Saturday, February 16, 2008

ಗಣೇಶನ ಮದುವೆ

ಮಂಗಳವಾರ ಬೆಳಿಗ್ಗೆ ಬೇಗ ಎದ್ದು, ಇನ್ನೂ ಮುಖ ತೊಳೆಯುತ್ತಿರುವಂತೆಯೇ, ನನ್ನವಳು "ರೀ, ಇವತ್ತಿನ ಪೇಪರ್ ನೋಡಿದ್ರಾ, ಗಣೇಶನ ಮದುವೆ ಆಯಿತಂತೆ ಕಣ್ರೀ" ಎಂದು ಹಾಲ್ ನಿಂದಲೇ ಕೂಗಿಕೊಂಡಳು. ಇನ್ನೂ ನಿದ್ದೆಕಣ್ಣಲ್ಲಿದ್ದ ನಾನು ಅವಳ ಕೂಗಿಗೆ ಬೆಚ್ಚಿಬಿದ್ದೆ. ಸುಮಾರಾಗಿ ಯಾವ ವಿಷಯಕ್ಕೂ ಎಕ್ಸೈಟ್ ಆಗದವಳು ಇವತ್ತು ಇಷ್ಟು ದೊಡ್ಡ ದನಿಯಲ್ಲಿ ಕೂಗಿಕೊಂಡಿದ್ದನ್ನು ಕೇಳಿ ಏನೋ ವಿಶೇಷವಿರಬೇಕೆಂದು ಅನ್ನಿಸಿತು. "ಯಾವ ಗಣೇಶನೇ ? ಅದೇ ಪಾರ್ವತಿ-ಈಶ್ವರನ ಮಗನಿಗಾ? ಕಲಿಗಾಲ ಕಣೇ.. ಏನು ಬೇಕಾದರೂ ಆಗಬಹುದು" ಎಂದು ಇದ್ದಲಿಂದಲೇ ಕೂಗಿದೆ. "ನಿಮ್ಮ ತಲೆ.... ನಮ್ಮ ಗೋಲ್ಡನ್ ಸ್ಟಾರ್ ಗಣೇಶನಿಗೆ ಮದುವೆಯಾಯ್ತಂತೆ ಕಣ್ರೀ. ಪೇಪರ್ನಲ್ಲಿ ಫೋಟೋ ಹಾಕಿದ್ದಾರೆ ನೋಡಿ" ಮಾರುತ್ತರ ಬಂತು. "ಓ ಅವನಿಗಾ?" ನಾನು ಸಮಾಧಾನ ಪಟ್ಟೆ.

ನನ್ನವಳು ಗೋಲ್ಡನ್ ಸ್ಟಾರ್ ಗಣೇಶನ ಕಟ್ಟಾ ಅಭಿಮಾನಿ. ಕಾಮೆಡಿ ಟೈಮ್ ಕಾಲದಿಂದಲೂ ಅವನನ್ನು ಮೆಚ್ಚಿದವಳು. ನನಗೆ ಇಷ್ಟವಿಲ್ಲದಿದ್ದರೂ,ದುಂಬಾಲು ಬಿದ್ದು, ಮುಂಗಾರು ಮಳೆ, ಹುಡುಗಾಟ, ಚೆಲ್ಲಾಟ, ಚೆಲುವಿನ ಚಿತ್ತಾರ, ಕೃಷ್ಣ, ಗಾಳಿಪಟ, ಎಲ್ಲಾ ಚಿತ್ರಗಳಿಗೂ ನನ್ನನ್ನು ಕರೆದುಕೊಂಡು ಹೋಗಿ ನನಗೆ ಚಿತ್ರಹಿಂಸೆ ಕೊಟ್ಟಿದ್ದಳು . ಸಿನೆಮಾ ನೋಡುವಾಗ ಮಾತ್ರ ಚಕಾರವೆತ್ತಲೂ ಬಿಡದವಳು, ಸಿನೆಮಾ ಮುಗಿದ ನಂತರ ಎರಡು ದಿನಗಳಗಟ್ಟಲೇ ಗಣೇಶನ ಗುಣಗಾನ ಮಾಡಿ ನನ್ನ ಹೊಟ್ಟೆ ಉರಿಸಿದ್ದಳು. ಈಗ ನೋಡಿದರೆ ಅವನ ಮದುವೆ ವಿಷಯ ಗೊತ್ತಾಗಿದೆ. ಬೆಳಿಗ್ಗೆ ಬೆಳಿಗ್ಗೆ ನನ್ನ ಮೂಡ್ ಹಾಳುಮಾಡುವುದರಲ್ಲಿ ಸಂಶಯವೇ ಇಲ್ಲ ಅನ್ನಿಸಿ ಹಾಲ್ ಕಡೆ ನಡೆದೆ.

ದಿನಾ ಬೆಳಿಗ್ಗೆ ನನಗಿಂತಲೂ ಬೇಗ ಎದ್ದು, ಒಬ್ಬಳಿಗೇ ಸ್ಟ್ರಾಂಗ್ ಕಾಫಿ ಮಾಡಿಕೊಂಡು, ಹಾಲ್ ನಲ್ಲಿದ್ದ ಸೋಫಾದ ಮೇಲೆ ಪವಡಿಸಿಕೊಂಡು ಪೇಪರ್ ಓದುವುದು ಅವಳ ದಿನಚರಿ. ಪೇಪರು ನನ್ನ ಕೈಗೆ ಬಂದರೆ ಅದು ಅರ್ಧ ತಾಸು ಕದಲುವುದಿಲ್ಲವೆನ್ನುವುದು ಅವಳ ಕಂಪ್ಲೇಂಟು. ಅದಕ್ಕೇ ನನಗಿಂತಲೂ ಮುಂಚೆ ಅವಳು ಪೇಪರ್ ಓದಿ ಬಿಡಬೇಕು. ಇವತ್ತೂ ಅಷ್ಟೇ.. ಕಾಲು ಮೇಲೆ ಕಾಲು ಹಾಕಿಕೊಂಡು, ಮುಖಪುಟದಲ್ಲಿ ಹಾಕಿದ್ದ ಗಣೇಶನ ಮದುವೆ ಫೋಟೋವನ್ನೇ ದಿಟ್ಟಿಸಿ ನೋಡುತ್ತಿದ್ದ ಅವಳನ್ನು ನೋಡಿ ನಗು ಬಂತು. ಆದರೂ ಸಾವರಿಸಿಕೊಂಡು "ಅಲ್ವೇ, ನಾನು ಈಗ ತಾನೆ ಎದ್ದಿದೀನಿ. ಆಫೀಸಿಗೆ ಬೇಗ ಹೋಗ್ಬೇಕು. ಕಾಫಿ ಮಾಡಿ ತಂದುಕೊಡೋದು ಬಿಟ್ಟು, ಅದ್ಯಾವುದೋ ಸುಟ್ಟ ಬದನೇಕಾಯಿ ಮುಖದ ಹೀರೋನ ಮದುವೆಯಾಯ್ತು ಅಂತ ಬಾಯಿಬಿಟ್ಟುಕೊಂಡು ಫೋಟೋ ನೋಡ್ತಾ ಇದ್ದೀಯಲ್ಲೇ ? ಗಂಡನ ಮೇಲೆ ಸ್ವಲ್ಪಾನೂ ಕಾಳಜಿಯಿಲ್ವಾ ನಿನಗೆ?" ಎಂದು ರೇಗಿಸಿದೆ. "ನಿಮಗೆ ಕಾಫಿ ತಾನೇ ಬೇಕು ? ತಂದು ಕೊಡ್ತಿನಿ ಇರಿ. ನನ್ನ ಗಣೇಶಂಗೆ ಮಾತ್ರಾ ಏನೂ ಹೇಳ್ಬೇಡಿ ನೀವು" ಎಂದವಳೇ, ಪೇಪರನ್ನು ನನ್ನ ಕೈಯಲ್ಲಿ ತುರುಕಿ, ದಡಕ್ಕನೇ ಎದ್ದು ಅಡುಗೆ ಮನೆಗೆ ಕಡೆಗೆ ನಡೆದಳು.

ನಿಧಾನವಾಗಿ ಸೋಫಾದ ಮೇಲೆ ಕುಳಿತು ಪೇಪರ್ ತೆಗೆದವನಿಗೆ ರಾಚಿದ್ದು ದಂಪತಿಗಳ ನಗುಮುಖದ ಚಿತ್ರ. ಜೋಡಿ ಚೆನ್ನಾಗಿದೆ ಅನ್ನಿಸಿತು. "ಜೋಡಿ ಸಕ್ಕತ್ತಾಗಿ ಇದೆಯಲ್ಲೇ ?" ಇವಳಿಗೆ ಕೇಳಿಸುವಂತೆ ದೊಡ್ಡದಾಗಿ ಹೇಳಿದೆ. "ಕರ್ಮ, ಕರ್ಮ.. ಅಲ್ರೀ, ಹೋಗಿ ಹೋಗಿ, ಅದ್ಯಾವುದೋ ಡೈವೋರ್ಸ್ ಆದ ಹುಡುಗಿಯನ್ನು ಮದುವೆ ಆಗಿದ್ದಾನಲ್ರೀ ಅವನು ? ಇಡೀ ಕರ್ನಾಟಕದಲ್ಲಿ ಮತ್ಯಾರೂ ಹುಡುಗಿಯರು ಸಿಕ್ಕಲಿಲ್ವಾ ಅವನಿಗೆ? ಕರ್ಮಕಾಂಡ.." ಅಂತ ಉರಿದುಕೊಂಡಳು. ನಂಗ್ಯಾಕೋ ಅವಳನ್ನು ಇನ್ನೂ ಸ್ವಲ್ಪ ರೇಗಿಸೋಣ ಅನ್ನಿಸಿತು. ಮೆಲ್ಲಗೆ ಅಡುಗೆ ಮನೆಯ ಕಡೆ ಪಾದ ಬೆಳೆಸಿದೆ. "ಅಲ್ವೇ, ಅವನು ಪ್ರೀತಿ ಮಾಡಿ ಮದುವೆಯಾಗಿದ್ದಂತೆ ಕಣೇ, ಅದರಲ್ಲೇನು ತಪ್ಪು? ಪ್ರೀತಿ ಮಾಡೋವ್ರು ಚಂದನೆಲ್ಲಾ ನೋಡ್ತಾರಾ? ಅದಲ್ದೇ ಇವಳು ನೋಡೋಕ್ಕೆ ಚೆನ್ನಾಗೇ ಇದ್ದಾಳಲ್ಲೇ." ನಾನು ಮೆಲ್ಲಗೆ ಉಸುರಿದೆ. ಫಿಲ್ಟರನಲ್ಲಿದ್ದ ಡಿಕಾಕ್ಷನ್ ಗೆ ಸ್ವಲ್ಪ ಜಾಸ್ತಿನೇ ಹಾಲು,ಸಕ್ಕರೆ ಬೆರೆಸಿ ನನ್ನ ಕೈಗಿತ್ತವಳೇ "ಅವಳೆಂತಾ ಚೆನ್ನಾಗಿದಾಳೆ ? ನಮ್ಮ ಗಣೇಶಂಗೆ ಒಂದು ಚೂರೂ ಸರಿಯಾದ ಜೋಡಿಯಲ್ಲ. ಸ್ವಲ್ಪ ವಯಸ್ಸಾದ ಹಾಗೆ ಬೇರೆ ಕಾಣ್ಸ್ತಾಳೆ." ಎಂದು ಮೂಗು ಮುರಿದಳು.

"ನನಗಂತೂ ಅವಳು ಫೋಟೋದಲ್ಲಿ ನಿನಗಿಂತಾ ಚೆನ್ನಾಗಿ ಕಾಣ್ತಾಳೆ ಕಣೇ" ನಾನು ಬ್ರಹ್ಮಾಸ್ತ್ರ ಪ್ರಯೋಗಿಸಿದೆ. "ಹ್ಮ್.. ಕಾಣ್ತಾರೆ ಕಾಣ್ತಾರೆ.. ನನ್ನ ಬಿಟ್ಟು ಉಳಿದವರೆಲ್ಲರೂ ನಿಮಗೆ ಚೆನ್ನಾಗೇ ಕಾಣ್ತಾರೆ. ನಾನು ಇಲ್ಲಿ ಇಡೀ ದಿನ ಮನೆಲ್ಲಿದ್ದು ಕತ್ತೆ ತರ ಚಾಕರಿ ಮಾಡ್ತಿನಿ. ನೀವು ಕಂಡ ಕಂಡ ಸುಂದರಿಯರ ಹಿಂದೆ ಜೊಲ್ಲು ಸುರಿಸಿಕೊಂಡು ಹೋಗಿ. ಈ ಕರ್ಮಕ್ಕೆ ಮದುವೆ ಬೇರೆ ಕೇಡು ನಿಮಗೆ" ಅವಳ ಕಂದು ಕಂಗಳಲ್ಲಿ ಕಿಡಿ ಹಾರಿತು. "ಅಲ್ವೇ, ಅವಳ ಜಡೆ ತುಂಬಾ ಉದ್ದ ಇದೆ ಕಣೇ. ನೋಡು.." ನಾನು ಪೇಪರ್ ಅವಳ ಮುಂದೆ ಹಿಡಿದೆ. ಜಡೆ ನನ್ನವಳ ವೀಕ್ ಪಾಯಿಂಟು. ಮದುವೆಯಾದಾಗಲೇ ಸ್ವಲ್ಪ ಗಿಡ್ಡ ಇದ್ದ ಕೂದಲು, ಬರ್ತಾ ಬರ್ತಾ ಉದುರಿ, ಈಗ ಮೋಟುಜಡೆಯಾಗಿತ್ತು. ಅದಕ್ಕೆ ಇವಳು ಮಾಡಿದ ಆರೈಕೆ ಒಂದೆರಡಲ್ಲ. ೧೫ ದಿನಕ್ಕೊಮ್ಮೆ ಶಾಂಪೂ ಬದಲಿಸುತ್ತಿದ್ದಳು. ಹಾಗೆಲ್ಲಾ ಪದೇ ಪದೇ ಶಾಂಪೂ ಬದಲಿಸಬಾರದೆಂದು ಸಲಹೆ ಕೊಟ್ಟ ನನಗೆ "ನೀವು ಸುಮ್ಮನಿರಿ, ನಿಮಗೇನೂ ಗೊತ್ತಾಗಲ್ಲ" ಎಂದು ಗದರಿ ಬಾಯಿಮುಚ್ಚಿಸಿದ್ದಳು. "ಅವಳು ಹಾಕ್ಕೊಂಡಿದ್ದು ಚೌರಿ ಕಣ್ರೀ, ನೀವು ಅದನೆಲ್ಲಾ ಎಲ್ಲಿ ಸರಿಯಾಗಿ ನೋಡ್ತೀರಾ? ಈಗ ಇಲ್ಲಿಗೆ ಬಂದಿದ್ದು ಯಾಕೆ? ನನ್ನ ರೇಗಿಸೋಕಾ? ನನಗೆ ಬೇಕಾದಷ್ಟು ಕೆಲಸವಿದೆ. ನೀವು ಹಾಲ್ ಗೆ ಹೋಗಿ ಕುಕ್ಕರುಬಡೀರಿ, ಹೋಗಿ" ಎಂದು ನನ್ನನ್ನು ಹೊರದಬ್ಬಲು ಪ್ರಯತ್ನಿಸಿದಳು. ನಾನು ಕದಲಲಿಲ್ಲ. ಹಾಗೆ ನೋಡಿದರೆ, ಸಿಟ್ಟು ಬಂದಾಗ ನನ್ನವಳು ತುಂಬಾನೇ ಮೋಹಕವಾಗಿ ಕಾಣುತ್ತಾಳೆ. ಅದಕ್ಕೆಂದೇ ನಾನು ಆಗಾಗ ಅವಳನ್ನು ರೇಗಿಸುವುದುಂಟು. ಮೆಲ್ಲಗೆ ಕಾಫಿ ಕುಡಿಯುತ್ತಾ ಅವಳ ಮುಖವನ್ನೇ ದಿಟ್ಟಿಸಿದೆ.

ನನ್ನ ಅತ್ತೆಯ ಮೂರು ಹೆಣ್ಣು ಮಕ್ಕಳಲ್ಲಿ, ನನ್ನವಳೇ ಸ್ವಲ್ಪ ಕಪ್ಪು. ಆದರೂ ಮುಖದಲ್ಲೇನೋ ಅಪೂರ್ವ ಕಳೆ. ಸ್ವಲ್ಪ ಅಗಲವಾದ ಹಣೆ, ಆಳವಾದ ಸಣ್ಣ ಕಣ್ಣುಗಳು, ತಿದ್ದಿ ತೀಡಿದಂತಿದ್ದ ಹುಬ್ಬುಗಳು, ನೀಳವಾದ ಮೂಗು, ತುಂಬುಗೆನ್ನೆ. ನಕ್ಕಾಗ ಎರಡೂ ಕೆನ್ನೆಗಳಲ್ಲಿ ಗುಳಿ ಬಿದ್ದು ಅಪೂರ್ವವಾದ ಸೌಂದರ್ಯವನ್ನು ಹೊರಸೂಸುತ್ತಿದ್ದವು. ಅವಳ ಕಂದು ಕಣ್ಣುಗಳಲ್ಲಿ ಅದೇನೋ ಕಾಂತಿ ಅಯಸ್ಕಾಂತದಂತೆ ಸೆಳೆಯುತ್ತಿತ್ತು. ಇವತ್ತು ಹಣೆಗೆ ಒವಲ್ ಶೇಪಿನ ಪುಟ್ಟ ಸ್ಟಿಕರ್ರೊಂದನ್ನು ಅಂಟಿಸಿಕೊಂಡಿದ್ದಳು. ಉಪ್ಪಿಟ್ಟಿಗೆಂದು ಮೆಣಸಿನಕಾಯಿ ಹೆಚ್ಚುತ್ತಿದ್ದವಳು, ಆಗಾಗ ಹಣೆಯ ಮೇಲೆ ಮೂಡಿದ್ದ ಬೆವರು ಹನಿಗಳನ್ನು ಕೈಯಿಂದ ಒರೆಸಿಕೊಳ್ಳುತ್ತಿದ್ದಳು. ಅವಳ ಪುಟ್ಟ ಚಲನವಲನಗಳಲ್ಲೂ ಅದೇನೋ ಮೋಹಕತೆ.

ನಾನಿನ್ನೂ ಅಲ್ಲೇ ನಿಂತು ಅವಳನ್ನೇ ನೋಡುತ್ತಿರುವುದು ಅವಳಿಗೆ ಸ್ವಲ್ಪ ಮುಜುಗರ ತಂದಿರಬೇಕು. ಅವಳಿಗೆ ಸ್ವಲ್ಪ ಜಾಸ್ತಿಯೇ ನಾಚಿಕೆ ಸ್ವಭಾವ. ಮದುವೆಯಾಗಿ ವರ್ಷವಾದರೂ, ಪಬ್ಲಿಕ್ ಜಾಗಗಳಲ್ಲಿ ನಾನು ಕೈ ಹಿಡಿದುಕೊಂಡರೆ ನಾಚಿ ತಟ್ಟನೇ ಕೈ ಹಿಂದೆ ತೆಗೆದುಕೊಳ್ಳುತ್ತಿದ್ದಳು. "ನನ್ನ ಮುಖದ ಮೇಲೆ ಕೋತಿ ಕುಣಿತಾ ಇದೆಯೇನ್ರೀ? ಹಾಲ್ ಗೆ ಹೋಗಿ ಆ ದರಿದ್ರ ಪೇಪರನ್ನೇ ಓದಿ ಹೋಗಿ" ಎಂದು ಬೆನ್ನಿನ ಮೇಲೊಂದು ಗುದ್ದಿ ನನ್ನನ್ನು ಬಲವಂತವಾಗಿ ಹೊರದಬ್ಬಿದಳು. ಹೈಸ್ಕೂಲಿನಲ್ಲಿ ನನ್ನವಳು ಖೋಖೋ ಚೆನ್ನಾಗಿ ಆಡುತ್ತಿದ್ದಳಂತೆ. ಈಗಲೂ ನನ್ನನ್ನು ಅಟ್ಟಿಸಿಕೊಂಡು ಬಂದು ಬೆನ್ನಿಗೆ ಗುದ್ದುವುದರಲ್ಲಿ ಹಿಂದೆ ಬೀಳುತ್ತಿರಲಿಲ್ಲ ಅವಳು.

೧೦ ನಿಮಿಷದಲ್ಲಿ ಉಪ್ಪಿಟ್ಟು ರೆಡಿ. ನನಗೆ ಉಪ್ಪಿಟ್ಟೆಂದರೆ ಸ್ವಲ್ಪ ಅಲರ್ಜಿ. ಆದರೆ ಇವಳಿಗೆ ಮಾತ್ರ ಉಪ್ಪಿಟ್ಟೆಂದರೆ ಪಂಚಪ್ರಾಣ. ನಿಧಾನವಾಗಿ ಉಪ್ಪಿಟ್ಟು ತಿನ್ನುತ್ತಿದ್ದವಳನ್ನು ಮತ್ತೆ ಕೆಣಕಿದೆ. "ಅಲ್ವೇ ? ಗಣೇಶ ನಿನ್ನ ಮದುವೆ ಆಗಲಿಲ್ಲ ಅಂತಾ ಬೇಜಾರಾ ನಿಂಗೆ?". ಈ ಸಲ ಅವಳು ರೆಡಿಯಾಗಿದ್ದಳು. "ಏನು ಮಾಡೋದು? ನಿಮ್ಮನಾಗಲೇ ಮದುವೆಯಾಗಿ ಬಿಟ್ಟಿದ್ದೀನಲ್ಲಾ? ಅದಲ್ದೇ ಗಣೇಶನ ಮದುವೆ ಬೇರೆ ಆಗಿ ಹೋಯ್ತು. ಇಲ್ಲದೇ ಹೋದರೆ ಟ್ರೈ ಮಾಡಬಹುದಿತ್ತು. ಛೇ.." ಎಂದು ಮುಖ ಊದಿಸಿದಳು. "ದುನಿಯಾ ಪಿಚ್ಚರಲ್ಲಿ ಲೂಸ್ ಮಾದನ ಪಾರ್ಟ್ ಮಾಡಿದ್ನಲ್ಲಾ. ಅವನೂ ಈಗ ಹೀರೋ ಅಂತೆ ಕಣೇ. ಅವನಿಗಿನ್ನೂ ಮದ್ವೆ ಆಗಿಲ್ಲ ನೋಡು. ಟ್ರೈ ಮಾಡ್ತೀಯಾ?" ನಾನು ಬಿಡಲು ತಯಾರಿರಲಿಲ್ಲ. "ಥೂ, ಅವನೂ ಒಂದು ಹೀರೋನೇನ್ರಿ ? ಮಂಗನ ತರ ಇದಾನೆ ನೋಡೋಕೆ. ಎಂತೆಂಥವ್ರೆಲ್ಲಾ ಹೀರೋ ಆಗ್ತಾರಪ್ಪಾ ಈ ಕಾಲದಲ್ಲಿ" ಎಂದು ನಿಡುಸುಯ್ದಳು. "ನಿನ್ನ ಗಣೇಶ ಇನ್ನೇನು ಸುರಸುಂದರಾಂಗನಾ? ಕುರುಚಲು ಗಡ್ಡ, ಕೆದರಿದ ಕೂದಲು, ದೇವ್ರಿಗೇ ಪ್ರೀತಿ ಅವನ ಅವತಾರ. ಒಂದು ನಾಲ್ಕು ಹಾಡು ಹಾಡಿ, ಎರಡು ಹೀರೋಯಿನ್ ಜತೆ ಕುಣಿದುಬಿಟ್ಟು, ನಾಲ್ಕು ವಿಲ್ಲನ್ನುಗಳಿಗೆ ಹೊಡೆದುಬಿಟ್ರೆ ಸಾಕು, ತಲೆ ಮೇಲೆ ಕುಳಿಸ್ಕೊತೀರಾ ನೀವುಗಳು. ಬುದ್ಧಿನೇ ಇಲ್ಲ ಹೆಣ್ಣಮಕ್ಕಳಿಗೆ" ನಾನಂದೆ. ನಾನು ಹೆಣ್ಣು ಜಾತಿಗೇ ಬೈಯ್ದಿದ್ದು ನನ್ನವಳಿಗೆ ಬಹಳ ಕೋಪ ತರಿಸಿತು ಅನ್ನಿಸುತ್ತೆ. ಮುಖ ಕೆಂಪಗೆ ಮಾಡಿಕೊಂಡು "ರೀ, ನೀವು ನನ್ನ ಗಣೇಶಂಗೆ ಮಾತ್ರಾ ಏನೂ ಹೇಳಬೇಡಿ. ಅವನು ಎಷ್ಟು ಒಳ್ಳೆಯವನು ಗೊತ್ತಾ? ಮುಂಗಾರು ಮಳೆ ಹಂಡ್ರೆಡ್ ಡೇಸ್ ಸಮಾರಂಭದಲ್ಲಿ ನನ್ನ ಹತ್ತಿರ ಎಷ್ಟು ಚೆನ್ನಾಗಿ ಮಾತಾಡ್ದಾ ಗೊತ್ತಾ? ಎಷ್ಟು ಪ್ರೀತಿ, ಎಷ್ಟು ವಿನಯ. ನೋಡೋಕ್ಕೂ ಸ್ಮಾರ್ಟ್ ಆಗಿ ಇದಾನೆ. ನಿಮಗಿಂತಾ ಸಾವಿರ ಪಾಲು ಬೆಟರ್ರು" ಅಂದವಳೇ ಉಪ್ಪಿಟ್ಟಿನ ಬಟ್ಟಲನ್ನು ಅಲ್ಲಿಯೇ ಬಿಟ್ಟು ಸಿಟ್ಟು ಮಾಡಿಕೊಂಡು ಒಳಗೆ ನಡೆದಳು. ನನಗೆ ಉಪ್ಪಿಟ್ಟು ಗಂಟಲಲ್ಲೇ ಸಿಕ್ಕಿಕೊಂಡ ಹಾಗಾಯಿತು. "ನಿನ್ನಂತಾ ಮದುವೆಯಾದ ಹುಡುಗಿಯರಿಗೇ ಈ ತರ ಹುಚ್ಚುತನ ಇದ್ರೆ, ಇನ್ನು ಮದುವೆಯಾಗದೇ ಇರೋ ಹೆಣ್ಣುಮಕ್ಕಳಿಗೆ ಇನ್ನೆಷ್ಟು ಕ್ರೇಜ್ ಇರಬೇಡಾ ? ನಿಮ್ಮಂತೋರ ಕಾಟ ತಡೆಲಿಕ್ಕಾಗದೇ, ಅವ್ನು ರಾತ್ರೋ ರಾತ್ರಿ ಮದ್ವೆಯಾಗಿದ್ದು" ಎಂದು ಕೂಗಿ ನಾನು ಬಟ್ಟಲನ್ನು ಕುಕ್ಕಿದೆ. ನನ್ನ ಅಹಂಗೂ ಸ್ವಲ್ಪ ಪೆಟ್ಟು ಬಿದ್ದಿತ್ತು.

ಸ್ನಾನ ಮುಗಿಸಿಕೊಂಡು ಬಂದರೂ, ಇವಳು ತಣ್ಣಗಾದ ಲಕ್ಷಣ ಕಾಣಲಿಲ್ಲ. ಮುಗುಮ್ಮಾಗಿ ಸೋಫ಼ಾದ ಮೇಲೆ ಕುಳಿತುಕೊಂಡೇ ಇದ್ದಳು. ಮತ್ತೆ ಮಾತಾಡಿಸಿದರೇ ಸಿಟ್ಟು ಉಲ್ಬಣಿಸಬಹುದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೆ. ನನ್ನವಳಿಗೆ ಸಿಟ್ಟು ಬರುವುದು ತುಂಬಾನೇ ಕಮ್ಮಿ. ಬಂದರೂ ಬಹಳ ಬೇಗ ಇಳಿದುಹೋಗುತ್ತಿತ್ತು. ನಾನು ನೋಡಿದವರೆಲ್ಲರಲ್ಲೂ ಅತ್ಯಂತ ಸಹನಾಮೂರ್ತಿ ಅಂದರೆ ಇವಳೇ. ಇವತ್ಯಾಕೋ ನಾನೇ ಅವಳನ್ನು ಕೆಣಕಿ ಸಿಟ್ಟು ಬರಿಸಿದ್ದೆ. ಆಫೀಸಿಗೆ ಹೊರಟು ನಿಂತರೂ ಅವಳ ಮೂಡ್ ಸರಿಯಾದ ಹಾಗೆ ಕಾಣಲಿಲ್ಲ. ದಿನವೂ ಬಾಗಿಲಿನ ತನಕ ಬಂದು ಬೈ ಹೇಳಿ ಹೋಗುತ್ತಿದ್ದವಳು, ಇವತ್ತು ಪತ್ತೆಯೇ ಇಲ್ಲ. ಲಂಚ್ ಬ್ರೇಕಿನಲ್ಲಿ ಮನೆಗೆ ಎರಡು ಸಲ ಕಾಲ್ ಮಾಡಿದೆ. ಅರ್ಧಕ್ಕೇ ಕಟ್ ಮಾಡಿದಳು. ಇದ್ಯಾಕೋ ಸ್ವಲ್ಪ ಸೀರಿಯಸ್ ಆದ ಲಕ್ಷಣ ಕಾಣಿಸಿ, ಮನಸ್ಸಿಗೆ ಸ್ವಲ್ಪ ಕಸಿವಿಸಿಯಾಯಿತು.

ಸಂಜೆ, ಸ್ವಲ್ಪ ಮುಂಚೆಯೇ ಮನೆಗೆ ಹೋದೆ. ಬಾಗಿಲು ತೆಗೆದವಳೇ, ಮುಖ ಕೂಡ ನೋಡದೇ ವಾಪಸ್ ಹೋದಳು. ನಾನು ಕೈಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಬಿಸಿ ಕಾಫಿ ರೆಡಿಯಾಗಿತ್ತು. ಅವಳಿಗಾಗಿ ಹುಡುಕಿದೆ. ಬೆಡ್ ರೂಮಿನಲ್ಲಿ ಯಾವುದೋ ಕಾದಂಬರಿ ಹಿಡಿದು ಕುಳಿತಿದ್ದಳು. ಮೆಲ್ಲಗೆ ಅವಳ ಬಳಿ ಹೋಗಿ ಕುಳಿತು ಅವಳ ಮುಖವನ್ನೇ ನೋಡತೊಡಗಿದೆ. ತಿರುಗಿ, ಕಣ್ಣು ಹುಬ್ಬಿನಲ್ಲೇ ಒಮ್ಮೆ "ಏನು?" ಎಂದು ಪ್ರಶ್ನಿಸಿದವಳು, ಮತ್ತೆ ಕಾದಂಬರಿಯಲ್ಲಿ ಮುಖ ಹುದುಗಿಸಿದಳು. ಕಾದಂಬರಿಯನ್ನು ಅವಳ ಕೈಯಿಂದ ಕಸಿದು, ಮುಖವನ್ನು ನನ್ನ ಬಳಿ ತಿರುಗಿಸಿಕೊಂಡು "ನಿನ್ನ ಕಾಫಿ ಆಯ್ತಾ?" ಎಂದು ಕೇಳಿದೆ. ತಲೆ ಅಲ್ಲಾಡಿಸಿದಳು. "ನಿನ್ನ ಹತ್ತಿರ ಮಾತಾಡಬೇಕು. ಬಾ" ಎಂದು ಅವಳನ್ನು ಹಾಲಿಗೆ ಕರೆದುಕೊಂಡು ಬಂದು ಕುರ್ಚಿಯ ಮೇಲೆ ಕುಳಿಸಿದೆ. "ನಿನಗೊಂದು ವಿಷಯ ಹೇಳಬೇಕು. ನೀನು ತಮಾಷೆ ಮಾಡಬಾರದು" ಎಂದೆ. ಅವಳೇನೂ ಮಾತಾಡಲಿಲ್ಲ. ಆದರೇ ಅವಳ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು. "ನಾನು ಎಂಜಿನೀಯರಿಂಗ್ ಮಾಡುವಾಗ, ನನಗೆ ಅನು ಪ್ರಭಾಕರ್ ಮೇಲೆ ಸಿಕ್ಕಾಪಟ್ಟೆ ಕ್ರಷ್ ಇತ್ತು, ಗೊತ್ತಾ? ಅವಳ ಎಲ್ಲಾ ಪಿಕ್ಚರ್ ಗಳನ್ನೆಲ್ಲಾ ತಪ್ಪದೇ ನೋಡುತ್ತಿದ್ದೆ. ನನ್ನ ರೂಮಿನಲ್ಲೂ ಅವಳ ಫೋಟೊಗಳನ್ನು ಅಂಟಿಸಿಕೊಂಡಿದ್ದೆ. ನಿಂಗೆ ಸಮೀರ್ ಗೊತ್ತಲ್ಲಾ, ಅವನು ಬಂದು ಅನುಪ್ರಭಾಕರಳ ಮದುವೆಯಾದ ಸುದ್ದಿ ಹೇಳಿದಾಗ ನನಗೆ ಎಷ್ಟು ಬೇಜಾರಾಗಿತ್ತು ಗೊತ್ತಾ? ತಿಂಗಳುಗಟ್ಟಲೇ ಶೇವ್ ಮಾಡದೇ ಗಡ್ಡ ಬಿಟ್ಟುಕೊಂಡು ದೇವದಾಸ್ ತರಹ ಅಲೆದುಕೊಂಡಿದ್ದೆ" ಎಂದು ಹೇಳಿ ಬೆಡ್ ರೂಮಿನಲ್ಲಿಟ್ಟಿದ್ದ ನನ್ನ ಹಳೇ ಡೈರಿಯೊಂದನ್ನು ತೆಗೆದುಕೊಂಡು ಬಂದೆ. ಅದರಲ್ಲಿ ಅನು ಪ್ರಭಾಕರ್, ಅವಳ ಗಂಡನ ಜೊತೆಯಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋ ಒಂದನ್ನು ನಾನು ಪತ್ರಿಕೆಯೊಂದರಿಂದ ಕಟ್ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ನನ್ನವಳಿಗೆ ತೋರಿಸಿ, ಮುಗ್ಧನಂತೆ ಮುಖ ಮಾಡಿ "ಈಗ ಹೇಳು, ಈ ಫೋಟೋದಲ್ಲಿರುವವನಿಗಿಂತಾ ನಾನು ಚೆನ್ನಾಗಿಲ್ವಾ? ಎಂದು ಕೇಳಿದೆ. ನನ್ನವಳ ಮುಖದಲ್ಲೆಲ್ಲಾ ಈಗ ನಗುವಿನ ಹೊನಲು. "ನಿಮ್ಮ ತಲೆ" ಎಂದವಳೇ ತಲೆಯ ಮೇಲೊಂದು ಮೊಟಕಿ, ಫೋಟೋವನ್ನು ಕಸಿದುಕೊಂಡು ಮತ್ತೆ ಡೈರಿಯೊಳಕ್ಕೆ ತುರುಕಿ, " ನೀವು ಅನು ಪ್ರಭಾಕರನನ್ನು ಮದುವೆಯಾಗ್ದೇ ಇದ್ದಿದ್ದು ಒಳ್ಳೆದೇ ಆಯಿತು ಬಿಡಿ. ಇಲ್ಲಾಂದ್ರೇ ನಿಮಗೆ ನನ್ನಷ್ಟು ಒಳ್ಳೆ ಹೆಂಡತಿ ಸಿಗುತ್ತಿರಲಿಲ್ಲ ಅಲ್ವಾ?" ಎಂದಂದು ಕಣ್ಣು ಮಿಟುಕಿಸಿದಳು. ನಾನು ಗೋಣು ಆಡಿಸಿದೆ. "ರೀ... ಒಗ್ಗರಣೆ ಹಾಕಿದ ಅವಲಕ್ಕಿ ಮಾಡಿದರೆ ತಿಂತೀರಾ ?" ಎಂದು ಸಂಧಾನ ಬೆಳೆಸಿದಳು. ಅವಳಿಗೆ ಗೊತ್ತು, ನನಗೆ ಒಗ್ಗರಣೆ ಹಾಕಿದ ಅವಲಕ್ಕಿ ಅಂದರೆ ಬಹಳ ಪ್ರೀತಿಯೆಂದು. ಅವಳು ಯಾವಾಗ ಮಾಡ್ತೀನೇಂದ್ರೂ ನಾನು ಅದನ್ನು ನಿರಾಕರಿಸುತ್ತಿರಲಿಲ್ಲ.

ರಾತ್ರಿ ಊಟ ಮಾಡುತ್ತಿರುವಾಗ ಏನೋ ನೆನಪಾದಂತೆ "ಅಲ್ಲಾರೀ, ಅದು ಹೇಗೆ ನಿಮಗೆ ಅನು ಪ್ರಭಾಕರ ಹಿಡಿಸಿದ್ಳು ?ಈಗ ಅದ್ಯಾವುದೋ ಝೀ ಟೀವಿ ಸೀರಿಯಲ್ಲಲ್ಲಿ ಬರ್ತಾಳಲ್ಲಾ. ನನಗಂತೂ ಅವಳು ಸಿಕ್ಕಾಪಟ್ಟೆ ಓವರ್ ಆಕ್ಟಿಂಗ್ ಮಾಡ್ತಾಳೆ ಅನ್ನಿಸುತಪ್ಪಾ. ನೋಡೋಕೆ ಬೇರೆ ಗಂಡುಬೀರಿ ತರ ಕಾಣ್ತಾಳೆ" ಎಂದಳು. ನಾನು ತಣ್ಣಗೆ "ನಿನ್ನ ಗಣೇಶ್ ಮತ್ತಿನ್ಯೇನು? ಅವಂದೂ ಓವರ್ ಆಕ್ಟಿಂಗ್ ಅಲ್ವಾ ?ಎಂದೆ. ನನ್ನನ್ನೊಮ್ಮೆ ದುರುಗುಟ್ಟಿದವಳು ಮರುಕ್ಷಣದಲ್ಲೇ ನಾನು ನಗುತ್ತಿದ್ದದ್ದನ್ನು ನೋಡಿ, ತಾನೂ ನಕ್ಕಳು. ಪುಣ್ಕಕ್ಕೆ ನಾನು ಅವಳ ಎದುರು ಕುಳಿತಿದ್ದೆ. ಅವಳ ಪಕ್ಕದಲ್ಲೇನಾದ್ರೂ ಕುಳಿತಿದ್ದರೆ ಬೆನ್ನ ಮೇಲೆ ಒಂದು ಗುದ್ದು ಖಂಡಿತ ಬೀಳುತ್ತಿತ್ತು. "ರೀ..,ಕೇಳೋಕೆ ಮರೆತೋಯ್ತು. ಮುಂದಿನ ತಿಂಗಳು ಗಣೇಶ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಕೊತಾನಂತೆ.ನಾವೂ ಹೋಗೋಣ್ವಾ ?" ಎಂದು ಮುಖ ನೋಡಿದಳು. ನಾನು ನಿರುತ್ತರನಾದೆ.

15 comments:

ತೇಜಸ್ವಿನಿ ಹೆಗಡೆ said...

ಪರವಾಗಿಲ್ಲೆ ಮಧು ಅಮೇರಿಕದಿಂದ ಬಂದ ಮೇಲೇ ನಿನ್ನ ಹುಡುಗಿನ ರಾಶಿನೇ ತಯಾರು ಮಾಡಿದ್ದೆ. ನೋಡಲೇ(ಓದಲೇ) ಚೊಲೋ ಇದ್ದು ನಿನ್ನ ಹುಡುಗಿ;-)ಅಂದಹಾಗೆ ಕಡೆಗೆ ರೆಸೆಪ್ಷನ್ ಗೆ ಹೋದ್ರೋ ಇಲ್ಲೋ?

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
ತುಂಬ ಚೆನ್ನಾಗಿ ಬರೆದಿದ್ದೀಯ. ಇಷ್ಟವಾಯ್ತು. ಅತಿ ನೈಜವಾದ ಸಂಭಾಷಣೆ ಮುದನೀಡಿತು.

Unknown said...

ತೇಜಕ್ಕಾ,
ರಿಸೆಪ್ಶನ್ ಗೆ ಹೋಗವೇ ಮಾರಾಯ್ತಿ. ಇಲ್ಲ್ದರೆ ಎಲ್ಲಿ ಬಿಡ್ತು ಇದು?
ಶಾನ್ತಲಕ್ಕ,
ಧನ್ಯವಾದಗಳು

Pramod P T said...

"ನನ್ನ ಅತ್ತೆಯ ಮೂರು ಹೆಣ್ಣು ಮಕ್ಕಳಲ್ಲಿ,..... .....ಚಲನವಲನಗಳಲ್ಲೂಅದೇನೋ ಮೋಹಕತೆ".

ಈ ಪ್ಯಾರನ ಮತ್ತೆ ಮತ್ತೆ ಓದಬೇಕೆನಿಸುತ್ತದೆ..
ಅದೇಷ್ಟು ಅಧ್ಬುತವಾಗಿ ವರ್ಣಿಸಿದ್ದೀರಾ!

sunaath said...

ಲೇಖನ ವಿನೋದಮಯವಾಗಿದೆ. ಮನಸ್ಸಿಗೆ ಮುದ ಕೊಟ್ಟಿತು.

Unknown said...

ಪ್ರಮೋದ್,
ಧನ್ಯವಾದಗಳು. ನನಗೂ ಆ ಪ್ಯಾರಾ ತುಂಬಾ ಹಿಡಿಸ್ತು :-).
ಸುನಾಥರವರೇ,
ಬ್ಲಾಗಿಗೆ ಸ್ವಾಗತ. ಬಹಳ ಸಂತೋಷವಾಯಿತು ನಿಮಗೆ ಲೇಖನ ಹಿಡಿಸಿದ್ದು. ನಿಮ್ಮ ಬೇಂದ್ರೆಯವರ ಮೇಲಿನ ಲೇಖನ ತುಂಬಾ ಚೆನ್ನಾಗಿದೆ.
ಹೀಗೆ ಬರೆಯುತ್ತಾ ಇರಿ. ಇಲ್ಲಿಗೂ ಬರುತ್ತ ಇರಿ.

ಸುಧನ್ವಾ ದೇರಾಜೆ. said...

ಹೇ ಮಧು, ಆರ್ಕುಟ್‌ನಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದೆ ! ಈ ಬ್ಲಾಗ್ ಶುರುವಾಗಿದ್ದೇ ಗೊತ್ತಾಗಿರಲಿಲ್ಲ. ಇನ್ನು ಬರ್‍ತಾ ಇರ್‍ತೀನಿ ಹುಷಾರು !

Unknown said...

ಸುಧನ್ವರವರೇ,
ತುಂಬಾ ಸಂತೋಷ ನೀವು ಬ್ಲಾಗು ನೋಡಿದ್ದು. ಬರ್ತಾ ಇರಿ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಯಾವಾಗಲು ಇರಬೇಕು.

ವಿ.ರಾ.ಹೆ. said...

ನಮಸ್ತೇ ಮಧು,
ನಿಮ್ಮ ಬ್ಲಾಗ್ ಓದಿದೆ. ನಿಮ್ಮ ಕಥೆಗಳು ಸೂಪರ್. ನೈಜವಾಗಿ ಮೂಡಿರುತ್ತವೆ. ಚೆನ್ನಾಗಿ ಓದಿಸಿಕೊಂಡು ಹೋಗುತ್ತವೆ. ’ಗಣೇಶನ ಮದುವೆ’ ಮತ್ತು ’ನೀನಿಲ್ಲದ ಬಾಳು..’ ಕಥೆಗಳು ಬಹಳ ಇಷ್ಟ ಆಯ್ತು. ಹೀಗೆ ಬರೀತಾ ಇರಿ...thank you.

Unknown said...

ಪ್ರೋತ್ಸಾಹಕ್ಕೆ ಥಾಂಕ್ಸ್ ವಿಕಾಸ್. ಬರ್ತಾ ಇರಿ.

sritri said...

"ದುನಿಯಾ ಪಿಚ್ಚರಲ್ಲಿ ಲೂಸ್ ಮಾದನ ಪಾರ್ಟ್ ಮಾಡಿದ್ನಲ್ಲಾ. ಅವನೂ ಈಗ ಹೀರೋ ಅಂತೆ ಕಣೇ. ಅವನಿಗಿನ್ನೂ ಮದ್ವೆ ಆಗಿಲ್ಲ ನೋಡು. ಟ್ರೈ ಮಾಡ್ತೀಯಾ?"

- ತುಂಬಾ ತಮಾಷೆ, ನಗು ಬಂತು. ಇದೇ ತರದ ಇನ್ನೂ ಕೆಲವು ಹೀರೋಗಳು ಇದ್ದಾರೆ. ಪಟ್ಟಿ ಬೇಕಿದ್ರೆ ನನ್ನ ಕೇಳಿ :)

Mahalingesh said...

Sakattagide,

ಹೈಸ್ಕೂಲಿನಲ್ಲಿ ನನ್ನವಳು ಖೋಖೋ ಚೆನ್ನಾಗಿ ಆಡುತ್ತಿದ್ದಳಂತೆ... tumba sogasagide

mattondu
"ಓ ಅವನಿಗಾ?" ನಾನು ಸಮಾಧಾನ ಪಟ್ಟೆ.

Hmmm, great going Madhu...

Unknown said...

ತ್ರಿವೇಣಿಯವರೇ,

ನಿಜ ನೀವು ಹೇಳಿದ್ದು. ನನ್ನ ಮನಸ್ಸಿನಲ್ಲೂ ಹಲವು ಹೀರೋಗಳು ಇದ್ದರು. ಆದರೆ ಮದುವೆಯಾಗದೇ ಇದ್ದವರು ಯಾರೂ ನೆನಪಿಗೆ ಬರಲಿಲ್ಲ. ಆಷ್ಟರಲ್ಲಿ ಲೂಸ್ ಮಾದ ನೆನಪಿಗೆ ಬಂದ. ಪ್ರತಿಕ್ರಿಯೆಗೆ ಧನ್ಯವಾದಗಳು.

ದಡ್ಡಿ,
ಥಾಂಕ್ಸ್ ಕಣೋ. ಬರ್ತಾ ಇರು.

~ಮಧು

Jesh Bhat said...

Hi Madhu,
This is too good, I read it 3 times. Naration is awesome.

Unknown said...

thanks bhatta. bartaa iru