Wednesday, November 17, 2010

ಆಶಾ ಭಾವ

ಸೋಲು ಗೆಲುವು ಸಹಜ ಬಾಳು
ನೋವು ನಲಿವು ಅದರ ಬಿಂಬ
ಮಾವು ಬೇವು ಸಮನೆ ಮೇಳೆ
ತಾನೆ ಸವಿಯ ನಿಜದ ಸ್ವಾದ

ಬದುಕು ಬರೀ ಹೂವ ಹಾಸಿಗೆಯೆ?
ಹಲವು ಮುಳ್ಳ ಕಠಿಣ ಹಾದಿ
ಭರವಸೆಗಳೇ ನಾಳಿನಾಸರೆ
ಸಾವಿರ ಸಿರಿಗನಸುಗಳಿಗೆ ನಾಂದಿ

ಶಿಶಿರದಲಿ ಎಲೆಯುದುರಿಸಿಯೂ ಗಿಡ
ಚಿಗುರದೇ ಮತ್ತೆ ವಸಂತದಲಿ?
ಸಾವಿರದಲೆಗಳ ಎದುರಿಸಿಯೂ ದಡ
ನಿಲ್ಲದೇ ನಿಶ್ಚಲ ಛಲದಲ್ಲಿ?

ನಿನ್ನೆಗಳಾ ಕಹಿ ಇಂದಿಗೇ ಮರೆತು
ಬೆಳಕ ದಾರಿಯನು ಹುಡುಕಬೇಕು
ಕಹಿನೆನಪಿಗೆ ಸಿಹಿಲೇಪವ ಬೆರೆಸಿ
ಕತ್ತಲೆಯ ಮೀರಲಿ ಬದುಕು

Sunday, July 18, 2010

ಆರ್ದ್ರ

ಆರಿದ್ರೆ ಮಳೆಯ ಇನ್ನೊಂದು ದೊಡ್ಡ ನೆಗಸು ಭೂಮಿಯನ್ನು ಅಪ್ಪಳಿಸಲು ಶುರುಮಾಡಿತ್ತು. ಕಪ್ಪಿಟ್ಟ ಆಕಾಶ, ಜೋರಾಗುತ್ತಿದ್ದ ಮಳೆ ಜಿರಲೆಯ ಶಬ್ದ, ಮಳೆ ಜೋರಾಗುವುದರ ಸೂಚನೆಯನ್ನು ಮೊದಲೇ ಕೊಟ್ಟಿದ್ದವು. ರಚ್ಚೆ ಹಿಡಿದ ಮಗುವಿನ ನಿರಂತರ ರೋದನದಂತೆ ಮಳೆ ಒಂದೇ ಸಮನೆ ಹೊಯ್ಯುತ್ತಲೇ ಇತ್ತು. ಮಳೆಯ ಆರ್ಭಟಕ್ಕೆ ಸುತ್ತಲಿನ ಪಕೃತಿಯ ಸಕಲ ಚರಾಚರ ವಸ್ತುಗಳೆಲ್ಲ ದಿಗ್ಮೂಢಗೊಂಡಂತೆ ಮೌನವಾಗಿ ನಿಂತು ಮಳೆಯ ನೀರಲ್ಲೇ ಮೀಯುತ್ತಿದ್ದವು. ಮಳೆಯ ’ಧೋ’ ಸದ್ದು ಜಾಸ್ತಿಯಾದಂತೆಲ್ಲ ಎದೆಯ ಮೂಲೆಯಲ್ಲೆಲ್ಲೋ ಅವ್ಯಕ್ತ ವೇದನೆ ಆವರಿಸಿಕೊಳ್ಳಲಾರಂಭಿಸಿತು. "ಕೊರ್ರೋ" ಎಂದೊದರುವ ಮಳೆ ಜಿರಲೆಯ ಧ್ವನಿ, ವೇದನೆಯ ಅಸ್ತಿತ್ವಕ್ಕೆ ವಿಚಿತ್ರವಾದ ಹಿನ್ನೆಲೆಯನ್ನು ಒದಗಿಸಲೇ ಇನ್ನೂ ಜೋರಾಗುತ್ತಿದೆಯೆನ್ನುವ ಸಂಶಯ ಮನದಲ್ಲಿ ಪಿಶಾಚಿಯಂತೆ ಕಾಡಲಾರಂಬಿಸಿತು. "ಇಲ್ಲ, ಇವೆಲ್ಲಗಳಿಂದ ನಾನು ಹೊರಬರಲೇ ಬೇಕು, ಏಷ್ಟು ದಿನ ಹೀಗೇ?" ಮನಸ್ಸು ಸಾವಿರದೊಂದನೇ ಬಾರಿ ಬುದ್ಧಿ ಹೇಳಿತು. ಮನಸ್ಸು ಹೇಳಿದ್ದನೆಲ್ಲ ಹೃದಯ ಕೇಳುವಂತಿದ್ದರೆ ಜಗತ್ತಿನಲ್ಲಿ ಯಾರಿಗೂ ಯಾತನೆಗಳೇ ಇರುತ್ತಿರಲಿಲ್ಲವೇನೋ.

ಇದೇ ಮಳೆಯ ತರವೇ ಅಲ್ಲವೇ ಅವಳಲ್ಲಿ ರಚ್ಚೆ ಹಿಡಿದಿದ್ದು? ಅಷ್ಟು ದೈನೇಸಿಯಾಗಿ ಬೇಡಿಕೊಂಡರೂ ಅವಳ ಮನಸ್ಸಿನಲ್ಲಿ ಒಂದು ಚೂರೂ ಜಾಗ ಕೊಡಲಿಲ್ಲವೇಕೆ ಎಂದು ಈಗ ಯೋಚಿಸಿದರೆ ನನ್ನ ಆಗಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅನುಕಂಪವೂ, ಬೇಸರವೂ ಆಗುತ್ತದೆ. ಎಷ್ಟು ಕಠಿಣವಾಗಿ, ಕಡ್ಡಿ ಮುರಿದಂತೆ ಹೇಳಿಬಿಟ್ಟಳಲ್ಲ, "ವಿಕ್ಕಿ, ನಿನ್ನಲ್ಲಿ ಅಂಥದೇನಿದೆ ಅಂತ ನಾನು ನಿನ್ನನ್ನು ಇಷ್ಟಪಡಲಿ? ದಯವಿಟ್ಟು ನನಗೆ ತೊಂದರೆ ಕೊಡಬೇಡ". ಒಂದೇ ವಾಕ್ಯದಲ್ಲಿ ಮನಸು ಮುರಿದಿದ್ದಳು. ಆ ಕ್ಷಣದಲ್ಲೇ ಭೂಮಿ ಬಾಯ್ಕಳೆದು ನನ್ನನ್ನು ನುಂಗಬಾರದೇ ಎನ್ನಿಸಿತ್ತು. ನೆನೆಸಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ. ಬಾಯಲ್ಲಿ ಮಾತೊಂದೂ ಹೊರಟಿರಲಿಲ್ಲ. ಆ ಕ್ಷಣದಷ್ಟು ದುರ್ಬಲತೆಯನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ಅವಳು ನನ್ನ ಪ್ರೀತಿಯನ್ನು ಧಿಕ್ಕರಿಸಿದ ರೀತಿಗೋ, ಅಥವಾ ನನಗೆ ಅಪಾರ ಹೆಮ್ಮೆಯಿದ್ದ ನನ್ನ ವ್ಯಕ್ತಿತ್ವದ ಅಸ್ತಿತ್ವವನ್ನೇ ಅವಳು ಬೆದಕಿದ್ದಕ್ಕೋ ಗೊತ್ತಿಲ್ಲ, ಮನಸ್ಸಿಗೆ ವಿಪರೀತ ಘಾಸಿಯಾಗಿತ್ತು. ಅಂದಿನಿಂದ ಈ ಭಯಾನಕ ಯಾತನಾ ಜಗತ್ತಿಗೆ ಬಿದ್ದಿದ್ದೆ.

ಎಷ್ಟು ಬೇಡ ಬೇಡವೆಂದರೂ ಮನಸ್ಸು ಮತ್ತೆ ಮತ್ತೆ ಅಲ್ಲೇ ಎಳೆಯುತ್ತಿತ್ತು. "ನಿನ್ನಲ್ಲಿ ಅಂಥದ್ದೇನಿದೆ?", ಎಷ್ಟು ಸಲೀಸಾಗಿ ಕೇಳಿಬಿಟ್ಟಳಲ್ಲ! ಆ ಪ್ರಶ್ನೆ ನನ್ನಲ್ಲಿ ಉಂಟು ಮಾಡಿದ ತಳಮಳಗಳ ಪರಿಣಾಮ ಅವಳಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಅಷ್ಟೆಲ್ಲ ದಿನ ನನ್ನ ಜೊತೆ ಸುತ್ತಾಡಿದ್ದು? ಕಣ್ಣಲ್ಲೇ ಪ್ರೀತಿ ತೋರಿದ್ದು? ಮಾತು ಸುಳ್ಳಾಡಬಹುದು, ಕಣ್ಣು? ನಟನೆಯಿದ್ದೀತಾ? ಅಷ್ಟು ದಿನ ಪ್ರೀತಿಯ ಸೆಲೆಯೇ ಉಕ್ಕಿ ಹರಿಯುತ್ತಲಿದೆ ಎಂದೆನಿಸುತ್ತಿದ್ದ ತುಂಬುಗಣ್ಣುಗಳಲ್ಲಿ ತಣ್ಣನೆಯ ಕ್ರೌರ್ಯವಿದ್ದೀತಾ? ಛೇ! ಇದ್ದಿರಲಿಕ್ಕಿಲ್ಲ. ಎಂತೆಲ್ಲ ಯೋಚನೆಗಳು? ಅವಳ ಬಗ್ಗೆ ಕೆಟ್ಟದಾಗಿ ಯೋಚಿಸಲೂ ಮನಸ್ಸು ಆಸ್ಪದ ಕೊಡುತ್ತಿಲ್ಲ. ಅವಳ ಬಗ್ಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮೋಹ ಉಳಿದುಕೊಂಡಿರಬೇಕು. ಅಷ್ಟೊಂದು ಉತ್ಕಟವಾಗಿಯಲ್ಲವೇ ನಾನು ಅವಳ ಮೋಹಕ್ಕೆ ಒಳಗಾಗಿದ್ದು? ನನಗೆ ಗೊತ್ತಿಲ್ಲದ ಹಾಗೆ ಕಣ್ಣು ಮಂಜು ಮಂಜು. ಕೆನ್ನೆಯ ಮೇಲೆ ತಾನಾಗಿಯೇ ಹರಿದು ಬಂದ ಕಣ್ಣೀರನ್ನು ಒರೆಸಿಕೊಂಡೆ.

ಹೊರಗೆ ಮಳೆ ಕಮ್ಮಿಯಾಗುವ ಲಕ್ಷಣವೇ ಕಾಣಲಿಲ್ಲ. ಆರಿದ್ರೆ ಮಳೆ, ಹೋಗುವಾಗ ಜಾಸ್ತಿ ಹೊಯ್ಯುತ್ತದಂತೆ. ನಾಳೆಯಿಂದ ಪುನರ್ವಸು. ಇವತ್ತೇ ಆಕಾಶವೆಲ್ಲ ಖಾಲಿಯಾಗುವಂತೆ ಹೊಯ್ಯುತ್ತಲೇ ಇರುತ್ತೇನೆ ಎಂಬ ಹುನ್ನಾರವನ್ನು ನಡೆಸಿದೆಯೋ ಎಂಬಂತೆ ಮಳೆ ಪಿರಿಪಿರಿ ನಡೆಸಿತ್ತು. "ಆರಿದ್ರೆ ಮಳೆ ಆರದಂತೆ ಹೊಯ್ಯುತ್ತದೆ", ಅಮ್ಮ ಹೇಳಿದ್ದು ನೆನಪಾಯ್ತು. ಈ ಹಾಳಾದ ನೆನಪುಗಳೂ ಮಳೆಯಂತೇ. ಆರದಂತೆ ಮನಸ್ಸಿನ ಅಂಗಳದಲ್ಲಿ ಬಿಟ್ಟೂ ಬಿಟ್ಟೂ ಹೊಯ್ಯುತ್ತಲೇ ಇರುತ್ತವೆ. ಮನಸ್ಸಿನ ತುಂಬ ರಾಡಿಯೆಬ್ಬಿಸಿ.

ಅವತ್ತು ಯಾಕೆ ಹಾಗೆ ಏನನ್ನೂ ಮಾತಾಡದೇ ಬಂದೆನೆಂಬುದು ಇಂದಿಗೂ ಸೋಜಿಗ. ಈಗ ಯೋಚಿಸಿದರೆ, ಅವತ್ತು ಅವಳ ಮಾತಿನ ಸ್ಥಿತಪ್ರಜ್ಞೆ ನನ್ನನ್ನು ಮೂಕವಾಗಿಸಿರಬೇಕೆಂದೇ ಅನ್ನಿಸುತ್ತದೆ. ಅವಳ ಮುಖದಲ್ಲಿ ಯಾವುದೇ ತರಹದ ದುಃಖವಾಗಲೀ, ಆಶ್ಚರ್ಯವಾಗಲೀ ಅಥವಾ ಸಿಟ್ಟಾಗಲೀ ಕಂಡಿರಲಿಲ್ಲ. ಎಲ್ಲ ಮೊದಲೇ ಗೊತ್ತಿದ್ದ ಹಾಗೆ, ಹೀಗೇ ಕೇಳುತ್ತಾನೆ ಎಂದು ಮುಂಚೆಯೇ ಊಹಿಸಿದ್ದ ಹಾಗೆ, ಎಲ್ಲವೂ ಪೂರ್ವ ನಿರ್ಧಾರಿತ ಯೋಜನೆಯ ಹಾಗೆ. ಯೋಚಿಸಲು ಒಂದು ನಿಮಿಷವೂ ತೆಗೆದುಕೊಂಡಿರಲಿಲ್ಲ. ಬಿಟ್ಟ ಬಾಣದ ಹಾಗೆ ಉತ್ತರ. ನಿಜ, ಅದೇ ನನ್ನ ಅಹಂಗೆ ಅಷ್ಟೊಂದು ಪೆಟ್ಟು ಕೊಟ್ಟಿದ್ದು. "ವಿಕ್ಕೀ, ನನಗೆ ಗೊತ್ತು, ನೀನು ನನಗೆ ಅರ್ಹನಿಲ್ಲ" ಎಂಬ ನೇರ ಮಾತು. ತುಟಿಯಂಚಲ್ಲಿ ಕಿರುನಗೆಯೊಂದು ಹಾದು ಹೋಯಿತು. ಎಲ್ಲ ಸನ್ನಿವೇಶಗಳಲ್ಲೂ ಎಲ್ಲರೂ ನಮ್ಮ ಅಹಂ ಅನ್ನು ಸಂತೋಷಪಡಿಸಬೇಕೆಂದು ನಾವು ಆಶಿಸುತ್ತೇವೆಲ್ಲ? ಪ್ರೀತಿಯ ಮಾತುಗಳಲ್ಲಿ, ಪ್ರೇಮ ಸಲ್ಲಾಪಗಳಲ್ಲಿ, ಹೊಗಳುವಿಕೆಯ ಮೆಚ್ಚುಗೆಗಳಲ್ಲಿ ಎಲ್ಲದರಲ್ಲೂ. ಕೊನೆಗೆ ಪ್ರೀತಿಯ ತಿರಸ್ಕಾರದಲ್ಲೂ!

ಅವಳೇ ಅಲ್ಲವೇ ನನ್ನನ್ನು ಹುಡುಕಿಕೊಂಡು ಬಂದಿದ್ದು? ಕಾಲೇಜಿನ ಗ್ಯಾದರಿಂಗ್ ನ ಮರುದಿನ?. "ಎಷ್ಟೊಂದು ಚೆನ್ನಾಗಿ ಹಾಡುತ್ತೀರಿ ನೀವು?" ಅವತ್ತು ಅವಳ ಮಾತುಗಳು ಉಂಟು ಮಾಡಿದ ಪುಳಕ ಇವತ್ತಿಗೂ ಮರೆಯುವ ಹಾಗೇ ಇಲ್ಲ. ಅದೇ ಮುಗ್ಧ ನಗು, ಅದೇ ಪ್ರೀತಿಯ ಕಣ್ಣುಗಳು. ಮೊದಲ ಸಾರಿ ಯಾರಾದರೂ ನನ್ನನು ಹೊಗಳಿದ್ದು. ವಾಸ್ತವವೇ, ಕನಸೇ ಎಂದು ಅರಿವಾಗಲು ಸ್ವಲ್ಪ ಹೊತ್ತು ಹಿಡಿದಿತ್ತು. ಸಣ್ಣದೊಂದು ಸಂಕೋಚದ ನಗೆ ನಕ್ಕು ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕಿದ್ದೆ. "ಥ್ಯಾಂಕ್ಸೇ ಹೇಳಲಿಲ್ಲ ನೀವು?", ಅವಳು ಬಿಡುವ ತರಹ ಕಾಣಲಿಲ್ಲ. "ಬೇಡ ಬಿಡಿ, ಥ್ಯಾಂಕ್ಸ್ ಬದಲು ನನ್ಜೊತೆ ಒಂದು ಕಾಫಿ ಕುಡಿಬಹುದಲ್ವಾ?". ನನಗೋ ದಿಗಿಲು. ಇಷ್ಟೊಂದು ನೇರ ಮಾತು! ಹೃದಯ ಬಾಯಿಗೆ ಬಂದಂತೆ. ಯಾವತ್ತೂ ಹಾಗೆಲ್ಲ ಹುಡುಗಿಯರ ಜೊತೆ ಒಂಟಿಯಾಗಿ ಮಾತಾಡೇ ಅಭ್ಯಾಸವಿಲ್ಲ. ನನ್ನ ಭಯ ಅವಳಿಗೆ ಗೊತ್ತಾಗಿರಬೇಕು, "ಪರವಾಗಿಲ್ಲ, ನನ್ಜೊತೆ ಒಂದು ಕಾಫಿ ಕುಡಿದರೆ ಜಗತ್ತೇನೂ ಮುಳುಗಲ್ಲ,ಬನ್ನಿ", ಈ ಸಲ ಇನ್ನೂ ಅಧಿಕಾರಯುತ ಧ್ವನಿ. ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಅವಳನ್ನು ಹಿಂಬಾಲಿಸಿದ್ದೆ. ನಾನೇನು ಮಾತಾಡಿದ್ದೇನೋ, ಅವಳೇನು ಕೇಳಿದ್ದಳೋ ಒಂದೂ ನೆನಪಿಲ್ಲ. ಅವಳ ಕಣ್ಣುಗಳಲ್ಲಿ ಕರಗಿ ಹೋಗಿದ್ದೊಂದು ನೆನಪಿದೆ.

ನನ್ನ ಖಾಯಂ ಸಂಗಾತಿಯಾಗಿದ್ದ ತಿರಸ್ಕಾರ, ಕೀಳರಿಮೆಗಳ ಸ್ನೇಹವನ್ನು ಮರೆತಿದ್ದೇ ಅವಳ ಸಂಗದಲ್ಲಿ. ಸಂಕೋಚದ ಮುದ್ದೆಯಾಗಿದ್ದ ನನ್ನನ್ನು ಆ ಚಿಪ್ಪಿನಿಂದ ಹೊರಗೆ ಬರಲು ಸಹಾಯಮಾಡಿದ್ದು ಅವಳ ಉಲ್ಲಾಸಭರಿತ ಮಾತುಗಳು, ಜೀವನೋತ್ಸಾಹ ಉಕ್ಕಿ ಹರಿಯುತ್ತಿದ್ದ ಕಣ್ಣುಗಳು. ನನ್ನ ಬದುಕಿನಲ್ಲಿ ಯಾವುದರ ಕೊರತೆಯಿತ್ತೋ ಅದನ್ನು ಸಂಪೂರ್ಣವಾಗಿ ತುಂಬಲು ಅವಳೊಬ್ಬಳಿಂದಲೇ ಸಾಧ್ಯವೆಂದು ನಾನು ಆಗ ನಂಬಿದ್ದೆ. ಅವಳ ಪ್ರೀತಿಯ ಮಾತುಗಳಿಗಾಗಿ ಎಷ್ಟು ಸಾರ್ತಿ ನಾನು ನನ್ನ ಸಂಕೋಚದ ಸಂಕೋಲೆಗಳನ್ನು ಮುರಿದು ಧಾವಿಸಿ ಓಡಿ ಬರುತ್ತಿದ್ದೇನೋ ನನಗೇ ತಿಳಿಯದು. ಅವಳು ಪ್ರಯತ್ನಪೂರ್ವಕವಾಗಿ ನನ್ನ ಕೀಳರಿಮೆಯನ್ನು ತೊಡೆಯಲು ಪ್ರೀತಿಯ ಮಾತುಗಳ ಸಹಾಯ ತೆಗೆದುಕೊಂಡಿದ್ದಳಾ ಅಥವಾ ಕೇವಲ ಅವಳ (ಪ್ರೀತಿಯ?) ಸಾನಿಧ್ಯ ನನ್ನಲ್ಲಿ ಅಷ್ಟೊಂದು ಆತ್ಮವಿಶ್ವಾಸವನ್ನು ಮೂಡಿಸಿತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ನಾನು ನನಗೇ ಅಚ್ಚರಿಯಾಗುವಷ್ಟು ಬದಲಾಗಿದ್ದಂತೂ ನಿಜ. ಅವಳೇ ಹೇಳಿದ್ದಳಲ್ಲ, "ವಿಕ್ಕಿ ನಿನ್ನ ಕಂಗಳಲ್ಲಿ ಈಗ ಅಪೂರ್ವವಾದ ಹೊಳಪೊಂದು ಕಾಣುತ್ತಿದೆ" ಅಂತ. ಆತ್ಮ ವಿಶ್ವಾಸದ ಸೆಲೆ ನನ್ನಲ್ಲೂ ಚಿಗುರತೊಡಗಿತ್ತು, ಅವಳೇ ಅದನ್ನ ಚಿವುಟಿ ಕೊಲ್ಲುವದರ ತನಕ!

ಮಯೂರ ಯಾವತ್ತೋ ಹೇಳಿದ್ದು ಈಗ ನೆನಪಾಗುತ್ತಿದೆ. ಯಾಕೋ ಗೊತ್ತಿಲ್ಲ. "ವಿಕ್ಕಿ, ನೀನು ಹೀಗೆ ಡ್ರೆಸ್ ಮಾಡಿಕೊಂಡು, ಅದೇ ಹರಕಲು ಚೀಲವನ್ನು ಏರಿಸಿಕೊಂಡು ಎಲ್ಲ ಕಡೆ ತಿರುಗುತ್ತಿದ್ದರೆ, ಯಾವ ಹುಡುಗಿಯೂ ನಿನ್ನನ್ನು ಪ್ರೀತಿ ಮಾಡುವುದಿಲ್ಲ ನೋಡು" ಎಂದು. ನನ್ನನ್ನು ರೇಗಿಸಲು ಹೇಳಿದ್ದೋ ಅಥವಾ ಅವನಿಗೆ ಹೊಸದೊಂದು ಗರ್ಲ್ ಫ್ರೆಂಡ್ ದೊರಕಿದ ಅಹಂನಲ್ಲಿ ಹೇಳಿದ್ದೋ ಗೊತ್ತಿಲ್ಲ. ಆದರೆ ಸಿಟ್ಟು ನೆತ್ತಿಗೇರಿತ್ತು. "ಯಾರಾದ್ರೂ ನನ್ನನ್ನು ಪ್ರೀತಿ ಮಾಡಲೇಬೇಕು ಅಂತ ನಾನು ಬದುಕ್ತಾ ಇಲ್ಲ" ಸಟ್ಟಂತ ಹೇಳಿದ್ದೆ. ಅವನು ಮಾತು ತಿರುಗಿಸಿದ್ದ. "ಹಾಗಲ್ವೋ, ನೋಡು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಓಡಾಡ್ತಾ ಇದ್ರೆ ನಾಲ್ಕು ಜನ ಗುರುತಿಸ್ತಾರೆ, ಏನೋ ಒಂದು ಚಾರ್ಮ್ ಇರತ್ತೆ. ನಿನ್ನಲ್ಲಿ ಏನು ಬೇಕಾದರೂ ಮಾಡಬಲ್ಲ ಆತ್ಮ ವಿಶ್ವಾಸವಿದೆ ಅಂತ ಅನ್ನಿಸತ್ತೆ, ಯೋಚನೆ ಮಾಡು". ಒಳ್ಳೆಯ ಡ್ರೆಸ್ ಹಾಕಿಕೊಂಡರೆ ಆತ್ಮ ವಿಶ್ವಾಸ ಬೆಳೆಯುತ್ತದೆಯೋ, ಅಥವಾ ನಮ್ಮಲ್ಲಿ ಆತ್ಮ ವಿಶ್ವಾಸ ಪುಟಿಯುತ್ತಿದ್ದರೆ ಒಳ್ಳೆ ಡ್ರೆಸ್ ಮಾಡಿಕೊಳ್ಳಬೇಕೆಂಬ ಹಂಬಲ ತಾನೇ ತಾನಾಗೇ ಮೊಳೆಯುತ್ತದೆಯೋ ಅರ್ಥವಾಗಿರಲಿಲ್ಲ. ಅವೆರಡು ಒಂದಕ್ಕೊಂದು ಪೂರಕವೋ, ಅಥವಾ ಒಂದರ ಮೇಲೊಂದು ಅವಲಂಬಿತವೋ ಅವತ್ತಿಗೂ, ಇವತ್ತಿಗೂ ಗೊತ್ತಾಗಿಲ್ಲ.

ಇಲ್ಲಿಯೂ ಅದೇ ಜಿಜ್ಞಾಸೆ. ಅವಳ ಪ್ರೀತಿ ಅಪೇಕ್ಷಿಸಲು ನಾನು ಪ್ರಯತ್ನಪಟ್ಟಿದ್ದು ನನ್ನಲ್ಲಿ ಹೊಸದಾಗಿ ಮೂಡಿದ ಆತ್ಮವಿಶ್ವಾಸದ ನೆಲೆಯಿಂದಲೋ, ಅಥವಾ ಅವಳ ಸಾನಿಧ್ಯ ತರಬಹುದಾದಂತಹ ಪ್ರೀತಿಯ ಬೆಳಕಿನಲ್ಲಿ, ನನಗೇ ಹೊಸದಾಗಿದ್ದ ನನ್ನ ವ್ಯಕ್ತಿತ್ವದ ಆಯಾಮವೊಂದನ್ನು ಹುಡುಕುವ ಸ್ವಾರ್ಥದಿಂದಲೋ? ಪ್ರೀತಿಯ ಕರುಣಾಸ್ಥಾಯಿಯಿಂದ ಆತ್ಮವಿಶ್ವಾಸ ಒಡಮೂಡಿದ್ದೋ ಅಥವಾ ಕೇವಲ ಅವಳ ಸಂಗದಿಂದ ಹುಟ್ಟಿರಬಹುದಾದ ಆತ್ಮವಿಶ್ವಾಸದ ಸೆಲೆ ನನ್ನದೇ ವ್ಯಕ್ತಿತ್ವದಲ್ಲಿ ಸುಪ್ತವಾಗಿದ್ದ ಪ್ರೀತಿಯ ಅಲೆಗಳನ್ನು ಉದ್ದೀಪನಗೊಳಿಸಿದ್ದೊ? ಎಷ್ಟೊಂದು ಗೋಜಲು ಗೋಜಲು! ಆದರೆ ಒಂದಂತೂ ನಿಜ. ಅವಳ ತಿರಸ್ಕಾರದಿಂದ ನಾನು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೆ. ನನ್ನ ಆತ್ಮವಿಶ್ವಾಸ ಮತ್ತೆ ಪಾತಾಳಕ್ಕಿಳಿದು ಹೋಗಿತ್ತು. ಯಾವ ಪ್ರೀತಿಯ ಭಾವ ನನ್ನ ಅಂತರಂಗದಲ್ಲಿ ಹೊಸ ಹುಮ್ಮಸ್ಸು, ಹೊಸ ವಿಶ್ವಾಸವನ್ನು ಹುಟ್ಟಿಸಿತ್ತೋ ಅದೇ ಮತ್ತೆ ಎಲ್ಲವನ್ನೂ ಮರೆಸಿ ಹಳೆಯ ಸ್ಥಿತಿಗೆ ನನ್ನನ್ನು ನೂಕಿದ ವಿಪರ್ಯಾಸಕ್ಕೆ ನಾನೇ ಸಾಕ್ಷಿಯಾಗಿದ್ದೆ. ಪ್ರೀತಿಯ ಮೋಹಕ ಜಗತ್ತಿನ ಆಸರೆಯನ್ನು ಪಡೆಯಹೋದವನು ಮನಸ್ಸುಗಳ ನಡುವಿನ, ಮನುಷ್ಯರ ನಡುವಿನ ನಂಬುಗೆಯ ಮೇಲೇ ವಿಶ್ವಾಸವಿಲ್ಲದ ಲೋಕದ ಕಾಳಚಕ್ರದಲ್ಲಿ ಕಳೆದುಹೋಗಿದ್ದೆ.

ದೊಡ್ಡದೊಂದು ನಿಟ್ಟುಸಿರು ನನಗೆ ಅರಿವಿಲ್ಲದೆಯೇ ಹೊರಬಿತ್ತು. ಇಷ್ಟ್ಯಾಕೆ ವೇದನೆ ನೀಡುತ್ತಿವೆ ಹಳೆಯ ನೆನಪುಗಳು? ಪ್ರೀತಿಯ ಮೋಹಕ್ಕಿಂತ ಅದರ ತಿರಸ್ಕಾರದ ನೆನಪುಗಳ ವ್ಯಾಮೋಹವೇ ಹೆಚ್ಚು ಸಂವೇದಾನಾಶೀಲವೇ ಎಂಬ ಸಂಶಯ ಮನಸ್ಸಿನಲ್ಲೊಮ್ಮೆ ಮೂಡಿ ಮರೆಯಾಯಿತು. ಏನೇ ಆಗಲಿ, ಈ ವೇದನೆಗಳ ವ್ಯಾಪ್ತಿಯಿಂದ ಹೊರಬರಬೇಕಾದ ಅನಿವಾರ್ಯತೆ ನನಗೀಗ ನಿಧಾನವಾಗಿ ಅರಿವಾಗತೊಡಗಿತು. ಆವಾಗಿನ ತಳಮಳಗಳನ್ನೆಲ್ಲ ಈಗ ಸಮಚಿತ್ತದಲ್ಲಿ ನಿಂತು ನೋಡಿದರೆ ಹಲವಾರು ಹೊಸ ವಿಷಯಗಳೇ ಗೋಚರವಾಗಬಹುದೇನೋ. ಬಗೆ ಬಗೆ ಅನುಭವಗಳಿಂದ ನಾವು ಕಲಿಯಬೇಕಾಗಿದ್ದು ಇಷ್ಟೇನೇ ಅಥವಾ ಅವು ಉಂಟು ಮಾಡಿದ ಪರಿಣಾಮಗಳ ವಿಸ್ತಾರ ಇಷ್ಟೇ ಎಂದು ಹೇಗೆ ಹೇಳುವುದು? ಎಲ್ಲ ಅನುಭವಗಳನ್ನೂ ನಮ್ಮ ಮನಸ್ಸು ತನ್ನ ಬೌದ್ಧಿಕ ಮತ್ತು ವೈಚಾರಿಕತೆಯ ಪರಿಮಿತಿಯ ಮೂಸೆಯಲ್ಲಿ ಹಾಕಿ ವಿಶ್ಲೇಷಿಸಿ, ಅದರಿಂದ ಹಲವು ತನಗೆ ಸರಿತೋರಿದ ಅಥವಾ ಪ್ರಿಯವಾದ ಭಾವಗಳನ್ನು ನಿಶ್ಚಯಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾನು ಅನುಭವಿಸುತ್ತಿರುವ ವೇದನೆ, ನಾನೇ ಬಯಸಿ ಹಿಂದೆ ಹೋದ ಪ್ರೀತಿ ಮರೀಚಿಕೆಯಿಂದಲೇ ಹುಟ್ಟಿದ್ದರಿಂದ ಮನಸ್ಸಿಗೆ ಸ್ವಯಂವೇದ್ಯವಾಗಲು ಕಷ್ಟವಾಗಲಿಕ್ಕಿಲ್ಲ. ನಿಜ, ಆ ಭಾವನೆ ಸುಳಿದಂತೆ ಹೃದಯ ನಿರಾಳವಾಯಿತು. ಪ್ರೀತಿಯ ಭಾವ ನಿರಾಕರಣೆಯ ದುಃಖವನ್ನೂ, ತಿರಸ್ಕಾರದ ನೋವನ್ನೂ, ವೇದನೆಯ ವಾಸ್ತವದ ಜೊತೆಗೆ ಆತ್ಮವಿಶ್ವಾಸವನ್ನೂ ಕಲಿಸಬಲ್ಲದೆಂಬ ಭರವಸೆಯ ಭಾವ ಮನದಲ್ಲಿ ಉದಯಿಸಿ ಉಲ್ಲಾಸ ಮೂಡಿಸಿತು.

ನಿಧಾನವಾಗಿ ಹೊರಗೆ ಕಣ್ಣು ಹಾಯಿಸಿದೆ. ಮಳೆಯ ಆರ್ಭಟ ಬಹಳಷ್ಟು ಕಮ್ಮಿಯಾಗಿತ್ತು. ಎಲ್ಲೋ ಒಂದೆರಡು ಮಳೆಹನಿಗಳು ಸುರಿದುಹೋದ ಮಳೆಯ ನೆನಪನ್ನು ಇನ್ನೂ ಜೀವಂತವಿಡುವ ಪ್ರಯತ್ನ ನಡೆಸಿದ್ದವು. ಶುಭ್ರವಾದ ಆಕಾಶವನ್ನು ಮುತ್ತಿ ಕಪ್ಪಿಡಲು ಹವಣಿಸುತ್ತಿದ್ದ ಮಳೆಮೋಡವನ್ನು ಭೇದಿಸಿಯಾದರೂ, ಭೂಮಿಯನ್ನು ತಲುಪಿ ತಮ್ಮ ಅಸ್ತಿತ್ವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದ ಸೂರ್ಯಕಿರಣಗಳ ಉತ್ಸಾಹ, ನನ್ನಲ್ಲಿ ಸ್ಪೂರ್ತಿಯನ್ನು ಹುಟ್ಟಿಸಲಾರಂಭಿಸಿತು. ಮೋಡಗಳ ಪ್ರತಿರೋಧವನ್ನು ಲೆಕ್ಕಿಸದೇ ಭೂಮಿಯನ್ನು ತಲುಪಿ ಕತ್ತಲೆಯ ಕೀಳರಿಮೆಯನ್ನು ಸಂಪೂರ್ಣವಾಗಿ ತೊಡೆದುಹಾಕುತ್ತೇವೆ ಎಂಬ ಆತ್ಮ ವಿಶ್ವಾಸದಿಂದ ಪ್ರಕಾಶಿಸುತ್ತಿರುವ ಹೊನ್ನಕಿರಣಗಳು, ಮರಳಿ ಉದಯಿಸುತ್ತಿದ್ದ ನನ್ನ ಮನದ ಹಂಬಲದ ಸಂಕೇತವೋ ಎನ್ನುವಂತೆ ಭಾಸವಾದವು.

Thursday, April 22, 2010

"ಬಾಳ ನರ್ತಕ" ಕವನ ಸಂಕಲನ ಬಿಡುಗಡೆ ಸಮಾರಂಭ

ಆತ್ಮೀಯರೇ,

ನನ್ನ ತಂದೆಯವರು ಬರೆದ ಕೆಲವು ಕವನಗಳ ಪುಸ್ತಕರೂಪ, "ಬಾಳ ನರ್ತಕ" ದ ಬಿಡುಗಡೆ ಸಮಾರಂಭವನ್ನು ಇದೇ ಶನಿವಾರ ದಿನಾಂಕ ೨೪ ರಂದು ಶಿರಸಿ ತಾಲೂಕಿನ ಯಡಳ್ಳಿಯ "ವಿದ್ಯೋದಯ" ಸಭಾಭವನದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಏರ್ಪಡಿಸಿದ್ದೇವೆ. "ಆಗ್ರಾ ಗಾಯಕಿ ಕಲಾವೃಂದ" ಯಡಳ್ಳಿ ಇವರ ವತಿಯಿಂದ ಸಂಗೀತ ಸಂಜೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.

ಸಹೃದಯ ಕಲಾಭಿಮಾನಿಗಳಿಗೆಲ್ಲ ಆದರದ ಸ್ವಾಗತ

Wednesday, March 17, 2010

ಸಂದಿಗ್ಧ

ಹಾಸಿಗೆಗೆ ತಲೆ ಕೊಟ್ಟರೆ ಸಾಕು, ಒತ್ತರಿಸಿಕೊಂಡು ಬರುವಷ್ಟು ನಿದ್ದೆ. ಒಂದು ವಾರದಿಂದ ಆಫೀಸ್ ಕೆಲಸದ ಒತ್ತಡ, ಡೆಡ್ ಲೈನಿನ ಆತಂಕ ಎಲ್ಲಾ ಸೇರಿ ತಲೆ ಚಿಟ್ಟು ಹಿಡಿದು ಹೋಗಿತ್ತು. ಇವತ್ತು ಸ್ವಲ್ಪ ನಿರಾಳ. ಅದಕ್ಕೇ ಇಷ್ಟೊಂದು ನಿದ್ದೆ ಬರ್ತಾ ಇರಬೇಕು. ಇನ್ನೇನು ದಿಂಬಿಗೆ ತಲೆ ಕೊಡಬೇಕು, ಅಷ್ಟರಲ್ಲೇ ಮಗಳು ಒಂದು ನೋಟ್ ಬುಕ್ ಹಿಡಿದುಕೊಂಡು ಬಂದಳು. "ಅಪ್ಪಾ, ವಿವೇಕಾನಂದರ ಬಗ್ಗೆ ಒಂದು ಭಾಷಣ ಬರ್ದುಕೊಡು, ಪ್ಲೀಸ್. ನಾಡಿದ್ದು ನಮ್ಮ ಸ್ಕೂಲಲ್ಲಿ ಕಾಂಪಿಟೇಶನ್ ಇದೆ. ನಾನು ಹೆಸ್ರು ಕೊಟ್ಟಿದ್ದೀನಿ" ಅಂತ. ಅವಳಿಗೂ ನಿದ್ದೆ ಜೋರಾಗಿ ಬಂದಿದೆ ಅಂತ ಅವಳ ಕಣ್ಣುಗಳೇ ಹೇಳುತ್ತಿದ್ದವು. ಸಾಮಾನ್ಯವಾಗಿ ಒಂಬತ್ತೂವರೆಗೆಲ್ಲಾ ಮಲಗುವವಳು ಇವತ್ತು ನನಗಾಗಿ ಹತ್ತು ಘಂಟೆಯ ತನಕ ಕಾಯ್ದಿದ್ದಾಳೆ.

ನಾನು ತಕ್ಷಣಕ್ಕೆ ಏನೂ ಹೇಳಲಿಲ್ಲ. ಮನಸ್ಸೆಲ್ಲ ಖಾಲಿ ಖಾಲಿ. ನಾನು ಸುಮ್ಮನಿದ್ದುದನ್ನು ನೋಡಿ ಅವಳೇ ಶುರು ಮಾಡಿದಳು. "ಮೊನ್ನೆನೇ ಹೇಳಿದ್ರು ಸ್ಕೂಲಲ್ಲಿ. ಅಮ್ಮ ಹೇಳಿದ್ರು, ನೀನು ಚೆನ್ನಾಗಿ ಭಾಷಣ ಬರ್ದುಕೊಡ್ತೀಯಾ ಅಂತ. ಮೊನ್ನೆಯಿಂದ ನೀನು ಸಿಕ್ಕೇ ಇಲ್ಲಾ ನನಗೆ. ಅಮ್ಮಾ ನಂಗೆ ಪ್ರಾಮಿಸ್ ಮಾಡಿದ್ರು ನಿನ್ನೆನೇ ಬರೆಸಿ ಕೊಡ್ತಿನಿ ಅಂತ. ಇವತ್ತಾದ್ರೂ ರೆಡಿ ಆಗಿಲ್ಲ, ಏನು ಮಾಡ್ಲಿ ನಾನು?". ಅವಳ ಜೋಲು ಮೋರೆ ನೋಡಿ ನನಗೆ ತುಂಬಾ ಬೇಜಾರಾಯ್ತು. "ವಿವೇಕಾನಂದರ ಬಗ್ಗೆ ತುಂಬಾ ಗೊತ್ತು ನಿಂಗೆ ಅಂತ ಅಮ್ಮ ಹೇಳಿದ್ಳು. ಈಗ ಒಂದು ೧೦ ನಿಮಿಷದಲ್ಲಿ ಬರೆದು ಕೊಡಕ್ಕೆ ಆಗಲ್ವಾ?" ಒಂದು ಮುಗ್ಧ ಪ್ರಶ್ನೆ!. ನಾನು ನಿಟ್ಟುಸಿರು ಬಿಟ್ಟೆ. ಮಧ್ಯದಲ್ಲಿ ಇವಳದ್ದು ಸಂಧಾನ. "ಪುಟ್ಟಿ, ಅಪ್ಪಂಗೆ ತುಂಬಾ ಸುಸ್ತಾಗಿದೆ ಇವತ್ತು, ನಾಳೆ ಬರೆದುಕೊಟ್ರೆ ಆಗಲ್ವಾ?". "ನಾಳೆ ಬರೆದುಕೊಟ್ಟರೆ ನಾನು ಪ್ರಿಪೇರ್ ಆಗೋದು ಯಾವಾಗ?, ನಾಡಿದ್ದೇ ಕಾಂಪಿಟೇಶನ್ನು" ಅವಳ ಸಂದಿಗ್ಧ!. ಕೊನೆಗೆ ನಾನೇ ಸೂಚಿಸಿದೆ. "ಒಂದು ಕೆಲ್ಸ ಮಾಡೋಣ ಪುಟ್ಟೀ, ನಾಳೆ ಬೆಳಿಗ್ಗೆ ಬೇಗ ಎದ್ದು ಬರೆದುಕೊಡ್ತೀನಿ ಆಯ್ತಾ? ನಾಳೆನೆಲ್ಲಾ ನೀನು ಪ್ರಿಪೇರ್ ಆಗಬಹುದು." ಈಗ ಸ್ವಲ್ಪ ಗೆಲುವಾಯ್ತು ಅವಳ ಮುಖ. "ಮರೀಬೇಡಿ ಅಪ್ಪಾ ಬೆಳಿಗ್ಗೆ, ಗುಡ್ ನೈಟ್" ಅಂತ ವಾಪಾಸ್ ಹೋದಳು.

"ನೀನ್ಯಾಕೆ ಮುಂಚೆನೇ ಹೇಳ್ಲಿಲ್ಲ ನಂಗೆ?" ನಾನು ಹೆಂಡತಿಯ ಮೇಲೆ ರೇಗಿದೆ. "ಸುಮ್ನೆ ನನ್ನ ಮೇಲೆ ಕೂಗ್ಬೇಡಿ ನೀವು. ನಿಮಗೆಲ್ಲಿ ಟೈಮ್ ಇತ್ತು? ದಿನಾ ರಾತ್ರಿ ಎಷ್ಟು ಗಂಟೆಗೆ ಬರ್ತಿದೀರಾ ಅಂತ ಗೊತ್ತು ತಾನೇ ನಿಮಗೆ? ನಿಮಗಿರೋ ಟೆನ್ಷನ್ನಲ್ಲಿ ಇದೊಂದು ಬೇರೆ ಕೇಡು ಅಂತ ಹೇಳ್ಲಿಲ್ಲ ನಾನು." ಅವಳಿಗೂ ರೇಗಿರಬೇಕು. ಸುಮ್ಮನೆ ಹಾಸಿಗೆ ಮೇಲೆ ಬಿದ್ದುಕೊಂಡೆ. ಒಂತರಾ ಅಸಹಾಯಕತನ, ಬೇಜಾರು, ದುಃಖ ಎಲ್ಲವೂ ಆವರಿಸಿಕೊಂಡಿತು ನನ್ನನ್ನು. ನಿದ್ದೆ ಸಂಪೂರ್ಣವಾಗಿ ಹಾರಿಹೋಗಿತ್ತು. ಮಗಳಿಗಾಗಿ ದಿನಕ್ಕೆ ಒಂದು ಅರ್ಧ ತಾಸಾದರೂ ಮೀಸಲಿಡಲು ನನಗೇಕೆ ಸಾಧ್ಯವಾಗುತ್ತಿಲ್ಲ? ಇತ್ತೀಚೆಗಂತೂ ಆಫೀಸಿಗೆ ಹೋದ ಮೇಲೆ ಮನೆ ಕಡೆ, ಮನೆಯವರ ಕಡೆ ಒಂಚೂರೂ ಗಮನ ಕೊಡಲೇ ಆಗುತ್ತಿಲ್ಲ, ಅಷ್ಟೆಲ್ಲ ಒತ್ತಡ. ನಿಜಕ್ಕೂ ಇಷ್ಟೆಲ್ಲಾ ಒತ್ತಡದಲ್ಲಿ ಕೆಲಸ ಮಾಡಲೇ ಬೇಕಾ? ಅಥವಾ ವಿನಾಕಾರಣ ನಾನೇ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇನಾ? ಒಂದೂ ತಿಳಿಯುತ್ತಿಲ್ಲ. "ನೀನು ಕೆಲಸ ಮತ್ತು ಸಂಸಾರ ಎರಡನ್ನೂ ನಿಭಾಯಿಸುವುದರಲ್ಲಿ ಸೋತಿದ್ದೀಯಾ" ಎಂದು ಮನಸ್ಸು ಪದೇಪದೇ ಹೇಳಲು ಶುರುಮಾಡಿತು. ಸುಮ್ಮನೆ ತಲೆಕೊಡವಿದೆ.

ಹಾಸಿಗೆಯ ಮೇಲೆ ಬಿದ್ದುಕೊಂಡೇ ಯೋಚಿಸಲು ಶುರುಮಾಡಿದೆ. ಮನಸ್ಸು ಬೇಡವೆಂದರೂ ಹಿಂದೆ ಓಡಿತು. ನಾವು ಚಿಕ್ಕವರಿದ್ದಾಗ ಪ್ರತೀ ಸಲ ಸ್ವಾತಂತ್ರೋತ್ಸವಕ್ಕೂ, ಗಣರಾಜ್ಯ ದಿನದಂದೂ ಅಪ್ಪ ತಪ್ಪದೇ ಭಾಷಣ ಬರೆದುಕೊಡುತ್ತಿದ್ದರು. ಅದನ್ನು ಬಾಯಿಪಾಠ ಮಾಡಿಕೊಂಡು ಹೋಗಿ ನಾವು ಶಾಲೆಯಲ್ಲಿ ಹೇಳುತ್ತಿದ್ದೆವು. ಹೈಸ್ಕೂಲ್ ಗೆ ಬಂದ ಮೇಲೆ ಪ್ರತೀ ವರ್ಷವೂ ಮಾರಿಗುಡಿಯಲ್ಲಿ ಆಗುವ ನವರಾತ್ರಿ ಸ್ಪರ್ಧೆಯಲ್ಲಿ ಖಾಯಂ ಆಗಿ ಅಪ್ಪ ಬರೆದುಕೊಟ್ಟ ಪ್ರಬಂಧವನ್ನು ಬರೆದು ನಾನು ಪ್ರೈಜ್ ಗೆದ್ದಿದ್ದೆ. ಸ್ಕೂಲ್ ಮತ್ತು ಹೈಸ್ಕೂಲಿನಲ್ಲಿ ಆಗುವ ಯಾವುದೇ ತರಹದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅಪ್ಪ ನಮ್ಮನ್ನು ಯಾವಾಗಲೂ ಹುರಿದುಂಬಿಸುತ್ತಿದ್ದರು, ಅಲ್ಲದೇ ತಾವು ಜೊತೆಗೆ ಕುಳಿತು ಸಹಾಯಮಾಡುತ್ತಿದ್ದರು. ಅವರೂ ಶಾಲಾ ಶಿಕ್ಷಕರಾಗಿದ್ದುದು ಇವಕ್ಕೆಲ್ಲ ಮೂಲ ಪ್ರೇರಣೆಯಾಗಿದ್ದಿರಬೇಕು, ಆದರೆ ಈಗ ಯೋಚಿಸಿದರೆ ಅವರ ಶೃದ್ಧೆ ಮತ್ತು ಉತ್ಸಾಹ ಬೆರಗು ಹುಟ್ಟಿಸುವಷ್ಟು ಅಸಾಧಾರಣವಾಗಿತ್ತು. ಪ್ರತೀ ವರ್ಷ ನಡೆಯುವ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅವರು "ನೂಕ್ಲಿಯರ್ ರಿಯಾಕ್ಟರ್’ ಅಥವಾ ’ಗೋಬರ್ ಗ್ಯಾಸ್" ಮಾಡೆಲ್ ಮಾಡಿಕೊಡುವಾಗ ತೆಗೆದುಕೊಂಡ ಶ್ರಮ, ಉತ್ಸಾಹ, ಅಲ್ಲದೆ ಅವು ಹೇಗೆ ಕೆಲಸಮಾಡುತ್ತವೆ ಎಂಬುದರ ವಿವರಣೆ ಇಂದಿಗೂ ನನ್ನ ಕಣ್ಣ ಮುಂದಿದೆ. ಅವಕ್ಕೆಲ್ಲ ಪ್ರಥಮ ಸ್ಥಾನ ಬಂದಾಗ ನನಗಾದ ಸಂತೋಷ, ಮಾತುಗಳಲ್ಲಿ ಹಿಡಿಸಲಾರದಷ್ಟು!. ದಿನಪತ್ರಿಕೆಗಳಲ್ಲಿ ಬರುವ ಪದಬಂಧವನ್ನು ಬಿಡಿಸುವಾಗಲೆಲ್ಲ ಅವರು ನನ್ನನ್ನು ಕರೆದು ಹತ್ತಿರ ಕುರಿಸಿಕೊಳ್ಳುತ್ತಿದ್ದರು. ಅಲ್ಲದೆ ಆ ಶಬ್ದಗಳು ಹೇಗೆ ಉದ್ಭವವಾದವು ಎಂಬುದನ್ನೂ ವಿವರಿಸುತ್ತಿದ್ದರು. ಅವರ ಶಾಲಾ ಲೈಬ್ರರಿಯಿಂದ ಹಲವಾರು ಒಳ್ಳೆಯ ಕನ್ನಡ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ನಮ್ಮ ರಜಾಕಾಲದ ಬಹುಪಾಲನ್ನು ನಾವು ಅವನ್ನು ಓದಿಕಳೆಯುತ್ತಿದ್ದೆವು. ಹೀಗೆ ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲವನ್ನೂ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು.

ಹಾಗಾದರೆ ನಮ್ಮ ಪಾಲಕರು ನಮಗೆ ಮೀಸಲಿಟ್ಟಷ್ಟು "ಕ್ವಾಲಿಟಿ ಟೈಮ್", ನಾವು ನಮ್ಮ ಮಕ್ಕಳಿಗೆ ಕೊಡುವುದು ಅಷ್ಟು ಕಷ್ಟವೇ? ನಾವೇ ಸೃಷ್ಟಿಸಿಕೊಂಡ ಅಥವಾ ನಮ್ಮ ಕೆಲಸದ ರೀತಿಯ ಮಾನಸಿಕ ಒತ್ತಡ, ರಸ್ತೆ ಟ್ರಾಫಿಕ್ಕಲ್ಲೇ ದಿನಕ್ಕೆ ಮೂರು ನಾಲ್ಕು ತಾಸು ಕಳೆಯುವ ಅನಿವಾರ್ಯತೆ, ನಮ್ಮಲ್ಲಿರುವ ಆಸಕ್ತಿ ಅಥವಾ ಶೃದ್ಧೆಯ ಕೊರತೆ ಇವೆಲ್ಲವೂ ಇದಕ್ಕೆ ಕಾರಣವಿರಬಹುದಾ?. ಕಾರಣ ಯಾವುದೇ ಇರಬಹುದು, ಆದರೆ ತಲೆಮಾರಿನಿಂದ ತಲೆಮಾರಿಗೆ ಹೀಗೆ ಅಭಿರುಚಿಗಳು ಮತ್ತು ಆಸಕ್ತಿಗಳು ಸೋರಿಹೋಗುತ್ತಾ ಇದ್ದರೆ ಮುಂದೆ ಜೀವನ ಬರೀ ಯಾಂತ್ರಿಕವಾಗುವುದಿಲ್ಲವೆ? ಯಾವಾಗ ಕೇಳಿದರೂ ’ನಂಗೆ ಈಗ ಟೈಮ್ ಇಲ್ಲ, ಬೇರೆ ಕೆಲಸಗಳಿವೆ" ಅನ್ನೋ ರೆಡಿಮೇಡ್ ಉತ್ತರವನ್ನು ಮನಸ್ಸು ಸದಾ ಕೊಡುತ್ತಲೇ ಇರುತ್ತದೆ. "ಸಂಗೀತವನ್ನು ಸೀರಿಯಸ್ಸಾಗಿ ಕಲೀಬೇಕು" ಅಂತ ೮ ತಿಂಗಳ ಹಿಂದೆ ಅನ್ಕೊಂಡಿದ್ದೆ. "ಸಿಗೋದೊಂದು ರವಿವಾರ,ಅವತ್ತೂ ಪ್ರಾಕ್ಟೀಸ್ ಮಾಡ್ತಾ ಕುಳಿತರೆ ಅಷ್ಟೇ" ಅಂತ ಮನಸ್ಸು ಕಾರಣ ಹೇಳಿತು. ಅಲ್ಲಿಗೆ ಅದರ ಕಥೆ ಮುಗೀತು. "ಹೊಸ ಮನೆಗೆ ಒಂದು ಚೆಂದನೆಯ ಪೇಂಟಿಂಗ್ ಬಿಡಿಸಿ ಹಾಲ್ ನಲ್ಲೇ ತೂಗುಹಾಕಬೇಕು" ಅಂತ ಪೇಪರ್,ಹೊಸ ಬಣ್ಣ ಎಲ್ಲಾ ತಂದಿದಾಯ್ತು, "ಸಿಕ್ಕಾಪಟ್ಟೆ ಸಣ್ಣ ಹಿಡಿದು ಮಾಡೋ ಕೆಲಸ ಈ ಚಿತ್ರ ಬರೆದು ಪೇಂಟಿಂಗು ಮಾಡೋದು, ಮುಂದಿನ ವಾರ ಟೈಮ್ ಮಾಡ್ಕೊಂಡು ಮಾಡಕ್ಕಾಗಲ್ವಾ?" ಅಂತ ಅಂದುಕೊಂಡಿದ್ದೇ ಸರಿ, ಆ ಮುಂದಿನವಾರ ಬಂದೇ ಇಲ್ಲ! ಯಾವುದೇ ಒಂದು ಅತೀ ತಾಳ್ಮೆ ಮತ್ತು ಶ್ರದ್ಧೆ ಬೇಡುವ ಕೆಲಸವನ್ನು ಸರಿಯಾಗಿ ಮಾಡಿದ್ದೇ ದಾಖಲೆಯಿಲ್ಲ. ಬರೀ ಸಮಯದ ಅಭಾವ ಇದಕ್ಕೆಲ್ಲ ಕಾರಣವಾಗಿರಬಹುದಾ? "ಹೌದು" ಅನ್ನಲು ಮನಸ್ಸು ಯಾಕೋ ಒಪ್ತಾ ಇಲ್ಲ! ಉತ್ತರ ಎಲ್ಲೋ ನನ್ನಲ್ಲೇ ಇದೆ. ಒಂಥರಾ ಎಲ್ಲವನ್ನೂ ಓದಿದ್ದೂ, ಪರೀಕ್ಷೆಯಲ್ಲಿ ಏನೂ ಬರೆಯಲಿಕ್ಕಾಗದ ವಿದ್ಯಾರ್ಥಿಯ ಪರಿಸ್ಥಿತಿಯಂತೆ ಮನಸು ವಿಲವಿಲ ಒದ್ದಾಡಿತು.

ಈಗಿನ ಮಕ್ಕಳದಂತೂ ವಯಸ್ಸಿಗೆ ಮೀರಿದ ಮಾತು, ವರ್ತನೆ. ನಮ್ಮ ಅಪ್ಪ ಅಮ್ಮಂದಿರಿಗೆ ಹೀಗೆಲ್ಲ ಅನ್ನಿಸಿದ್ದು ನನಗೆ ಅನುಮಾನ. ಅವರ ಗ್ರಹಿಕಾ ಸಾಮರ್ಥ್ಯ ಕೂಡಾ ಜಾಸ್ತಿ. ಟೀವಿಯಲ್ಲಿ ಬರೋ ಕಾರ್ಯಕ್ರಮಗಳನ್ನು ನೋಡಿದ್ರೆ ಗೊತ್ತಾಗಲ್ವೆ? ಎಷ್ಟು ಬೇಗ ಹೇಳಿ ಕೊಟ್ಟಿದ್ದನೆಲ್ಲ ಕಲಿತುಬಿಡ್ತಾರೆ? ನಾಲ್ಕು ಜನರ ಎದುರು ನಿಂತು ಮಾತನಾಡುವುದಕ್ಕೂ, ಹಾಡುವುದಕ್ಕೂ ಒಂಚೂರು ಭಯವಿಲ್ಲ!. ಐದನೇತ್ತಿಯಲ್ಲಿದ್ದಾಗ ಅಪ್ಪ ಹೇಳಿಕೊಟ್ಟಿದ್ದ "ಸಾರೇ ಜಹಾಂಸೆ ಅಚ್ಛಾ"ವನ್ನು ಹಾಡನ್ನು ಯಾವುದೋ ಸ್ಪರ್ಧೆಯಲ್ಲಿ ಹಾಡಿ ಮುಗಿಸೋವಷ್ಟರಲ್ಲಿ ನಾನು ಬೆವೆತುಹೋಗಿದ್ದೆ. ಅದೂ ಕೊನೆ ಸಾಲನ್ನು ಮರೆತು ಹೇಗೋ ತಪ್ಪು ತಪ್ಪು ಹಾಡಿ ಅಪ್ಪನ ಹತ್ತಿರ ಬೈಸಿಕೊಂಡಿದ್ದೆ. ಈಗಿನ ಮಕ್ಕಳಿಗೆ ಸಿಗುತ್ತಿರುವ ಸವಲತ್ತು, ಅವಕಾಶ, ಅಪ್ಪ ಅಮ್ಮಂದಿರ ಪ್ರೋತ್ಸಾಹ ಎಲ್ಲ ಕಾರಣವಿರಬಹುದು, ಆದರೆ ಅವರ ಸಾಮರ್ಥ್ಯವನ್ನಂತೂ ಕಡೆಗಣಿಸುವ ಮಾತೇ ಇಲ್ಲ. ಬಹುಷಃ ಇದೂ ನನ್ನ ಆತಂಕಕ್ಕೂ ಒಂದು ಕಾರಣವಿರಬೇಕು. ಅವರ ಬೌದ್ಧಿಕ ಸಾಮರ್ಥ್ಯವನ್ನು ನಾವು ಸರಿಯಾದ ದಾರಿಯಲ್ಲಿ ತೊಡಗಿಸಿ ಮಾರ್ಗದರ್ಶನ ನೀಡುತ್ತಿದ್ದೇವೆಯಾ ಅನ್ನುವುದು. ಆ ಕೆಲಸವನ್ನು ಅಪ್ಪ ಎಷ್ಟು ಚೆನ್ನಾಗಿ ನಿರ್ವಹಿಸಿದ್ದರು ಅನ್ನುವುದನ್ನು ಈಗ ಯೋಚಿಸಿದರೆ ಅವರ ಬಗ್ಗೆ ಹೆಮ್ಮೆಯನಿಸುತ್ತದೆ. ಆದರೂ ಎಷ್ಟೋ ಸಲ ನಾವು ಅವರನ್ನು ನಿರಾಸೆಗೊಳಿಸಿದ್ದುಂಟು. "ತಬಲಾ ಸಾಥ್ ಕೊಡುವಷ್ಟಾದರೂ ತಬಲಾ ಕಲಿ" ಅಂದು ಅವರು ಎಷ್ಟು ಸಲ ಹೇಳಿದ್ದರೋ ಏನೋ? ಆವಾಗ ಅದು ತಲೆಯೊಳಗೆ ಇಳಿಯಲೇ ಇಲ್ಲ. ಈಗ ಅದರ ಬಗ್ಗೆ ಪಶ್ಚಾತಾಪವಿದೆ. "ನಾನು ಸರಿಯಾಗಿ ಸಾಧಿಸಲಾಗದಿದ್ದನ್ನು ಮಕ್ಕಳು ಕಲಿತು ಸಾಧಿಸಲಿ" ಅನ್ನುವ ಆಸೆ ಎಲ್ಲ ಪಾಲಕರಿಗೂ ಇರುತ್ತದೆಯಲ್ಲವೆ? ನಾಲ್ಕು ಜನರ ಮುಂದೆ ಅದರ ಬಗ್ಗೆ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿದ್ದ ಬೇಸರ, ಹತಾಶೆ ಆಗ ಗೊತ್ತಾಗುತ್ತಿರಲಿಲ್ಲ. ಈಗ ಅದರ ಅರಿವಾಗುತ್ತಿದೆ. "ಇವನ ಹತ್ತಿರ ಈಗ ಮೂರು ದಿನ ಕೇಳುವಷ್ಟು ಸಂಗೀತದ ಕಲೆಕ್ಷನ್ ಇದೆ" ಎಂದು ಈಗ ಅಪ್ಪ ಹೆಮ್ಮೆಯಿಂದ ಬೀಗುವಾಗ ಅವರ ಕಣ್ಣಲ್ಲಿನ ಹೊಳಪು ಖುಶಿ ಕೊಡುತ್ತದೆ. ಯಾವುದೋ ಅತೀ ಕ್ಲಿಷ್ಟವಾದ ರಾಗವನ್ನು ಅಪ್ಪನಿಗೆ ಕೇಳಿಸಿ, ಇದು ಹೀಗೆ ಎಂದು ವಿವರಿಸುವಾಗ ಅಪ್ಪನಿಗಾಗುವ ಸಂತೋಷ ಅವನು ಮಾತನಾಡದೆಯೂ ಗೊತ್ತಾಗುತ್ತದೆ. ಮಕ್ಕಳು ನಮ್ಮ ಆಸೆಗೆ ತಕ್ಕುದಾಗಿ ವಿಶಿಷ್ಟವಾದುದನ್ನು ಸಾಧಿಸಿದಾಗ ಆಗುವ ಸಂತಸದ ಮಹತ್ವ ಈಗ ನನಗೆ ಯಾರೂ ಹೇಳಿಕೊಡದೇ ಅರ್ಥವಾಗುತ್ತದೆ.

ಎಲ್ಲಿಂದೋ ಶುರುವಾದ ಯೋಚನೆಗಳು ಎಲ್ಲಿಗೋ ಕರೆದುಕೊಂಡು ಹೋದವು. ಎಷ್ಟೋ ಗೊಂದಲಗಳಿದ್ದರೂ ಮನಸ್ಸು ಒಂದು ತಹಬದಿಗೆ ಬಂದ ಹಾಗೆ ಅನ್ನಿಸಿತು. "ನಿನ್ನ ಆತಂಕ ಅತ್ಯಂತ ಸಹಜ, ಅತಿಯಾಗಿ ಯೋಚಿಸುವುದನ್ನು ಬಿಡು, ಬರೀ ನೆಗೆಟಿವ್ ಆಗಿ ಯೋಚನೆ ಮಾಡುತ್ತಿದ್ದೀಯಾ" ಎಂದು ಮನಸ್ಸು ಎಚ್ಚರಿಸಲು ಶುರು ಮಾಡಿತು. ಬಹುಷಃ ನಾನು ಸುಮ್ಮನೆ ಆತಂಕಪಡುತ್ತಿದ್ದೇನೆ ಅನ್ನಿಸಿತು. ಎಲ್ಲ ಪಾಲಕರೂ ಈ ಸನ್ನಿವೇಶವನ್ನು ದಾಟಿಯೇ ಮುಂದೆ ಬಂದಿರುತ್ತಾರೆ. ನನ್ನ ಅಪ್ಪನಿಗೂ ಹೀಗೆ ಅನ್ನಿಸಿರಬಹುದು. "ಯೋಚನೆ ಮಾಡುವುದನ್ನು ಬಿಡು, ಯೋಚನೆಗಳನ್ನು ಕಾರ್ಯರೂಪಕ್ಕೆ ತಾ" ಎಂದು ಮನಸು ಹೇಳತೊಡಗಿತು. ನಿಜ, ಅಪ್ಪ ಹೇಳಿಕೊಟ್ಟ ರೀತಿಗಳು ನನಗೆ ಪಾಠವಾಗಬೇಕು. ಎಷ್ಟೋ ಸಲ ಹಾಗಾಗಿರುತ್ತದೆ. ನಾವು ಯಾರ್ಯಾರನ್ನೋ ನಮ್ಮ "ರೋಲ್ ಮಾಡೆಲ್" ಆಗಿ ಇಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಹತ್ತಿರವೇ ಇರುವ ನಮ್ಮವರ ಮಹತ್ವ ಗೊತ್ತಾಗುವುದೇ ಇಲ್ಲ. ನಮ್ಮ ಅಪ್ಪ, ಅಮ್ಮ, ಅಕ್ಕ, ತಮ್ಮಂದಿರಿಂದಲೇ ಕಲಿಯುವುದೇ ಬೇಕಾದಷ್ಟಿರುತ್ತವೆ. " ಅಂಗೈನಲ್ಲೇಬೆಣ್ಣೆ ಇಟ್ಟುಕೊಂಡು ಊರಲ್ಲೆಲ್ಲ ತುಪ್ಪ ಹುಡುಕಿದ ಹಾಗೆ" ನಾವು ಎಲ್ಲೋ ಸ್ಪೂರ್ತಿಗಾಗಿ ಹುಡುಕುತ್ತಲೇ ಇರುತ್ತವೆ. ಇಲ್ಲ, ಇನ್ನು ಮೇಲೆ ಎಷ್ಟು ಕಷ್ಟವಾದರೂ ಒಂದಷ್ಟು ಸಮಯವನ್ನು ಮಗಳಿಗಾಗಿಯೇ ಮೀಸಲಿಡುತ್ತೇನೆ ಎಂದು ಧೃಢ ನಿರ್ಧಾರ ಮಾಡಿಕೊಂಡೆ.

ರಾತ್ರಿಯ ನೀರವವನ್ನು ಭೇದಿಸಿ ಒಂದೇ ಸಮನೆ ಮೊಬೈಲು ಕಿರ್ರನೆ ಕೀರಿ ನನ್ನ ಯೋಚನಾ ಸರಣಿಯನ್ನು ನಿಲ್ಲಿಸಿತು. ಹೆಂಡತಿ ಅಸ್ಪಷ್ಟವಾಗಿ ಗೊಣಗಿದ್ದು ಕೇಳಿತು. ಈ ರಾತ್ರಿಯಲ್ಲಿ ಯಾರಪ್ಪಾ ಫೋನ್ ಮಾಡಿದವರು ಅಂತ ಕುತೂಹಲದಲ್ಲಿ ನೋಡಿದರೆ ಸಂದೀಪ್, ನನ್ನ ಪ್ರಾಜೆಕ್ಟ ಮ್ಯಾನೇಜರು. ಮನಸ್ಸು ಏನೋ ಕೆಟ್ಟದನ್ನು ಊಹಿಸಿತು. ಈ ಮಧ್ಯರಾತ್ರಿ ಮ್ಯಾನೇಜರಿನಿಂದ ಫೋನ್ ಬರುವುದೆಂದರೆ ಒಳ್ಳೆ ಸುದ್ದಿಯಾಗಿರಲು ಸಾಧ್ಯವೇ? ಆಚೆಕಡೆಯಿಂದ ಸ್ವಲ್ಪ ಕಂಗಾಲಾದ ಧ್ವನಿ. ಏನೋ "ರಿಲೀಸ್ ಸ್ಟಾಪರ್" ಅಂತೆ, ತುಂಬಾ ಅರ್ಜೆಂಟ್ ಪ್ರಾಬ್ಲಮ್ಮು, ಬೆಳಿಗ್ಗೆ ಏಳು ಗಂಟೆಗೆ ಕಸ್ಟಮರ್ ಕಾಲ್ ಇದೆ. ಆರು-ಆರುವರೆಗೆ ಆಫೀಸ್ ಗೆ ಬರಲು ಬುಲಾವ್. ಏನೋ ಡಿಸ್ಕಸ್ ಮಾಡಬೇಕಂತೆ. ಸರಿ ಅಂತ ಫೋನ್ ಇಟ್ಟೆ. "ಬರ್ತೀನಿ, ಬರ್ತೀನಿ" ಅಂತ ಹೆದರಿಸುತ್ತಾ ಇದ್ದ ನಿದ್ರೆ ಈಗ ಸಂಪೂರ್ಣವಾಗಿ ಹೊರಟು ಹೋಯ್ತು. ಹಾಸಿಗೆಯಲ್ಲಿ ಸುಮ್ಮನೇ ಹೊರಳಾಡಲು ಮನಸ್ಸಾಗಲಿಲ್ಲ. ಎದ್ದು ಮುಖ ತೊಳೆದುಕೊಂಡು ಹಾಲ್ ಗೆ ಬಂದು ಕೂತೆ. ತಕ್ಷಣ ಪುಟ್ಟಿಯ ಭಾಷಣ ನೆನಪಾಯ್ತು. ಒಂದು ಬಿಳಿ ಹಾಳೆ ತೆಗೆದುಕೊಂಡು ಬರೆಯಲು ಶುರು ಮಾಡಿದೆ. ವಿವೇಕಾನಂದರ "ನಾಡಿಗೆ ಕರೆ" ಪುಸ್ತಕ ನೆನಪಾಯ್ತು. ಎಂಥಹ ಧೀಮಂತ ವ್ಯಕ್ತಿತ್ವ? "ಏಳಿ..ಏದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ" ಅವರದ್ದೇ ಮಾತುಗಳು. ಬಹುಷಃ ನನಗೇ ಹೇಳಿದ್ದಿರಬೇಕು. ಮೈಮೇಲೆ ಏನೋ ಆವೇಶ ಬಂದವರ ಹಾಗೆ ಬರೆಯುತ್ತಲೇ ಹೋದೆ.