Sunday, September 7, 2008

ಕಚ್ಚೋ ಚಪ್ಪಲ್ಲು

"ಥೂ, ದರಿದ್ರ ಮಳೆ, ಶೂ ಎಲ್ಲಾ ಒದ್ದೆ ಆಗೋಯ್ತು", ಎಂದು ಗೊಣಗುತ್ತಾ ರೂಮ್ ಮೇಟು ಶೂ ತೆಗೆದು ಬದಿಗೆ ಎಸೆದಿದ್ದು ನೋಡಿ ನನಗೆ ನಗು ಬಂತು. "ಮಳೆಗಾಲದಲ್ಲಿ ಶೂ ಒದ್ದೆಯಾಗದೇ ಇನ್ನೇನು ಸುಡುಬೇಸಿಗೇಲಿ ಒದ್ದೆ ಆಗುತ್ತಾ?" ಅಂತ ಪ್ರಶ್ನೆ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದ್ರೆ ಅವನಿದ್ದ ಮೂಡಲ್ಲಿ ಆ ಪ್ರಶ್ನೆ ಕೇಳಿದ್ರೆ ನನ್ನ ಆರೋಗ್ಯಕ್ಕೆ ಒಳ್ಳೆದಲ್ಲವೆಂದು ಮನಸ್ಸು ತಿಳಿ ಹೇಳಿದ್ದರಿಂದ, ಬಾಯಿ ತೆಪ್ಪಗಾಯ್ತು. "ಹಂ, ಯಾಕೋ ಸಿಕ್ಕಾಪಟ್ಟೆ ಮಳೆ ಇವತ್ತು. ಬೆಂಗಳೂರಲ್ಲಿ ಒಂದು ಜೋರು ಮಳೆ ಬಿದ್ರೆ, ಎಲ್ಲಾ ಅಧ್ವಾನ" ಅಂತ ಅವನ ಪಾಡಿಗೆ ಸಹಾನುಭೂತಿ ವ್ಯಕ್ತಪಡಿಸಿ, ಅವನನ್ನ ಸ್ವಲ್ಪ ಸಮಾಧಾನ ಪಡಿಸಲು ಪ್ರಯತ್ನಿಸಿದೆ. ಅವನಿಗೆ ಸಮಾಧಾನವಾದ ಲಕ್ಷಣ ಕಾಣಲಿಲ್ಲ. ಅದಿನ್ನು ಒಣಗಲಿಕ್ಕೆ ೩ ದಿನವಾದ್ರೂ ಬೇಕು ಅನ್ನುವುದು ಅವನ ದೊಡ್ಡ ತಲೆನೋವಾಗಿತ್ತು. ಅವನು ಗೊಣಗುತ್ತಾ ಬಚ್ಚಲಮನೆಗೆ ಕಾಲು ತೊಳೆಯಲು ಹೋಗುತ್ತಿದಂತೆಯೇ ನನ್ನ ನೆನಪುಗಳ ಹಾಸಿಗೆ ನಿಧಾನವಾಗಿ ಬಿಚ್ಚಲಾರಂಭಿಸಿತು.

ಚಿಕ್ಕಂದಿನಲ್ಲಿ ಮಳೆಗಾಲ ನನಗೆ ಹೇಳಿಕೊಳ್ಳುವಷ್ಟು ಇಷ್ಟವೇನೂ ಆಗಿರಲಿಲ್ಲ. ಮಳೆನೀರಿನಲ್ಲಿ ಆಡಬಹುದು ಎಂಬ ಸಂತೋಷ ಒಂದನ್ನು ಬಿಟ್ಟರೆ ಮಳೆಗಾಲದಲ್ಲಿ ಎಲ್ಲವೂ ರಗಳೆಯೇ. ಈಗ ಬೆಂಗಳೂರಿಗೆ ಬಂದು ಊರ ಮಳೆಯನ್ನು ಮಿಸ್ ಮಾಡಿಕೊಂಡ ಮೇಲೆಯೇ ಮಳೆಗಾಲದ ನೆನಪುಗಳು ಬಹಳ ಅಪ್ಯಾಯಮಾನವೆನ್ನಿಸುತ್ತಿವೆ. ಮಳೆಗಾಲ ಎಂದರೆ ಮಲೆನಾಡಿನವರಿಗೆ ಒಣಗದ ಬಟ್ಟೆ, ಹಸಿಹಸಿ ಕಟ್ಟಿಗೆ ಒಲೆಯಲ್ಲಿ ಉಂಟು ಮಾಡುವ ಅಸಾಧ್ಯ ಹೊಗೆ, ಸಂಕದ ಮೇಲೆ ಹರಿಯುತ್ತಿರುವ ನೀರು, ರಸ್ತೆ ಸರಿ ಇರದೆ ಕ್ಯಾನ್ಸಲ್ ಆಗುವ ಬಸ್ಸು ಇಂಥ ಹಲವಾರು ತೊಂದರೆಗಳೇ ನೆನಪಾಗೋದು. ಕೆಲಸಗಳು ಯಾವುದೂ ಸರಿಯಾದ ಸಮಯಕ್ಕೆ ಆಗುವುದಿಲ್ಲ. ಮೊನ್ನೆ ಜೋರು ಮಳೆ ಬಂದಾಗ, "ಆಹಾ, ಎಂಥಾ ಮಳೆ, ಈ ಮಳೆಲ್ಲಿ ಆರಾಮಾಗಿ ಕುತ್ಕಂಡು, ಬಿಸಿಬಿಸಿ ಚಾ ಕುಡ್ಯವು ನೋಡು" ಅಂತ ಅಮ್ಮನ ಹತ್ರ ಹೇಳಿದ್ರೆ, "ಎಂತಾ ಮಳೆನೆನಪಾ, ಒಂದೂ ಕೆಲ್ಸ ಮಾಡಲೇ ಬಿಡ್ತಿಲ್ಲೆ.ಎಷ್ಟೆಲ್ಲಾ ಕೆಲ್ಸ ಹಾಂಗೇ ಉಳ್ಕಂಜು ನೋಡು,ನಿಂಗೆ ಚಾ ಮಾಡ್ಕ್ಯೋತಾ ಕುಂತ್ರೆ ಅಷ್ಟೇಯಾ" ಎಂದು ನನ್ನ ಸೋಮಾರಿ ಮೂಡಿಗೆ ಛೀಮಾರಿ ಹಾಕಿದಳು. ಅವಳ ಪ್ರಕಾರ ಮಳೆಗಾಲ ನನ್ನಂಥ ಸೋಮಾರಿಗಳಿಗೆ ಹೇಳಿ ಮಾಡಿಸಿದ ಕಾಲ, ಅವಳ ಹಾಗೆ ಸದಾ ಚಟಿಪಿಟಿಯಿಂದ ಓಡಾಡ್ತಾ ಕೆಲಸ ಮಾಡಿಕೊಂಡು ಇರುವಂತವರಿಗೆ ಕೈಕಾಲು ಕಟ್ಟಿ ಹಾಕಿದ ಹಾಗೆಯೇ.

ಆದರೆ ಮಜ ಇರುವುದು ಮನೆಯಿಂದ ಹೊರ ಬಿದ್ದಾಗಲೇ. ನಾವು( ನಾನು ಮತ್ತು ನನ್ನಕ್ಕ) ಸಣ್ಣಕ್ಕಿದ್ದಾಗ ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಒಂತರಾ ಸಾಹಸವೇ ಆಗಿತ್ತು. ನಮಗಿಂತಾ ದೊಡ್ಡದಾದ ಕೊಡೆ ಹಿಡಿದುಕೊಂಡು,ಜೋರಾಗಿ ಗಾಳಿ ಬೀಸಿದಾಗಲೆಲ್ಲಾ ಅದು ಹಾರಿಹೋಗದಂತೆ ಅಥವಾ ಕೊಡೆಯೇ ಉಲ್ಟಾ ಆಗದಂತೆ ಹರಸಾಹಸ ಮಾಡುತ್ತಾ, ಅಚಾನಕ್ ಆಗಿ ರಸ್ತೆಯಿಂದ ಕೆಳಕ್ಕಿಳಿದು ಕೆಸರು ನೀರನ್ನು ನಮ್ಮ ಮೈಗೆ ಎರಚಲು ಹವಣಿಸುವ ಬಸ್ಸು, ಲಾರಿಗಳಿಂದ ತಪ್ಪಿಸಿಕೊಳ್ಳುತ್ತಾ, ರಸ್ತೆ ಮೇಲೆ ನೀರೆಲ್ಲಾ ಹರಿಯುತ್ತಿದ್ದರೆ ಆ ಪವಿತ್ರ ಕುಂಕುಮ ನೀರಲ್ಲೇ ನಮ್ಮ ಪಾದಗಳನ್ನು ನೆನೆಸಿಕೊಳ್ಳುತ್ತಾ ಹೋಗುತ್ತಿದ್ದೆವು. ನಮ್ಮ ಕೈಯಲ್ಲಿದ್ದ ಕೊಡೆ ಮಾತ್ರ ಅದ್ಭುತ ಸಲಕರಣೆಯಾಗಿ ಉಪಯೋಗಿಸಲ್ಪಡುತ್ತಿತ್ತು. ಮಳೆ ಜೋರಾಗಿ ಸುರಿಯುತ್ತಿದ್ದಾಗಲಂತೂ ಇದ್ದೇ ಇದೆಯಲ್ಲ, ಮಳೆ ಬೀಳದೇ ಇದ್ದಾಗಲೂ ಒಮ್ಮೊಮ್ಮೆ ಹೆಗಲ ಮೇಲೆ ಗದೆಯಾಗಿ, ಇನ್ನೊಮ್ಮೆ ಗಿರಿಗಿಟ್ಲಿಯಾಗಿ, ಇನ್ನೊಮ್ಮೆ ದಾರಿಬದಿಯಲ್ಲಿದ್ದ ಪಿಳ್ಳೆ ಹಣ್ಣಿನ(ನೇರಳೆ ಹಣ್ಣಿನಂತದ್ದೇ)ಟೊಂಗೆಯನ್ನು ಬಗ್ಗಿಸಲು, ಇನ್ನೊಮ್ಮೆ ಕ್ರಿಕೆಟ್ ಬ್ಯಾಟ್ ಆಗಿಯೂ ಉಪಯೋಗಕ್ಕೆ ಬರುತ್ತಿತ್ತು. ಇಷ್ಟೆಲ್ಲಾ ಸಂಭಾಳಿಸಿಕೊಂಡೂ ಹಾಕಿಕೊಂಡಿದ್ದ ಬಟ್ಟೆಗೆ ಒಂಚೂರು ಕೊಳೆಯಾಗದೇ ಮನೆಗೆ ಬಂದರೆ ನಮ್ಮ ವಯಸ್ಸಿಗೇ ಅವಮಾನ ಮಾಡಿದಂತಲ್ಲವೇ? ನಾವು ನೆಟ್ಟಗೆ ಮನೆಗೆ ಬರುತ್ತಿದ್ದ ಟಾರು ರಸ್ತೆಯನ್ನು ಬಿಟ್ಟು, ಪಕ್ಕದಲ್ಲಿದ್ದ ಕಾಲುವೆ ಹಾರಿ, ಧರೆಯನ್ನೆಲ್ಲ ಗುದಕಿ,ಬೆಟ್ಟ ಬೇಣವನ್ನೆಲ್ಲ ಹುಡುಕಿ, ಅಪರೂಪಕ್ಕೊಮ್ಮೆ ಜಾರಿಬಿದ್ದು ಮನೆಗೆ ತಲುಪಿದಾಗ ಅಮ್ಮನ ತಲೆನೋವು ಶುರುವಾಗುತ್ತಿತ್ತು. ಮೊದಲೇ ಬಟ್ಟೆಗಳು ಒಣಗುವುದಿಲ್ಲ.ತೊಳೆದುಹಾಕುವಂತಿಲ್ಲ.ಕೊಳೆಯಾದ ಬಟ್ಟೆಗಳನ್ನೇ ಹಾಕಿಕೊಂಡು ಹೋದರೆ ನಮಗೆ ಅವಮಾನ ಬೇರೆ. ಅಮ್ಮನ ಕಷ್ಟ ಹೇಳತೀರದು. ನಮ್ಮ ಮಂಗಾಟಗಳ ಚೆನ್ನಾಗಿ ಪರಿಚಯವಿದ್ದ ಅಮ್ಮ ಯೋಚಿಸಿ ಯೋಚಿಸಿ, ಸರಿಯಾದ ಚಪ್ಪಲ್ಲಿಗಳನ್ನು ನಾವು ಹಾಕಿಕೊಂಡರೆ ಬಟ್ಟೆ ಕೊಳೆಮಾಡಿಕೊಳ್ಳುವುದನ್ನು ಕಮ್ಮಿ ಮಾಡುತ್ತೇವೆ ಎಂದ ನಿರ್ಧಾರ ಮಾಡಿರಬೇಕು. ಹಾಗಾಗಿ ಮಳೆಗಾಲದಲ್ಲಿ ಹಾಕುವ ಬಟ್ಟೆಗಳಿಗೆ ಮನೆಯಲ್ಲಿ ಎಷ್ಟು ಮಹತ್ವ ಕೊಡುತ್ತಿದ್ದರೋ, ಅಷ್ಟೇ ಮಹತ್ವವನ್ನು ನಾವು ಹಾಕುವ ಚಪ್ಪಲ್ಲಿಗಳಿಗೂ ಕೊಡುತ್ತಿದ್ದರು. ಬೆಂಗಳೂರಿನಲ್ಲಿ ಒಂದೇ ಚಪ್ಪಲ್ಲಿ ಅಥವಾ ಶೂನಲ್ಲಿ ಇಡೀ ವರ್ಷ ಕಳೆದುಬಿಡಬಹುದೇನೋ, ಆದರೆ ನಮಗೆ ಮಾತ್ರ ವರ್ಷಕ್ಕೆ ಕಡ್ಡಾಯವಾಗಿ ಬೇಸಿಗೆಕಾಲಕ್ಕೆ ಒಂದು ಜೊತೆ, ಮಳೆಗಾಲಕ್ಕೆಂದೇ ಜಾಸ್ತಿ ಜಾರದ, ಪ್ಲಾಸ್ಟಿಕ್ ಚಪ್ಪಲ್ಲು ಬೇಕೇ ಬೇಕಾಗುತ್ತಿತ್ತು. ಛಳಿಗಾಲದಲ್ಲಿ ಸಾಮಾನ್ಯ ಹವಾಯಿ ಚಪ್ಪಲ್ಲು ಸಾಕಾಗುತ್ತಿತ್ತು.

ಮಳೆಗಾಲ ಇನ್ನೇನು ಶುರುವಾಗುತ್ತಿದೆ ಎನ್ನುವಾಗಲೇ ನಾವು ಅಪ್ಪನಿಗೆ ದಿನಾಲೂ ಚಪ್ಪಲ್ಲಿನ ನೆನಪು ಮಾಡಿಕೊಡಲು ಶುರುಮಾಡುತ್ತಿದ್ದೆವು. ನಮ್ಮ ಕಾಟ ಅತಿಯಾದಾಗ ಅಪ್ಪ ಒಂದು ಶುಭಸಂಜೆಯಲ್ಲಿ ಪೇಟೆಗೆ ಕರೆದುಕೊಂಡು ಹೋಗುತ್ತಿದ್ದರು. ಒಂದು ಐದಾರು ಅಂಗಡಿಗಳಿಗೆ ತಿರುಗಿ ಸಾಕಾದಷ್ಟು ಚೌಕಾಶಿ ಮಾಡಿ, ಸಾಧ್ಯವಾದಷ್ಟು ಬಾಳಿಕೆ ಬರುವಂತಹ ಜೋಡಿಯೊಂದನ್ನು ತೆಗೆಸಿಕೊಡುತ್ತಿದ್ದರು(ಆದರೆ ಆ ಜೋಡಿಗಳಿಗೆ ಒಂದೇ ಮಳೆಗಾಲಕ್ಕಿಂತ ಹೆಚ್ಚು ಆಯಸ್ಸನ್ನು ನಾವು ದಯಪಾಲಿಸುತ್ತಲೇ ಇರಲಿಲ್ಲ!). ಅಲ್ಲಿ ನಮ್ಮ ಆಯ್ಕೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಅಪ್ಪನಿಗೆ ಚೆನ್ನಾಗಿದೆ ಅನ್ನಿಸಿದ್ದು ನಮ್ಮ ಪಾಲಿಗೆ ಬಂದ ಹಾಗೇ. ಅಪರೂಪಕ್ಕೊಮ್ಮೆ "ನಂಗೆ ಆ ಚಪ್ಪಲ್ಲಿನೇ ಬೇಕು" ಎಂಬ ಕ್ಷೀಣ ಸದ್ದು ಬಾಯಿ ತುದಿಯಂಚಲ್ಲಿ ಬಂದು ಇನ್ನೇನು ಬಿದ್ದೇ ಹೋಗುತ್ತದೆ ಎಂಬ ಭಯ ಹುಟ್ಟಿಸಿದರೂ, ಅಪ್ಪ "ಈ ಚಪ್ಪಲ್ಲು ಅಡ್ಡಿಲ್ಯನಾ?" ಎಂದು ಕೇಳಿದ ತಕ್ಷಣವೇ ನಾವು ಗೋಣನ್ನು ಅಡ್ಡಡ್ಡವಾಗಿ ಆಡಿಸಿ, ಮಾತು ಗಂಟಲಲ್ಲೇ ಉಳಿದುಹೋಗುವಂತೆ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದೆವು. ಚಪ್ಪಲ್ಲಿ ಎಷ್ಟು ಚೆನ್ನಾಗಿದ್ದರೂ, "ಅದರ ಬಾರ್ ಸರಿಯಿಲ್ಲೆ", "ಇನ್ನೊಂಚೂರು ದೊಡ್ಡಕೆ ಇರಕಾಯಿತ್ತು", "ಹಿಮ್ಮಡಿ ಇನ್ನೂ ಎತ್ತರಕೆ ಇರಕಾಗಿತ್ತು" ಅಂತೆಲ್ಲಾ ಕಂಪ್ಲೇಂಟುಗಳನ್ನು ಅಪ್ಪ ಇಲ್ಲದಿದ್ದಾಗ ಅಮ್ಮನ ಹತ್ತಿರ ಹೇಳಿಕೊಳ್ಳುತ್ತಿದ್ದೆವು. ಅಮ್ಮ ಏನು ಮಾಡಿಯಾಳು? "ಮುಂದಿನ ಮಳೆಗಾಲದಲ್ಲಿ ಛೊಲೋದು ತಗಳಕ್ಕಡಾ ಬಿಡು" ಅಂತ ಸಮಾಧಾನ ಮಾಡುತ್ತಿದ್ದರು.

ಅಸಲಿ ತೊಂದರೆಗಳು ನಾವು ಆ ಚಪ್ಪಲ್ಲನ್ನು ಶಾಲೆಗೆ ಹಾಕಿಕೊಂಡು ಹೋಗಲು ಶುರುಮಾಡಿದ ಮೇಲೆ ಶುರುವಾಗುತ್ತಿದ್ದವು. ಸ್ವಲ್ಪ ಗಟ್ಟಿ ಗಟ್ಟಿಯಾಗಿದ್ದ ಚಪ್ಪಲ್ಲಿಗಳು ನಮ್ಮ ಮೆದುವಾದ ಪಾದವನ್ನು ತಾಗಿ ತಾಗಿ ಹೆಬ್ಬೆರಳ ಸಂದಿಯಲ್ಲೋ(ಚಪ್ಪಲ್ಲಿಯ ಬಾರ್ ಬರುವಲ್ಲಿ) ಅಥವ ಹಿಮ್ಮಡಿಯಲ್ಲೋ, ಅಥವೋ ಪಾದದ ಎರಡೂ ಬದಿಯಲ್ಲೋ ಸಣ್ಣ ಗಾಯವನ್ನು ಮಾಡಿ ಬಿಡುತ್ತಿದ್ದವು. ಅದರ ಪರಿಣಾಮ ಮಾರನೆಯ ದಿನದಿಂದ ನಮಗೆ ಆ ಚಪ್ಪಲ್ಲಿಯನ್ನು ಹಾಕಿಕೊಳ್ಳಲು ಬಹಳ ತೊಂದರೆ ಆಗುತ್ತಿತ್ತು. ನಾವು ನಡೆದಂತೆಲ್ಲ ಅದೇ ಗಾಯ ಮತ್ತೆ ಚಪ್ಪಲ್ಲಿನ ಗಟ್ಟಿ ಭಾಗಕ್ಕೆ ತಾಗಿ ಇನ್ನೂ ಉರಿಯಾಗುತ್ತಿತ್ತು. ಸುಮಾರು ಒಂದು ವಾರಗಳ ತನಕ ಆ ಗಾಯ ತೊಂದರೆ ಕೊಡುತ್ತಲೇ ಇರುತ್ತಿತ್ತು. ಅದಕ್ಕೆ ನಾವು "ಚಪ್ಪಲ್ಲಿ ಕಚ್ಚುವುದು" ಎನ್ನುತ್ತಿದ್ದೆವು. ಆಗೆಲ್ಲ ಗಾಯಕ್ಕೆ ಎಣ್ಣೆ ಹಚ್ಚೋ,ಚಪ್ಪಲ್ಲಿನ ಆ ಭಾಗಕ್ಕೆ ಹತ್ತಿ ಸುತ್ತೋ ಉರಿಯ ಪರಿಣಾಮವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಸ್ವಲ್ಪ ದಿನಗಳಾದ ಮೇಲೆ ಚಪ್ಪಲ್ಲು ಸ್ವಲ್ಪ ಮೆದುವಾಗಿಯೋ, ಅಥವ ನಮಗೆ ರೂಢಿಯಾಗಿಯೋ ಚಪ್ಪಲ್ಲು ಕಚ್ಚುವುದು ನಿಂತು ಹೋಗುತ್ತಿತ್ತು. ಆದರೆ ಆ ಸ್ವಲ್ಪ ದಿನಗಳಲ್ಲೇ ನಾವು ಅನುಭವಿಸುತ್ತಿದ್ದ ಯಮಯಾತನೆ,ಹೊಸ ಚಪ್ಪಲ್ಲಿನ ಉತ್ಸಾಹವನ್ನು ಬಹಳ ಪಾಲು ಕಮ್ಮಿಮಾಡಿಬಿಡುತ್ತಿದ್ದವು. ಹಾಗಾಗಿ ಮಳೆಗಾಲ ಎಂದ ಕೂಡಲೇ ನನಗೆ ನೆನಪಿಗೆ ಬರುವುದು, ನಾವು ಕುಂಟುತ್ತಾ ಕಾಲನೆಳೆಯುತ್ತಾ ಹೋಗುತ್ತಿರುವ ದೃಶ್ಯ. ಅಪರೂಪಕ್ಕೊಮ್ಮೆ ಅಪ್ಪ ಶೂ ಕೊಡಿಸಿಬಿಟ್ಟಾಗ(ಅದು ನಾನು ಹಿಂದಿನ ದಿನ ಅಮ್ಮನ ಹತ್ತಿರ ಹಠ ಮಾಡಿ ಅಪ್ಪನಿಗೆ ಹೇಳಿಸಿದ್ದರ ಪರಿಣಾಮ), ಪರಿಸ್ಥಿತಿ ಇನ್ನೂ ಗಂಭೀರವಾಗಿಬಿಟ್ಟಿತ್ತು. ಆ ಶೂ ಅಂತೂ ನನ್ನ ಪಾದದ ಎಲ್ಲಾ ಭಾಗಗಳಲ್ಲಿ ಕಚ್ಚಿ ಕಚ್ಚಿ. ಮಾರನೇಯ ದಿನ ನಾನು ಹವಾಯಿ ಚಪ್ಪಲನ್ನೇ ಹಾಕಿಕೊಂಡು ಹೋಗುವಂತೆ ಮಾಡಿಬಿಟ್ಟಿತ್ತು. ಆ ಮೇಲಿಂದ ನಾನಂತೂ ಯಾವತ್ತೂ ಶೂ ತೆಗೆಸಿಕೊಡಿರೆಂದು ಅಪ್ಪಿತಪ್ಪಿಯೂ ಕೇಳಲಿಲ್ಲ.

ಈಗೆಲ್ಲಾ ಮೆತ್ತ ಮೆತ್ತನೆಯ, ಸಾವಿರಾರು ರೂಪಾಯಿ ಬೆಲೆಯುಳ್ಳ ಶೂಗಳನ್ನು ಹಾಕಿಕೊಂಡು, ಅನಿರೀಕ್ಷಿತ ಮಳೆ ಬಿದ್ದಾಗ ಒದ್ದೆಯಾದರೆ ಒದ್ದಾಡುತ್ತಾ, ಅದನ್ನು ಒಣಗಿಸಲು ಹರಸಾಹಸ ಪಡುತ್ತಾ ಇರುವಾಗ ನಾವು ಎಷ್ಟೆಲ್ಲಾ ಮುಂದೆ ಬಂದುಬಿಟ್ಟಿದ್ದೇವಲ್ಲಾ ಎಂದು ಸೋಜಿಗವಾಗುತ್ತದೆ. ಚಪ್ಪಲ್ಲಿಗಳು ಕಚ್ಚುತ್ತವೆ ಎಂದು ಗೊತ್ತಿದ್ದೂ ಅವನ್ನು ಹಾಕಿಕೊಂಡು ಓಡಾಡಲು ಎಷ್ಟೆಲ್ಲಾ ಸಂಭ್ರಮ ಪಡುತ್ತಿದ್ದೆವು, ಈಗ ಎಂಥಾ ಚೆನ್ನಾಗಿರೋ ಶೂಗಳು ಮತ್ತು ಚಪ್ಪಲ್ಲಿಗಳೂ ಅಂಥಹ ರೋಮಾಂಚನವನ್ನು ತರುವುದಿಲ್ಲವೆಂದು ಬೇಜಾರೂ ಆಗುತ್ತದೆ.

19 comments:

sunaath said...

ಮಕ್ಕಳಿಗೆ ಮಳೆಗಾಲವೇ ಖುಶಿ.ನಿಮ್ಮ ನೆನಪುಗಳನ್ನು ಚೆನ್ನಾಗಿ ದಾಖಲಿಸಿದ್ದೀರಿ. ಒಂದಾನೊಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಸೋಗಿನಿಂದ ಮಾಡಿದ, (ಮಡಿಸಲು ಬಾರದ) ಕೊಡೆಗಳು ಸಿಗುತ್ತಿದ್ದವು.ಅದನ್ನು ಬಹುಶ: ನೀವು ನೋಡಿರಲಿಕ್ಕಿಲ್ಲ!

Sushrutha Dodderi said...

ತುಂಬಾ ಒಳ್ಳೇ ಟಾಪಿಕ್ಕು; ತುಂಬಾ ತುಂಬಾ ಚನಾಗ್ ಬರದ್ದೆ.

ಕೊಡೆ ಮತ್ತು ಚಪ್ಲಿ -ಎರಡರ ನೆನಪಿನ ನರೇಶನ್ನೂ ಅದ್ಭುತ. ಸಖತ್ ಖುಶಿ ಪಡಿಸಿದ್ದಕ್ಕೆ ಥ್ಯಾಂಕ್ಸ್!

ರಂಜನಾ ಹೆಗ್ಡೆ said...

ಹಾಯ್,
ತುಂಬಾ ಚನ್ನಾಗಿ ಬರೆದಿದ್ದಿರಾ.
ನಾನಂತು ಊರಲ್ಲಿ ಮಳೆನಾ ಹುಟ್ಟಿದಗಿಂದ enjoy ಮಾಡಿದ್ದೆ.
ಬರಹ ತುಂಬಾ ತುಂಬಾ ಚನ್ನಾಗಿ ಇದ್ದು. ಊರ್ ಕಡೆ ನೆನಪು ಸಿಕ್ಕಪಟ್ಟೆ ಆಗ್ತಾ ಇದ್ದು.
ಬೆಂಗಳೂರಿನ ಮಳೆನೂ enjoy ಮಾಡಲಕ್ಕು ಅನ್ನಿಸ್ತು ಈಗೀಗ.

Unknown said...

article chennagiddu, nanagu ashte male banda thakshana oorina nenapagthu olle topic saha.

Jesh Bhat said...
This comment has been removed by the author.
ತೇಜಸ್ವಿನಿ ಹೆಗಡೆ said...

ಮಧು,

ರಾಶಿನೇ ಆಪ್ತ ಅನಶ್ಚು ನೆನಪಿನ ನಿರೂಪಣಾ ಶೈಲಿ. ನಾ ಎಂದೂ ಚಪ್ಪಲ್ ಹಾಕ್ಯಂಜನೇ ಇಲ್ಲೇ ಆದ್ರೂ ಈ ಬರಹ ಓದಿ ಹೊಸ ಚಪ್ಪಲಿ ಅನುಭವ ಹೇಂಗ್ ಆಗಗು ಹೇಳಿ ಕಲ್ಪನೆ ಮಾಡ್ಕಂಡಿ. ಜೊತೆಗೆ ಮಳೆಯೆ ನೆನಪಿನ ಸಾಥ್ ರಾಶಿ ಖುಶಿ ಆತು :)

"ನೆನಪಿನ ದೋಣಿಯ ಪಯಣ ಹೀಗೇ ಸಾಗಲಿ"

Unknown said...

ಸುನಾಥರವರೇ,
ಇಲ್ಲ, ನಾನು ಅಂಥಹ ಕೊಡೆಗಳನ್ನು ನೋಡಿಲ್ಲ. ಅಂಥಹ ಕೊಡೆಗಳಿದ್ದರೆ ಇನ್ನೂ ಮಜವಿರುತ್ತಿತ್ತೇನೊ. ಧನ್ಯವಾದಗಳು

ಸುಶ್ರುತ,
ನಿಮಗೆ ಸಂತೋಷವಾದ್ರೆ ನನಗೂ ಸಂತೋಷವೇ. ಮಳೆಗಾಲದ ನೆನಪುಗಳೇ ಹಾಗೇನೋ. ಎಲ್ಲರಿಗೂ ಖುಶಿ ಕೊಡುತ್ತೆ. ಥ್ಯಾಂಕ್ಯೂ.

ರಂಜನಾ,
ನಮಸ್ಕಾರ.ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಹಂ..ಬೆಂಗಳೂರಿನ ಮಳೆ ಇನ್ನೂ ಎಂಜಾಯ್ ಮಾಡಲೆ ಸಾಧ್ಯ ಆಜಿಲ್ಲೆ ನನಗೆ. ನೋಡವು. ಹೀಗೆ ಬರ್ತಾ ಇರಿ ಈ ಕಡೆ.

vkm,
ತುಂಬಾ ಧನ್ಯವಾದಗಳು.
ಬರ್ತಾ ಇರಿ ಹೀಗೆ.

ತೇಜಕ್ಕಾ,
ಥ್ಯಾಂಕ್ಸ್. ನೀವೆಲ್ಲಾ ಹೀಗೆ ಪ್ರೋತ್ಸಾಹ ಕೊಡ್ತಾ ಇದ್ರೆ ನೆನಪಿನ ದೋಣಿ ಸಾಗ್ತಾನೇ ಇರ್ತು.

Unknown said...

ಇಂಗ್ಳೀಶಗೆ ಹೇಳಕ್ಕು ಅಂದ್ರೆ, 'awesome'. ಸಿಕ್ಕಾಪಟ್ಟೊಂಬೋತ್ಲೆ ಖುಷಿ ಆತು ಒದಿ.. ಊರ್ಕಡೆ ಮಳೆಗಾಲ, ಶಣ್ಣಕ್ಕಿದಾಗಿಂದು ಚತ್ರಿ ಕಥೆ, ಚಪ್ಲಿ, ಎಲ್ಲಾ ಎಷ್ಟು ಚೆನಾಗಿ ನಂಗು ಒಪ್ತು.. ನಂ ಊರಗಂತು ಡಾಂಬರ್ ರಸ್ತೆನೂ ಇರ್ಲೆ, ಶಾಲೆಗಿಂತ ಮುಂಚೆ ಬಯ್ಲು ಬೇರೆ, ಚತ್ರಿ ಉಲ್ಟಾ ಆಗದು ಖಾಯಂ ಆಗಿತ್ತು.

ಹೌದು, ನಾನು ಯೊಚ್ನೆ ಮಾಡಿರೆ ಈಗ, ಅದೆಲ್ಲ ಎಷ್ಟು ಸುಂದರ ಸಪ್ನ ಅನ್ನೋ ಅಷ್ಟರ ಮಟ್ಟಿಗೆ ಬದಲಾಯ್ದು ಜೀವನ. ಹೋದ ವರ್ಷ ಊರಿಂದ ಯಾರೊ ಬೆಂಗಳೂರಿನ ಮನೆಗೆ ಬಂದಾಗ ಕೇಳಿದ ಮೊದಲ ಪ್ರಶ್ನೆ, "ಎಷ್ಟು ಜನ ಇರ್ತೋ ಮನೆಲಿ", ಎ೦ತಕಪ ಕೇಳಿರೆ, ಅಷ್ಟು ಬೂಟ್ಸ್/ಚಪ್ಲಿ ಇದ್ದಿದ್ದ, ಚಪ್ಲಿ ಇಡ ಜಾಗ್ದಲ್ಲಿ.

Harisha - ಹರೀಶ said...

ಸಖತ್ತಾಗಿದ್ದು.. ಹಂಗೇ ಮುಂಗಾರು ಮಳೆ ಡೈಲಾಗ್ "ವಯಸ್ಸಿಗೇ ಅವಮಾನ" ಅನ್ನೋದೂ ಸೂಕ್ತವಾಗಿ ಬಳಕೆಯಾಯ್ದು :-)

ವಿ.ರಾ.ಹೆ. said...

ಮಧು, ಬಹಳ ಖುಷಿ ಕೊಟ್ಟಿತು ಬರಹ. ನಮ್ಮದೂ ಹೆಚ್ಚೂ ಕಮ್ಮಿ same to same ಬಾಲ್ಯ ಆಗಿದ್ದಕ್ಕೆ ಬಹಳ ಆಪ್ತ ಆತು. thanQ

Unknown said...

ಪಾಪಣ್ಣ, ಹರೀಶ, ವಿಕಾಸ್

ತುಂಬಾ ಧನ್ಯವಾದಗಳು. ನಿಮಗೆಲ್ಲಾ ಹಳೆ ನೆನಪುಗಳು ಮರುಕಳಿಸಿತು ಅಂದ್ರೆ ನನಗೂ ಸಂತೋಷ.
ನಿಜ ನಿಮ್ಮೆಲ್ಲರ ಅನುಭವಗಳು ನನ್ನದಕ್ಕಿಂತ ಬೇರೆ ಏನಿರಲಿಕ್ಕಿಲ್ಲ. ಮಳೆಗಾಲ ಅಂದ ಕೂಡ್ಲೇ ಮನೆ, ಊರು ನೆನಪಾಗಿ ಬಿಡ್ತು ಅಲ್ದಾ?

ಆಲಾಪಿನಿ said...

ಹದವಾಗಿದೆ ಲೇಖನ.

Seema S. Hegde said...

ಮಧುಸೂದನ,
ನಾನು, ರಘು ಅಂತೂ ಶಾಲೆಗೆ ಹೋಗುವ ದಾರಿಯಲ್ಲಿ ಒಂದು ಬೇಣ ದಾಟಬೇಕಾಗಿ ಬರುತ್ತಿದ್ದರಿಂದ ಗಾಳಿಗೆ ಕೊಡೆಯನ್ನು ಹಾರಿಸಿ ಹಾಕುತ್ತಿದ್ದಿದ್ದರಿಂದ ಆರಿದ್ರ, ಪುನರ್ವಸು, ಪುಷ್ಯಗಳಲ್ಲಿ ಕಂಬಳಿ ಕೊಪ್ಪೆಯಲ್ಲಿ ಹೋಗಿದ್ದೂ ಉಂಟು! ಚಪ್ಪಲ್ಲು ಮಾತ್ರ ನಮಗೂ ಕಚ್ಚಿದ್ದು ನಿಜ. ತಿರುಗಿ ಕಚ್ಚಿಬಿಡಲೇನೋ ಎನ್ನುವಷ್ಟು ಸಿಟ್ಟು ಬರುತ್ತಿತ್ತು ;) ಎಷ್ಟೊಂದು ಹಳೆಯ ನೆನಪುಗಳು ಮತ್ತೊಮ್ಮೆ ಹಸಿರು.

ಚಿತ್ರಾ said...

ಹಂ....

ಮಳೆ ನೀರಲ್ಲಿ ಕಾಲಾಡಿಸ್ಕ್ಯಂಡು ಶಾಲೆಗೆ ಹೋಗಲೆ ಮಜಾ ಬರ್ತಿತ್ತು. ಬರೀ ಕಾಲಲ್ಲಿ ನೀರಾಡಲೆ ಚಪ್ಪಲಿ ಕಚ್ತು ಹೇಳದೂ ಒಂದು ನೆವ ಆಗ್ತಿತ್ತು .

ಹಳೇ ನೆನಪು... ಈಗ ರಸ್ತೆ ಇಡೀ ನೀರು ಹರಿದರೂ , ನಾವು ಹಾಂಗೆ ನೀರಾಡ್ತಾ ಹೋಗಲಾಗ್ತಿಲ್ಲೆ ಅಲ್ದಾ ?

shivu.k said...

ಚಪ್ಪಲಿ ಕಚ್ಚೋದು , ಮಳೆಗಾಲದ ನಿಮ್ಮ ಬಾಲ್ಯ ತುಂಬಾ ಚೆನ್ನಾಗಿದೆ. ನಿಮ್ಮ ಬರವಣಿಗೆ ಚಿತ್ರವನ್ನು ಕಣ್ಣ ಮುಂದೆ ನಿಲ್ಲಿಸುತ್ತೆ. ಅದ್ಬುತ! ನಿಮ್ಮ ಬ್ಲಾಗನ್ನು ನನ್ನ ಬ್ಲಾಗಲ್ಲಿ ಲಿಂಕಿಸಿಕೊಂಡಿದ್ದೇನೆ.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

chetana said...

AhA! chappali kachchiskoLLO sukha kachchiskonDOrigE gottu!
Urina nenapAytu.
chendada barahakke thanks

- Chetana Teerthahalli

ಸುಪ್ತದೀಪ್ತಿ suptadeepti said...

ಸುರಿಯೋ ಮಳೆ, ಬೀಸೋ ಗಾಳಿ, ಹಾರುವ ಕೊಡೆ, ಕಚ್ಚುವ ಚಪ್ಪಲಿ, ಬಯಲು, ಬೇಣ, ಕಾಡು,... ಊರಿಗೆ ಊರನ್ನೇ ತುಂಬಿಕೊಂಡ ಬರಹ.

ನನ್ನ ಬಾಲ್ಯದಲ್ಲಿ ಸುನಾಥರು ಹೇಳಿದ ಮಡಿಸಲು ಬಾರದ "ಛತ್ರ /ತತ್ರ"ವನ್ನೂ ನೋಡಿದ್ದೇನೆ, ಮುತ್ತುಗದ ಎಲೆಗಳಿಂದ ಮಾಡಿದ- ಕಂಬಳಿಕೊಪ್ಪೆಯಂತೇ ಉಪಯೋಗಿಸುತ್ತಿದ್ದ- "ಗೊರಬು/ಕೊರಂಬು" (ತುಳು ಪದ) ಎಂಬ ಬೆಚ್ಚನೆಯ ಮಳೆ-ಗಾಳಿ-ರಕ್ಷೆಯನ್ನೂ ಉಪಯೋಗಿಸಿದ್ದೇನೆ. ಅದೇ ಒಂದು ಮಜಾ. ಜೊತೆಗೆ ನಮ್ಮ ಅಪ್ಪ/ಅಮ್ಮ ಒಂದು ಸೈಜ್ ದೊಡ್ಡ ಚಪ್ಪಲಿಗಳನ್ನೇ ಕೊಡಿಸುತ್ತಿದ್ದ ಕಾರಣ, ಮಳೆಯಲ್ಲಿ ಜಾರಿ-ಜಾರಿ ನಮ್ಮನ್ನೂ ಜಾರಿಸುತ್ತಿದ್ದ ಪ್ಲಾಸ್ಟಿಕ್ ಚಪ್ಪಲಿಗಳ ಕಿರುಕುಳ!!

ಈ ಮಳೆಗಾಲ ಊರಲ್ಲಿ ತಿರುಗಾಡಿ ನೆನಪುಗಳು ಎದ್ದು ಬಂದಿದ್ದವು. ಅವು ಮತ್ತೆ ಮರೆಗೆ ಸರಿಯುವ ಮೊದಲು ಈ ಲೇಖನ ಮುದ ಕೊಟ್ಟಿತು.

Unknown said...

ಶ್ರೀದೇವಿಯವರೇ,
ಧನ್ಯವಾದಗಳು, ಮತ್ತೆ ಬರುತ್ತಿರಿ.

ಸೀಮಕ್ಕಾ,
:-), ಹ್ಮ್ ನಿಜ ಮಜ ಬತ್ತಿತ್ತು ಅಲ್ದಾ?

ಚಿತ್ರಾ,
ಹೌದು, ಈಗ ಹಾಂಗೆ ಮಾಡವು ಅನ್ನಿಸಿದ್ರೂ ಹಾಂಗೆ ಮಾಡಲಾಗ್ತಿಲ್ಲೆ, ಆದರೆ ಆವಾಗ ಆಗ್ತಿದ್ದ ಮಜಾನೇ ಬೇರೆ. ಧನ್ಯವಾದಗಳು

ಶಿವು,
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ. ಲೇಖನ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಮೆಚ್ಚುಗೆ ಹೀಗೆ ಇರಲಿ.

ಚೇತನಾ,
ಥ್ಯಾಂಕ್ಸ್. ಮಳೆನೇ ಹಾಗೆ, ಅದು ಬಿದ್ದ ಕೂಡ್ಲೆ ಊರು ನೆನಪಾಗಿಬಿಡುತ್ತೆ.

ಸುಪ್ತದೀಪ್ತಿಯವರೇ,
ನೀವೇ ಪುಣ್ಯವಂತರು ಕಣ್ರೀ, ನಾವು ಬರೀ ಊಹಿಸಿಕೊಳ್ಳಬಹುದಾದ ಹಲವಾರು ಹಳೆಯದಾದ, ಇನ್ನೂ ಮಜವಾಗಿರಬಹುದಾದ ವಸ್ತುಗಳನ್ನೆಲ್ಲಾ ನೀವು ಹಾಕಿಕೊಂಡು ಮಳೆಯಲ್ಲಿ ಅಡ್ಡಾಡ್ಡಿದ್ದೀರಿ. ಆದರೆ ನಮ್ಮ ನೆನಪುಗಳು ಇಷ್ಟಾದರೂ ಹಸಿರಾಗಿದೆಯಲ್ಲಾ ಎಂದಷ್ಟೆ ಖುಶಿ.
ಧನ್ಯವಾದಗಳು.

Unknown said...

Hi madhu,

ninu barediddannu imagine madta, odata idde. Full odi innomme comment haktini. ninu olle barahagara. nangu nanna balyada nenapu aytu. chikka chikka vishyana estu chennagi capture madidiya, great.


chetan...