ಆರಿದ್ರೆ ಮಳೆಯ ಇನ್ನೊಂದು ದೊಡ್ಡ ನೆಗಸು ಭೂಮಿಯನ್ನು ಅಪ್ಪಳಿಸಲು ಶುರುಮಾಡಿತ್ತು. ಕಪ್ಪಿಟ್ಟ ಆಕಾಶ, ಜೋರಾಗುತ್ತಿದ್ದ ಮಳೆ ಜಿರಲೆಯ ಶಬ್ದ, ಮಳೆ ಜೋರಾಗುವುದರ ಸೂಚನೆಯನ್ನು ಮೊದಲೇ ಕೊಟ್ಟಿದ್ದವು. ರಚ್ಚೆ ಹಿಡಿದ ಮಗುವಿನ ನಿರಂತರ ರೋದನದಂತೆ ಮಳೆ ಒಂದೇ ಸಮನೆ ಹೊಯ್ಯುತ್ತಲೇ ಇತ್ತು. ಮಳೆಯ ಆರ್ಭಟಕ್ಕೆ ಸುತ್ತಲಿನ ಪಕೃತಿಯ ಸಕಲ ಚರಾಚರ ವಸ್ತುಗಳೆಲ್ಲ ದಿಗ್ಮೂಢಗೊಂಡಂತೆ ಮೌನವಾಗಿ ನಿಂತು ಮಳೆಯ ನೀರಲ್ಲೇ ಮೀಯುತ್ತಿದ್ದವು. ಮಳೆಯ ’ಧೋ’ ಸದ್ದು ಜಾಸ್ತಿಯಾದಂತೆಲ್ಲ ಎದೆಯ ಮೂಲೆಯಲ್ಲೆಲ್ಲೋ ಅವ್ಯಕ್ತ ವೇದನೆ ಆವರಿಸಿಕೊಳ್ಳಲಾರಂಭಿಸಿತು. "ಕೊರ್ರೋ" ಎಂದೊದರುವ ಮಳೆ ಜಿರಲೆಯ ಧ್ವನಿ, ವೇದನೆಯ ಅಸ್ತಿತ್ವಕ್ಕೆ ವಿಚಿತ್ರವಾದ ಹಿನ್ನೆಲೆಯನ್ನು ಒದಗಿಸಲೇ ಇನ್ನೂ ಜೋರಾಗುತ್ತಿದೆಯೆನ್ನುವ ಸಂಶಯ ಮನದಲ್ಲಿ ಪಿಶಾಚಿಯಂತೆ ಕಾಡಲಾರಂಬಿಸಿತು. "ಇಲ್ಲ, ಇವೆಲ್ಲಗಳಿಂದ ನಾನು ಹೊರಬರಲೇ ಬೇಕು, ಏಷ್ಟು ದಿನ ಹೀಗೇ?" ಮನಸ್ಸು ಸಾವಿರದೊಂದನೇ ಬಾರಿ ಬುದ್ಧಿ ಹೇಳಿತು. ಮನಸ್ಸು ಹೇಳಿದ್ದನೆಲ್ಲ ಹೃದಯ ಕೇಳುವಂತಿದ್ದರೆ ಜಗತ್ತಿನಲ್ಲಿ ಯಾರಿಗೂ ಯಾತನೆಗಳೇ ಇರುತ್ತಿರಲಿಲ್ಲವೇನೋ.
ಇದೇ ಮಳೆಯ ತರವೇ ಅಲ್ಲವೇ ಅವಳಲ್ಲಿ ರಚ್ಚೆ ಹಿಡಿದಿದ್ದು? ಅಷ್ಟು ದೈನೇಸಿಯಾಗಿ ಬೇಡಿಕೊಂಡರೂ ಅವಳ ಮನಸ್ಸಿನಲ್ಲಿ ಒಂದು ಚೂರೂ ಜಾಗ ಕೊಡಲಿಲ್ಲವೇಕೆ ಎಂದು ಈಗ ಯೋಚಿಸಿದರೆ ನನ್ನ ಆಗಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅನುಕಂಪವೂ, ಬೇಸರವೂ ಆಗುತ್ತದೆ. ಎಷ್ಟು ಕಠಿಣವಾಗಿ, ಕಡ್ಡಿ ಮುರಿದಂತೆ ಹೇಳಿಬಿಟ್ಟಳಲ್ಲ, "ವಿಕ್ಕಿ, ನಿನ್ನಲ್ಲಿ ಅಂಥದೇನಿದೆ ಅಂತ ನಾನು ನಿನ್ನನ್ನು ಇಷ್ಟಪಡಲಿ? ದಯವಿಟ್ಟು ನನಗೆ ತೊಂದರೆ ಕೊಡಬೇಡ". ಒಂದೇ ವಾಕ್ಯದಲ್ಲಿ ಮನಸು ಮುರಿದಿದ್ದಳು. ಆ ಕ್ಷಣದಲ್ಲೇ ಭೂಮಿ ಬಾಯ್ಕಳೆದು ನನ್ನನ್ನು ನುಂಗಬಾರದೇ ಎನ್ನಿಸಿತ್ತು. ನೆನೆಸಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ. ಬಾಯಲ್ಲಿ ಮಾತೊಂದೂ ಹೊರಟಿರಲಿಲ್ಲ. ಆ ಕ್ಷಣದಷ್ಟು ದುರ್ಬಲತೆಯನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ಅವಳು ನನ್ನ ಪ್ರೀತಿಯನ್ನು ಧಿಕ್ಕರಿಸಿದ ರೀತಿಗೋ, ಅಥವಾ ನನಗೆ ಅಪಾರ ಹೆಮ್ಮೆಯಿದ್ದ ನನ್ನ ವ್ಯಕ್ತಿತ್ವದ ಅಸ್ತಿತ್ವವನ್ನೇ ಅವಳು ಬೆದಕಿದ್ದಕ್ಕೋ ಗೊತ್ತಿಲ್ಲ, ಮನಸ್ಸಿಗೆ ವಿಪರೀತ ಘಾಸಿಯಾಗಿತ್ತು. ಅಂದಿನಿಂದ ಈ ಭಯಾನಕ ಯಾತನಾ ಜಗತ್ತಿಗೆ ಬಿದ್ದಿದ್ದೆ.
ಎಷ್ಟು ಬೇಡ ಬೇಡವೆಂದರೂ ಮನಸ್ಸು ಮತ್ತೆ ಮತ್ತೆ ಅಲ್ಲೇ ಎಳೆಯುತ್ತಿತ್ತು. "ನಿನ್ನಲ್ಲಿ ಅಂಥದ್ದೇನಿದೆ?", ಎಷ್ಟು ಸಲೀಸಾಗಿ ಕೇಳಿಬಿಟ್ಟಳಲ್ಲ! ಆ ಪ್ರಶ್ನೆ ನನ್ನಲ್ಲಿ ಉಂಟು ಮಾಡಿದ ತಳಮಳಗಳ ಪರಿಣಾಮ ಅವಳಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಅಷ್ಟೆಲ್ಲ ದಿನ ನನ್ನ ಜೊತೆ ಸುತ್ತಾಡಿದ್ದು? ಕಣ್ಣಲ್ಲೇ ಪ್ರೀತಿ ತೋರಿದ್ದು? ಮಾತು ಸುಳ್ಳಾಡಬಹುದು, ಕಣ್ಣು? ನಟನೆಯಿದ್ದೀತಾ? ಅಷ್ಟು ದಿನ ಪ್ರೀತಿಯ ಸೆಲೆಯೇ ಉಕ್ಕಿ ಹರಿಯುತ್ತಲಿದೆ ಎಂದೆನಿಸುತ್ತಿದ್ದ ತುಂಬುಗಣ್ಣುಗಳಲ್ಲಿ ತಣ್ಣನೆಯ ಕ್ರೌರ್ಯವಿದ್ದೀತಾ? ಛೇ! ಇದ್ದಿರಲಿಕ್ಕಿಲ್ಲ. ಎಂತೆಲ್ಲ ಯೋಚನೆಗಳು? ಅವಳ ಬಗ್ಗೆ ಕೆಟ್ಟದಾಗಿ ಯೋಚಿಸಲೂ ಮನಸ್ಸು ಆಸ್ಪದ ಕೊಡುತ್ತಿಲ್ಲ. ಅವಳ ಬಗ್ಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮೋಹ ಉಳಿದುಕೊಂಡಿರಬೇಕು. ಅಷ್ಟೊಂದು ಉತ್ಕಟವಾಗಿಯಲ್ಲವೇ ನಾನು ಅವಳ ಮೋಹಕ್ಕೆ ಒಳಗಾಗಿದ್ದು? ನನಗೆ ಗೊತ್ತಿಲ್ಲದ ಹಾಗೆ ಕಣ್ಣು ಮಂಜು ಮಂಜು. ಕೆನ್ನೆಯ ಮೇಲೆ ತಾನಾಗಿಯೇ ಹರಿದು ಬಂದ ಕಣ್ಣೀರನ್ನು ಒರೆಸಿಕೊಂಡೆ.
ಹೊರಗೆ ಮಳೆ ಕಮ್ಮಿಯಾಗುವ ಲಕ್ಷಣವೇ ಕಾಣಲಿಲ್ಲ. ಆರಿದ್ರೆ ಮಳೆ, ಹೋಗುವಾಗ ಜಾಸ್ತಿ ಹೊಯ್ಯುತ್ತದಂತೆ. ನಾಳೆಯಿಂದ ಪುನರ್ವಸು. ಇವತ್ತೇ ಆಕಾಶವೆಲ್ಲ ಖಾಲಿಯಾಗುವಂತೆ ಹೊಯ್ಯುತ್ತಲೇ ಇರುತ್ತೇನೆ ಎಂಬ ಹುನ್ನಾರವನ್ನು ನಡೆಸಿದೆಯೋ ಎಂಬಂತೆ ಮಳೆ ಪಿರಿಪಿರಿ ನಡೆಸಿತ್ತು. "ಆರಿದ್ರೆ ಮಳೆ ಆರದಂತೆ ಹೊಯ್ಯುತ್ತದೆ", ಅಮ್ಮ ಹೇಳಿದ್ದು ನೆನಪಾಯ್ತು. ಈ ಹಾಳಾದ ನೆನಪುಗಳೂ ಮಳೆಯಂತೇ. ಆರದಂತೆ ಮನಸ್ಸಿನ ಅಂಗಳದಲ್ಲಿ ಬಿಟ್ಟೂ ಬಿಟ್ಟೂ ಹೊಯ್ಯುತ್ತಲೇ ಇರುತ್ತವೆ. ಮನಸ್ಸಿನ ತುಂಬ ರಾಡಿಯೆಬ್ಬಿಸಿ.
ಅವತ್ತು ಯಾಕೆ ಹಾಗೆ ಏನನ್ನೂ ಮಾತಾಡದೇ ಬಂದೆನೆಂಬುದು ಇಂದಿಗೂ ಸೋಜಿಗ. ಈಗ ಯೋಚಿಸಿದರೆ, ಅವತ್ತು ಅವಳ ಮಾತಿನ ಸ್ಥಿತಪ್ರಜ್ಞೆ ನನ್ನನ್ನು ಮೂಕವಾಗಿಸಿರಬೇಕೆಂದೇ ಅನ್ನಿಸುತ್ತದೆ. ಅವಳ ಮುಖದಲ್ಲಿ ಯಾವುದೇ ತರಹದ ದುಃಖವಾಗಲೀ, ಆಶ್ಚರ್ಯವಾಗಲೀ ಅಥವಾ ಸಿಟ್ಟಾಗಲೀ ಕಂಡಿರಲಿಲ್ಲ. ಎಲ್ಲ ಮೊದಲೇ ಗೊತ್ತಿದ್ದ ಹಾಗೆ, ಹೀಗೇ ಕೇಳುತ್ತಾನೆ ಎಂದು ಮುಂಚೆಯೇ ಊಹಿಸಿದ್ದ ಹಾಗೆ, ಎಲ್ಲವೂ ಪೂರ್ವ ನಿರ್ಧಾರಿತ ಯೋಜನೆಯ ಹಾಗೆ. ಯೋಚಿಸಲು ಒಂದು ನಿಮಿಷವೂ ತೆಗೆದುಕೊಂಡಿರಲಿಲ್ಲ. ಬಿಟ್ಟ ಬಾಣದ ಹಾಗೆ ಉತ್ತರ. ನಿಜ, ಅದೇ ನನ್ನ ಅಹಂಗೆ ಅಷ್ಟೊಂದು ಪೆಟ್ಟು ಕೊಟ್ಟಿದ್ದು. "ವಿಕ್ಕೀ, ನನಗೆ ಗೊತ್ತು, ನೀನು ನನಗೆ ಅರ್ಹನಿಲ್ಲ" ಎಂಬ ನೇರ ಮಾತು. ತುಟಿಯಂಚಲ್ಲಿ ಕಿರುನಗೆಯೊಂದು ಹಾದು ಹೋಯಿತು. ಎಲ್ಲ ಸನ್ನಿವೇಶಗಳಲ್ಲೂ ಎಲ್ಲರೂ ನಮ್ಮ ಅಹಂ ಅನ್ನು ಸಂತೋಷಪಡಿಸಬೇಕೆಂದು ನಾವು ಆಶಿಸುತ್ತೇವೆಲ್ಲ? ಪ್ರೀತಿಯ ಮಾತುಗಳಲ್ಲಿ, ಪ್ರೇಮ ಸಲ್ಲಾಪಗಳಲ್ಲಿ, ಹೊಗಳುವಿಕೆಯ ಮೆಚ್ಚುಗೆಗಳಲ್ಲಿ ಎಲ್ಲದರಲ್ಲೂ. ಕೊನೆಗೆ ಪ್ರೀತಿಯ ತಿರಸ್ಕಾರದಲ್ಲೂ!
ಅವಳೇ ಅಲ್ಲವೇ ನನ್ನನ್ನು ಹುಡುಕಿಕೊಂಡು ಬಂದಿದ್ದು? ಕಾಲೇಜಿನ ಗ್ಯಾದರಿಂಗ್ ನ ಮರುದಿನ?. "ಎಷ್ಟೊಂದು ಚೆನ್ನಾಗಿ ಹಾಡುತ್ತೀರಿ ನೀವು?" ಅವತ್ತು ಅವಳ ಮಾತುಗಳು ಉಂಟು ಮಾಡಿದ ಪುಳಕ ಇವತ್ತಿಗೂ ಮರೆಯುವ ಹಾಗೇ ಇಲ್ಲ. ಅದೇ ಮುಗ್ಧ ನಗು, ಅದೇ ಪ್ರೀತಿಯ ಕಣ್ಣುಗಳು. ಮೊದಲ ಸಾರಿ ಯಾರಾದರೂ ನನ್ನನು ಹೊಗಳಿದ್ದು. ವಾಸ್ತವವೇ, ಕನಸೇ ಎಂದು ಅರಿವಾಗಲು ಸ್ವಲ್ಪ ಹೊತ್ತು ಹಿಡಿದಿತ್ತು. ಸಣ್ಣದೊಂದು ಸಂಕೋಚದ ನಗೆ ನಕ್ಕು ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕಿದ್ದೆ. "ಥ್ಯಾಂಕ್ಸೇ ಹೇಳಲಿಲ್ಲ ನೀವು?", ಅವಳು ಬಿಡುವ ತರಹ ಕಾಣಲಿಲ್ಲ. "ಬೇಡ ಬಿಡಿ, ಥ್ಯಾಂಕ್ಸ್ ಬದಲು ನನ್ಜೊತೆ ಒಂದು ಕಾಫಿ ಕುಡಿಬಹುದಲ್ವಾ?". ನನಗೋ ದಿಗಿಲು. ಇಷ್ಟೊಂದು ನೇರ ಮಾತು! ಹೃದಯ ಬಾಯಿಗೆ ಬಂದಂತೆ. ಯಾವತ್ತೂ ಹಾಗೆಲ್ಲ ಹುಡುಗಿಯರ ಜೊತೆ ಒಂಟಿಯಾಗಿ ಮಾತಾಡೇ ಅಭ್ಯಾಸವಿಲ್ಲ. ನನ್ನ ಭಯ ಅವಳಿಗೆ ಗೊತ್ತಾಗಿರಬೇಕು, "ಪರವಾಗಿಲ್ಲ, ನನ್ಜೊತೆ ಒಂದು ಕಾಫಿ ಕುಡಿದರೆ ಜಗತ್ತೇನೂ ಮುಳುಗಲ್ಲ,ಬನ್ನಿ", ಈ ಸಲ ಇನ್ನೂ ಅಧಿಕಾರಯುತ ಧ್ವನಿ. ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಅವಳನ್ನು ಹಿಂಬಾಲಿಸಿದ್ದೆ. ನಾನೇನು ಮಾತಾಡಿದ್ದೇನೋ, ಅವಳೇನು ಕೇಳಿದ್ದಳೋ ಒಂದೂ ನೆನಪಿಲ್ಲ. ಅವಳ ಕಣ್ಣುಗಳಲ್ಲಿ ಕರಗಿ ಹೋಗಿದ್ದೊಂದು ನೆನಪಿದೆ.
ನನ್ನ ಖಾಯಂ ಸಂಗಾತಿಯಾಗಿದ್ದ ತಿರಸ್ಕಾರ, ಕೀಳರಿಮೆಗಳ ಸ್ನೇಹವನ್ನು ಮರೆತಿದ್ದೇ ಅವಳ ಸಂಗದಲ್ಲಿ. ಸಂಕೋಚದ ಮುದ್ದೆಯಾಗಿದ್ದ ನನ್ನನ್ನು ಆ ಚಿಪ್ಪಿನಿಂದ ಹೊರಗೆ ಬರಲು ಸಹಾಯಮಾಡಿದ್ದು ಅವಳ ಉಲ್ಲಾಸಭರಿತ ಮಾತುಗಳು, ಜೀವನೋತ್ಸಾಹ ಉಕ್ಕಿ ಹರಿಯುತ್ತಿದ್ದ ಕಣ್ಣುಗಳು. ನನ್ನ ಬದುಕಿನಲ್ಲಿ ಯಾವುದರ ಕೊರತೆಯಿತ್ತೋ ಅದನ್ನು ಸಂಪೂರ್ಣವಾಗಿ ತುಂಬಲು ಅವಳೊಬ್ಬಳಿಂದಲೇ ಸಾಧ್ಯವೆಂದು ನಾನು ಆಗ ನಂಬಿದ್ದೆ. ಅವಳ ಪ್ರೀತಿಯ ಮಾತುಗಳಿಗಾಗಿ ಎಷ್ಟು ಸಾರ್ತಿ ನಾನು ನನ್ನ ಸಂಕೋಚದ ಸಂಕೋಲೆಗಳನ್ನು ಮುರಿದು ಧಾವಿಸಿ ಓಡಿ ಬರುತ್ತಿದ್ದೇನೋ ನನಗೇ ತಿಳಿಯದು. ಅವಳು ಪ್ರಯತ್ನಪೂರ್ವಕವಾಗಿ ನನ್ನ ಕೀಳರಿಮೆಯನ್ನು ತೊಡೆಯಲು ಪ್ರೀತಿಯ ಮಾತುಗಳ ಸಹಾಯ ತೆಗೆದುಕೊಂಡಿದ್ದಳಾ ಅಥವಾ ಕೇವಲ ಅವಳ (ಪ್ರೀತಿಯ?) ಸಾನಿಧ್ಯ ನನ್ನಲ್ಲಿ ಅಷ್ಟೊಂದು ಆತ್ಮವಿಶ್ವಾಸವನ್ನು ಮೂಡಿಸಿತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ನಾನು ನನಗೇ ಅಚ್ಚರಿಯಾಗುವಷ್ಟು ಬದಲಾಗಿದ್ದಂತೂ ನಿಜ. ಅವಳೇ ಹೇಳಿದ್ದಳಲ್ಲ, "ವಿಕ್ಕಿ ನಿನ್ನ ಕಂಗಳಲ್ಲಿ ಈಗ ಅಪೂರ್ವವಾದ ಹೊಳಪೊಂದು ಕಾಣುತ್ತಿದೆ" ಅಂತ. ಆತ್ಮ ವಿಶ್ವಾಸದ ಸೆಲೆ ನನ್ನಲ್ಲೂ ಚಿಗುರತೊಡಗಿತ್ತು, ಅವಳೇ ಅದನ್ನ ಚಿವುಟಿ ಕೊಲ್ಲುವದರ ತನಕ!
ಮಯೂರ ಯಾವತ್ತೋ ಹೇಳಿದ್ದು ಈಗ ನೆನಪಾಗುತ್ತಿದೆ. ಯಾಕೋ ಗೊತ್ತಿಲ್ಲ. "ವಿಕ್ಕಿ, ನೀನು ಹೀಗೆ ಡ್ರೆಸ್ ಮಾಡಿಕೊಂಡು, ಅದೇ ಹರಕಲು ಚೀಲವನ್ನು ಏರಿಸಿಕೊಂಡು ಎಲ್ಲ ಕಡೆ ತಿರುಗುತ್ತಿದ್ದರೆ, ಯಾವ ಹುಡುಗಿಯೂ ನಿನ್ನನ್ನು ಪ್ರೀತಿ ಮಾಡುವುದಿಲ್ಲ ನೋಡು" ಎಂದು. ನನ್ನನ್ನು ರೇಗಿಸಲು ಹೇಳಿದ್ದೋ ಅಥವಾ ಅವನಿಗೆ ಹೊಸದೊಂದು ಗರ್ಲ್ ಫ್ರೆಂಡ್ ದೊರಕಿದ ಅಹಂನಲ್ಲಿ ಹೇಳಿದ್ದೋ ಗೊತ್ತಿಲ್ಲ. ಆದರೆ ಸಿಟ್ಟು ನೆತ್ತಿಗೇರಿತ್ತು. "ಯಾರಾದ್ರೂ ನನ್ನನ್ನು ಪ್ರೀತಿ ಮಾಡಲೇಬೇಕು ಅಂತ ನಾನು ಬದುಕ್ತಾ ಇಲ್ಲ" ಸಟ್ಟಂತ ಹೇಳಿದ್ದೆ. ಅವನು ಮಾತು ತಿರುಗಿಸಿದ್ದ. "ಹಾಗಲ್ವೋ, ನೋಡು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಓಡಾಡ್ತಾ ಇದ್ರೆ ನಾಲ್ಕು ಜನ ಗುರುತಿಸ್ತಾರೆ, ಏನೋ ಒಂದು ಚಾರ್ಮ್ ಇರತ್ತೆ. ನಿನ್ನಲ್ಲಿ ಏನು ಬೇಕಾದರೂ ಮಾಡಬಲ್ಲ ಆತ್ಮ ವಿಶ್ವಾಸವಿದೆ ಅಂತ ಅನ್ನಿಸತ್ತೆ, ಯೋಚನೆ ಮಾಡು". ಒಳ್ಳೆಯ ಡ್ರೆಸ್ ಹಾಕಿಕೊಂಡರೆ ಆತ್ಮ ವಿಶ್ವಾಸ ಬೆಳೆಯುತ್ತದೆಯೋ, ಅಥವಾ ನಮ್ಮಲ್ಲಿ ಆತ್ಮ ವಿಶ್ವಾಸ ಪುಟಿಯುತ್ತಿದ್ದರೆ ಒಳ್ಳೆ ಡ್ರೆಸ್ ಮಾಡಿಕೊಳ್ಳಬೇಕೆಂಬ ಹಂಬಲ ತಾನೇ ತಾನಾಗೇ ಮೊಳೆಯುತ್ತದೆಯೋ ಅರ್ಥವಾಗಿರಲಿಲ್ಲ. ಅವೆರಡು ಒಂದಕ್ಕೊಂದು ಪೂರಕವೋ, ಅಥವಾ ಒಂದರ ಮೇಲೊಂದು ಅವಲಂಬಿತವೋ ಅವತ್ತಿಗೂ, ಇವತ್ತಿಗೂ ಗೊತ್ತಾಗಿಲ್ಲ.
ಇಲ್ಲಿಯೂ ಅದೇ ಜಿಜ್ಞಾಸೆ. ಅವಳ ಪ್ರೀತಿ ಅಪೇಕ್ಷಿಸಲು ನಾನು ಪ್ರಯತ್ನಪಟ್ಟಿದ್ದು ನನ್ನಲ್ಲಿ ಹೊಸದಾಗಿ ಮೂಡಿದ ಆತ್ಮವಿಶ್ವಾಸದ ನೆಲೆಯಿಂದಲೋ, ಅಥವಾ ಅವಳ ಸಾನಿಧ್ಯ ತರಬಹುದಾದಂತಹ ಪ್ರೀತಿಯ ಬೆಳಕಿನಲ್ಲಿ, ನನಗೇ ಹೊಸದಾಗಿದ್ದ ನನ್ನ ವ್ಯಕ್ತಿತ್ವದ ಆಯಾಮವೊಂದನ್ನು ಹುಡುಕುವ ಸ್ವಾರ್ಥದಿಂದಲೋ? ಪ್ರೀತಿಯ ಕರುಣಾಸ್ಥಾಯಿಯಿಂದ ಆತ್ಮವಿಶ್ವಾಸ ಒಡಮೂಡಿದ್ದೋ ಅಥವಾ ಕೇವಲ ಅವಳ ಸಂಗದಿಂದ ಹುಟ್ಟಿರಬಹುದಾದ ಆತ್ಮವಿಶ್ವಾಸದ ಸೆಲೆ ನನ್ನದೇ ವ್ಯಕ್ತಿತ್ವದಲ್ಲಿ ಸುಪ್ತವಾಗಿದ್ದ ಪ್ರೀತಿಯ ಅಲೆಗಳನ್ನು ಉದ್ದೀಪನಗೊಳಿಸಿದ್ದೊ? ಎಷ್ಟೊಂದು ಗೋಜಲು ಗೋಜಲು! ಆದರೆ ಒಂದಂತೂ ನಿಜ. ಅವಳ ತಿರಸ್ಕಾರದಿಂದ ನಾನು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೆ. ನನ್ನ ಆತ್ಮವಿಶ್ವಾಸ ಮತ್ತೆ ಪಾತಾಳಕ್ಕಿಳಿದು ಹೋಗಿತ್ತು. ಯಾವ ಪ್ರೀತಿಯ ಭಾವ ನನ್ನ ಅಂತರಂಗದಲ್ಲಿ ಹೊಸ ಹುಮ್ಮಸ್ಸು, ಹೊಸ ವಿಶ್ವಾಸವನ್ನು ಹುಟ್ಟಿಸಿತ್ತೋ ಅದೇ ಮತ್ತೆ ಎಲ್ಲವನ್ನೂ ಮರೆಸಿ ಹಳೆಯ ಸ್ಥಿತಿಗೆ ನನ್ನನ್ನು ನೂಕಿದ ವಿಪರ್ಯಾಸಕ್ಕೆ ನಾನೇ ಸಾಕ್ಷಿಯಾಗಿದ್ದೆ. ಪ್ರೀತಿಯ ಮೋಹಕ ಜಗತ್ತಿನ ಆಸರೆಯನ್ನು ಪಡೆಯಹೋದವನು ಮನಸ್ಸುಗಳ ನಡುವಿನ, ಮನುಷ್ಯರ ನಡುವಿನ ನಂಬುಗೆಯ ಮೇಲೇ ವಿಶ್ವಾಸವಿಲ್ಲದ ಲೋಕದ ಕಾಳಚಕ್ರದಲ್ಲಿ ಕಳೆದುಹೋಗಿದ್ದೆ.
ದೊಡ್ಡದೊಂದು ನಿಟ್ಟುಸಿರು ನನಗೆ ಅರಿವಿಲ್ಲದೆಯೇ ಹೊರಬಿತ್ತು. ಇಷ್ಟ್ಯಾಕೆ ವೇದನೆ ನೀಡುತ್ತಿವೆ ಹಳೆಯ ನೆನಪುಗಳು? ಪ್ರೀತಿಯ ಮೋಹಕ್ಕಿಂತ ಅದರ ತಿರಸ್ಕಾರದ ನೆನಪುಗಳ ವ್ಯಾಮೋಹವೇ ಹೆಚ್ಚು ಸಂವೇದಾನಾಶೀಲವೇ ಎಂಬ ಸಂಶಯ ಮನಸ್ಸಿನಲ್ಲೊಮ್ಮೆ ಮೂಡಿ ಮರೆಯಾಯಿತು. ಏನೇ ಆಗಲಿ, ಈ ವೇದನೆಗಳ ವ್ಯಾಪ್ತಿಯಿಂದ ಹೊರಬರಬೇಕಾದ ಅನಿವಾರ್ಯತೆ ನನಗೀಗ ನಿಧಾನವಾಗಿ ಅರಿವಾಗತೊಡಗಿತು. ಆವಾಗಿನ ತಳಮಳಗಳನ್ನೆಲ್ಲ ಈಗ ಸಮಚಿತ್ತದಲ್ಲಿ ನಿಂತು ನೋಡಿದರೆ ಹಲವಾರು ಹೊಸ ವಿಷಯಗಳೇ ಗೋಚರವಾಗಬಹುದೇನೋ. ಬಗೆ ಬಗೆ ಅನುಭವಗಳಿಂದ ನಾವು ಕಲಿಯಬೇಕಾಗಿದ್ದು ಇಷ್ಟೇನೇ ಅಥವಾ ಅವು ಉಂಟು ಮಾಡಿದ ಪರಿಣಾಮಗಳ ವಿಸ್ತಾರ ಇಷ್ಟೇ ಎಂದು ಹೇಗೆ ಹೇಳುವುದು? ಎಲ್ಲ ಅನುಭವಗಳನ್ನೂ ನಮ್ಮ ಮನಸ್ಸು ತನ್ನ ಬೌದ್ಧಿಕ ಮತ್ತು ವೈಚಾರಿಕತೆಯ ಪರಿಮಿತಿಯ ಮೂಸೆಯಲ್ಲಿ ಹಾಕಿ ವಿಶ್ಲೇಷಿಸಿ, ಅದರಿಂದ ಹಲವು ತನಗೆ ಸರಿತೋರಿದ ಅಥವಾ ಪ್ರಿಯವಾದ ಭಾವಗಳನ್ನು ನಿಶ್ಚಯಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾನು ಅನುಭವಿಸುತ್ತಿರುವ ವೇದನೆ, ನಾನೇ ಬಯಸಿ ಹಿಂದೆ ಹೋದ ಪ್ರೀತಿ ಮರೀಚಿಕೆಯಿಂದಲೇ ಹುಟ್ಟಿದ್ದರಿಂದ ಮನಸ್ಸಿಗೆ ಸ್ವಯಂವೇದ್ಯವಾಗಲು ಕಷ್ಟವಾಗಲಿಕ್ಕಿಲ್ಲ. ನಿಜ, ಆ ಭಾವನೆ ಸುಳಿದಂತೆ ಹೃದಯ ನಿರಾಳವಾಯಿತು. ಪ್ರೀತಿಯ ಭಾವ ನಿರಾಕರಣೆಯ ದುಃಖವನ್ನೂ, ತಿರಸ್ಕಾರದ ನೋವನ್ನೂ, ವೇದನೆಯ ವಾಸ್ತವದ ಜೊತೆಗೆ ಆತ್ಮವಿಶ್ವಾಸವನ್ನೂ ಕಲಿಸಬಲ್ಲದೆಂಬ ಭರವಸೆಯ ಭಾವ ಮನದಲ್ಲಿ ಉದಯಿಸಿ ಉಲ್ಲಾಸ ಮೂಡಿಸಿತು.
ನಿಧಾನವಾಗಿ ಹೊರಗೆ ಕಣ್ಣು ಹಾಯಿಸಿದೆ. ಮಳೆಯ ಆರ್ಭಟ ಬಹಳಷ್ಟು ಕಮ್ಮಿಯಾಗಿತ್ತು. ಎಲ್ಲೋ ಒಂದೆರಡು ಮಳೆಹನಿಗಳು ಸುರಿದುಹೋದ ಮಳೆಯ ನೆನಪನ್ನು ಇನ್ನೂ ಜೀವಂತವಿಡುವ ಪ್ರಯತ್ನ ನಡೆಸಿದ್ದವು. ಶುಭ್ರವಾದ ಆಕಾಶವನ್ನು ಮುತ್ತಿ ಕಪ್ಪಿಡಲು ಹವಣಿಸುತ್ತಿದ್ದ ಮಳೆಮೋಡವನ್ನು ಭೇದಿಸಿಯಾದರೂ, ಭೂಮಿಯನ್ನು ತಲುಪಿ ತಮ್ಮ ಅಸ್ತಿತ್ವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದ ಸೂರ್ಯಕಿರಣಗಳ ಉತ್ಸಾಹ, ನನ್ನಲ್ಲಿ ಸ್ಪೂರ್ತಿಯನ್ನು ಹುಟ್ಟಿಸಲಾರಂಭಿಸಿತು. ಮೋಡಗಳ ಪ್ರತಿರೋಧವನ್ನು ಲೆಕ್ಕಿಸದೇ ಭೂಮಿಯನ್ನು ತಲುಪಿ ಕತ್ತಲೆಯ ಕೀಳರಿಮೆಯನ್ನು ಸಂಪೂರ್ಣವಾಗಿ ತೊಡೆದುಹಾಕುತ್ತೇವೆ ಎಂಬ ಆತ್ಮ ವಿಶ್ವಾಸದಿಂದ ಪ್ರಕಾಶಿಸುತ್ತಿರುವ ಹೊನ್ನಕಿರಣಗಳು, ಮರಳಿ ಉದಯಿಸುತ್ತಿದ್ದ ನನ್ನ ಮನದ ಹಂಬಲದ ಸಂಕೇತವೋ ಎನ್ನುವಂತೆ ಭಾಸವಾದವು.

7 comments:
ಮಧು,
ಬಹಳ ದಿನಗಳ ಮೇಲೆ ಮರಳುತ್ತಿದ್ದೀರಿ.(ಯಾಕೆ ಅನ್ನೋದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ!)ಒಳ್ಳೆಯ ಬರಹವನ್ನು ನೀಡಿದ್ದೀರಿ. ಅಭಿನಂದನೆಗಳು.
ತುಂಬಾ ದಿನಗಳಾಗಿದ್ದವು ನಿಮ್ಮ ಬ್ಲಾಗಿನ ಕಡೆ ಇಣುಕಿ. ಒಂದು ಸೊಗಸಾದ ಬರಹ. ಚೆನ್ನಾಗಿದೆ.
ಮಧು,
ಬಹುದಿನಗಳ ನಂತರವಾದರೂ ಸರಿ... ಒಂದೊಳ್ಳೆ ಕಿರುಕಥೆಯನ್ನು ಕೊಟ್ಟಿರುವೆ.... ತುಂಬಾ ಗಾಢವಾಗಿವೆ ಇದೊರಳಗಿನ ಭಾವಗಳು. ಮಳೆಯು ಸವಿನೆನಪುಗಳ ಜೊತೆ ಮಧುರ ಯಾತನೆಯನ್ನೂ ಕೊಡುತ್ತವೆ. ನೆನಪೆಂದರೆ ನೋವು-ನಲಿವು ಎರಡೂ ಅಲ್ಲವೇ? ಬಲು ಇಷ್ಟವಾಯಿತು.
ಮಧು,
ರಾಶಿ ದಿನದ ಮೇಲೆ ಆದರೂ ಚಂದದ ಕಥೆ . ಭಾವನೆಗಳು , ನೆನಪಿನ ಅಲೆಗಳ ತಾಕಲಾಟ ಚೆಂದ ಇದ್ದು. ಜೋರಾಗಿ ಮಳೆ ಸುರಿದು ಮುಗಿದ ಮೇಲೆ ಹೊಳೆಯುವ ನಿರಭ್ರ ಆಕಾಶದ ತರಾನೆ , ನಮ್ಮ ಮನಸ್ಸೂ ಕೂಡ . ನೂರೆಂಟು ಭಾವನೆಗಳು ಉಕ್ಕುಕ್ಕಿ ಹರಿದು ನಗಿಸಿ, ಅಳಿಸಿ ಮತ್ತೆ ಕೊನೆಯಲ್ಲಿ ಮನಸನ್ನು ನಿರಾಳವಾಗಿಸಿ ಬಿಡುತ್ತವೆ.
ಚಂದ ಇದ್ದು . ಬರೀತಿರು .
ಚನ್ನಾಗಿದೆ ಕತೆ.
ಹೀಗೆ ಬರೀತಾ ಇರಿ, ಸಮಯ ಇದ್ದಾಗ ನಮ್ಮ ಕಡೆಗೂ ಬನ್ನಿ.
ಕಾಕಾ,
ತಮ್ಮ ಎಂದಿನ ಪ್ರೋತ್ಸಾಹಕ್ಕೆ, ಮೆಚ್ಚುಗೆಗೆ ಧನ್ಯವಾದಗಳು
ಶಿವು
ಧನ್ಯವಾದಗಳು. ಮತ್ತೆ ಬರುತ್ತಿರಿ.
ತೇಜಕ್ಕಾ,
ನಿಜ, ಮಳೆಯ ಧಾರೆಗಳಿಗಿಹ ಅನನ್ಯ ಶಕ್ತಿ ವಿಶೇಷವಾದುದು. ಮೆಚ್ಚಿಕೊಂಡು ಪ್ರೋತ್ಸಾಹಿಸಿದಕ್ಕೆ ಥ್ಯಾಂಕ್ಸ್ :-)
ಚಿತ್ರಕ್ಕಾ,
ನಿಮ್ಮ ಮೆಚ್ಚುಗೆಗೆ, ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು
ಪ್ರವೀಣ್,
ತುಂಬಾ ಧನ್ಯವಾದಗಳು. ನಿಮ್ಮಲ್ಲಿಗೂ ಬರುತ್ತಿರುತ್ತೇನೆ.
ತುಂಬಾ ಚೆಂದದ ಮುದ್ದಿನ ಬರಹ
Post a Comment