"ಥೋ, ಇಷ್ಟೆಲ್ಲ
ಎಂಥಕ್ಕೆ ಅಗೆಯಕೆ ಹೋದ್ರಿ ನೀವು?
ನಾ ಬರ್ತೆ ಹೇಳಿರ್ಲಿಲ್ಲಾ? ಒಂದಿನಾ
ಕಾಯಕೆ ಆಗ್ಲಿಲ್ಲ ನಿಮ್ಗೆ? ಒಳ್ಳೆ ಕಥೆ
ಆಯ್ತು ನಿಮ್ದು" ಗಲಾಟೆ ಮಾಡ್ತಾನೇ ಬಂದ
ಈರ. ಅವನು ಬಂದ್ರೆ ಹಾಗೇ.
ಯಾವತ್ತೂ ಗ್ರಾಂಡ್ ಎಂಟ್ರೆನ್ಸೇ. "ತಮ್ಮಾ,
ಕೆಳ್ಗೆ ಭಟ್ರ ಮನೆಗೆ ಹೋಗಿ
ದೊಡ್ಡ ಹಾರೆ ತಗಂಬಾರೋ, ನಿಮ್ಮನೆ
ಸಣ್ಣ ಹಾರೆ ಎಂಥಕ್ಕೂ ಉಪ್ಯೋಗ
ಇಲ್ಲ ನೋಡು. ನಾ ಎಷ್ಟು
ಸಲ ಹೇಳ್ದೆ ಹೆಗಡ್ರಿಗೆ, ಒಂದು
ದೊಡ್ಡ ಹಾರೆ ಇಟ್ಕಳಿ ಹೇಳಿ,
ಊಹೂಂ. ನಮ್ಮ ಮಾತೆಲ್ಲ ಕೇಳೂದಿಲ್ಲ
ಅವ್ರು, ಅಲ್ದ್ರಾ ಅಮಾ? ಹೇಡಿಗೆ
ಮೇಲೆ ಕುಳಿತಿದ್ದ ಅಮ್ಮನ ಕಡೆ ತಿರುಗಿ
ಪ್ರಶ್ನಿಸಿದ ಈರ. ಅವನ ಮಾತಿನ
ವೈಖರಿಯೇ ಹಾಗೆ. ಒಂದೇ ಸಲ
ಇದ್ದವರೆಲ್ಲರ ಗಮನವೆಲ್ಲವನ್ನು ತನ್ನೆಡೆ ಸೆಳೆಯುವ ಗತ್ತು.
"ಓ ಅಂತೂ
ಬಂದ್ಯಾ? ನಮ್ಮನೆ ದಾರಿ ಮರ್ತೋಗಿತ್ತು
ಈರಂಗೆ ಅಂದ್ಕಂಡಿದ್ನಲ್ಲೋ ಮಾರಾಯ?" ಅಮ್ಮನ ತಿರುಗುಬಾಣ. ಅದಕ್ಕೆಲ್ಲ
ಜಗ್ಗುವ ಆಸಾಮಿಯೇ ಅವನು? "ನಿಮ್ಮನೆ
ದಾರಿ? ಅದೆಂಗೆ ಮರ್ತೋಗ್ತದೆ? ನಿನ್ನೆ
ಬಂದಿದ್ದೆ ಅಮಾ. ನೀವೇ ಇರ್ಲಿಲ್ಲ.
ಕೇಳಿ ಬೇಕಾರೆ ಕೆಳ್ಗಿನ ಮನೆಲಿ.
ಅಲ್ಲಾ, ನಂಗೆ ಬರಕೆ ಹೇಳಿ
ನೀವೇ ಹೋಗ್ಬಿಟ್ರೆ ಹೆಂಗೆ?" ಅವನ ಪಾಟೀ ಸವಾಲು.
"ನೀ ಮತೆ ಸಂಜೆ ಮ್ಯಾಲೆ
ಬಂದ್ರೆ ನಮ್ಗೆ ಪ್ಯಾಟೆ ಕಡೆ
ಕೆಲ್ಸ ಇರದಿಲ್ಲನಾ? ಬರ್ತೆ ಬರ್ತೆ ಹೇಳಿ
ನಾವು ಬೆಳಗ್ಗೆಲ್ಲ ಕಾದು ಕಾದು ಸಾಕಾಗೋಯ್ತು,
ಇಂವ ಇನ್ನ ಬರದಿಲ್ಲ ಹೇಳಿ
ನಾವು ಹೋದ್ವು" ಅಮ್ಮನ ಸಮಝಾಯಿಶಿ. ಕೊನೆಗೂ
ಅವನೇ ಮುಗಿಸಿದ. "ಅದ್ನೆಲ್ಲ ಬಿಟ್ಟಾಕಿ, ಈಗ ಬಂದ್ನ ಇಲ್ವ?
ಒಂದು ತಾಸು ಸಾಕು ನಿಮ್ಮನೆ
ಕೆಲ್ಸ ಮುಗಸಕೆ. ಸಂಜೆ ಆಗದ್ರೊಳಗೆ
ಕೆಲ್ಸ ಮುಗ್ಸಿಕೊಟ್ರೆ ಆತ ಇಲ್ಲ ನಿಮ್ಗೆ?"
ತಮ್ಮಾ, ಬೆಗ್ನೆ ತಗಂಬಾರೋ, ಮತ್ತೆ
ನನ್ನನ್ನು ಅವಸರಿಸಿದ.
ಕೆಲ್ಸ
ಎಂಥದೂ ಸಿಕ್ಕಾಪಟ್ಟೆ ಇರಲಿಲ್ಲ. ಸರಿಯಾಗಿ ನಿಂತು ಮಾಡಿದ್ರೆ
ಈರ ಹೇಳಿದ ಹಾಗೆ ತಾಸು
ಒಂದೂವರೆ ತಾಸು ಅಷ್ಟೇ. ಒಂದು
ಎಂಟು ಫೂಟು ಮಣ್ಣಿನ ದಿಬ್ಬ
ವಡೆದು ಹೊಸ ದಾರಿ ಮಾಡುವುದು.
ಎರಡು ಕುಳಿ ಹೊಡೆದು, ಕಂಬ
ನಿಲ್ಸಿ, ಗೇಟ್ ಮಾಡುವುದು. ಹೊಸದಾಗಿ
ಮಾಡಿದ ದಾರಿಗೆ ಅಡ್ಡ ಬಂದ
ಮರದ ಬೇರನ್ನೆಲ್ಲ ಕಡಿದು, ನೆಲ ಒಂದು
ಲೆವೆಲ್ ಮಾಡುವುದು ಇಷ್ಟೇ. ಆದರೂ ಈರ
ಅದೆಷ್ಟು "ಬಿಜಿ" ಮನುಷ್ಯನೆಂದರೆ ಎಲ್ಲ ಕೆಲ್ಸ ಮುಗಿಸಲು
ಅವ್ನಿಗೆ ಎರಡು ಮೂರು "ಸಿಟ್ಟಿಂಗ್"
ಬೇಕಾಗಿತ್ತು. "ನಾಳೆ ಬಂದು ಮುಗಿಸಕೊಡ್ತೆ"
ಹೇಳುತ್ತಲೇ ಅವನು ಒಂದು ಎರಡು
ವಾರ ಮಾಡಿದ್ದ. ಇವತ್ತಿಗಂತೂ ಎಲ್ಲಾ ಮುಗಿಸಿ ಹೋಗೋ
ಐಡಿಯಾದಲ್ಲೇ ಬಂದಿದ್ದು ಅವನು. ಅಷ್ಟರೊಳಗೇ ಏನೇನನ್ನೋ
ಮಾಡಿದ್ದೇವೆನ್ನುವುದೇ ಅವನ ತಕರಾರು. ಅವನು
ಎದುರಿದ್ದಾಗ ಮಾತ್ರ ನಾವೇನೂ ಹೇಳುವ
ಹಾಗೇ ಇಲ್ಲ. "ನಿಮ್ಗೆ ಗೊತ್ತಾಗುದಿಲ್ಲ, ನಾ
ಹೇಳ್ತೆ ಕೇಳಿ" ಎಂದು ಅವನು ಎಷ್ಟು
ಸಲ ಹೇಳಿರುತ್ತಾನೋ ಅವನೇ ಬಲ್ಲ.
ನಾನು
ಓಡೋಡಿ ಹೋಗಿ ಹಾರೆ ತಂದೆ.
ಈರ ಅಮ್ಮನ ಹತ್ತಿರ ಮಾತನಾಡುತ್ತಲೇ
ಇದ್ದ ಇನ್ನೂ. "ಅಮಾ, ಆರೂವರೆಗೆ ಮತ್ತೆ
ಗದ್ದೆಮನೆಗೆ ಹೋಗ್ಬೇಕು, ಮದ್ವೆ ಬಂತಲ್ರಾ, ಚಪ್ಪರಾ
ಹಾಕ್ಬೇಕು. ಈ ಸಲ ಹೆಗಡ್ರಿಗೆ
ಹೇಳಿದ್ದೆ, ತೆಂಗಿನ ಹೆಡೆ ಚಪ್ಪರಾ
ಹಾಕುವ ಹೇಳಿ. ಆದ್ರೂವಾ ಸುಮಾರು
ಕೆಲ್ಸಾ ಆಗ್ತದಲ್ರಾ. ಹೆಗಡ್ರಿಗೆ
ಮಾತ್ರಾ ಈರಾ ಇಲ್ದೇ ಹೋದರೆ
ಕೈಕಾಲೇ ಆಡೂದಿಲ್ಲ ಹೇಳಿ. ಎಲ್ಲದಕ್ಕೂವಾ ಈರಾ
ಹೀಂಗ್ ಮಾಡೋನನಾ, ಹಾಂಗ್ ಮಾಡೋನನಾ ಕೇಳ್ತಾನೇ
ಇರ್ತು". ಮೆಟ್ಟಿಲ ಮೇಲೆ ಕಾಲು
ಕೊಟ್ಟು, ಕವಳದ ಸಂಚಿಯಿಂದ ಎಲೆ
ಹುಡುಕುತ್ತ ಈರ ಕೊಚ್ಚಿಕೊಳ್ಳುತ್ತಲೇ ಇದ್ದ.
"ಈ ಸಲದ ಮದ್ವೆ ಮಾತ್ರಾ,
ಅಮಾ, ಹೇಳ್ತೆ ನಾನು. ಈ ಸೀಮೆಲ್ಲಿ ಎಲ್ಲೂ
ಅಷ್ಟು ಛೊಲೋ ಆಗಿರ್ಲಿಕ್ಕೆ ಸಾಧ್ಯಾನೇ
ಇಲ್ಲ, ನೋಡಿ ಬೇಕಾರೆ. ಎಷ್ಟು
ತಯಾರಿ ಮಾಡ್ತಾ ಇದ್ರು ಗೊತ್ತಾ?
ಹೇಳಿ ಮುಗ್ಯದಿಲ್ಲಾ, ಊಹೂಂ, ಅವ್ರ ಮನೆಲ್ಲಿ
ಇದು ಲಾಸ್ಟ್ ಮದ್ವೆನಲ್ರಾ ಹಾಂಗಾಗಿ".
ದಿನಕ್ಕಾಗುವಷ್ಟು ಸುದ್ದಿ ಇತ್ತು ಅವನಲ್ಲಿ.
ನನ್ನನ್ನು ಅರ್ಜೆಂಟಾಗಿ ಓಡಿಸಿ ಇವನು ಇಲ್ಲಿ
ಪಟ್ಟಾಂಗ ಕೊಚ್ಚುತ್ತಿದ್ದ! ಸ್ವಲ್ಪ ಸಿಟ್ಟಿನಿಂದಲೇ "ಹೋ
ಮಾರಾಯ, ನಿನ್ನ ಸುದ್ದಿ ಆಮೇಲೆ
ಹೇಳೋ, ಮೊದ್ಲು ಕೆಲ್ಸ ನೋಡೋ"
ಎಂದು ಕೂಗಿದೆ. ಈರನಿಗೆ ರಸಭಂಗವಾಗಿರಬೇಕು.
ಕವಳದ ಸಂಚಿಯನ್ನು ಸೊಂಟಕ್ಕೆ ಸಿಕ್ಕಿಸಿ, "ಊರ ಮೇಲಿಲ್ದ ಕೆಲ್ಸ
ನಿಮ್ಮನೇದು. ತಮ್ಮಾ, ಗಟ್ಟಿ ನಿಂತ್ರೆ
ಎರಡು ನಿಮಿಶ ಸಾಕು ನಂಗೆ
ಈ ಕೆಲ್ಸ ಮಾಡೂಕೆ,
ತೆಳತ್ತಾ?" ಅಂದವನೇ, "ಅಮಾ, ಆರ ಗಂಟೆಗೆ
ಒಂದು ಚಾ ಮಾಡ್ಬಿಡಿ ಮತ್ತೆ,
ಆರೂವರೆಗೆ ಗದ್ದೆ ಮನ್ಲಿ ಇರ್ಬೇಕು"
ಆರ್ಡರ್ ಇತ್ತು, ನನ್ನ ಕೈಯಿಂದ
ಹಾರೆ ತೆಗೆದುಕೊಂಡ.
ಅವನ
ಕೆಲಸದ ಬಗ್ಗೆ ಮಾತಾಡೋ ಹಾಗೇ
ಇಲ್ಲ. ಸರಿಯಾಗಿ ಐದೂ ಮುಕ್ಕಾಲಿಗೆ
ಎಲ್ಲ ಕೆಲ್ಸ ಮುಗಿಸಿಯಾಗಿತ್ತು. "ಈಗ ಪಸ್ಟ್
ಕ್ಲಾಸ್ ಆಯ್ತು ನೋಡಿ ನಿಮ್ಮನೆ
ದಾರಿ. ತಮಾ, ಈ ಸಲ
ಕಾರು ತಂದ್ರೆ ಮನೆ ಬಾಗ್ಲ
ತಂಕಾನೂ ಬರ್ತದೆ. ಚೋಲೋ ಆಗ್ಲಿಲ್ವ?
ನಾನು ಹೆಗಡ್ರಿಗೆ ಹೋದ ವರ್ಷನೇ ಹೇಳಿದ್ದೆ.
ಮೀನಾ ಮೇಷಾ ಎಣ್ಸಿ ಎಣ್ಸಿ
ಅಂತೂವಾ ಮಾಡಿದ್ರು ಹೇಳಾಯ್ತು" ಈರ ಚಾ ಕುಡಿಯುತ್ತ
ನನ್ನತ್ರ ಹೇಳಿದ. ಅವನು ಚಾ
ಕುಡಿಯುವ ವೈಖರಿಯೇ ವಿಚಿತ್ರ. ಒಂದು
ಕಾಲನ್ನು ಉದ್ದಕ್ಕೆ ಚಾಚಿ, ಇನ್ನೊಂದು ಕಾಲನ್ನು
ಮಡಿಸಿ, ದೇಹವನ್ನು ಗೋಡೆಗೆ ವರೆಸಿ, ಚಾ
ಲೋಟವನ್ನು ತುದೀ ಬೆರಳಲ್ಲಿ ಅದ್ದುವಂತೆ
ಹಿಡಿದು, ಸೊರ್ರೆಂದು ನಿಮಿಷಕ್ಕೊಂದು ಗುಟುಕು ಕುಡಿಯುತ್ತಾ, ಆ
ಬಿಸಿ ಗುಟುಕು, ಹೊಟ್ಟೆ ತಳದವರೆಗೂ
ಇಳಿದು ಮಾಯವಾಗುವವರೆಗೆ ಕಾದು, ಇನ್ನೊಂದು ಗುಟುಕಿಗೆ
ಲೋಟವನ್ನು ಬಾಯಿಗೆ ತೆರೆದೊಯ್ಯುವ ಪರಿ,
ಆಹಾ, ಎಂಥ ಸುಂದರ! ಒಟ್ಟಿನಲ್ಲಿ
ಚಾದ ಸಂಪೂರ್ಣ ರುಚಿಯನ್ನು ಮನಸೋ
ಇಚ್ಚೆ ಸವಿಯುತ್ತಿದ್ದ ಅವನು.
ಥಟ್ಟನೆ
ನನ್ನ ಗಮನ, ಅವನು ಸೊಂಟಕ್ಕೆ
ಸಿಕ್ಕಿಸಿಕೊಂಡಿದ್ದ ಮೊಬೈಲಿನ ಮೇಲೆ ಬಿತ್ತು.
"ಅರೇ ಈರಾ, ಮೊಬೈಲು ಯಾವಾಗ
ತಗಂಡ್ಯೋ?" ನಾನು ಆಶ್ಚರ್ಯದಿಂದ ಕೇಳಿದೆ.
ಈರನ ಮುಖ ಊರಗಲವಾಯ್ತು. "ನಾ
ತಗಂಡಿದ್ದಲ್ರೋ, ಕೇರಿಮನೆ ನಾಗು ಹೆಗಡ್ರು
ಕೊಡ್ಸಿದ್ದು. ನನ್ನ ಕೈಲಿ ಅಷ್ಟೆಲ್ಲ
ದುಡ್ಡು ಎಲ್ಲೈತ್ರಾ? ಅವರ ತ್ವಾಟಾ ನೊಡ್ಕತ್ತಾ
ಇದ್ನಲ್ರಾ ನಾನು. ತಮಾ, ಇದ್ರಲ್ಲಿ
ನಂಗೆ ಫೋನ್ ಮಾಡ್ಲಿಕ್ಕೆ ಆಗದಿಲ್ಲಾ,
ಬರೀ ನಂಗೆ ಬರ್ತದೆ" ಹೇಳುವಾಗ
ಅವನ ಮುಖದಲ್ಲಿ ಸಂತೋಷ ಎದ್ದು ಕುಣಿಯುತ್ತಿತ್ತು.
"ಮತ್ತೆ? ಈರಾ ಈಗೆಲ್ಲಾ ದೊಡ್ಡ
ಮನುಶ್ಯಾ ಆಗೋಗಿದಾನೆ. ಎಲ್ಲಾ ಫೋನ್ ಮಾಡಿ
ಕರೆಯವರೇ ಅವನ್ನಾ, ಅಲ್ದನಾ ಈರಾ?"
ಅಮ್ಮ ಮತ್ತೆ ಕೆದಕಿದಳು. "ಹೋಗ್ರಾ
ಅಮಾ, ನೀವೊಂದು" ಈರ ಹುಸಿಕೋಪ ತೋರಿಸಿದ.
"ತಮಾ, ಮತೆ ತಮಾಸೆಗಲ್ಲಾ, ಈ
ಫೋನ್ ಬಂದಾಗಿಂದ ತಲೆ ಕೆಟ್ಟೋಯ್ತು ಮಾರಾಯ,
ಬಿಡುದೇ ಇಲ್ಲ, ಅಲ್ಲ್ ಬಾ,
ಇಲ್ಲ್ ಬಾ ಹೇಳಿ ಕರೆಯವ್ರೇ
ಎಲ್ಲಾ. ಫೋನ್ ಇಲ್ದೇ ಇದ್ದಾಗ್ಲೇ
ಆರಾಮಿದ್ದೆ ನಾನು" ಈರ ಅವನ ಕಷ್ಟ
ತೋಡಿಕೊಂಡ. "ನಿಮ್ಮನೆ ಬಾಮಿಯಿಂದ ಇತ್ಲಾಗಿ
ಮೇಲೆ ಎಲ್ಲೂವಾ ಸಿಗ್ನಲ್ಲೇ ಸಿಗದಿಲ್ಲ.
ಹಾಂಗ್ ಹೇಳಿ ಕೆಳ್ಗೆ ಹೋದ್ರೆ
ಬರ್ತದೆ ಮತ್ತೆ. ಅಮಾ, ನೀವು
ತಮಾಸೆ ಮಾಡ್ತ್ರಿ, ಇಲ್ಲಿ ಸಿಗ್ನಲ್ಲು ಬರ್ತಿದ್ರೆ
ಗೊತ್ತಾಗ್ತಿತ್ತು ನಿಮ್ಗೆ ಈರನ ಕಷ್ಟ.
ನಿಮ್ಮನೆ ಕೆಲ್ಸ ಮುಗ್ಸಕೆ ಬಿಡ್ತಿದ್ರು
ಅನ್ಕಂಡಿದ್ರಾ? ಸಾವಿರ ಫೋನ್ ಬರ್ತಿತ್ತು
ಇಷ್ಟೊತ್ತಿಗೆ", ಈರ ಅಮ್ಮನ ಕಡೆ
ತಿರುಗಿ ಹೇಳತೊಡಗಿದ. "ಹಾಂಗಾರೆ ಒಂದು ಕೆಲ್ಸಾ
ಮಾಡು, ಇನ್ನು ದಿನಾ ಇಲ್ಲೇ
ಬಾ, ಯಾರ್ದೂ ಫೋನೇ ಬರದಿಲ್ಲಾ,
ಹ್ಯಾಂಗೆ?" ಅಮ್ಮ ಮತ್ತೆ ರೇಗಿಸಿದಳು.
"ನೀವ್ ಅಡ್ಡಿಲ್ಲಾ, ಕಡೀಗೆ ನಾನು ಹೊಟ್ಟಿಗೆ
ಎಂಥಾ ತಿನ್ನೂದು? ನಿಮ್ಮ ಮಾತು ಕೇಳಿದ್ರೆ
ಅಷ್ಟೇಯಾ. ಬರ್ತೆ ನಾನು, ಕತ್ಲಾಗದ್ರೊಳಗೆ
ಗದ್ದೆ ಮನೇಲ್ಲಿರಬೇಕು, ಆತಾ?" ಎನ್ನುತ್ತ ಹೊರಡಲನುವಾದ.
"ಈರಾ ಮೊನ್ನೆ
ಬೆಂಗ್ಳೂರಿಗೆ ಹೋಗಿದ್ದ ಗೊತ್ತಿದ್ದ ನಿಂಗೆ?"
ಅಮ್ಮ ನನ್ನ ಕೇಳಿದಳು. "ಹೌದೇನೋ
ಈರಾ?" ನನಗೆ ಈ ಸಲ
ನಿಜವಾಗಿಯೂ ಆಶ್ಚರ್ಯವಾಗಿತ್ತು. ಈರನ ಮುಖ ಯಥಾಪ್ರಕಾರ
ಹೂವಿನಂತೆ ಅರಳಿತು. "ಮತ್ತೆ, ಈರನ್ನು ಕಮ್ಮಿ
ಹೇಳಿ ತಿಳ್ಕಂಜ್ಯ ನೀನು? ಕೆಲ್ಸಕ್ಕೆ ಬೆಂಗ್ಳೂರಿಗೂ
ಕರ್ಕಂಡು ಹೋಗ್ತಾ ಇದ್ದ ಈಗ
ಜನ" ಅಮ್ಮ ನನಗೆ ವಿವರಿಸಿದಳು.
"ಬೇರೆ ಯಾರೂ ಅಲ್ರಾ, ನಾಗು
ಹೆಗಡ್ರೇ ಕರ್ಕಂಡು ಹೋಗಿದ್ದು ತಮಾ,
ಅವ್ರ ಮನೆ ಸಾಮಾನೆಲ್ಲ ಸಾಗ್ಸದಿತ್ತು,
ಅಲ್ಲೇಯಾ ಬೆಂಗ್ಳೂರಲ್ಲಿ. ಅಲ್ಲೇ ಆದ್ರೆ ನಾಲ್ಕೈದು
ಜನಾ ಬೇಕಾಗ್ತರಂತಲ್ರಾ, ನಾನು ಒಬ್ನೇ ಮಾಡದೆ,
ಹಾಂಗೇಯಾ ಮೂರು ದಿನ ಇದ್ದು
ಬಂದೆ ನೋಡು" ಅಮ್ಮನ ಮಾತನ್ನು ತುಂಡರಿಸುತ್ತ
ಈರನೇ ಹೇಳತೊಡಗಿದ. "ಹ್ಯಾಂಗೆ ಹೋಗಿದ್ದು, ಬಸ್ನಲ್ಲಿ?"
ನಾನು ಪ್ರಶ್ನೆಗಳ ಸರಮಾಲೆಯನ್ನೇ ಸುರಿಸಲು ತಯಾರಾಗಿ ಕುಳಿತೆ.
"ಹಂ, ಬಸ್ನಲ್ಲೇಯಾ, ಅದೆಂತಾ ಕುತ್ಕಂಡೇ ನಿದ್ದೆ
ಮಾಡದು? ನಂಗೆ ನಿದ್ದೆನೇ ಬರ್ಲಿಲ್ಲಾ,
ಥೋ ನನ್ನ ಪರಿಸ್ಥಿತಿ ಬ್ಯಾಡಾ
ಮಾರಾಯ್ರಾ. ನೀವು ಪ್ರತಿಸಲಾ ಹಾಂಗೇ
ಹೋಗುದಾ ಬೆಂಗ್ಳೂರ್ಗೆ? ನನ್ನ ಕೈಲಂತೂ ಸಾಧ್ಯಾನೇ
ಇಲ್ರೋ" ಈರ ನಾಟಕೀಯವಾಗಿ ಕೈ
ಎತ್ತಿ ಆಡಿಸಿ ತೋರಿಸಿದ. "ಈಗೆಲ್ಲಾ
ಮಲಕ್ಕೊಂಡೇ ಹೋಗೋ ಬಸ್ ಬಂದಿದ್ಯೋ,
ಅದ್ರಲ್ಲಿ ನಾವು ಹೋಗೋದು, ಅದಿರ್ಲಿ
ಎಂಥಾ ಅನ್ನಿಸ್ತು ಬೆಂಗ್ಳೂರು ನಿಂಗೆ?" ನನಗೆ ಕುತೂಹಲ ತಡೆಯಲಾಗಲಿಲ್ಲ.
ಈರ ಒಂದು ಕ್ಷಣ ಮೌನವಾದ.
ಕವಳ ಸಂಚಿಯನ್ನು ಹೊರತೆಗೆದು, ಇನ್ನೊಂದೆರಡು ಅಡಿಕೆ ಚೂರನ್ನು ಬಾಯಿಗೆಸೆದವನೇ,
"ಎಂಥಾ ನಮ್ನಿ ಸೆಕೆನೋ ಮಾರಾಯ್ರೆ
ಬೆಂಗ್ಳೂರ್ನಲ್ಲಿ, ನಂಗಂತೂ ಸಾಕಾಗೋತು ನೋಡಿ.
ಅಲ್ಲಾ, ನಮ್ಮಲ್ಲಿ ಕೆಲ್ಸ ಮಾಡಿ ಸುಸ್ತಾತು
ಅಂದ್ರೆ ಮರದ ನೆಳ್ಳಲಾದ್ರೂ ನಿಂತ್ಕಂಡು
ಸುಧಾರಿಸ್ಕಂಬದು. ಅಲ್ಲಿ ಎಂಥಾ ಅದೆ?
ಎಲ್ಲಿ ನೋಡಿದ್ರೂವಾ ಮನೆನೇಯಾ. ಸಾಕ್ರೋ ಮಾರಾಯ್ರೇ ನಿಮ್ಮ
ಬೆಂಗ್ಳೂರು ಸಾವಾಸ." ಎಂದು ಅಣಕಿಸುವನಂತೆ ನನ್ನ
ನೋಡಿ ಕೈಮುಗಿದ. ನನಗೆ ನಗು ಬಂತು.
"ಹಂಗಾರೆ ಬೆಂಗ್ಳೂರು ಸುಖಾ
ಇಲ್ಲಾ ಅಂಥಾಯ್ತು ನೋಡು" ತಗ್ಗಿದ ದನಿಯಲ್ಲಿ ಹೇಳಿದೆ.
"ನಾ ಹಾಂಗೆ ಹೇಳ್ಲಿಲ್ಲ ತಮಾ,
ನಮಗೆ ಇಲ್ಲಿಂದ ಹೋದವ್ಕೆ ಕಷ್ಟಾ
ಹೇಳಿ ಅಷ್ಟೆಯಾ" ಈರ ಸಮಾಧಾನ ಪಡಿಸಲು
ಪ್ರಯತ್ನಿಸಿದ. "ಹೋಗ್ಲಿ ಬಿಡು, ಎಂಥೆಂಥಾ
ನೋಡ್ಕಂಡು ಬಂದೆ ಬೆಂಗ್ಳೂರಲ್ಲಿ?" ನಾನು
ಯಾವುದನ್ನೂ ಬಿಡಲು ತಯಾರಿರ್ಲಿಲ್ಲ. "ಎಂಥಾ ನಂಗೆ ಜಾಸ್ತಿ
ತೆಳೀಲಿಲ್ರಾ, ಹೆಗಡ್ರು ವಿಧಾನ ಸೌಧಕ್ಕೆ
ಕರ್ಕಂಡು ಹೋಗಿದ್ರು, ದೊಡ್ಡದೊಂದು ಹೂವಿನ ತ್ವಾಟ ಇದ್ಯಲ್ರಾ,
ಎಂಥದೋ ಬಾಗು, ಅದಕ್ಕೆ ಹೋಗಿದ್ದೆ.
ತಮಾ ನಂಗೆ ಮಜಾ ಅನ್ಸಿದ್ದು,
ಬೆಂಗ್ಳೂರಲ್ಲಿ ಎಷ್ಟು ಎತ್ತರದ ಬಿಲ್ಡಿಂಗ್
ಮಾರಾಯಾ, ಓ ಇಷ್ಟು ಎತ್ತರ,
ಅದ್ರ ತುದಿ ನೋಡ್ಲಿಕ್ಕೆ ಹೋಗಿ
ನನ್ನ ಟೊಪ್ಪಿನೇ ಕೆಳ್ಗೆ ಬಿದ್ದು ಹೋಯ್ತು
ಹೇಳಿ" ಅಂದು ಜೋರಾಗಿ ನಗತೊಡಗಿದ.
ಸ್ವಲ್ಪ ಸಮಯದ ನಂತರ ಅವನೇ
ಸುಧಾರಿಸಿಕೊಂಡು, "ಅಲಾ ಬೆಂಗ್ಳೂರ್ನಾಗೆ ಅಂಥದ್ದು
ಎಷ್ಟ್ ಬಿಲ್ಡಿಂಗ್ ಇದ್ದೀತು ಅಂತೀನಿ? ಎಲ್ಲಾ
ಕಡೆ ಅದೇ ಕಾಣ್ತದಲ್ರೋ" ನನ್ನ
ಮುಖವನ್ನೇ ದಿಟ್ಟಿಸುತ್ತ ಕೇಳಿದ. ನಾನು ಏನು
ಹೇಳಲಿ? "ಹಂ, ಅದೆ ಬೇಕಾದಷ್ಟು,
ಕಟ್ಕಂಡು ಎಂಥಾ ಮಾಡ್ತೀಯಾ?" ನಿರಾಸಕ್ತಿಯಿಂದ
ಹೇಳಿದೆ. ಆದರೆ ಅವನ ಉತ್ಸಾಹ
ಒಂದಿಂಚೂ ಕಡಿಮೆಯಾಗಲಿಲ್ಲ.
ತಮಾ,
ನಾ ಎಂಥಾ ಮಾಡಿದ್ದೆ ಗೊತ್ತದಾ?
ಎರಡು ಲೀಟರ್ ಬಾಟ್ಲ್ ಇರ್ತದಲ್ರಾ,
ಹಾಂಗಿದ್ದು ಎರಡ್ ಬಾಟ್ಲಲ್ಲಿ ಮನೆ
ನೀರೇ ತಗಂಡು ಹೋಗಿದ್ದೆ. ಛೊಲೋ
ಕೆಲ್ಸಾ ಮಾಡಿದ್ದೇ ಹೇಳಿ. ಇಲ್ದೇ ಹೋದ್ರೆ
ಮಾತ್ರಾ ತಮಾ, ನನ್ನ ಗತಿ
ಗೋವಿಂದಾ. ಬೆಂಗ್ಳೂರು ನೀರು ಮಾತ್ರಾ ಕುಡಿಯೂಕೆ
ಆಗೋದಿಲ್ರೋ. ಹಾಂಗೂವಾ ಒಂದು ಗುಟುಕು
ಕುಡದೇ ನೋಡಿ, ಒಂದು ನಮ್ನಿ
ಸೌಳು ಸೌಳು! ನೀರ್ ಕುಡಿದ್ರೂವಾ
ಕುಡದ್ ಹಾಂಗ್ ಆಗ್ಲಿಲ್ಲಾ ಹೇಳಿ.
ಒಂಚೂರೂವಾ ಆಸರೇ ಹೋಗ್ಲಿಲ್ಲಾ. ನೀವು
ಅದೇ ನೀರು ಕುಡಿಯೂದಾ? ಕುಡಿಯೂದಾದ್ರೂ
ಸಾಕ್ರೋ ನೀವು" ಅಂತ ತೀರ್ಪಿತ್ತ. ಮುಂದೆ
ಮಾತನಾಡಿದರೆ ನನಗೇ ಕಷ್ಟ ಅನ್ನಿಸಿ
ನಾನು ಸುಮ್ಮನಾಗಿಬಿಟ್ಟೆ. ಅವನು ಬಿಡಬೇಕಲ್ಲ? "ನೀವು
ಅದ ಹೇಳ್ತ್ರಿ, ಅಲ್ಲಿ ಎಳ್ನೀರು ಹೆಂಗೆ
ಗೊತ್ತಿದ್ದಾ? ನೀರು ಸಾಯ್ಲಿ, ಎಳ್ನೀರಾದ್ರೂ
ಕುಡಿಯೂವಾ ಹೇಳಿ ಎಳ್ನೀರು ತಗಂಡ್ರೆ,
ಥೋ! ಒಳ್ಳೆ ಕಾಸಿದ ನೀರು
ಕುಡದಾಂಗೆ ಆಯ್ತು ನೋಡಿ. ಒಂಚೂರೂ
ರುಚಿ ಇಲ್ಲಾ! ಸಾವಾಸ ಸಾಕ್ರೋ
ನಿಮ್ಮ ಬೆಂಗ್ಳೂರಿಂದು" ಅನ್ನುತ್ತ, ಎಲ್ಲ ಅಸಹನೆಯನ್ನು ಬಾಯೊಳಗಿದ್ದ
ಕವಳದ ಮೇಲೆ ತೀರಿಸಿಕೊಳ್ಳುವನಂತೆ ಜೋರಾಗಿ
ತುಪ್ಪಿದ.
ಮಾರು
ದೂರ ನಿಂತು ಮಾತಾಡುತ್ತಿದ್ದವನಿಗೆ ಏನನ್ನಿಸಿತೋ
ಏನೋ? ನಿಧಾನಕ್ಕೆ ಹತ್ತಿರ ಬಂದು "ನಾ
ಹೀಂಗ್ ಹೇಳ್ತೆ ಹೇಳಿ ನೀವು
ಬೇಜಾರ್ ಮಾಡ್ಕಬೇಡಿ ಮತ್ತೆ. ಈಗಂತೂವಾ ಯಾರ್
ನೋಡಿದ್ರೂ ಬೆಂಗ್ಳೂರು, ಬೆಂಗ್ಳೂರು ಹೇಳಿ ಕುಣೀತ್ರು. ಒಂದು
ಗಾಳಿ ಇಲ್ಲಾ, ಮರಾ ಇಲ್ಲ,
ಕುಡ್ಯೂಕೆ ಸರಿ ನೀರೂ ಇಲ್ಲಾ,
ಅಲ್ಲಿ ಹೋಗಿ ಎಂಥಾ ಮಾಡ್ತ್ರೋ
ದೇವ್ರೇ ಬಲ್ಲ. ಇಲ್ಲಿ ಬಂಗಾರದ
ತ್ವಾಟನೆಲ್ಲಾ ಹಾಳು ಕೆಡಕ್ತ್ರಿ. ಈಗ
ಗೊತ್ತಾಗದಿಲ್ಲ ನಿಮ್ಗೆಲ್ಲಾ. ಒಂದು ಹೇಳ್ತೆ ಕೇಳಿ.
ಯಾವತ್ತಿಗೂವಾ ನಮ್ಮೂರೇ ನಮ್ಗೆ ಚೆಂದ.
ಇವತ್ತಲ್ಲಾ, ನಾಳೆ ಎಷ್ಟೋ ವರ್ಷಾ
ಆದಮೇಲಾದ್ರೂವಾ ನೀವು, ಆವತ್ತು ಈರ
ಹೀಂಗೆ ಹೇಳಿದ್ದಾ ಹೇಳಿ ನೆನಪು ಮಾಡ್ಕಳದ್ದೇ
ಇದ್ರೆ ನೋಡಿ ಮತ್ತೆ" ಅಂದ.
ಅವನ ಧ್ವನಿಯಲ್ಲಿದ್ದ ವಿಷಾದ ಎದ್ದು ತೋರುತ್ತಿತ್ತು.
ನನ್ನ ಬಾಯಿ ಕಟ್ಟಿಹೋಗಿತ್ತು. ನಾನು
ಮಾತನಾಡದಿದ್ದನ್ನು ನೋಡಿ ಈರ, "ನಾ
ಬರ್ತೆ ಹಾಂಗಾರೆ, ಅಮಾ, ಮತ್ತೆಂತಾರೂ ಕೆಲ್ಸಾ
ಇದ್ರೆ ಹೆಗಡ್ರಿಗೆ ಫೋನ್ ಮಾಡ್ಲಿಕ್ಕೆ ಹೇಳಿ
ಆತಾ?" ಅಂದು ಹೊರಟೇಬಿಟ್ಟ. ಕ್ಷಣಾರ್ಧದೊಳಗೆ
ಈರ ಮನೆ ಗೇಟನ್ನು ದಾಟಿ,
ಕಣ್ಣಳತೆಯ ದೂರದಲ್ಲಿದ್ದ ಟಾರ್ ರಸ್ತೆಯ ಆಚೆಬದಿಯನ್ನು
ತಲುಪಿಯಾಗಿತ್ತು. ನಾನು ಅವನು ಹೋದ
ದಾರಿಯನ್ನೇ ನೋಡುತ್ತಾ ಕುಳಿತೆ.