Tuesday, July 1, 2008

ಹೀಗೇ ಸುಮ್ಮನೇ...

ಕೂಗಿ ಕೂಗಿ ನನ್ನ ಗಂಟಲೆಲ್ಲಾ ಬಿದ್ದು ಹೋಯ್ತು. ಮೂರುವರೆಯಿಂದ ೧೦ ಸಲ ಎಬ್ಬಿಸಿದೀನಿ. ಇನ್ನೂ ಏಳ್ತಾನೇ ಇಲ್ಲ ಇವಳು! ನನ್ನ ಕೂಗ್ಸಕ್ಕೇ ಹುಟ್ಟಿದಾಳೆ. ಎಲ್ಲಾ ಅವಳ ಅಪ್ಪನ ತರಾನೇ. ಕುಂಭಕರ್ಣನ ಸಂತತಿ. ಮಲಗಿದ್ರೆ ಜಗತ್ತಿನ ಖಬರೇ ಇಲ್ಲ. ಶನಿವಾರ, ರವಿವಾರ ಊಟ ಆಗಿದ್ದ ಮೇಲೆ ಮಲಗಿದ್ರೆ ಮಾತ್ರ ಇವಳಿಗೆ "ಮಧ್ಯಾಹ್ನದ ಮೇಲೆ" ಅನ್ನೋ ಹೊತ್ತೇ ಇಲ್ಲ. ಮಧ್ಯಾಹ್ನ ಆದ ಮೇಲೆ ಸೀದಾ ಸಂಜೆನೇ. ಎಲ್ಲಾದ್ರೂ ಜಾಸ್ತಿ ಹೇಳಿದ್ರೆ "ಅಮ್ಮಾ, ನಾನೇನು ದಿನಾ ಮಧ್ಯಾಹ್ನ ಮಲಗ್ತಿನಾ? ಬರೀ ವೀಕೆಂಡಲ್ಲಿ ಮಾತ್ರ ಅಲ್ವಾ?" ಅಂತಾ ನನ್ನೇ ಕೇಳ್ತಾಳೆ. ನಂಗೂ ಒಂದೊಂದು ಸಲ ಹಾಗೇ ಅನ್ನಿಸಿಬಿಡತ್ತೆ. ವಾರವಿಡೀ, ಬೆಳಗ್ಗೆ ಬೇಗ ಏಳು, ಕಂಪನಿ ಬಸ್ ಹಿಡಿ, ಇಡಿ ದಿನಾ ಕೆಲಸಾ ಮಾಡು, ಸಂಜೆ ಮತ್ತೆ ಅದೇ ಟ್ರಾಫಿಕಲ್ಲಿ ಸಿಕ್ಕಾಕೊಂಡು ಮನೆಗೆ ಬಾ, ಇಷ್ಟರಲ್ಲೇ ಮುಗಿದೋಗತ್ತೆ. ಅದ್ಕೆ ಪಾಪ, ವೀಕೆಂಡಗಳಲ್ಲಾದ್ರೂ ಸರೀ ರೆಸ್ಟ್ ತಗೊಳ್ಲಿ ಅಂತ ಸುಮ್ಮನಾಗ್ತಿನಿ. ಆದ್ರೂ ಎಷ್ಟೋ ಸಲ ಇವಳ ಸೋಮಾರಿತನ ನೋಡಿ ಸಿಟ್ಟು ಬಂದು ಹೋಗುತ್ತೆ, ಗೊತ್ತಿಲ್ದೇನೆ ಬೈಯ್ದೂ ಹೋಗಿರುತ್ತೆ. ಅಲ್ಲಾ ಈ ವಯಸ್ಸಿಗೆ ಎಷ್ಟು ಚಟಪಿಟಿ ಇರ್ಬೇಕು ಹೆಣ್ಣು ಮಕ್ಕಳು?


ನಾವೆಲ್ಲಾ ಈ ವಯಸ್ಸಲ್ಲಿ ಹೀಗಿರ್ಲಿಲ್ಲ, ಎಷ್ಟೆಲ್ಲಾ ಕೆಲ್ಸ ಮಾಡ್ತಿದ್ವಿ ಅಂದ್ರೆ ನಮ್ಮನೆಯವ್ರು ನನಗೇ ಬೈಯ್ತಾರೆ." ನಿನ್ನ ಕಾಲಕ್ಕೂ ಈ ಕಾಲಕ್ಕೂ ಯಾಕೆ ಹೋಲಿಸ್ತೀಯಾ? ಅವಳು ಹೊರಗೆ ಕೆಲ್ಸ ಮಾಡ್ತಾ ಇಲ್ವಾ? ನಿಧಾನಕ್ಕೆ ಎಲ್ಲದನ್ನೂ ಕಲೀತಾಳೆ ಬಿಡು" ಅಂತ. ಎಲ್ಲಾದಕ್ಕೂ ಇವ್ರದ್ದು ಅವ್ಳಿಗೇ ಸಪೋರ್ಟು. ಎಷ್ಟಂದ್ರೂ ಒಂದೇ ಮಗಳಲ್ವಾ? ತಲೆ ಮೇಲೆ ಹತ್ತಿಸಿಕೊಂಡು ಕುಣಿತಾರೆ. ಕುಣೀಲಿ, ಕುಣೀಲಿ, ನಾನೂ ನೋಡ್ತಿನಿ ಏಷ್ಟು ದಿನ ಅಂತಾ. ನಾನೇನಾದ್ರೂ ಬೈದ್ರೆ ಅಪ್ಪ ಮಗಳು ಒಂದೇ ಪಾರ್ಟಿ ಮಾಡ್ಕೊಂಡು ನನ್ನೇ ಅಂತಾರೆ. ನನಗೋ ಇವಳು ಮಾಡೋ ವೇಷಾನೆಲ್ಲ ಸಹಿಸಿಕೊಂಡು ಸುಮ್ಮನೆ ಇರಕಂತೂ ಆಗಲ್ಲ. ಏನೋ ಅಂದು ಹೋಗುತ್ತೆ. ಈಗಲ್ದೇ ಇನ್ಯಾವಾಗ ಮನೆ ಕೆಲ್ಸಾನೆಲ್ಲ ಕಲ್ಯೋದು ಇವ್ಳು? ನಾಳೆ ಇವಳದ್ದೂ ಒಂದು ಮದುವೆ ಅಂತ ಆಗಲ್ಲ್ವಾ? ಆಗ ಸಂಸಾರ ಸಂಭಾಳಿಸ್ಕೊಂಡು ಹೋಗಷ್ಟಾದ್ರೂ ಮನೆ ಕೆಲಸಗಳು ಗೊತ್ತಿರ್ಬೇಕು ಅಂತ ನಾನು. ನಾಳೆ ಇವಳಿಗೆ ಎಲ್ಲಾ ಕೆಲ್ಸ ಬರಲ್ಲ ಅಂದ್ರೆ ಅತ್ತೆ ಮನೆಯವರು ಏನಂತಾರೆ? "ಇವಳಮ್ಮ ಏನೂ ಕಲಿಸೇ ಇಲ್ಲ" ಅಂತ ನನ್ನ ಆಡಿಕೊಳ್ಳಲ್ವಾ? ಮೊನ್ನೆ ಇದೇ ವಿಷ್ಯದ ಮೇಲೆ ಜೋರು ವಾದ ಆಯ್ತು. ಅಪ್ಪ ಮಗಳು ಇಬ್ರೂ ಸೇರಿ ಜೋರು ಗಲಾಟೆ ಮಾಡಿ ಒಟ್ನಲ್ಲಿ ನನ್ನ ಬಾಯಿ ಮುಚ್ಚಿಸಿದ್ರು. ನಮ್ಮ ಮನೆಯವರಂತೂ ಮೊದ್ಲೇ ಹೇಳಿದ್ನಲ್ಲಾ ಯಾವಾಗ್ಲೂ ಅವಳದ್ದೇ ಪಾರ್ಟಿ. "ಈಗಿನ ಕಾಲದಲ್ಲಿ ಗಂಡ ಹೆಂಡತಿ ಇಬ್ರೂ ಹೊರಗೆ ಕೆಲಸ ಮಾಡ್ತಾರೆ, ಹೇಗೋ ಮ್ಯಾನೇಜ್ ಮಾಡ್ತಾರೆ ಬಿಡೆ. ಕೆಲಸದವಳನ್ನ ಇಟ್ಕೋತಾರೆ. ಗಂಡನೂ ಬಹಳಷ್ಟು ಸಹಾಯ ಮಾಡ್ತಾನೆ. ಎಲ್ಲಾ ಕಲ್ತುಕೊಂಡು ಏನು ಮಾಡೋದಿದೆ? ಅಂತ ಉಲ್ಟಾ ನನ್ನೇ ಕೇಳ್ತಾರೆ. ಇವಳಂತೂ ಬಿಡು. ಅಪ್ಪ ಬೇರೆ ಸಪೋರ್ಟಿಗಿದ್ದಾರೆ ಅಂತಾ ಗೊತ್ತಾಯ್ತಲ್ಲಾ, ಕೂಗಿದ್ದೇ ಕೂಗಿದ್ದು. ನಾನೇನೋ ಮಹಾ ದೂರಿದ ಹಾಗೆ. "ಅಮ್ಮಾ ನಾನಂತೂ ಮೊದ್ಲೇ ಹೇಳ್ಬಿಡ್ತೀನಿ, ನನ್ನ ಮದ್ವೆಯಾಗೋವ್ನಿಗೆ. ನಂಗೆ ಅಷ್ಟೆಲ್ಲಾ ಚೆನ್ನಾಗಿ ಅಡುಗೆ-ಗಿಡಗೆ ಎಲ್ಲಾ ಮಾಡಕ್ಕೆ ಬರಲ್ಲಾ. ಅಡ್ಜಸ್ಟ್ ಮಾಡ್ಕೊಂಡು ಹೋಗ್ಬೇಕು. ಮನೆ-ಕೆಲಸ ಎಲ್ಲ ಒಟ್ಟೊಟ್ಟಿಗೆ ನಾನೊಬ್ನೇ ಮಾಡ್ಕೊಂಡು ಹೋಗಕ್ಕಾಗಲ್ಲಾ. ಜಾಸ್ತಿ ಕಿರಿಕಿರಿ ಮಾಡಿದ್ರೆ ಕೆಲಸ ಬಿಟ್ಟು ಮನೆಲ್ಲೇ ಇರ್ತಿನಿ ಅಂತ. ಇನ್ನೇನು ಹೊರಗೂ ದುಡಿದು ಸಂಬಳಾನೂ ತರ್ಬೇಕು, ಮನೆಲ್ಲಿ ಚಾಕರಿ ಮಾಡಕ್ಕೂ ನಾನೇ ಬೇಕು ಅಂದ್ರೆ ನಾನೇನು ಅವನ ಆಳಾ? ಅಂತ. ಅದೆಲ್ಲಾ ಸರಿನೇ. ನಾನೂ ಒಪ್ಕೋತಿನಿ. ಕಾಲ ಬದಲಾಗಿದೆ ಅಂತ. ಆದ್ರೆ ಇವಳು ಇಷ್ಟು ನೇರ ನೇರವಾಗಿ ಹೇಳಿದ್ರೆ ಯಾರು ಇವಳನ್ನ ಮದ್ವೆ ಆಗ್ತಾರೆ ಅಂತ ಭಯ ನಂಗೆ.


ಇವ್ರಿಗೆ ಹೇಳಿದ್ರೆ ಕಿವಿ ಮೇಲೇ ಹಾಕ್ಕೊಳಲ್ಲ. "ಅವಳಿಗೆ ಇನ್ನೂ ಸಣ್ಣ ವಯಸ್ಸು, ನೀನು ಸುಮ್ನೆ ಟೆನ್ಶನ್ ಮಾಡ್ಕೋಂತೀಯಾ" ಅಂತಾರೆ. ಟೆನ್ಶನ್ ಆಗಲ್ವಾ? ಈ ಅಗಸ್ಟಿಗೆ ಅವ್ಳಿಗೆ ೨೪ ಮುಗಿಯುತ್ತೆ. ಎಂತಾ ಸಣ್ಣ ವಯಸ್ಸು? ಯಾವ ಯಾವ ವಯಸ್ಸಿಗೆ ಯಾವ್ಯಾವ್ದು ಆಗ್ಬೇಕೋ ಅದಾದ್ರೇ ಚಂದ ಅಲ್ವಾ? ಇವ್ರಿಗಂತೂ ಅದೆಲ್ಲಾ ಅರ್ಥ ಆಗಲ್ಲ. ಅವಳಂತೂ ಬಿಡು. "ಅಮ್ಮಾ ನಾನು ೨೬ ವರ್ಷದ ವರೆಗೂ ಮದುವೆ ಆಗಲ್ಲ" ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳ್ಬಿಟ್ಟಿದ್ದಾಳೆ. ಹೆಚ್ಚಿಗೆ ಒತ್ತಾಯ ಮಾಡಿದ್ರೆ "ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲ" ಅಂತ ಅಳಕ್ಕೇ ಶುರು ಮಾಡಿ ಬಿಡ್ತಾಳೆ. ನಾನೇನು ಇವಳನ್ನು ಆದಷ್ಟು ಬೇಗ ಮನೆಯಿಂದ ಹೊರಗೆ ಹಾಕ್ಬೇಕು ಅಂತಾ ಇಷ್ಟೆಲ್ಲಾ ಮಾಡ್ತಿದ್ದೀನಾ? ನನಗೂ ಮಗಳನ್ನು ಒಳ್ಳೆ ಮನೆಗೇ ಕೊಡ್ಬೇಕು ಅಂತ ಇಲ್ವಾ? ನಮ್ಗಿರೋದು ಒಂದೇ ಮಗಳು. ಅವಳು ಚೆನ್ನಾಗಿರ್ಲಿ ಅಂತಾನೇ ನಾವು ಇಷ್ಟೆಲ್ಲಾ ಮಾಡ್ತಾ ಇರೋದು? ಯಾರನ್ನಾರೂ ಲವ್ವು-ಗಿವ್ವು ಅಂತಾ ಮಾಡಿದಿಯೇನೇ, ಅಂತಾನೂ ನಂಬಿಸಿ ಕೇಳಿದಿನಿ. ಹಾಗೆಲ್ಲಾ ಇದ್ರೆ ಮೊದ್ಲೇ ಹೇಳ್ಬಿಡು. ಆಮೇಲೆ ಮೂರನೆಯವರಿಂದ ಗೊತ್ತಾಗೋದು ಬೇಡ ಅಂತಾನೂ ಹೇಳಿದೀನಿ. ಹಾಗೇನೂ ಇಲ್ಲಾ ಅಂತಾಳೆ. ನನಗಂತೂ ಸಾಕಾಗಿ ಹೋಗಿದೆ. ಅಪ್ಪ ಮಗಳು ಏನು ಬೇಕಾದ್ರೂ ಮಾಡ್ಕೊಳ್ಲಿ ಅಂತ ಬಿಟ್ಟು ಬಿಟ್ಟಿದ್ದೀನಿ. ಆದ್ರೂ ಕೆಲವೊಂದು ಸಲ ತಾಯಿ ಹೃದಯ, ಕೇಳಲ್ಲ.


ಮೊನ್ನೆ ಏನಾಯ್ತು ಅಂದ್ರೆ, ನಮ್ಮ ಯಜಮಾನರ ಕೊಲೀಗು ಇದ್ದಾರಲ್ಲ ಶ್ರೀನಿವಾಸಯ್ಯ, ಅವರ ತಂಗಿ ಮಗನ ಪ್ರಪೋಸಲ್ಲು ಬಂದಿತ್ತು. ಹುಡುಗಾ ನೋಡೋಕೆ ಸುಮಾರಾಗಿದಾನೆ. ಒಳ್ಳೆ ಮನೆತನ, ಒಳ್ಳೆ ಸಂಬಂಧ. ಚೆನ್ನಾಗಿ ಓದಿದಾನೆ ಬೇರೆ. ಸ್ವಂತ ಮನೆಯಿದೆ, ಕಾರೂ ಇದೆ. ನನಗಂತೂ ಯಾವ ತೊಂದರೆನೂ ಕಾಣ್ಲಿಲ್ಲ. ಅವರ ಮನೆಯವರಿಗೂ ಬಹಳ ಇಷ್ಟವಾದ ಹಾಗೇ ಇತ್ತು. ಆದರೆ ಇವ್ಳು ಮಾತ್ರ ಸುತಾರಾಂ ಒಪ್ಪಲೇ ಇಲ್ಲ. ನಮ್ಮನೆಯವರಿಗೂ ಬಹಳ ಮನಸ್ಸಿದ್ದ ಹಾಗೆ ಕಾಣ್ತು ನನಗೆ. ಇವರೂ ಏನೇನೋ ಉಪದೇಶ ಮಾಡಿದ್ರು. ಕೊನೆಗೆ ಇವಳು ಹೇಳಿದ್ದು ಏನು ಗೊತ್ತಾ? "ಆ ಹುಡುಗಾ ಸ್ವಲ್ಪ ಕಪ್ಪಗಿದಾನೆ. ನನಗೆ ಬೇಡ" ಅಂತ. ಏನು ಹೇಳೋಣ ಇಂಥವರಿಗೆ? ರೂಪ, ಬಣ್ಣ ಎಲ್ಲಾ ನೋಡಿ ಯಾರಾದ್ರೂ ಮದ್ವೆ ಆಗ್ತಾರಾ? ಗುಣ ಅಲ್ವಾ ನೋಡ್ಬೇಕಾಗಿದ್ದು? ಅವಳು ತಪ್ಪಿಸಿಕೊಳ್ಳಕೆ ಹಾಗೆ ಹೇಳಿದ್ಳೋ, ಅಥವಾ ನಿಜವಾಗ್ಲೂ ಅವಳ ಮನಸ್ಸಲ್ಲಿ ಇದೇ ಇದೆಯಾ ಅಂತ ಹೇಗೆ ಹೇಳೋದು? ಆದ್ರೆ ಒಂದು ಮಾತ್ರ ನಿಜ, ಅವನು ಕಪ್ಪಗಿದಾನೆ ಅಂತ ರಿಜೆಕ್ಟ್ ಮಾಡಿದ್ರೆ ಮಾತ್ರ ಇವಳಿಗೆ ಸೊಕ್ಕು ಅಂತಾನೇ ಅರ್ಥ! ನಾನೇನೂ ಜಾಸ್ತಿ ಹೇಳಕ್ಕೆ ಹೋಗ್ಲಿಲ್ಲ. ಆಶ್ಚರ್ಯ ಅಂದ್ರೆ ಈಗ ಎರಡು ಮೂರು ದಿನದಿಂದ ಇವರೂ ಭಾಳ ಅಪ್ ಸೆಟ್ ಆಗಿದಾರೆ. ಈಗ ಅರ್ಥ ಆಗಿರ್ಬೇಕು ಅವರಿಗೆ ಮದ್ವೆ ಮಾಡೋದು ಎಷ್ಟು ಕಷ್ಟ ಅನ್ನೋದು.


ಅದೆಲ್ಲ ಬಿಟ್ಟಾಕಿ. ಅದೇನೋ ಅಂತಾರಲ್ಲಾ, ಹಣೇಲಿ ಬರ್ದಿರ್ಬೇಕು ಅಂತಾ. ಯಾವಾಗ ಕಾಲ ಕೂಡಿ ಬರುತ್ತೋ ಗೊತ್ತಿಲ್ಲ. ಕಾಯ್ಬೇಕು ಅಷ್ಟೇ. ಆದ್ರೆ ಒಂದಂತೂ ನಿಜ. ಈ ಕಂಪ್ಯೂಟರ್ರು, ಇಂಟರನೆಟ್ಟು, ಅನ್ನೋ ವಸ್ತು ಮನೆಗೆ ಬಂದಾಗಿಂದ ಈಗಿನ ಕಾಲದ ಮಕ್ಕಳ ವರ್ತನೆನೇ ಚೇಂಜ್ ಆಗಿ ಹೋಗಿದೆ. ಇವಳೂ ಏನೂ ಕಮ್ಮಿಯಿಲ್ಲ. ಆಫೀಸ್ನಲ್ಲಿ ಕಂಪ್ಯೂಟರ್ ಮುಂದೆ ಕುಳ್ತಿದ್ದು ಸಾಲ್ದು ಅಂತ ರಾತ್ರೆ ೧೧, ೧೨ ಗಂಟೆ ತನಕಾನೂ ಆ ಕೀಬೋರ್ಡು ಕುಟ್ಟತಾ ಇರ್ತಾಳೆ. ಸಾಕು ಮಲಗಮ್ಮಾ ಅಂದ್ರೆ, ಅದ್ಯಾವುದೋ ಫ್ರೆಂಡ್ ಅಂತೆ, ಅಮೆರಿಕಾದಲ್ಲಿದಾರಂತೆ, ಅವನೋ, ಅವಳೋ ಯಾರದೋ ಜೊತೆ ಅದೇನೋ ಚಾಟಿಂಗ್ ಅಂತ ಮಾಡ್ತಾ ಇರ್ತಾಳೆ. ಹೊತ್ತು ಗೊತ್ತು ಒಂದೂ ಪರಿವೆನೇ ಇಲ್ಲ. ಅದರಲ್ಲಿ ಏನು ಬ್ರಹ್ಮಾಂಡ ತೋರಿಸ್ತಾರೋ ದೇವ್ರಿಗೇ ಗೊತ್ತು. ಒಂದಂತೂ ನಿಜ, ಇವೆಲ್ಲ ಬಂದ ಮೇಲೆ ಮಕ್ಕಳು ಇನ್ನೂ ಜಾಸ್ತಿ ಆಲಸಿಗಳಾಗ್ತಿದಾರೆ ಅಷ್ಟೇ. ಇಂಟರನೆಟ್ಟಲ್ಲೇ ಫ್ರೆಂಡ್ಸ್ ಮಾಡ್ಕೋಂತಾರೆ, ಹರಟೆ ಹೊಡೀತಾರೆ, ಇನ್ನೂ ಏನೇನೋ, ನಂಗದು ಸರಿಯಾಗಿ ಗೊತ್ತಾಗೋದೂ ಇಲ್ಲ. ಮೊನ್ನೆ ಅದ್ಯಾವುದೋ ಫ್ರೆಂಡೊಬ್ಬಳು ಮನೆಗೆ ಬಂದಿದ್ಲಲ್ಲಾ, ಇವ್ಳದ್ದೇ ವಯಸ್ಸು. ನಿನ್ನ ಕ್ಲಾಸ್ ಮೇಟೇನಮ್ಮಾ ಅಂತ ಕೇಳಿದ್ರೆ, ಇಲ್ಲಾ ಇವಳು ನನ್ನ ಆರ್ಕುಟ್ ಫ್ರೆಂಡ್ ಅಂತಾ ಅಂದಳು. ಇದ್ಯಾವ ತರ ಫ್ರೆಂಡ್ ಅಂತಾನೇ ನಂಗೆ ಗೊತ್ತಾಗ್ಲಿಲ್ಲ ನೋಡಿ. ಹಾಗಂದ್ರೆ ಏನೇ? ಅಂದ್ರೆ "ಅದೇ ಅಮ್ಮಾ. ಇಂಟರನೆಟ್ಟಲ್ಲಿ ಆರ್ಕುಟ್ ಅಂತ ಕಮ್ಯುನಿಟಿ ಇದೆಯಮ್ಮಾ, ಅದರಲ್ಲಿ ಫ್ರೆಂಡ್ ಆದವಳು, ನಿಂಗೆ ಗೊತ್ತಾಗಲ್ಲ ಬಿಡು" ಅಂದಳು. ಅದವಳ ಖಾಯಂ ಡೈಲಾಗು, "ಅಮ್ಮಾ ನಿಂಗೆ ಇವೆಲ್ಲಾ ಗೊತ್ತಾಗಲ್ಲ ಬಿಡಮ್ಮ" ಅಂತ. ಅವಳು ಹೇಳಿದ್ದು ನಿಜಾನೇ. ಈ ಕಾಲದವರ ಇಂಟರ್ ನೆಟ್ಟು, ಮೊಬೈಲು, ಐಪಾಡು ಇವೆಲ್ಲಾ ನಂಗಂತೂ ಒಂದೂ ಗೊತ್ತಾಗಲ್ಲ. ಅದರಲ್ಲೂ ಆ ಮೊಬೈಲನ್ನಂತೂ ಇನ್ನೂ ಸರಿಯಾಗಿ ಬಳಸಕ್ಕೆ ನಂಗಿನ್ನೂ ಬರಲ್ಲ. ಅದೇನೋ ಹಸಿರು ಬಟನಂತೆ, ರೆಡ್ ಬಟನಂತೆ, ಮೆಸೇಜು, ಎಸ್ಸೆಮೆಸ್ಸು, ಮಿಸ್ಸಡ್ ಕಾಲ್ಸು ಅಯ್ಯೋ ನಂಗಂತೂ ಬರೀ ಕನ್ಫೂಶನ್ನು. ಇನ್ನೂ ಮೊಬೈಲ್ ಬಳಸಕ್ಕೆ ಬರಲ್ಲ ಅಂತ ಅಪ್ಪ ಮಗಳು ಸೇರಿ ಯಾವಾಗಲೂ ರೇಗಿಸ್ತಾನೇ ಇರ್ತಾರೆ. ಇವರಂತೂ ಬಿಡಿ, ಸಂದರ್ಭ ಸಿಕ್ಕಿದಾಗಲೆಲ್ಲಾ ದಡ್ಡಿ, ದಡ್ಡಿ ಅಂತಾ ಹಂಗಿಸ್ತಾನೇ ಇರ್ತಾರೆ. ನನ್ನ ಮೈಯೆಲ್ಲಾ ಉರಿದುಹೋಗತ್ತೆ. ಅದೇನು ಜಾಸ್ತಿ ಓದಿದವ್ರು ಮಾತ್ರಾ ಬುದ್ಧಿವಂತರಾ? ಅಥವಾ ಈಗಿನ ಕಾಲದ ವಸ್ತುಗಳನ್ನೆಲ್ಲಾ ಉಪಯೋಗ್ಸಕ್ಕೆ ಬರದೋವ್ರು ಎಲ್ಲಾ ದಡ್ಡರಾ? ಅಷ್ಟೆಲ್ಲ ದಡ್ಡರಾದ್ರೆ ನಾವು ಸಂಸಾರ ಹೇಗೆ ನಡೆಸ್ಕೊಂಡು ಬಂದ್ವಿ? ಜಾಸ್ತಿ ಓದಿದ ಮಾತ್ರಕ್ಕೆ ಬುದ್ಧಿವಂತರು ಅಂತೇನೂ ರೂಲ್ಸ್ ಇಲ್ಲ. ಈಗ ಇವ್ರನ್ನೇ ತಗೊಳ್ಳಿ. ಎಷ್ಟು ಮಹಾ ಬುದ್ಧಿವಂತರು ಇವ್ರು? ನಂಗೊತ್ತಿಲ್ವಾ ಇವ್ರ ಭೋಳೇ ಸ್ವಭಾವ? ಯಾರೇ ಒಂದು ಸ್ವಲ್ಪ ದುಡ್ಡು ಬೇಕು ಅಂತ ಹಲ್ಲುಗಿಂಜಿದ್ರೂ ಹಿಂದೆ ಮುಂದೆ ನೋಡ್ದೇ ಕೊಟ್ಟುಬಿಡೋರು. ಕೈಯಲ್ಲಂತೂ ಒಂಚೂರೂ ದುಡ್ಡು ನಿಲ್ತಾ ಇರ್ಲಿಲ್ಲ. ನಾನು ಸ್ವಲ್ಪ ತಲೆ ಓಡಿಸಿ, ಸಾಧ್ಯವಾದಾಗ್ಲೆಲ್ಲಾ ಇವರ ಕೈ ಹಿಡಿದು, ಅಲ್ಲಲ್ಲಿ ಉಳ್ಸಿ, ಇವರ ದುಂದು ವೆಚ್ಚಕ್ಕೆಲ್ಲಾ ಕಡಿವಾಣ ಹಾಕಿ, ಕಾಡಿ ಬೇಡಿ ಈಗೊಂದು ೧೦ ವರ್ಷದ ಹಿಂದೆನೇ ಎರಡು ೩೦-೪೦ ಸೈಟ್ ತಗೊಳ್ಳೊ ಹಾಗೆ ಮಾಡದೇ ಇದ್ದಿದ್ರೆ, ಬೆಂಗಳೂರಲ್ಲಿ ಸ್ವಂತ ಮನೆ ಅಂತ ಮಾಡಿ, ಮಗಳನ್ನು ಇಂಜಿನಿಯರ್ ಓದ್ಸಕ್ಕೆ ಆಗ್ತಿತ್ತಾ? ಅದೂ ಇವ್ರಿಗೆ ಬರೋ ಸಂಬಳದಲ್ಲಿ? ಈಗ ನೀವೇ ಹೇಳಿ ಯಾರು ದಡ್ಡರು, ಯಾರು ಬುದ್ಧಿವಂತರು ಅಂತಾ? ಇನ್ನೊಂದು ಸಲ ಹಂಗಿಸ್ಲಿ, ಸರಿಯಾಗಿ ಹೇಳ್ತಿನಿ, ಬಿಡಲ್ಲ.


ಅಯ್ಯೋ, ಮಾತಾಡ್ತಾ ಮಾತಾಡ್ತಾ ಟೈಮೇ ನೋಡಿಲ್ಲ ನೋಡಿ. ಆಗ್ಲೇ ೪.೩೦ ಆಗೋಯ್ತು. ಇವ್ಳನ್ನು ಬಡಿದಾದ್ರೂ ಎಬ್ಬಿಸ್ಬೇಕು ಈಗ. ಅದೇನೋ ಡ್ಯಾನ್ಸ್ ಕ್ಲಾಸ್ ಅಂತೆ. ಅದೆಂಥದೋ "ಸಾಲ್ಸಾ" ನೋ "ಸಲ್ಸಾ"ನೋ, ನಂಗೆ ಬಾಯಿ ಅಷ್ಟು ಸುಲಭವಾಗಿ ಹೊರಳಲ್ಲಬಿಡಿ, ಅದಕ್ಕೆ ಹೋಗ್ತಾಳೆ. ಅದೂ ಇಲ್ಲಿ ಹತ್ತಿರದಲ್ಲಿ ಎಲ್ಲೂ ಇಲ್ಲ. ಇಂದಿರಾನಗರಕ್ಕೇ ಹೋಗ್ಬೇಕು. ಆ ಸ್ಕೂಟಿ ಹಾಕ್ಕೊಂಡು ಅಷ್ಟೆಲ್ಲ ದೂರ ಹೋಗ್ಬೇಡಾ ಅಂದ್ರೂ ಕೇಳಲ್ಲಾ. ಅಷ್ಟೆಲ್ಲ ದೂರ ಹೋಗಿ ಕಲಿಯೋಂತದ್ದು ಏನಿದ್ಯೋ ನಂಗಂತೂ ಅರ್ಥವಾಗ್ಲಿಲ್ಲ. ಇಲ್ಲೇ ಗಣೇಶನ ಗುಡಿ ಹಿಂದೆ ಭರತನಾಟ್ಯ ಕಲಿಸಿಕೊಡ್ತಾರೆ, ಅದಕ್ಕೆ ಹೋಗಮ್ಮಾ ಅಂದ್ರೆ "ಅಮ್ಮಾ ಅವೆಲ್ಲ ಹಳೆ ಕಾಲದವು, ನಾನು ಕಲಿಯಲ್ಲ" ಅಂಥಾಳೆ. ಇನ್ನೇನು ಹೇಳೋದು? ಒಟ್ನಲ್ಲಿ ಹೇಳಿ ಪ್ರಯೋಜ್ನ ಇಲ್ಲ. ಹಳೆದ್ದು ಅಂತ ಎಲ್ಲಾದನ್ನೂ ಬಿಟ್ಕೊಂತಾ ಹೋಗ್ತಾನೇ ಇದ್ರೆ ನಮ್ಮದು ಅಂತಾ ಸಂಸ್ಕಾರಗಳು ಉಳಿಯೋದಾದ್ರೂ ಹೇಗೆ? ಮುಂದೆ ನಮ್ಮನ್ನೂ ಹಳೇಯವ್ರು ಅಂತ ಬಿಡದೇ ಇದ್ರೆ ಸಾಕು! ಒಂದೊಂದು ಸಲ ಹೆಣ್ಣು ಮಗಳನ್ನು ಯಾಕಾದ್ರೂ ಹೆತ್ತನಪ್ಪಾ ಅಂಥಾನೂ ಅನ್ನಸತ್ತೆ. ಆದ್ರೆ ಗಂಡು ಮಕ್ಕಳಿದ್ರೆ ಸುಖ ಅನ್ನೋದಂತೂ ಸುಳ್ಳು ಬಿಡಿ. ಈಗ ಪಕ್ಕದ ಮನೆ ಸುಮಿತ್ರಮ್ಮನ್ನೇ ನೋಡಿ. ಒಬ್ಬನೇ ಮಗ, ಚೆನ್ನಾಗಿ ಓದದಾ, ಅಮೇರಿಕಕ್ಕೆ ಹೋದ. ಅಲ್ಲೇ ಯಾವ್ದೋ ನಾರ್ತ್ ಇಂಡಿಯನ್ ಹುಡ್ಗಿನಾ ಮದ್ವೆ ಆದ. ಇನ್ನೇನು ಅಪ್ಪ ಅಮ್ಮನ್ನ ಮರೆತ ಹಾಗೇನೇ. ವರ್ಷಕ್ಕೋ ಎರಡು ವರ್ಷಕ್ಕೋ ಬರ್ತಾನೆ ಅಷ್ಟೇ. ಇವ್ರಿಗೋ ಆರೋಗ್ಯನೇ ಸರಿಯಿರಲ್ಲ. ಈ ವಯಸ್ಸಲ್ಲಿ ಎಷ್ಟೂಂತಾ ಓಡಾಡ್ಕೊಂಡು ಇರಕ್ಕಾಗತ್ತೆ ಹೇಳಿ? ನಮ್ಮ ಕೊನೆಗಾಲಕ್ಕೆ ಆಗ್ದೇ ಇರೋ ಮಕ್ಕಳು ಇದ್ರೆಷ್ಟು,ಬಿಟ್ರೆಷ್ಟು? ನಂಗಂತೂ ಅವ್ರನ್ನ ನೋಡಿ ಪಾಪ ಅನ್ನಸತ್ತೆ. ಗಂಡು ಮಕ್ಕಳಿರೋವ್ರದ್ದು ಒಂಥರಾ ಕಷ್ಟ, ಹೆಣ್ಣು ಮಕ್ಕಳಿರೋವ್ರದ್ದು ಇನ್ನೊಂಥರಾ ಕಷ್ಟ ಅಷ್ಟೇ.


ಸಾಕು ಮಾಡಮ್ಮಾ ನಿನ್ನ ಪ್ರಲಾಪ, ನಮಗೇ ಹೊದೆಯಷ್ಟು ಕಷ್ಟ ಇದೆ ಅಂತೀರಾ? ಅಯ್ಯೋ, ನಿಮಗೂ ನನ್ನ ತರ ಬೆಳೆದು ನಿಂತ ಮಗಳಿದ್ರೆ ಗೊತ್ತಾಗಿರೋದು ನನ್ನ ಸಂಕಟ ಏನು ಅಂತಾ. ಹೋಗ್ಲಿ ಬಿಡಿ, ಅವರವರು ಪಡ್ಕೊಂಡು ಬಂದಿದ್ದು, ಅನುಭವಿಸ್ಬೇಕು. ಅನುಭವಿಸ್ತೀನಿ ಬಿಡಿ. ಇನ್ನೇನು ಇವರು ಬರೋ ಹೊತ್ತಾಯ್ತು. ಕಾಫಿ ಮಾಡ್ಬೇಕು. ಬಂದ ಕೂಡ್ಲೇ ಕೈಗೆ ಕಾಫಿ ಸಿಗದೇ ಹೋದ್ರೆ ಆಮೇಲೆ ಇಡೀ ದಿನ ಕೂಗ್ತಾ ಇರ್ತಾರೆ. ಇನ್ನೊಮ್ಮೆ ಯಾವಾಗಲಾದ್ರೂ ಸಿಕ್ತೀನಿ, ಸುದ್ದಿ ಹೇಳೋಕೆ ಬಹಳಷ್ಟಿದೆ. ಬರ್ಲಾ? ಅಯ್ಯೋ, ಹೇಳೊಕೇ ಮರ್ತೋಗಿತ್ತು ನೋಡಿ. ನಿಮಗೆ ಯಾರಾದ್ರೂ ಒಳ್ಳೆ ಹುಡುಗ ಗೊತ್ತಿದ್ರೆ ಪ್ಲೀಸ್ ಹೇಳ್ರೀ. ಯಾರಿಗೆ ಗೊತ್ತು, ಇವಳಿಗೆ ಇಷ್ಟ ಆದ್ರೂ ಆಗ್ಬಹುದು. ನಮ್ಮ ಪ್ರಯತ್ನ ಅಂತೂ ನಾವು ಮಾಡೋದು. ಮುಂದೆಲ್ಲಾ ಹಣೇಲಿ ಬರದಾಂಗೆ ಆಗತ್ತೆ. ಅಲ್ವಾ?

15 comments:

ತೇಜಸ್ವಿನಿ ಹೆಗಡೆ said...

ಮಧು ಆಂಟಿ,

ನಿಜ ನೀವು ಹೇಳ್ತಾ ಇರೋದು... ಈಗಿನ ಕಂಪ್ಯೂಟರ್ ಹಿಡುಗೀರು ನಮ್ಮ ಸಂಸ್ಕಾರಗಳನ್ನೆಲ್ಲಾ ಮರೀತಿದ್ದಾರೆ. ನಿಮ್ಮ ಅಳಲು ಅರ್ಥ ಆಗ್ತಿದೆ. ಹಾಗೇ ನಿಮ್ಮ ಮಧುವನವೂ ಹೊಸ ರೂಪ ಪಡೆಸು ತುಂಬಾ ಸುಂದರವಾಗಿ ಕಂಗೊಳಿಸುತ್ತಿದೆ. ಬೇಸರಿಸದಿರಿ. ಕಾಲ ಹೀಗೇ ಇರದು. ನಿಮ್ಮ ಮಗಳಿಗೂ ಕೂಡಾ ವಿವೇಚನೆ ಬರದಿರದು. ಖಂಡಿತವಾಗಿ ಒಳ್ಳೆಯ ಹುಡುಗ ಇದ್ದರೆ ತಿಳಿಸುವೆ. ಮೊನ್ನೆಯವರೆಗೂ ನನ್ನ ಕಣ್ಣಲ್ಲಿ ಒಂದು ಹುಡುಗ ಇದ್ದ, ಮಧುಸೂದನ ಅಂತ. ಒಳ್ಳೆಯ ಹುಡುಗ. ಸೌಮ್ಯ ಸ್ವಭಾವದವ. ಆದರೆ ಮದುವೆ ನಿಶ್ಚಯವಾಯಿತೇನೋ..! ಆದರೂ ನಿಮ್ಮ ಜೋರಿನ ಹುಡುಗಿಗೆ ಸರಿಹೋಗುತ್ತಿರಲಿಲ್ಲ ಬಿಡಿ.

ತುಂಬಾ ಸುಂದರ ಶೈಲಿಯಲ್ಲಿ ಸರಾಗವಾಗಿ ಓದಿಸಿಕೊಂಡಿತು. ಬೇಜಾರಾದಾಗೆಲ್ಲಾ, ಬಿಡುವಿದ್ದರೆ "ಹೀಗೇ ಸುಮ್ಮನೆ" ಸುದ್ದಿ ಹೇಳೋಕೆ ಬನ್ನಿ. ನಾನೂ ಬರ್ತಾನೇ ಇರ್ತೀನಿ.. ನಿಮ್ಮ ಮಾತುಕೇಳೋದು ಅಂದರೆ ಜೇನು ಸವಿದಂತಾಗುವುದು.

ತೇಜಸ್ವಿನಿ ಹೆಗಡೆ said...

ರಾಶಿನೇ ಇಷ್ಟ ಆತು ಪರಕಾಯ ಪ್ರವೇಶ :-)

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಾ...
ಎಷ್ಟು ಚಂದ ಬರಿತ್ಯಾ....
ತಾಯಿ ಮನಸಿನ ಎಲ್ಲಾ ತರಹದ ಭಾವಗಳು... ಒತ್ತಟ್ಟಿ ಹೊರಹಾಕಿದ ಹಾಗೆ.
ಸೂಪರ್ರು. ಬರೀತಾ ಇರು.

Prashanth Narasimhiah said...

mundakke nin magalanna ankeli itkolo idea maadbedaapa hudga

Unknown said...

ತೇಜಸ್ವಿನಿಯವರೇ,
ಏನೋ ಸಮಾಧಾನರೀ, ನಿಮಗೂ ನನ್ನ ಕಷ್ಟ ಅರ್ಥ ಆಯ್ತಲ್ಲ ಅಂತ. ಏನು ಮಾಡೋದು ಹೇಳಿ ಹಣೆ ಬರಹ!
ಅಯ್ಯೋ, ಆ ಹುಡ್ಗಂಗೂ ಮದ್ವೆ ನಿಶ್ಚಯ ಆಗೋಯ್ತಾ? ನೋಡ್ರಿ, ಹೀಗೇ ಆಗುತ್ತೆ. ಇವಳು ಹಿಂಗೇ ಮಾಡ್ತಾ ಇದ್ರೆ ಮುದುಕಿ ಆದ ಮೇಲೆನೇ ಮದ್ವೆ ಆಗೋದು, ಅಷ್ಟೇ!

ಥಾಂಕ್ಸಕ್ಕಾ ಮೆಚ್ಚಿಕೊಂಡಿದ್ದಕ್ಕೆ :-)

ಶಾಂತಲಕ್ಕಾ, ಎಲ್ಲಾ ನಿಮ್ಮ ಆಶೀರ್ವಾದ :-)

ಪಾಚು,
ಏನೂ ಅಂತ ಮಾತಾಡ್ತಿದೀಯಾ ಮಗಾ? ಈ ಕಾಲ್ದಲ್ಲೇ ಅಂಕೆಯಲ್ಲಿ ಇರಲ್ಲಾ. ಇನ್ನು ನಮ್ಮ ಕಾಲಕ್ಕೇ ದೇವ್ರೇ ಗತಿ.

Tina said...

ಮಧು,
ಇಷ್ಟರ ತನಕ ನಿಮ್ಮ ಈ ಚೆಂದದ ಬ್ಲಾಗನ್ನ ಮಿಸ್ ಮಾಡಿದ್ದೆನಲ್ಲ ಅಂತ ನನ್ನ ಮೇಲೇ ನನಗೆ ಕೋಪ ಬರ್ತಾ ಇದೆ!! ಆದ್ರೆ ಬೆಟರ್ ಲೇಟ್ ದ್ಯಾನ್ ನೆವರ್. ಖುಷಿಯಾಯ್ತು, ಎಸ್ಪೆಶಲೀ ಈ ಮಾನಾಲಾಗ್.
- ಟೀನಾ

Unknown said...

ಟೀನಾರವರೇ,

ಬರಹ ಮೆಚ್ಚಿ, ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. ಇನ್ನು ಮೇಲೇ ಬರ್ತಾನೇ ಇರಿ.

sunaath said...

ಮಧು,
ನಿಮ್ಮನ್ನ ನೋಡಿಲ್ಲದೇ ಹೋಗಿದ್ರೆ, ಬರೆದೋರು ಒಬ್ಬ ಅಮ್ಮ ಅಂತ್ಲೇ ತಿಳ್ಕೊಂಡಿರ್ತಿದ್ದೆ. ಆದರೆ, ಅದೆಷ್ಟು ಸುಲಭವಾಗಿ ಅಮ್ಮನ ಪಾತ್ರ ಹಾಕ್ಕೊಂಡಿದೀರಲ್ಲ!

Susheel Sandeep said...

'heege sumne' aMta sooparrAgi pONisideeri kaNree...
especially 'adEnO Orkut friend aMte' - awesome! :)

Unknown said...

ಸುನಾಥರವರೇ,

ಧನ್ಯವಾದಗಳು. ನಿಮ್ಮನ್ನು ಭೇಟಿಯಾದದ್ದು ತುಂಬಾ ಸಂತೋಷ. ಹೀಗೆ ಬರ್ತಾ ಇರಿ ನಮ್ಮ ಬ್ಲಾಗಿಗೆ.

ಸುಶೀಲ್,
ಥ್ಯಾಂಕ್ಸ್ ಕಣ್ರೀ. ಎನೋ ಅದನ್ನ ಬರ್ದಿದ್ದು ಹೀಗೇ ಸುಮ್ನೆ ಇರಲಿ ಅಂತಾನೆ. ನೀವೆಲ್ಲ ಮೆಚ್ಚಿಕೊಂಡಿದ್ದು ಸಂತೋಷ.
ಬರ್ತಾ ಇರಿ ಹೀಗೆ. ನಿಮ್ಮ ಕವನಗಳೆಲ್ಲಾ ತುಂಬಾ ಚೆನ್ನಾಗಿದೆ.

Unknown said...

ಹಾಯ್,
ತಮ್ಮ ಆಸಕ್ತಿಗೆ ಧನ್ಯವಾದಗಳು. ನನಗೆ ಡೆಸ್ಟಿನಿಯಲ್ಲಿ ಪರಿಚಯಸ್ಥರಿದ್ದಾರೆ. ತಾವು ಅಲ್ಲಿಗೆ ಭೇಟಿ ನೀಡುವುದಾರೆ ಹೇಳಿ.
ಧನ್ಯವಾದಗಳು

harish said...

ಬಹಳ ಚೆನ್ನಾಗಿದೆ ಕಣ್ರೀ .......
ತಾಯಂದಿರ ಮನದಾಳವನ್ನು ಚೆನ್ನಾಗಿ ಅರಿತು ಬರೆದಿದ್ದೀರ

ಗಣಪತಿ ಬುಗಡಿ said...

tumba chennagi baradde....

Anonymous said...

ಸೂಪರ್! ಬರೆದಿದ್ದು ಅಮ್ಮನಾ, ಮಗನಾ ಅಂತ ಗೊತ್ತಾಗೋದೆ ಕಷ್ಟ!
ಇಷ್ಟ ಆಯ್ತು.

ಚಿತ್ರಾ said...

ಮಧು ,

ತುಂಬಾ ದಿನಗಳನಂತರ ಮಧುವನಕ್ಕೆ ಕಾಲಿಟ್ಟೆ.ಆಹಾಹಾ .ಎಷ್ಟು ಚೆನ್ನಾಗಿ ಪರಿಮಳಿಸುತ್ತಿದೆ !

ಹೀಗೇ ಸುಮ್ಮನೇ ... ಓದಿ ನಿಟ್ಟುಸಿರು ಬಿಟ್ಟೆ. ನಂಗೂ ಒಬ್ಬಳು ಮಗಳು . ಈಗಿನ್ನೂ ಚಿಕ್ಕವಳೇ ಆದರೂ ,ಜೋರಿಗೇನೂ ಕಮ್ಮಿಯಿಲ್ಲ ! ಈ ಬರೆಹ ಓದಿದ ಮೇಲೆ ನಂಗೂ ಯೋಚನೆ ಶುರುವಾಗಿದೆ !! ಅವಳ ಬಗ್ಗೆ ಅಲ್ಲ ಕಣ್ರೀ, ಇವಳ ನಖರೆಗಳನ್ನು ಸಹಿಸ ಬೇಕಾದ ಇವಳನ್ನು ಮದುವೆಯಾಗೋ ಗಂಡಿನ ಬಗ್ಗೆ !

ಚೆನ್ನಾಗಿದೆ ಬರೆಹ. ಅತ್ಯಂತ ವಾಸ್ತವಿಕ.