದರೂ ನಿಲ್ಲುತ್ತದೆಯೋ ಅಂದರೆ ಹಲವಾರು ಮೈಲಿಗಳಿಂದ ಜನವಸತಿಯ ಕುರುಹನ್ನೇ ಕಂಡಿರಲಿಲ್ಲ ಅವನು. ಮುಂದೆ ಕುಳಿತಿದ್ದ ಹಲವರ ಬಳಿ ಪುಟ್ಟ, ಮುಂಡಗೋಡು ತಲುಪಲು ಇನ್ನೂ ಎಷ್ಟು ಹೊತ್ತು ಬೇಕಾಗಬಹುದೆಂದು ಕೇಳಿ ತಿಳಿದುಕೊಳ್ಳಲು ಪ್ರಯತ್ನಿಸಿದ. ಯಾರಿಗೂ ಅದರ ಅಂದಾಜಿದ್ದಂತೆ ತೋರಲಿಲ್ಲ. ಒಬ್ಬರು ಇನ್ನೂ ಅರ್ಧ ತಾಸಿದೆ ಅಂದರೆ ಇನ್ನೊಬ್ಬರು ಒಂದೂವರೆ ತಾಸಿದೆ ಎಂದು ಹೇಳಿ ಪುಟ್ಟನ ನಿರುತ್ಸಾಹಕ್ಕೆ ತುಪ್ಪ ಸುರಿದರು. ಇನ್ನೊಮ್ಮೆ ಹೀಗೆ ಒಬ್ಬನೇ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಪುಟ್ಟ ನಿರ್ಧರಿಸಿದ.

ಸುಮಾರು ಮುಕ್ಕಾಲು ಗಂಟೆಗಳ ನಂತರ ಬಸ್ಸು ಅಂತೂ ಮುಂಡಗೋಡು ತಲುಪಿತು. ಈ ನರಕದಿಂದ ಮುಕ್ತಿ ಸಿಕ್ಕಿದರೆ ಸಾಕು ಎಂದನ್ನಿಸಿದ್ದ ಪುಟ್ಟನಿಗೆ, ಬಸ್ಸು ಪಟ್ಟಣದ ಸರಹದ್ದನ್ನು ತಲುಪುತ್ತಿದ್ದಂತೆಯೇ ನಿರಾಳವಾಯಿತು. ಲವಲವಿಕೆಯಿಂದ ಕಿಟಕಿ ಆಚೆ ಕಣ್ಣಾಡಿಸಲು ಶುರು ಮಾಡಿದ. ಪುಟ್ಟನ ಮನೆ ಬಸ್ ಸ್ಟಾಂಡಿಂದ ಕಾಲ್ನಡಿಗೆ ದೂರದಲ್ಲೇ ಇತ್ತು. ದಾರಿಯಲ್ಲೇ ಇದ್ದ ಪೈ ಬೇಕರಿಯಿಂದ, ತನ್ನ ಬಳಿ ಇದ್ದ ಮೂರು ರುಪಾಯಿಯಲ್ಲಿ ಎನೇನು ತೆಗೆದುಕೊಳ್ಳಬಹುದು ಎಂಬ ಆಲೋಚನೆಯಲ್ಲೇ ಮುಳುಗಿದ್ದವನಿಗೆ, ಬಸ್ಸು ಸ್ಟಾಂಡ್ ಗೆ ಬಂದು ನಿಂತರೂ, ಕಂಡಕ್ಟರ್ ಎಚ್ಚರಿಸಿದ ಮೇಲೆಯೇ ಅದರ ಅನುಭವವಾಗಿದ್ದು.

Tuesday, February 5, 2008

ನಾಗರ ಹಾವೇ, ಹಾವೊಳು ಹೂವೇ...


ಮಲೆನಾಡಿನಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ಹಾವಿನ ಜೊತೆ ಒಡನಾಟ ಸರ್ವೇಸಾಮಾನ್ಯವಾದರೂ, ನನ್ನ ವಿಷಯದಲ್ಲಿ ಅದು ಯಾಕೋ ಸ್ವಲ್ಪ ಜಾಸ್ತಿಯೇ ಆಗಿದೆ ಅಂತ ನನಗೆ ಅನ್ನಿಸಲು ಬಹಳಷ್ಟು ಕಾರಣಗಳಿವೆ.

ಮುಖ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿದರೂ, ನಮ್ಮ ಮನೆಯ ಸುತ್ತ ಮುತ್ತ ಬೇಕಾದಷ್ಟು ಗಿಡಮರಗಳಿದ್ದು, ಹಾವು,ಚೇಳು, ಗೆದ್ದಲು, ಇರುವೆ, ಓತಿಕ್ಯಾತ ಮುಂತಾದುವಗಳ ಹಾವಳಿ ಅವ್ಯಾಹತವಾಗಿ ನಡೆದೇ ಇತ್ತು. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎಂಬ ಅಕ್ಕನ ವಚನದಂತೆ ನಾವು ಅವುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೇ, ನೆಮ್ಮದಿಯಾಗಿದ್ದೆವು. ಆದರೆ ಅಮ್ಮನಿಗೆ ಹಾವು ಕಂಡರೆ ಮಾತ್ರಾ, ಎಲ್ಲಿಲ್ಲದ ದಿಗಿಲು. ಹಾವಿನ ಹೆಸರೆತ್ತಿದರೇ ಮೂರು ಮಾರು ದೂರ ಓಡುತ್ತಿದ್ದ ಅವಳು, ಟೀವಿಯಲ್ಲಿ ಹಾವನ್ನು ತೋರಿಸಿದರೂ ನೋಡಲು ಹೆದರುತ್ತಿದ್ದರು.

ಆ ಕಾಲದಲ್ಲಿ ನಮ್ಮ ಮನೆ ಅಟ್ಟಕ್ಕೆ ಅಡಿಕೆಯ ದಬ್ಬೆಯೇ ಆಧಾರ. ಆಗೆಲ್ಲಾ ಮನೆಯೆ ಮಾಡಿಗೆ ಇನ್ನೇನು ತಾಗಿಕೊಂಡೇ ಇದ್ದ ಬಿದಿರು ಮೆಳೆಗಳ ಸಹಾಯದಿಂದ, ಹಾವುಗಳು ಅಟ್ಟದ ಮೇಲಿರಬಹುದಾದ ಇಲಿಗಳ ಬೇಟೆಗೆ ಮನೆಯೊಳಗೆ ಬರುತ್ತಿದ್ದವು. ಕೆಲವೊಮ್ಮೆ ದಾರಿತಪ್ಪಿ ಅಟ್ಟದಿಂದ ಕೆಳಗಿಳಿದು, ಮನೆಯ ಸಿಮೆಂಟ್ ನೆಲದಲ್ಲಿ ತೆವಳಲಾಗದೇ, ವಿಲಿ ವಿಲಿ ಒದ್ದಾಡುತ್ತಿದ್ದವು. ಅವುಗಳನ್ನು ಹಾಗೆ ಹಿಡಿದು ಹೊರಗೆ ಬಿಡೋಣ ಅಂದ್ರೆ, ಎಲ್ಲಾದ್ರು ಕಚ್ಚಿ ಬಿಟ್ರೆ ಅಂತ ಭಯ. ಅಮ್ಮ ಬೇರೆ, ಬೇಗ ಕೊಂದು ಹಾಕಲು ತಾಕೀತು ಮಾಡುತ್ತಿದ್ದಳು. ಸಿಮೆಂಟ್ ನೆಲ ನುಣುಪಾಗಿರುವುದರಿಂದ ಹಾವುಗಳಿಗೆ ಓಡಿ ತಪ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಉಪಾಯವಿಲ್ಲದೇ, ಅವುಗಳನ್ನು ಕೊಲ್ಲಬೇಕಾಗುತ್ತಿತ್ತು. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಎಷ್ಟೋ ಮರಿಹಾವುಗಳನ್ನು ನಾನೂ ಹೊಡೆದಿದ್ದಿದೆ.ಅವುಗಳಲ್ಲಿ ಬಹುಪಾಲು ಹಾವುಗಳು, ನಿರುಪದ್ರವಿಯಾದ ಕೇರೆ ಹಾವುಗಳು.

ಆದರೆ ಸರಾಸರಿಯಾಗಿ ವರ್ಷಕ್ಕೊಂದು ಸಲ, ನಾವು "ಕುದುರೆಬಳ್ಳ" ಅಂತ ಕರೆಯೋ ವಿಷದ ಹಾವುಗಳು ಮನೆಗೆ ಭೇಟಿಕೊಡುತ್ತಿದ್ದವು. ಕಪ್ಪಗೆ ಮೈತುಂಬ ಬಳೆಗಳಿದ್ದ ಈ ಹಾವುಗಳು ನೋಡಲು ಮಾತ್ರ ಭಯಂಕರವಾಗಿರುತ್ತಿದ್ದವು.ಆವಾಗೆಲ್ಲ ನಾವು ಬಾಗಿಲ ಹಿಂದೆ ನಿಂತುಕೊಂಡು ಅಪ್ಪ ಅದನ್ನು ಹೊಡಿಯೋದನ್ನು ನೋಡುತ್ತಿದ್ದವೇ ಹೊರತು ಹತ್ತಿರದೆಲ್ಲೆಲ್ಲೂ ಸುಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ, ಒಂದು ರವಿವಾರ ರಾತ್ರಿ ಸುಮಾರು ೯.೩೦ ರ ಹಾಗೆ, ನಾನು ದೂರದರ್ಶನ ದಲ್ಲಿ ಬರುತ್ತಿದ್ದ "ಸುರಭಿ" ನೋಡ್ತಾ ಇದ್ದೆ. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಮೇಲೆ ಅಟ್ಟದಲ್ಲಿ ಇಲಿಗಳು ಜೋರಾಗಿ ಸದ್ದು ಮಾಡುತ್ತಾ ಓಡಾಡುವುದು ಕೇಳಿಸಿತು. ಜೋರಾಗಿ ಒಂದು ಸಲ "ಶ್" ಅಂದು ಕೂಗಿ, ನಾನು ಟೀವಿ ನೋಡುವುದನ್ನು ಮುಂದುವರಿಸಿದೆ. ಮರುಕ್ಷಣದಲ್ಲೇ ಅಟ್ಟದಿಂದ ಎರಡು ಕಪ್ಪು ಹಾವುಗಳು, ಕುರ್ಚಿಯ ಮೇಲೆ ಕುಳಿತು ನೋಡುತ್ತಿದ್ದ ನನ್ನ ಕಾಲ ಮೇಲೆಯೆ ಬಿದ್ದವು. ನಾನು ಹೌಹಾರಿ, ಸಟ್ಟನೆ ಕಾಲನ್ನು ಮೇಲೆಳೆದುಕೊಂಡು, ಜೋರಾಗಿ ಕೂಗಿದೆ. ಮಲಗಿದ್ದ ಅಪ್ಪ ಎದ್ದು ಬಂದು, ಅವೆರಡೂ ಹಾವುಗಳಿಗೆ ಗತಿ ಕಾಣಿಸಿದರು. ಮಾರನೆಯ ದಿನ ಅಟ್ಟದ ಮೇಲೆ ಸರಿಯಾಗಿ ಹುಡುಕಿದಾಗ, ಒಂದೆಲ್ಲ, ಎರಡಲ್ಲ, ಅನಾಮತ್ತಾಗಿ ೫ ಮರಿ ಕುದುರೆಬಳ್ಳ ಹಾವುಗಳು, ಅವುಗಳ ತಾಯಿಯ ಜೊತೆ ಸಿಕ್ಕಿಬಿದ್ದವು.

ಇದಾದ ಸ್ವಲ್ಪ ದಿನಕ್ಕೇ, ಅಪ್ಪ ಒಂದು ನಿರ್ಧಾರಕ್ಕೆ ಬಂದು, ಹೇಗೋ ಒಂದಷ್ಟು ಹಣ ಹೊಂದಿಸಿ ಅಟ್ಟಕ್ಕೆ ಆರ್.ಸಿ.ಸಿ ಜಂತಿಗಳನ್ನು ಕೂಡಿಸಿದರು. ಅಲ್ಲದೇ, ದೈತ್ಯಾಕಾರವಾಗಿ ಬೆಳೆದುಕೊಂಡಿದ್ದ ಬಿದಿರಿನ ಮೆಳೆಗಳನ್ನು ಕಡಿದು ಹಾಕಿದರು. ಅವತ್ತಿನಿಂದ ಮನೆಯೊಳಗೆ ಹಾವು ಬರುವುದು ನಿಂತುಹೋಯಿತು. ಆಗಾಗ ಅಮ್ಮನಿಗೆ ಮಾತ್ರ ಒರಳುಕಲ್ಲಿನ ಹತ್ತಿರವೋ, ಅಡುಗೆಮನೆಯ ಮಾಡಿನ ತುದಿಯಲ್ಲಿಯೋ ಕಾಣಿಸಿಕೊಳ್ಳುತ್ತಿದ್ದವು. ನಮಗೆ ಯಾರಿಗೂ ಅಷ್ಟು ಸಲೀಸಾಗಿ ಕಾಣಿಸಿಕೊಳ್ಳದೇ ಇದ್ದ ಹಾವುಗಳು, ಅಮ್ಮನ ಕಣ್ಣಿಗೆ ಮಾತ್ರ ಬೀಳುವುದು ನಮಗೆ ತುಂಬಾ ಸೋಜಿಗವನ್ನು ತರುತ್ತಿತ್ತು. ಅಮ್ಮ ತೋರಿಸಿದ ನಂತರ ನಾವು ಅವುಗಳನ್ನು ಹೆದರಿಸಿ ಓಡಿಸುತ್ತಿದ್ದೆವು. ಎಷ್ಟೋ ಸಲ ದೈತ್ಯಾಕಾರದ ಕೇರೆ ಹಾವುಗಳು, ಮಾಡಿನ ತುದಿಯಿಂದ ಧೊಪ್ಪನೇ ಹಾರಿ, ಓಡಿಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿತ್ತು. ಒಂದು ಮುದಿ ನಾಗರಹಾವೊಂದು ಮಾತ್ರ, ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಿತ್ತೇ ಹೊರತು ಇನ್ನೆಲ್ಲೂ ಸುಳಿಯುತ್ತಿರಲಿಲ್ಲ. ನಾನು, ಅಕ್ಕ ಅದ್ಯಾವುದೋ ನಿಧಿಯನ್ನು ಕಾಯುತ್ತಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದವು. ಮನೆಯ ಸುತ್ತಲೂ ಇದ್ದ ಚದರಂಗಿ ಗಿಡಗಳ ಹಣ್ಣನ್ನು ಕೊಯ್ಯಲು ಹೋಗುತ್ತಿದ್ದ ನಮ್ಮನ್ನು ಅಮ್ಮ ಆ ಹಾವಿನ ಬಗ್ಗೆ ಎಚ್ಚರಿಸುತ್ತನೇ ಇದ್ದಳು.

ಎರಡನೇ ಬಾರಿ ಹಾವಿನೊಂದಿಗೆ ಮುಖಾಮುಖಿಯಾಗಿದ್ದು, ಈಗೊಂದು ೬-೭ ವರ್ಷದ ಹಿಂದೆ. ರಜೆಗೆ ಶಿರಸಿಗೆ ಬಂದಿದ್ದ ನಾನು ಅವತ್ತು ಅಮ್ಮನ ಜೊತೆ, ನಮ್ಮ ಮೂಲ ಊರಿಗೆ ಹೋಗಿದ್ದೆ. ಮಧ್ಯಾಹ್ನ ಊಟ ಆದ ಮೇಲೆ ಸಣ್ಣದೊಂದು ನಿದ್ದೆ ತೆಗೆದು, ಸುಮಾರು ೩ ಗಂಟೆಯ ಹೊತ್ತಿಗೆ ನಾನು, ತೋಟಗಳ ಬದಿಗೆ ಒಂದು ಸುತ್ತು ತಿರುಗಿ ಬರಲು ಹೋದೆ. ಹಾಗೆ ತೋಟದಲ್ಲಿ ತಿರುಗುತ್ತಿರುವಾಗ, ನಮ್ಮನೆ ಬಣ್ಣದ ತುದಿಯಲ್ಲಿ ಹರಿಯುತ್ತಿರುವ ಸಣ್ಣ ಝರಿಯಲ್ಲಿ ಒಂದು ತೆಂಗಿನಕಾಯಿ ಬಿದ್ದಿರುವುದು ಕಂಡಿತು. ಸರಿ, ಮನೆಗೆ ವಾಪಸ್ ಹೋಗುತ್ತಾ ತೆಗೆದುಕೊಂಡು ಹೋದರಾಯಿತು ಎಂದು ಕೆಳಗೆ ಇಳಿದು, ನೀರಿನಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಎರಡೂ ಕೈಯಲ್ಲಿ ಹಿಡಿದು ಎತ್ತಲು ಪ್ರಯತ್ನಿಸಿದೆ. ತಟ್ಟನೇ, ಬಲಗೈಯ ಹೆಬ್ಬಟ್ಟಿಗೆ ಎನೋ ಕುಟುಕಿದ ಅನುಭವವಾಯಿತು. ತಕ್ಷಣವೇ ನಾನು ಬಲಗೈಯನ್ನು ಮೇಲೆತ್ತಿ ಗಟ್ಟಿಯಾಗಿ ಕೊಡವಿದೆ. ಮುಂದಿನ ಕ್ಷಣದಲ್ಲಿ ನನಗೆ ಕಂಡಿದ್ದು ಸುಮಾರು ೧೦ ಅಡಿ ಉದ್ದ, ಅರ್ಧ ಒನಕೆಯಷ್ಟು ದಪ್ಪಗಿದ್ದ, ಕರಿ ಹಾವೊಂದು ಓಡಿಹೋಗುತ್ತಿರುವುದು. ನಾನು ಕಣ್ಣು ಮಿಟುಕಿಸುವುದರೊಳಗೆ ಇವೆಲ್ಲ ನಡೆದುಹೋಗಿತ್ತು. ನಾನು ಕೈ ಮೇಲೆತ್ತಿ ಕೊಡವಿದ ರಭಸಕ್ಕೂ, ಹಾವಿನ ಭಾರಕ್ಕೂ, ನನ್ನ ಬಲಗೈ ಹೆಬ್ಬಟ್ಟಿನ ಸುಮಾರು ಚರ್ಮ ಹಿಸಿದುಹೋಗಿತ್ತು. ಗಾಯದ ನೋವಿಗಿಂತಲೂ, ಆ ಹಾವಿನ ಗಾತ್ರವನ್ನು ನೋಡಿದ ನನ್ನ ಜಂಘಾಬಲವೇ ಉಡುಗಿಹೋಯಿತು. ನನ್ನ ಹೆಬ್ಬಟ್ಟನ್ನು ನೋಡಿ ಮೀನೆಂದು ತಿಳಿದುಕೊಂಡಿತೇನೋ ಆ ಹಾವು.

ಹೇಗೋ ಆ ಆಘಾತದಿಂದ ಸಾವರಿಸಿಕೊಂಡು ಮನೆಯ ಕಡೆ ಓಡಿದೆ. ಅಲ್ಲೇ ಗೋಟಡಿಕೆ ಹೆಕ್ಕುತ್ತಿದ್ದ ಮಾಬ್ಲಣ್ಣ, ನನ್ನ ಗಾಬರಿ ನೋಡಿ ಏನಾಯ್ತೆಂದು ಕೇಳಿದ. ನಾನು ನಡೆದಿದ್ದನ್ನು ಹೇಳಿದೆ. ಅವನು ಅದು ನೀರುಕೇರೆ ಹಾವೆಂದು, ತಾನು ಅದನ್ನು ಬೇಕಾದಷ್ಟು ಸಲ ಅದೇ ಝರಿಯಲ್ಲಿ ನೋಡಿರುವುದಾಗಿಯೂ, ಅದು ವಿಷದ ಹಾವಲ್ಲ ಎಂದು ಹೇಳಿದ ಮೇಲೆಯೇ ನನ್ನ ಗಾಬರಿ ಸ್ವಲ್ಪ ಕಡಿಮೆಯಾಗಿದ್ದು. ಮನೆಗೆ ತಲುಪಿ, ಅಮ್ಮನಿಗೆ ಹೇಳಿದಾಗ ಅಮ್ಮ ತುಂಬಾ ಗಾಬರಿ ಬಿದ್ದಳು. ಆಗಿನ್ನೂ ೩.೩೦. ಮುಂದಿನ ಬಾಳೇಸರ ಬಸ್ಸು ಬರುವುದು ಇನ್ನು ೪.೩೦ ಕ್ಕೆ. ಸರಿ, ಕಾನಸೂರಿಗೆ ಫೋನ್ ಮಾಡಿ ಬಾಡಿಗೆ ಬೈಕ್ ಗೆ ಬರಲು ಹೇಳಿದ್ದಾಯಿತು. ಅದು ಬಂದು ಮುಟ್ಟುವುದರಲ್ಲಿ ೪.೧೫ ಆಗಿತ್ತು. ನನಗೇನಾದರೂ ವಿಷದ ಹಾವು ಕಚ್ಚಿರುತ್ತಿದ್ದರೆ ನನ್ನ ಪರಿಸ್ಥಿತಿ ಗಂಭೀರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಗಾಯದಿಂದ ಸ್ವಲ್ಪ ಜಾಸ್ತಿಯೇ ರಕ್ತ ಹರಿದಿದ್ದನ್ನು ಬಿಟ್ಟರೆ, ನಾನು ಚೆನ್ನಾಗಿಯೆ ಇದ್ದೆ.

ಐದು ಗಂಟೆಯ ಹಾಗೆ ಶಿರಸಿ ತಲುಪಿದ್ದಾಯ್ತು. ಹಾವು ಕಚ್ಚಿದ್ದರಿಂದ ಯಾವುದೇ ಖಾಸಗಿ ಅಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳುವುದಿಲ್ಲ. ಸರಿ, ಸರ್ಕಾರಿ ಆಸ್ಪತ್ರೆಗೇ ಹೋದೆವು. ಒಂದೆರಡು ಪೇನ್ ಕಿಲ್ಲರ್ ಗಳನ್ನು ಮಾತ್ರ ಕೊಟ್ಟಿದ್ದರು ಅಂತ ನೆನಪು ನನಗೆ. ಗಾಯ ಸ್ವಲ್ಪ ಊದಿಕೊಂಡಿತ್ತು, ನಾನು ಎಲ್ಲರ ಜೊತೆ ಮಾತಾಡುತ್ತಾ ಆರಾಮಿದ್ದೆ. ಸಂಜೆ ಪೋಲೀಸ್ ಪೇದೆಯೊಬ್ಬ ಬಂದು, ನನ್ನನ್ನು ಒಂದಷ್ಟು ಪ್ರಶ್ನೆ ಕೇಳಿ, ನನ್ನ ಸಹಿ ತೆಗೆದುಕೊಂಡು ಹೋದ. ಹಾವು ಕಚ್ಚಿದಾಗ ಪೋಲಿಸ್ ಕೇಸ್ ದಾಖಲಾಗುವುದು ಕಡ್ಡಾಯ ಅಂತ ಗೊತ್ತಾಯಿತು. ನಾನು ಒಂದು ದಿನ ಸರ್ಕಾರೀ ಆಸ್ಪತ್ರೆಯಲ್ಲಿದ್ದು ಮರುದಿನ ಮನೆಗೆ ಬಂದೆ. ಗಾಯದ ಗುರುತುಗಳೇನೂ ಈಗ ಹೆಬ್ಬಟ್ಟಿನಲ್ಲಿ ಉಳಿದಿಲ್ಲ.

ವರ್ಷದ ಹಿಂದೆ ಆಫ಼ೀಸ್ ನಲ್ಲಿ ಇ.ಅರ್.ಟಿ (Emergency Rescue Team. Emergency runaway team ಅಂತಲೂ ನಾವು ತಮಾಷೆ ಮಾಡುವುದಿದೆ) ಟ್ರೇನಿಂಗ್ ನಡೆಯುತ್ತಿದ್ದಾಗ, ಅದರ ನಿರ್ವಾಹಕರು, ಇಲ್ಲಿ ಯಾರಾದರೂ ಹಾವು ಕಚ್ಚಿಸಿಕೊಂಡವರು ಇದ್ದಾರೆಯೇ ? ಎಂದು ಕೇಳಿದಾಗ ನಾನೊಬ್ಬನೇ ಕೈ ಎತ್ತಿದ್ದೆ. ನನ್ನ ಕೊಲೀಗ್ಸ್ ಎಲ್ಲ, ನಾನು ಯಾವುದೋ ಬೇರೆ ಗ್ರಹದಿಂದ ಬಂದಿಳಿದವನ ತರ ನೋಡುತ್ತಿದ್ದರು. ನನಗ್ಯಾಕೋ ನಾನು ವಿಶೇಷ ವ್ಯಕ್ತಿ ಎಂದೆನಿಸಿ ಸ್ವಲ್ಪ ಹೆಮ್ಮೆಯಾಯಿತು.