Tuesday, December 20, 2011

ಬದಲಾವಣೆ

ಬದಲಿಸಬೇಕಂತೆ ಹಳೆಯ ಬಚ್ಚಲಮನೆಯ
ಜಾರೋ ಕಲ್ಲು,ಮಸಿಹಿಡಿದ ಗೋಡೆ
ಕಿರ್ರೆನುವ ಬಾಗಿಲು,ಸುರಿವ ಸೂರು
ಒಂದೇ ಎರಡೇ,ನಡೆದೀತು ಎಷ್ಟು ದಿನ? ಒಂದೇ ವರಾತ

ನೋಡಿ ಆ ಹಂಡೆ,ಓಬೀರಾಯನ ಕಾಲದ್ದು
ಛೇ! ಒಂಚೂರೂ ಪ್ರಜ್ಞೆಯಿಲ್ಲ ನಿಮಗೆ
ಕರೆಂಟು ದೀಪವಿಲ್ಲ, ಬಟ್ಟೆಗೆ ಜಾಗವಿಲ್ಲ
ಕಿವಿ ಮೇಲೆ ಬಿದ್ದೀತೆ ನನ್ನ ಗೊಣಗಾಟ? ಹೇಳಿ ಪ್ರಯೋಜನವಿಲ್ಲ

ನೋಡಿದ್ದೀರಾ ಅವರ ಮನೆಯ ಬಾಥ್ರೂಮು?
ಥಳಥಳಿಸುವ ಟೈಲ್ಸುಗಳು, ದಂತದ ಹೊಳಪಿನಬೇಸಿನ್ನು,
ಝಗಮಗಿಸುವ ಲೈಟುಗಳು! ಗೊತ್ತೆ
ಈಗೆಲ್ಲ ಅವನ್ನು ನೋಡಿಯೇ ಅಳೆಯುತ್ತಾರೆ ನಿಮ್ಮ ರಸಿಕತೆಯ

ತೆಗೆಯಿರಿ ಈ ಪ್ಲಾಸ್ಟಿಕ್ ನಲ್ಲಿ, ಬರೀ ತಣ್ಣೀರು ಇದರಲ್ಲಿ
ಅದರ ಪೈಪು ಬೇರೆ, ನೋಡಿ ಗೋಡೆಯೆಲ್ಲ ಹಾಳು
ನೋಡಿಲ್ಲವೇ ಹೊಸ ಜಾಗ್ವಾರು,ಹಿಂಡ್ವೇರು?
ಎಡಕ್ಕೆ ಬಿಸಿನೀರು, ಮೇಲೆ ಶವರ್ರು,ಇದ್ದೇ ಇದೆಯಲ್ಲ ತಣ್ಣೀರು

ನಿಜ, ಬದಲಾಗಿವೆ ನಮ್ಮ ದೃಷ್ಟಿ, ಸೌಂದರ್ಯ ಪ್ರಜ್ಞೆ
ಹಳೆಯದೆ? ಛೀ! ಕಿತ್ತು ಬೀಸಾಕಿ ನಿರ್ದಾಕ್ಷಿಣ್ಯವಾಗಿ
ಮನೆ ತುಂಬಿಸಿಕೊಳ್ಳಿ ಹೊಚ್ಚ ಹೊಸದರ ಹೊಳಪ
ದುಡಿಯುವುದೆಲ್ಲ ಉಳಿಸಲೇ? ಭ್ರಾಂತು ನಿಮಗೆ, ರಾಜನಂತೆ ಬದುಕಿ

ಹೊಸದೆಂದ ಮಾತ್ರಕೆ ಬೇರೆಯಾಗಬಹುದೇ ಅನುಭೂತಿ
ಬದಲಾದೀತೆ ನೀರಿನ ಬಿಸಿ, ಹೊಗೆಯ ಹಸಿ?
ಬೇಕೆಂದಾಗ ನವೀಕರಿಸಬಹುದು ಹಳೆಯದನೆಲ್ಲ
ಅನ್ನುವರಿಗೆಲ್ಲ ಒಂದೇ ಪ್ರಶ್ನೆ, ಹೊಸತಾಗಿಸ ಬಲ್ಲಿರೇ ಹಳೆಯ ನೆನಪ?

4 comments:

sunaath said...

`ಹೊಸತಾಗಿಸ ಬಲ್ಲಿರೇ ಹಳೆಯ ನೆನಪ?'
Madhu, it's a wonderful poem. ಸಂಪ್ರದಾಯವನ್ನು ತುಳಿಯುವುದೇ ಪ್ರಗತಿಯಲ್ಲ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರರೂ ಸಹ ಹೇಳಿದ್ದಾರೆ!

prashasti said...

ಚೆನ್ನಾಗಿದೆ :-) ನವೀನತೆಯೆಡೆಗೆ ತಿರುಗುವ ಅತಿಯಾದ ಲಾಲಸೆಯಿಂದ , ತಿರುಗಿರುವವರ ಕಡೆಗಿನ ಆಸೆ ನೋಟದಿಂದ ನಮ್ಮಲ್ಲಿರುವ ಹಳತೆಲ್ಲವೂ ಅಸಹ್ಯದಂತೆ ಕಾಣತೊಡಗುವುದು ದುರಂತ .. ಒಳ್ಳೇ ಕವನ :-)

ತೇಜಸ್ವಿನಿ ಹೆಗಡೆ said...

ಹೊಸತಾಗಿಸ ಬಲ್ಲಿರೇ ಹಳೆಯ ನೆನಪ? - liked this line very much... good poem madhu :)

Pramod P T said...

tumbaa dinada nantara nimma blognalli iNukide. khushi aaytu padya Odi:)