Friday, February 22, 2008

ನಾದಮಯ..ಈ ಲೋಕವೆಲ್ಲ

ಸುರೇಶ ತನ್ನ ಹಳೆಯ ಟಿ.ವಿ.ಎಸ್ ಎಕ್ಸೆಲ್ ಅನ್ನು ಗಾಂಧಿ ಬಜಾರಿನ ಸಂದಿಗೊಂದಿಯಲ್ಲಿ ತಿರುಗಿಸಿ, ಎಚ್.ಬಿ.ಸೇವಾಸಮಾಜ ರೋಡಿನ ತುದಿಯಲ್ಲಿದ್ದ ನೀಲಿ ಮನೆಯ ಬಾಗಿಲ ಮುಂದೆ ನಿಂತಾಗ ಗಡಿಯಾರ ೭.೧೫ ತೋರುತ್ತಿತ್ತು. ಗಡಿಬಿಡಿಯಿಂದ ಹೆಲ್ಮೆಟ್ ತೆಗೆದು, ಹ್ಯಾಂಡ್ ಲಾಕ್ ಮಾಡಿ, ಪುಸ್ತಕ ತೆಗೆದುಕೊಂಡು ನಿಧಾನವಾಗಿ ಮಾಳಿಗೆ ಮೆಟ್ಟಿಲು ಹತ್ತುತ್ತಿದ್ದಂತೆಯೇ ಭಾಗ್ವತರ ಸಣ್ಣ ರೂಮಿನಿಂದ ಹಾರ್ಮೋನಿಯಮ್ ಸದ್ದೂ, ತಾಳಮಾಲಿಕೆಯ ಸದ್ದೂ, ಅಲೆ ಅಲೆಯಾಗಿ ತೇಲಿ ಬಂದು ಅವನ ಕಿವಿಗೆ ಅಪ್ಪಳಿಸತೊಡಗಿತು.
ಶೂ ಬಿಚ್ಚಿ, ನಿಧಾನಕ್ಕೆ ಬಾಗಿಲು ತೆರೆದು ರೂಮಿನೊಳಕ್ಕೆ ಅಡಿಯಿಟ್ಟವನಿಗೆ ಸಂಗೀತ ಲೋಕ ನಿಧಾನವಾಗಿ ಅನಾವರಣಗೊಳ್ಳತೊಡಗಿತು. ೬.೩೦ ರ ಕ್ಲಾಸಿನ ಪುಷ್ಪಮಾಲಾ ಅಕ್ಕ ಆಗಲೇ ಒಂದು ರೌಂಡ್ ತಾಲೀಮು ನಡೆಸಿ, ಎರಡನೆಯದಕ್ಕೆ ರೆಡಿಯಾಗುತ್ತಿದ್ದರು. ಭಾಗ್ವತರು ಹಾರ್ಮೋನಿಯಮ್ ಹಿಡಿದು, ತಾಳಮಾಲಿಕೆಯ ವೇಗವನ್ನು ಅಡ್ಜಸ್ಟ್ ಮಾಡುತ್ತಿದ್ದರು. ಸುರೇಶ, ಕಣ್ಣಿನಲ್ಲೇ ಒಂದು ನಮಸ್ಕಾರ ಮಾಡಿ, ನೆಲದ ಮೇಲೆ ಹಾಸಿದ್ದ ಜಮಖಾನೆಯ ಮೇಲೆಯೇ ಪುಷ್ಪಮಾಲಳ ಪಕ್ಕ ಕುಳಿತುಕೊಂಡ. ಹಾರ್ಮೋನಿಯಮ್ಮಿನ ಹಮ್ಮಿಂಗ್ ಶಬ್ದ ಒಂದು ವಿಲಕ್ಷಣವಾದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಭಾಗ್ವತರು ನಿಧಾನಕ್ಕೆ "ಕಲ್ಯಾಣ ಕೃಷ್ಣಾ, ಕಮನೀಯ ಕೃಷ್ಣಾ, ಕಾಳಿಂಗ ಮರ್ಧನ ಶ್ರೀಕೃಷ್ಣಾ" ಎಂದು ಜಿಂಝೋಟಿ ರಾಗದಲ್ಲಿ ಭಜನೆ ಹೇಳಿಕೊಡಲು ಶುರುಮಾಡಿದರು. ಅದನ್ನು ಪುನರಾವರ್ತಿಸುತ್ತಿದ್ದಿದ್ದು ಪುಷ್ಪಲತಾ ಆಗಿದ್ದರೂ, ಸುರೇಶನ ಮನಸ್ಸು ಅಪ್ರಯತ್ನಪೂರ್ವಕವಾಗಿ ಅವಳಿಗೆ ಸಾಥ್ ನೀಡುತ್ತಿತ್ತು. ಭಜನೆ ಮುಗಿದು ಪುಷ್ಪಮಾಲಾ ಅಕ್ಕ ಎದ್ದು ಹೋದರೂ, ಸುರೇಶನಿಗೆ ಇನ್ನೂ ಜಿಂಝೋಟಿ ರಾಗದ ಗುಂಗಿನಿಂದ ಹೊರಗೆ ಬರಲಾಗಿರಲಿಲ್ಲ. ಹಿಂದೊಮ್ಮೆ ಆ ರಾಗವನ್ನು ಕಲಿಸಿಕೊಡಿ ಎಂದು ಅವನು ಭಾಗ್ವತರನ್ನು ಕೇಳಿಕೊಂಡಿದ್ದ. ಆದರೆ ಜಿಂಝೋಟಿ ರಾಗ ಸ್ವಲ್ಪ ಕ್ಲಿಷ್ಟವಾಗಿದ್ದುದರಿಂದ ಭಾಗ್ವತರು ಅದನ್ನು ನಿರಾಕರಿಸಿದ್ದರು. ಅಂಥ ಕ್ಲಿಷ್ಟ ರಾಗಗಳನ್ನು ಕಲಿಯಲು ಸುರೇಶ ಇನ್ನೂ ಹೆಚ್ಚಿನ ಸಮಯ ಕಾಯಬೇಕಾಗಿತ್ತು.

ಸುರೇಶನಿಗೆ ಶಾಸ್ತ್ರೀಯ ಸಂಗೀತದ ಹುಚ್ಚು ಯಾವಾಗ ಹಿಡಿಯಿತೆಂದು ತಿಳಿದುಕೊಳ್ಳಲು ನೀವು ಈಗೊಂದು ಆರು ವರ್ಷದ ಹಿಂದೆ ಹೋಗಬೇಕು. ಸುರೇಶನಿಗೆ ಸಂಗೀತದ ಹಿನ್ನೆಲೆಯೇನೂ ಇರಲಿಲ್ಲ. ಅರ್ಧಮರ್ಧ ಬರುತ್ತಿದ್ದ ಹಿಂದಿ ಹಾಡುಗಳನ್ನು ಕೆಟ್ಟ ಸ್ವರದಲ್ಲಿ ಕಿರುಚಿ ಹಾಡುವುದಕ್ಕೇ ಅವನ ಸಂಗೀತ ಜ್ನಾನ ಸೀಮಿತವಾಗಿತ್ತು. ಆದರೆ ಕಾಲೇಜಿನಲ್ಲಿರುವಾಗ "ಸ್ಪಿಕ್ ಮೆಕೆ" ಯವರು ಎರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಭಾ ಅತ್ರೆಯವರ ಗಾಯನ ಸುರೇಶನ ಮೇಲೆ ಎಷ್ಟು ಅಚ್ಚಳಿಯದಂತ ಪ್ರಭಾವವನ್ನು ಉಂಟುಮಾಡಿತ್ತೆಂದರೆ, ಆವತ್ತಿನಿಂದ ಸುರೇಶನಿಗೆ ಶಾಸ್ತ್ರೀಯ ಸಂಗೀತದ ಮುಂದೆ ಉಳಿದಿದೆಲ್ಲಾ ಗೌಣ ಎಂದನ್ನಿಸಲು ಶುರುವಾಯಿತು. ಆವಾಗಲಿಂದ, ಅಪ್ಪ ಕೊಡುತ್ತಿದ್ದ ತಿಂಗಳ ಖರ್ಚಿನಲ್ಲೇ ಆದಷ್ಟು ಉಳಿಸಿ ಸಾಧ್ಯವಾದಷ್ಟು ಕ್ಯಾಸೆಟ್ ಗಳನ್ನು ಕೊಂಡು ತಂದು ಪದೇ ಪದೇ ಕೇಳಲು ಶುರುಮಾಡಿದ್ದ. ಶಾಸ್ತ್ರೀಯ ಸಂಗೀತದ ಮೇಲೆ ಇವನು ಬೆಳೆಸಿಕೊಂಡಿದ್ದ ಗೀಳು, ಅವನ ಅಪ್ಪ ಅಮ್ಮನಿಗೂ ಆಶ್ಚರ್ಯ ತಂದಿತ್ತು. ಬೆಂಗಳೂರಿಗೆ ಬಂದು ಕೆಲಸ ಮಾಡಿ, ಕೈಯಲ್ಲಿ ಒಂದೆರಡು ಕಾಸು ಆಡತೊಡಗಿದ ಮೇಲೆ, ಅವರಿವರನ್ನು ಕೇಳಿ ಭಾಗ್ವತರ ಅಡ್ರೆಸ್ ಪಡೆದುಕೊಂಡು, ಅವರ ಹತ್ತಿರ ಸಂಗೀತ ಕಲಿಯಲು ಶುರುಮಾಡಿದ್ದ. ಸಂಗೀತದ ಹಿನ್ನೆಲೆಯೇ ಇಲ್ಲದ, ಅಷ್ಟೊಂದೇನೂ ಒಳ್ಳೆ ಕಂಠವೂ ಇಲ್ಲದ ಸುರೇಶನಿಗೆ ಸಂಗೀತ ಹೇಳಿಕೊಡಲು ಭಾಗ್ವತರು ಮೊದಲು ಸ್ವಲ್ಪ ಹಿಂಜರಿದರೂ, ಸುರೇಶ ಒತ್ತಾಯ ಮಾಡಿದ ನಂತರ, ಅವನ ಉತ್ಸುಕತೆಯನ್ನು ನೋಡಿ ಪ್ರತೀ ಶನಿವಾರ ೭.೩೦ ಗಂಟೆಗೆ ಅವನ ಕ್ಲಾಸನ್ನು ನಿಗದಿ ಮಾಡಿದ್ದರು.

ಭಾಗ್ವತರು ಈಗ ಕರೆ ಎರಡರ ಶೃತಿ ಹಿಡಿದು ರೆಡಿ ಆಗಿದ್ದರು. ಸುರೇಶ ಪುಸ್ತಕ ತೆಗೆದು, ದುರ್ಗಾ ರಾಗವನ್ನು ಹಾಡಲು ಶುರು ಮಾಡಿದ. ಆರೋಹಣ, ಅವರೋಹಣ, ಸ್ವರ ಗೀತೆ ಆದಮೇಲೆ ಹಿಂದಿನ ವಾರ ಕಲಿಸಿಕೊಟ್ಟ ಆಲಾಪವನ್ನು ತಾಳಮಾಲಿಕೆಯ ಜೊತೆ ಶುರುಮಾಡಿದ. ಒಂದೆರಡು ಆವರ್ತನೆಯಾಗುವುದರಲ್ಲಿ ಸುರೇಶನ ಕಂಠ ಒಂದು ಹದಕ್ಕೆ ಬಂದಿತ್ತು. ಆದರೂ ಮಧ್ಯದಲ್ಲಿ ಎರಡು ಸಲ ತಾಳ ತಪ್ಪಿದ. ಭಾಗ್ವತರು ಮತ್ತೆ ಸರಿಯಾಗಿ ಹೇಳಿಕೊಟ್ಟರು. ಹಾಗೇ ಮುಂದುವರೆಸಿಕೊಂಡು ಹೋದವನು, "ಸಾ" ದಿಂದ "ಹಿಮ ನಗ ನಂದಿನಿ, ಭವ ಭಯ ಕೌಂದಿನಿ" ಎಂದು ಅಂತರಾವನ್ನು ಶುರು ಮಾಡುವುದರ ಬದಲು ನಿಷಾದಕ್ಕೇ ಎಳೆದು ಹಾಡಲು ಶುರುಮಾಡಿಬಿಟ್ಟ. ಭಾಗ್ವತರು ಈಗ ಹಾರ್ಮೋನಿಯಮ್ ನಿಲ್ಲಿಸಿಬಿಟ್ಟರು. ಮತ್ತೆ ಹಿಂದಿನಿಂದ ಆಲಾಪ ಶುರು ಮಾಡಬೇಕಾಯಿತು. ಎರಡು ಮೂರು ಪ್ರಯತ್ನದ ನಂತರವೂ ಭಾಗ್ವತರಿಗೆ ತೃಪ್ತಿಯಾಗುವಂತೆ ಸುರೇಶನಿಗೆ ಹಾಡಲು ಸಾಧ್ಯವಾಗಲೇ ಇಲ್ಲ. ಈಗ ನಿಷಾದಕ್ಕಿಂತ ಸ್ವಲ್ಪ ಈಚೆ ಅಂತರಾವನ್ನು ಶುರುಮಾಡುತ್ತಿದ್ದರೂ, ಸರಿಯಾಗಿ "ಸಾ" ಹಚ್ಚಲು ಅವನು ವಿಫಲನಾಗುತ್ತಿದ್ದ. ಹಾರ್ಮೋನಿಯಮ್ ಅಲ್ಲಿ "ಸಾ" ಮತ್ತು "ನಿ" ಯನ್ನು ಬಿಡಿ ಬಿಡಿಯಾಗಿ ಹಿಡಿದು ತೋರಿಸಿದಾಗ ಸರಿಯಾಗಿಯೇ ಹಾಡುತ್ತಿದ್ದವನು, ಅವುಗಳ ಜೊತೆ ಇನ್ಯಾವುದೋ ಸ್ವರ ಸೇರಿಕೊಂಡಾಗ, ಅಥವಾ ಎರಡೂ ಸ್ವರಗಳನ್ನು ಒಟ್ಟಿಗೆ ಹಾಡುವಾಗ ಮಾತ್ರಾ ಗಲಿಬಿಲಿಯಾಗಿ ತಪ್ಪು ತಪ್ಪಾಗಿ ಯಾವುದೋ ಸ್ವರ ಹಾಡಿ ಬಿಡುತ್ತಿದ್ದ. ಇನ್ನೂ ಮೂರು ನಾಲ್ಕು ವಿಫಲ ಪ್ರಯತ್ನಗಳ ಬಳಿಕ, ಭಾಗ್ವತರಿಗೆ ಇದು ಬರೀ ಗಾಳಿಯಲ್ಲಿ ಗುದ್ದಾಟ ಮಾಡಿದ ಹಾಗೇ ಅನ್ನಿಸಿರಬೇಕು. "ಇವತ್ತಿಗೆ ಕ್ಲಾಸ್ ಸಾಕು. "ನಿ" ಮತ್ತು "ಸಾ" ಗಳನ್ನು ನೀನು ಸರಿಯಾಗಿ ಗುರುತಿಸದ ಹೊರತು ಮುಂದಕ್ಕೆ ಕಲಿಯುವ ಪ್ರಮೇಯವೇ ಇಲ್ಲ. ಒಂದು ಕೆಲಸ ಮಾಡು. ಹಿಂದೆ ಹೇಳಿಕೊಟ್ಟಿದ್ದ ಅಲಂಕಾರಗಳನ್ನು ಮತ್ತೆ ಪ್ರಾಕ್ಟೀಸ್ ಮಾಡಿಕೊಂಡು ಬಾ. ಮುಂದಿನ ವಾರ ನೋಡೋಣ" ಎಂದವರೇ, ಹಾರ್ಮೋನಿಯಮ್ಮಿನ ಬಾತೆಗಳನ್ನು ಮುಚ್ಚಿ, ಬದಿಗಿಟ್ಟರು. ಸುರೇಶನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅವನಿಗೆ ಅಪಾರವಾದ ನಿರಾಸೆಯಾಗಿತ್ತು. ಸಪ್ಪೆ ಮುಖ ಹೊತ್ತು ಹಿಂದಿರುಗಿದ.

ಸೌತ್ ಎಂಡ್ ಸರ್ಕಲ್ಲಿನ ಕಡೆ ವೇಗವಾಗಿ ಹೋಗುತ್ತಿದ್ದವನ ಮನಸ್ಸೆಲ್ಲ ತುಂಬಾ ಆ ನಿರಾಶೆಯೇ ತುಂಬಿಕೊಂಡಿತ್ತು. ಹಿಂದೆಲ್ಲಾ ಅವನು ಎಲ್ಲವನ್ನೂ ಸರಿಯಾಗೇ ಹಾಡುತ್ತಿದ್ದ. ಈಗೊಂದು ತಿಂಗಳಿಂದ ಆಫೀಸಿನಲ್ಲಿ ಕೆಲಸ ಹೆಚ್ಚಾದುದರಿಂದ ಪ್ರಾಕ್ಟೀಸ್ ಮಾಡಲು ಜಾಸ್ತಿ ಸಮಯ ಸಿಕ್ಕಿರಲಿಲ್ಲ. ಈ ವಾರ ಸರಿಯಾಗಿ ಪ್ರಾಕ್ಟೀಸ್ ಮಾಡಿ ಮುಂದಿನ ವಾರದ ಕ್ಲಾಸಲ್ಲಿ ಸರಿಯಾಗಿ ಹಾಡೇ ಹಾಡುತ್ತೇನೆಂಬ ದೃಢ ನಿರ್ಧಾರ ಮಾಡಿ ಗಾಡಿಯ ಎಕ್ಸಲರೇಟರನ್ನು ಇನ್ನೂ ಜಾಸ್ತಿ ಮಾಡಿದ. ಸೌತ್ ಎಂಡ್ ಸರ್ಕಲ್, ಫೋರ್ತ್ ಬ್ಲಾಕು, ಬನ್ನೇರುಘಟ್ಟ ರಸ್ತೆ ದಾಟಿ, ಬಿ.ಟಿ.ಎಂ ನ ಮುಖ್ಯ ಸಿಗ್ನಲ್ಲಿಗೆ ಬಂದಾಗ ಸಮಯ ೮.೩೦ ದಾಟಿತ್ತು. ಸಿಗ್ನಲ್ಲಿನಲ್ಲಿ ೧೦ ನಿಮಿಷ ಕಾಯ್ದು, ರೂಮ್ ಸೇರಿದಾಗ ಸುರೇಶನಿಗೆ ಇವತ್ತು ತನ್ನದೇ ಅಡುಗೆ ಪಾಳಿ ಎಂಬುದು ನೆನಪಾಯಿತು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮೂರು ಗೆಳೆಯರ ಜೊತೆ ಸುರೇಶ ಒಂದು ಡಬಲ್ ಬೆಡ್ ರೂಮಿನ ಮನೆಯೊಂದರಲ್ಲಿ ಇರುತ್ತಿದ್ದ. ದಿನಕ್ಕೊಬ್ಬರಂತೆ ಅಡುಗೆ ಪಾಳಿ ವಹಿಸಿಕೊಂಡಿದ್ದರು. ಇವತ್ಯಾಕೋ ಸುರೇಶನಿಗೆ ಅಡುಗೆ ಮಾಡುವ ಮೂಡೇ ಇರಲಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಿಂದಲೇ ಒಂದಷ್ಟು ಬೀನ್ಸ್, ಕಾರೆಟ್ ಹೆಚ್ಚಿ ಹಾಕಿ, ಬೇಳೆಯ ಜೊತೆ ಒಂದು ಕುಕ್ಕರಿನಲ್ಲೂ, ಅಕ್ಕಿ ತೊಳೆದು ಇನ್ನೊಂದು ಕುಕ್ಕರಿನಲ್ಲೂ ಇಟ್ಟ.

ಊಟವಾದ ಮೇಲೆ ಹಾರ್ಮೋನಿಯಮ್ ಹಿಡಿದು ಒಂದಷ್ಟು ಅಭ್ಯಾಸ ಮಾಡಬೇಕೆಂದು ಅಂದುಕೊಂಡವನು, ರೂಮ್ ಮೇಟ್ ಗಳೆಲ್ಲಾ ಆಗಲೇ ಮಲಗಲು ತಯಾರಾಗುತ್ತಿರುವುದನ್ನು ಕಂಡು ಹಿಂಜರಿದ. ಗುರುಗಳಿಗೆ ಗುರುತಿದ್ದ ಯಾವುದೋ ಅಂಗಡಿಯಿಂದ ಹಳೆಯ ಒಂದು ಸೆಕೆಂಡ್ ಹಾಂಡ್ ಹಾರ್ಮೋನಿಯಮನ್ನು ಸುರೇಶ, ಕಮ್ಮಿ ಬೆಲೆಗೆ ಖರೀದಿಸಿದ್ದ. ಹಳೆಯ ಆ ಹಾರ್ಮೋನಿಯಮ್ಮಿನ ಮನೆಗಳೆಲ್ಲಾ ಸವೆದು ಸವೆದು ಇನ್ನೇನು ಜೀರ್ಣಾವಸ್ಥೆಯಲ್ಲಿದ್ದವು. ಹಳೆಯದಾಗಿದ್ದಕ್ಕೋ ಏನೋ, ಅದರಿಂದ ಹೊರಡುತ್ತಿದ್ದ ಸದ್ದು ಸ್ವಲ್ಪ ಕರ್ಕಶವಾಗಿಯೇ ಕೇಳುತ್ತಿತ್ತು. ರವಿವಾರದಂದು ಅಭ್ಯಾಸ ಮಾಡುವಾಗ ಒಂದೆರಡು ಸಲ, ಪಕ್ಕದ ಮನೆಯ ದಪ್ಪ ದೇಹದ ಮುಸ್ಲಿಮ್ ಆಂಟಿ ಇವರ ಮನೆಗೆ ಬಂದು ಕಂಪ್ಲೇಂಟ್ ಬೇರೆ ಮಾಡಿದ್ದಳು. ಆವತ್ತಿನಿಂದ ಸುರೇಶ ಸ್ವಲ್ಪ ಜಾಸ್ತಿನೇ ಜಾಗರೂಕನಾಗಿದ್ದ. ಹಾರ್ಮೋನಿಯಮ್ ಶುರು ಮಾಡಿ ಒಂದಷ್ಟು ಅಭ್ಯಾಸಮಾಡಬೇಕೆಂದು ಅವನ ಮನಸ್ಸು ತೀವ್ರವಾಗಿ ತುಡಿಯುತ್ತಿದ್ದರೂ, ಅನಿವಾರ್ಯವಾಗಿ ಅದನ್ನು ಹತ್ತಿಕ್ಕಬೇಕಾಯಿತು. ರಾತ್ರಿಯಿಡೀ ಸುರೇಶನಿಗೆ ನಿದ್ದೆಯೇ ಹತ್ತಲಿಲ್ಲ. ದುರ್ಗಾ ರಾಗದ ಸ್ವರಗಳು ಇನ್ನೂ ಕಿವಿಯಲ್ಲೇ ಗುಂಯ್ ಗುಡುತ್ತಲೇ ಇತ್ತು. ಸುಮಾರು ೧೨ ಗಂಟೆಯ ತನಕ ಹಾಸಿಗೆಯಲ್ಲೇ ಹೊರಳಾಡಿದವನು, ತಡೆಯಲು ಆಗದೇ, ಮೆಲ್ಲಗೆ ಎದ್ದು ಹಾಲ್ ಗೆ ಬಂದು,ಮುದ್ರಿಸಿಕೊಂಡು ಬಂದಿದ್ದ ಕ್ಯಾಸೆಟ್ಟನ್ನು,ಟೇಪ್ ರೆಕಾರ್ಡರಿನಲ್ಲಿ ತುರುಕಿದ. ವಾಲ್ಯೂಮನ್ನು ಸಾಧ್ಯವಾದಷ್ಟು ಕಮ್ಮಿಯಲ್ಲಿಟ್ಟು, ಮನಸ್ಸಿನಲ್ಲೇ ಕ್ಯಾಸೆಟ್ಟಿನಲ್ಲಿದ್ದಂತೆಯೇ ಪುನರಾವರ್ತಿಸಲು ಶುರುಮಾಡಿದ. ಈ ಸಲ "ನಿ" ಮತ್ತು "ಸಾ" ಸರಿಯಾಗಿ ಬಂದಹಾಗೆ ಅನಿಸಿತು. ಸಂತೃಪ್ತಿಯೆನಿಸಿ, ಟೇಪ್ ರೇಕಾರ್ಡರ್ ಆರಿಸಿ ಮುಸುಕೆಳೆದು ಮಲಗಿಬಿಟ್ಟ.

ಮಾರನೆಯ ದಿನ ರವಿವಾರ, ರೂಮ್ ಮೇಟ್ ಗಳೆಲ್ಲಾ ಎಷ್ಟೋ ಒತ್ತಾಯ ಮಾಡಿದರೂ, ಅವರ ಜೊತೆ ಸಿನೆಮಾಕ್ಕೆ ಹೋಗದೇ, ಮನೆಯಲ್ಲೇ ಉಳಿದುಕೊಂಡ. ಈಗ ಸುರೇಶನಿಗೆ ಸಂಗೀತ ಅಭ್ಯಾಸ ಮಾಡಲು ಒಳ್ಳೆಯ ವಾತಾವರಣ ಸಿಕ್ಕಿತ್ತು. ಮನೆಯ ಕಿಟಕಿ, ಬಾಗಿಲುಗಳನ್ನೆಲ್ಲಾ ಭದ್ರವಾಗಿ ಮುಚ್ಚಿ ಹಾರ್ಮೋನಿಯಮ್ ಹಿಡಿದುಕುಳಿತ. ಮೊದಲನೆಯ ಕ್ಲಾಸಿನಲ್ಲಿ ಹೇಳಿಕೊಟ್ಟ ಅಲಂಕಾರಗಳಿಂದ ಹಿಡಿದು, ಇಲ್ಲಿಯ ತನಕ ಆದ ಎಲ್ಲಾ ರಾಗಗಳನ್ನು ಒಂದೊಂದಾಗಿ ಮತ್ತೆ ಹಾರ್ಮೋನಿಯಮ್ಮಿನ ಸಹಕಾರದೊಂದಿಗೆ ಹಾಡಲು ಶುರು ಮಾಡಿದ. ಇನ್ನೇನು ದುರ್ಗಾ ರಾಗ ಶುರುಮಾಡುವ ಹೊತ್ತಿಗೆ ಯಾರೋ ಬಾಗಿಲು ತಟ್ಟಿದ ಹಾಗಾಯಿತು. ರಸಭಂಗವಾದಂತನಿಸಿ, ತುಸು ಸಿಟ್ಟಿನಿಂದಲೇ ಬಾಗಿಲು ತೆಗೆದು ನೋಡಿದ. ನೋಡಿದರೆ, ಇಡೀ ರಾತ್ರಿ ಕಾಲನಿಯನ್ನು ಕಾವಲು ಕಾಯುತ್ತಿದ್ದ ಗೂರ್ಖಾ ಎದುರು ನಿಂತಿದ್ದ. ಸುರೇಶನನ್ನು ನೋಡಿದವನೇ "ಪೇಟಿ ಬಜಾರಹೆತೇ ಸಾಬ್? " ಎಂದು ಹುಳ್ಳಗೆ ನಕ್ಕ. ಸುರೇಶನಿಗೆ ಅವನ ಕಪಾಳಕ್ಕೆ ಬಾರಿಸುವಷ್ಟು ಸಿಟ್ಟು ಬಂತಾದರೂ, ಹೇಗೋ ಸಾವರಿಸಿಕೊಂಡು "ಕ್ಯಾ ಚಾಹಿಯೆ?" ಎಂದು ಸಿಟ್ಟಿನಲ್ಲೇ ಕೇಳಿದ. ಸುರೇಶನ ಸಿಟ್ಟನ್ನು ಗಮನಿಸಿದಂತೆ ಗೂರ್ಖಾ, "ಪಾಂಚ್ ರುಪಯ್ಯಾ ಸಾಬ್" ಎಂದು ದೀನ ಮುಖ ಮಾಡಿ ಕೈಚಾಚಿದ. ಪ್ರತೀ ತಿಂಗಳೂ ಎಲ್ಲಾ ಮನೆಯಿಂದಲೂ ಹೀಗೆ ೫ ರುಪಾಯಿ ತೆಗೆದುಕೊಂಡು ಹೋಗುವುದು ಅವನಿಗೆ ಅಭ್ಯಾಸವಾಗಿ ಹೋಗಿತ್ತು. ಸಧ್ಯ ಇವನು ತೊಲಗಿದರೆ ಸಾಕೆಂದು ಅನಿಸಿ, ಪ್ಯಾಂಟ್ ಜೇಬಿನಿಂದ ೫ ರುಪಾಯಿಯ ನಾಣ್ಯ ತೆಗೆದು ಅವನ ಕೈಗಿತ್ತ. ಗೂರ್ಖಾ ಅವನಿಗೊಂದು ಸಲಾಮ್ ಹೊಡೆದು ಹಾಗೇ ತಿರುಗಿ ಹೋಗಿಬಿಟ್ಟ. ಅವನು ಸಲಾಮ್ ಹೊಡೆದಿದ್ದು ತನಗೋ ಅಥವಾ ತಾನು ಕೊಟ್ಟ ೫ ರುಪಾಯಿಗೋ ಅನ್ನುವ ಗೊಂದಲದಲ್ಲೇ ಇದ್ದವನಿಗೆ ಗಾಳಿಗೆ ಧೊಪ್ಪನೆ ಬಾಗಿಲು ಮುಚ್ಚಿಕೊಂಡಾಗಲೇ ಎಚ್ಚರವಾಗಿದ್ದು.

ಮತ್ತೆ ಹಾಡಲು ಕುಳಿತವನಿಗೆ ಸಲೀಸಾಗಿ ಸ್ವರಗಳು ಒಲಿದುಬರಲು ಶುರುಮಾಡಿದವು. ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಸುರೇಶನ ದೊಡ್ಡ ಗಂಟಲಿಗೆ ವಿಚಿತ್ರವಾದ ಹಿನ್ನೆಲೆ ಒದಗಿಸಿತ್ತು. ಯಾವುದೋ ಲಹರಿಯಲ್ಲಿದ್ದವನಂತೆ, ಅತ್ಸುತ್ಸಾಹದಲ್ಲಿ ನೋಡು ನೋಡುತ್ತಿದ್ದಂತೆಯೇ ಆಲಾಪವನ್ನು ಮುಗಿಸಿ, ಲಯ ಸರಗಮ್ ಗಳನ್ನೂ ಹಾಡಿಬಿಟ್ಟ. ಎಲ್ಲಾ ಸರಿಯಾಗಿ ಬಂದ ಹಾಗೆ ತೋರಿತು. ಆದರೂ ಮನಸ್ಸಿನಲ್ಲಿ ಏನೋ ಸಂಶಯ, ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂದು. ಸರಿ, ಟೇಪ್ ರೆಕಾರ್ಡರಿನಲ್ಲಿ ಹೊಸದೊಂದು ಕೆಸೆಟ್ ತುರುಕಿ, ರೆಕಾರ್ಡ್ ಬಟನ್ ಒತ್ತಿ ಮತ್ತೊಮ್ಮೆ ಹಾಡಲು ಶುರು ಮಾಡಿದ. ಈ ಸಲ ಹಾಡುವಾಗ ಅವನ ಕಂಠ ಸ್ವಲ್ಪ ನಡುಗುತ್ತಿತ್ತು. ಹಾರ್ಮೋನಿಯಮ್ಮಿನ ಮೇಲೆ ಓಡಾಡುತ್ತಿದ್ದ ಬೆರಳುಗಳು ಬೆವೆಯುತ್ತಿದ್ದವು. ಹೇಗೋ ಹೇಗೋ ಹಾಡಿ ಮುಗಿಸಿದವನು, ಭಯದಿಂದಲೇ ಕೆಸೆಟ್ ರಿವೈಂಡ್ ಮಾಡಿ ಕೇಳತೊಡಗಿದ. ಕೆಸೆಟ್ಟಿನಲ್ಲಿ ಹಾರ್ಮೋನಿಯಮ್ಮಿನ ಸದ್ದೇ ಪ್ರಬಲವಾಗಿ, ಸುರೇಶನ ಧ್ವನಿ ಅಸ್ಪಷ್ಟವಾಗಿ ಗೊಣಗಿದಂತೆ ಕೇಳುತ್ತಿತ್ತು. ತಾನು ಸರಿಯಾಗಿ ಹಾಡಿದ್ದೀನೋ ಇಲ್ಲವೋ ಎಂಬುದು ಸುರೇಶನಿಗೆ ಗೊತ್ತೇ ಆಗುತ್ತಿರಲಿಲ್ಲ. "ದರಿದ್ರ ಹಾರ್ಮೋನಿಯಮ್ಮು" ಎಂದು ಮನಸ್ಸಿನಲ್ಲೇ ಶಪಿಸಿ ಅದನ್ನು ಗೋಡೆಯ ಬದಿ ನೂಕಿದ. ಅವನು ನೂಕಿದ ರಭಸಕ್ಕೆ ಹಾರ್ಮೋನಿಯಮ್ಮಿನ ಬಾತೆ ತೆಗೆದುಕೊಂಡುಬಿಟ್ಟಿತು. ಬಾತೆ ತೆರೆದುಕೊಂಡ ಹಾರ್ಮೋನಿಯಮ್ಮು, ತನ್ನ ದುಸ್ತಿತಿಯನ್ನೇ ನೋಡಿ ಹಲ್ಲು ಬಿಟ್ಟುಕೊಂಡು ನಗುತ್ತಾ, ಅಣಕಿಸುತ್ತಿದಂತೆ ಭಾಸವಾಯಿತು ಸುರೇಶನಿಗೆ.

ಅವತ್ತು ಇಡೀ ದಿನ, ಮತ್ತೆ ಹಾಡಲು ಮನಸ್ಸಾಗಲಿಲ್ಲ ಸುರೇಶನಿಗೆ. ಮನಸ್ಸಿನಲ್ಲಿ, ತನ್ನ ಸಾಮರ್ಥ್ಯದ ಬಗ್ಗೆಯೇ ಒಂದು ಅವ್ಯಕ್ತ ಭಯ ಕಾಡುತ್ತಿತ್ತು. ಸಂಗೀತವೆಂದರೇ ಒಂದು ರೀತಿಯ ದಿಗಿಲೆನಿಸಲು ಶುರುವಾಗಿತ್ತು. ಒಂದು ಕ್ಷಣ, ಈ ಸಂಗೀತದ ಗೀಳಿಗೆ ಬಿದ್ದು ತಪ್ಪು ಮಾಡಿದೆನೇನೋ ಅನ್ನಿಸಿತು. ಆದರೂ, ಒಳ್ಳೆ ಹಾಡುಗಾರನಾಗಬೇಕೆಂಬ ಅವನ ಕನಸನ್ನು ಅವನು ಅಷ್ಟು ಬೇಗ ಮರೆಯಲು ಸಿದ್ಧವಿರಲಿಲ್ಲ.ಮುಂದಿನ ವಾರ ಕ್ಲಾಸಿಗೆ ಹೋಗುವದಕ್ಕಿಂತ ಮುಂಚೆ ಒಂದು ತಾಸು ಇನ್ನೊಮ್ಮೆ ಮನೆಯಲ್ಲೇ ಅಭ್ಯಾಸ ಮಾಡಿಕೊಂಡು ಹೋಗಬೇಕೆಂದು ನಿರ್ಧರಿಸಿದ.

ಆದರೆ, ಆ ಶನಿವಾರ ಭಾಗ್ವತರು ೫ ಗಂಟೆಗೇ ಫೋನ್ ಮಾಡಿ, ೬.೩೦ ರ ಪುಷ್ಪಮಾಲಾ ಕ್ಲಾಸಿಗೆ ಬರುತ್ತಿಲ್ಲವಾದುದರಿಂದ, ಸುರೇಶನಿಗೇ ಆ ಸಮಯಕ್ಕೆ ಕ್ಲಾಸಿಗೆ ಬರಲು ಹೇಳಿಬಿಟ್ಟರು. ಸುರೇಶ ಈಗ ನಿಜವಾಗಲೂ ದಿಗಿಲುಬಿದ್ದ. ಅವನಿಗೆ ಇನ್ನೂ ಆಫೀಸಿನ ಕೆಲಸ ಮುಗಿಸಿ ಹೊರಬೀಳಲು ಮುಕ್ಕಾಲು ಗಂಟೆಯಂತೂ ಬೇಕಾಗಿತ್ತು. ಇನ್ನು ಅಭ್ಯಾಸ ಮಾಡುವ ಪ್ರಮೇಯವೇ ಇಲ್ಲ. ಹೇಗೋ ಹೇಗೋ ಬೇಗ ಕೆಲಸ ಮುಗಿಸಿ ಹೊರಟವನಿಗೆ ಬಿ.ಟಿ.ಎಂ ಸಿಗ್ನಲ್ಲಿನಲ್ಲೇ ಆರು ಗಂಟೆ ಆಗಿಬಿಟ್ಟಿತ್ತು. ಸಣ್ಣಗೆ ಝುಮುರು ಮಳೆ ಹನಿ ಬೇರೆ ಬೀಳುತ್ತಿತ್ತು. ಲೇಟ್ ಆಗಿ ಹೋದರೆ, ತನಗಾಗಿ ಭಾಗ್ವತರು ಕಾಯುತ್ತಿರುತ್ತಾರೆ ಎಂಬ ಭಾವನೆಯೇ ಸುರೇಶನಿಗೆ ಇನ್ನೂ ದಿಗಿಲುಕ್ಕಿಸಿತು. ಯಾವು ಯಾವುದೋ ಬೀದಿಗಳಲ್ಲಿ ನುಗ್ಗಿ, ಶಾರ್ಟ್ ಕಟ್ ಹಿಡಿದು ಅಂತೂ ೬.೩೦ ಕ್ಕೆ ಗಾಂಧಿ ಬಜಾರ್ ತಲುಪಿ ನಿಟ್ಟುಸಿರು ಬಿಟ್ಟ.

ಭಾಗ್ವತರು ಇವತ್ತು ಒಳ್ಳೆಯ ಮೂಡಲ್ಲಿ ಇದ್ದ ಹಾಗೆ ಕಂಡಿತು. ಮಳೆಯಲ್ಲಿ ತೊಯ್ದುಕೊಂಡು ಬಂದಿದ್ದ ಸುರೇಶನಿಗೆ ಭಾಗ್ವತರ ಹೆಂಡತಿ ಬಿಸಿ ಬಿಸಿ ಚಹ ಬೇರೆ ಮಾಡಿಕೊಟ್ಟರು. ಟ್ರಾಫಿಕ್ಕಿನಲ್ಲಿ ಸಿಕ್ಕಿ ನಲುಗಿ, ಮಳೆಯಲ್ಲಿ ತೊಯ್ದು ಹಿಂಡಿಯಾಗಿದ್ದ ಸುರೇಶ, ಚಹ ಕುಡಿದು ಸುಧಾರಿಸಿಕೊಂಡ. ಭಾಗ್ವತರಿಗೆ ಹಿಂದಿನ ವಾರ ನಡೆದಿದ್ದೆಲ್ಲವೂ ಮರೆತು ಹೋಗಿತ್ತು. ಹೆದರುತ್ತಲೇ, ಸುರೇಶ ಹಿಂದಿನದೆಲ್ಲದನ್ನೂ ನೆನಪಿಸಿದ. "ಸರಿ ಮತ್ತೆ, ಅಲಂಕಾರ ಶುರು ಮಾಡು" ಎಂದು ಹೇಳಿದಾಗ "ಇಲ್ಲ. ಇನ್ನೊಂದು ಅವಕಾಶ ಕೊಡಿ. ಈ ಸಲ ಖಂಡಿತ ಸರಿಯಾಗಿ ಹಾಡುತ್ತೇನೆ" ಎಂದು ಗೋಗರೆದ. ತನ್ನಲ್ಲಿ ಇಂಥ ಆತ್ಮವಿಶ್ವಾಸ ಎಲ್ಲಿಂದ ಬಂದಿತೆಂಬುದೇ ಗೊತ್ತಾಗದೇ ಸುರೇಶನಿಗೆ ಒಂದು ಕ್ಷಣ ಸೋಜಿಗವಾಯಿತು. ಭಾಗ್ವತರು ಒಮ್ಮೆ ನಕ್ಕು "ಸರಿ" ಎಂದು ಬಿಟ್ಟರು.

ಅಳುಕುತ್ತಲೇ ಹಾಡಲು ಶುರು ಮಾಡಿದ. ಒಂದೊಂದಾಗಿ ಸ್ವರಗಳನ್ನು ಹಾಡುತ್ತಿದ್ದಂತೆಯೇ, ಭಾಗ್ವತರು ತಲೆ ಆಡಿಸಿ ಸಮ್ಮತಿ ಸೂಚಿಸತೊಡಗಿದರು. ಸುರೇಶನಿಗೆ ಈಗ ಇನ್ನೂ ಧೈರ್ಯ ಬಂತು. ಹಾವಿನಂತೆ ಬಳುಕುತ್ತಾ ಹಾರ್ಮೋನಿಯಮ್ಮಿನ ಮನೆಗಳ ಮೇಲೆ ಹರಿದಾಡುತ್ತಿದ್ದ ಭಾಗ್ವತರ ಬೆರಳುಗಳನ್ನೇ ನೋಡುತ್ತಿದ್ದವನಿಗೆ ಯಾವುದೋ ಬೇರೆಯೇ ಲೋಕಕ್ಕೆ ಪ್ರವೇಶವಾದ ಅನುಭವವಾಗಿ, ತನ್ನನ್ನು ತಾನೇ ಮರೆತು ಮೈದುಂಬಿ ಹಾಡತೊಡಗಿದ. ಈಗ ಅವನ ಕಣ್ಣಿಗೆ ಎದುರು ಕುಳಿತಿದ್ದ ಭಾಗ್ವತರು ಕಾಣುತ್ತಿರಲಿಲ್ಲ. ಅವರ ಹಾರ್ಮೋನಿಯಮ್ಮಿನ ಸದ್ದು ಮಾತ್ರಾ ಅಸ್ಪಷ್ಟವಾಗಿ ಕ್ಷೀಣವಾಗಿ ಕೇಳಿಸುತ್ತಿತ್ತು. ಸುರೇಶ ಪ್ರವೇಶಿಸಿದ್ದ ಹೊಸ ಲೋಕದಲ್ಲಿ ಹಲವಾರು ಜನರು ನಿಂತುಕೊಂಡು, ಬೇರೆ ಬೇರೆ ಶೃತಿಗಳಲ್ಲಿ ಹಾಡುತ್ತಿದ್ದರು. ಹಿಂದೆಲ್ಲೋ ಅವರೆಲ್ಲರನ್ನೂ ಎಲ್ಲೋ ನೋಡಿದ ಅನುಭವವಾಯಿತಾದರೂ, ಯಾರನ್ನೂ ಬಿಡಿ ಬಿಡಿಯಾಗಿ ಗುರುತಿಸಲಾಗಲಿಲ್ಲ. ನೋಡು ನೋಡುತ್ತಿದ್ದಂತೆಯೇ, ಅವರ ಬಿಂಬಗಳು ಸುರೇಶನ ಕಣ್ಣ ಮುಂದೇ ಎದ್ದೆದ್ದು ಕುಣಿಯತೊಡಗಿದವು. ಸುರೇಶನ ಕಣ್ಣಿಗೆ ಕತ್ತಲು ಕವಿದಂತಾಗಿ, ತಲೆ ತಿರುಗತೊಡಗಿತು .ದುರ್ಗಾ ರಾಗದ ಸ್ವರಗಳು, ಸೌತ್ ಎಂಡ್ ಸರ್ಕಲ್ಲಿನಲ್ಲಿ ಸದಾ ಹೂವು ಮಾರುತ್ತಾ ನಿಂತಿರುತ್ತಿದ್ದ ಪುಟ್ಟ ಬಾಲೆಯ ಧ್ವನಿ, ಕುಕ್ಕರಿನ ಶಿಳ್ಳೆಯ ಸದ್ದು, ಪಕ್ಕದಮನೆಯ ಮುಸ್ಲಿಮ್ ಆಂಟಿಯ ಕೀರಲು ಧ್ವನಿ, ಗೂರ್ಖಾನ "ಸಲಾಂ ಸಾಬ್" ಎಂಬ ಗಡಸು ಧ್ವನಿ, ಹಳೆಯ ಹಾರ್ಮೋನಿಯಮ್ಮಿನ ಗೊಗ್ಗರು ಸದ್ದು, ಬಿ.ಎಂ.ಟಿ.ಸಿ ಬಸ್ಸಿನ ಕರ್ಕಶ ಹಾರ್ನ್, ಎಲ್ಲವೂ ಸೇರಿ ಕಲಸುಮೇಲೋಗರವಾಗಿ, ಅವನ ಕಿವಿಯಲ್ಲಿ ಅನುರಣಿಸತೊಡಗಿದವು. ಆ ಯಾತನೆಯನ್ನು ತಾಳಲಾಗದೇ ಸುರೇಶ ಕಿವಿಮುಚ್ಚಿಕೊಂಡ. ಸುರೇಶ ಅನುಭವಿಸುತ್ತಿದ್ದ ಯಾತನೆಗಳಿಗೆಲ್ಲಾ ಸಾಕ್ಷಿಯೆಂಬಂತೆ ಅವನ ಕೆಂಪು ಹೊದಿಕೆಯ ಸಂಗೀತ ಪುಸ್ತಕ ಅನಾಥವಾಗಿ ಬಿದ್ದುಕೊಂಡು ಮನೆಯ ಸೂರನ್ನೇ ದಿಟ್ಟಿಸುತ್ತಿತ್ತು. ಭಾಗ್ವತರ ಹಾರ್ಮೋನಿಯಮ್ಮು ಈಗ ಮೌನದ ಮೊರೆ ಹೊಕ್ಕಿತ್ತು. ಇವ್ಯಾವುದರ ಪರಿವೆಯೇ ಇಲ್ಲದಂತೆ ತಾಳಮಾತ್ರಿಕೆ ಮಾತ್ರಾ ಒಂದೇ ತಾಳದಲ್ಲಿ ಮಿಡಿಯುತ್ತಾ, ಸುರೇಶನ ಶೋಕಗೀತೆಗೆ ಸಾಥ್ ನೀಡುತಿತ್ತು.

14 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
ತುಂಬ ಚೆನ್ನಾಗಿ ಬರೆದಿದ್ದೀಯ...
ಇಂಥ ಸ ರೆ ಗ ಮ ದ ಸಾಲುಗಳನ್ನು ಓದಿದರೆ ಯಾಕೋ ಕಣ್ದುಂಬಿ ಬರುತ್ತೆ.

"ಹಾವಿನಂತೆ ಬಳುಕುತ್ತಾ ಹಾರ್ಮೋನಿಯಮ್ಮಿನ ಮನೆಗಳ ಮೇಲೆ ಹರಿದಾಡುತ್ತಿದ್ದ ಭಾಗ್ವತರ ಬೆರಳುಗಳನ್ನೇ ನೋಡುತ್ತಿದ್ದವನಿಗೆ ಯಾವುದೋ ಬೇರೆಯೇ ಲೋಕಕ್ಕೆ ಪ್ರವೇಶವಾದ ಅನುಭವವಾಗಿ, ತನ್ನನ್ನು ತಾನೇ ಮರೆತು ಮೈದುಂಬಿ ಹಾಡತೊಡಗಿದ. ಈಗ ಅವನ ಕಣ್ಣಿಗೆ ಎದುರು ಕುಳಿತಿದ್ದ ಭಾಗ್ವತರು ಕಾಣುತ್ತಿರಲಿಲ್ಲ."

ಸಂಗೀತವೇ ಹಾಗಾ? ವಯಸ್ಸಾದ ಗಾನ ಗಂಧರ್ವರೋರ್ವರು ಕಣ್ಮುಂದೆ ಕುಳಿತು ಸುರೇಶನ ತಿದ್ದಿ ತೀಡಿ ಹಾಡಿಸಿದಂತೆನಿಸಿತು.
ಭಾಗ್ವತರ ಪಾತ್ರಕ್ಕೆ ನನ್ನದೊಂದು ಸಲಾಮ್. ಹಾಗೇ ಸುರೇಶನ ಛಲಕ್ಕೆ ಇನ್ನೊಂದು. ಹಾಗೇ ಪುಷ್ಪಮಾಲಾಳ ಕಲ್ಪನೆ..ತಂಬೂರಿ ಹಿಡಿದು ಕುಳಿತ ಅವಳ ಭಂಗಿ ಎಲ್ಲವೂ ಸೊಗಸು ಕಣೋ....
ಇನ್ನೇನೂ ಹೇಳಲಾರೆ.

ತೇಜಸ್ವಿನಿ ಹೆಗಡೆ said...

ಮಧು

ಸಂಗೀತದ ಬಗ್ಗೆ ಉತ್ತಮ ಮಾಹಿತಿಗಳನ್ನು ಸರಳವಾಗಿ ನೀಡಿರುವಿ. ಸುರೇಶನ ನೋವಿನ ಶೃತಿಯಲ್ಲೆಲ್ಲೋ ಮಧುಸೂಧನನ್ನೂ ಕಾಣಬಹುದೇನೋ!? ತುಂಬಾ ಚೆನ್ನಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಯಿತು.

ಶ್ಯಾಮಾ said...

ಒಳ್ಳೆಯ ನಿರೂಪಣೆ

ಸಂಗೀತವೆ ಹಾಗೆ. ಅದು ಹೃದಯದ ಗೆಳತಿ. ಅಂತ ನಾನು ಯವಾಗಲೂ ಅಂದುಕೊಳ್ಳುವುದು.

ಬರವಣೆ ತುಂಬ ಚೆನ್ನಾಗಿದೆ. ಯಾವಾಗಲೂ ನಾನು ಕಥೆ ಓದುವಾಗಿನಂತೆ ಇದರಲ್ಲೂ ನಾನೇ ಪಾತ್ರವಾಗಿದ್ದೆ. ಹೆಚ್ಚೇನು ಕಷ್ಟ ಪಡಲಿಲ್ಲ, ನಾನೂ ಅಕ್ಕನೂ ಸಂಗೀತಕ್ಕೆ ಹೋಗುತ್ತಿದ್ದ ಆ ದಿನಗಳು ಕಣ್ಣಿಗೆ ಎದುರಾದವು. ಮೊದ ಮೊದಲು ಅಕ್ಕ ನನಗಿಂತ ಬೇಗ ಎಲ್ಲ ಗ್ರಹಿಸಿ ಕಲಿಯುವಾಗ ನನ್ನ ಸ್ಥಿತಿ ಹೆಚ್ಚು ಕಮ್ಮಿ ಸುರೇಶನಂತೆಯೇ ಇತ್ತು :).

Keep Writing,

Shyama.

Unknown said...

ಶಾಂತಲಕ್ಕಾ,
ಹೌದು, ಸಂಗೀತವೇ ಹಾಗೆ. ಅದು ಸೃಷ್ಟಿ ಮಾಡುವ ಅಲೌಕಿಕ ಆನಂದ, ಶಬ್ದಗಳಿಗೆ ನಿಲುಕದ್ದು. ಮೆಚ್ಚಿದ್ದಕ್ಕೆ ತುಂಬಾ ಥಾಂಕ್ಸ್.

ತೇಜಕ್ಕಾ,
ಧನ್ಯವಾದಗಳು. ನಿಜ, ಸುರೇಶ ಅನುಭವಿಸಿದ ಸಂತೋಷ, ಹತಾಶೆ, ನೋವುಗಳೆಲ್ಲಾ ನಾನು ಅನುಭವಿಸಿದಂತವೇ.

ಶ್ಯಾಮಾ,
ಬ್ಲಾಗಿಗೆ ಸ್ವಾಗತ. ಖಂಡಿತವಾಗಿಯೂ ಹೌದು. ಸಂಗೀತ ಯಾವತ್ತಿಗೂ ಹೃದಯಕ್ಕೆ ಹತ್ತಿರವೇ. ಕಥೆಯೊಳಗಿನ ಪಾತ್ರವೇ ಆಗಿ, ಅದನ್ನು ಅನುಭವಿಸಿದ್ದು ಸಂತೋಷವಾಯಿತು. ನಿಮ್ಮ ಹಾಗೇ, ನನ್ನ ಅನುಭವಗಳೂ ಸಹ ಇದನ್ನು ಬರೆಯಲು ಪ್ರೇರೇಪಿಸಿದವು. ತುಂಬಾ ಧನ್ಯವಾದಗಳು. ಬರ್ತಾ ಇರಿ.

ರಾಜೇಶ್ ನಾಯ್ಕ said...

ಮಧು,
ಬಹಳ ಸೊಗಸಾಗಿದ್ದು ತುಂಬಾನೇ ಇಷ್ಟವಾಯಿತು. ನಾನು ಸಂಗೀತ ಕಲಿಯುತ್ತಿದ್ದ ದಿನಗಳ ನೆನಪುಗಳು ಬಹಳ ಕಾಡಿದವು. ಅದೇಕೋ ಹಳೆಯ ಸುಂದರ ನೆನಪುಗಳು ಮತ್ತೆ ಮತ್ತೆ ಕಾಡುವಂತೆ ಮಾಡುತ್ತಿದ್ದೀರಿ, ಪೆಪ್ಪರ್ ಮಿಂಟ್ ಆದಮೇಲೆ ಈಗ ಸುರೇಶನ ಸಂಗೀತದ ಬರಹ. ಒಬ್ಬ ಸಂಗೀತ ವಿದ್ಯಾರ್ಥಿಗೆ ಇರುವ ಕಳವಳ, ಹೆದರಿಕೆ, ಚೆನ್ನಾಗಿ ಮಾಡಬೇಕೆಂಬ ತುಡಿತ ಎಲ್ಲವೂ ಬಹಳ ಚೆನ್ನಾಗಿ ಮೂಡಿಬಂದಿದೆ.

Pramod P T said...

ಸಂಗೀತದ ಬಗ್ಗೆ ಅಲ್ಪ-ಸ್ವಲ್ಪ ತಿಳುವಳಿಕೆ ಬಂತು :)
ಚೆನ್ನಾಗಿದೆ ಬರಹ...ಹಾಗೆನೆ ಶೀರ್ಷಿಕೆ ಕೂಡ ಸಕ್ಕತ್!

Unknown said...

ರಾಜೇಶ್ ನಾಯ್ಕರೇ,
ಬಹಳ ಸಂತೋಷ ನಿಮಗೆ ಬರಹ ಮೆಚ್ಚುಗೆಯಾಗಿದ್ದು. ನಾನು ಬರೆಯಲು ಶುರು ಮಾಡಿದ್ದೇ, ಇಂಥ ಹಳೆಯ ನೆನಪುಗಳನ್ನು ನಿಮ್ಮೊಡನೆ ಹಂಚಿಕೊಳ್ಳಲೆಂದು. ಬರ್ತಾ ಇರಿ.

ಪ್ರಮೋದ್,
ತುಂಬಾ ಥಾಂಕ್ಸ್, ಕಥೆ ಮತ್ತು ಶೀರ್ಷಿಕೆ ಮೆಚ್ಚಿಕೊಂಡಿದ್ದಕ್ಕೆ.

Sushrutha Dodderi said...

ಓದುತ್ತಿದ್ದಷ್ಟೂ ಹೊತ್ತು ಹಾರ್ಮೋನಿಯಂ ಕಿವಿಯಲ್ಲಿ ಗುನುಗುತ್ತಿತ್ತು.. ಈಗಲೂ ನಿಂತಿಲ್ಲ..

Mahalingesh said...

ಮಧು ! ಬಾಂಬಾಟಾಗೀ ಬರಿತಿದಿಯಾ !

ಅಪ್ಪಟಾ ಕನ್ನಡಾ ! ಭಾಷೆಯಾ ಸಿರಿಗೂ ಬರವಣಿಗೆ ಕಲೆಗೂ ಸೂಕ್ತ ಜೊತೆ... ಸಿರ್ಸಿಕೆ ಸೊಗಸಾಗಿದೆ!

Unknown said...

ಸುಶ್ರುತರವರೇ,
ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆ ನೋಡಿ ಸಂತೋಷವಾಯಿತು. ಹೀಗೆ ಬರ್ತಾ ಇರಿ. ನಿಮ್ಮ ಕಡೆ ಗಾಳಿ ಬೀಸಿ ಬೀಸಿ, ನಾನೂ ಚೆನ್ನಾಗಿ ಬರೆಯಲು ಶುರುಮಾಡಬಹುದು :-)
ದಡ್ಡಿ,
ಥ್ಯಾಂಕ್ಸ್ ಮಗಾ. ಬರ್ತಾ ಇರು.

sunaath said...

ಶಾಸ್ತ್ರೀಯ ಸಂಗೀತದ ವಸ್ತುವನ್ನು ಒಳಗೊಂಡ ಕತೆ ಓದಿ ಖುಷಿ ಆಯ್ತು.

Unknown said...

ಧನ್ಯವಾದಗಳು ಸುನಾಥರವರೇ

nishu mane said...

ಮಧು,

ನಿಮ್ಮ ಬ್ಲಾಗ್ ಚೆನ್ನಾಗಿದೆ. ಕೆಲವು ಪೋಸ್ಟಿಂಗ್ಸ್ ತುಂಬಾ ಇಷ್ಟ ಆಯ್ತು. ತುಂಬಾ ಚೆನ್ನಾಗಿ ಬರೀತಿದೀರಿ ...ಓದೋಕೆ ಖುಷಿಯಾಗತ್ತೆ. ಹೀಗೆ ಬರೀತಿರಿ.

ಮೀರ.

Unknown said...

ಮೀರಾರವರೇ ತುಂಬಾ ಥಾಂಕ್ಸ್. ಬರ್ತಾ ಇರಿ. ನಿಶುಮನೆ ತುಂಬಾ ಚೆನ್ನಾಗಿ ಬರ್ತಾ ಇದೆ.