ಸರಿಯಾಗಿ ಕಾಲೂರಿ ನಡೆಯಲು ಕಲಿಯೇ, ಎಂದೊಬ್ಬರು
ಅದೆಷ್ಟು ನಿಧಾನ! ಹೀಗಿದ್ರೆ ಕಷ್ಟ, ಆಕ್ಷೇಪ ಕೆಲವರದು
ಸ್ವಲ್ಪ ಸೊಟ್ಟನ ಹೆಜ್ಜೆ, ಈಗಲೇ ಸರಿ ಮಾಡಿ, ಹುಶಾರು!
ಸೊಂಟ ಇನ್ನೂ ಗಟ್ಟಿಯಾಗಬೇಕು, ಹಿರಿಯರ ಕಿವಿಮಾತು
ಜನರೇ ಹೀಗೆ, ಎಲ್ಲದಕೊಂದು ಉಚಿತ ಸಲಹೆ
ತಲೆಗೊಂದು ಮಾತು, ಕೆಲಸಕ್ಕೊಂದು ಕೊಂಕು
ನಿಜ ಕಾಳಜಿಗೋ, ಇಲ್ಲ ಬರೀ ಬಾಯಿ ಚಪಲಕ್ಕೋ
ಬಿಡು, ಎಂದಾದರು ತಿಳಿದೀತು ನಿನಗೂ!
ಧೃತಿಗೆಡಬೇಕಾಗಿಲ್ಲ ನೀನು, ನಕ್ಕುಬಿಡು ಎಂದಿನಂತೆ
ಎಂಥ ವ್ಯಂಗ್ಯ, ಟೀಕೆಗೂ ನಗುವೇ ತಾನೆ ಮದ್ದು
ನಿಲ್ಲದಿರಲಿ ಹೆಜ್ಜೆ, ಹೆದರಿ ನಡುಗದಿರಲಿ ಕಾಲು
ಎಡವಿ ಬಿದ್ದರೇನು, ಎದ್ದು ನಡೆವುದೇ ಬದುಕು
ನಡೆದರೆ, ಓಡು! ಓಡಿದರೆ, ಇನ್ನೂ ಜೋರು
ಎಲ್ಲರ ಹಿಂದಿಕ್ಕುವುದೇ ಇಲ್ಲಿಯ ಕಾರಬಾರು
ದಾಟಿ ಓಡಬಹುದು ಎಲ್ಲ, ಬೇರೆ ಅವರ ಗುರಿ
ಗಮ್ಯವೊಂದೇ ಮುಖ್ಯವಲ್ಲ, ಗಮನವಿರಲಿ ದಾರಿ
ಹೆಜ್ಜೆಗೊಂದು ಹೊಸತು ಲೋಕ, ಹೊಸದು ನೋಟ
ಸಂತಸವಿರಲಿ, ನೋವಿರಲಿ, ಹೊಸತಲ್ಲವೇ ಪಾಠ
ಸಾಧನೆಯ ಹಾದಿಯಲಿ ಹೂವೊಂದೇ ಹಾಸಿಲ್ಲ
ಬಯಸಿ ಪಡೆವ ಛಲದಿ ನಡೆ, ನಿನ್ನ ಹಿಡಿವರಿಲ್ಲ!
5 comments:
ಮಧುಸೂದನ,
ಹಿತವಚನವನ್ನು ಹಿತವಾದ ಶೈಲಿಯಲ್ಲಿ ಬರೆದಿದ್ದೀರಿ. ಮಧುವನದ ಕಂಪು ಇದರಲ್ಲಿ ಬೆರೆತಿದೆ. ಆದರೆ, ಬರೆಯುವದಕ್ಕೆ ವಿಳಂಬ ಮಾಡುತ್ತಿದ್ದೀರಲ್ಲ, ಏಕೆ?
ಚೆನ್ನಾಗಿದೆ ಹಿತವಚನ. ತೊದಲುವುದನ್ನೇ ಆರಂಭಿಸದೇ ಮಗು ನೇರವಾಗಿ ಮಾತನಾಡಲಾದೀತೇ, ತೆವಳದೇ ಒಮ್ಮೆಗೆ ಎದ್ದು ನಿಲ್ಲಲಾದೀತೆ ? ಪ್ರಾರಂಭ ಮುಖ್ಯ. ಫಲಿತಾಂಶದ ಚಿಂತೆಯಲ್ಲೇ ಮುಳುಗಿ, ಅವರಿವರ ಮಾತಿಗಂಜಿ ಪ್ರಯತ್ನ ಕೈ ಬಿಡದಿರೆಂಬ ಆಶಯ ಇಷ್ಟವಾಯಿತು ..
Preetiya Madhu...
Kavana tumba chennagi moodi bandide. Kavanakke magu sutradharanadaru adaralliruva satya namagella anvaisuttade....
"ಎಡವಿ ಬಿದ್ದರೇನು, ಎದ್ದು ನಡೆವುದೇ ಬದುಕು", liked this line
ಬಯಸಿ ಪಡೆವ ಛಲದಿ ನಡೆ, ನಿನ್ನ ಹಿಡಿವರಿಲ್ಲ!
ಸುಂದರ ಸಾಲು.. ಕವನ.
ಕವನದಂತೇ ಛಲದಿಂದ ಬರವಣಿಗೆಯತ್ತ ಮೊಗಮಾಡಿದರೆ ಮತ್ತಷ್ಟು.. ಇನ್ನಷ್ಟು ಉತ್ತಮ ಬರಹಗಳು ಆದಷ್ಟು ಬೇಗ ಹೊರಬರಬಲ್ಲವು!! :)
Post a Comment