Tuesday, February 5, 2008

ನಾಗರ ಹಾವೇ, ಹಾವೊಳು ಹೂವೇ...


ಮಲೆನಾಡಿನಲ್ಲಿ ಹುಟ್ಟಿ ಬೆಳೆದವರೆಲ್ಲರಿಗೂ ಹಾವಿನ ಜೊತೆ ಒಡನಾಟ ಸರ್ವೇಸಾಮಾನ್ಯವಾದರೂ, ನನ್ನ ವಿಷಯದಲ್ಲಿ ಅದು ಯಾಕೋ ಸ್ವಲ್ಪ ಜಾಸ್ತಿಯೇ ಆಗಿದೆ ಅಂತ ನನಗೆ ಅನ್ನಿಸಲು ಬಹಳಷ್ಟು ಕಾರಣಗಳಿವೆ.

ಮುಖ್ಯ ಹೆದ್ದಾರಿಯಿಂದ ಕೂಗಳತೆ ದೂರದಲ್ಲಿದರೂ, ನಮ್ಮ ಮನೆಯ ಸುತ್ತ ಮುತ್ತ ಬೇಕಾದಷ್ಟು ಗಿಡಮರಗಳಿದ್ದು, ಹಾವು,ಚೇಳು, ಗೆದ್ದಲು, ಇರುವೆ, ಓತಿಕ್ಯಾತ ಮುಂತಾದುವಗಳ ಹಾವಳಿ ಅವ್ಯಾಹತವಾಗಿ ನಡೆದೇ ಇತ್ತು. "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯಾ" ಎಂಬ ಅಕ್ಕನ ವಚನದಂತೆ ನಾವು ಅವುಗಳ ಬಗ್ಗೆ ಹೆಚ್ಚೇನೂ ತಲೆಕೆಡಿಸಿಕೊಳ್ಳದೇ, ನೆಮ್ಮದಿಯಾಗಿದ್ದೆವು. ಆದರೆ ಅಮ್ಮನಿಗೆ ಹಾವು ಕಂಡರೆ ಮಾತ್ರಾ, ಎಲ್ಲಿಲ್ಲದ ದಿಗಿಲು. ಹಾವಿನ ಹೆಸರೆತ್ತಿದರೇ ಮೂರು ಮಾರು ದೂರ ಓಡುತ್ತಿದ್ದ ಅವಳು, ಟೀವಿಯಲ್ಲಿ ಹಾವನ್ನು ತೋರಿಸಿದರೂ ನೋಡಲು ಹೆದರುತ್ತಿದ್ದರು.

ಆ ಕಾಲದಲ್ಲಿ ನಮ್ಮ ಮನೆ ಅಟ್ಟಕ್ಕೆ ಅಡಿಕೆಯ ದಬ್ಬೆಯೇ ಆಧಾರ. ಆಗೆಲ್ಲಾ ಮನೆಯೆ ಮಾಡಿಗೆ ಇನ್ನೇನು ತಾಗಿಕೊಂಡೇ ಇದ್ದ ಬಿದಿರು ಮೆಳೆಗಳ ಸಹಾಯದಿಂದ, ಹಾವುಗಳು ಅಟ್ಟದ ಮೇಲಿರಬಹುದಾದ ಇಲಿಗಳ ಬೇಟೆಗೆ ಮನೆಯೊಳಗೆ ಬರುತ್ತಿದ್ದವು. ಕೆಲವೊಮ್ಮೆ ದಾರಿತಪ್ಪಿ ಅಟ್ಟದಿಂದ ಕೆಳಗಿಳಿದು, ಮನೆಯ ಸಿಮೆಂಟ್ ನೆಲದಲ್ಲಿ ತೆವಳಲಾಗದೇ, ವಿಲಿ ವಿಲಿ ಒದ್ದಾಡುತ್ತಿದ್ದವು. ಅವುಗಳನ್ನು ಹಾಗೆ ಹಿಡಿದು ಹೊರಗೆ ಬಿಡೋಣ ಅಂದ್ರೆ, ಎಲ್ಲಾದ್ರು ಕಚ್ಚಿ ಬಿಟ್ರೆ ಅಂತ ಭಯ. ಅಮ್ಮ ಬೇರೆ, ಬೇಗ ಕೊಂದು ಹಾಕಲು ತಾಕೀತು ಮಾಡುತ್ತಿದ್ದಳು. ಸಿಮೆಂಟ್ ನೆಲ ನುಣುಪಾಗಿರುವುದರಿಂದ ಹಾವುಗಳಿಗೆ ಓಡಿ ತಪ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಉಪಾಯವಿಲ್ಲದೇ, ಅವುಗಳನ್ನು ಕೊಲ್ಲಬೇಕಾಗುತ್ತಿತ್ತು. ಅಪ್ಪ ಮನೆಯಲ್ಲಿ ಇಲ್ಲದಿದ್ದಾಗ ಎಷ್ಟೋ ಮರಿಹಾವುಗಳನ್ನು ನಾನೂ ಹೊಡೆದಿದ್ದಿದೆ.ಅವುಗಳಲ್ಲಿ ಬಹುಪಾಲು ಹಾವುಗಳು, ನಿರುಪದ್ರವಿಯಾದ ಕೇರೆ ಹಾವುಗಳು.

ಆದರೆ ಸರಾಸರಿಯಾಗಿ ವರ್ಷಕ್ಕೊಂದು ಸಲ, ನಾವು "ಕುದುರೆಬಳ್ಳ" ಅಂತ ಕರೆಯೋ ವಿಷದ ಹಾವುಗಳು ಮನೆಗೆ ಭೇಟಿಕೊಡುತ್ತಿದ್ದವು. ಕಪ್ಪಗೆ ಮೈತುಂಬ ಬಳೆಗಳಿದ್ದ ಈ ಹಾವುಗಳು ನೋಡಲು ಮಾತ್ರ ಭಯಂಕರವಾಗಿರುತ್ತಿದ್ದವು.ಆವಾಗೆಲ್ಲ ನಾವು ಬಾಗಿಲ ಹಿಂದೆ ನಿಂತುಕೊಂಡು ಅಪ್ಪ ಅದನ್ನು ಹೊಡಿಯೋದನ್ನು ನೋಡುತ್ತಿದ್ದವೇ ಹೊರತು ಹತ್ತಿರದೆಲ್ಲೆಲ್ಲೂ ಸುಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ, ಒಂದು ರವಿವಾರ ರಾತ್ರಿ ಸುಮಾರು ೯.೩೦ ರ ಹಾಗೆ, ನಾನು ದೂರದರ್ಶನ ದಲ್ಲಿ ಬರುತ್ತಿದ್ದ "ಸುರಭಿ" ನೋಡ್ತಾ ಇದ್ದೆ. ಮನೆಯಲ್ಲಿ ಎಲ್ಲರೂ ಮಲಗಿದ್ದರು. ಮೇಲೆ ಅಟ್ಟದಲ್ಲಿ ಇಲಿಗಳು ಜೋರಾಗಿ ಸದ್ದು ಮಾಡುತ್ತಾ ಓಡಾಡುವುದು ಕೇಳಿಸಿತು. ಜೋರಾಗಿ ಒಂದು ಸಲ "ಶ್" ಅಂದು ಕೂಗಿ, ನಾನು ಟೀವಿ ನೋಡುವುದನ್ನು ಮುಂದುವರಿಸಿದೆ. ಮರುಕ್ಷಣದಲ್ಲೇ ಅಟ್ಟದಿಂದ ಎರಡು ಕಪ್ಪು ಹಾವುಗಳು, ಕುರ್ಚಿಯ ಮೇಲೆ ಕುಳಿತು ನೋಡುತ್ತಿದ್ದ ನನ್ನ ಕಾಲ ಮೇಲೆಯೆ ಬಿದ್ದವು. ನಾನು ಹೌಹಾರಿ, ಸಟ್ಟನೆ ಕಾಲನ್ನು ಮೇಲೆಳೆದುಕೊಂಡು, ಜೋರಾಗಿ ಕೂಗಿದೆ. ಮಲಗಿದ್ದ ಅಪ್ಪ ಎದ್ದು ಬಂದು, ಅವೆರಡೂ ಹಾವುಗಳಿಗೆ ಗತಿ ಕಾಣಿಸಿದರು. ಮಾರನೆಯ ದಿನ ಅಟ್ಟದ ಮೇಲೆ ಸರಿಯಾಗಿ ಹುಡುಕಿದಾಗ, ಒಂದೆಲ್ಲ, ಎರಡಲ್ಲ, ಅನಾಮತ್ತಾಗಿ ೫ ಮರಿ ಕುದುರೆಬಳ್ಳ ಹಾವುಗಳು, ಅವುಗಳ ತಾಯಿಯ ಜೊತೆ ಸಿಕ್ಕಿಬಿದ್ದವು.

ಇದಾದ ಸ್ವಲ್ಪ ದಿನಕ್ಕೇ, ಅಪ್ಪ ಒಂದು ನಿರ್ಧಾರಕ್ಕೆ ಬಂದು, ಹೇಗೋ ಒಂದಷ್ಟು ಹಣ ಹೊಂದಿಸಿ ಅಟ್ಟಕ್ಕೆ ಆರ್.ಸಿ.ಸಿ ಜಂತಿಗಳನ್ನು ಕೂಡಿಸಿದರು. ಅಲ್ಲದೇ, ದೈತ್ಯಾಕಾರವಾಗಿ ಬೆಳೆದುಕೊಂಡಿದ್ದ ಬಿದಿರಿನ ಮೆಳೆಗಳನ್ನು ಕಡಿದು ಹಾಕಿದರು. ಅವತ್ತಿನಿಂದ ಮನೆಯೊಳಗೆ ಹಾವು ಬರುವುದು ನಿಂತುಹೋಯಿತು. ಆಗಾಗ ಅಮ್ಮನಿಗೆ ಮಾತ್ರ ಒರಳುಕಲ್ಲಿನ ಹತ್ತಿರವೋ, ಅಡುಗೆಮನೆಯ ಮಾಡಿನ ತುದಿಯಲ್ಲಿಯೋ ಕಾಣಿಸಿಕೊಳ್ಳುತ್ತಿದ್ದವು. ನಮಗೆ ಯಾರಿಗೂ ಅಷ್ಟು ಸಲೀಸಾಗಿ ಕಾಣಿಸಿಕೊಳ್ಳದೇ ಇದ್ದ ಹಾವುಗಳು, ಅಮ್ಮನ ಕಣ್ಣಿಗೆ ಮಾತ್ರ ಬೀಳುವುದು ನಮಗೆ ತುಂಬಾ ಸೋಜಿಗವನ್ನು ತರುತ್ತಿತ್ತು. ಅಮ್ಮ ತೋರಿಸಿದ ನಂತರ ನಾವು ಅವುಗಳನ್ನು ಹೆದರಿಸಿ ಓಡಿಸುತ್ತಿದ್ದೆವು. ಎಷ್ಟೋ ಸಲ ದೈತ್ಯಾಕಾರದ ಕೇರೆ ಹಾವುಗಳು, ಮಾಡಿನ ತುದಿಯಿಂದ ಧೊಪ್ಪನೇ ಹಾರಿ, ಓಡಿಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿತ್ತು. ಒಂದು ಮುದಿ ನಾಗರಹಾವೊಂದು ಮಾತ್ರ, ಮನೆಯ ಸುತ್ತ ಪ್ರದಕ್ಷಿಣೆ ಹಾಕುತ್ತಿತ್ತೇ ಹೊರತು ಇನ್ನೆಲ್ಲೂ ಸುಳಿಯುತ್ತಿರಲಿಲ್ಲ. ನಾನು, ಅಕ್ಕ ಅದ್ಯಾವುದೋ ನಿಧಿಯನ್ನು ಕಾಯುತ್ತಿರಬಹುದೆಂದು ಮಾತನಾಡಿಕೊಳ್ಳುತ್ತಿದ್ದವು. ಮನೆಯ ಸುತ್ತಲೂ ಇದ್ದ ಚದರಂಗಿ ಗಿಡಗಳ ಹಣ್ಣನ್ನು ಕೊಯ್ಯಲು ಹೋಗುತ್ತಿದ್ದ ನಮ್ಮನ್ನು ಅಮ್ಮ ಆ ಹಾವಿನ ಬಗ್ಗೆ ಎಚ್ಚರಿಸುತ್ತನೇ ಇದ್ದಳು.

ಎರಡನೇ ಬಾರಿ ಹಾವಿನೊಂದಿಗೆ ಮುಖಾಮುಖಿಯಾಗಿದ್ದು, ಈಗೊಂದು ೬-೭ ವರ್ಷದ ಹಿಂದೆ. ರಜೆಗೆ ಶಿರಸಿಗೆ ಬಂದಿದ್ದ ನಾನು ಅವತ್ತು ಅಮ್ಮನ ಜೊತೆ, ನಮ್ಮ ಮೂಲ ಊರಿಗೆ ಹೋಗಿದ್ದೆ. ಮಧ್ಯಾಹ್ನ ಊಟ ಆದ ಮೇಲೆ ಸಣ್ಣದೊಂದು ನಿದ್ದೆ ತೆಗೆದು, ಸುಮಾರು ೩ ಗಂಟೆಯ ಹೊತ್ತಿಗೆ ನಾನು, ತೋಟಗಳ ಬದಿಗೆ ಒಂದು ಸುತ್ತು ತಿರುಗಿ ಬರಲು ಹೋದೆ. ಹಾಗೆ ತೋಟದಲ್ಲಿ ತಿರುಗುತ್ತಿರುವಾಗ, ನಮ್ಮನೆ ಬಣ್ಣದ ತುದಿಯಲ್ಲಿ ಹರಿಯುತ್ತಿರುವ ಸಣ್ಣ ಝರಿಯಲ್ಲಿ ಒಂದು ತೆಂಗಿನಕಾಯಿ ಬಿದ್ದಿರುವುದು ಕಂಡಿತು. ಸರಿ, ಮನೆಗೆ ವಾಪಸ್ ಹೋಗುತ್ತಾ ತೆಗೆದುಕೊಂಡು ಹೋದರಾಯಿತು ಎಂದು ಕೆಳಗೆ ಇಳಿದು, ನೀರಿನಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಎರಡೂ ಕೈಯಲ್ಲಿ ಹಿಡಿದು ಎತ್ತಲು ಪ್ರಯತ್ನಿಸಿದೆ. ತಟ್ಟನೇ, ಬಲಗೈಯ ಹೆಬ್ಬಟ್ಟಿಗೆ ಎನೋ ಕುಟುಕಿದ ಅನುಭವವಾಯಿತು. ತಕ್ಷಣವೇ ನಾನು ಬಲಗೈಯನ್ನು ಮೇಲೆತ್ತಿ ಗಟ್ಟಿಯಾಗಿ ಕೊಡವಿದೆ. ಮುಂದಿನ ಕ್ಷಣದಲ್ಲಿ ನನಗೆ ಕಂಡಿದ್ದು ಸುಮಾರು ೧೦ ಅಡಿ ಉದ್ದ, ಅರ್ಧ ಒನಕೆಯಷ್ಟು ದಪ್ಪಗಿದ್ದ, ಕರಿ ಹಾವೊಂದು ಓಡಿಹೋಗುತ್ತಿರುವುದು. ನಾನು ಕಣ್ಣು ಮಿಟುಕಿಸುವುದರೊಳಗೆ ಇವೆಲ್ಲ ನಡೆದುಹೋಗಿತ್ತು. ನಾನು ಕೈ ಮೇಲೆತ್ತಿ ಕೊಡವಿದ ರಭಸಕ್ಕೂ, ಹಾವಿನ ಭಾರಕ್ಕೂ, ನನ್ನ ಬಲಗೈ ಹೆಬ್ಬಟ್ಟಿನ ಸುಮಾರು ಚರ್ಮ ಹಿಸಿದುಹೋಗಿತ್ತು. ಗಾಯದ ನೋವಿಗಿಂತಲೂ, ಆ ಹಾವಿನ ಗಾತ್ರವನ್ನು ನೋಡಿದ ನನ್ನ ಜಂಘಾಬಲವೇ ಉಡುಗಿಹೋಯಿತು. ನನ್ನ ಹೆಬ್ಬಟ್ಟನ್ನು ನೋಡಿ ಮೀನೆಂದು ತಿಳಿದುಕೊಂಡಿತೇನೋ ಆ ಹಾವು.

ಹೇಗೋ ಆ ಆಘಾತದಿಂದ ಸಾವರಿಸಿಕೊಂಡು ಮನೆಯ ಕಡೆ ಓಡಿದೆ. ಅಲ್ಲೇ ಗೋಟಡಿಕೆ ಹೆಕ್ಕುತ್ತಿದ್ದ ಮಾಬ್ಲಣ್ಣ, ನನ್ನ ಗಾಬರಿ ನೋಡಿ ಏನಾಯ್ತೆಂದು ಕೇಳಿದ. ನಾನು ನಡೆದಿದ್ದನ್ನು ಹೇಳಿದೆ. ಅವನು ಅದು ನೀರುಕೇರೆ ಹಾವೆಂದು, ತಾನು ಅದನ್ನು ಬೇಕಾದಷ್ಟು ಸಲ ಅದೇ ಝರಿಯಲ್ಲಿ ನೋಡಿರುವುದಾಗಿಯೂ, ಅದು ವಿಷದ ಹಾವಲ್ಲ ಎಂದು ಹೇಳಿದ ಮೇಲೆಯೇ ನನ್ನ ಗಾಬರಿ ಸ್ವಲ್ಪ ಕಡಿಮೆಯಾಗಿದ್ದು. ಮನೆಗೆ ತಲುಪಿ, ಅಮ್ಮನಿಗೆ ಹೇಳಿದಾಗ ಅಮ್ಮ ತುಂಬಾ ಗಾಬರಿ ಬಿದ್ದಳು. ಆಗಿನ್ನೂ ೩.೩೦. ಮುಂದಿನ ಬಾಳೇಸರ ಬಸ್ಸು ಬರುವುದು ಇನ್ನು ೪.೩೦ ಕ್ಕೆ. ಸರಿ, ಕಾನಸೂರಿಗೆ ಫೋನ್ ಮಾಡಿ ಬಾಡಿಗೆ ಬೈಕ್ ಗೆ ಬರಲು ಹೇಳಿದ್ದಾಯಿತು. ಅದು ಬಂದು ಮುಟ್ಟುವುದರಲ್ಲಿ ೪.೧೫ ಆಗಿತ್ತು. ನನಗೇನಾದರೂ ವಿಷದ ಹಾವು ಕಚ್ಚಿರುತ್ತಿದ್ದರೆ ನನ್ನ ಪರಿಸ್ಥಿತಿ ಗಂಭೀರವಾಗುತ್ತಿದ್ದರಲ್ಲಿ ಸಂಶಯವಿಲ್ಲ. ಗಾಯದಿಂದ ಸ್ವಲ್ಪ ಜಾಸ್ತಿಯೇ ರಕ್ತ ಹರಿದಿದ್ದನ್ನು ಬಿಟ್ಟರೆ, ನಾನು ಚೆನ್ನಾಗಿಯೆ ಇದ್ದೆ.

ಐದು ಗಂಟೆಯ ಹಾಗೆ ಶಿರಸಿ ತಲುಪಿದ್ದಾಯ್ತು. ಹಾವು ಕಚ್ಚಿದ್ದರಿಂದ ಯಾವುದೇ ಖಾಸಗಿ ಅಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳುವುದಿಲ್ಲ. ಸರಿ, ಸರ್ಕಾರಿ ಆಸ್ಪತ್ರೆಗೇ ಹೋದೆವು. ಒಂದೆರಡು ಪೇನ್ ಕಿಲ್ಲರ್ ಗಳನ್ನು ಮಾತ್ರ ಕೊಟ್ಟಿದ್ದರು ಅಂತ ನೆನಪು ನನಗೆ. ಗಾಯ ಸ್ವಲ್ಪ ಊದಿಕೊಂಡಿತ್ತು, ನಾನು ಎಲ್ಲರ ಜೊತೆ ಮಾತಾಡುತ್ತಾ ಆರಾಮಿದ್ದೆ. ಸಂಜೆ ಪೋಲೀಸ್ ಪೇದೆಯೊಬ್ಬ ಬಂದು, ನನ್ನನ್ನು ಒಂದಷ್ಟು ಪ್ರಶ್ನೆ ಕೇಳಿ, ನನ್ನ ಸಹಿ ತೆಗೆದುಕೊಂಡು ಹೋದ. ಹಾವು ಕಚ್ಚಿದಾಗ ಪೋಲಿಸ್ ಕೇಸ್ ದಾಖಲಾಗುವುದು ಕಡ್ಡಾಯ ಅಂತ ಗೊತ್ತಾಯಿತು. ನಾನು ಒಂದು ದಿನ ಸರ್ಕಾರೀ ಆಸ್ಪತ್ರೆಯಲ್ಲಿದ್ದು ಮರುದಿನ ಮನೆಗೆ ಬಂದೆ. ಗಾಯದ ಗುರುತುಗಳೇನೂ ಈಗ ಹೆಬ್ಬಟ್ಟಿನಲ್ಲಿ ಉಳಿದಿಲ್ಲ.

ವರ್ಷದ ಹಿಂದೆ ಆಫ಼ೀಸ್ ನಲ್ಲಿ ಇ.ಅರ್.ಟಿ (Emergency Rescue Team. Emergency runaway team ಅಂತಲೂ ನಾವು ತಮಾಷೆ ಮಾಡುವುದಿದೆ) ಟ್ರೇನಿಂಗ್ ನಡೆಯುತ್ತಿದ್ದಾಗ, ಅದರ ನಿರ್ವಾಹಕರು, ಇಲ್ಲಿ ಯಾರಾದರೂ ಹಾವು ಕಚ್ಚಿಸಿಕೊಂಡವರು ಇದ್ದಾರೆಯೇ ? ಎಂದು ಕೇಳಿದಾಗ ನಾನೊಬ್ಬನೇ ಕೈ ಎತ್ತಿದ್ದೆ. ನನ್ನ ಕೊಲೀಗ್ಸ್ ಎಲ್ಲ, ನಾನು ಯಾವುದೋ ಬೇರೆ ಗ್ರಹದಿಂದ ಬಂದಿಳಿದವನ ತರ ನೋಡುತ್ತಿದ್ದರು. ನನಗ್ಯಾಕೋ ನಾನು ವಿಶೇಷ ವ್ಯಕ್ತಿ ಎಂದೆನಿಸಿ ಸ್ವಲ್ಪ ಹೆಮ್ಮೆಯಾಯಿತು.

2 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
ಚೆನ್ನಾಗಿದೆ ಕತೆ....
ಹೀಗೆಯೇ ಬರೆಯುತ್ತಿರು.....

ತೇಜಸ್ವಿನಿ ಹೆಗಡೆ said...

ಮಧು ನನಗೂ ಹಾವೆಂದರೆ ರಾಶಿ ಭಯ. ನಾನೂ ಟಿ.ವಿ.ನಲ್ಲಿ ಹಾವು ಬಂದ್ರೂ ನೋಡ್ತಿನಿಲ್ಲೆ. ನಿನ್ನ ಧೈರ್ಯ ಮೆಚ್ಚವು. ಎಷ್ಟೊಂದು ಹಾವು ನೋಡಿದ್ದೆ ನೀನು. ಚೋಲೋ ಬರದ್ದೆ. ಬರೀತಾ ಇರು.