Tuesday, March 3, 2009

ಹಸಿರು ಹೀರೋ ಪೆನ್ನು.

ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲೇ ಪುಟ್ಟನಿಗೆ ಸಿಕ್ಕಾಪಟ್ಟೆ ಉತ್ಸಾಹ, ಬಹುಷಃ ಬರೀ ಅರ್ಧ ದಿನ ಅಷ್ಟೇ ಶಾಲೆ ಇರೋದು ಅನ್ನೋದ್ರಿಂದಾನೇ ಇರಬೇಕು. ಸಂಜೆ ಹೊತ್ತು ಪಕ್ಕದ್ಮನೆ ಮಲ್ಲಿ ಜೊತೆ ಒಂದ್ನಾಲ್ಕು ರೌಂಡ್ ಬ್ಯಾಡ್ಮಿಂಟನ್ ಆಡಬಹುದು ಅನ್ನೋ ಸಂತೋಷ ಬೇರೆ. ದಿನಾ ಸಂಜೆನೂ "ಹೋಮ್ ವರ್ಕ್ ಮಾಡೋ" ಅಂದು ಗೋಳು ಹೊಯ್ಕೊಳೊ ಅಮ್ಮನ ಕಾಟ ಬೇರೆ ಇರೋದಿಲ್ಲ. ಹಾಗಾಗಿ ಪುಟ್ಟನಿಗೆ ರವಿವಾರಕ್ಕಿಂತಲೂ ಶನಿವಾರನೇ ಅತ್ಯಂತ ಖುಶಿ ಕೊಡೋ ದಿನ. ಆದರೆ ಇವತ್ತು ಅವನಿಗೆ ಮನೆಗೆ ಬೇಗ ಹೋಗಬೇಕು ಅನ್ನಿಸಲು ಬೇರೆಯೇ ಕಾರಣವಿತ್ತು.

ಜೋಷಿ ಮಾಸ್ತರ್ರು ಬೋರ್ಡ್ ಕಡೆ ತಿರುಗಿ ಭಾರತದ ನಕ್ಷೆಯಲ್ಲಿ ಗುಜರಾತಿನ ಹತ್ತಿರ ತಿದ್ದತಾ ಇದ್ದರು. ಅದನ್ನು ಗಮನಿಸೋ ಮನಸ್ಸು ಪುಟ್ಟನಿಗೆ ಇದ್ದಂತಿರಲಿಲ್ಲ. ಅವನು ಮನಸ್ಸು ಬೇರೆ ಯಾವುದೋ ವಿಷಯದ ಬಗ್ಗೆ ಗಿರಕಿ ಹೊಡೀತಾನೇ ಇತ್ತು. ಎಲ್ಲ ನಡೆದಿದ್ದು ಬೆಳಗಿನ ಎರಡನೇ ಗಣಿತದ ಪಿರಿಯಡ್ಡಲ್ಲಿ. ಪಕ್ಕಕ್ಕೆ ಕುಳಿತ ಸಂಧ್ಯಾನ ಸ್ಕೂಲ್ ಬ್ಯಾಗು ಸ್ವಲ್ಪ ತೆರೆದುಕೊಂಡಿತ್ತು, ಅದರ ಒಂದು ಮೂಲೆಯಲ್ಲಿ ಹಸಿರು ಕಲರಿನ ಹೀರೋ ಪೆನ್ನೊಂದು ಅಸ್ತವ್ಯಸ್ತವಾಗಿ ಬಿದ್ದುಕೊಂಡಿರುವುದು ಪುಟ್ಟನಿಗೆ ಕಂಡುಹೋಗಿತ್ತು. ಅದರ ಕ್ಯಾಪು ಒಂದು ಸ್ವಲ್ಪ ವಾರೆಯಾಗಿತ್ತು. ಆ ಪೆನ್ನನ್ನು ಪುಟ್ಟ ಸಾಕಷ್ಟು ಸಲ ಸಂಧ್ಯಾನ ಜ್ಯಾಮೆಟ್ರಿ ಬಾಕ್ಸಲ್ಲಿ ನೋಡಿದ್ದ.ಆದರೆ ಇವತ್ತು ಪೆನ್ನು ಬಾಕ್ಸಿನ ಹೊರಗಿತ್ತು. ಸಂಧ್ಯಾ ಪಕ್ಕಕ್ಕೆ ತಿರುಗಿ ಲೆಕ್ಕ ಬಿಡಿಸುತ್ತಾ ಇದ್ದಳು. ಪುಟ್ಟನಿಗೆ ತಾನು ಯಾಕೆ ಹಾಗೆ ಮಾಡಿದೆ ಅಂತ ಈಗ್ಲೂ ಗೊತ್ತಾಗ್ತಾನೇ ಇಲ್ಲ. ಆದರೆ ಆ ಕ್ಷಣಕ್ಕೆ ಮಾತ್ರ ಮೆಲ್ಲಗೆ ಕೈ ಹಾಕಿ ಆ ಹೀರೋ ಪೆನ್ನನ್ನು ತೆಗೆದು ತನ್ನ ಬ್ಯಾಗಿಗೆ ಸೇರಿಸಿಕೊಂಡಿದ್ದ.

ಅವನ ಹತ್ರ ಪೆನ್ನೇ ಇಲ್ಲ ಅಂತೇನೂ ಇಲ್ಲ. ನಾಲ್ಕನೇತಿಯಲ್ಲಿ ಇದ್ದಾಗ ಅವನಪ್ಪ ಒಂದು ನೀಲಿ ಕಲರಿನ ಶಾಯಿ ಪೆನ್ನೊಂದನ್ನು ಕೊಡಿಸಿದ್ದರು. ಮೊದಲೊಂದು ವರ್ಷ ಆ ಪೆನ್ನು ಚೆನ್ನಾಗೇ ಬರೀತಿತ್ತು. ಅದರ ನಿಬ್ಬು ಒಂಥರಾ ಹಾಳೇನೇ ಹರೀತಾ ಇದೆ ಅಂತ ಬಹಳ ಅನಿಸಿದರೂ ಬರ್ತಾ ಬರ್ತಾ ಪುಟ್ಟನಿಗೆ ಅದು ಅಭ್ಯಾಸವಾಗಿ ಹೋಗಿತ್ತು. ಆದರೆ ಈಗೊಂದು ೮-೧೦ ತಿಂಗಳಿಂದ ಮಾತ್ರ ಯಾಕೋ ಅದು ಸಿಕ್ಕಾಪಟ್ಟೆ ತೊಂದರೆ ಕೊಡಲು ಶುರು ಮಾಡಿತ್ತು. ಬರೀತಾ ಬರೀತಾ ಸಡನ್ನಾಗಿ ನಿಂತೇ ಬಿಡುತ್ತಿತ್ತು. ಹಾಗಾದಾಗೆಲ್ಲಾ ಅದನ್ನು ನಾಲ್ಕು ಸಾರಿ ಕೊಡವಿ ಒಂದೆರಡು ಶಾಯಿ ಹುಂಡನ್ನು ಪಟ್ಟಿಯ ಮೇಲೋ, ಬೆಂಚಿನ ಮೇಲೋ ಬೀಳಿಸಿ, ನಿಬ್ಬನ್ನು ಅದಕ್ಕೆ ಒತ್ತಿ ಹಿಡಿದು ಶಾಯಿಯನ್ನು ಅದಕ್ಕೆ ಕುಡಿಸಿದರೆ ಮಾತ್ರ ಮತ್ತೆ ಪೆನ್ನು ಬರೆಯಲು ಶುರು ಮಾಡುತ್ತಿತ್ತು. ಪುಟ್ಟನ ಯಾವುದೇ ಪಟ್ಟಿ ತೆಗೆದು ನೋಡಿದ್ರೆ ಅಲ್ಲಲ್ಲಿ ಆ ಪೆನ್ನಿನ ಸಾಹಸದ ಕುರುಹು ಕಂಡೇ ಬಿಡುತ್ತದೆ.ಒಂದೆರಡು ಸಲ ಅವನ ಬಿಳಿ ಯುನೀಫಾರ್ಮ ಮೇಲೂ ಶಾಯಿ ಚೆಲ್ಲಿಕೊಂಡು ಅಮ್ಮನ ಕೈಲಿ ಬೈಸಿಕೊಂಡಿದ್ದ. ಅದು ಶುರುವಾಗಿ ತಿಂಗಳಲ್ಲೇ ಅವನು ಹೊಸಾ ಪೆನ್ನು ಬೇಕು ಅಂತ ಅಪ್ಪನ ಹತ್ರ ಬೇಡಿಕೆ ಇಟ್ಟಿದ್ದ. ಅವನಪ್ಪ ಅದನ್ನು ಅಷ್ಟೊಂದೇನೂ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಇನ್ನೂ ಒಂದು ವರ್ಷ ಅದರಲ್ಲೇ ನಿಭಾಯಿಸು ಅಂದು ಹೇಳಿ ಅವನನ್ನು ಸಾಗಹಾಕಿದ್ದರು. ಮೊನ್ನೆ ಮೊನ್ನೆ ಅದರ ಕಾಟ ಜಾಸ್ತಿಯಾದಾಗ ಮತ್ತೊಮ್ಮೆ ಪುಟ್ಟ ಬೇಡಿಕೆ ಇಟ್ಟಿದ್ದ. ಈ ಸಲ ಅವನಪ್ಪ ಸ್ಟ್ರಿಕ್ಟಾಗಿ "ನೀನು ಆರನೆತ್ತಿ ವಾರ್ಷಿಕ ಪರೀಕ್ಷೆಯಲ್ಲಿ ಹತ್ತು ನಂಬರೊಳಗೆ" ಬಂದರೆ ಮಾತ್ರ ಒಂದು ಹೀರೊ ಪೆನ್ನು ತೆಗೆಸಿಕೊಡುತ್ತೇನೆ ಎಂದು ಹೇಳಿಬಿಟ್ಟಿದ್ದರು. ಪುಟ್ಟನಿಗೆ ಏಕಕಾಲದಲ್ಲೇ ದುಃಖವೂ, ಸಂತೋಷವೂ ಆಗಿತ್ತು. ಸರಿಯಾಗಿ ಓದಿದರೆ ಕ್ಲಾಸಿನಲ್ಲಿ ಹತ್ತರೊಳಗೆ ಬರುವುದು ಅಷ್ಟೊಂದೇನೂ ಕಷ್ಟವಾಗಿರಲಿಲ್ಲ. ಹಾಗಾಗೇ ಅವನು ಕಳೆದ ತಿಂಗಳಿಂದ ಬೆಳಿಗ್ಗೆ ೬ ಗಂಟೆಗೇ ಎದ್ದು ಮುಕ್ಕಾಲು ತಾಸು ಓದಲು ಶುರುಮಾಡಿಬಿಟ್ಟಿದ್ದ, ಅವನಮ್ಮನಿಗೂ ಆಶ್ಚರ್ಯವಾಗುವಂತೆ.

ಹೀರೊ ಪೆನ್ನು ಸಾಧಾರಣವಾದ ಪೆನ್ನಂತೂ ಅಲ್ಲ ಅನ್ನುವುದು ಪುಟ್ಟನಿಗೆ ಯಾವಾಗಲೋ ಖಾತ್ರಿಯಾಗಿ ಹೋಗಿತ್ತು. ಪಕ್ಕದ್ಮನೆ ಮಲ್ಲಿ ಹತ್ರ ವರ್ಷದ ಹಿಂದೇ ಹೀರೊ ಪೆನ್ನು ಇತ್ತು. ಅವನ ಕ್ಲಾಸಲ್ಲಿ ಹಲವಾರು ಹುಡುಗರ ಕೈಯಲ್ಲಿ ಹೀರೋ ಪೆನ್ನು ಆಗಲೇ ಇತ್ತು. ಅವರೆಲ್ಲರ ಬಾಯಲ್ಲಿ ಅದರ ಗುಣಗಾನಗಳನ್ನು ಕೇಳಿ ಕೇಳಿ ಪುಟ್ಟನಿಗೆ ತನ್ನ ಹತ್ತಿರನೂ ಒಂದು ಹೀರೊ ಪೆನ್ನು ಇರಬೇಕಿತ್ತೆಂದು ತೀವ್ರವಾಗಿ ಅನಿಸಲು ಶುರುವಾಗಿತ್ತು. ಪೆನ್ನಿನೊಳಗೇ ಹೊಕ್ಕಿಕೊಂಡಂತೆ ಇದ್ದ ಅದರ ನಿಬ್ಬು, ಮೆಲ್ಲಗೆ ಜಾರುವ ಅದರ ಕ್ಯಾಪು, ಎರಡೆರಡು ಕಲರ್ರಿನ ವಿನ್ಯಾಸ, ಬೆರಳು ಹಿಡಿವಲ್ಲಿನ ನುಣುಪು ಎಲ್ಲವೂ ಪುಟ್ಟನಿಗೆ ಬಹಳ ಇಷ್ಟವಾಗಿತ್ತು. ಶಾಯಿ ಕಕ್ಕುವುದು, ಮಧ್ಯದಲ್ಲೇ ನಿಂತುಬಿಡುವುದು, ಹಾಳೆಯನ್ನೇ ಕೊರೆಯುವಂತೆ ಓಡುವುದು ಇಂಥಹ ಕೆಟ್ಟ ಚಾಳಿಗಳೇನೂ ಅದಕ್ಕೆ ಇಲ್ಲ ಅನ್ನುವುದನ್ನು ಅವನು ಹಲವು ಸಹಪಾಠಿಗಳ ಬಾಯಲ್ಲಿ ಕೇಳಿತಿಳಿದುಕೊಂಡಿದ್ದ. ಮಲ್ಲಿ ಹತ್ರ ಕಾಡಿಬೇಡಿ, ಒಂದು ಸಲ ತಾನೂ ಅವನ ಪೆನ್ನು ತೆಗೆದುಕೊಂಡು ಬರೆಯಲು ಪ್ರಯತ್ನ ಪಟ್ಟಿದ್ದ. ಅದೂ ಒಂದು ತರ ಹಾಳೆಯನ್ನೇ ಕೊರೆದ ಹಾಗೇ ಪುಟ್ಟನಿಗೆ ಅನ್ನಿಸಿತ್ತು. ಮಲ್ಲಿಗೆ ಅದನ್ನು ಹೇಳಿದರೆ, ಅವನು ಅದು ಹಾಗೆಲ್ಲ ಬೇರೆಯವರು ಬರೆದರೆ ಸರಿಯಾಗಿ ಬರೆಯುವುದಿಲ್ಲವೆಂದೂ, ಅದು ಅವನು ಹಿಡಿದರೆ ಮಾತ್ರ ಸರಿಯಾಗಿ ಬರೆಯುತ್ತದೆ ಎಂದೂ ಹೇಳಿದ್ದ. ಪುಟ್ಟನಿಗೆ ಹೀಗೆ ತಮ್ಮ ಮಾತೊಂದನ್ನೇ ಕೇಳುವಂತ ಪೆನ್ನೊಂದಿದ್ದರೆ ಎಷ್ಟು ಚೆನ್ನ ಎಂದೆನಿಸಿ, ಹೀರೋ ಪೆನ್ನಿನ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿತ್ತು.ಇವೆಲ್ಲ ಕಾರಣಗಳಿಗಾಗಿಯೇ ಪುಟ್ಟನಿಗೆ ಇವತ್ತು ಸಂಧ್ಯಾಳ ಬ್ಯಾಗಿನೊಳಗೆ ಆ ಹೀರೋ ಪೆನ್ನು ಕಂಡಕೂಡಲೇ ತೆಗೆದುಕೊಳ್ಳಬೇಕೆಂದು ಬಲವಾಗಿ ಅನ್ನಿಸಿ, ಹಾಗೆ ಮಾಡಿಬಿಟ್ಟಿದ್ದ.

ಮಧ್ಯಾಹ್ನ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ, ಪುಟ್ಟ ಮೆಲ್ಲಗೆ ತನ್ನ ಬ್ಯಾಗಿನಿಂದ ಹೀರೋ ಪೆನ್ನನ್ನು ಹೊರಗೆ ತೆಗೆದ. ಅದರ ಹೊಂಬಣ್ಣದ ಕ್ಯಾಪು ಮಿರಿಮಿರಿ ಮಿಂಚುತ್ತಿತ್ತು. ಪಟ್ಟಿಯೊಂದರ ಹಿಂಭಾಗದ ಮೇಲೆ ಪೆನ್ನಿನಿಂದ ಬರೆಯಲು ಪ್ರಯತ್ನಿಸಿದ. ಆದರೆ ಪುಟ್ಟನ ಉತ್ಸಾಹಕ್ಕೆ ತಣ್ಣೀರೆರೆಚುವಂತೆ, ಪೆನ್ನು ಬರೆಯುತ್ತಾನೇ ಇಲ್ಲ! ಬರೀ ಕರಕರ ಶಬ್ದ ಮಾತ್ರ ಮಾಡುತ್ತಿದೆ. ಪುಟ್ಟ ಅಭ್ಯಾಸ ಬಲದಿಂದ ಎರಡು ಸಲ ಪೆನ್ನನ್ನು ಕೊಡವಿದ, ಊಹುಂ, ಒಂಚೂರೂ ಶಾಯಿಯೂ ಬೀಳಲಿಲ್ಲ. ಪುಟ್ಟ ಒಂದುಸಲ ಪೆಚ್ಚಾದರೂ, ಸಾವರಿಸಿಕೊಂಡು ಅದರ ಕೆಳಭಾಗವನ್ನು ಬಿಚ್ಚಿ, ಶಾಯಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಪ್ರಯತ್ನಿಸಿದ. ಆಗಲೇ ಗೊತ್ತಾಗಿದ್ದು ಅವನಿಗೆ, ಹೀರೋ ಪೆನ್ನು ಬೇರೆ ಶಾಯಿ ಪೆನ್ನುಗಳಿಗಿಂತ ನಿಜಕ್ಕೂ ಭಿನ್ನವಾಗಿದೆ ಎನ್ನುವುದು. ಅದರ ಮೇಲುಭಾಗಕ್ಕೆ ಅಂಟಿಕೊಂಡಂತೇ ಒಂದು ಉದ್ದನೆಯ ರಬ್ಬರ್ ಟ್ಯೂಬು ಇತ್ತು. ಅದರಲ್ಲೇ ಶಾಯಿ ತುಂಬುತ್ತಾರೇನೋ ಎಂದು ಅವನಿಗೆ ಅನಿಸಿತು. ಟ್ಯೂಬನ್ನು ಪೆನ್ನಿನಿಂದ ಬೇರ್ಪಡಿಸಲು ಪ್ರಯತ್ನಿಸಿದ. ಇಲ್ಲ, ಅದು ಗಟ್ಟಿಯಾಗಿ ಅಂಟಿಕೊಂಡೇ ಇತ್ತು. ಅದರಲ್ಲಿ ಶಾಯಿ ಹೇಗೆ ತುಂಬುವುದು ಎನ್ನುವುದೇ ಪುಟ್ಟನಿಗೆ ಗೊತ್ತಾಗಲಿಲ್ಲ. ಈಗ ಪುಟ್ಟ ನಿಜಕ್ಕೂ ಗೊಂದಲಕ್ಕೆ ಬಿದ್ದ. ಹೀರೋ ಪೆನ್ನಿನ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡರೂ, ಇದೊಂದರ ಬಗ್ಗೆ ಯಾರ ಹತ್ತಿರನೂ ಕೇಳಲಿಲ್ಲವಲ್ಲ ಎಂದು ಪೇಚಾಡಿಕೊಂಡ. ಆದರೆ ಈಗೇನೂ ಮಾಡುವಂತಿರಲಿಲ್ಲ.

ಸಂಜೆಯ ತನಕವೂ ಅವನಿಗೆ ಇದರದ್ದೇ ಯೋಚನೆಯಾಯ್ತು. ಮಲ್ಲಿಯ ಹತ್ತಿರ ಕೇಳೋಣವೆಂದರೆ ಅವನು ಮೊದಲೇ ಸಂಶಯ ಪಿಶಾಚಿ. ಒಂದು ಉತ್ತರ ಹೇಳಲು ೧೦ ಪ್ರಶ್ನೆ ಕೇಳುತ್ತಾನೆ. ಯಾಕೋ ಅವನ ಹತ್ತಿರ ಕೇಳುವುದು ಅಷ್ಟೊಂದು ಒಳ್ಳೆಯದೆಲ್ಲವೆಂದು ಒಳಮನಸು ಹೇಳತೊಡಗಿತು. ಅಷ್ಟರಲ್ಲೇ ಪುಟ್ಟನ ಅಮ್ಮ ಅವನನ್ನು ಕರೆದು, ಇವತ್ತು ಅಕ್ಕನನ್ನು ಅವಳ ಭರತನಾಟ್ಯ ಕ್ಲಾಸಿಗೆ ಕರೆದುಕೊಂಡು ಹೋಗಿ, ಕ್ಲಾಸು ಮುಗಿದ ಮೇಲೆ ವಾಪಸ್ಸು ಅವಳ ಜೊತೆಯೇ ಬರಬೇಕೆಂದು ತಾಕೀತು ಮಾಡಿಬಿಟ್ಟಳು. ಅವನಪ್ಪ ಮನೆಗೆ ಬೇಗ ಬರದಿದ್ದದೆ ಬಹಳಷ್ಟು ಶನಿವಾರ ಈ ಕೆಲಸ ಪುಟ್ಟನ ಪಾಲಿಗೆ ಬರುತ್ತಿತ್ತು. ಅಕ್ಕನಿಗೆ ಹೆದರಿಕೆ ಅಂತಲ್ಲ, ಆದರೂ ಅವಳ ಜೊತೆ ಯಾರಾದರೂ ಇದ್ದರೆ ಅನುಕೂಲ ಅಂತೆನಿಸಿ ಅಮ್ಮ ಹಾಗೆ ಮಾಡುತ್ತಿದ್ದರು. ಪುಟ್ಟನಿಗೆ ಅದರಿಂದ ಖುಶಿಯೇ ಆಯಿತು. ಮಲ್ಲಿಯ ಜೊತೆ ಬ್ಯಾಡ್ಮಿಂಟನ್ ಆಡಲೂ ಇವತ್ತು ಅವನಿಗೆ ಮನಸ್ಸಿರಲಿಲ್ಲ.

ಅಕ್ಕನ ಭರತನಾಟ್ಯ ಕ್ಲಾಸು ಬಹಳ ದೂರವೇನಿರಲಿಲ್ಲ. ಅಗಸನ ಕಟ್ಟೆ ಕೆರೆ ದಾಟಿ ಆ ಕೆರೆ ಏರಿ ಮೇಲಿರುವ ವಿಷ್ಣು ಮಠದ ತನಕ ಹೋಗಬೇಕು ಅಷ್ಟೇ. ಅಲ್ಲಿ ಒಬ್ಬ ಮೇಷ್ಟ್ರು ಪ್ರತೀ ಶನಿವಾರ ಸುತ್ತಮುತ್ತಲಿನ ಊರ ಹೆಣ್ಣುಮಕ್ಕಳಿಗೆ ಭರತ ನಾಟ್ಯ ಕಲಿಸುತ್ತಿದ್ದರು. ಅವರು ಮೂಲ ಮೈಸೂರಿನವರು, ಹೆಸರು ವಿಷ್ಣು ಶರ್ಮ, ಅನ್ನುವುದಷ್ಟೇ ಎಲ್ಲರಿಗೂ ಗೊತ್ತಿದ್ದಿದ್ದು. ಪುಟ್ಟನಿಗೆ ಗಂಡು ಮೇಷ್ಟರೊಬ್ಬರು ಹೆಣ್ಣುಮಕ್ಕಳಿಗೆ ಭರತನಾಟ್ಯ ಕಲಿಸುತ್ತಾರೆ ಎನ್ನುವುದೇ ಒಂದು ಸೋಜಿಗವಾಗಿತ್ತು. ದಾರಿ ಮಧ್ಯೆ ಅಕ್ಕನ ಹತ್ತಿರ ಹೀರೋ ಪೆನ್ನಿನ ಬಗ್ಗೆ ಕೇಳಬೇಕು ಎಂದೆನ್ನಿಸಿದರೂ ಪೂರ್ತಿಯಾಗಿ ಧೈರ್ಯ ಸಾಕಾಗಲಿಲ್ಲ. ಅಕ್ಕನೂ ಯಾವುದೋ ಡ್ಯಾನ್ಸ್ ಸ್ಟೆಪ್ಪಿನ ಗುಂಗಿನಲ್ಲೇ ಇದ್ದಳು. ಸುಮ್ಮನೆ ಅವಳ ಜೊತೆ ಹೆಜ್ಜೆಹಾಕಿದ. ಇವರು ಹೋಗುವಷ್ಟರಲ್ಲೇ ಕ್ಲಾಸು ಶುರುವಾಗಿಬಿಟ್ಟಿತ್ತು. ಪುಟ್ಟನ ಅಕ್ಕ ಓಡೋಡಿ ಹೋಗಿ ಮುಂದಿನ ಸಾಲಿನಲ್ಲೇ ಸೇರಿಕೊಂಡಳು. ಪುಟ್ಟ ಅಲ್ಲಿಯೇ ಇದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತುಕೊಂಡ . ಪ್ರತೀ ಸಲ ಅಕ್ಕನ ಜೊತೆ ಬಂದಾಗಲೂ ಅಲ್ಲಿ ಸಮಯ ಕಳೆಯುವುದು ಪುಟ್ಟನಿಗೆ ಬಹುಕಷ್ಟಕರವಾದ ಸಂಗತಿಯಾಗಿತ್ತು. ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಪಕ್ಕದಲ್ಲೇ ಇದ್ದ ಕಿಟಕಿಯಿಂದ ವಿಷ್ಣು ಮಠಕ್ಕೆ ಬರುತ್ತಿದ್ದ ಭಕ್ತಾದಿಗಳನ್ನು ನೋಡುತ್ತಲೇ ಹೇಗೋ ಒಂದುತಾಸನ್ನು ಕಷ್ಟದಿಂದ ಕಳೆಯುತ್ತಿದ್ದ. ಆದರೆ ಇವತ್ಯಾಕೋ ಅವನಿಗೆ ಅಕ್ಕ ಡ್ಯಾನ್ಸು ಮಾಡುತ್ತಿರುವದನ್ನು ನೋಡಬೇಕೆನ್ನಿಸಿತು. ಸುಮ್ಮನೆ ನೋಡುತ್ತಾ ಕುಳಿತ. ಕಿಟಕಿಯಿಂದ ಒಳಗೆ ಬರುತ್ತಿದ್ದ ಬಿಸಿಲುಕೋಲು ಡ್ಯಾನ್ಸ್ ಮಾಡುತ್ತಿದ್ದ ಹುಡುಗಿಯರ ಕಾಲುಗಳ ಮಧ್ಯೆ ಸಿಲುಕಿ ವಿಚಿತ್ರವಾದ ಬೆಳಕಿನ ವಿನ್ಯಾಸವನ್ನು ಸೃಷ್ಟಿಮಾಡುತ್ತಿತ್ತು. ಮೇಷ್ಟ್ರು ಎಲ್ಲರ ಬಳಿಗೂ ಸಾಗಿ ಸ್ಟೆಪ್ ತಪ್ಪಿದ್ದರೆ ಸರಿಮಾಡುತ್ತಿದ್ದರು. ಮೇಷ್ಟ್ರ ಜೊತೆ ಎಲ್ಲರೂ "ಮೆಲ್ಲ ಮೆಲ್ಲನೆ ಬಂದನೆ, ಗೋಪಮ್ಮಾ ಕೇಳೆ, ಮೆಲ್ಲಮೆಲ್ಲನೇ ಬಂದನೇ.." ಎಂದು ಲಯಬಧ್ಧವಾಗಿ ಹಾಡುತ್ತಾ ಡ್ಯಾನ್ಸ್ ಮಾಡುತ್ತಾ ಇದ್ದರು. ಪುಟ್ಟ ಅಕ್ಕನ ಬದಲಾಗುತ್ತಿದ್ದ ಮುಖಚರ್ಯೆಯನ್ನೇ ಗಮನಿಸುತ್ತಿದ್ದ. "ಮೆಲ್ಲ ಮೆಲ್ಲನೆ ಬಂದನೇ, ಗೋಪಮ್ಮಾ ಕೇಳೆ" ಎಂದು ಹಾಡುವಾಗ ಒಂಚೂರು ಕಾತರ ಭಾವ, "ಮೆಲ್ಲ ಮೆಲ್ಲಗೆ ಬಂದು ಗಲ್ಲಕೆ ಮುತ್ತ ಕೊಟ್ಟು" ಎಂದು ಗಲ್ಲದ ಮೇಲೆ ತೋರು ಬೆರಳಿಡುವಾಗಿನ ಒಂಚೂರು ನಾಚಿಕೆ, "ಕೇಳದೇ ಓಡಿಹೋದ ಗೊಲ್ಲಗೆ ಬುದ್ಧಿಯ ಹೇಳೆ" ಎಂದು ಹಾಡುವಾಗಿನ ಹುಸಿಮುನಿಸು, ಎಷ್ಟೆಲ್ಲಾ ಭಾವಗಳು! ಮುಂದೆ ಅಕ್ಕ ಒಳ್ಳೆ ಡ್ಯಾನ್ಸರ್ ಖಂಡಿತ ಆಗುತ್ತಾಳೆ ಅನ್ನಿಸಿತು ಪುಟ್ಟನಿಗೆ.

ಹಾಗೇ ಎಷ್ಟು ಹೊತ್ತಾಯಿತೋ ಗೊತ್ತಿಲ್ಲ. ಹುಡುಗಿಯೊಬ್ಬಳು ಕಾಲು ಸೋತುಹೋಯಿತೆಂಬಂತೆ ಬಂದು ಪುಟ್ಟನ ಪಕ್ಕಕ್ಕೇ ಬಂದು ಕುಳಿತಳು. ಅವಳ ಮುಖದಿಂದ ಬೆವರು ನಲ್ಲಿ ನೀರಿನ ತರ ಧಾರಾಕಾರವಾಗಿ ಹರಿಯುತ್ತಿತ್ತು. ಡ್ಯಾನ್ಸ್ ಮಾಡುವುದು ಅಷ್ಟೆಲ್ಲಾ ಕಷ್ಟವಿರಬಹುದೆಂದು ಪುಟ್ಟ ಯಾವತ್ತೂ ಊಹಿಸಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಕುಳಿತು ಸುಧಾರಿಸಿಕೊಂಡ ಮೇಲೆ ಅವಳು ಹಿಂದೆಲ್ಲೋ ಹೋಗಿ ಸ್ಕೂಲ್ ಬ್ಯಾಗೊಂದನ್ನು ಹಿಡಿದುಕೊಂಡು ಬಂದಳು. ಪುಟ್ಟ ನೋಡುತ್ತಿದ್ದಂತೆಯೇ ಅದರಲ್ಲಿಂದ ಪಟ್ಟಿಯೊಂದನ್ನು ತೆಗೆದು, ಕೆಂಪು ಹಳದಿ ಬಣ್ಣದ ಜ್ಯಾಮೆಟ್ರಿ ಬಾಕ್ಸಿನಿಂದ ಪೆನ್ನು ತೆಗೆದು ಏನೋ ಬರೆಯತೊಡಗಿದಳು. ಪುಟ್ಟ ನೋಡುತ್ತಾನೆ, ಏನಾಶ್ಚರ್ಯ! ಅವಳ ಕೈಲಿರುವುದೂ ಹೀರೋ ಪೆನ್ನೇ. ಹೇಳಿಕೊಳ್ಳದಾದಷ್ಟು ಸಂತಸವಾಯಿತು ಅವನಿಗೆ. ಅಪ್ರಯತ್ನಪೂರ್ವಕವಾಗಿ "ಅದು ಹೀರೋ ಪೆನ್ನಾ?" ಅನ್ನೋ ಉದ್ಘಾರ ಅವನ ಬಾಯಿಂದ ಬಿದ್ದೇ ಹೋಗಿತ್ತು. ಬರೆಯುತ್ತಿದ್ದ ಹುಡುಗಿ, ತನ್ನ ಕೈಯಲ್ಲಿರುವುದು ಕೊಹಿನೂರ್ ವಜ್ರವೇ ಎಂಬಂತೆ ಗತ್ತಿನಿಂದ ಪುಟ್ಟನ ಕಡೆ ನೋಡಿ ತಲೆಯಾಡಿಸಿದಳು. ತನಗೇನೂ ಗೊತ್ತೇ ಇಲ್ಲ ಎಂಬಂತೆ ಪುಟ್ಟ "ಅದಕ್ಕೆ ಶಾಯಿ ತುಂಬುವುದು ಹೇಗೆ ಗೊತ್ತಾ?" ಎಂದು ಕೇಳಿದ. ಆ ಪ್ರಶ್ನೆ ಕೇಳುವಾಗ ಸಾಧ್ಯವಾದಷ್ಟು ಮುಗ್ಧ ಮುಖ ಮಾಡಲು ಅವನು ಪ್ರಯತ್ನಪಟ್ಟಿದ್ದು ಎದ್ದುಕಾಣುತ್ತಿತ್ತು. ಆದರೆ ಆ ಹುಡುಗಿಯ ಅಹಂಗೆ ಸ್ವಲ್ಪ ಘಾಸಿಯಾಗಿರಬೇಕು. ಅಂಥಾ ಪೆನ್ನು ಇಟ್ಟುಕೊಂಡು ಯಕಶ್ಚಿತ್ ಅದಕ್ಕೆ ಶಾಯಿ ತುಂಬುವುದು ಹೇಗೆ ಅನ್ನುವುದು ಗೊತ್ತಿಲ್ಲವೆಂದರೆ ಮರ್ಯಾದೆ ಪ್ರಶ್ನೆ ಅಲ್ಲವೇ? "ಓ, ಶಾಯಿ ತುಂಬೋದಾ? ಅದೇನ್ ಮಹಾ? ಹೀಗೆ" ಎನ್ನುತ್ತಾ, ಅದರ ಕೆಳಭಾಗವನ್ನು ಸಂಪೂರ್ಣ ಕಳಚಿ, ಪೆನ್ನನ್ನು ತಲೆಕೆಳಗು ಮಾಡಿ, ರಬ್ಬರ್ ಟ್ಯೂಬ್ ಒತ್ತಿ ಹಿಡಿದು ಹೇಗೆ ಇಂಕ್ ಬಾಟಲಲ್ಲಿ ಇಡಬೇಕು ಎಂದು ತೋರಿಸಿದಳು. ಪುಟ್ಟನಿಗೆ ಈಗ ಸಮಾಧಾನವಾಯಿತು. "ಓ ಹಾಗಾ?" ಎಂದು ತಲೆತೂಗಿದ. ಹುಡುಗಿ ಬರೆಯುವುದನ್ನು ಮುಂದುವರಿಸಿದಳು.

ಅಕ್ಕನ ಜೊತೆ ವಾಪಾಸ್ ಮನೆಗೆ ಬರುತ್ತಿದ್ದಾಗ ಅವನ ಕಾಲುಗಳು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಜಗತ್ತನ್ನೇ ಗೆದ್ದಷ್ಟು ಹುರುಪು ಅವನ ಮೈಮನಗಳಲ್ಲಿ. ಆದರೂ ಸುಸ್ತಾದ ಅಕ್ಕನ ಕಾಲುಗಳಿಗೆ ಜೊತೆ ನೀಡಲು ಅವನು ಸಾವಕಾಶವಾಗಿಯೇ ಬರಬೇಕಾಯಿತು. ಮನೆಗೆ ಬಂದ ಮೇಲೆ ಅವನು ಮಾಡಿದ ಮೊದಲ ಕೆಲಸವೇ ತನ್ನ ರೂಮ್ ನ ಬಾಗಿಲು ಹಾಕಿಕೊಂಡು ಹೀರೋ ಪೆನ್ನಿಗೆ ಶಾಯಿ ತುಂಬಲು ಪ್ರಯತ್ನಿಸಿದ್ದು. ಸುಮಾರು ಹೊತ್ತು ಒದ್ದಾಡಿದ ನಂತರ ಅದರ ರಬ್ಬರ್ ಟ್ಯೂಬಿನಲ್ಲಿ ಒಂಚೂರು ಶಾಯಿಯನ್ನು ತುಂಬಲು ಸಾಧ್ಯವಾಯಿತು ಅವನಿಗೆ. ಸ್ಕೂಲ್ ಬ್ಯಾಗಿನಿಂದ ಪಟ್ಟಿಯೊಂದನ್ನು ತೆರೆದು ಅದರಲ್ಲಿ ಬರೆಯಲಾರಂಭಿಸಿದ. ಆಹಾ ಎಷ್ಟು ಸುಲಲಿತವಾಗಿ ಓಡುತ್ತಿದೆ ಪೆನ್ನು! ಪುಟ್ಟನಿಗೆ ಹಾಳೆಯ ಮೇಲೆ ಬರೆದ ಅನುಭವವೇ ಆಗುತ್ತಿಲ್ಲ. ಪೆನ್ನು ಅವನ ಕೈಯಲ್ಲಿ ಸರಾಗವಾಗಿ ಹರಿಯುತ್ತಿದೆ! ಪುಟ್ಟನಿಗೆ ಬರೆಯುವುದನ್ನು ನಿಲ್ಲಿಸಬೇಕು ಎಂದೆನ್ನಿಸುತ್ತಲೇ ಇಲ್ಲ. ಹಾಗೇ ಎಷ್ಟು ಹೊತ್ತು ಬರೆದನೋ ಅವನಿಗೇ ಗೊತ್ತು. ಕೊನೆಗೊಮ್ಮೆ ಕೈಯೆಲ್ಲಾ ಜೋಮು ಹಿಡಿದ ಹಾಗೆ ಅನ್ನಿಸಿದಾಗ ಪೆನ್ನನ್ನು ಮುಚ್ಚಿಟ್ಟು, ಮೆಲ್ಲಗೆ ತನ್ನ ಸ್ಕೂಲ್ ಬ್ಯಾಗಿಗೆ ಸೇರಿಸಿದ.

ಪುಟ್ಟನ ರವಿವಾರವೆಲ್ಲಾ ಇದರ ಸಂಭ್ರಮದಲ್ಲೇ ಕಳೆದುಹೋಯ್ತು.ಆದರೆ ರಾತ್ರಿಯಾದಂತೆಲ್ಲಾ ಅವನಿಗೊಂದು ಅವ್ಯಕ್ತ ಭಯ ಆವರಿಸಿಕೊಳ್ಳತೊಡಗಿತು. ತಾನು ಪೆನ್ನು ಕದ್ದಿದ್ದು ಸಂಧ್ಯಾಳಿಗೆ ಗೊತ್ತಾದರೆ? ಇಷ್ಟು ಹೊತ್ತಿಗಂತೂ ಅವಳಿಗೆ ತನ್ನ ಪೆನ್ನು ಕಳೆದುಹೋಗಿರುವುದು ಖಂಡಿತವಾಗಿ ಗೊತ್ತಾಗಿರುತ್ತದೆ. ನಾಳೆ ಶಾಲೆಯಲ್ಲಿ ಮಾಸ್ತರ್ರಿಗೆ ಹೇಳಿ ಎಲ್ಲರ ಸ್ಕೂಲ್ ಬ್ಯಾಗ್ ಗಳನ್ನು ಹುಡುಕಿಸಿದರೆ? ಅದರ ಕಲ್ಪನೆ ಬಂದ ಕೂಡಲೇ ಪುಟ್ಟ ನಿಜವಾಗಿಯೂ ಕಂಗಾಲಾದ. ಹೀರೋ ಪೆನ್ನನ್ನು ಬ್ಯಾಗಿನಿಂದ ತೆಗೆದು ಮನೆಯಲ್ಲೇ ಎಲ್ಲೋ ಅಡಗಿಸಿಡಬೇಕೆಂದು ಅನಿಸಿತೊಡಗಿತು. ಆದರೆ ಅಡಗಿಸಿಡುವುದಾದರೂ ಎಲ್ಲಿ? ಅಕ್ಕನ, ಅಮ್ಮನ ಕಣ್ಣಿಂದ ತಪ್ಪಿಸಿ ಇಡುವುದು ಅಸಾಧ್ಯವೆಂದೇ ಅವನ ಮನಸು ಹೇಳತೊಡಗಿತು. ಅದಲ್ಲದೇ ಅಮ್ಮನ ಕೈಲಿ ಸಿಕ್ಕಿಹಾಕಿಕೊಂಡರೆ ಪರಿಸ್ಥಿತಿ ಇನ್ನೂ ಗಂಭೀರವಾಗುವುದರಲ್ಲಿ ಪುಟ್ಟನಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಈ ವಿಚಿತ್ರ ಸಂಕೋಲೆಯಲ್ಲಿ ಸಿಕ್ಕಿಬಿದ್ದಿದ್ದಕಾಗಿ ಪುಟ್ಟನಿಗೆ ಬಹಳ ಬೇಸರ, ದುಃಖ ಎರಡೂ ಆಯಿತು. ಈ ಸಂದಿಗ್ಧದ ಮುಂದೆ ಹೀರೋ ಪೆನ್ನಿನ ಸಂಭ್ರಮ ಪೂರ್ತಿಯಾಗಿ ಕರಗಿಹೋಯ್ತು. ರಾತ್ರಿ ಊಟಕ್ಕೆ ಕುಳಿತಾಗ ಪುಟ್ಟನ ಅನ್ಯಮನಸ್ಕತೆಯನ್ನು ಅಮ್ಮ ಗಮನಿಸಿ, "ಎನಾಯ್ತೋ ಪುಟ್ಟಾ?" ಅಂದು ಕೇಳಿಯೂ ಇದ್ದರು. ಪುಟ್ಟನಿಗೆ ಊಟ ಸರಿಯಾಗಿ ಇಳಿಯಲೂ ಇಲ್ಲ. ರಾತ್ರಿ ನಿದ್ದೆಯೂ ಸರಿಯಾಗಿ ಬರಲಿಲ್ಲ. ಬೆಳಗ್ಗಿನ ಜಾವದಲ್ಲೆಲ್ಲೋ ಪುಟ್ಟನಿಗೆ ಕನಸಿನಲ್ಲಿ ಸಂಧ್ಯಾ ಬಂದು "ನನ್ನ ಪೆನ್ನು ಕದ್ದಿದ್ದಕ್ಕೆ ನಿನಗೆ ಸರಿಯಾದ ಶಾಸ್ತಿ ಮಾಡುತ್ತೀನಿ ನೋಡು" ಎಂದು ಅಣಕಿಸಿದ ಹಾಗೆ ಆಯಿತು. ಪುಟ್ಟನಿಗೆ ಸಟ್ಟನೇ ಎಚ್ಚರವಾಯಿತು. ಅವನ ಮೈಯೆಲ್ಲ ಸಿಕ್ಕಾಪಟ್ಟೆ ಬೆವರಿ ಹೋಗಿತ್ತು. ಆಮೇಲೆ ಅವನಿಗೆ ನಿದ್ರೆ ಬರಲೇ ಇಲ್ಲ.

ಯಾವತ್ತಿನಂತೆ ಅವನಿಗೆ ಬೇಗ ಎದ್ದು ಓದಲಾಗಲಿಲ್ಲ. "ಆರಂಭಶೂರ" ಎಂದು ಅವನಮ್ಮ ಪುಟ್ಟನನ್ನು ತಿಂಡಿತಿನ್ನುವಾಗ ಕೆಣಕಿದರು. ಪುಟ್ಟ ಏನೂ ಹೇಳಲಿಲ್ಲ. ಅವನ ಕಣ್ಣೆಲ್ಲಾ ಕೆಂಪಾಗಿಹೋಗಿತ್ತು. ಆದರೆ ಮನಸ್ಸು ಒಂದು ತಹಬದಿಗೆ ಬಂದಿತ್ತು. ಅವತ್ತು ಶಾಲೆಗೆ ಹೋಗಲು ಅವನಿಗೆ ಎಲ್ಲಿಲ್ಲದ ಅವಸರ. ಶಾಲೆಗೆ ಹೋದ ತಕ್ಷಣ ಅವನು ಮಾಡಿದ ಮೊದಲ ಕೆಲಸವೇ ಸಂಧ್ಯಾ ಬಳಿ ಹೋಗಿ "ನಿನ್ನ ಹೀರೋ ಪೆನ್ನು, ಶನಿವಾರ ಶಾಲೆಯಿಂದ ಮನೆಗೆ ಹೋಗುವ ಗಡಿಬಿಡಿಯಲ್ಲಿ ನಿನ್ನ ಬ್ಯಾಗಿನಿಂದ ಬಿದ್ದುಹೋಗಿತ್ತು, ನಾನು ಇಟ್ಟುಕೊಂಡಿದ್ದೆ, ತಗೋ" ಎಂದು ಹೀರೋ ಪೆನ್ನನ್ನು ವಾಪಾಸ್ ಮಾಡಿದ್ದು. ಸಂಧ್ಯಾಳಿಗೆ ಅತ್ಯಂತ ಸಂತೋಷವಾದ ಹಾಗೆ ತೋರಿತು. "ಓ ಹೌದಾ? ನಾನು ಮನೆಯೆಲ್ಲಾ ಹುಡುಕಿದೆ, ಎಲ್ಲೂ ಸಿಗಲಿಲ್ಲ, ಕಳೆದುಹೋಯಿತು ಎಂದು ಬಹಳ ಬೇಜಾರಾಗಿತ್ತು. ಥ್ಯಾಂಕ್ಸ್" ಎಂದು ಹೇಳಿ ಅವಳ ಬ್ಯಾಗಿನಿಂದ ಚಾಕಲೇಟೊಂದನ್ನು ತೆಗೆದು ಪುಟ್ಟನಿಗೆ ಕೊಟ್ಟಳು. ಪುಟ್ಟನ ಮನಸ್ಸು ಈಗ ನಿರಾಳವಾಯ್ತು. ಚಾಕಲೇಟನ್ನು ಬಾಯಲ್ಲಿ ಹಾಕಿ, ಸುಮ್ಮನೆ ಬಂದು ಬೆಂಚಿನಲ್ಲಿ ಕುಳಿತ. ಇನ್ನು ದಿನವೂ ಬೆಳಿಗ್ಗೆ ಒಂದು ತಾಸು ಓದಿ ಹೇಗಾದರೂ ೧೦ ನಂಬರೊಳಗೆ ಬರಲೇ ಬೇಕು ಎಂದು ಮನಸ್ಸಿನಲ್ಲೇ ಧೃಢ ನಿರ್ಧಾರ ಮಾಡಿಕೊಂಡ. ಅಪ್ಪನ ಹತ್ತಿರ ಮಾತ್ರ "ನನಗೆ ಹಸಿರು ಕಲರಿನ ಹೀರೋ ಪೆನ್ನೇ ತೆಗೆಸಿಕೊಡು" ಎಂದು ಬೇಡಿಕೆ ಇಡಬೇಕೆಂದೂ ಅವನಿಗೆ ಅನ್ನಿಸಿತು.