ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹಿಡಿದ ಹಳೇ ಪುಸ್ತಕಗಳನ್ನೆಲ್ಲಾ ಇನ್ನೊಮ್ಮೆ ತಿರುವಿಹಾಕಿ, ಹಳೆದ್ಯಾವುದೋ ಮಾರ್ಕ್ಸ್ ಕಾರ್ಡುಗಳನ್ನೊಮ್ಮೆ ನೋಡಿ ಕಣ್ತುಂಬಾ ಸಂತೋಷಪಟ್ಟರೆ ಆ ದಿನ ಸಾರ್ಥಕ. ಬೆಳಿಗ್ಗೆ ಬೆಳಿಗ್ಗೆನೇ ಮೆತ್ತಿ ಹತ್ತಿ ಕೂತು ಬಿಟ್ಟರೆ ಮಧ್ಯಾಹ್ನ ಅಮ್ಮ ಊಟಕ್ಕೆ ಕರೆಯುವ ತನಕಾನೂ ನಾನು ಅಲ್ಲೇ ಸ್ಥಾಪಿತನಾಗಿರುತ್ತೇನೆ. ಅಪರೂಪಕ್ಕೊಮ್ಮೆ ಮನೆಗೆ ಬಂದರೂ ಮಾತಾಡದೇ ಪುಸ್ತಕ ಹಿಡಿದುಕೊಂಡು ಕೂಡ್ತಾನೆ ಅನ್ನೋದು ಅಮ್ಮನ ದೊಡ್ಡ ಕಂಪ್ಲೇಂಟು. ಆದರೆ ನನಗ್ಯಾಕೋ ಹಾಗೇ ಮನೆಗೆ ಹೋದಾಗಲೆಲ್ಲಾ ಮೆತ್ತಿ ಹತ್ತಿ ಒಂದೊಪ್ಪತ್ತು ಕಳೆಯದೇ ಇದ್ದರೆ ಏನೋ ಕಳೆದುಕೊಂಡ ಹಾಗೆ.
ಹಾಗೆ ನೋಡಿದರೆ ಹಳ್ಳಿಮನೆಗಳಲ್ಲಿ ಮೆತ್ತಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ಮನೆಯ ಸಾಂಸ್ಕೃತಿಕ ಕೇಂದ್ರವೆಂದು ಯಾವುದನ್ನಾದರೂ ಕರೆಯಬಹುದಾದರೆ ನಿಸ್ಸಂದೇಹವಾಗಿ ಅದು ಮೆತ್ತಿಗೇ ಸೇರಬೇಕು.ಮಕ್ಕಳಿಗೆ ಹತ್ತಿ ಇಳಿದು ಆಟವಾಡಲಿಕ್ಕೆ, ಕಣ್ಣುಮುಚ್ಚಾಲೆ ಆಡುವುದಕ್ಕೆ, ಮನೆಗಳಲ್ಲಿ ಪೂಜೆ ಸಮಾರಂಭಗಳಾದರೆ "ಇಸ್ಪೀಟ್" ಆಡಲಿಕ್ಕೆ ಅತ್ಯಂತ ಪ್ರಶಸ್ತ ಜಾಗ ಅದು. ಅದರ ಉಪಯೋಗಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಚಿಕ್ಕು, ಮಾವು ಮುಂತಾದ ಹಣ್ಣುಗಳನ್ನು ಮಕ್ಕಳ ಕಣ್ಣಿಗೆ ಕಾಣದಂತೆ ಮುಚ್ಚಿಡಲು, ದಿನಬಳಕೆ ಉಪಯೋಗಿಸದ ಆದರೆ ದೊಡ್ಡ ಸಮಾರಂಭಗಳಿಗೆ ಬೇಕಾಗುವಂತಹ ದೊಡ್ಡ ದೊಡ್ಡ ಪಾತ್ರೆಗಳನ್ನು ಶೇಖರಿಸಿಡಲು, ಕಂಬಳಿ, ಚಾದರ ಇನ್ನೂ ಹಲವಾರು ಹಾಸಿಗೆ ಸಾಮಗ್ರಿಗಳನ್ನು ಶೇಖರಿಸಿಡಲು, ಇನ್ನೂ ಎಷ್ಟೋ. ನಾವು ಮಕ್ಕಳಿದ್ದಾಗ ಇಷ್ಟೆಲ್ಲಾ ವಸ್ತುಗಳಿದ್ದ ಮೆತ್ತಿ ಸಹಜವಾಗಿ ಒಂತರಾ ನಿಧಿ ಇದ್ದ ಹಾಗೇ ಅನ್ನಿಸುತ್ತಿತ್ತು. ಪ್ರತೀ ಸಲ ಮೆತ್ತಿ ಹತ್ತಿದಾಗಲೂ ಹೊಸಾ ಹೊಸ ವಸ್ತುಗಳು ಕಾಣ್ತಾ ಇದ್ದರೆ ಯಾವ ಮಕ್ಕಳಿಗೆ ತಾನೆ ಸಂತೋಷವಾಗಲಿಕ್ಕಿಲ್ಲ? ಅದೊಂದು ಸದಾ "ಟ್ರೆಶರ್ ಹಂಟ್" ಇದ್ದ ಹಾಗೆಯೇ. ಹಾಗೆಯೇ ಮನೆಯ ಗಜಿಬಿಜಿಯಿಂದ ಸ್ವಲ್ಪ ವಿರಾಮ ಬೇಕೆಂದರೂ, ಮೆತ್ತಿ ಹತ್ತಿ ಕುಳಿತು ಬಿಟ್ಟರೆ ಅದೊಂದು ಹೊಸ ಲೋಕವೇ ಸರಿ. ಹಾಗಾಗಿ ಏಕಾಗ್ರತೆಯಿಂದ ಪುಸ್ತಕ ಓದಲಿಕ್ಕೆ(ಅಕಾಡೆಮಿಕ್ ಪುಸ್ತಕಗಳಲ್ಲ, ಕಥೆ ಪುಸ್ತಕಗಳು!) ಮತ್ತು ಕವನ ಗಿವನ ಗೀಜಲಿಕ್ಕೆ ಮೆತ್ತಿಗಿಂತ ಪ್ರಶಸ್ತವಾದ ಜಾಗ ನಮಗಂತೂ ಸಿಕ್ಕುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುವಾಗ ಮೆತ್ತಿ ಹತ್ತಿ, ಜಗತ್ತಿನ ಅರಿವೇ ಇಲ್ಲದಂತೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕಥೆ ಕಾದಂಬರಿ ಓದುವ ಅನುಭೂತಿಯನ್ನು ಯಾವುದಕ್ಕೂ ಹೋಲಿಸಲು ಬರುವುದಿಲ್ಲ ಎಂದರೆ ಹಲವಾರು ಜನರಾದರೂ ನನ್ನನ್ನು ಅನುಮೋದಿಸುತ್ತಾರೆಂಬ ಭರವಸೆ ನನಗಿದೆ.
ಈ ಸಾರ್ತಿ ಮೆತ್ತಿ ಹತ್ತಿ ಹಳೆದ್ಯಾವುದೋ ಟ್ರಂಕನ್ನು ಶೋಧಿಸುತ್ತಿರುವಾಗ ಹಳೆಯ ಒಂದಷ್ಟು ಪತ್ರಗಳ ಗಂಟು ನನ್ನ ಕೈಸೇರಿತು. ಬಹಳ ಹಳೆಯದೇನಲ್ಲ, ಸುಮಾರು ೬-೭ ವರ್ಷದ ಹಿಂದಿನವು ಅಷ್ಟೇ. ನಾನು ಬೆಳಗಾವಿಯಲ್ಲಿ ಓದುತ್ತಿರುವಾಗ ಅಕ್ಕ ಕುಮಟಾದಲ್ಲಿ ಬಿಯೆಡ್ ಓದುತ್ತಿದ್ದಳು. ಆಗ ಸುಮಾರು ಒಂದು ವರ್ಷಗಳ ಕಾಲ ನಾವು ವಾರವಾರವೂ ಬರೆದುಕೊಂಡ ಪತ್ರಗಳ ಗಂಟು ಅದು. ಅದನ್ನು ಓದಿಕೊಂಡಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಇಡೀ ದಿನವೂ ಅದರ ಗುಂಗಿನಲ್ಲೇ ಇದ್ದೆ. ತುಂಬಾ ವೈಯಕ್ತಿಕ ಎನಿಸಿದರೂ ಬರೆದು ಎಲ್ಲರಲ್ಲೂ ಹಂಚಿಕೊಳ್ಳಬೇಕೆಂದು ಬಲವಾಗಿ ಅನ್ನಿಸಿ ಬಿಟ್ಟಿತು. ಆವಾಗಿನ್ನೂ ಮೊಬೈಲುಗಳು ಬಂದಿರಲಿಲ್ಲ. ನಾನು ಅಕ್ಕನಿಗೆ ಫೋನ್ ಮಾಡುವುದು ಬಹಳಾನೇ ಕಡಿಮೆ ಇತ್ತು. ಎಲ್ಲೋ ತಿಂಗಳಿಗೊಮ್ಮೆ ಮಾಡುತ್ತಿದ್ದೆ ಅಷ್ಟೇ. ಆದರೆ ಪತ್ರವನ್ನು ಮಾತ್ರ ತಪ್ಪದೇ ವಾರ ವಾರ ಬರೆದುಕೊಳ್ಳುತ್ತಿದ್ದವು. ನಾನು ಗೆಳೆಯರ ಜೊತೆ ರೂಮ್ ಮಾಡಿದ್ದರೆ ಅಕ್ಕ ಒಬ್ಬನೇ ರೂಮ್ ಮಾಡಿಕೊಂಡಿದ್ದಳು. ತಿಳಿನೀಲಿ ಇನ್ ಲ್ಯಾಂಡ್ ಪತ್ರಗಳಲ್ಲಿ ಸಾಧ್ಯವಾದಷ್ಟು ವಿಷಯಗಳನ್ನು ತುಂಬಿ (ಪತ್ರ ಅರ್ಧ ಬರೆದುಬಿಟ್ಟಾಗ ಇನ್ನೂ ಬಹಳಷ್ಟಿದೆ ಬರೆಯುವುದು ಅನ್ನಿಸಿಬಿಡುತ್ತಿತ್ತು, ಹಾಗಾಗಿ ಬರೆಯುತ್ತಾ ಹೋದ ಹಾಗೆ ಅಕ್ಷರಗಳ ಗಾತ್ರ ಸಣ್ಣದಾಗುತ್ತಾ ಹೋಗುತ್ತಿತ್ತು!) ಕಳಿಸುತ್ತಿದ್ದೆವು. ಈಗ ಆ ಪತ್ರಗಳನ್ನು ಓದಿದಾಗ ಅದರಲ್ಲಿದ್ದ ಪ್ರೀತಿ, ಕಾಳಜಿ, ನಮ್ಮ ಆವಾಗಿನ ಮನಸ್ಥಿತಿ ಎಲ್ಲಾ ನೋಡಿ ಒಂತರಾ ವಿಚಿತ್ರವಾದ ಖುಷಿಯಾಯ್ತು.
ಮೊದ ಮೊದಲು ಪತ್ರ ಬರೆಯಲು ಶುರು ಮಾಡಿದಾಗ ನಾನು ಉಮೇದಿಯಿಂದ ಒಂದೆರಡು ಸಾರ್ತಿ ಇಂಗ್ಲೀಶಲ್ಲೇ ಪತ್ರ ಬರೆದಿದ್ದೆ. ಆದರೆ ಹಾಗೆ ಬರೆದ ಪತ್ರವೊಂದು ಅಪ್ಪನ ಕೈಗೆ ಸಿಕ್ಕಿ, ಅಪ್ಪ ಅದರಲ್ಲಿ ಹಲವಾರು ವ್ಯಾಕರಣ ದೋಷಗಳನ್ನೆಲ್ಲಾ ಗುರುತಿಸಿ ಇಟ್ಟಿದ್ದರು(ಎಷ್ಟೆಂದ್ರೂ ಮೇಷ್ಟ್ರಲ್ವೇ?). ಅದನ್ನು ನೋಡಿದ ಮೇಲೆ ನನ್ನ ಇಂಗ್ಲೀಷ್ ಜ್ನಾನದ ಮೇಲೆ ನನಗೇ ವಿಪರೀತ ಅಭಿಮಾನ ಹುಟ್ಟಿ ಇಂಗ್ಲೀಷಲ್ಲಿ ಪತ್ರ ಬರೆಯುವ ಸಾಹಸವನ್ನು ಬಿಟ್ಟುಬಿಟ್ಟಿದ್ದೆ. ಮೊನ್ನೆ ಅಪ್ಪ ಗುರುತಿಸಿದ್ದ ತಪ್ಪುಗಳನ್ನೆಲ್ಲ ಮತ್ತೆ ನೋಡಿದಾಗ ನನಗೆ ನಗು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಎಷ್ಟು ಕೆಟ್ಟದಾಗಿ ಬರೆದಿದ್ದೆನೆಂದರೆ, ಈಗ ನನ್ನ ಇಂಗ್ಲೀಷು ಸಿಕ್ಕಾಪಟ್ಟೆ ಸುಧಾರಿಸಿದೆ ಎಂದೆನಿಸುವಷ್ಟು!. ಆಮೇಲಿನ ಪತ್ರಗಳನ್ನೆಲ್ಲಾ ತೆಪ್ಪಗೆ ಹವ್ಯಕ ಭಾಷೆಯಲ್ಲೇ ಬರೆದಿದ್ದೆ!. ನಾನು ಆಗಿನ್ನೂ ನನ್ನ ವಿದ್ಯಾಭ್ಯಾಸ ಮುಗಿಸುತ್ತಾ ಬಂದಿದ್ದೆ. ಅಕ್ಕ ಆಗ ತಾನೇ ಎಮ್ಮೆಸ್ಸಿಯನ್ನು ಅರ್ಧದಲ್ಲೇ ಬಿಟ್ಟು ಬಿಯೆಡ್ ಮಾಡಲು ಬಂದಿದ್ದಳು. ಹಾಗಾಗಿ ನಮ್ಮ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಸಹಜವಾಗಿ ನಮಗೆ ಆತಂಕ ಮತ್ತು ನಿರೀಕ್ಷೆಗಳಿದ್ದವು. ಅವು ಪ್ರತೀ ಪತ್ರಗಳಲ್ಲೂ ಎದ್ದು ತೋರುತ್ತಿದ್ದವು.
ಪ್ರಾರಂಭದ ಲೋಕಾಭಿರಾಮದ ಮಾತುಗಳೆಲ್ಲಾ ಮುಗಿದ ಮೇಲೆ ನಮ್ಮ ಅಭ್ಯಾಸಕ್ಕೆ ಆಗುತ್ತಿದ ತೊಂದರೆಗಳು(?), ಅಥವಾ ಪರೀಕ್ಷೆಯಲ್ಲಿ ಕಮ್ಮಿ ಮಾರ್ಕ್ಸ್ ಬಿದ್ದಿದ್ದಕ್ಕೆ ಕಾರಣಗಳು, ಇಂಥದ್ದೇ ಪತ್ರದ ಕೇಂದ್ರ ವಿಷಯಗಳಾಗಿ ಮೂಡುತ್ತಿದ್ದವು. "ಈ ವಾರ ಲೆಸೆನ್ ಪ್ಲಾನ್ ಮಾಡಿದೆ. ನನಗಂತೂ ಬಯೋಲಜಿಯಲ್ಲಿ ಸೆಲ್ ಡಿವಿಷನ್ ಟಾಪಿಕ್ ಇದೆ. ಇದು ಮಕ್ಕಳಿಗೆ ಅರ್ಥವಾಗುವುದು ಕಷ್ಟ. ಮಿಟೋಸಿಸ್ ಅರ್ಥವಾದರೂ ಮಿಯಾಸಿಸ್ ಅರ್ಥವಾಗುವುದೇ ಇಲ್ಲ. ಹೇಗೆ ಅರ್ಥ ಮಾಡಿಸಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ಪಾಠ ಮುಗಿದ ಮೇಲೆ ಅವರಿಗೆ ೨೫ ಮಾರ್ಕ್ಸ್ ಟೆಸ್ಟ್ ಬೇರೆ ಮಾಡಬೇಕು. ಇದರ ಜೊತೆ "ಟೀಚಿಂಗ್ ಏಡ್" ಬೇರೆ ಮಾಡಬೇಕು. ಅದೂ ಥರ್ಮೋಕೋಲಲ್ಲೇ ಮಾಡಬೇಕಂತೆ" ಅನ್ನೋ ಸಾಧಾರಣವಾದ ಕಷ್ಟದಿಂದ ಹಿಡಿದು "ಇಲ್ಲಿ ನನ್ನ ಪಾಠ ಎಲ್ಲಾ ಚೆನ್ನಾಗಿ ನಡೆಯುತ್ತಿದೆ, ಆದರೆ ಎಷ್ಟು ಚೆನ್ನಾಗಿ ಪಾಠ ಮಾಡಿದರೂ ಅಷ್ಟೇ, "ಉತ್ತಮ ಪಾಠ" ಎಂದು ಬರೆಯುವುದಿಲ್ಲ. ಪಾಠ ತುಂಬಾ ಚೆನ್ನಾಗಿದೆ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ "ಡಿಮೆರಿಟ್ಸ್" ಕಾಲಮ್ಮಿನಲ್ಲಿ ಏನಾದರೂ ಸಿಲ್ಲಿ ಮಿಸ್ಟೇಕನ್ನು ಬರೆದಿರುತ್ತಾರೆ (ಉದಾ: ಬ್ಲಾಕ್ ಬೋರ್ಡ್ ವರ್ಕ್ ಸುಧಾರಿಸಬೇಕು, ಸಾಲುಗಳು ನೇರವಾಗಿರಬೇಕು ಇಂಥದ್ದು) ಹೀಗೆ ಮಾಡಿದರೆ ಇಂಟರ್ನಲ್ ಮಾರ್ಕ್ಸ್ ಬೀಳುವುದೇ ಕಷ್ಟ" ಅನ್ನೋ ಗಂಭೀರ ಕಷ್ಟದ ಬಗ್ಗೆ ಅಕ್ಕ ಸಾಮಾನ್ಯವಾಗಿ ಬರೆಯುತ್ತಿದ್ದಳು. ನನ್ನ ಕಷ್ಟಗಳಂತೂ ಸದಾ ಪರೀಕ್ಷೆಯ ಸುತ್ತಮುತ್ತಲೇ ತಿರುಗುತ್ತಿದ್ದವು. "ನನ್ನ ಐಸಿ-೨ ಲ್ಯಾಬ್ ಸರಿನೇ ಆಜಿಲ್ಲೆ. ಎಲ್ಲಾ ಸರಿ ಮಾಡಿದಿದ್ದಿ, ಆದ್ರೂ "ಪಾರ್ಶಿಯಲ್ ಔಟ್ ಪುಟ್" ಬಂಜು. ನಮ್ಮ ಬ್ಯಾಚಲ್ಲಿ ಇನ್ನೂ ೫-೬ ಜನಕ್ಕೆ ಹಾಂಗೇ ಆಜು. ಈ ಇಲೆಕ್ಟ್ರಾನಿಕ್ಸ್ ಲ್ಯಾಬಿನ ಹಣೆಬರಹಾನೇ ಇಷ್ಟು. ಒಂದೂ ಸರಿಯಾಗಿ ವರ್ಕ್ ಆಗ್ತಿಲ್ಲೆ. ನಿನ್ನೆ ಸಿಕ್ಕಾಪಟ್ಟೆ ಟೆನ್ಶನ್ ಆಗೋಗಿತ್ತು. ಈಗ ಅಡ್ಡಿಲ್ಲೆ" ಅನ್ನೋ ದೌರ್ಭಾಗ್ಯದಿಂದ ಹಿಡಿದು "ನಂಗಳ ಕ್ಲಾಸ್ ಟೈಮ್ ಹ್ಯಾಂಗೆ ಗೊತ್ತಿದ್ದ? ಮಧ್ಯಾಹ್ನ ೧ ರಿಂದಾ ೫ ರ ತನಕ. ಊಟ ಮಾಡ್ಕ್ಯಂಡು ಹೋದ್ರಂತೂ ಪೂರ್ತಿ ನಿದ್ದೆ ಬಂದು ಬಿಡ್ತು. ಮೇಲಿಂದ ಸಿಕ್ಕಾಪಟ್ಟೆ ಸೆಖೆ ಬೇರೆ" ಅನ್ನೋ ಸರ್ವೇಸಾಧಾರಣವಾದ ಕಷ್ಟಗಳನ್ನೂ ಬರೆದುಕೊಳ್ಳುತ್ತಿದ್ದೆ. ಮುಕ್ಕಾಲು ಭಾಗ ನಮ್ಮ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರಲ್ಲೇ ಮುಗಿದುಹೋಗುತ್ತಿತ್ತು.
ಅಕ್ಕಂದಿರಿಗೆ ಯಾವತ್ತಿದ್ರೂ ಜಾಸ್ತಿ ಕಾಳಜಿ ಅಲ್ವೇ? ಹಾಗಾಗಿ ಸುಮಾರಷ್ಟು ಸಲಹೆ ಸೂಚನೆಗಳನ್ನು ಅಕ್ಕ ಪ್ರತೀ ಪತ್ರದಲ್ಲೂ ತಪ್ಪದೇ ನೀಡುತ್ತಿದ್ದಳು. "ನೀನು ಸರಿಯಾಗಿ ಓದು. ಎಷ್ಟೇ ಹೆವೀ ವರ್ಕ್ ಮಾಡು, ಆದರೆ ಆರೋಗ್ಯವನ್ನು ಹಾಳುಮಾಡಿಕೊಂಡು ಬಿಡಬೇಡ.ನಿದ್ದೆ ಸರಿಯಾಗಿ ಮಾಡು(ಇದನ್ನು ಹೇಳುವುದು ನಿಜಕ್ಕೂ ಅನವಶ್ಯಕವಾಗಿತ್ತು), ಇಲ್ಲದೇ ಇದ್ದರೆ ನಿನಗೆ ಆರಾಂ ಇರುವುದಿಲ್ಲ" ಅನ್ನೋ ಟಿಪಿಕಲ್ ಕಾಳಜಿ ಸಾಲುಗಳ ಜೊತೆಗೆ "ಪರೀಕ್ಷೆ ಚೆನ್ನಾಗಿ ಮಾಡು. ಸಿಲ್ಲಿ ಮಿಸ್ಟೇಕ್ ಮಾಡಬೇಡಾ. ಪ್ರಾಕ್ಟಿಕಲ್ ಎಕ್ಸಾಂನ ಬಹಳ ಕೇರ್ ನಿಂದ ಮಾಡು. ಗಡಬಡೆ ಮಾಡಿಕೊಳ್ಳಬೇಡಾ(ನನ್ನ ವೀಕ್ ನೆಸ್ ಅವಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು)" ಅನ್ನೋ ಗಂಭೀರ ಸಲಹೆಗಳನ್ನೂ ನೀಡುತ್ತಿದ್ದಳು. ಅವಳು ಅಷ್ಟೆಲ್ಲಾ ಹೇಳಿದ ಮೇಲೆ ನಾನು ಯಾಕೆ ಸುಮ್ಮನಿರಬೇಕೆಂದು ನಾನೂ ಒಂದೆರಡು ಸಾಲು ಬರೆದು ಹಾಕುತ್ತಿದ್ದೆ." ನೀನೂ ರಾಶಿ ನಿದ್ದೆಗೆಟ್ಟು ಓದಡಾ. ಸರಿಯಾಗಿ ಓದು.ಗಡಿಬಿಡಿ ಮಾಡ್ಕ್ಯಂಡು ತಪ್ಪು ಮಾಡಡಾ(ಅವಳ ಬಾಣ ತಿರುಗಿ ಅವಳಿಗೇ!) ಅಂತಾನೂ, ಆರೋಗ್ಯ ಸರಿ ನೋಡ್ಕ್ಯ. ಲೆಸ್ಸೆನ್ಸು ಹೇಳಿ ಆಡುಗೆ ಸರೀ ಮಾಡ್ಕ್ಯಳದ್ದೇ ಕಡಿಗೆ ಬಿಯೆಡ್ ಮುಗಸತನಕಾ ನನ್ನಂಗೆ ಆಗಿ(ತೆಳ್ಳಗಾಗಿ) ಬಂದು ಬಿಡಡಾ ಎಂದೆಲ್ಲಾ ಸಣ್ಣ ಜೋಕ್ ಕಟ್ ಮಾಡಿಬಿಟ್ಟಿದ್ದೂ ಇದೆ. ಇನ್ನೊಂದು ಸಲವಂತೂ ಯಾವುದೋ ದೊಡ್ಡ ಫಿಲೋಸಫರ್ ತರಾ "ಇಂಟೆಲಿಜೆನ್ಸ್ ಎಂಡ್ ಎಬಿಲಿಟಿ ಆರ್ ನಥಿಂಗ್ ಟು ಡು ವಿಥ್ ಯುವರ್ ಮಾರ್ಕ್ಸ್" ಅಂತೆಲ್ಲಾ ಡೈಲಾಗ್ ಹೊಡೆದಿದ್ದೂ ಇದೆ. ಈಗ ಅದನ್ನೆಲ್ಲ ಓದಿ ನಗುವೋ ನಗು. ಒಟ್ಟಿನಲ್ಲಿ ನನಗೆ ಬೇಜಾರಾದ್ರೆ ಅವಳು ಸಮಾಧಾನ ಹೇಳೋದು, ಅವಳಿಗೆ ಬೇಜಾರಾದ್ರೆ ನಾನು ಸಮಾಧಾನ ಹೇಳೋದು.ಸಮಾಧಾನ ಹೇಳ್ಲಿ ಅಂತಾನೇ ಅಷ್ಟೆಲ್ಲಾ ಕಷ್ಟಗಳನ್ನು ಹೇಳಿಕೊಳ್ತಿದ್ವಾ ಅಂತ ಈಗ ಗುಮಾನಿ ಬರ್ತಿದೆ.
ಅಕ್ಕ ಕುಮಟಾದಲ್ಲಿ ಇರೋದ್ರಿಂದ ಮನೆಗೆ ಸಾಧಾರಣವಾಗಿ ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಹೋಗಿ ಬರುತ್ತಿದ್ದಳು.ಆದರೆ ನಾನು ಹೋಗುವುದು ಎರಡು ತಿಂಗಳಿಗೋ ಅಥವಾ ೩ ತಿಂಗಳಿಗೋ ಒಮ್ಮೆಯಾಗಿತ್ತು. ಹಾಗಾಗಿ ಮನೆ ಸುದ್ದಿಯನ್ನೆಲ್ಲ ಪತ್ರದಲ್ಲಿ ಸಂಕ್ಷಿಪ್ತವಾಗಿ ಅಕ್ಕ ಹಂಚಿಕೊಳ್ಳುತ್ತಿದ್ದಳು. "ಮೊನ್ನೆ ಬಾಳೂರಲ್ಲಿ ಪಲ್ಲಕ್ಕಿ ಉತ್ಸವ ಇತ್ತು,ವಿನುತಾನ ಅಣ್ಣನ ಕ್ಲಿನಿಕ್ಕು ಇವತ್ತು ಹೊಸಪೇಟೆ ರೋಡಲ್ಲಿ ಓಪನ್ ಆತು, ಮುಂದಿನ ವಾರ ಆಯಿ ಬಟ್ಟೆ ತರಲೆ ತಾಳಗುಪ್ಪಕ್ಕೆ ಹೋಗ್ತಿ ಹೇಳಿದ್ದು,ಇಂಥದ್ದೇ. ಕೆಲವೊಂದು ಸಲ ನಮ್ಮನೆ ಸದಸ್ಯರಂತೇ ಇರುವ ನಾಯಿ,ಆಕಳುಗಳ ಬಗ್ಗೆಯೂ ಮಾತು ಬರುತ್ತಿತ್ತು. "ನಮ್ಮನೆ ಹಂಡಿ(ದನ) ಕರ ಒಂಚೂರು ಚಂದ ಇಲ್ಲೆ. ಮುಸುಡಿ ಮೇಲೆಲ್ಲಾ ಚುಕ್ಕಿ ಚುಕ್ಕಿ ಇದ್ದು. ಹಂಡಿ ಭಾಳಾನೇ ಬಡಿ ಬಿದ್ದೋಜು. ಕೆಚ್ಚಲ ಬಾವು ಆಗಿತ್ತು. ಕರಿಯಲೇ ಕೊಡ್ತಿತ್ತಿಲ್ಲೆ, ಸಿಕ್ಕಾಪಟ್ಟೆ ಓದೀತಿತ್ತು. ಗ್ರೇಸಿಯಂತೂ ಪಕ್ಕಾ ಹಡಬೆ ನಾಯಿ ಆದಾಂಗೆ ಆಜು. ಕಂಡಕಂಡಿದ್ದೆಲ್ಲಾ ಮುಕ್ತು. ಪಾತ್ರೆ ತೊಳೆಯುವ ಸುಗುಡನ್ನೂ ತಿಂಬಲೆ ಹಣಕಿದ್ದು" ಅನ್ನೋ ಸಾಲುಗಳನ್ನು ಈಗ ಓದಿದರೆ ಯಾಕೋ ಅವುಗಳ ನೆನಪುಗಳೆಲ್ಲಾ ಮತ್ತೆ ಮರುಕಳಿಸಿ ಒಂತರಾ ಖುಷಿ, ಒಂತರಾ ದುಃಖನೂ ಆಗುತ್ತದೆ.
ಹೇಳ್ತಾ ಹೋದರೆ ಮುಗಿಯುವುದೇ ಇಲ್ಲ.ಅಷ್ಟು ಸಣ್ಣ ಪತ್ರದೊಳಗೆ ಎಷ್ಟೆಲ್ಲಾ ವಿಷಯಗಳನ್ನೆಲ್ಲಾ ತುಂಬಿಸುತ್ತಿದ್ದೆವು ಎಂದು ವಿಸ್ಮಯವಾಗುತ್ತದೆ. ನಮಗೆ ಆ ಪತ್ರಗಳು ಕೇವಲ ಯೋಗಕ್ಷೇಮ ತಿಳಿಸುವ ಸಾಧನಗಳಾಗಿರಲಿಲ್ಲ. ನಮ್ಮ ಎಲ್ಲಾ ಆತಂಕಗಳು, ಸಣ್ಣಪುಟ್ಟ ಖುಷಿಗಳು, ಬೇಜಾರು, ವೇದನೆ, ಛಲ, ಪ್ರೀತಿ, ಕಾಳಜಿ, ಇನ್ನು ಎಷ್ಟೋ ಭಾವಗಳು ಮಿಳಿತಗೊಂಡು ಅಕ್ಷರ ರೂಪ ಪಡೆಯುತ್ತಿದ್ದವು.ನಮ್ಮ ಆ ಕಾಲದ ಮನೋಸ್ಥಿತಿಯ ಪ್ರತಿಬಿಂಬವೇ ಆಗಿದ್ದ ಆ ಪತ್ರಗಳ ಗಂಟನ್ನೆಲ್ಲ ಜೋಪಾನವಾಗಿ ತಂದಿಟ್ಟುಕೊಂಡಿದ್ದೇನೆ. ನನ್ನ ಹತ್ತಿರವಿರುವ ಪುಸ್ತಕಗಳ ತೂಕವೇ ಒಂದಾದರೆ, ಈ ಪತ್ರಗಳ ತೂಕವೇ ಒಂದು. ಇನ್ನೂ ಹಲವು ವರ್ಷಗಳ ನಂತರ ಅವನ್ನು ಓದಿದರೂ ಮಾಂತ್ರಿಕ ಪೆಟ್ಟಿಗೆ ತೆಗೆದಂತೆ ನೆನಪುಗಳ ಭಂಡಾರ ಮನಸ್ಸಿನ ಪರದೆ ಮೇಲೆ ಹರಡಿಕೊಳ್ಳುವುದರಲ್ಲಿ ನನಗೆ ಸಂಶಯವೇ ಇಲ್ಲ. ಈಗಿನ ಮೊಬೈಲು ಯುಗದಲ್ಲಿ ಪತ್ರ ಬರೆಯುವ ವ್ಯವಧಾನ, ಪುರುಸೊತ್ತು, ತಾಳ್ಮೆಯಂತೂ ಯಾರಿಗೂ ಇಲ್ಲ. ಆದರೆ ಪತ್ರ ಬರೆಯುವ ಖುಷಿ ಮತ್ತು ಪತ್ರಕ್ಕಾಗಿ ಕಾಯುವ ತವಕವನ್ನು ಎಂಥ ಪ್ರೀತಿಯ ಎಸ್ಸೆಮ್ಮೆಸ್ಸುಗಳೂ, ಕಾಲ್ ಗಳೂ ತಂದುಕೊಡುವುದಿಲ್ಲವೆಂಬುದು ಮಾತ್ರ ಉರಿಯುವ ಸೂರ್ಯನಷ್ಟೇ ಸತ್ಯ.
19 comments:
ಮಧೂ....
:-) ನಿಜ, ಮೆತ್ತಿ ಅಂದ್ರೆ...ನನಗಂತೂ ಈಗಲೂಮನೆಗೆ ಹೋದ್ರೆ ನಾನಲ್ಲಿ ಹುಡುಕದೇ ಬಿಟ್ಟಿದ್ದು, ನಾನಿನ್ನೂ ಹುಡುಕಬೇಕಾದ್ದು ಬಹಳವೇ ಇದ್ದು ಅನ್ನಿಸಿಬಿಡ್ತು. ಈಗ ಮನೆಗೆ ಹೋದ್ರೂ ನಮ್ಮ ಹಳೆತಲೆಮಾರಿನವ್ವು ಯಾರೋ ಹುಗಿದಿಟ್ಟ ನಿಧಿ ಅಲ್ಲೇ ಇದ್ದು, ನಾನಿನ್ನೂ ಹುಡುಕದೇ ಬಿಟ್ಟಿದ್ದಿ ಅನ್ನುವ ಭಾವ ಬಹಳವೇ ಕಾಡ್ತು.
ಸುಂದರ ನೆನಪುಗಳ ಹಂದರ. ಕೆಲವು ಪತ್ರಗಳೆಲ್ಲ ಆಹಾ...ಎಷ್ಟು ಖುಷಿ ಸಿಗ್ತು ಓದಿದ್ರೆ ಅಂದ್ರೆ...
ಹಾಗೆಯೇ ಹಳೇ ನೋಟ್ಸ್ ನ ಕೊನೆಯ ಹಾಳೆನೂ ಅಷ್ಟೇ...
ಚಂದದ ಬರಹ, ನಿರೂಪಣೆ ಇನ್ನೂ ಚಂದ. ಬರೀತಿರು. ಒಂದು ಪತ್ರ ಬರಿ, ಉತ್ತರ ಬರಿತಿ.
ಮಧು,
ತುಂಬ ಚಂದವಿದೆ ಈ ಬರಹ. ಮೆತ್ತಿ (ನಮ್ಮಲ್ಲಿ ಉಪ್ಪರಿಗೆ)ಯಲ್ಲಿ ಸಮಯ ಕಳೆಯುವ ಚಟ ನನಗೂ ಇದೆ. ಹಳೆಯ ಪೆಟಾರಿಯಲ್ಲಿ ಅಪ್ಪ ತಂದಿಟ್ಟ ಪುಸ್ತಕಗಳನ್ನೆಲ್ಲ ಒಮ್ಮೆ ತಿರುವಿ ಹಾಕಿದಗೆ ಏನೋ ಒಂಥರ ಸಮಾಧಾನ. ’ಮ್ಯಾಲ್ ಕೂಕಂದ್ ಎಂತ ಮಾಡ್ತಿದ್ದೆ ಹಂಗರೆ, ಮಣಿ’ ಅಂತ ಅಮ್ಮನಿಂದ ಪ್ರತಿ ಸಾರ್ತಿಯೂ ಬೈಸಿಕೊಳ್ಳುವುದಿದೆ.
ಈ ಪತ್ರಗಳೂ ಅಷ್ಟೆ. ನಾನಂತೂ ಜಾಗ ಸಾಲದೆ ಕೊನೆಕೊನೆಯಲ್ಲಿ ಇನ್-ಲ್ಯಾಂಡ್ ಲೆಟರಿನ ಸಂದಿಗೊಂದಿಗಳಲ್ಲೂ ಬರೆದು ಬಿಡುತ್ತಿದ್ದೆ. ಕೆಲವೊಮ್ಮೆ ಚಿಕ್ಕಹಾಳೆಯ ತುಂಡೊಂದರಲ್ಲಿ ಬರೆದು ಪತ್ರದೊಳಗೆ ಸೇರಿಸಿಬಿಡುತ್ತಿದ್ದೆ :-)
ಮಧು, ನಮ್ಮನೇಲಿ ಮೆತ್ತಿ ಇಲ್ಲ ಅಂತ ಬೇಜಾರಾಗ್ತಿದೆ.... ನಮ್ ನಮ್ ರೂಮೇ ನಮಗೆ ಮೆತ್ತಿ :(
ನಂಗೂ ನಿನ್ನೆ ಅಷ್ಟೆ ಪತ್ರಗಳಲ್ಲಿರ ಆಪ್ತತ ಈಗಿನ ಫೋನಲ್ಲಿಲ್ಲೆ ಅನ್ಸಿ ಬೇಜಾರಾಗಿತ್ತು :(
ಮಧು,
ಧೋ ಎಂದು ಮಳೆ ಸುರಿಯುವಾಗ ಮೆತ್ತಿ ಹತ್ತಿ, ಜಗತ್ತಿನ ಅರಿವೇ ಇಲ್ಲದಂತೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕಥೆ ಕಾದಂಬರಿ ಓದುವ ಅನುಭೂತಿಯನ್ನು ಯಾವುದಕ್ಕೂ ಹೋಲಿಸಲು ಬರುವುದಿಲ್ಲ ಎಂದರೆ ಹಲವಾರು ಜನರಾದರೂ ನನ್ನನ್ನು ಅನುಮೋದಿಸುತ್ತಾರೆಂಬ ಭರವಸೆ ನನಗಿದೆ.
ನಿಜವಾಗಿಯೂ ನಾನೂ ನಿನ್ನ ಈ ಮೇಲಿನ ಮಾತುಗಳನ್ನು ಅನುಮೋದಿಸುತ್ತೇನೆ.
ನಮ್ಮ ಅಜ್ಜನ ಮನೆಯಲ್ಲೂ ಒಂದು ಮೆತ್ತಿಯಿದೆ. ಆ ಮೆತ್ತಿಗೆ ಒಂದು ದೊಡ್ಡ ಕಿಟಕಿ. ಆ ಕಿಟಕಿ ಬಾಗಿಲನ್ನು ತೆರೆದರೆ ಕಾಣುವುದು ಮನೆಯ ಮುಂದಿನ ಅಡಿಕೆ ತೋಟ, ಜಾಯಿಕಾಯಿ ಮರ. ಅದೆಷ್ಟು ನನ್ನ ನೋವು ನಲಿವುಗಳನ್ನು ಆ ಕಿಟಕಿಯ ಮುಂದೆ ಕುಳಿತು ನೆನೆಸಿಲ್ಲ!.. ನನ್ನೊಳಗೇ ನೆನೆದಿಲ್ಲ!!! ಎಣಿಸಲೂ ಆಗದು. ಏಕಾಂತದಲ್ಲಿ ಅಲ್ಲಿ ಕುಳಿತು ನನಗಿಷ್ಟವಾದ ತಿಂಡಿ ಮೆಲ್ಲುತ್ತಾ, ಇಷ್ಟವಾದ ಪುಸ್ತಕಗಳನ್ನು ಓದುತ್ತಾ ಇಲ್ಲಾ ಅತ್ಮೀಯರ ಜೊತೆ ಹರುಟುತ್ತಾ ಕಳೆದ ರಸನಿಮಿಷಗಳನ್ನು ಮತ್ತೆ ಕಣ್ಮುಂದೆ ನಿಲ್ಲಿಸಿತು ನಿನ್ನ ಬರಹ. ತುಂಬಾ ಧನ್ಯವಾದಗಳು.
ಮಂಗಳೂರಿನಲ್ಲಿರುವ ಮನೆಯಲ್ಲೂ ಟೆರೇಸ್ ಮೆತ್ತಿಯಿದೆ. ಆದರೆ ಊರ ಮೆತ್ತಿಯ ಕಂಪಾಗಲೀ, ಸೊಗಡಾಗಲೀ ಆ ತೋಟ, ಮಣ್ಣಿನ ದಾರಿಯ ನೋಟವಾಗಲೀ ಊಹೂಂ.. ಕಾಣಸಿಗದು. ಹ್ಮಂ.. ಮತ್ತೆ ಆ ಸವಿನೆನಪುಗಳನ್ನು ಮರುಕಳಿಸಲು ಆಗದು ಆದರೆ ಮೆಲ್ಲಬಹುದು ಅಷ್ಟೇ!
"ಸವಿ ನೆನಪುಗಳು ಬೇಕು ಸವಿಯಲೀ ಬದುಕು"
(ಅಪರೂಪಕ್ಕಾದ್ರೂ ಸರಿ ಇಂತಹ ಸಿಹಿಬರಹಗಳನ್ನು ಕೊಡ್ತಾ ಇರು:-))
ಶಾಂತಲಕ್ಕಾ,
ನಿಜ ಮೆತ್ತಿ ಅಂದರೆ ನೆನಪುಗಳ ಖಜಾನೆನೇ ಸರಿ. ಎಷ್ಟೆಲ್ಲಾ ಬರೀಲಕ್ಕು ಅಲ್ದ? ಹ್ಮ, ನಿನಗೂ ಒಂದು ಪತ್ರ ಬರೀತಿ.
ಥ್ಯಾಂಕ್ಸ್.
ಭಾಗ್ವತ್ರೆ,
ನೀವೂ ನನ್ನ ಹಾಗೇ ಅಂತ ಆಯ್ತು. ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.
ಶ್ರ್‍ಈದೇವಿಯವರೇ,
ಬೇಜಾರು ಮಾಡ್ಕೋಬೇಡಿ. ನಮಗೆ ಮೆತ್ತಿಯ ಒಳ್ಳೆ ನೆನಪುಗಳು ಇದ್ದ ಹಾಗೆ ನಿಮಗೆ ನಿಮ್ಮ ರೂಮಿಂದು ಮಧುರ ನೆನಪುಗಳು ಇದ್ದಿರಬೇಕು ಅಲ್ವಾ? ಅದನ್ನೆಲ್ಲ ಹಂಚಿಕೊಳ್ಳಿ. ಚೆನ್ನಾಗಿರತ್ತೆ.
ಹರೀಶ್,
ನಿಜ, ಪತ್ರದಲ್ಲಿರ ಮಜಾನೇ ಬೇರೆ.
ಥ್ಯಾಂಕ್ಯೂ.
ತೇಜಕ್ಕಾ,
ನನ್ನ ಮಾತನ್ನು ಅನುಮೋದಿಸಿದ್ದಕ್ಕೆ ಧನ್ಯವಾದಗಳು. ನಿಜ, ಮೆತ್ತಿಯ ಜೊತೆ ಎಷ್ಟೆಲ್ಲಾ ನೆನಪುಗಳು ಬೆಸೆದುಕೊಂಡು ಇದ್ದು ಅಲ್ದಾ? ನೀನೂ ಒಂದು ಲೇಖನ ಬರೀಲಕ್ಕನ ನೋಡು.
ನೈಸ್ ರೈಟಪ್, ಯಾಸ್ ಯೂಶವಲ್.
ನಮ್ಮನೇಲೂ ಮೆತ್ತಿ ಇರ್ಲೆ.. ಆದ್ರೆ ಪತ್ರಗಳ ಜತೆಗಿನ ನಂಟು ಮಾತ್ರ ನೆನಪು ಮಾಡಿಕೊಂಡ್ರೆ ಇಂದಿಗೂ ಹಸಿರು ಹಸಿರು.. ನನ್ನ ಹಳೇ ಗುರುಗಳು, ಸಹಪಾಠಿಗಳು ಬರೆದ ಪತ್ರಗಳು ಇನ್ನೂ ನನ್ನ ಜೊತೆ ಇವೆ.. ಬಿಚ್ಚಿದರೆ ಆಪ್ತತೆಯ ಪೂರ..
ಮಧು,
nostalgia ಹಾಗೂ ವಿನೋದ ತುಂಬಿದ ನಿಮ್ಮ ಆಪ್ತ ಬರಹ ಓದಿ, ಮನಸ್ಸು ಭಾವನೆಗಳ ಗೂಡಾಯ್ತು. ನಾನೂ ಸಹ ಚಿಕ್ಕವನಿದ್ದಾಗ ಬರೆಯುತ್ತಿದ್ದ, ನನಗೆ ಬರುತ್ತಿದ್ದ ಪತ್ರಗಳ ನೆನಪಾಯ್ತು.
Very good article.
madhoo, nanoo obba nimm team ge :)
ಮಧೂ,
ಮೆತ್ತಿ ಬಗ್ಗೆ ಓದಿ ,ಒಂಥರಾ ಹಳೆ ನೆನಪೆಲ್ಲ ತಾಜಾ ಆದಂಗಾತು.
ನಮ್ಮನೇಲಿ ಮೆತ್ತಿ ಇತ್ತಿಲ್ಲೆ ಆದರೆ , ಅಜ್ಜನ ಮನೆಗೆ ಹೋದಕೂಡಲೇ ನಂಗ ಮಕ್ಕಳ ಸಭೆ ಸೇರ್ತಿದ್ದಿದ್ದೇ ಮೆತ್ತಿ ಮೇಲೆ. ದೊಡ್ಡವಕೆ ಗೊತ್ತಾಗದಿದ್ದ ಹಾಂಗೆ ಇಸ್ಪೀಟ್ ಆಡಲೆ ,ಯಕ್ಷಗಾನ ನೋಡ್ಕ್ಯಂಡು ಬಂದ ಮರು ದಿನ ಚಿಟ್ಟಾಣಿ ಅಥವಾ ಶಂಭು ಹೆಗಡೆ ಹಾಂಗೇ ಕುಣಿತ ಕುಣಿಯಲೆ ,ಎದುರು ಪಾರ್ಟಿ ಹುಡುಗರ ವಿರುದ್ಧ ಪಿತೂರಿ ಮಾಡಲೆ...ಹೀಂಗೇ ಲಿಸ್ಟ್ ಮುಗೀತೇ ಇಲ್ಲೆ.
ಇನ್ನು ಹಳೇ ಸಾಮಾನು ರಾಶಿ ಹುಡುಕದಂತೂ ಇನ್ನೂ ಇಷ್ಟದ ಕೆಲಸ ಆಗಿತ್ತು ನಂಗಕ್ಕೆ. ಅದಕ್ಕೆ ಕೆಲವೊಂದು ಸಲ ಮೇಲ್ಮೆತ್ತಿ ಹತ್ತಿ ಕತ್ತಲಲ್ಲೇ ಹಳೇ ಸಾಮಾನು ಕೆದಕಿ, ತಲೆ , ಮೈ ಎಲ್ಲ ಧೂಳು ಮಾಡ್ಕ್ಯಳದು , ಕಡಿಗೆ ಬೈಸಿಕ್ಯಳದು ...ಹಂ..ಎಲ್ಲಾ ನೆನಪಾಗ್ತಿದ್ದು ಈಗ.
ರಾಶಿ ಚಂದ ಬರದ್ದೆ.
Hi ...ಇ ಲೇಖನ ಓದಿ ಸಕತ್ ಎಂಜಾಯ್ ಮಾಡ್ದಿ ..
Exam ನ ಹಿಂದಿನ ದಿನ ರಾತ್ರಿ 3 ತಾಸು ಟೆಕ್ಸ್ಟ್ ಬುಕ್ ಓದಿದ್ದು ಬಿಟ್ರೆ ನಿಮ್ಮ ಲೇಖನ ನೇ ಓದಿದ್ದು :)
ಈಗ ಅಸ್ಟೇ ಅಲ್ದೆಯ ಯಂಗು ಯನ್ನ ಅಕ್ಕಯ್ಯಂಗೆ ಪತ್ರ ಬರ್ಯನ ಕಾಣ್ತಾ ಇದ್ದು ... :)
ನಮಸ್ಕಾರ
ನನು ಇದೇ ಮೊದಲಬಾರಿಗೆ ಮಾನಸಾ ಬ್ಲಾಗ್ ನಿಂದ ನಿಮ್ಮ ಬ್ಲಾಗ್ ಗೆ ಇಣಿಕಿದ್ದು.
ಬೆಂಗಳೂರು, ಕೋಲಾರ ಕಡೆಯವರಾದ ನಮಗೆ ಮೆತ್ತಿ ಅಷ್ಟೊಂದು ಪರಿಚಿತವಲ್ಲ. ಆದರೆ ನೀವು ಬರೆದ ಪತ್ರಗಳ ವಿಚಾರ ನೋಡಿ ಒಂದೆರಡು ನೆನಪುಗಳನ್ನು ಹಂಚಿಕೊಳ್ಳಬೇಕೆನಿಸಿತುಮೂರು ದಶಕಗಳಿಗೂ ಹಿಂದೆ ನಾನು ಮೊದಲ ಬಾರಿ ಹೆರಿಗೆಗೆ ತವರುಮನೆಗೆ ಬಂದಾಗ ನನ್ನವರು ಹದಿನೈದು ದಿನಗಳಿಗೊಮ್ಮೆ ಬರುತ್ತಿದ್ದರು. ಉಳಿದಂತೆ ವಾರಕ್ಕೆ ಕನಿಷ್ತ ಮೂರು ಪತ್ರಗಳಂತೂ ಗ್ಯಾರಂಟಿ.ಪ್ರತಿ ಪತ್ರ ಬರೆವಾಗಲೂ ಕವರಿನ ಮೇಲೆ ಚಂದದ ಮಗುವೊಂದರ ಚಿತ್ರ ಹಾಕಿಯೇ ಪೋಸ್ಟ್ ಮಾಡುತ್ತಿದ್ದರು...ಮತ್ತೆ ಆ ನೆನಪುಗಳು ಅರಳುವಂತೆ ಮಾಡಿದ್ದಕ್ಕೆ ಧನ್ಯವಾದಗಳು.
ಹೌದು . .ಪತ್ರ ಬರೆಯುವ, ಬಂದಿದ್ದನ್ನ ಓದುವ ಸುಖವೇ ಬೇರೆ . . ನನ್ನ ಬಳಿ ಈಗಲೂ ತುಂಬ ಹಳೆಯ ಪತ್ರಗಳಿವೆ. ಆದರೆ ಈಗಿನ ಒತ್ತಡದ ಜೀವನದಲ್ಲಿ ನಾನು ಬರೆದರೂ ಸ್ನೇಹಿತರು ಅದಕ್ಕೆ ಉತ್ತರಿಸುವುದಿಲ್ಲ. . .ಅದೇ ಬೇಜಾರು . .ಪತ್ರದಲ್ಲಾದರೆ ನಮ್ಮ ಮನಸ್ಸಿನಾಳದಲ್ಲಿರುವುದೆಲ್ಲವನ್ನೂ ಹೇಳಿಕೊಳ್ಳಬಹುದು .. nice writing
ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?
ಮಧುರವರೆ,
ನಿಮ್ಮ ಆಟ್ಟ ಕತೆ ನನಗೆ ಬಾಲ್ಯದಲ್ಲಿ ನಮ್ಮ ಹಳೆಮನೆಯ ಹಟ್ಟ ನೆನಪಾಯಿತು. ಮಳೆಗಾಲದಲ್ಲಿ ನಾನು ನಿಮ್ಮಂತೆ ಆಟ್ಟ ಹತ್ತಿ ಪುಸ್ತಕ ಹಿಡಿದುಬಿಟ್ಟರೆ ಮುಗಿಯಿತು, ಊಟ ತಿಂಡಿ, ಆಷ್ಟೇ ಅಲ್ಲದೇ ಹೊರಗಿನ ಪ್ರಪಂಚಕ್ಕೂ ನಾನಿಲ್ಲವಾಗುತ್ತಿದೆ.
ಹಾಗೂ ಪತ್ರದ ವಿಚಾರದಲ್ಲಿ ನಾನು ತುಂಬಾ ಹಿಂದೆ. ನಾನು ನನ್ನ ಜೀವನದ ಮೂರನೆ ಪತ್ರವನ್ನು ಇತ್ತೀಚೆಗೆ ನನ್ನ ತಂಗಿಗೆ ಬರೆದೆ. ನಿಮ್ಮ ಪತ್ರ ವ್ಯವಹಾರ ಓದಿ ಖುಷಿಯಾಯಿತು.
ಆಹಾಂ! ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು, ನಿಮಗರಿವಿಲ್ಲದ ಮದುವೆ ದೃಶ್ಯಗಳು, ನಂದಿಬೆಟ್ಟದ ಇಬ್ಬನಿಗಳು ಬಂದಿವೆ ಬನ್ನಿ. ಹಾಗೆ ನನ್ನ ಮತ್ತೊಂದು ಬ್ಲಾಗಿನಲ್ಲಿ ಹಿರಿಯಜ್ಜ ಬಂದಿದ್ದಾನೆ ಮಾತಾಡಿಸಲು ಬನ್ನಿ.
ಮಧು,
ಹೊಸ ಜೀವನಕ್ಕೆ ಹಸಿರು ಹಸಿರಾದ ಶುಭ ಹಾರೈಕೆಗಳು.
ಚೆನ್ನಾಗಿರಿ, ಖುಷಿಯಾಗಿರಿ, ಸುಖವಾಗಿರಿ.
ನೆಮ್ಮದಿ, ಆರೋಗ್ಯ ತುಂಬಿಕೊಂಡಿರಿ.
ಶುಭಾಶಯ ಶುಭಾಶಯ ಶುಭಾಶಯಾ...
ಮದುಮಗನಿಗೂ ಮದುಮಗಳಿಗೂ ಶುಭಾಶಯ
ಹೊಸ ಹರೆಯದ ಹೊಸ ಜೋಡಿಗೆ ಶುಭಾಶಯ
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಸವಿಯಾದ ಮಾತು, ಸಿಹಿಯಾದ ಊಟ, ಸೊಗಸಾದ ನೋಟವಿರಲಿ
ಮನೆ ತುಂಬುವಂತ, ನಗೆ ಚೆಲ್ಲುವಂತ, ಮುದ್ದಾದ ಮಗುವು ಬರಲಿ...
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಮನಸ್ಸನ್ನು ಅರಿತು ಒಂದಾಗಿ ಬೆರೆತು ನಡೆದಾಗ ಬಾಳು ಕವಿತೆ
ನೂರೊಂದು ವರುಷ, ಚೆಲ್ಲಿರಲಿ ಹರುಷ, ಬೆಳಗಿರಲಿ ಒಲವ ಹಣತೆ
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಸಿರಿತನದ ಸಿಹಿಯು, ಬಡತನದ ಕಹಿಯು, ನಿಮಗೆಂದು ಒಂದೆ ಇರಲಿ
ಸಮನಾದ ಪ್ರೀತಿ ತೋರುವುದೆ ರೀತಿ ಬಿರುಗಾಳಿ ಏನೆ ಬರಲಿ
ಮದುವೆಯ ಈ ಬಂಧ, ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ
ಕೃಪೆ: KannadaLyrics.com
*****
ನೂರ್ಕಾಲ ಸುಖ-ಸಂತೋಷಗಳಿಂದ ಬಾಳಿ
ಸುಶ್ರುತ, ಸುನಾಥ್ ಕಾಕಾ, ವಿಕಾಸ್, ಚಿತ್ರ, ರಂಜಿತ, ಗ್ರೀಶ್ಮಾ,ಚಂದ್ರಕಾಂತಾ,ಶಿವು, ಜ್ಯೋತಿ ಅಕ್ಕ, ಹರೀಶ್ ಎಲ್ಲಾರಿಗೂ ತುಂಬಾ ಧನ್ಯವಾದಗಳು.
ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ..??
Post a Comment