Saturday, January 26, 2008

ಅಂತರ್ಜಾತೀ ವಿವಾಹ.........

ಅಜ್ಜಿಯ ಕೈಯಲ್ಲಿದ್ದ ಜಪಸರದ ಮಣಿಗಳು ಇವತ್ತ್ಯಾಕೋ ವೇಗವಾಗಿ ತಿರುಗುತ್ತಿದ್ದವು. ಅದರರ್ಥ ಒಂದೇ ಅಜ್ಜಿಗೆ ತುಂಬ ಬೇಜಾರಾಗಿದೆ, ಅಥವಾ ಯಾವುದೋ ವಿಷಯದ ಬಗ್ಗೆ ಅಜ್ಜಿ ಗಹನವಾಗಿ ಯೋಚಿಸುತ್ತಿದ್ದಾರೆ ಅಂತಲೇ .ಅಮ್ಮ ಟೆಲಿಫೋನ್ ನ ರಿಸೀವರ್ ಅನ್ನು ಕುಕ್ಕಿ "ಅದ್ಯಾರೋ ಅಮೆರಿಕನ್ ಹುಡುಗಿಯಂತೆ, ವಿವೇಕನ ಆಫೀಸಲ್ಲೇ ಕೆಲ್ಸ ಮಾಡೋದಂತೆ, ಇಲ್ಲಿ ಬಂದು ನಮ್ಮ ಜೊತೆ ಒಂದು ವಾರ ನಮ್ಮ ಜೊತೆಯಲ್ಲಿ ಇರ್ತಾಳಂತೆ" ಅಂದಳು. ಅಮ್ಮನ ಮಾತುಗಳಲ್ಲಿ ಯಾಕೋ ತುಂಬಾ ಕಳವಳವಿತ್ತು. ನಾನೊಮ್ಮೆ ಅಪ್ಪನ ಮುಖ ನೋಡಿದೆ. ಅಪ್ಪ ಅಷ್ಟೊಂದೇನೂ ಗಾಬರಿ ಪಟ್ಟ ಹಾಗೆ ಕಾಣಲಿಲ್ಲ. ಬಹುಷಃ ಅಪ್ಪನಿಗೆ ಮುಂದೆ ಇನ್ನೂ ಕೆಟ್ಟದ್ದು ಸಂಭವಿಸಲಿದೆ ಅನ್ನಿಸ್ತೆನೋ.

ಈಗೊಂದು ಆರು ತಿಂಗಳಿಂದ ಅಪ್ಪ ಅಣ್ಣನಿಗೆ ಹೆಣ್ಣು ಹುಡುಕ್ತಾ ಇದ್ದರು. ಬಂದ ಬಹಳಷ್ಟು ಸಂಬಂಧಗಳನ್ನು ಅಣ್ಣ ಭಾರತಕ್ಕೆ ಬರಲು ಆಗುವುದಿಲ್ಲ ಅಂತಾನೋ, ರಜೆ ಸಿಗುವುದಿಲ್ಲ ಅಂತಾನೋ ನಾನಾ ಸಬೂಬುಗಳನ್ನು ಹೇಳಿ ತಿರಸ್ಕರಿಸುತ್ತಿದ್ದಾನೇ ಇದ್ದ. ಸಮಯ ಕಳೆದಂತೆ ಅಪ್ಪನ ಹಣೆಯ ಮೇಲಿನ ನೆರಿಗೆಗಳು ಜಾಸ್ತಿಯಾದವೇ ಹೊರತು ಅಪ್ಪ ಮಾಡಿದ ಯಾವುದೇ ಪ್ರಯತ್ನ ಫಲಕಾರಿಯಾಗುವ ಲಕ್ಷಣ ಕಾಣುತ್ತಿರಲಿಲ್ಲ. ಈಗ ನೋಡಿದರೆ ಇನ್ನೊಂದು ಬಾಂಬ್ ಸಿಡಿಸಿದ್ದಾನೆ. ನಾನು ಒಂದು ಮೂಲೆಯಲ್ಲಿ ಕುಳಿತು ಬದಲಾಗುತ್ತಿದ್ದ ಎಲ್ಲರ ಮುಖ ಲಕ್ಷಣಗಳನ್ನು ನೋಡುತ್ತಾ ಇದ್ದೆ. ಮುಂದಿನ ತಿಂಗಳೇ ನನ್ನ ಸೆಮೆಸ್ಟರ್ ಪರೀಕ್ಷೆ ಬೇರೆ. ಮನೆಯಲ್ಲಿ ನೋಡಿದರೆ ಯಾಕೋ ರಾಮಾಯಣ ನಡೆಯೋ ಹಾಗೆ ಕಾಣಿಸ್ತಿದೆ ಅಂತ ಅನ್ನಿಸಿ ಅಣ್ಣನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂತು.

ವಾರದ ನಂತರ ನಾನು, ಅಪ್ಪ, ಏರ್ ಪೋರ್ಟ್ ನ ಜಗಲಿಯಲ್ಲಿ "ಬಾರ್ಬರಾ" ಎಂದು ಬರೆದಿದ್ದ ಬೋರ್ಡ್ ಹಿಡಿದುಕೊಂಡು ಅಮೇರಿಕದಿಂದ ಬರಬಹುದಾದ ಅಣ್ಣನ ಗೆಳತಿಗಾಗಿ ಕಾಯ್ದುಕೊಂಡಿದ್ದೆವು. ಅಪ್ಪ ಅಲ್ಲಿ ಓಡಾಡುತ್ತಿದ್ದ ಯಾರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಪ್ರಯತ್ನ ಮಾಡುತ್ತಿರಲಿಲ್ಲ. ಸುಮಾರು ೧೧ ಗಂಟೆಯ ಹೊತ್ತಿಗೆ ಸ್ವಲ್ಪ ಧಡೂತಿ ದೇಹದ ಮಧ್ಯ ವಯಸ್ಸಿನ ಹೆಂಗಸೊಬ್ಬಳು ನಮ್ಮನ್ನು ನೋಡಿದ ಕೂಡಲೇ, ಎರಡೂ ಕೈಯನ್ನೂ ಮೇಲೆತ್ತಿ ಆಡಿಸಿದವಳೇ " ಹಾಯ್! ಮಿ.ಭಟ್, ಹೌವ್ ಆರ್ ಯೂ " ಅಂತ ಕೂಗಿಕೊಂಡಳು. ಅಲ್ಲಿದ್ದ ಎಲ್ಲರೂ ನಮ್ಮನ್ನೇ ನೋಡುತ್ತಿದ್ದರು. ಅಪ್ಪ ಸ್ತಂಭೀಭೂತರಾದ ಹಾಗೆ ಕಾಣಿಸಿತು ನನಗೆ. ದಾಪುಗಾಲನ್ನು ಇಡುತ್ತಾ ಬಂದವಳೇ ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಬಿಟ್ಟಳು. ಅವಳ ಹಿಡಿತದಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಅಪ್ಪನನ್ನು ನೋಡಿ ನನಗೆ ನಗು ತಡೆದುಕೊಳ್ಳಲು ಕಷ್ಟವಾಯಿತು. ಅಪ್ಪ ಒಳಗೊಳಗೇ "ರಾಮ ರಾಮ" ಅಂದುಕೊಂಡಿದ್ದು ನನಗೆ ಅಸ್ಪಷ್ಟವಾಗಿ ಕೇಳಿಸಿತು. ಪಕ್ಕದಲ್ಲಿದ್ದ ನನ್ನನ್ನು ನೋಡಿ "ಯೂ ಮಸ್ಟ್ ಬಿ ರಜನಿ ?" ಅಂದಳು ಬಾರ್ಬರಾ. ನಾನು ಉಕ್ಕಿ ಬರುತ್ತಿದ್ದ ನಗೆಯನ್ನು ತಡೆದುಕೊಂಡು " ಯಸ್, ರಜನಿ" ಅಂದು ಅವಳ ಕೈ ಕುಲುಕಿದೆ.

ಮದ್ಧ್ಯಾಹ್ನದ ಊಟಕ್ಕೆ ಅಮ್ಮ ಸ್ಪೆಶಲ್ಲಾಗಿ ಪಾಯಸ ಮಾಡಿದ್ದಳು. ಬಾರ್ಬರಾ ಮೊದಲು ಉಟ್ಟುಕೊಂಡಿದ್ದಕ್ಕಿಂತಲೂ ಚಿಕ್ಕದಾದ ಸ್ಕರ್ಟ ತೊಟ್ಟುಕೊಂಡಿದ್ದಳು. ಅಪ್ಪ ಅವಳ ಕಡೆ ನೋಡುವ ಯಾವುದೇ ಪ್ರಯತ್ನ ಮಾಡುತ್ತಿರಲಿಲ್ಲ. ಬಡಿಸುತ್ತಿದ್ದ ಅಮ್ಮನನ್ನು ಮಾತ್ರ, ಅವಳು ಮತ್ತು ಅಣ್ಣ ಸೇರಿ ಅಪ್ಪನಿಗೆ ಚಿತ್ರಹಿಂಸೆ ಕೊಡುತ್ತಾ ಇದ್ದಾರೆನೋ ಅನ್ನೋ ತರಹ ದುರುಗುಟ್ಟಿಕೊಂಡು ನೋಡುತ್ತಿದ್ದರು. ಬಾರ್ಬರಾ ಮಾತ್ರ ಅಮಾಯಕವಾಗಿ " ಯು ಹ್ಯಾವ್ ಒನ್ಲಿ ವೆಜಿಟೇರಿಯನ್ ಫುಡ್ ? ಆಲ್ವೇಸ್ ?" ಅಂತ ಕೇಳುತ್ತಿದ್ದಳು. " ಐ ಅಲವೇಸ್ ಲೈಕ್ ಚಿಕನ್ ವಿತ್ ಇಂಡಿಯನ್ ಫುಡ್" ಅಂತಾನೂ ಸೇರಿಸಿದಳು.ಅಪ್ಪ ಕುಳಿತಲ್ಲೆಯೇ ಚಡಪಡಿಸುತ್ತಿರುವುದು ಅವಳ ಲಕ್ಷಕ್ಕೆ ಬಂದ ಹಾಗೆ ಕಾಣಲಿಲ್ಲ. ಅಮ್ಮ ಗಂಟಲಿಗೆ ಏನೋ ಸಿಕ್ಕಿಕೊಂಡಂತೆ ಕೆಮ್ಮಿದರು.

ಊಟ ಆದ ತಕ್ಷಣ ಬಾರ್ಬರಾ ತನ್ನ ಲ್ಯಾಪ್ ಟಾಪ್ ತೆಗೆದು "ವಾಂಟ್ ಟು ಸೀ ವಿವೇಕ್’ಸ್ ಫೋಟೋಸ್ ?"ಅಂತ ನನ್ನ ಕರೆದಳು. ಅಪ್ಪ ಅಮ್ಮನೂ ಕುತೂಹಲದಿಂದ ಸೇರಿಕೊಂಡರು. ಮೊದಲನೆಯ ಫೋಟೋದಲ್ಲಿ ,ಅಣ್ಣ ಒಬ್ಬನೇ ಬೀಚಲ್ಲಿ ಚಡ್ಡಿ ಹಾಕಿಕೊಂಡು ನಿಂತಿದ್ದ. ಎರಡನೇ ಫೋಟೋದಲ್ಲಿ ಬಾರ್ಬರಾ ಬಿಕಿನಿ ತೊಟ್ಟು ಅಣ್ಣನ ಅರೆಬೆತ್ತಲೆ ದೇಹದ ತುಂಬಾ ಹರಡಿಕೊಂಡಿದ್ದಳು. ಅಪ್ಪ ಫೋಟೋ ನೋಡಿದವರೇ ಎದ್ದು ನಿಂತು, ಹೆಗಲ ಮೇಲಿದ್ದ ಟವೆಲನ್ನು ಕೊಡವಿ, ಮುಂದಿನ ಬಾಗಿಲಿನಿಂದ ಹೊರಗೆ ನಡೆದರು. ಅಪ್ಪನ ನಡುವಳಿಕೆಯ ಚೆನ್ನಾಗಿ ಅರಿವಿದ್ದ ನಮಗೆ, ಅವರಿಗೆ ತುಂಬಾ ಸಿಟ್ಟು ಬಂದಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗಲಿಲ್ಲ. ಅದನ್ನು ನೋಡಿದ ಬಾರ್ಬರಾ " ಇಟ್ ಮಸ್ಟ್ ಬಿ ವೆರಿ ಹಾರ್ಡ್ ಫಾರ್ ಮಿ. ಭಟ್, ಹಿ ಮಸ್ಟ್ ಬಿ ಮಿಸ್ಸಿಂಗ್ ಹಿಸ್ ಸನ್" ಅಂದಳು. ಪಾಪ ಅವಳಿಗೇನು ಗೊತ್ತು, ಮಗ ಎದುರು ಇದ್ದಿದ್ದರೆ ಅಪ್ಪ ಈಗ ಅವನ ಕುತ್ತಿಗೆ ಹಿಚುಕಲೂ ಹಿಂಜರಿಯುತ್ತಿರಲಿಲ್ಲ ಎನ್ನುವುದು?

ಎರಡು ದಿನ ಕಳೆಯುತ್ತಿದ್ದಂತೆಯೇ ಮನೆಯ ಹಿರಿಯಂದಿರು ಒಂದು ಅಲಿಖಿತ ನಿರ್ಧಾರಕ್ಕೆ ಬಂದ ಹಾಗೆ ಕಂಡುಬಂದರು. ವಿವೇಕ್ ಮನೆಗೆ ಬಂದಾಗ ಅವನನ್ನು ತರಾಟೆಗೆ ತೆಗೆದುಕೊಳ್ಳುವುದು, ಈಗ ಎಷ್ಟೆಂದರೂ ಬಾರ್ಬರಾ ಮನೆಯ ಅತಿಥಿ. ಪರದೇಶದವಳು ಬೇರೆ. ಅವಳ ಆತಿಥ್ಯದಲ್ಲಿ ಮಾತ್ರಾ ಯಾವುದೇ ಕುಂದು ಬರಬಾರದು ಅಂತ ನಿರ್ಧರಿಸಿದ್ದರು. ಇವೆಲ್ಲದರ ಮಧ್ಯ ಅಣ್ಣ ಫೋನ್ ಗೂ ಇ-ಮೈಲ್ ಗೂ ಸಿಗ್ತಿರಲಿಲ್ಲ. ಓಂದು ವಾರ ಅವನು ಕೆನಡಾಕ್ಕೆ ಕಾನ್ಪರೆನ್ಸಗೆ ಹೋಗುತ್ತಿರುವುದರಿಂದ ಸಂಪರ್ಕಕ್ಕೆ ಸಿಗುವುದಿಲ್ಲ ಅಂತ ಮುಂಚೆನೇ ಹೇಳಿಬಿಟ್ಟಿದ್ದ.

ದಿನಾಲೂ ರಾತ್ರಿ ಬಾರ್ಬರಾ ಮಾತ್ರ ಯಾರೋ ಎರಡು "ಸ್ಟೀವ್" ಮತ್ತು "ಕೀಥ್" ಅನ್ನೋ ಗಂಡಸರ ಜೊತೆ ಬಹಳ ಹೊತ್ತು ಮಾತಾಡುತ್ತಿದ್ದಳು. ನಾವೆಲ್ಲಾ ಅವಳ ಸಂಭಾಷಣೆಯನ್ನು ಕಿವಿಯ ಮೇಲೆ ಬೀಳಿಸಿಕೊಳ್ಳದೇ ಇರಲು ಪ್ರಯತ್ನಿಸಿದರೂ ಆಗಾಗ " ಲವ್ ಯು" " ಮಿಸ್ ಯು ಟೂ ಮಚ್" ಅನ್ನೋ ಪದಗುಚ್ಚಗಳು ಕೇಳಿಸುತ್ತಿದ್ದವು. ನಮ್ಮ ಜೊತೆಯಲ್ಲಿ ಮಾತಾಡುವಾಗ ಅವಳು ಮತ್ತು ವಿವೇಕ್ ಜೊತೆಯಾಗಿ ನೋಡಿದ ಸ್ಥಳಗಳ ಬಗ್ಗೆ ಪದೇ ಪದೇ ಹೇಳುತ್ತಿದ್ದಳು. ಅವಳು ಸುಳ್ಳು ಹೇಳುತ್ತಿದ್ದಾಳೆ ಅಂತಲೂ ನಮಗೆ ಅನ್ನಿಸುತ್ತಿರಲಿಲ್ಲ. ಯಾಕೆಂದರೆ ಅದನೆಲ್ಲ ಸಾಬೀತು ಪಡಿಸಲು ಅವಳ ಹತ್ತಿರ ಫೋಟೊ ಗಳು ಬೇರೆ ಇರುತ್ತಿದ್ದವು. ನನಗಂತೂ ಅಣ್ಣ ಮತ್ತು ಇವಳ ಮಧ್ಯ ಏನು ನಡೀತಿದೆ ಅಂತಾನೇ ತಿಳೀತಿರಲಿಲ್ಲ.

ನಮ್ಮ ಕುಟುಂಬದಲ್ಲಿ ಇದೇನೂ ಹೊಸತಾಗಿ ನಡೆಯುತ್ತಿರುವ ನಾಟಕವಲ್ಲ. ಎರಡು ವರುಷದ ಹಿಂದೆ ನನ್ನ ಅತ್ತೆಯ ಮಗ ಒಂದು ತೆಲುಗು ಕ್ರಿಶ್ಚಿಯನ್ ಹುಡುಗಿಯ ಜೊತೆ ಓಡಿಹೊಗಿ ರಾದ್ಧಾಂತ ಸೃಷ್ಟಿಮಾಡಿದ್ದ. ಅತ್ತೆ ಅಳುತ್ತಾ ಅಳುತ್ತಾ ನಮ್ಮ ಮನೆ ಸೋಫ಼ಾದ ಮೇಲೆ ಕುಳಿತಿದ್ದು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಆವಾಗ ಅಪ್ಪ ಮಾತ್ರ "ನನ್ನ ಮಗನೇನಾದ್ರೂ ಈ ತರ ಮಾಡಿದರೆ, ಇನ್ನೊಂದು ಸಲ ಮನೆ ಕಡೆ ಸುಳಿಯಲು ಬಿಡುತ್ತಿರಲಿಲ್ಲ ಅವನನ್ನ" ಅಂಥ ಹೇಳಿ ಅತ್ತೆಯ ದುಃಖ ಹೆಚ್ಚು ಮಾಡಿದ್ದರು. ಅತ್ತೆ ಸಿಟ್ಟು ಮಾಡಿಕೊಂಡು "ನಿನ್ನ ಮಗ ಹೀಗೆ ಮಾಡಿಕೊಂಡರೆ ಗೊತ್ತಾಗುತ್ತೆ ನಿನಗೆ, ಹೆತ್ತವರ ಸಂಕಟ ಏನು ಅನ್ನುವುದು " ಎಂದು ಹೇಳಿ ಹೋಗಿದ್ದರು. ಅತ್ತೆಗೇನಾದರೂ ಬಾರ್ಬರಳ ವಿಷಯ ಗೊತ್ತಾದರೆ ಅವಳು ಕೊಡ ತುಂಬಾ ಹಾಲು ಕುಡಿದಷ್ಟು ಸಂತೋಷ ಪಡುವುದರಲ್ಲಿ ಅನುಮಾನವೇ ಇಲ್ಲ.

ಐದನೇ ದಿನ ಬೆಳಿಗ್ಗೆ ಏಳುತ್ತಿದಂತೆಯೇ ಬಾತ್ ರೂಮಿನಲ್ಲಿ ಬಾರ್ಬರಾ ವಾಂತಿ ಮಾಡುತ್ತಿರುವ ಶಬ್ದ ಕೇಳಿಬಂತು. ಅಮ್ಮ ಮತ್ತು ಅಜ್ಜಿ ಒಬ್ಬರನೊಬ್ಬರ ಮುಖ ನೋಡಿಕೊಂಡರು. ಬಾರ್ಬರಾ ಹೊರಗೆ ಬಂದವಳೇ ತಲೆಸುತ್ತುತ್ತಿದೆ ಎಂದು ನೆಲದ ಮೇಲೆಯೇ ಕುಳಿತುಕೊಂಡಳು. ಹತ್ತಿರ ಹೋದ ನನಗೆ "ಡೋಂಟ್ ನೊ ವೈ, ಐ ಫ಼ೀಲ್ ಗಿಡ್ಡಿನೆಸ್ ಇನ್ ಮಾರ್ನಿಂಗ್ಸ್ ದೀಸ್ ಡೇಸ್" ಅಂದಳು. ಒಂದಿಷ್ಟು ಕನ್ನಡ ಸಿನೆಮಾಗಳನ್ನು ನೋಡಿದ್ರೆ ಬಹುಷಃ ಅವಳಿಗೆ ಯಾಕೆ ಹೀಗಾಗ್ತಿದೆ ಅನ್ನೋದು ಗೊತ್ತಾಗಿರೋದು. ಅವಳನ್ನು ನೋಡಿ ಒಂದು ಸಲ ಪಾಪ ಅನ್ನಿಸ್ತು ನನಗೆ. ಅಮ್ಮನ ಮುಖ ಯಾಕೋ ಕಪ್ಪಿಟ್ಟಿತ್ತು. ದಿನವೆಲ್ಲಾ ಎನೇನೊ ಗೊಣಗುತ್ತಾ ಇದ್ದಳು. ವಾರದ ನಂತರ ಅಣ್ಣ ಫೋನಲ್ಲಿ ಸಿಕ್ಕರೆ ಅಮ್ಮನ ಹತ್ತಿರ ಚೆನ್ನಾಗಿ ಉಗಿಸಿಕೊಳ್ಳುವುದು ಖಂಡಿತ ಎನ್ನಿಸಿತು.

ಆದರೆ ಆ ಅವಕಾಶ ಅಮ್ಮನಿಗೆ ಸಧ್ಯಕ್ಕೆ ಸಿಗುವ ಲಕ್ಷಣ ಕಾಣಲಿಲ್ಲ. ಅಣ್ಣ, ಬಾರ್ಬರಾ ವಾಪಸ್ ಹೋಗುವ ದಿನ ಇ-ಮೈಲ್ ಮಾಡಿ, ಇನ್ನೂ ಒಂದು ವಾರ ಕೆನಡಾದಲ್ಲೇ ಇರುವುದರಿಂದ ಸಧ್ಯಕ್ಕೆ ಫೋನ್ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದ್ದ. ಮೈಲ್ ನ ತುದಿಯಲ್ಲಿ ಮಾತ್ರ " ಹಾಂ, ಹೇಳೊಕೆ ಮರೆತಿದ್ದೆ. ನನ್ನ ಇನ್ನೊಬ್ಬಳು ಫ಼್ರೆಂಡ್, ಸಮೀರಾ ಶೇಕ್ ಅಂತ ಹೈದರಾಬಾದಿಂದ ಬರ್ತಿದ್ದಾಳೆ. ಅವಳಿಗೆ ೪ ದಿನ ಉಳಿಯೋದಿಕ್ಕೆ ಜಾಗ ಬೇಕು. ದಯವಿಟ್ಟು ನಾಳೆ ಬೆಳಿಗ್ಗೆ ೧೦ ಗಂಟೆಗೆ ಏರ್ ಪೋರ್ಟ್ ಗೆ ಹೋಗಿ ಅವಳನ್ನು ಕರೆದುಕೊಂಡು ಬನ್ನಿ" ಅಂತಾಲೂ ಸೇರಿಸಿದ್ದ. ಅಪ್ಪ ಧುಮುಗುಡುತ್ತಿದ್ದರು. "ಅವನು ಇದನ್ನೇನು ಛತ್ರ ಅನ್ಕೊಂಡಿದ್ದಾನಾ ? ಯಾರ್ಯಾರೋ ಬಂದು ಉಳಿದುಕೊಳ್ಳೋದಿಕ್ಕೆ" ಅಂತ ಹಾರಾಡಿದರು. ಅಮ್ಮ ಹೇಗೊ ಅವರನ್ನು ಸಮಾಧಾನ ಪಡಿಸಿದರು.

ಮತ್ತೆ ಮಾರನೆ ದಿನ ಬೆಳಿಗ್ಗೆ ನಾನು, ಅಪ್ಪ "ಸಮೀರಾ" ಅನ್ನೋ ಬೋರ್ಡ್ ಹಿಡಿದುಕೊಂಡು ಏರ್ ಪೋರ್ಟಲ್ಲಿ ಹಾಜರ್. ಸಮಯಕ್ಕೆ ಸರಿಯಾಗಿ, ತೆಳ್ಳಗೆ, ಬೆಳ್ಳಗೆ, ಸಲ್ವಾರ್ ಕಮೀಜ಼್ ಧರಿಸಿದ ಸುಮಾರು ೨೫ ವರ್ಷದ ಹುಡುಗಿ ನಮ್ಮ ಬಳಿಗೆ ನಿಧಾನವಾಗಿ ನಡೆದುಕೊಂಡು ಬಂದಳು. ಅವಳ ಮುಖದಲ್ಲಿ ಸಣ್ಣ ಕಿರುನಗೆ. ಅಪ್ಪನಿಗೆ ಕಣ್ಣಲ್ಲೆ ನಮಸ್ಕಾರ ಹೇಳಿದ ಬಳಿಕ ನನ್ನ ಕೈ ಹಿಡಿದು "ಹಲೋ ರಜನಿ, ನಿನ್ನ ಬಗ್ಗೆ ಬಹಳ ಕೇಳಿದ್ದೇನೆ" ಅಂದಳು. ನನಗ್ಯಾಕೋ ಮೊದಲ ನೋಟದಲ್ಲೇ ಅವಳು ಬಹಳ ಇಷ್ಟವಾಗಿ ಬಿಟ್ಟಳು. ಮನೆಗೆ ಬರುತ್ತಾ ದಾರಿಯಲ್ಲಿ ಅಪ್ಪನೂ ಕೂಡ ಅವಳ ಜೊತೆ ಮನ ಬಿಚ್ಚಿ ಮಾತಾಡಿದರು. ಅವಳು ಮೂಲ ಬಳ್ಳಾರಿಯವಳೆಂದೂ, ಒಹಿಯೊ ಯುನಿವರ್ಸಿಟಿ ಯಲ್ಲಿ ಅಣ್ಣನ ಕ್ಲಾಸ್ ಮೇಟ್ ಎಂದೂ, ಈಗ ಹೈದರಾಬಾದಲ್ಲಿ "ಚೈಲ್ಡ್ ಸೈಕೊಲೊಜಿಸ್ಟ್" ಆಗಿದ್ದಾಳೆ ಅಂತ ಗೊತ್ತಾಯಿತು.

ಹ್ಯೂಮನ್ ಸೈಕೊಲಾಜಿಯಲ್ಲೂ ಅವಳು ಪರಿಣಿತೆ ಅನ್ನುವುದು ನನಗೆ ಅವಳು ತಂದು ಕೊಟ್ಟ ಉಡುಗೊರೆಗಳನ್ನು ನೋಡಿದಾಗ ಮನದಟ್ಟಾಯಿತು. ಅಜ್ಜಿಗೊಂದು ಕಾಶ್ಮೀರಿ ಶಾಲು, ಅಪ್ಪನಿಗೊಂದು ಬಿಳಿ ಜುಬ್ಬಾ, ಅಮ್ಮನಿಗೊಂದು ಸೀರೆ ಮತ್ತು ನನಗೊಂದು ಹೈದರಾಬಾದೀ ಮುತ್ತಿನ ಸರವನ್ನು ತಂದಿದ್ದಳು. ಬೆಂಗಳೂರು ಯುನಿವರ್ಸಿಟಿ ಯಲ್ಲಿ ಪ್ರೊಫ಼ೆಸರ್ ಒಬ್ಬರನ್ನು ಭೇಟಿ ಮಾಡುವುದಿದೆ. ಮೂರು-ನಾಲ್ಕು ದಿನ ಅಷ್ಟೇ. ನಿಮ್ಮಿಂದ ತುಂಬಾ ಉಪಕಾರವಾಯಿತು ಎಂದು ಅಪ್ಪನಿಗೆ ಹೇಳುತ್ತಿದ್ದಳು. ಅರಳು ಹುರಿದಂತೆ ಪಟ ಪಟನೆ ಮಾತನಾಡುತ್ತಿದ್ದ ಅವಳು ನಿಂತ ನೀರಾಗಿದ್ದ ನಮ್ಮೆಲ್ಲರ ಮನಸ್ಸುಗಳಲ್ಲಿ ಹೊಸ ಹುರುಪನ್ನು ತುಂಬಿದ್ದಳು. ಶಾಂತ ಸರೋವರದಂತಿದ್ದ ಅವಳ ಕಣ್ಣುಗಳು ಮನೆಯಲ್ಲಿ ಮಿಂಚಿನ ಸಂಚಾರವನ್ನು ಉಂಟು ಮಾಡಿದ್ದವು. ಅಪರೂಪಕ್ಕೆ ಅಜ್ಜಿ ಕೂಡ ನಗು ನಗುತ್ತ ಮಾತಾಡುತ್ತಿದ್ದರು.

ಮದ್ಧ್ಯಾಹ್ನ ಊಟಕ್ಕೆ ಕುಳಿತಾಗ ಸಮೀರಾ, ಅಮ್ಮನ ಹತ್ತಿರ ಹಲಸಿನಕಾಯಿಯ ಪಲ್ಯ ಮಾಡುವುದು ಹೇಗೆಂದು ಕೇಳುತ್ತಿದ್ದಳು. "ಎರಡು ದಿನಾ ಇಲ್ಲಿರು, ನಾನೇ ನಿನಗೆ ಹೇಳಿಕೊಡ್ತೀನಿ" ಅಂತ ಅಮ್ಮ ಹೇಳುತ್ತಿದ್ದರು. ನಮಗೆಲ್ಲಾ ಮಡಿ, ಮೈಲಿಗೆ ಅಂತಾ ಬೈಯ್ತಾ ಇರೋ ಅಜ್ಜಿ ಕೂಡ ಒಬ್ಬ ಮುಸ್ಲಿಮ್ ಹುಡುಗಿ ಅಡುಗೆ ಮನೆ ಪ್ರವೇಶ ಮಾಡುವುದರ ಬಗ್ಗೆ ಚಕಾರವೆತ್ತದಿರುವ ಬಗ್ಗೆ ನನಗೆ ಆಶ್ಚರ್ಯವಾಯಿತು.

ಎರಡು ದಿನ ಸಮೀರಾ ದೇವರ ಮನೆಯ ಬದಿಗೆ ಪ್ರಜ್ನಾಪೂರ್ವಕವಾಗಿ ಸುಳಿದಿರಲಿಲ್ಲ. ಮೂರನೆಯ ದಿನ ಅಪ್ಪನೇ ಸಮೀರಾಳನ್ನು ಕರೆದು ಯಾವ ಮೂರ್ತಿಗಳು ಅವನ ಮುತ್ತಾತನ ಕಾಲದಿಂದ ಬಳುವಳಿ ಬಂದವು ಅಂತ ತೋರಿಸುತ್ತಾ ಇದ್ದ. "ದೇವನೊಬ್ಬ ನಾಮ ಹಲವು" ಅಂತ ಹೇಳುವುದು ಕೇಳಿತು ನನಗೆ. ಸಮೀರಾ ಹೌದೆಂದು ತಲೆ ಆಡಿಸುತ್ತಿದ್ದಳು.

೫ ದಿನ ಆಗುವಷ್ಟರಲ್ಲಿ ಎಲ್ಲರ ಮನಸ್ಸಿನಲ್ಲೂ ಒಂದೇ ಭಾವ. ಮಗ, ತಾನೇ ಮೆಚ್ಚಿದ ಹುಡುಗಿಯನ್ನು ಮದುವೆ ಆಗುವುದಾದರೆ ಸಮೀರಾನ್ನೆ ಯಾಕೆ ಆಗಬಾರದು ? ಎಂದು. ಆರನೇ ದಿನ ಆಶ್ಚರ್ಯವೆಂಬಂತೆ ಅಣ್ಣನ ಫೋನ್ ಬಂತು. ಕೆನಡಾದಿಂದ ಸೀದಾ ಬಂದಿರುವುದಾಗಿಯೂ, ಏರ್ ಪೋರ್ಟ್ ನಿಂದ ಟ್ಯಾಕ್ಸಿ ಮಾಡಿಸಿಕೊಂಡು ಇನ್ನೊಂದು ತಾಸಿನೊಳಗೆ ಮನೆಯಲ್ಲಿರುವುದಾಗಿ ಹೇಳಿದ್ದ. ಆಗ ತಾನೆ ಸಮೀರಾ ಯುನಿವರ್ಸಿಟಿಗೆ ಹೋಗಿದ್ದಳು. ನಾವು ಅಣ್ಣನಿಗೋಸ್ಕರ ಉತ್ಸುಕತೆಯಿಂದ ಕಾಯುತ್ತಿದ್ದೆವು. ಸುಮಾರು ೧೧ ಗಂಟೆಯ ಹೊತ್ತಿಗೆ ಬಂದ ಅಣ್ಣ, ಕೈ ಕಾಲು ತೊಳೆದುಕೊಂಡು ಬಂದ ಕೂಡಲೇ ಅಮ್ಮನ ಕೇಳಿದ ಮೊದಲನೆ ಪ್ರಶ್ನೆನೇ " ಬಾರ್ಬರಾ ಬಗ್ಗೆ ನಿಂಗೇನನ್ನಿಸ್ತು ಅಮ್ಮಾ ? " ಅಂತ. ಬಿಟ್ಟ ಬಾಣದ ಹಾಗೆ ಅಮ್ಮನಿಂದ ಮರುಪ್ರಶ್ನೆ " ಅವಳು ನಿನಗೆ ಹ್ಯಾಗೆ ಗೊತ್ತು?". ಅಣ್ಣ, "ಅವಳು ನನ್ನ ಸೆಕ್ರೆಟರಿ, ತುಂಬಾ ಚೆನ್ನಾಗಿ ಕೆಲಸ ಮಾಡ್ತಾಳೆ, ನನಗೆ ಸಹಾಯ ಆಗುತ್ತೆ ಅಂದರೆ ಏನು ಬೇಕಾದರೂ ಮಾಡ್ತಾಳೆ ಪಾಪ" ಅಂತ ಹೇಳಿ, ನನ್ನ ಕಡೆ ತಿರುಗಿ ಕಣ್ಣು ಹೊಡೆದ.

ನನಗೆ ಈಗ ಅಣ್ಣನ ಉಪಾಯ ಸಂಪೂರ್ಣವಾಗಿ ಅರ್ಥವಾಯಿತು. ಇಲ್ಲಿಯ ತನಕ ನಡೆದಿದ್ದೆಲ್ಲವೂ ಕಣ್ಣ ಮುಂದೆ ಬಂದು ಅಣ್ಣನ ಬುದ್ಧಿವಂತಿಕೆಯ ಬಗ್ಗೆ ಅಬ್ಬಾ ಎನಿಸಿತು. ಅಣ್ಣನ ಮಾಸ್ಟರ್ ಪ್ಲಾನ್ ಗೆ ಅಪ್ಪ, ಅಮ್ಮ, ಅಜ್ಜಿ ಎಲ್ಲರೂ ಬೇಸ್ತು ಬಿದ್ದಿದ್ದರು.

ಸಮೀರಾ ವಾಪಸ್ ಯುನಿವರ್ಸಿಟಿಯಿಂದ ಬರುವಷ್ಟರಲ್ಲಿ ಅಪ್ಪ ಅಮ್ಮ, ಅಣ್ಣನ ಜೊತೆ ಎಲ್ಲ ಮಾತನಾಡಿ ಮುಗಿಸಿಬಿಟ್ಟಿದ್ದರು. ಅಪ್ಪ ಸಮೀರಾಳಿಗೆ "ನೀನೇನೂ ಹೆದರಬೇಡಮ್ಮಾ, ನಾನು ನಿನ್ನ ಅಪ್ಪ ಅಮ್ಮನ ಜೊತೆ ಮಾತಾಡ್ತೀನಿ" ಅಂತ ಹೇಳುವುದು ಕೇಳಿಸಿತು.

ಮದುವೆಯು ಹಿಂದಿನ ದಿನ ಬಾರ್ಬರಾಳಿಂದ ದೊಡ್ಡದೊಂದು ಹೂ ಬೊಕ್ಕೆ ಉಡುಗೊರೆಯಾಗಿ ಬಂತು. ಅದರ ಜೊತೆ ಸಣ್ಣದೊಂದು ಚೀಟಿ. ಅದರಲ್ಲಿ
Flight to India ---- $1500
Indian Kurta ------ $5
"Emetic" to induce vomiting ---- $1
The look on your parent's faces ---- Priceless. ಅಂತ ಬರೆದಿತ್ತು.


(2-3 ವರ್ಷಗಳ ಹಿಂದೆ ಯಾರೋ ಫಾರ್‌ವರ್ಡ್ ಮಾಡಿದ್ದ ಈ-ಮೈಲ್ ನ "ಥೀಮ್" ನ್ನು ಬಳಸಿ, ಅಲ್ಲಲ್ಲಿ ವಿಸ್ತರಿಸಿ, ಮೂಲ ಆಂಗ್ಲ ಭಾಷೆಯಲ್ಲಿದ್ದದ್ದನ್ನು ಕನ್ನಡಕ್ಕೆ ಇಳಿಸಿದ್ದೇನೆ. ಮೇಲ್ ಕಳಿಸಿದ ಅನಾಮಧೇಯ ಗೆಳೆಯನಿಗೆ ಧನ್ಯವಾದ.)

5 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
ಕತೆ ಚೆನ್ನಾಗಿದೆ.
ತರ್ಜುಮೆಗೊಂಡ ಕತೆಯಾದರೂ ಶೈಲಿ ಚೆನ್ನಾಗಿದೆ.

ಇನ್ನಷ್ಟು ಬರೆಯುತ್ತಿರು, ಚೆನ್ನಾಗಿ ಬರೆಯುತ್ತೀಯ ಕಣೋ...

ತೇಜಸ್ವಿನಿ ಹೆಗಡೆ said...

ನಿಜಕ್ಕೂ ರಾಶಿನೇ ಚೊಲೋ ಇದ್ದು... ಹೀಗೆ ಬರೀತಾನೇ ಇರು.. ನಾ ಓದ್ತಾನೇ ಇರ್ತಿ :-)

Seema S. Hegde said...

ಮಧುಸೂದನ,
ಒಳ್ಳೆ ಬರವಣಿಗೆ. ನಿನಗೆ ಒಳ್ಳೆ ಬರವಣಿಗೆ ಶೈಲಿ ಇದ್ದು.
ಕಥೆನೂ ಚೊಲೋ ಇದ್ದು. ಟೈಮು ಸಿಕ್ಕಿದಾಗೆಲ್ಲಾ ಬರಿ. ನಿನ್ನ ಬ್ಲಾಗ್ ಆನು ಯನ್ನ ಪೇಜ್ ನಲ್ಲಿ ಲಿಂಕ್ ಮಾಡ್ಕ್ಯಂಜಿ.
ಅಪಾರ ಶುಭ ಹಾರೈಕೆಗಳೊಂದಿಗೆ,
ಸೀಮಕ್ಕ.

Unknown said...

ಕಥೆ ಮೆಚ್ಚಿ ಕಾಮೆಂಟಿಸಿದ ಅಕ್ಕಂದಿರಿಗೆಲ್ಲಾ ತುಂಬು ಹೃದಯದ ಧನ್ಯವಾದಗಳು.

ಜ್ಯೋತಿ said...

ಚೆನ್ನಾಗಿದೆ :-)