Thursday, March 20, 2008

ಯಾವ ಮೋಹನ ಮುರಳಿ ಕರೆಯಿತೋ

ಕೆಲವೊಮ್ಮೆ ನನಗೆ ಹಾಗಾಗುತ್ತೆ. ಯಾವುದೋ ಹಾಡು ತುಂಬಾ ಹಿಡಿಸಿ, ಬಹಳಷ್ಟು ದಿನಗಳ ಕಾಲ ಕಾಡುತ್ತಾ ಇರತ್ತೆ. ಇಡೀ ದಿನ ಅದರದ್ದೇ ಗುಂಗು. ಈಗೊಂದು ೧೫ ದಿನಗಳಿಂದ ಈ ಹಾಡು ಕಾಡುತ್ತಾ ಇದೆ.

ಇದು ತೆಲುಗಿನ "ಸಿರಿವೆನ್ನೆಲ" ಚಿತ್ರದ್ದು. ಈ ಹಾಡಿನ ಸಂಪೂರ್ಣ ಸಾಹಿತ್ಯ ಓಂಕಾರದ ಮೇಲೆ ರಚಿತವಾಗಿದೆ. ನನ್ನ ತೆಲುಗು ರೂಂಮೇಟನ್ನು ಕಾಡಿ ಬೇಡಿ, ಸಾಹಿತ್ಯದ ಅರ್ಥ ತಿಳಿದುಕೊಂಡೆ. ಓಂಕಾರವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾನೆ ಸಾಹಿತಿ!. "ಸರಸ ಸ್ವರ ಸುರ ಝರೀ ಗಮನಂ ಸಾಮವೇದ ಸಾರಮಿದಿ" ಎಂಬಂತ ಸುಂದರ ಸಾಲುಗಳನ್ನು ಪೋಣಿಸಿ ರಚಿಸಿದ್ದಾರೆ ಸಾಹಿತಿ ಶ್ರೀ ಸೀತಾರಾಮ ಶಾಸ್ತ್ರಿ ಅವರು. ಅದಕ್ಕೆ ಒಳ್ಳೆಯ ಸಂಗೀತ ಬೇರೆ.ಈ ಹಾಡಿನಲ್ಲಿ ಕೊಳಲಿನ ಬಳಕೆ, ಹಾಡಿನ ಸೌಂದರ್ಯಕ್ಕೆ ಮೆರಗು ತಂದಿದೆ ಅಂದು ನನಗೆ ಅನ್ನಿಸುತ್ತೆ. ಈ ಹಾಡಿಗೆ ಪ್ರಸಿದ್ಧ ಕಲಾವಿದ ಹರಿಪ್ರಸಾದ್ ಚೌರಾಸಿಯಾ ಅವರು ಕೊಳಲಿನ ಹಿನ್ನೆಲೆ ಒದಗಿಸಿದ್ದಾರೆ. ಸಂಗೀತ ನಿರ್ದೇಶನ ಕೆ.ವಿ.ಮಹಾದೇವನ್, ಹಾಡಿದವರು ಎಸ್.ಪಿ.ಬಿ ಮತ್ತು ಪಿ.ಸುಶೀಲಾ. ಹ್ಮಾ.. ಮರೆತಿದ್ದೆ. ಈ ಚಿತ್ರದಲ್ಲಿ ನಾಯಕ ಕುರುಡ, ಆದರೆ ಚೆನ್ನಾಗಿ ಕೊಳಲು ಬಾರಿಸುತ್ತಾನೆ. ನಾಯಕಿ ಮೂಕಿ. ಮೂಕಿಯ ಪಾತ್ರದಲ್ಲಿ ಸುಹಾಸಿನಿಯವರು ಮನೋಹಕ ಅಭಿನಯ ನೀಡಿದ್ದಾರೆ.

ಒಳ್ಳೆಯ ಸಾಹಿತ್ಯ, ಸಂಗೀತ, ಹಿನ್ನೆಲೆ ಗಾಯನ, ಹಿನ್ನೆಲೆಯಲ್ಲಿ ತೇಲಿ ಬರುತ್ತಿರುವ ಕೊಳಲಿನ ಸದ್ದು, ಇವೆಲ್ಲಾ ಒಟ್ಟಿಗೆ ಸೇರಿದರೆ ಗಂಧರ್ವಲೋಕ ಸೃಷ್ಟಿಯಾಗದೇ ಇನ್ನೇನಾದೀತು?

Monday, March 17, 2008

ಮೂಕ ಹಕ್ಕಿಯು ಹಾಡುತಿದೆ..

ವಾರಂತ್ಯದಲ್ಲೂ ನಗರದ ಜಂಜಡದಿಂದ ಅಷ್ಟು ದೂರ ಬಂದು, ಈ ಹಸಿರು ಹಿನ್ನೆಲೆಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನದಿಯ ಹರವನ್ನು ದಿಟ್ಟಿಸುತ್ತಾ ಕಾಲ ಕಳೆಯುವುದು ಕೇವಲ ಅವಳ ನೆನಪನ್ನು ಮರೆಯಲೋಸ್ಕರವಾ?ಅಥವಾ ನನ್ನನ್ನೇ ನಾನು ಮರೆಯಲಾ? ಗೊತ್ತಾಗುತ್ತಿಲ್ಲ! . ಆದರೆ ಒಂದಂತೂ ನಿಜ. ಹಸಿರು ಸೆರಗು ಹೊದ್ದಿರುವ ವನದೇವತೆಯ ಮಡಿಲಲ್ಲಿ ಮೈಚಾಚಿ,ದಿವ್ಯ ಏಕಾಂತದಲ್ಲಿ ಎಲ್ಲವನ್ನೂ ಮರೆತು ಹೋಗುವುದು ಎಷ್ಟು ಆಪ್ಯಾಯಮಾನ ಗೊತ್ತಾ?

ಅವಳೂ ನನ್ನ ಪಕ್ಕದಲ್ಲೇ ಕುಳಿತು ಮೌನದೊಳಕ್ಕೇ ಪಿಸುಗುಟ್ಟಿದ್ದರೆ ಇನ್ನೂ ಹಿತವಾಗಿರುತ್ತಿತ್ತೆಂದು ಒಮ್ಮೊಮ್ಮೆ ಅನಿಸುವುದಿದೆ.ಆದರೆ ಆಗ ಏಕಾಂತದ ರಸಘಳಿಗೆಯನ್ನು ಸವಿಯುವ ಭಾಗ್ಯ ತಪ್ಪಿಹೋಗುತ್ತಿತ್ತೇನೋ. ಏಕಾಂತದ ರಂಗಸ್ಥಳದಲ್ಲಿ ಕೇವಲ ನನ್ನೆದೆಯ ಪಿಸುಮಾತುಗಳ ಧ್ವನಿಗಳಿಗೆ ಜಾಗವಿದೆ.ಮಾತು ಮೂಕವಾಗಿ, ಮೌನ ಧ್ವನಿಯಾಗಿ, ಒಂಟಿ ಹಕ್ಕಿ ಗರಿಗೆದರಿ ಅಲ್ಲಿ ಕುಣಿಯಬೇಕು. ನನ್ನ ದುಃಖ ದುಮ್ಮಾನಗಳು ಸದ್ದಿಲ್ಲದೇ ಬಂದು ರಂಗಸ್ಥಳದಲ್ಲಿ ಗಿರಿಗಿಟ್ಲಿಯಾಗಿ ಕುಣಿದು ಸುಸ್ತಾಗಿ, ನೇಪಥ್ಯಕ್ಕೆ ಸರಿದು ಅನಿರ್ವಚನೀಯವಾದ ಭಾವವೊಂದಕ್ಕೆ ಎಡೆ ಮಾಡಿಕೊಡಬೇಕು. ಆ ಸುಖಕ್ಕಾಗಿಯೇ ಅಲ್ಲವೇ ನಾನು, ಕುಣಿಕೆ ಬಿಚ್ಚಿದೊಡನೆಯೇ ಅಮ್ಮನ ಬಳಿ ಓಡಿ ಬರುವ ಪುಟ್ಟ ಕರುವಿನ ತರ ಪದೇ ಪದೇ ಇಲ್ಲಿಗೆ ಓಡಿ ಬರುತ್ತಿರುವುದು?

ಅವಳು ಬಿಟ್ಟು ಹೋದಾಗ ನನ್ನನಾವರಿಸಿಕೊಂಡ ಭಾವ ಎಂತಹುದೆಂಬುದು ಹೇಳುವುದು ಕಷ್ಟ. ಅನಾಥ ಭಾವ ರಪ್ಪನೇ ಮುಖಕ್ಕೆ ರಾಚಿತ್ತು. ದುಃಖವೇ ಹಾಗಲ್ಲವೇ ? ಸದಾ ಸುಖದ ನೆರಳಿನಲ್ಲೇ ಇದ್ದು, ಸಮಯಸಾಧಕನಂತೆ ಹೊಂಚು ಹಾಕಿ ಇದ್ದಕ್ಕಿದ್ದ ಹಾಗೆ ತನ್ನ ಕಬಂಧ ಬಾಹುಗಳನ್ನು ಚಾಚಿ ಆಪೋಶನ ತೆಗೆದುಕೊಂಡುಬಿಡುತ್ತದೆ.ಅದಕ್ಕೆ ನಿಧಾನವೆಂಬುದೇ ಗೊತ್ತಿಲ್ಲ. ಅಮಾವಾಸ್ಯೆಯ ಕತ್ತಲಿನಂತೆ ಗಾಢವಾಗಿ ಕವಿದು ಒಂದೇ ಕ್ಷಣದಲ್ಲಿ ಎಲ್ಲಾವನ್ನೂ ಆವರಿಸಿಕೊಂಡು ಬಿಡುತ್ತದೆ. ನನಗೂ ಹಾಗೇ ಆಗಿತ್ತು. ದೀಪದ ದಾರಿಯಲ್ಲಿ ನಡೆಯುತ್ತಿದ್ದವನಿಗೆ ಇದ್ದಕಿದ್ದ ಹಾಗೆ ಕಣ್ಣುಗಳು ಕುರುಡಾದ ಹಾಗೆ. ಹಲವು ದಿನಗಳಲ್ಲೇ ನಾನು ಒಂಟಿತನದ ದಾಸನಾಗಿಬಿಟ್ಟಿದ್ದೆ. ಆದರೆ ಒಂಟಿತನ ದುಃಖದಂತಲ್ಲ. ಅದು ನಿಧಾನವಾಗಿ ನನ್ನನ್ನು ತನ್ನ ಪರಿಧಿಯೊಳಕ್ಕೆ ಸೆಳೆದುಕೊಂಡಿತು. ಮೊದ ಮೊದಲು ಒಂಟಿತನದ ಮೌನ, ಕತ್ತಲು ಎಲ್ಲವೂ ಆಪ್ಯಾಯಮಾನವೆನ್ನಿಸುತ್ತಿತ್ತು. ಆದರೆ ದಿನ ಕಳೆದಂತೆ ಗೊತ್ತಾಗುತ್ತಾ ಹೋಯಿತು. ಬೆಳಕು ಬೇಕೆಂದರೆ ಒಂಟಿತನದ ಕತ್ತಲ ಮನೆಗೆ ಕಿಟಕಿಗಳೇ ಇಲ್ಲ!.

ಒಂಟಿತನದ ಲೋಕದಲ್ಲಿ ಬಾಳು ಬಹಳ ದುರ್ಭರವಾಗಿತ್ತು. ಕತ್ತಲು ದಿಗಿಲುಕ್ಕಿಸುತ್ತಿತ್ತು. ಅವ್ಯಕ್ತ ಮೌನ ಮೂಗಿಗೆ ಅಡರಿ ಉಸಿರುಗಟ್ಟಿಸುವ ವಾತಾವರಣ. ಎಲ್ಲೋ ಗೋಚರಿಸಿಬಹುದಾದ ಪುಟ್ಟ ಬೆಳಕಿನ ಕಿರಣವನ್ನು ಹುಡುಕಿ,ದುಃಖದ ವ್ಯಾಪ್ತಿಯಿಂದ ಹೊರಬರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಲವು ದಿನ ಆ ಕತ್ತಲಲ್ಲೇ ಅಂಬೆಗಾಲಿಟ್ಟು ತೆವಳಿ ಹುಡುಕಿದ ಮೇಲೆಯೇ ಕಂಡಿದ್ದು ನನಗೆ ಈ ಏಕಾಂತದ ಪುಟ್ಟ ಬೆಳಕಿಂಡಿ. ಅವತ್ತು ಎಷ್ಟು ಸಂತೋಷವಾಗಿತ್ತು ಗೊತ್ತಾ?ಮೊದಲ ಬಾರಿ ನನ್ನೆದೆಯ ಹಕ್ಕಿ ರೆಕ್ಕೆ ಬಿಚ್ಚಿ ಗರಿಗೆದರಿ ಹಾಡಿತ್ತು.

ಒಂಟಿತನಕ್ಕೂ ಏಕಾಂತಕ್ಕೂ ಇರುವ ವ್ಯತ್ಯಾಸ ದಿನಕಳೆದಂತೆ ಅನುಭವಕ್ಕೆ ಬರತೊಡಗಿತು. ಏಕಾಂತದಲ್ಲಿ ಮನಸ್ಸು ಮತ್ತೆ ಹಗುರ. ಏಕಾಂತದಲ್ಲಿ ನಾನು ಕೇವಲ ನಾನಾಗುತ್ತೇನೆ. ನನ್ನೊಳಗಿನ ಮೌನ ನನ್ನೊಡನೇ ಮಾತನಾಡಲು ಶುರು ಮಾಡಿಬಿಡುತ್ತದೆ!. ನೆನಪುಗಳು ಅಲ್ಲಿ ಕಾಡುವುದಿಲ್ಲ, ಬದಲು ದುಃಖಗಳಿಗೆ ಸಾಂತ್ವನ ಕೊಡುವ ಸಂಜೀವಿನಿಗಳಾಗುತ್ತವೆ. ನಮ್ಮ ತಪ್ಪನ್ನು ಎತ್ತಿ ತೋರಿಸಿ ತಿಳಿ ಹೇಳುವ ವೇದಾಂತಿಗಳಾಗುತ್ತವೆ. ಎಂಥ ಸೋಜಿಗವಲ್ಲವೇ?

ಹಸಿರು ಮುಂಚಿನಿಂದಲೂ ನನ್ನ ಇಷ್ಟವಾದ ಬಣ್ಣ. ಏಕಾಂತವನ್ನು ಅನುಭವಿಸಲು ಹಸಿರು ಹಿನ್ನೆಲೆ ಇದ್ದರೆಷ್ಟು ಚೆನ್ನ ಎಂದು ಯೋಚನೆ ಮನಸ್ಸಿನಲ್ಲಿ ಸುಳಿದ ತಕ್ಷಣವೇ ಇಲ್ಲಿಗೆ ಹೊರಟು ಬಂದಿದ್ದೆ. ಕಾಡಿನ ದುರ್ಗಮ ದಾರಿಗಳಲ್ಲಿ ಕಳೆದುಹೋಗಿ, ದಾರಿ ಮಧ್ಯೆ ಝುಳು ಝುಳು ಹರಿಯುವ ನೀರಿಗೆ ತಲೆಯೊಡ್ಡಿ, ಅಲ್ಲಲ್ಲಿ ಮರಗಳಲ್ಲಿ ಅಡಗಿ ಕುಳಿತು ಚೀರುತ್ತಿರುವ ಜೀರುಂಡೆಗಳ ಹಾಡಿಗೆ ತಲೆದೂಗುತ್ತಾ, ನಮ್ಮನ್ನು ನಾವೇ ಮರೆಯುವುದಿದೆಯಲ್ಲಾ ಅದರ ರೋಮಾಂಚನವನ್ನು ಶಬ್ಧಗಳಲ್ಲಿ ಹಿಡಿಯಲು ಆಗದು. ಏನಿದ್ದರೂ ಅನುಭವಿಸಿಯೇ ತೀರಬೇಕು. "ಸದ್ದಿರದ ಪಸರುಡೆಯ ಮಲೆನಾಡ ಬನಗಳಲ್ಲಿ, ಹರಿವ ತೊರೆಯಂಚಿನಲಿ ಗುಡಿಸಲೊಂದಿರಲಿ"ಎಂದು ಕುವೆಂಪು ಆಸೆಪಟ್ಟಿದ್ದು ಇದಕ್ಕಾಗಿಯೇ ಅಲ್ಲವೇ? ಸೂರ್ಯನನ್ನೇ ಚುಂಬಿಸಲು ನಿಂತಿರುವಂತೆ ಮುಗಿಲೆತ್ತರಕ್ಕೆ ನಿಂತಿರುವ ಗಿರಿಶಿಖರಗಳನ್ನು ನೋಡುತ್ತಾ ನನ್ನೆಲ್ಲಾ ಅಹಂಕಾರ ಬೆಳಗ್ಗಿನ ಇಬ್ಬನಿಯಂತೆ ಕ್ಷಣಾರ್ಧದಲ್ಲಿ ಮರೆಮಾಯ. ಎದುರಾದ ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ ಮುನ್ನುಗಿ ಹರಿಯುವ ನದಿ ನನಗೆ ಸ್ಪೂರ್ತಿ. ಪ್ರಕೃತಿಯೆದುರು ಮಾನವ ಎಷ್ಟೊಂದು ಕುಬ್ಜ ಅಲ್ಲವೇ?

ಮತ್ತೆ ಹಿಂದಿರುಗಿ ಹೋಗಲು ಇಷ್ಟವಿಲ್ಲ.ಆದರೇನು ಮಾಡಲಿ ?ಹೋಗುವುದು ಅನಿವಾರ್ಯ. ಹಿಂದೆ ಋಷಿಮುನಿಗಳು ಇಂಥ ಕಾಡುಗಳ ಮಧ್ಯೆ ಆಶ್ರಮ ಮಾಡಿಕೊಂಡು ದೇವರನ್ನು ಹುಡುಕುತ್ತಿದ್ದರಂತೆ. ಎಂಥಾ ಪುಣ್ಯವಂತರಲ್ಲವೇ ಅವರು? ಲೌಕಿಕದ ಅನುಭೂತಿಯಿಂದ ವಿಮುಕ್ತನಾಗಿ ಸರ್ವನಿಯಾಮಕನನ್ನು ಹುಡುಕಲು ಇದಕ್ಕಿಂತ ಒಳ್ಳೆಯ ಜಾಗ ಬೇರೇನಿದ್ದೀತು? ದೇವರನ್ನೇ ಹುಡುಕಬೇಕೆಂಬ ಹಠ ನನಗಿಲ್ಲ. ಆದರೆ ಇಲ್ಲಿ ಕಳೆದ ಹಲವು ಘಳಿಗೆಗಳನ್ನು ಮನತೃಪ್ತಿಯಾಗಿ ಸವಿದ ಸಾರ್ಥಕ್ಯಭಾವ ನನ್ನಲ್ಲಿದೆ.ಮತ್ತೆ ಬರುತ್ತೇನೆ. ದಣಿದ ಮನಕ್ಕೆ ಉತ್ಸಾಹದ ತಪಃಶಕ್ತಿಯನ್ನು ತುಂಬಲು!.

ಒಂಟಿತನದ ಮನೆಯಲ್ಲಿ ಬಂದಿಯಾಗಿರುವ ಎಲ್ಲರಿಗೂ ಯಾರಾದರೂ ಬಂದು ದಿವ್ಯ ಏಕಾಂತದ ಸನ್ನಿಧಿಯನ್ನು ತೋರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆದರೆ ಅದೂ ಕಷ್ಟವಲ್ಲವೇ ? ಒಳಗಿದ್ದವರನ್ನು ಕೂಗೋಣವೆಂದರೆ ಒಂಟಿತನದ ಮನೆಗೆ ಕಿಟಕಿಗಳೇ ಇಲ್ಲವಲ್ಲ? ಏಕಾಂತದ ಸನ್ನಿಧಿಯನ್ನು ಒಳಗಿದ್ದವರೇ ಹೇಗೋ ಹುಡುಕಿಕೊಳ್ಳಬೇಕು!

Sunday, March 9, 2008

ಕಾರ್ ಕಾರ್ ಎಲ್ನೋಡಿ ಕಾರ್

ಗ್ಯಾಸ್ ಸ್ಟೇಶನ್ನಿನ ಎದುರುಗಿದ್ದ ಸಿಗ್ನಲ್ಲಿನ ಮುಂದೆ ಕಾರು ನಿಲ್ಲಿಸಿಕೊಂಡಾಗ, ಮಾಧವನಿಗೆ ತಾನು ತಪ್ಪು ಲೇನಿನಲ್ಲಿ ನಿಂತಿರುವುದು ಅರಿವಾಯಿತು. ಹಿಂದೆ ಮುಂದೆ ಸಾಕಷ್ಟು ವಾಹನಗಳು ಇದ್ದುದರಿಂದ, ಸಿಗ್ನಲ್ಲು ಬಿಟ್ಟ ತಕ್ಷಣ, ಎಡಕ್ಕೆ ತಿರುಗುವುದು ಕಷ್ಟವಿತ್ತು. ಕಾರು ತಪ್ಪು ಲೇನಿನಲ್ಲಿ ನಿಂತಿದ್ದು ಅರಿವಾದ ತಕ್ಷಣ, ಅವನ ಪಕ್ಕ ಕುಳಿತಿದ್ದ "ಟೆನ್ಶನ್ ಪಾರ್ಟಿ" ಉಮಾಪತಿ ಯಾವುದೋ ದೊಡ್ಡ ತಪ್ಪು ಮಾಡಿದವರಂತೆ ಕೂಗಿಕೊಳ್ಳಲು ಶುರು ಮಾಡಿದ. ಅವನನ್ನು ಸಮಾಧಾನ ಪಡಿಸಿ, ಸಿಗ್ನಲ್ಲು ಬಿಟ್ಟ ಕೂಡಲೇ ಮಧ್ಯದ ಲೇನಿನಲ್ಲೇ ಇನ್ನೂ ಮುಂದೆ ಹೋಗಿ, ಒಂದು ಯು ಟರ್ನ ಹೊಡೆದು, ಬಲಕ್ಕೆ ತಿರುಗಿ ವಾಲ್ ಮಾರ್ಟಿನಲ್ಲಿ ಮಾಧವ ಕಾರು ಪಾರ್ಕ್ ಮಾಡಿದಾಗ, ಸೂರ್ಯ ದಿಗಂತದಲ್ಲಿ ಮರೆಯಾಗಲು ಹವಣಿಸುತ್ತಿದ್ದ. ಅಲ್ಲಲ್ಲಿ ವಿರಳ ಸಂಖ್ಯೆಯಲ್ಲಿ ನಿಂತಿದ್ದ ಕಾರುಗಳು, ತಮ್ಮನ್ನು ಅನಾಥವಾಗಿ ಬಿಟ್ಟು ಹೋದ ಮಾಲೀಕರಿಗಾಗಿ ಬರಕಾಯುತ್ತಿದ್ದವು.

ಆಫೀಸು ಮುಗಿಸಿ ಮನೆಗೆ ಬಂದವರಿಗೆ,ಮನೆಯಲ್ಲಿ ಮೊಸರು ಇಲ್ಲದಿರುವುದು ಅನುಭವಕ್ಕೆ ಬಂದ ಇಬ್ಬರೂ ಕೂಡಲೇ ಕಾರು ಹತ್ತಿ ಮನೆಗೆ ಹತ್ತಿರವೇ ಇರುವ ವಾಲ್ ಮಾರ್ಟಿಗೆ ಹೊರಟು ಬಂದಿದ್ದರು. ಮಾಧವ ತಾನು ಒಬ್ಬನೇ ಹೋಗಿ ಬರುತ್ತೇನೆಂದು ಹೇಳಿದರೂ, ಮನೆಯಲ್ಲಿ ಕುಳಿತು ಸಮಯ ಕಳೆಯುವುದು ಹೇಗೆ ಎಂದು ಅರ್ಥವಾಗದೇ, ಅವನ ರೂಮ್ ಮೇಟ್ ಉಮಾಪತಿಯೂ ಹೊರಟು ಬಂದಿದ್ದ. ಈಗೊಂದು ೪ ತಿಂಗಳ ಹಿಂದೆ ಇಬ್ಬರು ಕಂಪನಿ ಕೆಲಸದ ಮೇಲೆ ಅಮೇರಿಕಕ್ಕೆ ಬಂದವರು ಸಿಂಗಲ್ ಬೆಡ್ ರೂಮಿನ ಅಪಾರ್ಟಮೆಂಟೊಂದರಲ್ಲಿ ಉಳಿದುಕೊಂಡಿದ್ದರು. ಮಾಧವ ಸ್ವಭಾವದಲ್ಲಿ ಒರಟು. ಹೆವೀ ಬಿಲ್ಟ್ ಪರ್ಸನಾಲಿಟಿ, ಹುಂಬ ಧೈರ್ಯ ಜಾಸ್ತಿ. ಎಂಥಾ ತೊಂದರೆಯಲ್ಲು ಸಿಕ್ಕಿಕೊಂಡರೂ, ಸಲೀಸಾಗಿ ಹೊರಬರಬಲ್ಲ ಚಾಕಚಕ್ಯತೆ ಅವನಲ್ಲಿತ್ತು. ಉಮಾಪತಿಯದು ಅವನ ತದ್ವಿರುದ್ಧ ಸ್ವಭಾವ. ಸ್ವಲ್ಪ ಪುಕ್ಕಲ ಸ್ವಭಾವ, ತೆಳ್ಳನೆಯ ಶರೀರ. ಸಣ್ಣ ಸಣ್ಣ ವಿಷಯಕ್ಕೂ ಗಾಬರಿ ಮಾಡಿಕೊಂಡು ಸ್ನೇಹಿತರ ಗ್ಯಾಂಗಿನೆಲ್ಲೆಲ್ಲಾ "ಟೆನ್ಶನ್ ಪಾರ್ಟಿ ಉಮಾಪತಿ" ಎಂದೇ ಕರೆಸಿಕೊಳ್ಳುತ್ತಿದ್ದ. ಆದರೂ ಅವರಿಬ್ಬರಾ ಜೋಡಿ ಮಾತ್ರ ಅಪೂರ್ವವಾಗಿತ್ತು. ಮಾಧವನ ಹುಂಬ ಧೈರ್ಯಕ್ಕೆ ಕಡಿವಾಣ ಹಾಕಲು ಮತ್ತು ಉಮಾಪತಿಯ ಪುಕ್ಕಲು ಸ್ವಭಾವಕ್ಕೆ ಧೈರ್ಯ ನೀಡಲು ಒಬ್ಬರಿಗೊಬ್ಬರು ಅನಿವಾರ್ಯವೆಂದು ಅವರನ್ನು ನೋಡಿದವರೆಲ್ಲರೂ ಮಾತಾಡಿಕೊಳ್ಳುತ್ತಿದ್ದರು.
ವಾಲ್ ಮಾರ್ಟಿನಲ್ಲಿ ತಮ್ಮ ಕೆಲಸ ಮುಗಿಸಿ ಹೊರಗೆ ಬಂದಾಗ, ಹೇಗೂ ಇಲ್ಲಿತನಕ ಬಂದಾಗಿದೆ, ಹಾಗೇ ಇಂಡಿಯನ್ ಸ್ಟೋರ್ಸಿಗೂ ಹೋಗಿ ಬಂದರಾಯಿತು ಎಂದು ಉಮಾಪತಿ ಸೂಚಿಸಿದಾಗ, ಮಾಧವ ಮರುಮಾತಿಲ್ಲದೇ ಒಪ್ಪಿಕೊಂಡುಬಿಟ್ಟ. ೪ ತಿಂಗಳಿಂದ ಬರೀ ಬ್ರೆಡ್, ಜ್ಯಾಮ್, ಸೀರಿಯಲ್ಸ್ ಇವನ್ನೇ ತಿಂದು ಇಬ್ಬರಿಗೂ ನಾಲಿಗೆ ಎಕ್ಕುಟ್ಟಿ ಹೋಗಿತ್ತು. ಇಂಡಿಯನ್ ಸ್ಟೋರ್ಸಿನಲ್ಲಿ ಅಪರೂಪಕ್ಕೆ ಸಿಗುತ್ತಿದ್ದ ದೋಸೆ ಹಿಟ್ಟಿನ ಆಸೆಗೆ ಅವರು ವಾರಕ್ಕೆರಡು ಸಲ ಭೇಟಿ ನೀಡುವುದನ್ನು ಮರೆಯುತ್ತಿರಲಿಲ್ಲ. ವಾಲ್ ಮಾರ್ಟಿನಿಂದ ಹೊರಗೆ ಬರುತ್ತಿದ್ದಂತೆಯೇ, ಎಡಕ್ಕೆ ತಿರುಗಿ, ಸರ್ವೀಸ್ ರೋಡನ್ನು ಬಳಸಿಕೊಂಡು , ನಿಧಾನವಾಗಿ ಕಾರು ಐ-೩೫ ಹೈವೇಯಲ್ಲಿ ಮುನ್ನುಗತೊಡಗಿತು.

ಅಮೇರಿಕನ್ ಹೈವೇಗಳಲ್ಲಿ ಡ್ರೈವ್ ಮಾಡುವುದೆಂದರೆ ಮಾಧವನಿಗೆ ಎಲ್ಲಿಲ್ಲದ ಸಂತೋಷ. ಸಿನೆಮಾ ಹಿರೋಯಿನ್ನುಗಳ ಕೆನ್ನೆಯಂತೆ ನುಣುಪಾಗಿದ್ದ ರೋಡುಗಳಲ್ಲಿ ೭೦ ಮೈಲಿ ವೇಗದಲ್ಲಿ ಕಾರನ್ನು ನುಗ್ಗಿಸಿ, ಆಗಾಗ ಲೇನ್ ಬದಲಿಸುತ್ತಾ ಝೂಮಿನಲ್ಲಿ ಒಡಾಡುವಂತಿದ್ದರೆ ಯಾರಿಗೇ ತಾನೇ ಖುಶಿಯಾಗದಿದ್ದೀತು? ಮಾಧವನಿಗೆ ಹಿಂದೆ ಕಾರ್ ಒಡಿಸಿ ಬೇರೆ ಚೆನ್ನಾಗಿ ಅನುಭವವಿತ್ತು. ಇಲ್ಲಿಗೆ ಬಂದು ಹಳೆಯ ಟೊಯೋಟಾ ಕ್ಯಾಮ್ರಿಯೊಂದನ್ನು ಖರೀದಿಸಿ, ಅದಕ್ಕೊಂದು ಅಲ್ಪ ಸ್ವಲ್ಪ ರಿಪೇರಿ ಮಾಡಿಸಿ, ಒಳ್ಳೆಯ ಕಂಡಿಶನ್ನಿನಲ್ಲಿ ಇಟ್ಟುಕೊಂಡಿದ್ದ. ಮಾಧವನ ಬಳಿ ಬಂದ ನಂತರ ಕಾರು ಬಹಳವೇನೂ ಓಡಿರಲಿಲ್ಲ. ಹತ್ತಿರವೇ ಇದ್ದ ಆಫೀಸಿಗೆ ದಿನಕ್ಕೆರಡು ಸಲ, ವಾರಕ್ಕೊಮ್ಮೆ ಅಥವಾ ಎರಡು ಸಾರ್ತಿ ವಾಲ್ ಮಾರ್ಟ್ ಮತ್ತು ಇಂಡಿಯನ್ ಸ್ಟೋರ್‍ಸಿಗೆ ಓಡಾಡುವುದಕ್ಕೇ ಕಾರಿನ ಭಾಗ್ಯ ಸೀಮಿತವಾಗಿತ್ತು. ಹೀಗೆ ಅಪರೂಪಕ್ಕೆ ಹೈವೇ ಮೇಲೆ ಒಡಿಸುವ ಸುಖಕ್ಕಾಗಿಯೇ ಮಾಧವ, ಹತ್ತಿರವೇ ಸೆಡಾರ್ ಪಾರ್ಕಿನಲ್ಲೇ ಇದ್ದ ಇಂಡಿಯನ್ ಸ್ಟೋರ್ಸಿಗೆ ಹೋಗದೇ ಸುತ್ತು ಬಳಸಿ, ದೂರದಲಿದ್ದ ಮಿನರ್ವಾ ಸ್ಟೋರ್ಸಿಗೆ ಹೋಗುತ್ತಿದ್ದುದು.

ಮೈಲುಗಟ್ಟಲೇ ಉದ್ದವಿದ್ದ ಟ್ರಕ್ ಗಳನ್ನು ಹಿಂದೆ ಹಾಕಿ, ಕೇವಲ ೫ ನಿಮಿಷಗಳಲ್ಲಿ ೨೫೬ನೇಯ ಎಕ್ಸಿಟ್ಟಿನಲಿ ಮಾಧವನ ಕೆಂಪು ಕಾರು ಬಲಕ್ಕೇ ಹೊರಳುತ್ತಿರುವಾಗ ಕತ್ತಲು ಎಲ್ಲವನ್ನೂ ಆಹುತಿ ತೆಗೆದುಕೊಳ್ಳಲು ರೆಡಿಯಾಗುತ್ತಾ ಇತ್ತು. ಎಕ್ಸಿಟ್ ತೆಗೆದುಕೊಳ್ಳುತ್ತಿದ್ದಂತೆಯೇ, ಕಾರುಗಳನ್ನು ಸಾವಧಾನವಾಗಿ ಚಲಿಸಿ ಎಂದು ಎಚ್ಚರಿಸಲೇ ಇದೆ ಎಂಬಂತೆ, ಧುತ್ತನೇ ಸಿಗ್ನಲ್ಲೊಂದು ಎದಿರಾಗುತ್ತಿತ್ತು. ಸಿಗ್ನಲ್ಲಿನಲ್ಲಿ ಕೆಂಪು ದೀಪ ಹೊತ್ತಿದ್ದನ್ನು ಗಮನಿಸಿದ ಮಾಧವ ವೇಗವನ್ನು ಸಾಧ್ಯವಾದಷ್ಟು ತಗ್ಗಿಸಿ,ಬಿಳಿ ಬಿ.ಎಂ.ಡಬ್ಲೂ ಕಾರೊಂದರ ಹಿಂದಕ್ಕೆ ಮಾರು ಜಾಗ ಬಿಟ್ಟು ನಿಲ್ಲಿಸಿದ. ನಮ್ಮೂರಿನಲ್ಲಿ ಕಾರಿಂದ ಕಾರಿಗೆ ಮಧ್ಯ ಇಷ್ಟೊಂದು ಜಾಗ ಬಿಟ್ಟು ಬಿಟ್ಟರೆ, ೭-೮ ದ್ವಿಚಕ್ರ ವಾಹನಗಳು ಆ ಸಂದಿಯಲ್ಲೇ ನುಗ್ಗಿಬಿಡುತ್ತವೆ ಎಂದನಿಸಿ ಮಾಧವನಿಗೆ ಸ್ವಲ್ಪ ನಗು ಬಂತು. ಪಕ್ಕದಲ್ಲಿ ಕುಳಿತ ಉಮಾಪತಿ, ಮಾಧವ ನಿಲ್ಲಿಸಿದ್ದು ಬಹಳವೇ ಹಿಂದಾಯಿತೆಂದೂ, ಅಷ್ಟೆಲ್ಲಾ ಜಾಗವನ್ನು ಕಾರಿಂದ ಕಾರಿನ ಮಧ್ಯೆ ಕೊಡುವ ಅವಶ್ಯಕತೆ ಇಲ್ಲವೆಂದು ಹೇಳಿದಾಗ ಮಾಧವನಿಗೂ ಹೌದೆನ್ನಿಸಿತು. ಮೆಲ್ಲಗೆ ಬ್ರೇಕ್ ಮೇಲೆ ಇಟ್ಟಿದ್ದ ಕಾಲನ್ನು ಸಡಿಲಿಸಿ ಕಾರನ್ನು ಮುಂದೆ ಚಲಿಸಲು ಅನುವುಮಾಡಿಕೊಟ್ಟ. ಇನ್ನೇನು ಬಿಳಿ ಕಾರಿನ ಹತ್ತಿರ ಬರುವಷ್ಟರಲ್ಲಿ, ಸುರೇಶನ ಕಾಲು ಸ್ವಲ್ಪ ಜಾರಿತು. ಸಟ್ಟನೇ, ಬ್ರೇಕ್ ಒತ್ತಬೇಕೆಂದು ಅಂದುಕೊಂಡವನು, ಬ್ರೇಕಿನ ಬದಲು ಎಕ್ಸಲರೇಟರನ್ನೇ ಬಲವಾಗಿ ಒತ್ತಿಬಿಟ್ಟ. ಮರುಕ್ಷಣದಲ್ಲೇ, ಮಾಧವನ ಕಾರು "ಧಡಾರ್" ಎಂಬ ಶಬ್ದದೊಂದಿಗೆ ಮುಂದಿದ್ದ ಬಿಳಿ ಕಾರಿನ ಹಿಂಭಾಗವನ್ನು ಗುದ್ದಿ, ತಾನೇನೂ ಮಾಡಿಯೇ ಇಲ್ಲವೆಂಬಂತೆ ಅಮಾಯಕ ಮುಖ ಹೊತ್ತು ನಿಂತಿತು. ಹಿಂಭಾಗಕ್ಕೆ ಗುದ್ದಿಸಿಕೊಂದ ಬಿಳಿ ಕಾರು,ಸಿಗ್ನಲ್ಲನ್ನು ದಾಟಿ ಸ್ವಲ್ಪ ದೂರದಲ್ಲಿ ರಸ್ತೆಗಡ್ಡವಾಗಿ ನಿಂತಿತು.

ಮಾಧವನಿಗೆ ಇಲ್ಲೇ ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಬಾರದೇ ಎನ್ನುವಷ್ಟು ಭಯವಾಯಿತು. ಭಯಕ್ಕೆ ಅವನ ಕೈಕಾಲುಗಳು ಒಂದೇ ಸಮ ನಡುಗುತ್ತಿದ್ದವು. ನಾಲಿಗೆ ಒಣಗಿ ಮಾತಾಡಲೂ ಆಗದೇ, ಸುಮ್ಮನೇ ಸ್ಟೇರಿಂಗ್ ಮೇಲೆ ಕೈಯಿಟ್ಟು ಕುಳಿತುಕೊಂಡ. ಪಕ್ಕದಲ್ಲಿದ್ದ ಉಮಾಪತಿಯನ್ನಂತೂ ಕೇಳುವದೇ ಬೇಡ. ಮೊದಲೇ ಟೆನ್ಶನ್ ಪಾರ್ಟಿ. ಬಿಳಿಚಿಕೊಂಡು, ಸಿಂಹದ ಬಾಯಲ್ಲಿ ಸಿಕ್ಕಿಕೊಂಡ ಚಿಗರೆ ಮರಿಯ ಹಾಗೆ ಬೆವೆತುಹೋಗಿದ್ದ. ಇಬ್ಬರಿಗೂ ಇನ್ನೂ ಆಘಾತದ ದಿಗ್ಭ್ರಮೆಯಿಂದ ಹೊರಗೆ ಬರಲೇ ಆಗಿರಲಿಲ್ಲ. ಸೀಟ್ ಬೆಲ್ಟ್ ಕಟ್ಟಿಕೊಂಡದ್ದರಿಂದ ಇಬ್ಬರಿಗೂ ಪೆಟ್ಟೇನೂ ಆಗಿರಲಿಲ್ಲ. ಹಿಂದೆ, ಅಕ್ಕ ಪಕ್ಕದಲ್ಲಿದ್ದ ಎಲ್ಲಾ ಕಾರುಗಳಲ್ಲಿದ್ದ ಜನರೆಲ್ಲರೂ, ಇವರನ್ನೇ ನೋಡತೊಡಗಿದ್ದರು. ನಮ್ಮೂರಿನಲ್ಲಾಗಿದ್ದರೆ ಇಷ್ಟೊತ್ತಿಗೆ ಗುಂಪು ಕೂಡಿ, ತನಗೆ ಒಂದೆರಡು ಏಟುಗಳು ಖಂಡಿತ ಬೀಳುತ್ತಿತ್ತು ಎಂದು ಮಾಧವನ ಮನಸ್ಸು ಹೇಳತೊಡಗಿತು. ಇವರು ಇನ್ನೂ ಕಾರಿನಿಂದ ಹೊರಬಂದಿರಲಿಲ್ಲ, ಅಷ್ಟರಲ್ಲೇ ಗುದ್ದಿಸಿಕೊಂಡ ಕಾರಿನಲ್ಲಿದ್ದ ವಯಸ್ಸಾದ ಅಜ್ಜ ಮತ್ತು ಅಜ್ಜಿಯಿಬ್ಬರೂ ಇವರ ಬಳಿ ಓಡಿ ಬಂದರು. ಅವರು ಏನು ಬೈಯ್ಯಬಹುದು ಎಂಬ ನಿರೀಕ್ಷೇಯಲ್ಲೇ ಇದ್ದವರಿಗೆ, ಅವರು "ಆರ್ ಯೂ ಗಯ್ಸ್ ಫೈನ್? ಡೋಂಟ್ ವರಿ, ಎವೆರಿಥಿಂಗ್ ವಿಲ್ ಬಿ ಆಲ್ ರೈಟ್.." ಎಂದು ಹೇಳಿದಾಗ ಬಹಳ ಆಶ್ಚರ್ಯವಾಯಿತು. ಇಂಥ ಆಘಾತದ ಮಧ್ಯೆಯೂ ಅವರಿಗಿದ್ದ ಕಾಳಜಿ ಮತ್ತು ಸಮಯಪ್ರಜ್ನೆ ಮಾಧವನಿಗೆ ಬಹಳ ಇಷ್ಟವಾಯಿತು. ಅವನ ಮನಸ್ಸು ಈಗ ಸ್ವಲ್ಪ ತಹಬಂದಿಗೆ ಬಂತು.

ಎರಡು ನಿಮಿಷಗಳಲ್ಲೇ,ದೈತ್ಯ ದೇಹದ ಪೋಲೀಸನೊಬ್ಬ,ತಲೆಯ ಮೇಲೆ ಹೊಳೆಯುತ್ತಿದ್ದ ದೀಪಗಳುಳ್ಳ ಕಾರಿನಲ್ಲಿ ಬಂದಿಳಿದ.ಬಂದವನೇ ಇವರಿಗಿಬ್ಬರಿಗೂ ಏನಾದರೂ ಪೆಟ್ಟಾಗಿದೆಯೇ,ಅವರಿಗೆ ಎನಾದರೂ ವೈದ್ಯಕೀಯ ಸಹಾಯ ಬೇಕೇ ಎಂದು ಕೇಳಿ, ಮಾಧವನ ಲೈಸೆನ್ಸ್ ಇಸಿದುಕೊಂಡು, ಅವನ ಕಾರಿನಲ್ಲಿದ್ದ ಲಾಪ್ ಟ್ಯಾಪಿನಲ್ಲಿ ಏನೇನೋ ಫೀಡ್ ಮಾಡತೊಡಗಿದ.ಮಾಧವನ ಕಾಲುಗಳು ಇನ್ನೂ ನಡುಗುತ್ತಲೇ ಇತ್ತು. ಅಜಾನುಬಾಹು ಪೋಲೀಸಿನವನ್ನು ನೋಡಿದರೇ ಭಯ ತರಿಸುವಂತೆ ಇದ್ದ. ಉಮಾಪತಿಯ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಇನ್ನು ಮುಂದೆ ಅವನು ಯಾರ ಕಾರನ್ನೇ ಹತ್ತುವುದು ಸಂಶಯವಿತ್ತು. ನೋಡು ನೋಡುತ್ತಿರುವಂತೆಯೇ ಅಗ್ನಿ ಶಾಮಕ ವಾಹನದಂತೆ ಕಾಣುವ ದೊಡ್ಡ ಟ್ರಕ್ಕೊಂದು ಮಾಧವನ ಕಾರನ್ನೂ, ಬಿಳಿ ಬಿ.ಎಂ.ಡಬ್ಲೂ ಕಾರನ್ನೂ ಟೋ ಮಾಡಿ, ಪಕ್ಕ ಸರಿಸಿ ಮತ್ತೆ ವಾಹನಗಳ ಸುಗಮ ಸಂಚಾರಕ್ಕೆ ಎಡೆ ಮಾಡಿಕೊಟ್ಟಿತು. ಅವರ ಕೆಲಸದ ವೇಗ, ಕ್ರಿಯಾಶೀಲತೆ ಮತ್ತು ವೃತ್ತಿಪರತೆ ಮಾಧವನಿಗೆ ಅಚ್ಚರಿ ತರಿಸಿತು. ಆಕ್ಸಿಡೆಂಟ್ ಆದ ಹಲವೇ ನಿಮಿಷಗಳಲ್ಲಿ ಅದರ ಕುರುಹೂ ಸಿಗದಂತೆ ಎಲ್ಲವೂ ನಡೆದುಹೋಗಿತ್ತು.

ಸಿಗ್ನಲ್ಲಿನ ಪಕ್ಕದಲ್ಲಿ ಕುರಿಮರಿಗಳ ಹಾಗೆ ನಿಂತುಕೊಂಡಿದ್ದ ಇವರ ಬಳಿ, ಬಿಳಿ ಕಾರಿನ ಅಜ್ಜ ಬಂದು "ಇನ್ಶುರೆನ್ಸ್ ಗೆ ಫೋನ್ ಮಾಡಿದ್ರಾ? ಎಂದು ಕೇಳಿದಾಗ ಮಾಧವನಿಗೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವನಿಗೆ ಹುಲ್ಲು ಕಡ್ಡಿ ಸಿಕ್ಕಿದ ಹಾಗೆ ಸಂತೋಷವಾಯಿತು. ಪೋಲಿಸನದೇ ಸಹಾಯ ತೆಗೆದುಕೊಂಡು ಇನ್ಶುರೆನ್ಸ್ ಕಂಪನಿಗೆ ಫೋನ್ ಮಾಡಿ, ಆದದ್ದೆಲ್ಲವನ್ನೂ ವಿವರಿಸಿದ. ಕಂಪನಿ ರೆಪ್ರೆಸೆಂಟಿವ್ ಒಬ್ಬನನ್ನು ಕಳಿಸಿಕೊಡುತ್ತೇನೆಂದೂ, ಜಾಸ್ತಿ ಗಾಭರಿ ಬೀಳಬೇಡಿ ಎಂದು ಆ ಕಡೆ ಇದ್ದ ಕೋಕಿಲವಾಣಿ ಉಲಿಯಿತು. ಮಾಧವನಿಗೆ ಸ್ವಲ್ಪ ಸಮಾಧಾನವಾಯಿತು. ಪಕ್ಕದಲ್ಲೇ ಇದ್ದ ಅಜ್ಜ ಅಜ್ಜಿಯ ಹತ್ತಿರ ಮಾಧವ ಪರಿಪರಿಯಾಗಿ ಕ್ಷಮೆ ಬೇಡಿದ. ಅವರಿಬ್ಬರೂ ಅತ್ಯಂತ ಸಮಾಧಾನ ಚಿತ್ತರೂ, ಕರುಣಾಮಯಿಗಳಂತೆ ತೋರುತ್ತಿದ್ದರು. ಹೀಗೆ ಆಗುವುದು ಸಹಜ ಮತ್ತು ಇದೊಂದು ಆಕ್ಸಿಡೆಂಟ್ ಅಷ್ಟೇ ಎಂದು ಅವರು ಮಾಧವನಿಗೆ ಧೈರ್ಯ ಹೇಳಿದರು. ೧೫ ನಿಮಿಷಗಳಲ್ಲಿ ಇನ್ಶುರೆನ್ಸಿನವನು ಹಾಜರಾದ. ಬಂದವನೇ ಪೋಲಿಸಿನವನ ಹತ್ತಿರವೂ, ಅಜ್ಜ ಅಜ್ಜಿಯರ ಹತ್ತಿರವೂ ಏನೇನೊ ಮಾತನಾಡಿ, ಕೊನೆಯಲ್ಲಿ ಮಾಧವನ ಹತ್ತಿರ ಬಂದು "ಡೋಂಟ್ ವರಿ ಸರ್, ಐ ವಿಲ್ ಟೇಕ್ ಕೇರ್ ಆಫ್ ಎವೆರಿಥಿಂಗ್" ಎಂದು ಹೇಳಿ, ಯಾರ್ಯಾರಿಗೋ ಹತ್ತಾರು ಕರೆ ಮಾಡಿದ.ಅದಾದ ಮೇಲೆ ಪೋಲಿಸಿನವನು ಹೋಗಿಬಿಟ್ಟ.

ಇನ್ನೊಂದು ೨೦ ನಿಮಿಷ ಕಳೆಯುವುಷ್ಟರಲ್ಲಿ ಎಲ್ಲಾ ಸರಾಗವಾಗಿ ಮುಗಿದು ಹೋಯಿತು. ಎರಡು ಕಾರುಗಳನ್ನೂ, ಯಾವುದೋ ವಾಹನ ಬಂದು ಎತ್ತಾಕಿಕೊಂಡು ಹೋಯಿತು. ತನ್ನ ಕಾರಿನಲ್ಲೆಯೇ ಅಜ್ಜ ಅಜ್ಜಿಯರನ್ನೂ, ಮಾಧವ ಮತ್ತು ಉಮಾಪತಿಯರನ್ನೂ ಮನೆಗೆ ಬಿಡುವುದಾಗಿ ಇನ್ಶುರೆನ್ಸಿನವನು ಹತ್ತಿಸಿಕೊಂಡ. ಅಜ್ಜ ಅಜ್ಜಿಯರನ್ನು ಡೌನ್ ಟೌನಿನಲ್ಲಿ ಬಿಟ್ಟು ಕಾರು ಮತ್ತೆ ಉತ್ತರದ ಹೈವೇ ಹಿಡಿಯಿತು. ಇಳಿಯುವ ಮುನ್ನ ಅಜ್ಜ ಅಜ್ಜಿಯರಲ್ಲಿ ಮತ್ತೊಮ್ಮೆ ಮಾಧವ, ಆಗಿದ್ದೆಲ್ಲದ್ದಕ್ಕೂ ಕ್ಷಮೆ ಕೇಳಿದ. ಆ ವೃದ್ಧ ದಂಪತಿಗಳಿಗೆ ತನ್ನಿಂದಾದ ತೊಂದರೆಗಳನ್ನೆಲ್ಲ ನೆನೆಸಿಕೊಂಡು ಮಾಧವನಿಗೆ ತುಂಬಾ ಕೆಟ್ಟದನಿಸಿತು. ಆದರೆ ಪರಿ ಪರಿಯಾಗಿ ಕ್ಷಮೆ ಕೇಳುವುದನ್ನು ಬಿಟ್ಟರೆ ಇನ್ನೇನೂ ಅವನು ಮಾಡಲು ಸಾಧ್ಯವಿರಲಿಲ್ಲ.

ದಾರಿಯಲ್ಲಿ ಇನ್ಶುರೆನ್ಸಿನವನು ಸುಮ್ಮನೆ ಮಾಧವನನ್ನು ಹಲವಾರು ಪ್ರಶ್ನೆ ಕೇಳಲು ಶುರು ಮಾಡಿದ.ಮಾಧವನಿಗೆ ಏನನ್ನೂ ಹೇಳಲು ಮೂಡಿರಲಿಲ್ಲ.ಆದರೂ ಅವನು ಕೇಳಿದ್ದಕ್ಕೆಲ್ಲದ್ದಕ್ಕೂ ಚುಟುಕಾಗಿ ಉತ್ತರಿಸಿದ.ಹಿಂದೆ ಕುಳಿತಿದ್ದ ಉಮಾಪತಿ ಇನ್ನೂ ದಿಗ್ಭ್ರಮೆಯಲ್ಲೇ ಇದ್ದ ಹಾಗಿತ್ತು. ಮಾತಾಡುತ್ತಾ ಮಾಧವನಿಗೆ ಅವನು ಚೈನಾದಿಂದಾ ಬಹಳ ಹಿಂದೆಯೇ ಬಂದು ಇಲ್ಲಿ ಸೆಟಲ್ ಆಗಿರುವುದಾಗಿಯೂ, ಈ ಕಂಪನಿಯಲ್ಲಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವುದಾಗಿಯೂ ತಿಳಿದುಬಂತು. ಕಾರನ್ನು ೨೪೯ ನೆಯ ಎಕ್ಸಿಟ್ಟಿನಲ್ಲಿ ಬಲಕ್ಕೆ ಹೊರಳಿಸಲು ಹೇಳಿ, ಮಾಧವ ಅವನಿಗೆ ತನ್ನ ಅಪಾರ್ಟಮೆಂಟಿನ ದಾರಿಯನ್ನು ನಿರ್ದೇಶಿಸಲು ತೊಡಗಿದ.ಇನ್ನೇನು ಕಾರು ಬಲಕ್ಕೆ ತಿರುಗಿ ಅಪಾರ್ಟಮೆಂಟಿನೊಳಕ್ಕೆ ತಿರುಗಬೇಕು ಅನ್ನುವುಷ್ಟರಲ್ಲಿ, ಅಪಾರ್ಟಮೆಂಟಿನಿಂದ ಹೊರಕ್ಕೆ ಬರುತ್ತಿದ್ದ ಕಾರೊಂದು ಅತೀ ವೇಗದಲ್ಲಿ ಮುನ್ನುಗ್ಗಿ ಬರುತ್ತಿದ್ದುದ್ದು ಡ್ರೈವರಿನ ಸೀಟಿನಲ್ಲಿದ್ದ ಚೀನಿಯವನಿಗೂ, ಪಕ್ಕ ಕುಳಿತಿದ್ದ ಮಾಧವನಿಗೂ ಕಂಡಿತು. ಅದನ್ನು ನೋಡಿದ ತಕ್ಷಣವೇ ಮಾಧವನ ಬಾಯಿಂದ "ಸ್ಟಾಪ್" ಎಂಬ ಸಣ್ಣ ಚೀತ್ಕಾರ ಅವನಿಗರಿವಿಲ್ಲದಂತೆಯೇ ಹೊರಬಿದ್ದಿತು. ಏನಾಗುತ್ತಿದೆ ಎಂದು ಅರಿವಾಗುವುದರಲ್ಲೇ, ಮಾಧವನ ನಿರೀಕ್ಷೆಗೆ ತದ್ವಿರುದ್ಧವಾಗಿ, ಅವನ ಕಾರು ಭಯಂಕರ ವೇಗದಲ್ಲಿ ಮುನ್ನುಗ್ಗಿ, ಎದುರಿಗೆ ಬರುತ್ತಿದ್ದ ಕಾರನ್ನು ಸವರಿಕೊಂಡಂತೆಯೇ ಚಲಿಸಿ, ಬಲ ರಸ್ತೆಯಲ್ಲಿ ಹೋಗುವುದರ ಬದಲು ಎಡ ಬದಿಯ ರಸ್ತೆಯಲ್ಲೇ ಇನ್ನೂ ಸುಮಾರು ಮುಂದೆ ಹೋಯಿತು. ಈ ಕಾರು ಮುನ್ನುಗ್ಗಿದ ವೇಗಕ್ಕೆ ಹೆದರಿದ ಎದುರು ಬದಿ ಕಾರಿನವನು ತಕ್ಷಣವೇ ಬ್ರೇಕ್ ಹಾಕಿ ದೊಡ್ಡದಾಗಿ ಹಾರ್ನ್ ಮಾಡಿದ್ದು ಮಾಡಿದ್ದು ಮಾತ್ರ ಮೂರೂ ಜನರ ಅನುಭವಕ್ಕೆ ಬಂತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಉಮಾಪತಿ, ಕಾರು ನುಗ್ಗಿದ ವೇಗಕ್ಕೆ ಅಪ್ರತಿಭನಾಗಿ ಕಿಟಾರನೆ ಕಿರಿಚಿಕೊಂಡ. ಆ ಕ್ಷಣದ ಒತ್ತಡದಲ್ಲಿ ಚೀನಿಯವನೂ ಕೂಡ ಮಾಧವನ ತರಾನೇ ಬ್ರೇಕ್ ಒತ್ತುವುದರ ಬದಲು ಬಲವಾಗಿ ಎಕ್ಸಲರೇಟರನ್ನು ಒತ್ತಿಬಿಟ್ಟಿದ್ದ. ಆದರೆ ಮಾಧವನಿಗೆ ತಕ್ಷಣವೇ ಚೀನೀ ಮಾಡಿದ ತಪ್ಪಿನ ಅಂದಾಜಾಗಿ ಹೋಗಿತ್ತು. ಅಸಾಧ್ಯ ಟೆನ್ಶನಿನಲ್ಲಿದ್ದ ಅವನನ್ನು ಉದ್ದೇಶಿಸಿ, ಮಾಧವ ತಣ್ಣನೆಯ ದನಿಯಲ್ಲಿ ಬ್ರೇಕ್, ಬ್ರೇಕ್ ಎಂದು ಎರಡು ಸಲ ಕೂಗಿದ. ಪುಣ್ಯಕ್ಕೆ ಎದುರಿನಿಂದ ಯಾವುದೇ ವಾಹನ ಬರುತ್ತಿರಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋದ ಮೇಲೆ ಚೀನಿಯವನಿಗೂ ಅಂತೂ ಕಾರು ಹಿಡಿತಕ್ಕೆ ಸಿಕ್ಕಿತು. ವೇಗ ತಗ್ಗಿಸಿ, ಮೆಲ್ಲಗೆ ಬ್ರೇಕ್ ಹಾಕಿ, ಪಕ್ಕಕ್ಕೆ ತಿರುಗಿಸಿ ಖಾಲಿ ಇದ್ದ ಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಿ ನಿಟ್ಟುಸಿರು ಬಿಟ್ಟ, ಅವನ ಕೈಕಾಲುಗಳೂ ನಡುಗುತ್ತಿದ್ದವು. ಅವನ ಪರಿಸ್ಥಿತಿಯನ್ನು ನೋಡಿ ಮಾಧವನಿಗೆ ಜೋರಾಗಿ ನಗು ಬಂತು. ಹ್ಯಾಪು ಮೋರೆ ಹಾಕಿಕೊಂಡಿದ್ದ ಚೀನಿಯವನನ್ನೂ, ಹೆದರಿ ಗುಬ್ಬಚ್ಚಿಯಂತಾದ ಉಮಾಪತಿಯನ್ನೂ ಒಮ್ಮೆ ನೋಡಿ, ಕುಳಿತಲ್ಲೆಯೇ ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗಲು ಶುರುಮಾಡಿಬಿಟ್ಟ. ಉಮಾಪತಿಗೆ ಮಾತ್ರಾ, ಇಂಥ ಪರಿಸ್ಥಿತಿಯಲ್ಲೂ ನಗುತ್ತಿರುವ ಮಾಧವನನ್ನು ಕಂಡು ಸಿಕ್ಕಾಪಟ್ಟೆ ಸಿಟ್ಟು ಬಂತು. ಆದರೆ ಎದುರಿಗೇ ಚೀನಿಯವನು ಕುಳಿತಿದ್ದರಿಂದ ಸಿಟ್ಟನ್ನು ಅದುಮಿಕೊಂಡು, ಏನು ಮಾಡಬೇಕೆಂದು ಗೊತ್ತಾಗದೇ ತಾನೂ ಮಾಧವನ ನಗುವಿಗೆ ದನಿಗೂಡಿಸಿದ.

Wednesday, March 5, 2008

ಎಲ್ಲೆಲ್ಲೂ ಸಂಗೀತವೇ...

ಸಿನೆಮಾ ಗೀತೆಗಳಲ್ಲಿ ಶುದ್ಧ ಶಾಸ್ತ್ರೀಯ ಸಂಗೀತದ ಛಾಯೆಯಿರುವ ಗೀತೆಗಳು ಬಹಳೇ ಬಹಳ ಕಮ್ಮಿಯಿವೆ ಎಂಬುದು, ನನ್ನಂತೆ ಇನ್ನೂ ಹಲವರ ಕೊರಗು. ಆದರೂ ಅಲ್ಲಲ್ಲಿ ಒಂದೆರಡು ಅತ್ಯುತ್ತಮ ರಚನೆಗಳು ಮನಸೂರೆಗೊಳ್ಳುತ್ತವೆ. ನನಗೆ ಅತ್ಯಂತ ಇಷ್ಟವಾದ ಮೂರು ಉತ್ತಮ ಹಾಡುಗಳನ್ನು ದಕ್ಷಿಣ ಭಾರತ ಸಿನೆಮಾಗಳಿಂದ ಆಯ್ದು ಇಲ್ಲಿ ಹಾಕಿದ್ದೇನೆ. ಬಿಡುವಿನ ಸಮಯದಲ್ಲಿ ನೀವೂ ಕೇಳಿ ಆನಂದಿಸಿ.

ಮೊದಲನೆಯದು, ಡಾ.ರಾಜ್ ಕುಮಾರ್ ನಟಿಸಿದ ಜೀವನ ಚೈತ್ರ ಚಿತ್ರದ "ನಾದ ಮಯ ಈ ಲೋಕವೆಲ್ಲಾ’ ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಆಗಲೇ ಕೇಳಿರುತ್ತೀರಿ. ಈ ಹಾಡಿಗೆ ೧೯೯೩ ರಲ್ಲಿ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇನ್ನೂ ಗಾಯನ ಮತ್ತು ಅಣ್ಣಾವ್ರ ನಟನೆ ಬಗ್ಗೆ ನನಗೇನೂ ಹೇಳಲು ಉಳಿದಿಲ್ಲ. ಹಾಡು ಕೇಳಿ ಮುಗಿಯುತ್ತಿದ್ದಂತೆಯೇ ಮಂತ್ರಮುಗ್ಧವಾಗಿ ಸರಸ್ವತಿಯ ಪರವಶವಾಗುವುದರಲ್ಲಿ ಸಂಶಯವೇ ಇಲ್ಲ. ವಿಶೇಷವೆಂದರೆ ಈ ಹಾಡು ಅತ್ಯಂತ ಕ್ಲಿಷ್ಟವಾದ ರಾಗದಲ್ಲಿ (ತೋಡಿ) ರಚನೆಯಾಗಿದ್ದುದರಿಂದ ಹಾಡುವುದು ಅತ್ಯಂತ ಕಠಿಣವೆಂದು ಬಲ್ಲಿದರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅಣ್ಣಾವ್ರ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿಯೇ ನಲಿಯುತ್ತಿದೆ ಎಂಬಷ್ಟು ಸೊಗಸಾಗಿದೆ ಮೂಡಿ ಬಂದಿದೆ.

ಎರಡನೆಯದು ವಾಣಿ ಜಯರಾಮ್ ಹಾಡಿದ "ಆನತಿ ನೀಯರಾ" ಎಂಬ ಹಾಡು. ತೆಲುಗಿನ "ಸ್ವಾತಿ ಕಿರಣಮ್" ಚಿತ್ರದ ಈ ಗೀತೆಗೆ ೧೯೯೨ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. "ಕಲಾ ತಪಸ್ವಿ" ಎಂದೇ ಖ್ಯಾತರಾದ ಕೆ.ವಿಶ್ವನಾಥ್ ಅವರು ಇಂಥ ಹಲವಾರು ಸದಭಿರುಚಿಯ ಚಿತ್ರಗಳನ್ನು (ಶಂಕರಾಭರಣಂ, ಸಾಗರ ಸಮ್ಮುಖಂ..) ತೆಲುಗಿನಲ್ಲಿ ನೀಡುತ್ತಲೇ ಬಂದಿದ್ದಾರೆ. ವಾಣಿ ಜಯರಾಂ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಹಲವಾರು ಶಾಸ್ತ್ರೀಯ ಹಿನ್ನೆಲೆಯ ಹಾಡುಗಳಿಗೆ ಅವರು ಧ್ವನಿ ಒದಗಿಸಿದ್ದಾರೆ. ಈ ಹಾಡಲ್ಲಿ ನಟಿಸಿದವರು,ಕನ್ನಡದವರೇ ಆದ ಮಾ.ಮಂಜುನಾಥ್ ಅವರು. ಹಾಡುತ್ತಿರುವಾಗ ಅವರ ತುಟಿ ಚಲನೆ, ಹಾವಭಾವ, ಗತ್ತು ಎಲ್ಲವನ್ನೂ ಒಮ್ಮೆ ಗಮನಿಸಿ. ವಾಣಿ ಜಯರಾಂ ಅವರ ಕಂಠಕ್ಕೆ ಅತ್ಯುತ್ತಮವಾದ ನ್ಯಾಯವನ್ನು ಅವರು ಹಾಡಿನಲ್ಲಿ ಸಲ್ಲಿಸಿದ್ದಾರೆ.ಈ ಚಿತ್ರವೆಲ್ಲಾದರೂ ಸಿಕ್ಕರೆ ತಪ್ಪದೇ ನೋಡಿ. ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಚಿತ್ರದ ಸಂಗೀತ ನಿರ್ದೇಶಕರು ಕೆ.ವಿ.ಮಹಾದೇವನ್.

ಮೂರನೆಯದು, ಮಲಯಾಳಮ್ಮಿನ "ಹಿಸ್ ಹೈನೆಸ್ ಅಬ್ದುಲ್ಲಾ" ಚಿತ್ರದ "ನಾದರೂಪಿಣೀ’ ಎಂಬ ಹಾಡು. ಹಾಡಿದವರು ಎಂ.ಜಿ.ಶ್ರೀಕುಮಾರ್. ಈ ಹಾಡಿಗೆ ೧೯೯೧ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ವೀಡಿಯೋದ ಗುಣಮಟ್ಟ ಅಷ್ಟೊಂದೇನೂ ಚೆನ್ನಾಗಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ. ಆದರೆ ಹಾಡು ಮಾತ್ರ ಸೂಪರ್.ಸಂಗೀತ ನೀಡಿದವರು ರವೀಂದ್ರನ್ ಮಾಸ್ಟರ್. ಈ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ.

ಈ ಮೂರು ಹಾಡುಗಳು ೧೯೯೦-೧೯೯೩ ರ ಮಧ್ಯೆ ಬಿಡುಗಡೆಯಾಗಿದ್ದು ಒಂದು ವಿಶೇಷ. ಮೂರೂ ಹಾಡುಗಳ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಸಾಹಿತ್ಯ ಅರ್ಥವಾಗದಿದ್ದರೂ ರಸಾಸ್ವಾದನೆಗೆ ಕಷ್ಟವಾಗಲಾಗದು. ಹಾಡುಗಳು ನಿಮಗೂ ಇಷ್ಟವಾದರೆ ನನಗೆ ಸಂತೋಷ!

Saturday, March 1, 2008

ನೀನಿಲ್ಲದೇ ಬಾಳೊಂದು ಬಾಳೇ..

ಹಿಂದೊಮ್ಮೆ ಇದೇ ಲೇಖನವನ್ನು ಹಾಕಿದ್ದೆ. ಎರಡು ಮೂರು ವರುಷಗಳ ಹಿಂದೆ ಯಾರೋ ಕಳಿಸಿದ್ದ ಇ-ಮೈಲ್(ಆಂಗ್ಲ ಭಾಷೆಯಲ್ಲಿದ್ದ) ಅನ್ನು ಸ್ವಲ್ಪ ನೇಟಿವಿಟಿ ಬದಲಿಸಿ, ಕನ್ನಡಕ್ಕೆ ತರ್ಜುಮೆ ಮಾಡಿ ಬರೆದಿದ್ದೆ. ಆಂಗ್ಲ ಭಾಷೆಯಲ್ಲಿದ್ದ ಕಥೆಯ ಮೂಲ ಲೇಖಕರು ಯಾರು ಎಂಬುದು ನನಗೆ ಗೊತ್ತಿಲ್ಲ. ಬಹುಷ: ಮೇಲ್ ಬಾಕ್ಸಿಂದ ಮೇಲ್ ಬಾಕ್ಸಿಗೆ ಹರಿದಾಡುವ ಈ ಮೇಲ್ ಗಳನ್ನು ಟ್ರಾಕ್ ಮಾಡುವುದು ಸಾಧ್ಯವಿಲ್ಲವೇನೋ. ಇದರ ಆಂಗ್ಲ ಮೂಲ ಲೇಖಕರು ಯಾರೆಂದು ನಿಮಗೆ ತಿಳಿದಿದ್ದರೆ, ದಯವಿಟ್ಟು ತಿಳಿಸಿ.

-ಮಧು

ನನ್ನ ಮದುವೆ ಅಷ್ಟೊಂದೇನೂ ವಿಜೃಂಭಣೆಯಿಂದ ನಡೆದಿರಲಿಲ್ಲ. ಅಪ್ಪ ಅಮ್ಮ ನೋಡಿದ ಹುಡುಗಿಯನ್ನೇ ನಾನು ಮದುವೆಯಾಗಿದ್ದು. ಅವಳು ಬೆಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಕೆಮೆಷ್ಟ್ರಿ ಲೆಕ್ಚರರ್ ಆಗಿದ್ದಳು. ಜಾತಕ ಚೆನ್ನಾಗಿ ಹೊಂದುತ್ತೆ ಅಂತ ಅಪ್ಪ ಖುಶಿಯಾಗಿದ್ದರು. ಅಪ್ಪ ಅಮ್ಮ ಅವಳ ಮನೆಗೆ ಹೋಗಿ ನೋಡಿ ಬಂದ ಮೇಲೆ ನಾನು ವೀಡಿಯೋ ಕಾನ್ಫ಼ರೆನ್ಸ್ ಮೂಲಕ ಅವಳ ಜೊತೆ ಮಾತಾಡಿದ್ದೆ. ಅತ್ಯಂತ ವಿನಯದಿಂದ, ಹೆಸರಿಗೆ ತಕ್ಕಂತೆ ಸೌಜನ್ಯದಿಂದ ಮಾತಾಡಿದ ಅವಳು ನನಗೆ ತುಂಬಾ ಹಿಡಿಸಿದ್ದಳು.

ಎಂಗೇಜಮೆಂಟ್ ಏನೂ ನಡೆದಿರಲಿಲ್ಲ. ಮದುವೆ ೧೫ ದಿನಗಳ ಒಳಗೇ ಎಂದು ನಿರ್ಧಾರವಾಗಿತ್ತು. ನನಗೆ ರಜೆ ಸಿಗುವುದು ಬಹಳ ಕಷ್ಟವಾಗಿತ್ತು. ಹೇಗೋ ಒಂದು ೧೦ ದಿನಾ ರಜೆ ಹೊಂದಿಸಿ ಮದುವೆಗೆ ಹೋಗಿ ಬಂದಿದ್ದೆ. ಮದುವೆಯಾದ ನಾಲ್ಕನೆಯ ದಿನವೇ ನಾನು ಅವಳನ್ನು ಕರೆದುಕೊಂಡು ವಾಪಸ್ ಬಂದೂ ಇದ್ದೆ. ಪ್ಲೇನಿನಲ್ಲಿ ಇವಳು ನನ್ನ ಜೊತೆ ಜಾಸ್ತಿ ಮಾತಾಡಿರಲಿಲ್ಲ. ಮದುವೆಯಾದ ಇಷ್ಟು ಬೇಗನೇ ಅಪ್ಪ,ಅಮ್ಮ ಎಲ್ಲರನ್ನೂ ಬಿಟ್ಟು ಬಂದು ಬೇಸರವಾಗಿರಬಹುದೆಂದೆಣಿಸಿ ನಾನೂ ಅವಳನ್ನು ಜಾಸ್ತಿ ಮಾತಾಡಿಸಲು ಹೋಗಿರಲಿಲ್ಲ. ಆದರೇ ಇಲ್ಲಿಗೆ ಬಂದ ಎರಡು ದಿನವಾದರೂ ಅವಳ ಮೂಡ್ ಇನ್ನೂ ಹಾಗೇ ಇತ್ತು. ಆ ಎರಡು ದಿನ ನನಗೆ ಆಫ಼ೀಸ್ ನಲ್ಲಿ ತುಂಬಾ ಕೆಲಸವಿದ್ದುದರಿಂದ ಅವಳ ಬಗ್ಗೆ ಜಾಸ್ತಿ ಗಮನವಹಿಸಲೂ ಆಗಿರಲಿಲ್ಲ. ಹೋಮ್ ಸಿಕ್ ನಿಂದ ಹೊರಬರಲು ಯಾರಿಗಾದರೂ ಸ್ವಲ್ಪ ದಿನ ಬೇಕಾಗುತ್ತೆ ಎಂದನಿಸಿ ಸುಮ್ಮನಿದ್ದೆ.
ಮಾರನೇ ದಿನ ಅವಳ ಪಕ್ಕ ಕುಳಿತುಕೊಂಡು ಕೇಳಿದೆ
"ಏನಾಯ್ತು ? ಅಮ್ಮಾವ್ರು ತುಂಬಾ ಬೇಜಾರಲ್ಲಿದೀರಾ ?"
"ನನ್ನನ್ಯಾಕೆ ಇಲ್ಲಿಗೆ ಕರೆದುಕೊಂಡು ಬಂದ್ರಿ ?". ಇದೊಳ್ಳೇ ತಮಾಷೆಯಾಯಿತಲ್ಲಪ್ಪಾ ಎಂದನಿಸಿ ಕೇಳಿದೆ
"ಅಂದ್ರೆ ? ಏನಾಯ್ತು ಈಗ ?"
"ನಾನು ಮನೆಗೆ ಹೋಗಬೇಕು "
"ಇದೇ ನಿನ್ನ ಮನೆ""ಇಲ್ಲಾ, ಇದು ನನ್ನ ಮನೆಯಲ್ಲಾ. ನನ್ನ ಮನೆ ಬೆಂಗಳೂರಿನಲ್ಲಿದೆ. ಪ್ಲೀಸ್, ನನ್ನ ಕಳಿಸಿಕೊಡಿ"
"ನೋಡು, ನೀನು ಹೋಮ್ ಸಿಕ್ ಆಗಿದೀಯಾ. ಒಂದು ಎರಡು ದಿನ ಅಷ್ಟೇ, ಆಮೇಲೆ ಎಲ್ಲಾ ಸರಿಹೋಗುತ್ತೆ. ನಾನು ಮೊದಲು ಇಲ್ಲಿಗೆ ಬಂದಾಗ ನನಗೂ ಹೀಗೆ ಆಗಿತ್ತು. ನನಗೆ ಈ ವಾರ ಸ್ವಲ್ಪ ಕೆಲಸ ಜಾಸ್ತಿ ಇತ್ತು. ಅದಕ್ಕೆ ನಿನ್ನ ಜೊತೆ ಕಾಲ ಕಳೆಯಕ್ಕೆ ಆಗ್ಲಿಲ್ಲ. ಈ ವೀಕೇಂಡ್ ನನ್ನ ಫ್ರೆಂಡ್ಸ್ ಮನೆಗೆ ಕರ್ಕೊಂಡು ಹೋಗ್ತಿನಿ. ಅವರ ಜೊತೆ ಇದ್ದರೆ ನಿಂಗೆ ಸ್ವಲ್ಪ ಬೋರ್ ಕಮ್ಮಿ ಆಗುತ್ತೆ"
"ಇಲ್ಲಾ, ನಂಗೆ ಈ ಜಾಗ ಇಷ್ಟನೇ ಆಗ್ಲಿಲ್ಲ. ಅಪ್ಪ, ಅಮ್ಮ, ಕಾಲೇಜು ಎಲ್ಲಾದನ್ನೂ ತುಂಬಾ ಮಿಸ್ ಮಾಡ್ಕೊಂತಾ ಇದೀನಿ ನಾನು. ನಾನು ವಾಪಸ್ ಹೋಗ್ತಿನಿ"
"ನೋಡು, ಸ್ವಲ್ಪ ತಣ್ಣಗೆ ಕುಳಿತುಕೊಂಡು ಯೋಚನೆ ಮಾಡು. ಏನನ್ಕೊಂಡಿದೀಯಾ ನೀನು ? ಏನು ನಿನ್ನ ಪ್ಲಾನು ? ಈಗ ಹೋಗ್ತಿನಿ ಅಂತಿದೀಯಾ,ಮತ್ತೆ ವಾಪಸ್ ಯಾವಾಗ ಬರ್ತಿದೀಯಾ ?"
"ನಾನು ವಾಪಸ್ ಬರಲ್ಲ"
ನನಗೆ ರೇಗಿ ಹೋಯಿತು. ನನಗೆ ಗೊತ್ತಿಲ್ಲದಂತೆಯೇ, ನನ್ನ ಧ್ವನಿ ದೊಡ್ಡದಾಯಿತು.
"ನಿಂಗೆ ತಲೆ ಕೆಟ್ಟಿದೆಯಾ?"
"ನೀವು ಹಾಗನ್ಕೊಂಡ್ರೆ ನಾನೇನೂ ಮಾಡಕ್ಕಾಗಲ್ಲ". ನನಗೆ ಈಗ ತಲೆ ಸಂಪೂರ್ಣವಾಗಿ ಕೆಟ್ಟು ಹೋಯಿತು. ನಿಧಾನಕ್ಕೆ ಕೇಳಿದೆ.
"ಹೋಗ್ಲಿ, ನಿನ್ನ ಮನಸ್ಸಿನಲ್ಲಿ ಬೇರೆ ಯಾರಾದರೂ ಇದ್ದಾರಾ?"
"ಇಲ್ಲ. ನಂಗೆ ವಾಪಸ್ ಹೋಗಬೇಕು. ನೀವು ಕಳಿಸ್ಲಿಲ್ಲಾ ಅಂದ್ರೆ ನಾನು ೯೧೧ ಗೆ ಕಾಲ್ ಮಾಡ್ತಿನಿ"

ನಂಗ್ಯಾಕೋ ಇದು ಹುಚ್ಚರ ಸಹವಾಸ ಎಂದೆನಿಸಿತು. ಹಾಗೆ ಸ್ವಲ್ಪ ಸಿಟ್ಟೂ ಬಂತು.
" ಮದುವೆ ಅಂದ್ರೆ ಮಕ್ಕಳಾಟ ಅಂದ್ಕೊಂಡಿದೀಯಾ ನೀನು? ನಿನ್ನ ಅಪ್ಪ ಅಮ್ಮ, ನನ್ನ ಅಪ್ಪ ಅಮ್ಮನ ಬಗ್ಗೆ ಯೋಚನೆ ಮಾಡು. ಮದುವೆಯಾಗಿ ಇನ್ನು ೧೦ ದಿನ ಆಗಿಲ್ಲಾ. ಆವಾಗ್ಲೇ ವಾಪಸ್ ಹೋಗ್ತಿನಿ ಅಂತಿದಿಯಲ್ಲಾ, ಮದುವೆಯಾಗಬೇಕಾದ್ರೆ ಇಲ್ಲಿಗೆ ಬರಬೇಕು ಅಂತ ಗೊತ್ತಿರಲಿಲ್ವಾ ನಿನಗೆ ? ವಾಪಸ್ ಬರಲ್ಲಾ ಅಂತಿದೀಯ. ನಮ್ಮ ಮದುವೆ ಕತೆ ಎನಾಗುತ್ತೆ ?" ಎಂದೆಲ್ಲಾ ರೇಗಿದೆ.
"ನಾನು ನಿಮ್ಮ ಮೇಲೆ ತಪ್ಪು ಹೊರಿಸ್ತಾ ಇಲ್ಲ. ತಪ್ಪೆಲ್ಲಾ ನಂದೇ. ನಾನು ಅಪ್ಪ ಅಮ್ಮನ್ನ ಬಿಟ್ಟು ಇಷ್ಟು ದೂರದ ಊರಲ್ಲಿ ಒಬ್ಬನೇ ಇರಲಾರೆ. ನಿಮಗೆ ಮದುವೆ ಉಳಿಸಿಕೋಬೇಕಿದ್ರೆ, ನೀವೇ ಬೆಂಗಳೂರಿಗೆ ಬನ್ನಿ" ಅಂತೆಂದು ದೊಡ್ಡದಾಗಿ ಅಳುತ್ತಾ ಎದ್ದು ಹೋಗಿಬಿಟ್ಟಳು.


ನನಗೀಗ ಏನು ಮಾಡಬೇಕೆಂದೇ ತೋಚಲಿಲ್ಲ. ಅವಳು ತಮಾಷೆ ಮಾಡುತ್ತಿದ್ದಾಳೆಂದು ನನಗೆ ಅನ್ನಿಸಲಿಲ್ಲ. ಇಷ್ಟು ಸಾಲದೆಂಬಂತೆ ಇಡೀ ದಿನ ಮಕ್ಕಳ ತರಹ ಅಳುತ್ತಾನೇ ಇದ್ದಳು. ನನಗ್ಯಾಕೋ, ನಾನು ಬಹಳ ತಪ್ಪು ಮಾಡಿಬಿಟ್ಟೆ ಅನ್ನಿಸತೊಡಗಿತು. ಮನೆಗೆ ಫೋನ್ ಮಾಡಿದೆ. ಅಪ್ಪ ಅಮ್ಮ ಏನು ಹೇಳಿಯಾರು ? ಅವರಿಗೂ ತುಂಬಾ ಶಾಕ್ ಆಗಿತ್ತು. ನೀನೇನೂ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಸಹಮತವಿದೆ ಎಂದರು ಅಷ್ಟೇ. ಅವಳ ಮನೆಗೂ ಫೋನ್ ಮಾಡಿದೆ. ಅತ್ತೆ, ಮಾವನೂ ಅವಳಿಗೆ ತಿಳಿಹೇಳಲು ಪ್ರಯತ್ನಿಸಿದರು. ಇವಳದ್ದು ಒಂದೇ ಹಠ. ತಾನು ವಾಪಸ್ ಬರ್ತೀನಿ ಅಂತ. ಅಳುವುದನ್ನು ಮಾತ್ರ ನಿಲ್ಲಿಸಲಿಲ್ಲ. ಎಲ್ಲರೂ ಸಂಪೂರ್ಣವಾಗಿ ನಿಸ್ಸಹಾಯಕರಾಗಿದ್ದರು.

ಅವಳು ಮನಸ್ಸು ಬದಲಾಯಿಸಬಹುದೆನೋ ಅಂತ ನಾನು ಇನ್ನೆರಡು ದಿನ ಕಾಯ್ದೆ. ಅಳುವುದನ್ನು ಬಿಟ್ಟು ಇನ್ನೇನೂ ಮಾಡಿರಲಿಲ್ಲ ಅವಳು, ಈ ಎರಡು ದಿನಗಳಲ್ಲಿ. ನನಗೆ ರ್‍ಓಸಿ ಹೋಗಿ, ೨೦೦೦ ಡಾಲರ್ ತೆತ್ತು ಮಾರನೆಯ ದಿನವೇ ಅವಳ ಟಿಕೆಟ್ ಬುಕ್ ಮಾಡಿ ತಂದು ಅವಳಿಗೆ ತೋರಿಸಿದೆ. ಅವಳಿಗೆ ಅಷ್ಟೊಂದೇನೂ ಸಂತಸವಾದ ಹಾಗೆ ಕಾಣಲಿಲ್ಲ. ಆದರೆ ಅಳುವುದನ್ನು ನಿಲ್ಲಿಸಿದ್ದಳು. ಭಾರದ ಮನಸ್ಸಿನಿಂದ ಅವಳನ್ನು ಏರ್ ಪೋರ್ಟಲ್ಲಿ ಬಿಟ್ಟು, ಕೈಯಲ್ಲಿ ಟಿಕೆಟ್ ತುರುಕಿ ವಾಪಸ್ ಬಂದೆ. ತೀರ ಹೋಗುವಾಗ ಒಮ್ಮೆ ಹಿಂದಿರುಗಿ ಕೈ ಬೀಸುತ್ತಾಳೇನೋ ಅಂದುಕೊಂಡವನಿಗೆ ಅಲ್ಲೂ ನಿರಾಶೆ ಕಾದಿತ್ತು.
ಅವಳು ಹೋದ ಮೇಲೆ ನನಗೆ ಮನಸ್ಸೆಲ್ಲಾ ಖಾಲಿ ಖಾಲಿ ಅಂದೆನಿಸಲು ಶುರುವಾಯಿತು. ಅವಳು ನನ್ನ ಜೊತೆ ಹೆಚ್ಚೆಂದರೇ ೧೦ ದಿನ ಇದ್ದಳಷ್ಟೇ, ಆದರೂ ಏನೋ ಕಳೆದುಕೊಂಡ ಭಾವ ಇಡೀ ದಿನ ಕಾಡುತ್ತಲೇ ಇತ್ತು. ಎರಡು ದಿನದ ಬಳಿಕ ಅವಳ ಮನೆಗೆ ಫೋನ್ ಮಾಡಿದೆ. ಅವಳ ಅಪ್ಪ ಅಮ್ಮ ಒಂದೆ ಸಮನೇ ನನ್ನ ಹತ್ತಿರ ಕ್ಷಮೆ ಕೇಳುತ್ತಿದ್ದರು. ಇವಳು ನನ್ನ ಹತ್ತಿರ ಮಾತಾಡಲೂ ಇಲ್ಲ. ಈ ಹಠಮಾರಿಯನ್ನು ಕಟ್ಟಿಕೊಂಡು ಬಾಳು ಬಹಳ ಕಷ್ಟವೆನಿಸಿತು ನನಗೆ. ಅರೇಂಜ್ಡ್ ಮ್ಯಾರೇಜ್ ಗಳ ಬಗ್ಗೆ ನನಗೆ ಸಂಪೂರ್ಣವಾಗಿ ನಂಬಿಕೆ ಹಾರಿಹೋಯಿತು. ಹಿಂದೆ ನನ್ನ ಕ್ಲಾಸ್ ಮೇಟ್ ಆಗಿದ್ದ ಒಂದಿಬ್ಬರು ಹುಡುಗಿಯರು ನನಗೆ ಇಷ್ಟವಾಗಿದ್ದರು. ಆದರೆ ಯಾರನ್ನೂ ಮದುವೆಯಾಗಬೇಕೆಂದು ಅನ್ನಿಸಿರಲಿಲ್ಲ. ಇವಳನ್ನು ನೋಡಿದ ತಕ್ಷಣ ನಾನು ಮದುವೆಯಾಗಲು ಒಪ್ಪಿಕೊಂಡು ಬಿಟ್ಟಿದ್ದೆ. ನನ್ನ ಆಯ್ಕೆಯೇ ಸರಿಯಿಲ್ಲವೆಂದು ತೀವ್ರವಾಗಿ ಅನ್ನಿಸಲು ಶುರುವಾಯಿತು.

ಇನ್ನೊಂದು ವಾರವಾಗುತ್ತಿದಂತೆಯೇ, ನನಗೆ ಒಬ್ಬನೇ ಇರಲು ಬಹಳ ಕಷ್ಟವಾಯಿತು.ಪದೇ ಪದೇ ಅವಳ ನೆನಪು ಕಾಡುತ್ತಿತ್ತು. ನಾನೇ ಎಲ್ಲೋ ತಪ್ಪು ಮಾಡಿದೆನೆಂಬ ಗಿಲ್ಟ್ ಪದೇ ಪದೇ ಕಾಡಲು ಶುರುವಾಗಿ, ಮನಸ್ಸಿನ ನೆಮ್ಮದಿಯೇ ಹಾರಿ ಹೋಯಿತು. ಅವಳನ್ನು ಯಾವುದೇ ಕಾರಣಕ್ಕೆ ಬಿಡಬಾರದೆಂದು ನಿರ್ಧರಿಸಿ, ಕೆಲಸಕ್ಕೆ ರಾಜೀನಾಮೆ ನೀಡಿ ನಾನು ವಾಪಸ್ ಭಾರತಕ್ಕೆ ಹೋದೆ. ನಾನು ಹಿಂದಿರುಗುತ್ತಿದ್ದರ ಬಗ್ಗೆ ಯಾರಿಗೂ ಸೂಚನೆ ನೀಡಿರಲಿಲ್ಲ. ಬೆಳಿಗ್ಗೆ ಅಕ್ಕನ ಮನೆಯಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಸಾಯಂಕಾಲ ೪ ಗಂಟೆಯ ಹಾಗೆ ಅವಳ ಕಾಲೇಜಿನ ಹತ್ರ ಹೋದೆ. ಕಾಲೇಜಿನೊಳಕ್ಕೇ ಹೋಗಿ ಅವಳ ಬರ ಕಾಯಬೇಕೆನಿಸಿದರೂ, ಯಾಕೋ ಮನಸ್ಸಾಗಲಿಲ್ಲ. ಕಾಲೇಜ್ ಗೇಟ್ ನ ಬಳಿಯೆ ಸುಮ್ಮನೇ ನಿಂತುಕೊಂಡೆ. ಸುಮಾರು ಅರ್ಧ ಗಂಟೆಗಳ ಬಳಿಕ ಇವಳು ಕೈಯಲ್ಲಿ ದೊಡ್ಡದೊಂದು ಪೇಪರ್ ಬಂಡಲ್ ಹಿಡಿದುಕೊಂಡು ಸುಸ್ತಾದಂತೆ ನಡೆದು ಬಂದಳು. ನನ್ನನ್ನು ಅವಳು ಗಮನಿಸಿದ್ದಂತೆ ಕಾಣಿಸಲಿಲ್ಲ. ನಾನು ಸುಮ್ಮನೇ ಅವಳನ್ನು ಬಸ್ ಸ್ಟಾಂಡಿನ ತನಕ ಹಿಂಬಾಲಿಸಿದೆ. ಬಸ್ ಸ್ಟಾಂಡಿನಲ್ಲಿ ಅವಳು ನಿಂತ ತಕ್ಷಣವೇ "ಪೇಪರ್ ಬಂಡಲನ್ನು ನಾನು ಹಿಡಿದುಕೊಳ್ಲಾ?" ಅಂತ ಮೃದುವಾಗಿ ಕೇಳಿದೆ. ಹಿಂದುರುಗಿದ ಅವಳ ಕಣ್ಣುಗಳಲ್ಲಿದ್ದಿದ್ದು ಆಶ್ಚರ್ಯವೋ ಅಥವಾ ಸಂತಸವೋ, ನನಗೆ ಸರಿಯಾಗಿ ಗುರುತಿಸಲಾಗಲಿಲ್ಲ.ನಾನು ಸುಮ್ಮನೆ ನಕ್ಕೆ. ಅವಳ ಮುಖದ ತುಂಬೆಲ್ಲಾ ಸಾವಿರ ಪ್ರಶ್ನೆಗಳು. "ಒಂದು ವಾರ ನಿನ್ನ ಜತೆಯಲ್ಲೇ ಇರ್ತಿನಿ. ಬೆಂಗಳೂರು ನಂಗೆ ಹೊಸತೇನಲ್ಲ. ಆದರೂ ನನಗೆ ಈ ವಾರದಲ್ಲಿ, ನಿಂಗೆ ಇಷ್ಟವಾದ ಎಲ್ಲಾ ಜಾಗಗಳನ್ನು ತೋರಿಸ್ತೀಯಾ?" ಎಂದೆ. ಅವಳಿಗೆ ತುಂಬಾ ಸಂತೋಷವಾದಂತೆ ತೋರಿತು.



ಆ ಇಡೀ ವಾರ ಕಳೆದಿದ್ದೇ ಗೊತ್ತಾಗಲಿಲ್ಲ. ಅತ್ತೆ ಮಾವ ತುಂಬಾ ಒತ್ತಾಯ ಮಾಡಿದ್ದರಿಂದ ಆ ವಾರ ನಾನು ಅಲ್ಲೇ ಉಳಿದಿದ್ದೆ. ದಿನಾ ಸಂಜೆ ನಾನೇ ಅವಳನ್ನು ಒಂದೆರಡು ಒಳ್ಳೆಯ ಜಾಗಗಳಿಗೆ ಕರೆದುಕೊಂಡು ಹೋದೆ. ಬಹಳ ಲವಲವಿಕೆಯಿಂದ ನನ್ನ ಜೊತೆ ಮಾತನಾಡುತ್ತಿದ್ದಳು. ಮಕ್ಕಳ ತರ ರಚ್ಚೆ ಹಿಡಿದು, ಅತ್ತು ರಂಪ ಮಾಡಿದವಳು ಇವಳೇನಾ ಅಂತ ನನಗೆ ಆಶ್ಚರ್ಯವಾಗುವಷ್ಟು. ಅವಳನ್ನು ಮನೆಯಲ್ಲಿ ಮಕ್ಕಳ ತರವೇ ನೋಡಿಕೊಳ್ಳುತ್ತಿದ್ದರು. ಬೆಳಿಗ್ಗೆ ಏಳುತ್ತಿದ್ದಂತೆಯೆ ಕಾಫಿ ಬೆಡ್ ಬಳಿಯೇ ಸರಬರಾಜಾಗುತ್ತಿತ್ತು. ಅವಳು ಇವತ್ತು ಯಾವ ಡ್ರೆಸ್ ಹಾಕಿಕೊಳ್ಳುತ್ತಾಳೆ ಅನ್ನುವುದನ್ನೂ ಅವಳ ಅಮ್ಮನೇ ನಿರ್ಧರಿಸುತ್ತಿದ್ದಳು. ಅದಕ್ಕೆ ಇಸ್ತ್ರಿಯನ್ನೂ ಅವರೇ ಮಾಡಿ, ಇವಳು ಸ್ನಾನ ಮುಗಿಸಿ ಬರುವುದರೊಳಗೇ ರೆಡಿ ಮಾಡಿಟ್ಟಿರುತ್ತಿದ್ದರು. ಅಮ್ಮ ತಿಂಡಿ ಮಾಡಿಟ್ಟ ತಿಂಡಿಯನ್ನು ತಿಂದು, ಮನೆಯ ಬಳಿಯೇ ಬರುತ್ತಿದ್ದ ಕಾಲೇಜ್ ಬಸ್ ಏರಿ ಕಾಲೇಜಿಗೆ ಹೋಗುತ್ತಿದ್ದಳು. ಕಾಲೇಜಿನಲ್ಲಿ ದಿನಕ್ಕೆ ಮೂರೋ, ನಾಲ್ಕೋ ೪೫ ನಿಮಿಷದ ಪೀರಿಯಡ್ ಗಳನ್ನು ಮುಗಿಸಿ ಮತ್ತೆ ೪.೩೦ ರ ಹಾಗೆ ಮನೆಗೆ ವಾಪಸ್ ಬರುತ್ತಿದ್ದಳು. ಇಷ್ಟು ಮಾಡಿದ್ದಕ್ಕೇ, ಸಂಜೆ ಬರುವಷ್ಟರಲ್ಲೇ ಸುಸ್ತಾಗಿ ಬಿಡುತ್ತಿದ್ದಳು ಅವಳು. ಸಂಜೆ ಮನೆಗೆ ಬಂದ ಮೇಲೆ, ಅಮ್ಮ ಕೊಟ್ಟ ಕಾಫಿ ಕುಡಿದು, ಹರಟೆ ಹೊಡೆದು, ಟೀವಿಯಲ್ಲಿ ಬರುತ್ತಿದ್ದ ಕಾರ್ಯಕ್ರಮಗಳನ್ನೋ, ಧಾರಾವಾಹಿಗಳನ್ನೋ ನೋಡುತ್ತಾನೋ, ಹಾಡು ಕೇಳುತ್ತಾನೋ ಅವಳ ದಿನ ಮುಗಿದು ಹೋಗುತ್ತಿತ್ತು. ರಾತ್ರಿ, ಅವಳ ಹಾಸಿಗೆಯನ್ನೂ ಅವಳ ಅಮ್ಮನೇ ತಯಾರು ಮಾಡಬೇಕಾಗಿತ್ತು.ಅಪರೂಪಕ್ಕೊಮ್ಮೆ, ಮೂಡ್ ಚೆನ್ನಾಗಿದ್ದಾಗ ಅವಳ ಎರಡು ಕ್ಲೋಸ್ ಫ್ರೆಂಡ್ಸಗಳ ಮನೆಗೆ ಭೇಟಿ ನೀಡಿ ಅಲ್ಲಿ ಹರಟೆ ಹೊಡಿಯುವುದನ್ನು ಬಿಟ್ಟರೇ ಮನೆಯಿಂದ ಅವಳು ಹೊರಗೆ ಹೋಗುತ್ತಿದ್ದಿದ್ದೇ ಕಮ್ಮಿ. ವೀಕೆಂಡಗಳಂದು ಅವಳ ದಿನಚರಿ ಇದಕ್ಕಿಂತ ಬಹಳ ಭಿನ್ನವಾಗೇನೂ ಇರಲಿಲ್ಲ. ಆ ದಿನಗಳಂದು ಅವಳು ಸ್ವಲ್ಪ ಜಾಸ್ತಿನೇ ನಿದ್ದೆ ಮಾಡುತ್ತಿದ್ದಳು. ಫೋನಿನಲ್ಲಿ ಸ್ವಲ್ಪ ಜಾಸ್ತಿನೇ ಸಮಯ ಕಳೆಯುತ್ತಿದ್ದಳು. ಸಂಜೆ ಅಮ್ಮನ ಜೊತೆ ದೇವಸ್ಥಾನಕ್ಕೆ ಒಮ್ಮೊಮ್ಮೆ ಹೋಗುತ್ತಿದ್ದಿದ್ದೂ ಇತ್ತು. ರವಿವಾರ ಬೆಳಿಗ್ಗೆ ತಪ್ಪದೇ ಸಂಗೀತ ಕ್ಲಾಸಿಗೆ ಮಾತ್ರ ಹೋಗುತ್ತಿದ್ದಳು. ಹುಟ್ಟಿದಾಗಿನಿಂದ ಒಮ್ಮೆಯೂ ಅವಳು ಅಪ್ಪ ಅಮ್ಮನ್ನ ಬಿಟ್ಟು ಹೋಗಿರಲೇ ಇಲ್ಲ.



ಅವಳ ಹಿಂದಿನ ವರ್ತನೆಗೆ, ನನಗೆ ಕಾರಣ ಸಂಪೂರ್ಣವಾಗಿ ಗೊತ್ತಾಗಿ ಹೋಯಿತು. ಅವಳ ಅಪ್ಪ ಅಮ್ಮನಿಂದ ದೂರ ಮಾಡಿ, ಅವಳ ಕಂಫರ್ಟ್ ಝೋನಿನಿಂದ ಹೊರಗೆ ಕರೆದುಕೊಂಡು ಹೋದ ನಾನು ಅವಳ ಕಣ್ಣಿಗೆ ವಿಲನ್ ತರ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ. ಅವಳ ಜೊತೆ ಕುಳಿತಿಕೊಂಡು ನಾನು ನಿಧಾನವಾಗಿ ಮಾತನಾಡಿದೆ. ನಾನು ನಿನ್ನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತೇನೆಂದು ಭರವಸೆ ಮೂಡಿಸಿದೆ. ನಾನು ಇಲ್ಲೇ ಮನೆ ಮಾಡಿದರೆ ನನ್ನ ಜೊತೆ ಇರಲು ಅವಳು ಸಹಮತಿಸಿದಳು. ವಾರಕ್ಕೊಮ್ಮೆ ಅಮ್ಮನ ಮನೆಗೆ ಮಾತ್ರ ತಪ್ಪದೇ ಕರೆದುಕೊಂಡು ಹೋಗಬೇಕೆಂದು ಕೇಳಿಕೊಂಡಳು. ನಾನು ಒಪ್ಪಿದೆ. ಅಲ್ಲಿಗೆ ಅರ್ಧ ಸಮಸ್ಯೆ ಕಮ್ಮಿಯಾದಂತಾಯಿತು.



ಮನೆ ಮಾಡಿ, ಹೊಸ ಕೆಲಸ ಹಿಡಿದ ಮೇಲೆ ನಿಜವಾದ ಸಮಸ್ಯೆಗಳು ಶುರುವಾದವು. ಅವಳಿಗೆ ನಿಜಕ್ಕೂ ಪ್ರಪಂಚ ಜ್ನಾನವೇ ಇರಲಿಲ್ಲ. ಅವಳಿಗೆ ಮದುವೆಯಾಗಿದೆ, ಅಲ್ಲಿಗೆ ಕೆಲವೊಂದು ಜವಾಬ್ದಾರಿಗಳಿರುತ್ತವೆ ಅನ್ನುವುದನ್ನು ನಾನು ಪದೇ ಪದೇ ನೆನಪಿಸಿಬೇಕಾಯಿತು. ಬಟ್ಟೆಗಳನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಲ್ಲಿ ಬೇಕೆಂದರಲ್ಲಿ ಬೀಸಾಡುತ್ತಿದ್ದಳು. ಅಪ್ಪಿ ತಪ್ಪಿ ನಾನೊಮ್ಮೆ ಆಕ್ಷೇಪಿಸಿದರೇ, ನನ್ನ ಮೇಲೇ ರೇಗುತ್ತಿದ್ದಳು ಇಲ್ಲವೇ ಅಳಲು ಶುರು ಮಾಡಿ ಬಿಡುತ್ತಿದ್ದಳು. ಒಂದು ಕಾಫಿ ಮಾಡಲೂ ಬರುತ್ತಿರಲಿಲ್ಲ. ಬೆಳಿಗ್ಗೆ ನಾನೇ ಕಾಫಿ ಮಾಡಿ ಅವಳನ್ನು ಎಬ್ಬಿಸಬೇಕಾಗಿತ್ತು. ನನಗೆ ಗೊತ್ತಿದ್ದ ಅಲ್ಪ ಸ್ವಲ್ಪ ಅಡುಗೆಯನ್ನೇ ಕಲಿಸಬೇಕಾಯಿತು. ಅವಳೇ ನಿಯಮಗಳನ್ನು ಮಾಡುತ್ತಿದ್ದಳು, ಅವಳೇ ಅದನ್ನು ಮುರಿಯುತ್ತಿದ್ದಳು. ನನ್ನ ಬಗ್ಗೆ ಅಷ್ಟೊಂದೇನೂ ಕಾಳಜಿ ತೋರುತ್ತಿರಲಿಲ್ಲ. ಹೇಳದೇ ಕೇಳದೇ ಒಮ್ಮೊಮ್ಮೆ ಅಮ್ಮನ ಮನೆಗೆ ಹೋಗಿಬಿಡುತ್ತಿದ್ದಳು, ನನಗೊಂದು ಫೋನ್ ಕೂಡ ಮಾಡದೇ. ಮರುದಿನ ನಾನೇ ಅವಳನ್ನು ಕರೆದುಕೊಂಡು ಬರಬೇಕಾಗಿತ್ತು.



ಆದರೆ ತಿಂಗಳುಗಳು ಉರುಳುತ್ತಿದ್ದಂತೆಯೇ, ನಿಧಾನವಾಗಿ ಅವಳ ಜವಾಬ್ದಾರಿಗಳು ಅವಳಿಗೆ ಮನದಟ್ಟಾಗತೊಡಗಿದವು. ಹಿಂದಿಗಿಂತಲೂ ಜಾಸ್ತಿ ಸಹನೆ ತೋರಿಸಲು ಶುರು ಮಾಡಿದಳು. ಅಪರೂಪಕ್ಕೆ ನನಗಿಂತ ಮುಂಚೆ ಎದ್ದು ಕಾಫಿ ಮಾಡುತ್ತಿದ್ದಳು. ನಾನೇ ಅಚ್ಚರಿಪಡುವಷ್ಟು ಶಿಸ್ತನ್ನು ಮೈಗೂಡಿಸಿಕೊಂಡಳು. ರವಿವಾರದಂದು ಅಮ್ಮನ ಮನೆಗೆ ಹೋಗಿ ಹೊಸ ಅಡುಗೆಗಳನ್ನು ಕಲಿತು, ನನ್ನ ಮೇಲೆ ಪ್ರಯತ್ನಿಸುವ ಧೈರ್ಯ ತೋರಿಸುತ್ತಿದ್ದಳು. ನಾನು ಒತ್ತಾಯ ಮಾಡಿದ ಮೇಲೆ ನನ್ನ ಜೊತೆ ಸಿನೆಮಾಕ್ಕೋ, ಫ್ರೆಂಡ್ಸಗಳ ಮನೆಗೋ ಬರುತ್ತಿದ್ದಳು. ಎಫ಼್-೧ ರೇಸನ್ನು ನನ್ನ ಜೊತೆ ಕುಳಿತುಕೊಂಡು ನೋಡಿ, ಶೂಮಾಕರ್ ಗೆದ್ದಾಗ ನನ್ನಷ್ಟೇ ಸಂಭ್ರಮ ಪಡುತ್ತಿದ್ದಳು. ನನ್ನ ಸಹಚರ್ಯದಲ್ಲಿ ಅವಳು ಸಂತೋಷವಾಗಿರುವುದನ್ನು ನಾನು ಗಮನಿಸಿದೆ. ಆಗಾಗ ನನಗೆ ಅಲ್ಪ ಸ್ವಲ್ಪ ಗೊತ್ತಿದ್ದ ಕೆಮೆಷ್ಟ್ರಿಯನ್ನು ಹೇಳಿ, ರೇಗಿಸಿ, ಜಗಳವಾಡಿ ಬೈಸಿಕೊಳ್ಳುತ್ತಿದ್ದೆ. ಹಂಸಧ್ವನಿ ರಾಗದಲ್ಲಿ "ವಾತಾಪಿ ಗಣಪತೆಂಭಜೇಹಂ" ಎಂದು ಅವಳು ಭಕ್ತಿಯಿಂದ ಹಾಡುವಾಗ ಅವಳ ಪಕ್ಕ ಕುಳಿತು ಕಾಡುತ್ತಿದ್ದೆ. ನಾವಿಬ್ಬರೂ ಈಗ ಅತ್ಯಂತ ಸುಖಿಗಳು.

ಮೊನ್ನೆ ನಮ್ಮ ಪ್ರಥಮ ಆನಿವರ್ಸರಿಗೆ ಅವಳಿಗೆ ಒಂದು ಸುಂದರ ಕೆಂಪು ಗುಲಾಬಿಯನ್ನೂ, ಮೆತ್ತನೆಯ ಟೆಡ್ಡಿ ಬೇರನ್ನೂ ತಂದು ಕೊಟ್ಟೆ. ಆವತ್ತು ಅವಳು ತುಂಬಾ ಖುಶಿಯಾಗಿದ್ದಳು. ಹಿಂದೆ ನಡೆದಿದ್ದೆಲ್ಲದ್ದಕ್ಕೂ, ನನಗಾದ ತೊಂದರೆಗೂ ಅವಳು ಕ್ಷಮೆ ಕೇಳಿದಳು. ನಾನು ನಕ್ಕು ಬಿಟ್ಟೆ. ಹಿಂದಾಗಿದ್ದೆಲ್ಲವನ್ನೂ ನಾನು ಈಗ ಮರೆತು ಬಿಟ್ಟಿದ್ದೇನೆ, ನಿನ್ನನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದೆನ್ನುವಷ್ಟರಲ್ಲಿ, ಅವಳ ಕಣ್ಣಂಚಿನಲ್ಲಿ ಸಣ್ಣ ಹನಿ ತುಳುಕಿದ್ದನ್ನು ನಾನು ಗಮನಿಸಿದೆ. ಈಗಲೂ ಒಮ್ಮೊಮ್ಮೆ ಅವಳು ಯಾವುದೋ ಸಣ್ಣ ಕಾರಣಕ್ಕೆಲ್ಲಾ ಹಠ ಮಾಡುತ್ತಿರುತ್ತಾಳೆ. ಆಗೆಲ್ಲಾ ನಾನು, ಹಿಂದೆ ಅವಳು ಹೇಗೆ ೯೧೧ ಗೆ ಕಾಲ್ ಮಾಡ್ತಿನಿ ಅಂತ ಹೇಳಿ ಹೆದರಿಸಿದ್ದನ್ನು ನೆನಪಿಸಿ, ರೇಗಿಸುತ್ತಿರುತ್ತೇನೆ. ನಾನು ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿಗೆ ಬರದಿದ್ದರೆ ಏನಾಗುತ್ತಿತ್ತೋ ಅಂತ ಒಮ್ಮೊಮ್ಮೆ ಅನ್ನಿಸುವುದಿದೆ. ಆದರೆ ಆ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಮಾತ್ರಾ ಸಮಂಜಸವಾಗಿತ್ತು ಅನ್ನುವುದರಲ್ಲಿ ನನಗೆ ಎಳ್ಳಷ್ಟೂ ಸಂಶಯವಿಲ್ಲ.