Tuesday, January 29, 2008

ಶ್ವಾನಪುರಾಣ

ದೇರಾಜೆಯವರ ಬ್ಲಾಗಲ್ಲಿ "ಮುಮ್ಮಡಿ ಟಾಮಿಯ ಸ್ಮರಣೆ’ ಲೇಖನ ನೋಡಿದಾಗ ಯಾಕೋ ನಮ್ಮನೆ "ಗ್ರೇಸಿ" ಯ ಬಗ್ಗೆ ಬರೆಯದೇ ಇರಲು ಆಗಲಿಲ್ಲ ನನಗೆ.

ಪೂರ್ಣಚಂದ್ರ ತೇಜಸ್ವಿಯವರು ಎಲ್ಲೋ ಹೇಳಿದ್ದ ನೆನಪು " ಮಲೆನಾಡಿನ ಗಂಡಸರಿಗೆಲ್ಲಾ ನಾಯಿ ಸಾಕೋದು ಒಂದು ತರ ತೆವಲು" ಅಂತ. ಬಹಳಷ್ಟು ಸಲ ಅದು ನಿಜ ಅನ್ನಿಸಿದ್ದಿದೆ. ಆದರೆ ನಾನು ಇದ್ದ ಪರಿಸರದಲ್ಲಿ, ಅರ್ಧ ಕಿಲೋಮೀಟರ್ ಸುತ್ತಳತೆಯಲ್ಲಿ ಒಂಟಿಭೂತದ ತರ ನಿಂತ ನಮ್ಮನೆಗೆ ನಾಯಿ ಅತ್ಯವಶ್ಯಕವಾಗಿತ್ತು. ದೊಡ್ಡ ಮನೆಯ ಯಾವುದೋ ಕೋಣೆಯಲ್ಲೋ, ಹಿತ್ತಿಲಿನ ತುದಿಯಲ್ಲೋ ಇರುತ್ತಿದ್ದ ನಮ್ಮನ್ನು, ಮನೆಗೆ ಯಾರು ಬಂದರೂ ಎಚ್ಚರಿಸಲು, ಅಗಾಗ ತೆಂಗಿನಕಾಯಿ ಕದಿಯಲು ಬರುತ್ತಿದ್ದ ಕಳ್ಳರನ್ನು ಓಡಿಸಲು ನಾಯಿಗಳು ತುಂಬಾ ಸಹಾಯಕವಾಗಿದ್ದವು. ಈ ಹಲವಾರು ವರ್ಷಗಳಲ್ಲಿ ನಮ್ಮ ಮನೆಯಲ್ಲಿ ಇದ್ದು ಸತ್ತುಹೋದ ನಾಯಿಗಳನ್ನು ನೆನಪಿಸಿಕೊಂಡರೆ, ಬರೆದಷ್ಟೂ ಸಾಲುವುದಿಲ್ಲ.

ಹೊಸ ಜಾಗದಲ್ಲಿ ಮನೆ ಕಟ್ಟಿ ವರುಷವಾಗುವುದರೊಳಗೇ, ಮುಂಡಿಗೇಸರದವರ ಗದ್ದೆ ಕಾಯಲು ಬರುತ್ತಿದ್ದ ಗೌಡ ಎಲ್ಲಿಂದಲೋ ತಂದುಕೊಂಡಿದ್ದ ಕೆಂಪು ನಾಯಿ, ನಾವು ಕೊಡುವ ದೋಸೆಯ ಆಸೆಗೆ ಮೊದ ಮೊದಲು ಬಂದು ಹೋಗಿ ಮಾಡುತ್ತಿದ್ದದ್ದು, ಕ್ರಮಕ್ರಮೇಣ ಪೂರ್ತಿಯಾಗಿ ನಮ್ಮ ಮನೆಯಲ್ಲೇ ಠಿಕಾಣಿ ಹೂಡಿ ಬಿಡ್ತು. ಅಪ್ಪ ಅದಕ್ಕೆ ಹೆಸರೇನಂದು ಇಡಲು ತೋಚದೇ "ಶ್ವಾನಪ್ಪಾ" ಅಂತ ಕರೀತಿದ್ರು. ನಮ್ಮ ಮನೆಯ ಕಾವಲು ಕಾಯ್ದ ಮೊದಲ ನಾಯಿ ಅದು. ಆಗ ನಾನು, ಅಕ್ಕ ತುಂಬ ಚಿಕ್ಕವರಿದ್ದೆವು. ಅಮ್ಮ ನಮಗೆ ಕೊಟ್ಟ ದೋಸೆಯಲ್ಲಿ ಅರ್ಧ ಶ್ವಾನಪ್ಪನಿಗೆ ಕೊಟ್ಟು ನಾವು ಕೃತಾರ್ಥರಾಗುತ್ತಿದ್ದೆವು. ವರ್ಷಗಟ್ಟಳೇ ಅಲ್ಲೇ ಒಡಾಡಿಕೊಂಡು ಇದ್ದ ಶ್ವಾನಪ್ಪ ಒಂದು ದಿನ ಮಾತ್ರ ನಾಪತ್ತೆ. ಅದಕ್ಕೆ ಏನು ಆಯಿತೆಂಬುದು ನಮಗೆ ಗೊತ್ತೇ ಆಗಲಿಲ್ಲ. ನನಗೆ, ಅಕ್ಕನಿಗೆ ಸ್ವಲ್ಪ ನಿರಾಶೆಯಾದರೂ, ಅಪ್ಪ ಇನ್ನೊಂದು ನಾಯಿಮರಿ ತಗೊಂಡುಬಂದರಾಯ್ತು ಅಂತ ಸಮಾಧಾನ ಮಾಡಿದಾಗ ಖುಶಿಯಾಗಿತ್ತು.

ವಾರದೊಳಗೇ ಅಪ್ಪ ಹೀಪನಳ್ಳಿ ಈರನ ಮನೆಯಿಂದ ೨ ತಿಂಗಳ ಕಪ್ಪು ಮೈಯ, ಬಿಳಿ ಬಿಳಿ ಚುಕ್ಕಿಯಿದ್ದ ನಾಯಿಮರಿಯನ್ನು ತಂದರು. ನಾವು ಅಧಿಕೃತವಾಗಿ "ರಾಜು" ಅಂತ ನಾಯಿಮರಿಗೆ ನಾಮಕರಣ ಮಾಡಿದೆವು. ಕಂತ್ರಿನಾಯಿಯಾಗಿದ್ದರೂ ರಾಜು ಬಹಳ ಚುರುಕಾಗಿತ್ತು. ಆದರೆ ಬೆಳೆದಂತೆಲ್ಲಾ ಅದರ ನಿಯತ್ತು ಸ್ವಲ್ಪ ಕಮ್ಮಿ ಎಂದು ತಿಳಿದುಕೊಳ್ಳಲು ಅಪ್ಪ ಅಮ್ಮನಿಗೆ ಬಹಳ ದಿನ ಬೇಕಾಗಲಿಲ್ಲ. ಕಟ್ಟಿ ಹಾಕಿದ ಸರಪಳಿಯನ್ನು ಎಳೆದೂ ಎಳೆದು ಗಂಟು ಮಾಡಿ ಸಿಕ್ಕಾಪಟ್ಟೆ ಗಲಾಟೆ ಎಬ್ಬಿಸುತ್ತಿದ್ದ ಅದು, ಅದರ ಕಾಟ ತಡೆಯಲಾಗದೇ ಅಮ್ಮ ಸರಪಳಿ ಬಿಚ್ಚಿದ ಕೂಡಲೇ, ನಾಗಾಲೋಟದಲ್ಲಿ ಒಡಿ ಪರಾರಿಯಾಗುತ್ತಿತ್ತು. ಅಗಾಗ ಸಿಗುತ್ತಿದ್ದ ದೋಸೆಯ ಆಸೆಗೆ ಅದು ಶಂಕರಣ್ಣನ ಮನೆಗೆ ಹೋಗುತ್ತಿದೆ ಅಂದು ತಿಳಿದುಕೊಳ್ಳಲು ಬಹಳ ಕಷ್ಟವಾಗಲಿಲ್ಲ . ನಾವು ಶಾಲೆಗೆ ಹೋಗುವ ದಾರಿಯಲ್ಲೇ ಶಂಕರಣ್ಣನ ಮನೆ ಇರುತ್ತಿದ್ದರಿಂದ, ನಮ್ಮನ್ನು ಕಂಡ ಕೂಡಲೆ ರಾಜು, ಬಾಲ ಆಡಿಸಿಕೊಂಡು ಬರುತ್ತಿತ್ತು. ರಾತ್ರಿಯೇನಾದರೂ ಕಟ್ಟಿ ಹಾಕಿದರೆ, ಇಡೀ ರಾತ್ರಿ ತಾರಕ ಸ್ವರದಲ್ಲಿ ಊಳಿಟ್ಟು, ನಮ್ಮ ನಿದ್ದೆಯನ್ನೆಲ್ಲ ಹಾಳುಮಾಡುತ್ತಿದ್ದ ರಾಜುವಿನ ಬಗ್ಗೆ ನಮಗೆ ಅಷ್ಟೊಂದೇನೂ ಪ್ರೀತಿ ಉಳಿದಿರಲಿಲ್ಲ. ಎರಡು ಹೊತ್ತಿನ ಊಟದ ಹೊತ್ತಿಗೆ ಮಾತ್ರ, ಮನೆಗೆ ತಪ್ಪದೇ ಹಾಜರಾಗಿ ಎನಾದ್ರೂ ತಿನ್ನಲು ಸಿಗುತ್ತದೆಯೋ ಎಂದು ಕಾಯುತ್ತಿದ್ದ ರಾಜುವನ್ನು ನಂಬಿ ಒಂಟಿ ಮನೆಯಲ್ಲಿ ಇರಲು ಅಮ್ಮ ಸುತಾರಂ ಒಪ್ಪಲಿಲ್ಲ. ಇದೇ ಸಮಯದಲ್ಲಿ ಊರಲ್ಲಿ ಒಂದೆರಡು ಕಳ್ಳತನದ ಘಟನೆಗಳೂ ಹೆಚ್ಚಿದ್ದರಿಂದ, ಅಮ್ಮ ಸಹಜವಾಗಿ ಇನ್ನೊಂದು ನಾಯಿ ತರಲು ಅಪ್ಪನ ಮೇಲೆ ಒತ್ತಡ ತರತೊಡಗಿದರು.

ಮುಂದೆ ಸುಮಾರು ೪ ವರ್ಷಗಳ ಕಾಲ, ನಮ್ಮ ಮನೆಯಲ್ಲಿ ತಂದ ಯಾವುದೇ ನಾಯಿಗಳು ಬಹಳ ದಿನ ಬಾಳಲಿಲ್ಲ. ಒಂದೆರಡು ಒಳ್ಳೇ ಜಾತಿಯ ನಾಯಿಮರಿಗಳನ್ನು ಅಪ್ಪ ಕಷ್ಟಪಟ್ಟು ಹುಡುಕಿ ತಂದರೂ, ಆಗಾಗ ಮನೆಗೆ ಬರುತ್ತಿದ್ದ ರಾಜು ಅವುಗಳನ್ನ ಕಚ್ಚಿ ಸಾಯಿಸಿಬಿಡುತ್ತಿತ್ತು. ಕೆಲವು ನಾಯಿಗಳು ಮನೆಯ ಹತ್ತಿರವೇ ಇದ್ದ ರಸ್ತೆಯಲ್ಲಿ, ಬಸ್ಸುಗಳ ಅಡಿಗೆ ಸಿಲುಕಿ ಸತ್ತು ಹೋದವು. ಇನ್ನೂ ಕೆಲವು ಉಣುಗುಗಳ ಕಾಟ ತಡೆಯಲಾರದೇ ಸತ್ತು ಹೋದವು. ನನಗಂತೂ ಹೀಗೆ ಸತ್ತ ನಾಯಿಮರಿಗಳ ಲೆಕ್ಕವೇ ಈಗ ಸಿಗುತ್ತಿಲ್ಲ. ಟಾಮಿ, ಜೂಲಿ, ಪಿಂಕಿ, ಪಾಂಡು, ಟೈಗರ್‍, ಪಕ್ಕಿ, ಅಬ್ಬಬ್ಬಾ ಎಷ್ಟೊಂದಿವೆ!.

ಚಿಕ್ಕವನಿದ್ದಾಗ ನಮ್ಮ ಆಟದ ಬಹಳಷ್ಟು ಭಾಗ ಈ ನಾಯಿಗಳೊಂದಿಗೇ ಕಳೆಯುತ್ತಿತ್ತು. ಸ್ವಲ್ಪ ತುಂಟನಾಗಿದ್ದ ನಾನು ಅವುಗಳ ಕಿವಿ ಹಿಡಿದು ಎಳೆದೋ, ಬಾಲ ಹಿಡಿದು ಎಳೆದೋ ತೊಂದರೆ ಕೊಡುತ್ತಿದ್ದೆ. ಹಾಗಾಗಿ ಬಹಳಷ್ಟು ಸಲ ಅವುಗಳಿಂದ ಕಚ್ಚಿಸಿಕೊಂಡಿದ್ದೂ ಇದೆ. ಅವು ಕಚ್ಚಿದನ್ನು ಅಮ್ಮನಿಂದ ಸಾಧ್ಯವಾದಷ್ಟು ಮುಚ್ಚಿಡುತ್ತಿದ್ದೆ. ಆದರೂ ಸ್ನಾನ ಮಾಡಿಸುವಾಗ, ತಲೆ ಬಾಚುತ್ತಿರುವಾಗ ಅಮ್ಮನ ಕಣ್ಣಿಗೆ ಗಾಯಗಳು ಬಿದ್ದೇ ಬೀಳುತ್ತಿದ್ದವು. ನಾಯಿಗಳ ತಂಟೆಗೇ ಹೋಗಬೇಡ ಎಂದು ಪದೇ ಪದೇ ಎಚ್ಚರಿಸುತ್ತಿದ ಅಮ್ಮ, ಅವಾಗೆಲ್ಲ ಮಾತು ಕೇಳದ ನನಗೇ ಚೆನ್ನಾಗಿ ಬೈಯುತ್ತಿದ್ದರು. ನಾಯಿ ಕಚ್ಚಿದ್ದ ಗಾಯದ ಜೊತೆ, ಅಮ್ಮನ ಬೈಗುಳದ ಅವಮಾನವೂ ಸೇರಿ ನನ್ನ ದುಃಖವನ್ನು ಹೆಚ್ಚು ಮಾಡುತ್ತಿದ್ದವು. ಸರಿ, ಅಮ್ಮ ಸಂಜೆಗೆ ವಿನಾಯಕ ಡಾಕ್ಟರ್‍ ಮನೆಗೆ ಕರೆದುಕೊಂಡು ಹೋಗಿ ಒಂದು ಟೆಟಾನಸ್ ಇಂಜೆಕ್ಶನ್ ಹಾಕಿಸಿಕೊಂಡು ಬಂದರೆ, ಅಲ್ಲಿಗೆ ಒಂದು ಅಧ್ಯಾಯ ಸಮಾಪ್ತಿ. ಹೀಗೆ ಸುಮಾರು ೭ ರಿಂದ ೮ ಇಂಜೆಕ್ಶನ್ ತೆಗೆದುಕೊಂಡಿರಬಹುದು ಅಂತ ನೆನಪು ನನಗೆ. ಇಷ್ಟೆಲ್ಲಾ ಆದರೂ, ಅವುಗಳ ಜೊತೆ ಆಡುವುದನ್ನು ಮಾತ್ರಾ ನಾನು ನಿಲ್ಲಿಸುತ್ತಿರಲಿಲ್ಲ. ನಾಯಿ ಮರಿಗಳ ಜೊತೆ ಒಡನಾಡಿದ ಯಾರಿಗೂ, ಅವುಗಳ ಈ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ನಾನು ಐದನೇ ತರಗತಿಯಲ್ಲಿದ್ದಾಗ, ಅಪರೂಪಕ್ಕೆ ಮನೆಯಲ್ಲೇ ನಿದ್ರಿಸುತ್ತಿದ್ದ ರಾಜುವನ್ನು, ಕಿರುಬ ಕಚ್ಚಿಕೊಂಡು ಹೋದಮೇಲೆ ಎರಡು ವರುಷ ನಮ್ಮನೆಯಲ್ಲಿ ನಾಯಿಗಳೇ ಇರಲಿಲ್ಲ. ಎರಡು ವರ್ಷಗಳ ನಂತರ, "ಊರತೋಟ"ಕ್ಕೆ ಹೋಗಿದ್ದ ಅಪ್ಪ, ಹುಟ್ಟಿ ಇನ್ನೂ ೨೦ ದಿನಗಳಾಗಿದ್ದ ಜರ್ಮನ್ ಶೆಪರ್ಡ್ ಜಾತಿಯ ಹೆಣ್ಣು ಮರಿಯೊಂದನ್ನು ಮೆಚ್ಚಿ ತೆಗೆದುಕೊಂಡು ಬಂದಿದ್ದರು. ಅದೇ "ಗ್ರೇಸಿ".

"ಗ್ರೇಸಿ"ಗೆ ಆ ಹೆಸರು ಹೇಗೆ ಬಂತೆನ್ನುವುದೇ ಒಂದು ಸಣ್ಣ ಕಥೆ. ಬಹುಷಃ ೧೯೯೬-೧೯೯೭ ನೇ ವರ್ಷವಿರಬೇಕು (ಯಾವ ವರ್ಷ ಅಂತ ಈಗ ಸರಿಯಾಗಿ ನೆನಪಿಲ್ಲ), ಈ ಪುಟ್ಟ ನಾಯಿ ನಮ್ಮ ಮನೆಗೆ ಬಂದಾಗ. ಆ ವರ್ಷ ಬೆಂಗಳೂರಿನಲ್ಲಿ ವಿಶ್ವಸುಂದರಿ ಸ್ಪರ್ಧೆ ನಡೀತಿತ್ತು. ಮಾಧ್ಯಮಗಳಲ್ಲಿ ಅದು ಆಗ ಪ್ರಮುಖ ಸುದ್ದಿಯಾಗಿತ್ತು. ಆ ಸ್ಪರ್ಧೆಯಲ್ಲಿ "ಮಿಸ್ ಗ್ರೀಸ್" ವಿಶ್ವಸುಂದರಿಯಾಗಿದ್ದಳು. ಜೂಲಿ, ಪಿಂಕಿ ಮುಂತಾದ ಹಳೇ ಹೆಸರುಗಳಿಂದ ಬೇಸತ್ತಿದ್ದ ನಮ್ಮಿಬ್ಬರಿಗೆ ಅಪ್ಪ "ಮಿಸ್ ಗ್ರೀಸ್" ಳ ನೆನಪಿಗೂ, ನಾಯಿ ಮರಿಯ ಕಲರ್ "ಗ್ರೇ" ಆದ್ದರಿಂದಲೂ, ಮರಿ "ಅಗ್ರೇಸ್ಸಿವ್" ಆಗಿ ಬೆಳೆಯಲೆಂದೂ "ಗ್ರೇಸಿ" ಎಂಬ ಹೆಸರನ್ನು ಸೂಚಿಸಿದ ಕೂಡಲೇ ಒಪ್ಪಿಗೆಯಾಯಿತು. ಅಮ್ಮನಿಗೆ ಯಾಕೋ ಆ ಹೆಸರು ಇಷ್ಟವಾದ ಹಾಗೆ ಕಾಣಲಿಲ್ಲ. ಆದರೂ ಬಹುಮತ ನಮ್ಮದೇ ಇದ್ದದ್ದರಿಂದ ಅಮ್ಮ ಸುಮ್ಮನಾಗಬೇಕಾಯಿತು.

ಈ ಹೊತ್ತಿಗೆ ಸುಮಾರು ನಾಯಿ ಸಾಕಿದ ಅನುಭವವಿದ್ದ ನಾವು, ಗ್ರೇಸಿ ಯನ್ನು ಬಹಳ ಜೋಪಾನವಾಗಿ ಸಾಕಿದೆವು. ಅಪ್ಪ ಅದಕ್ಕೆಂದೇ ಸ್ಪೆಶಲ್ ಆಗಿ ಕಬ್ಬಿಣದ ಪಂಜರವನ್ನು ಮಾಡಿಸಿದರು. ವಾರಕ್ಕೊಮ್ಮೆ ನಿಲೇಕಣಿ ಸದೂನ ಅಂಗಡಿಯಿಂದ ಮೊಟ್ಟೆ ಕೂಡ ತರುತ್ತಿದ್ದರು. ವರ್ಷದೊಳಗೆ ಗ್ರೇಸಿ ನಮ್ಮ ಅಳತೆ ಮೀರಿ ಬೆಳೆದು ನಿಂತುಬಿಟ್ಟಿತ್ತು. ನಾವೆಲ್ಲ ಹೊರಗಿನಿಂದ ಮನೆಗೆ ಬಂದ ಕೂಡಲೇ ನಮ್ಮ ಎದೆಗೆ ಕಾಲು ಕೊಟ್ಟು ನಿಂತು ಪ್ರೀತಿ ತೋರಿಸುತ್ತಿತ್ತು. ಕಂತ್ರಿ ನಾಯಿಗಳಿಗೆ ಹೋಲಿಸಿದರೆ ಗ್ರೇಸಿಗೆ ಧೈರ್ಯ ಸ್ವಲ್ಪ ಕಮ್ಮಿನೆ ಇದ್ದರೂ, ನಾವು ಹೇಳಿದ ಮಾತುಗಳೆಲ್ಲವೂ ಅದಕ್ಕೆ ಅರ್ಥವಾಗುತ್ತಿದ್ದವು. ಒಂಟಿ ಮನೆಯಾಗಿದ್ದರಿಂದ ಹತ್ತಿರದಲ್ಲಿ ನನಗೆ ಯಾರೂ ಆಡಲು ಗೆಳೆಯರು ಇರುತ್ತಿರಲಿಲ್ಲ. ಆದರೆ ಅದರ ಕೊರತೆ ನನಗೆ ಗ್ರೇಸಿ ಇದ್ದಷ್ಟು ದಿನವೂ ಅನ್ನಿಸಲಿಲ್ಲ. ದಿನವೂ ಸಂಜೆ ಗ್ರೇಸಿಯ ಜೊತೆ ಒಂದು ತಾಸಿನಷ್ಟು ಕುಣಿದು, ಕುಪ್ಪಳಿಸಿ, ಅದರ ಗೋಳು ಹೊಯ್ದುಕೊಳ್ಳದೇ ಇದ್ದರೆ ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅದ್ಯಾಕೋ ಗೊತ್ತಿಲ್ಲ, ಗ್ರೇಸಿಗೆ ನನ್ನ ಮೇಲೆ ಬಹಳ ನಂಬಿಕೆಯಿತ್ತು. ಅದಕ್ಕೆ ಗಾಯ ಆದಾಗ, ಅಥವಾ ಇನ್ಯಾವುದೇ ಉಪಚಾರ ಮಾಡಿಸಿಕೊಳ್ಳಬೇಕಾದಾಗ ಮನೆಯ ಯಾರಿಗೂ ಅವಕಾಶ ಕೊಡದಿದ್ದ ಅದು, ಕೇವಲ ನಾನು ಹೋದರೆ ಮಾತ್ರಾ ಸುಮ್ಮನೆ ಕುಳಿತು, ಮಾತು ಕೇಳುತ್ತಿತ್ತು. ಎಷ್ಟೋ ಸಲ ಅದಕ್ಕೆ ಸಿಟ್ಟು ಬಂದಾಗ ಮೆಲ್ಲಗೆ ಕೈಯನ್ನು ಕಚ್ಚುತ್ತಿತ್ತೇ ವಿನಹ ಒಂದು ದಿನವೂ ರಕ್ತ ಬರುವಷ್ಟು, ನೋವಾಗುವಂತೆ ಕಚ್ಚುತ್ತಿರಲಿಲ್ಲ. ಪಂಜರದಿಂದ ಹೊರಗೆ ಬಂದಾಗಲೂ ಕೂಡ ಮನೆ ಸುತ್ತ ತಿರುಗುತ್ತಾ ಇರುತ್ತಿತ್ತೇ ಹೊರತು ಮನೆ ಆಚೆ ಕಾಲಿಡುತ್ತಿರಲ್ಲಿಲ್ಲ.

ಜಾತಿ ನಾಯಿಗಳನ್ನು ಸಾಕುವುದು, ಸಾಮಾನ್ಯ ನಾಯಿಗಳನ್ನು ಸಾಕುವುದಕ್ಕಿಂತ ಸ್ವಲ್ಪ ಕಷ್ಟ. ಅವು ಸ್ವಲ್ಪ ’ಡೆಲಿಕೇಟ್’ ಪ್ರಾಣಿಗಳು. ಆಹಾರದಲ್ಲಿ ಸ್ವಲ್ಪವೇ ಹೆಚ್ಚು ಕಮ್ಮಿಯಾದರೂ ಮಾರನೆಯ ದಿನ ಅವುಗಳ ಆರೋಗ್ಯ ಹಾಳಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ಆಶ್ಚರ್ಯವೆಂಬಂತೆ ಗ್ರೇಸಿ ಏನು ಕೊಟ್ಟರೂ ತಿಂದುಕೊಂಡು ಗಟ್ಟಿಮುಟ್ಟಾಗಿತ್ತು. ನಾನು ನೋಡಿರೋ ಪ್ರಕಾರ ನಾಯಿಗಳು ಬಾಳೆಹಣ್ಣು, ದ್ರಾಕ್ಷಿ ಹಣ್ಣು ಮುಂತಾದ ಜಾಸ್ತಿ ಸುವಾಸನೆ ಬರದ ತಿಂಡಿಗಳನ್ನು ತಿನ್ನುವುದಿಲ್ಲ (ನನ್ನ ಅನುಭವದ ಪ್ರಕಾರ). ಆದರೆ ಗ್ರೇಸಿ ಮಾತ್ರ ಯಾವುದೇ ಭೇದಭಾವ ತೋರದೆ, ಏನು ಸಿಕ್ಕಿದರೂ ತಿಂದು ಅರಗಿಸಿಕೊಂಡಿತ್ತು. ಮನೆಯ ಹಿಂಭಾಗದಲ್ಲಿರುವ ಗೇರು ಗಿಡಗಳಲ್ಲಿ ಹಣ್ಣು ಬಿಟ್ಟಾಗ, ಮರವನ್ನೇ ಹತ್ತಿ ಹಣ್ಣು ತಿನ್ನುವಷ್ಟು ಧಾರ್ಷ್ಯವನ್ನೂ ತೋರಿಸುತ್ತಿತ್ತು.

ಇಂಜಿನೀಯರಿಂಗ್ ಮಾಡಲು ಬೆಳಗಾವಿಗೆ ಹೋದ ಮೇಲೆ, ನನಗೆ ಗ್ರೇಸಿಯ ಸಹವಾಸ ತಪ್ಪಿಹೋಯಿತು. ಆದ್ರೂ ಸೆಮೆಸ್ಟರ್ ರಜೆಯಲ್ಲಿ ಊರಿಗೆ ಬಂದಾಗ ಸಾಧ್ಯವಾದಷ್ಟು ದಿನ ಅದರ ಜೊತೆ ಆಡಿಕೊಂಡಿರುತ್ತಿದ್ದೆ. ಗ್ರೇಸಿಗೆ ಈಗ ಮೊದಲಿನಷ್ಟು ಲವಲವಿಕೆಯಿಂದ ಒಡಾಡಿಕೊಂಡಿರಲು ಆಗುತ್ತಿರಲಿಲ್ಲ. ಯಾಕೋ ಕೆಲವೊಮ್ಮೆ ಇಡೀ ದಿನ ಮಂಕಾಗಿ ಕುಳಿತುಬಿಡುತ್ತಿತ್ತು.ಆರನೇ ಸೆಮೆಸ್ಟರಲ್ಲಿ ಇದ್ದಾಗ, ಒಂದು ರವಿವಾರ ಮನೆಗೆ ಫೋನ್ ಮಾಡಿದಾಗ ಅಮ್ಮ "ಗ್ರೇಸಿ ಸತ್ತು ಹೋತು ತಮ್ಮಾ" ಅಂದಾಗ ಇಷ್ಟು ಬೇಗ, ಅದರ ಸಾವಿನ ನಿರೀಕ್ಷೆ ಇರದಿದ್ದ ನನಗೆ, ಒಂದು ಸಲ ಶಾಕ್ ಆಯಿತು. ಅಮ್ಮ " ಅದಕೆ ಈ ಮನೆ ಋಣ ಇಷ್ಟೇ ಇತ್ತು ಕಾಣ್ತು ಬಿಡು" ಅಂದು ಸಮಾಧಾನ ಪಡಿಸಲು ಪ್ರಯತ್ನಿಸಿದಳು. ಆ ಇಡೀ ದಿನ, ಮನೆಯ ಸದಸ್ಯನನ್ನೇ ಕಳೆದುಕೊಂಡಂತೆ ಅನ್ನಿಸುತ್ತಿತ್ತು. ಆ ಸಲ ರಜೆಗೆ ಹೋದಾಗ, ಮನೆ ಖಾಲಿ ಖಾಲಿ ಅನ್ನಿಸಿತು. ಮನೆಯ ಮುಂದಿನ ಸಿಮೆಂಟ್ ಕಟ್ಟೆಯ ಪಕ್ಕದಲ್ಲಿ ಇನ್ನೂ ಇಟ್ಟಿದ್ದ ಖಾಲಿ ಕಬ್ಬಿಣದ ಪಂಜರ, ನನ್ನನ್ನು ನೋಡಿ ಅಣಕಿಸಿದಂತಾಯಿತು.

ಅದಾಗಿ ಈಗ ಸುಮಾರು ಆರು ವರ್ಷಗಳು ಉರುಳಿವೆ. ಅಮ್ಮನ ಹತ್ರ ಇನ್ನೊಂದು ನಾಯಿ ಸಾಕಿ ಅಂದಾಗೆಲ್ಲ ಅಮ್ಮ, "ಗ್ರೇಸಿ ಸತ್ತ ಮೇಲೆ ಮತ್ತ್ಯಾವುದೇ ನಾಯಿ ಸಾಕವು ಹೇಳೇ ಅನ್ನಿಸ್ತಿಲ್ಲೆ" ಅಂದು ನನ್ನ ಸಲಹೆಯನ್ನು ಸಾರಾಸಗಟವಾಗಿ ತಳ್ಳಿಹಾಕಿಬಿಡುತ್ತಾಳೆ. ಈಗಲೂ ಯಾವುದಾದರೂ ವೆಬ್ ಸೈಟ್ ಗಳಿಗೆ ರೆಜಿಸ್ಟರ್ ಮಾಡಿಸಿಕೊಳ್ಳುವಾಗ, ಅದು "ನಿಮ್ಮ ಫೇವರಿಟ್ ಪೆಟ್ ನ ಹೆಸರೇನು" ಎಂದು ಸೀಕ್ರೆಟ್ ಪ್ರಶ್ನೆ ಕೇಳುವಾಗ, ಗ್ರೇಸಿಯ ನೆನಪು ಬಂದು, ಅದರ ಜೊತೆ ಕಳೆದಿದ್ದ ಆ ಅಮೂಲ್ಯವಾದ ಕ್ಷಣಗಳು ಕಣ್ಣ ಮುಂದೆ ಹಾದುಹೋಗುತ್ತವೆ.

5 comments:

Seema S. Hegde said...

ಮಧುಸೂದನ,
ಇಂಥದೇ ಅನುಭವಗಳು ನಮ್ಮನೆಯಲ್ಲೂ ಆಗಿವೆ.
ಜಿಮ್ಮಿ, ಪಿಂಕಿ, ಜೂಲಿ I II III, ಡಾಬು, ರೂಬಿ, ಟೋನಿ, ಮೋಗ್ಲಿ, ಲಿಯೋ ಹೀಗೆಯೇ ಎಷ್ಟೊಂದು ನಾಯಿಗಳು ಆಗಿ ಹೋಗಿವೆ. ಅವು ಸತ್ತಗಲೆಲ್ಲಾ ದುಃಖ, ಮತ್ತೊಂದು ಹೊಸದು ಬಂದಾಗಲೆಲ್ಲಾ ಖುಷಿ... ಹೀಗೆಯೇ ಸಾಗುತ್ತದೆ. ಸದ್ಯದಲ್ಲಿ ಇರುವವುಗಳೆಂದರೆ ನಾಲ್ಮಡಿ ಜೂಲಿ ಮತ್ತು ಇಮ್ಮಡಿ ಮೋಗ್ಲಿ!

ಶಾಂತಲಾ ಭಂಡಿ (ಸನ್ನಿಧಿ) said...

ಮಧು...

ತುಂಬಾ ಬೇಜಾರಾಯ್ತು ಕಣೋ ಗ್ರೇಸಿಯ ಸಾವನ್ನು ಓದಿ.
ನಾಯಿ-ಬೆಕ್ಕುಗಳೆಂದರೆ ಸ್ವಲ್ಪ ದೂರವೇ ಇರುವ ನನಗೂ ಸಹ ಇಂಥಹ ಕೆಲವು ಸನ್ನಿವೇಶಗಳು ಮರೆಯಲೇ ಆಗದಂಥಹ ದುಃಖ ಕೊಟ್ಟಿವೆ. ನನ್ನತ್ತೆ ಮನೆ ‘ಜ್ಯೂಲಿ’ ನವರಾತ್ರಿಯಲ್ಲಿ ಸತ್ತಾಗ ಅವರಮನೆಯಲ್ಲಿ ಹಬ್ಬನೇ ಮಾಡ್ದೆ ಎಲ್ಲರೂ ಅವತ್ತಿಡೀ ಹೊರಕಟ್ಟೆಮೇಲೆ ಕುತ್ಗಂಡ ನೆನಪು ಇನ್ನೂ ಕಣ್ಣುಕಟ್ತು ನಂಗೆ.

@ಸೀಮಕ್ಕ,
ನಿಮ್ಮನೆ ಮೋಗ್ಲಿ ಸತ್ತಾಗ ನೀನು ಹಾಸ್ಟೆಲ್ ಅಲ್ಲಿ ಊಟ-ತಿಂಡಿ ಎಲ್ಲ ಬಿಟ್ಟು ಒಂದಿಡೀ ದಿನ ಅತ್ತಿದ್ದು ನಂಗಿನ್ನೂ ಮರೆಯಲಾಜಿಲ್ಲೆ.

Unknown said...

ಸೀಮಕ್ಕಾ, ಶಾಂತಲಕ್ಕಾ,

ಮನೆಯಲ್ಲಿ ಸಾಕಿದ ನಾಯಿ, ಬೆಕ್ಕು, ಹಸುಗಳ ಜೊತೆ ನಾವು ಒಂದು ಭಾವನಾತ್ಮಕ ಸಂಬಂಧ ಬೆಳೆಸಿಕೊಂಡುಬಿಡುತ್ತೇವೆ. ಎಷ್ಟೋ ಸಲ ಅವುಗಳ ಜೊತೆ ಒಡನಾಡಿ ನಾವು ನಮ್ಮ ದುಃಖಗಳನ್ನೆಲ್ಲ ಮರೆತೇ ಬಿಡುತ್ತೇವೆ ಅಲ್ವಾ? ನೆನಪು ಮಾಡಿಕೊಂಡಾಗಲೆಲ್ಲಾ ಕಣ್ಣಂಚು ಒದ್ದೆ ಒದ್ದೆ.

ARUN MANIPAL said...

ನಿಮ್ಮ ಎಲ್ಲ ಬರಹಗಳು ತುಂಬಾನೆ ಇಷ್ಟವಾಯಿತು ..:-)
ನನ್ನ ಬ್ಲಾಗು ಓದಿ ಹರಸಿದ್ದಕ್ಕ thank u

Unknown said...

ಥಾಂಕ್ಸ್ ಅರುಣ್,

ಹೀಗೆ ಬರ್ತಾ ಇರಿ.