Monday, May 9, 2011

ಮೊದಲ ಪುಟಕು ಕೊನೆಯ ಪುಟಕೂ

ಸಾಲಾಗಿ ಅರಳಿ ನಿಂತ ಗುಲ್ ಮೊಹರ್ ಮರಗಳ ಎಡೆಯಲ್ಲಿ, ಮುಳುಗುತ್ತಿರುವ ಸೂರ್ಯ ಆಗಾಗ ಇಣುಕಿ ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು. ಹೇಗೆ ಶುರು ಮಾಡುವುದೆಂದೇ ತಿಳಿಯದೆ ಇಬ್ಬರೂ ಬರೀ ನೆಲ ನೋಡುತ್ತ ನಡೆಯುತ್ತ ಹಾದಿ ಸವೆಸಿದ್ದೆವು. ಮದುವೆ ನಿಶ್ಚಯವಾದ ಮೇಲೆ ಮೊದಲನೇ ಬಾರಿ ಹೊರಗೆ ಭೇಟಿಯಾಗಿದ್ದು ಇವತ್ತು. ಒಂದಿಷ್ಟು ತವಕ, ಉತ್ಸಾಹ, ಉಲ್ಲಾಸ ಎಲ್ಲ ಸೇರಿ ವಾತಾವರಣದ ಬಿಸಿ ಏರಿಸಿದ್ದವು. ಅದರ ಸೂಚನೆ ಹಿಡಿದುಕೊಂಡೇ, ಗಾಳಿ ತಂಪಾಗಿ ಬೀಸುತ್ತಿದೆಯೇನೋ ಎಂದೆನಿಸಲು ಶುರುವಾಗಿತ್ತು. ಮೊದಲು ಮಾತಾಡಿದ್ದೇ ಅವಳು. "ಹೇಗಿದೆ ನನ್ನ ಡ್ರೆಸ್?" ನನ್ನ ಕಣ್ಣುಗಳನ್ನೇ ದಿಟ್ಟಿಸಿ ಕೇಳಿದ ಪ್ರಶ್ನೆಗೆ ನಾನು ತುಸು ಅವಾಕ್ಕಾಗಿದ್ದು ನಿಜ. "ಚೆನ್ನಾಗಿದೆ" ಎಂದಷ್ಟೇ ಉತ್ತರಿಸಲು ಸಾಧ್ಯವಾಗಿದ್ದು. ಮುಂದೆ ಮಾತಾಡಿದ್ದೆಲ್ಲ ಅವಳೇ ಜಾಸ್ತಿ. ಹೊಟೆಲ್ಲಿನಲ್ಲಿ ಊಟಕ್ಕೆ ಕುಳಿತಾಗಲೂ ಅಷ್ಟೇ. ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿದ್ದ ಅವಳ ಮುಖಚರ್ಯೆ, ಯಾವುದನ್ನೋ ವಿವರಿಸುವಾಗ ಕೈ ಬೆರಳುಗಳನ್ನೆಲ್ಲ ತಿರುಗಿಸುವ ರೀತಿ, ಗಾಳಿಗೆ ಮುನ್ನುಗ್ಗಿ ಬರುತ್ತಿದ ಮುಂಗುರುಳುಗಳನ್ನೆಲ್ಲ ಹಿಂದೊತ್ತಿ ಸಿಕ್ಕಿಸುವ ಪರಿ, ಎಲ್ಲ ನೋಡುತ್ತ ನಾನು ಕಳೆದೇ ಹೋಗಿದ್ದೆ. ಮಧುರವಾದ ಅನುಭೂತಿಯೊಂದದ ಗುಂಗಿನೊಳಗೆ ಸಿಕ್ಕು ಮನಸ್ಸು, ತೇಲಿ ತೇಲಿ ಹೋಗಿತ್ತು.
- ಸುಹಾಸ್, ಜನವರಿ ೧೯

ಹನ್ನೊಂದನೇ "ಬಿ" ಕ್ರಾಸ್ ಇನ್ನೂ ದಾಟಿರಲಿಲ್ಲ, ಶುರುವಾಗಿತ್ತು ಮುಸಲಧಾರೆ. ಹೃದಯದೊಳಗೆ ಹೇಳದೇ ಕೇಳದೇ ಶುರುವಾಗುವ ಪ್ರೀತಿಯಂತೆಯೇ, ಒಂದಿನಿತೂ ಸೂಚನೆ ಕೊಡದೇ. ಕೈಯಲ್ಲಿದ್ದಿದ್ದು ಒಂದೇ ಕೊಡೆ. ಮಳೆಹನಿಗಳು ಸಂಪೂರ್ಣವಾಗಿ ತೋಯಿಸುವ ಮುಂಚೆ ಇಬ್ಬರೂ ಅದರೊಳಗೆ ತೂರಿಕೊಂಡಿದ್ದಾಗಿತ್ತು. ಸುಮ್ಮನೆ ಅವಳ ಕಣ್ಣುಗಳನ್ನೊಮ್ಮೆ ನೋಡಿದ್ದೆ, ಧೈರ್ಯ ಮಾಡಿ. ಅವುಗಳಲ್ಲಿ ಪ್ರತಿಫಲಿಸುತ್ತಿದ್ದುದು ನಾಚಿಕೆಯೋ, ಆತಂಕವೋ ಥಟ್ಟನೆ ಗುರುತಿಸಲಾಗಿರಲಿಲ್ಲ. ಕಾಲುಗಳು ಮನಸ್ಸಿನೊಳಗೆ ಬೇಯುತ್ತಿರುವ ತುಮುಲಗಳನ್ನು ಲಕ್ಷಿಸದೇ, ತಮ್ಮಷ್ಟಕ್ಕೆ ಅವರ ಕೆಲಸ ಮುಂದುವರಿಸಿದ್ದವು. ಅನಿರೀಕ್ಷಿತವಾಗಿ ಒದಗಿ ಬಂದ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೇ ಗಲಿಬಿಲಿಗೊಂಡಿದ್ದೆ. ಅವಳ ಮೈಯ್ಯ ಘಮ, ಮೊದಲ ಮಳೆ ಹೊತ್ತು ತಂದ ಮಣ್ಣ ಸುವಾಸನೆಯ ಜೊತೆ ಬೆರೆತು ಅನಿರ್ವಚನೀಯವಾದ ವಾತಾವರಣವೊಂದನ್ನು ಸೃಷ್ಟಿ ಮಾಡಿತ್ತು. ನಡೆವಾಗಲೊಮ್ಮೆ ಅವಳ ಕಿರುಬೆರಳ ತುದಿ ನನ್ನ ಕೈಯನ್ನೊಮ್ಮೆ ಸವರಿರಬೇಕು. ಮೈಯಲ್ಲೊಮ್ಮೆ ಮಿಂಚಿನ ಸಂಚಾರ!. ಅಂಥ ಮಳೆಯ ಛಳಿಯಲ್ಲೂ ಬೆವೆತುಹೋಗಿದ್ದೆ. ಸಾವರಿಸಿಕೊಳ್ಳಲು ಹಲವು ಕ್ಷಣಗಳೇ ಬೇಕಾಗಿದ್ದವು. ನನ್ನಲ್ಲಾದ ಭಾವೋದ್ವೇಗದ ಅರಿವು ಅವಳಿಗೂ ಗೊತ್ತಾಗಿರಬೇಕು. ಪುಟ್ಟದ್ದೊಂದು ತುಂಟ ನಗು ತುಟಿಯಂಚಲ್ಲಿ ಅರಳಿ ಮರೆಯಾಗಿದ್ದು, ಕೇವಲ ನನ್ನ ಭ್ರಮೆಯಾಗಿರಲಿಕ್ಕಿಲ್ಲ!. ಎಂಟು ಹತ್ತು ಹೆಜ್ಜೆ ಹಾಕುವುದರಲ್ಲಿ ಅವಳ ಮನೆ ಮುಟ್ಟಾಗಿತ್ತು. ಆದರೆ ಆ ಕ್ಷಣಗಳಲ್ಲಿ ಅನುಭವಿಸಿದ ರೋಮಾಂಚನವನ್ನು ಶಬ್ದಗಳಲ್ಲಿ ಹಿಡಿದಿಡಲು ಕಲ್ಪನಾಶಕ್ತಿ ಸಾಕಾಗಲಿಕ್ಕಿಲ್ಲ. ದೇವಲೋಕದ ಅಪ್ಸರೆಯೊಬ್ಬಳು ಇಹವ ಮರೆಸಿ ನಂದನವನದ ಸಂಚಾರ ಮಾಡಿಸಿದಂತೆ, ಜಡವ ತೊಡೆದು ಉಲ್ಲಾಸದ ಹೊಳೆ ಹರಿಸುವ ಅಮೃತ ಸಿಂಚನದಂತೆ. ಬಾಗಿಲ ತೆರೆದು, ಕೈ ಬೀಸಿ ಒಳಗೆ ನಡೆದವಳ ತುಂಬುಗಣ್ಣುಗಳಲ್ಲಿ ಸಂತಸದ ಹೊಳಹು ದಟ್ಟವಾಗಿ ಹೊಳೆಯುತ್ತಿತ್ತು.
- ಸುಹಾಸ್, ಫೆಬ್ರುವರಿ ೨೭

ಪ್ರೀತಿಯ ಕೋಮಲ ಬಾಹುಗಳಲ್ಲಿ ಸಿಲುಕಿಕೊಂಡವರಿಗೆ ಜಗತ್ತೆಲ್ಲ ಸುಂದರವಾಗಿ ಕಾಣುತ್ತದೆಂಬ ಸಂಗತಿ ಸುಳ್ಳಲ್ಲ. ಹೂವು ಅರಳುವ ಸೊಬಗು, ಹಕ್ಕಿ ಹಾಡುವ ಹಾಡು, ಹರಿವ ನದಿಯ ಸದ್ದು, ಇರುಳ ಬೆಳಗುವ ತಾರೆ, ಎಲ್ಲ ಪ್ರೀತಿಯ ಚಿರ ನೂತನತೆಯನ್ನು ಸಂಕೇತಿಸುವಂತೆ ಭಾಸವಾಗುತ್ತವೆ. ವೀಣೆಯ ತಂತಿಯನ್ನು ಮೀಟಲು ಬೆರಳುಗಳು ಹವಣಿಸುತ್ತವೆ, ಅರಿವಿಲ್ಲದೆಯೇ ಕೊರಳು ಹೊಸಹಾಡಿಗೆ ದನಿಯಾಗುತ್ತದೆ. ಕಣ್ಸನ್ನೆಗಳು ಹೊಸ ಭಾಷೆ ಕಲಿಸುತ್ತವೆ, ಕವಿತೆಗಳು ಹೊಸ ಅರ್ಥ ಹೊಳೆಯಿಸುತ್ತವೆ. ಮಾತುಗಳು ಮೆದುವಾಗುತ್ತವೆ, ಮೌನ ಎಂದಿಗಿಂತ ಹೆಚ್ಚು ಸುಂದರವೆನ್ನಿಸುತ್ತದೆ. ಅಮೃತವಾಹಿನಿಯಂತೆ ಮಾನವನ ಎದೆಯಿಂದ ಎದೆಗೆ ಸದಾ ಹರಿಯುತಿರುವ ಈ ಭಾವಕೆ ಬೇರೆ ಮಿಗಿಲುಂಟೇ? ಗೆಳತಿಯ ಸಿಹಿಮಾತಿಗಾಗಿ ಕಾತುರವಾಗಿ ಕಾಯುವ ಕ್ಷಣಗಳಲ್ಲಿ ಅನುಭವಿಸುವ ಚಡಪಡಿಕೆಗಳಿಗೆ, ನಗುವ ಹಂಚಿಕೊಂಡು ಜಗವ ಮರೆತ ಕ್ಷಣಗಳಿಗೆ ಬೆಲೆ ಕಟ್ಟಲು ಸಾಧ್ಯವಾದೀತೆ?
- ಸುಹಾಸ್, ಮಾರ್ಚ್ ೮

"ಒಲವು ದೇವರ ಹೆಸರು, ಚೆಲುವು ಹೂವಿನ ಬದುಕು". ಚೆಲುವ, ಒಲವ ಬಾಳು ನಿಮ್ಮದಾಗಲಿ, ಹಾರೈಸಿದರು ಹಿರಿಯರೊಬ್ಬರು. ಎಂಥ ಸುಂದರ ಆಶೀರ್ವಾದ!. ಹೇಳಿಕೊಳ್ಳಲಾಗದಷ್ಟು ಹಿಗ್ಗು ಎದೆಯ ಕಣಕಣದಲ್ಲೂ. ಬಾಳಿನ ಹೊಸ ಘಟ್ಟವೊಂದನ್ನು ಪ್ರವೇಶಿಸಿದ ಸಂಭ್ರಮ, ಹೊಸದಾದ ಜವಾಬ್ದಾರಿಯೊಂದ ನಿಭಾಯಿಸುವ ವಾಗ್ದಾನ, ಪರಸ್ಪರ ನಂಬಿಕೆಯ ಮೇಲೆ ಸುಖದ ಸೌಧ ಕಟ್ಟುವ ಭರವಸೆ ಎಲ್ಲ ಮಿಳಿತವಾಗಿ ಹಿತವಾದ ರಸಾನುಭೂತಿಯನ್ನು ಕಟ್ಟಿಕೊಟ್ಟಿದ್ದವು. ಎಷ್ಟೆಲ್ಲ ಹಿರಿಯರ, ಬಂಧುಗಳ, ಆಪ್ತರ ಸಂತಸದಲ್ಲಿ ಒಳಗೊಂಡು, ಅವರೆಲ್ಲರ ಶುಭ ಹಾರೈಕೆಗಳಿಗೆ ಧನ್ಯರಾದೆವು!. "ಸವಿತಾ-ಸುಹಾಸ್" ಒಳ್ಳೇ ಜೋಡಿ, ಅನುರೂಪವಾಗಿ ಬಾಳಿ. ಎಲ್ಲರೂ ಆಶೀರ್ವದಿಸಿದ್ದರು. ವೈದಿಕರ ವೇದ ಘೋಷಗಳು ಕಿವಿಯಲ್ಲಿ ಇನ್ನೂ ಗುನುಗುಣಿಸುತ್ತಲೇ ಇದ್ದಂತಿದೆ. ಹೋಮದ ಹೊಗೆಯ ಉರಿ ಕಣ್ಣಲ್ಲೇ ಸಿಕ್ಕಿಹಾಕಿಕೊಂಡಂತಿದೆ. ಧಾರೆ ಎರೆಯುವ ಹೊತ್ತಲ್ಲಿ, ಬೊಗಸೆಯಲ್ಲಿ ಅವಳ ಕೈಯನ್ನು ತುಂಬಿಕೊಂಡಾಗ, ಕೈ ನಡುಗಿದ್ದು ನೆನೆದರೆ ಈಗಲೂ ಮೈ ಝುಂ ಎನ್ನುತ್ತದೆ. ಕೊರಳಿಗೆ ಅರಿಸಿಣದ ದಾರ ಕಟ್ಟುವಾಗ, ನನ್ನ ಕೈಯ ಬಿಸುಪು ಅವಳಿಗೆ ರೋಮಾಂಚನ ತಂದಿರಬಹುದೆಂಬ ತುಂಟ ಊಹೆ ತುಟಿಯಂಚಲಿ ಕಿರುನಗೆಯೊಂದನ್ನು ಮೂಡಿಸುತ್ತದೆ. ಮುಂದೆಲ್ಲೋ ಬದುಕ ದಾರಿಯಲ್ಲಿ ನಿಂತು ಹಿಂತಿರುಗಿ ನೋಡಿದಾಗ, ಈ ದಿನ ಉಜ್ವಲವಾಗಿ ಹೊಳೆದು ಮನಕೆ ಸಂತಸವೀಯುವುದರಲ್ಲಿ ಸಂದೇಹವೇ ಇಲ್ಲ.
- ಸುಹಾಸ್, ಮಾರ್ಚ್ ೨೯

"ವಯಸ್ಸಿಗೆ ಮೀರಿದ ಪ್ರೌಢತೆಯಿದೆ" ಅಂದುಕೊಂಡಿದ್ದು ಇವಳಿಗೇನಾ? ಪುಟ್ಟ ಮಕ್ಕಳಾದರೂ ಇಷ್ಟೊಂದು ಹಠಮಾಡಲಿಕ್ಕಿಲ್ಲ. ಚಿಕ್ಕ ಪುಟ್ಟ ವಿಷಯಗಳಿಗೆಲ್ಲ ಯಾಕೆ ಇಷ್ಟು ತಲೆಕೆಡಿಸಿಕೊಳ್ಳುತ್ತಾಳೆ? ಪದೇ ಪದೇ, "ನನ್ನನ್ನು ನೀವು ನಿಜವಾಗಿ ಪ್ರೀತಿಸುತ್ತಿದ್ದರೆ ಈ ರೀತಿ ಮಾಡುತ್ತಿರಲಿಲ್ಲ" ಎಂಬ ಮೂದಲಿಕೆ ಬೇರೆ. ಇವಳಿಗೆ ನಿಜವಾಗಿ ಇದ್ದದ್ದು ಕೀಳರಿಮೆಯೋ, ಅಥವಾ ವಿಪರೀತ ಅಭದ್ರತೆಯೋ ಕಾಣೆ. ಯಾವುದು ಪ್ರೀತಿ, ಯಾವುದು ನಿಜವಾದ ಕಾಳಜಿ, ಯಾವುದು ಗದರುವಿಕೆ ಎಂದೇ ಗೊತ್ತಾಗದಷ್ಟು ಮುಗ್ಧಳೇ ಹಾಗಾದರೆ? ಯಾರ ಎದಿರು ಹೇಗೆ ನಡೆದುಕೊಳ್ಳಬೇಕೆಂಬ ಸಾಮಾನ್ಯ ಪರಿಜ್ಞಾನವೂ ಇರುವ ಹಾಗೆ ಕಾಣುತ್ತಿಲ್ಲ. ಇವತ್ತು ಅಪರೂಪಕ್ಕೆ ಮನೆಗೆ ಬಂದ ಅತಿಥಿಗಳ ಎದುರು, ಯಾವುದೋ ಕ್ಷುಲ್ಲಕ ಕಾರಣಕ್ಕೆ ಕೋಪಿಸಿಕೊಂಡು, ಹೇಗೆ ಊಟದ ಬಟ್ಟಲನೆಸೆದು ಹೋದಳಲ್ಲ, ಎಷ್ಟು ಕೆಟ್ಟದೆನಿಸಿತ್ತು. ತಲೆ ಮೇಲೆ ಎತ್ತಲಾಗದಷ್ಟು ಅವಮಾನ. ಅವರೆಲ್ಲ ಏನು ಅಂದುಕೊಂಡಿರಬಹುದು. ಮೊನ್ನೆ ಕಾರಲ್ಲಿ ಹೋಗುತ್ತಿರುವಾಗ ಯಾವುದೋ ಅಂಗಡಿಯಲ್ಲಿ ಪ್ರದರ್ಶನಕ್ಕಿದ್ದ ಸೀರೆ ಬೇಕೇ ಬೇಕು ಎಂದೆಲ್ಲ ರಂಪ ಮಾಡಿ, ನಡು ಬೀದಿಯಲ್ಲಿ ಕಾರನ್ನು ನಿಲ್ಲಿಸುವಂತೆ ಮಾಡಿದ್ದನ್ನು ಮರೆಯಲಾದೀತೆ? ಅಥವಾ "ನೀವು ಬೇಕೆಂದೇ ಆಫೀಸಿನಿಂದ ತಡ ಮಾಡಿ ಬರುತ್ತಿದ್ದೀರಿ" ಎಂದು ಮುನಿಸಿಕೊಂಡು ಊಟ ಬಿಟ್ಟ ದಿನಗಳ ಲೆಕ್ಕ ಇಡಲಾದೀತೆ?. ಕೆಲವೊಮ್ಮೆ ನಾನು ಕೊಟ್ಟ ಸಲಿಗೆಯೇ ಜಾಸ್ತಿ ಆಗಿರಬೇಕೆಂದೆನಿಸಲು ಶುರುವಾಗಿಬಿಡುತ್ತದೆ. ಇಲ್ಲ, ಇನ್ನೂ ಚಿಕ್ಕ ವಯಸ್ಸು, ವಾತಾವರಣ ಹೊಸದು. ಸ್ವಲ್ಪ ಸಮಯ ಬೇಕು ಅವಳಿಗೂ, ಅಂದೆನಿಸಿ ಹೇಗೋ ಮರೆಯಲು ಪ್ರಯತ್ನಿಸುತ್ತೇನೆ.
- ಸುಹಾಸ್, ಮೇ ೧೬

ಪ್ರೀತಿಯಿಲ್ಲದವರ ಜೊತೆ ಹೇಗೋ ಬಾಳಬಹುದು, ನಂಬಿಕೆಯಿಲ್ಲದವರ ಮಧ್ಯೆ ಬದುಕುವುದು ಹೇಗೆ? ನಂಬಿಕೆ, ವಿಶ್ವಾಸಗಳ ತಳಹದಿಯ ಮೇಲೆ ನಿಲ್ಲ ಬೇಕಾದ ಸಂಬಂಧ, ಅಪನಂಬಿಕೆಯ ಅವಕೃಪೆಗೆ ತುತ್ತಾದರೆ ಬೆಳೆಯುವುದು ಹೇಗೆ? ಮನುಷ್ಯರು ಇಷ್ಟು ಬೇಗ ಬದಲಾಗಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ನೋಡಿದೊಡನೆಯೇ ಸಂಭ್ರಮ ಸುರಿಸುತ್ತಿದ್ದ ಕಣ್ಣುಗಳು ಈಗ ಅನುಮಾನದ ನೋಟದ ಮೊನೆಯಿಂದ ಇರಿಯುತಿವೆ. ಕಾಳಜಿ ತೋರುತ್ತಿದ್ದ ಮಾತುಗಳು, ಶುದ್ಧ ಕೃತಕವೆಂದೆನಿಸಲು ಶುರುವಾಗಿದೆ. ರೋಮಾಂಚನ ತರಿಸುತ್ತಿದ್ದ ಅಪ್ಪುಗೆಗಳಲ್ಲಿನ ಬಿಸುಪು, ತೀರ ಉಸಿರುಕಟ್ಟಿಸಲು ಶುರುವಾಗಿದೆ. ತಾನು ಹೇಳಿದ್ದನ್ನೇ ಸಾಧಿಸಬೇಕೆಂಬ ಹಠಮಾರಿತನ, ವಿವೇಚನೆಯಿಲ್ಲದೆ ಮಾಡುವ ಜಗಳಗಳು, ವಸ್ತುಗಳ ಮೇಲಿನ ಅತಿಯಾದ ವ್ಯಾಮೋಹ, ನನ್ನನ್ನು ತೀರ ಹತಾಶೆಗೆ ದೂಡಿ ಬಿಟ್ಟಿವೆ. ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ನಿದ್ದೆ ಮಾಡಿದಂತೆ ನಟಿಸುವವರನ್ನು ಎಬ್ಬಿಸಲಾದೀತೆ? ನಾನು ನೋಡಿದ ಮೊಲಕ್ಕೆ ಮೂರೇ ಕಾಲು ಎಂದು ವಾದಿಸುವವರನ್ನು ದಾರಿಗೆ ತರಲಾದೀತೆ? ಮಾತೆತ್ತಿದರೆ, "ನಾನಿರುವುದೇ ಹೀಗೆ, ಏನು ಬೇಕಾದರೂ ಮಾಡಿಕೊಳ್ಳಿ" ಎಂದು ಸಿಟ್ಟು ಮಾಡಿಕೊಳ್ಳುವವರಿಗೆ, ಹೊಂದಾಣಿಕೆಯ ಪ್ರಥಮ ಪಾಠಗಳನ್ನು ಹೇಳಿಕೊಡುವವರಾರು? ದಾಂಪತ್ಯದಲ್ಲಿ, ಸೋತೇ ಒಬ್ಬರನೊಬ್ಬರು ಗೆಲ್ಲಬೇಕೆಂಬ ಅಲಿಖಿತ ನಿಯಮವೊಂದಿದೆ ಅನ್ನುವುದರ ಅರಿವು ಸಹಜವಾಗಿಯೇ ಬರಬೇಕೇ ವಿನಹ ಯಾರೂ ಹೇಳಿಕೊಡುವದರಿಂದಲ್ಲ. ಅಲ್ಲವೇ?
- ಸುಹಾಸ್, ಆಗಸ್ಟ್ ೧೬

"ರಸವೇ ಜನನ, ವಿರಸ ಮರಣ, ಸಮರಸವೇ ಜೀವನ" ಅನ್ನುತ್ತದೆ ಕವಿವಾಣಿ. ಸಮರಸ ಸಾಧಿಸಲು ಮೂಲವಾಗಿ ಬೇಕಾದ್ದ ನಂಬಿಕೆಯನ್ನೇ ಕಳೆದುಕೊಂಡ ಮೇಲೆ ಸಂಬಂಧವನ್ನು ಉಳಿಸಿಕೊಂಡು ಹೋಗುವುದರಲ್ಲಿ ಯಾವ ಅರ್ಥವಿದೆ? "ಹೊಂದಾಣಿಕೆ ಹೆಣ್ಣಿಗೇಕೆ ಮಾತ್ರ ಅನಿವಾರ್ಯ?" ಎಂದು ಪದೇ ಪದೇ ವಾದಿಸಿ ಪ್ರತಿರೋಧಿಸುತ್ತಿದ್ದ ಅವಳ ಮನಸ್ಸಿನಲ್ಲಿ ಇರುವುದಾದರೂ ಏನು ಅನ್ನುವುದನ್ನು ಅರಿಯಲು ಯತ್ನಿಸಿ ಸೋತುಹೋಗಿದ್ದೇನೆ. "ಹೊಂದಾಣಿಕೆ ಬರೀ ಹೆಣ್ಣಿಗೊಂದೇ ಅನಿವಾರ್ಯವಲ್ಲ. ಹೆಣ್ಣು ಗಂಡುಗಳಿಗಿಬ್ಬರಿಗೂ. ನಿನ್ನ ಸಂತೋಷಕ್ಕಾಗಿ ಈಗ ನಾನು ಎಷ್ಟೊಂದು ಬದಲಾಗಿದ್ದೇನೆ ನೋಡು" ಎಂಬ ಮಾತು ಅವಳ ಕಿವಿಯ ಮೇಲೇ ಬೀಳುತಿಲ್ಲ. "ಮಧುರವಾದ ಸಂಬಂಧದ ಸೌಧ ಕೇವಲ ಸ್ವಚ್ಚಂದ ಪ್ರೇಮದ ಬುನಾದಿಯೊಂದರಿಂದಲೇ ಕಟ್ಟಲು ಬರುವುದಿಲ್ಲ, ವಿಶ್ವಾಸ ನಂಬಿಕೆಗಳೆಂಬ ಗಟ್ಟಿ ಗೋಡೆಗಳೂ, ಸಣ್ಣ ಪುಟ್ಟ ತ್ಯಾಗಗಳೆಂಬ ಕಿಟಕಿಗಳೂ, ಬಂಧು ಬಳಗದವರೆಲ್ಲ ಜೊತೆ ನಗುತ ಬಾಳುವ ವಿಶಾಲ ಹೃದಯದ ಹೆಬ್ಬಾಗಿಲು, ಇವಿಲ್ಲದೇ ಹೋದರೆ ಎಂಥ ಮನೆಯೂ ಸುಭದ್ರವಲ್ಲ" ಎಂದೆಲ್ಲ ತಿಳಿಸಲು ಹೋಗಿ ವಿಫಲನಾಗಿದ್ದೇನೆ. ತಿಳುವಳಿಕೆಯ ಮಾತು ಹೇಳಲು ಯತ್ನಿಸಿದಾಗಲೆಲ್ಲ, ತಾಳ್ಮೆ ಕಳೆದುಕೊಂಡು ಕೂಗಿ ರಂಪವೆಬ್ಬಿಸುವ ಪರಿಗೆ ಹತಾಶನಾಗಿ ಕೈ ಚೆಲ್ಲಿದ್ದೇನೆ. ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ನನ್ನ ಮೇಲೆ ಹೊರಿಸುತ್ತಿದ್ದ ವಿಚಿತ್ರ ಆರೋಪಗಳನ್ನೆಲ್ಲ ತುಟಿ ಮುಚ್ಚಿ ಸಹಿಸಿದ್ದೇನೆ. ನನ್ನ ತಾಳ್ಮೆಯ ಕಟ್ಟೆ ಎಲ್ಲಿ ಒಡೆದುಹೋಗುತ್ತದೆಯೋ ಎಂದು ಹೆದರಿ ಕಿವಿ ಮುಚ್ಚಿಕೊಂಡ ಸಂದರ್ಭಗಳೂ ಇಲ್ಲದಿಲ್ಲ. ಮದುವೆಗೆ ಮುಂಚೆ ಕಟ್ಟಿದ್ದ ಕನಸುಗಳು, ಪ್ರೀತಿಯ ಭಾವಗಳು, ಕಣ್ಣೆದುರು ಬಂದು ಅಣಕಿಸುತ್ತ ವಿಚಿತ್ರ ತಳಮಳ, ಸಂಕಟವನ್ನು ತರಿಸುತ್ತಿವೆ. ನನ್ನೆಲ್ಲ ಪ್ರೀತಿ ವಿಶ್ವಾಸಗಳಿಗೆ ಅವಳು ಅರ್ಹಳಿರಲಿಲ್ಲವೇ, ಎಂಬ ಭಾವನೆ ಮನಸ್ಸನ್ನು ಕೊರೆದು ಘಾಸಿಮಾಡುತಿದೆ. ಹೃದಯದಲ್ಲಿ ಸುಡುತ್ತಿರುವ ದುಃಖದ ಬೇಗೆಗಳು ನನ್ನನ್ನು ಯಾವ ಮನೋಸ್ಥಿತಿಗೆ ದೂಡಿಬಿಡುತ್ತೇವೆಯೋ ಎಂಬ ಆತಂಕದಲ್ಲೇ ಬದುಕುತ್ತಿದ್ದೇನೆ.
- ಸುಹಾಸ್, ಅಕ್ಟೋಬರ್ ೧೧

ವಿಪರೀತ ಗಾಳಿ, ಮಳೆ! ದೀಪವನ್ನೂ ಹಾಕದೆ ಹಾಗೇ, ಕತ್ತಲಲ್ಲಿ ಶೂನ್ಯ ದಿಟ್ಟಿಸುತ್ತ ಕುಳಿತಿದ್ದೇನೆ. ಮಳೆಗೆ ಮಧುರ ನೆನಪ ಹೊತ್ತು ತರುವ ಜೊತೆಗೆ, ಯಾತನೆಯ ದುಃಖವನ್ನೂ ಜಾಸ್ತಿ ಮಾಡುವ ಸಾಮರ್ಥ್ಯವಿದೆಯೆಂಬುದು ಇವತ್ತೇ ಗೊತ್ತಾಗಿದ್ದು. ಉಬ್ಬರದಲ್ಲಿ ತೇಲಿ ತೇಲಿ ಬಂದು ದಡಕ್ಕಪ್ಪಳಿಸುವ ತೆರೆಗಳಂತೆ, ನೆನಪುಗಳು ಬೇಡವಂದರೂ ಮನಸ್ಸಿಗೆ ಬಂದು ಬಂದು ಅಪ್ಪಳಿಸುತ್ತಿವೆ. ಕಳೆದುದ್ದೆಲ್ಲವೂ ಕೆಟ್ಟ ಸ್ವಪ್ನದಂತೆ ಭಾವಿಸಿ ಮರೆತುಬಿಡಬೇಕೆಂಬ ಅದಮ್ಯ ಆಸೆ ಮನದಲ್ಲಿ ಹುಟ್ಟುತ್ತಿದೆಯಾದರೂ, ಹೃದಯ ಅದನ್ನು ಪ್ರತಿರೋಧಿಸುತ್ತಿದೆ. ಎಷ್ಟೆಲ್ಲ ದಿನ ಕಾಯ್ದಿದ್ದೆ? ಇಲ್ಲ, ಈಗ ಸರಿಹೋಗಬಹುದು, ಈಗ ಸರಿ ಹೋಗಬಹುದು, ಮತ್ತೆ ಹಿಂದಿನ ದಿನಗಳು ಮರಳಬಹುದು ಎಂದೆಲ್ಲ. ಎಲ್ಲ ಆಸೆಗಳು ಹುಸಿಯಾದವು! ಒಂದು ಮಾತನ್ನಾಡದೆಯೇ, ಎಲ್ಲವನ್ನೂ ಧಿಕ್ಕರಿಸಿ ನಡೆದುಬಿಟ್ಟಳಲ್ಲ! "ಮುಚ್ಚಿದ ಬಾಗಿಲ ಮುಂದೆ ನಿಂತು ಕಾದಿದ್ದು" ನನ್ನದೇ ಮೂರ್ಖತನವಿರಬೇಕು. ಅವಳ ಹುಂಬ ಧೈರ್ಯದ ನಿರ್ಧಾರಕ್ಕೂ, ಹುಚ್ಚು ಕೋಪದ ಆವೇಷಕ್ಕೂ , ಇವೆಲ್ಲ ಉಂಟು ಮಾಡಬಹುದಾದ ಪರಿಣಾಮಗಳ ಕಲ್ಪನೆ ಇರಲು ಖಂಡಿತ ಸಾಧ್ಯವಿಲ್ಲ. ಇರಲಿ. ಯಾವತ್ತೋ, ಯೌವ್ವನದ ಬಿಸಿಯೆಲ್ಲ ಆರಿದ ಮೇಲೆ ವಾಸ್ತವದ ಕಟುಸತ್ಯ ಅವಳನ್ನು ಕಾಡಬಹುದು. ಕಳೆದುಹೋದ ಪ್ರೀತಿಯ ಜಾಡನ್ನು ನೆನೆದು, ಅವಳೂ ಕೊರಗಬಹುದು.

ಮನಸ ಕಲ್ಲಾಗಿಸಬೇಕು ಈಗ. ಅವಳನ್ನು ಪ್ರೀತಿಸದಷ್ಟೇ ತೀವ್ರವಾಗಿ,ಮರೆಯಬೇಕು. ಉತ್ಕಟವಾಗಿ ಅನುಭವಿಸಿದ್ದ ಪ್ರೀತಿ, ಕಣ್ಣ ತುಂಬಿಕೊಂಡ ಕನಸುಗಳು, ಬಣ್ಣ ಬಣ್ಣದ ಸಂಭ್ರಮಗಳು, ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಕಿತ್ತೆಸೆದು ಬತ್ತಲಾಗಬೇಕು. ಮರಳಿ ಬದುಕ ಕಟ್ಟಬೇಕು, ಕನಸ ಹಂಬಲಿಸಬೇಕು. ಬತ್ತಿ ಹೋದ ಕಣ್ಣುಗಳಲ್ಲಿ ಹೊಸ ಆಸೆಯ ದೀಪವನ್ನು ಮತ್ತೆ ಹಚ್ಚಬೇಕು, ಘಾಸಿಗೊಂಡ ಹೃದಯಕ್ಕೆ ಮತ್ತೆ ಜೀವನಪ್ರೀತಿಯ ಅಮೃತವೆರೆಯಬೇಕು.

ಮಳೆ ನಿಂತಿರಬೇಕು ಹೊರಗೆ. ಒಂದೆರಡು ಸಣ್ಣ ಮಳೆಹನಿಗಳು ಸುರಿದು ಹೋದ ಮಳೆಯನ್ನು ಇನ್ನೂ ಜೀವಂತವಿಡುವ ವ್ಯರ್ಥ ಪ್ರಯತ್ನ ನಡೆಸಿದ್ದವು. ನಿಧಾನವಾಗಿ ಎದ್ದು ದೀಪ ಹಾಕಿದೆ. ಝಗ್ಗನೆ ಬೆಳಕು ಬೆಳಗಿ, ಕತ್ತಲೆಯನ್ನೆಲ್ಲ ಹೊರದೋಡಿಸಿತು.
- ಸುಹಾಸ್, ಡಿಸೆಂಬರ್ ೨೩


ಬರಹಕ್ಕೆ ಸುಂದರ ಶೀರ್ಷಿಕೆಯೊಂದನ್ನು ಸೂಚಿಸಿದ ಮಾನಸದೊಡತಿಗೆ ಧನ್ಯವಾದಗಳು.

Friday, March 25, 2011

ಕೌಳಿ ಹಣ್ಣು

ಹುಡುಗ್ರಿಗೆಲ್ಲ ಪರೀಕ್ಷೆ ಮುಗೀತಿದೆ. ಸಮ್ಮರ್ ಕ್ಯಾಂಪ್ ಗಳ ಭರಾಟೆ ಜೋರಾಗಿ ಶುರುವಾಗಿದೆ. ಅಪ್ಪ ಅಮ್ಮಂದಿರೆಲ್ಲ ಸಂಸಾರ ಸಮೇತರಾಗಿ ಊರಿಗೋ, ನೆಂಟರ ಮನೆಗೋ, ಟ್ರಿಪ್ಪಿಗೋ ಹೋಗೋದಿಕ್ಕೆ ಪ್ಲಾನ್ ಮಾಡ್ತಾ ಇದ್ದಾರೆ. ಬಸ್ಸು ಟ್ರೈನ್ ಗಳಲ್ಲಿ ಅಷ್ಟು ಸುಲಭವಾಗಿ ಟಿಕೆಟ್ ಸಿಕ್ತಾ ಇಲ್ಲ. ಸೆಖೆ ಜಾಸ್ತಿಯಾಗಿ, ರಾತ್ರಿಗಳಲ್ಲಿ ಫ್ಯಾನ್ ಇಲ್ದೆ ನಿದ್ರೆ ಬರ್ತಾ ಇಲ್ಲ. "ರಾತ್ರಿಯಲ್ಲಿ ಹೋಗೋದಿಲ್ಲ, ಹಗಲಲ್ಲಿ ಕೊಡೋದಿಲ್ಲ, ಏನು ಹೇಳಿ ನೋಡೋಣ?" ಅಂತ ಶೋಭಕ್ಕ ಆಗ್ಲೇ ಒಗಟು ಕೇಳ್ತಾ ಇದ್ದಾಳೆ. ಒಟ್ಟಿನಲ್ಲಿ ಈ ಸಲದ ಬೇಸಿಗೆ, ಕ್ರಿಕೆಟ್ ವರ್ಡ್ ಕಪ್ ಗಿಂತಲೂ ರೋಚಕವಾಗುವುದರಲ್ಲಿ ನನಗೇನೂ ಅನುಮಾನ ಕಾಣ್ತಾ ಇಲ್ಲ.

ಕಾಲಗಳನ್ನೆಲ್ಲ ತಕ್ಕಡಿಲಿಟ್ಟು ತೂಗಿದರೆ ಬೇಸಿಗೆಗಾಲದ ವ್ಯಾಲ್ಯೂನೇ ಜಾಸ್ತಿ ಅನ್ನುವುದು ನನ್ನ ಅನಿಸಿಕೆ. ಮಕ್ಕಳಿಗೆ ರಜೆ ಸೀಸನ್, ತಿರುಗೋವ್ರಿಗೆ ಮದುವೆ, ನೆಂಟರ ಮನೆ ಸೀಸನ್, ಬಾಯಲ್ಲಿ ನೀರೂರಿಸಲು ಮಾವಿನ ಹಣ್ಣಿನ ಸೀಸನ್, ನೋಡಿ ಹೀಗೆ ಸಾಲಾಗಿ ಪಟ್ಟಿ ಮಾಡ್ತಾ ಹೋಗಬಹುದು. ಉಳಿದ ಕಾಲಗಳಿಗಿಂತ ಜಾಸ್ತಿ "ಹ್ಯಾಪನಿಂಗ್" ಕಾಲ ಅಂದ್ರೆ ಬೇಸಿಗೆನೇ. ಮಳೆಗಾಲದಲ್ಲಿ ಕೆಲಸ ಒಂದೂ ಆಗಲ್ಲ. ಛಳಿಗಾಲದಲ್ಲಿ ಬೆಳಿಗ್ಗೆನೇ ಬೇಗ ಆಗಲ್ಲ. ಹಾಗಾಗಿ ನಾವು ಜಾಸ್ತಿ ಚಟುವಟಿಕೆಯಿಂದ ಇರುವ ಕಾಲ ಕೂಡ ಬೇಸಿಗೆಗಾಲವೇ. ಬಯಲುಸೀಮೆ ಜನ ಸ್ವಲ್ಪ ನನ್ನ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಬಹುದೇನೋ, ಆದರೆ ಕರಾವಳಿ, ಅರೆಮಲೆನಾಡು, ಮಲೆನಾಡು ಜನ ಅಂತೂ ತಲೆ ಹಾಕೇ ಹಾಕ್ತಾರೆ ಅನ್ನೋ ಭರವಸೆ ನನಗಿದೆ.

ಬೇಸಿಗೆ ರಜೆಲಿ (ಈಗಿನ ಕಾಲದ ಸಮ್ಮರ್ ವೆಕೇಷನ್ನು!) ಏನ್ ಮಾಡ್ತೀರಿ ಅಂಥ ನೀವು ನಿಮ್ಮ ಪರಿಚಯದ ಯಾವುದೋ ಮಕ್ಕಳನ್ನು ಕೇಳೇ ಕೇಳಿರ್ತೀರಿ ಅಂತ ನನಗೆ ಗೊತ್ತು. ಅದಕ್ಕೆ ನಿಮಗೆ ತರೇವಾರಿ ಉತ್ತರಗಳು ಸಿಕ್ಕಿರಬಹುದು. ಊರಿಗೆ ಹೋಗ್ತೀನಿ ಅಂತಲೋ, ಸ್ವಿಮ್ಮಿಂಗ್ ಕ್ಲಾಸ್ ಗೆ ಹೋಗ್ತೀನಿ ಅಂತಲೋ ಇಲ್ಲ ಸಮ್ಮರ್ ಕ್ಯಾಂಪ್ ಗೆ ಹೋಗ್ತೀನಿ ಅಂತಲೋ ಇಷ್ಟೇ. ವಿಪರ್ಯಾಸ ಅಂದರೆ ನಾವು ಚಿಕ್ಕವರಿದ್ದಾಗ ಇಂಥ ಪ್ರಶ್ನೆಗಳನ್ನೆಲ್ಲ ಯಾರೂ ಜಾಸ್ತಿ ಕೇಳ್ತಿರಲಿಲ್ಲ. ಅಕಸ್ಮಾತ್ ಯಾರಾದ್ರೂ ಬಾಯಿ ತಪ್ಪಿ ಕೇಳಿದ್ರೆ ನಾವು ಅತ್ಯಂತ ಸೀರಿಯಸ್ಸಾಗಿ "ಈ ಸಲ ಚಂದ್ರಣ್ಣನ ಮನೆ ಬ್ಯಾಣದಲ್ಲಿ ರಾಶಿ ಸಂಪಿಗೆ ಹಣ್ಣು ಆಜು. ನೋಡವು" ಎಂದೋ, ಅಥವಾ "ಕೆರೆ ಏರಿ ಮೇಲೆ ಇದ್ದಲಾ, ಪುನ್ನೇರಲ ಗಿಡಾ, ಹೋದ ವರ್ಷ ಬರೀ ಎರಡು ಹೆಣೀಗೆ ಕಾಯಿ ಬಿಟ್ಟಿತ್ತು. ಈ ಸಲ ಭರ್ತಿ ಬಿಡ ಲಕ್ಷಣ ಇದ್ದು" ಎಂದೋ, ಅಥವಾ "ಗೇರು ಪೀಕ ನೋಡಿದ್ಯ ಈ ಸಲ? ಚೊಲೋ ಬಂಜು. ಹಿಂದಿನ ಬೆಟ್ಟದಲ್ಲಿ ಕೆಂಪು, ಹಳದಿ ಎರಡೂ ನಮ್ನಿ ಹಣ್ಣು ಬಂಜು. ಸುಮಾರು ಕೇ.ಜಿ ಗೇರ್ ಬೀಜಾ ಒಟ್ಟು ಮಾಡ್ಲಕ್ಕು ಈ ಸಲ" ಅಂತೆಲ್ಲಾ ಹೇಳಿ ನಮ್ಮ ಮಹದೋದ್ದೇಶಗಳ ಚಿಕ್ಕ ಪರಿಚಯವನ್ನು ಸಾದರ ಪಡಿಸುತ್ತಿದ್ದೆವು. ಪ್ರಶ್ನೆ ಕೇಳಿದವರು ನಮ್ಮ ಉತ್ತರವನ್ನು ಒಂದೋ ಮೆಚ್ಚಿ "ಜೋರಲೋ ಮಾರಾಯಾ" ಎಂದು ಬೆನ್ನು ತಟ್ಟುತ್ತಿದ್ದರು ಇಲ್ಲಾ "ಯಾಕಾದ್ರೂ ಕೇಳಿದೀನಪ್ಪಾ" ಎಂಬಂಥ ಮುಖ ಮಾಡಿ ತೆಪ್ಪಗಿರುತ್ತಿದ್ದರು.

ಬಿಸಿಲಲ್ಲಿ ಅಡ್ಡಾಡುವುದು ಬಹುಷಃ ಎಲ್ಲ ಕಾಲದಲ್ಲೂ ಮಕ್ಕಳಿಗೆ ಅತ್ಯಂತ ಪ್ರಿಯವಾದ ಕೆಲಸವೇನೋ. "ಎಂಥಾ ಬಿಸಿಲಲ್ಲಿ ತಿರಗ್ತ್ರಾ ಹುಡಗ್ರಾ, ಸುಮ್ನೆ ಮನೆಲ್ಲಿ ಇರಿ" ಅನ್ನೋ ಶಬ್ದ ಕಿವಿ ಮೇಲೆ ಬಿದ್ದರೆ ಸಾಕು ನಾವೆಲ್ಲ ಕುನ್ನಿಮರಿ ತರ ರಬ್ಬಿಕೊಂಡು, ಅಲ್ಲೇ ನುಸುಳಿ ಪರಾರಿಯಾಗಲು ಪ್ರಯತ್ನಿಸುತ್ತಿದ್ದೆವೇ ಹೊರತು ಮನೆಯೊಳಗೆ ಮಾತ್ರ ಸುತಾರಾಂ ಹೋಗುತ್ತಿರಲಿಲ್ಲ. ಬೆಟ್ಟ,ಗುಡ್ಡ,ತೋಟ, ಹೊಳೆ ಇವೆಲ್ಲ ವರುಷಾನುಗಟ್ಟಲೆಯಿಂದ ನಮ್ಮ ದಿವ್ಯ ಸಾನಿಧ್ಯವನ್ನೇ ಬರಕಾಯುತ್ತಿರುವಂತೆ ಅನಿಸಿ ನಾವು ಅವುಗಳ ಮಡಿಲಲ್ಲಿ ಪುನೀತವಾಗುತ್ತಿದ್ದೆವು. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಹೊರಬಿದ್ದ ನಾವು ಗೊತ್ತು ಗುರಿಯಿಲ್ಲದೇ ತಿರುಗಿ ತಿರುಗಿ ಊರೆಲ್ಲ ಗಸ್ತು ಹೊಡೆದು ಇನ್ನೇನು ಕತ್ತಲಾಗಿ ಏನೂ ಕಾಣದಂಥ ಅನಿವಾರ್ಯತೆ ಉಂಟಾದಾಗ ಮಾತ್ರ ಮನೆಗೆ ತಿರುಗಿ ಬರುತ್ತಿದ್ದೆವು. ಅಷ್ಟರಲ್ಲಿ ಏನೇನು ಮಾಡಿದೆವು ಅನ್ನುವುದನ್ನು ಬರೆಯಲು ಹೊರಟರೆ ಬಹುಷಃ ಯುಡಿಯೂರಪ್ಪನವರು ಇಲ್ಲಿಯವರೆಗೆ ಭೇಟಿಕೊಟ್ಟ(ದೇಣಿಗೆ ಕೊಟ್ಟ) ದೇವಸ್ಥಾನಗಳ ಪಟ್ಟಿಗಿಂತ ಜಾಸ್ತಿಯಾಗುವುದರಿಂದ(?) ಬರೆಯುವ ಸಾಹಸ ಮಾಡುತ್ತಿಲ್ಲ,ಕ್ಷಮಿಸಿ.

ಎಲ್ಲವನ್ನೂ ಬರೆಯಲು ಸಾಧ್ಯವಿಲ್ಲ ಅಂದ ತಕ್ಷಣ ಅತ್ಯಂತ ಪ್ರಿಯವಾದದ್ದನ್ನು ಬರೆಯದಿರಲು ಸಾಧ್ಯವಿಲ್ಲವಲ್ಲ? ಬರೆದೇ ತೀರಬೇಕು. ನಮ್ಮನೆಯಿಂದ ಕೂಗಳತೆ ದೂರದಲ್ಲಿರುವ ಡಾಮರು ರಸ್ತೆಗೆ ತಾಗಿಗೊಂಡು ಸಾಲಾಗಿ ಬೆಳೆದ ಕೌಳಿ ಗಿಡಗಳ ಹಿಂಡು ನಮಗೆಲ್ಲ ಅತ್ಯಂತ ಪ್ರಿಯವಾದದ್ದು. ವಡಗೇರೆ ಶಂಕ್ರಣ್ಣನ ಮನೆಯಿಂದ ಶುರುವಾದದ್ದು ಹೀಪನಳ್ಳಿ ಕತ್ರಿ ಕಳೆದು ಮೆಣಸಿನಕೇರಿ ಕತ್ರಿ ದಾಟಿ ಹೆಗಡೆಕಟ್ಟೆ ಕ್ರಾಸ್ ನ ತನಕವೂ ಅವ್ಯಾಹತವಾಗಿ ರೋಡ್ ನ ಎರಡೂ ಬದಿ ಬೆಳೆದುನಿಂತಿದ್ದವು. ವರ್ಷದ ಬಹಳಷ್ಟು ಕಾಲ ಅವು ಕೇವಲ ಮುಳ್ಳಿನ ಬೇಲಿ ತರಹದ "ಮಟ್ಟಿ"ಗಳು ಅಷ್ಟೇ. ಇನ್ನೇನು ಮಾರ್ಚ ಶುರುವಾಗಬೇಕು, ಚಿಕ್ಕ ಚಿಕ್ಕ ಬಿಳಿ ಹೂವುಗಳನ್ನು ತಳೆದು, ದಾರಿಯುದ್ದಕ್ಕೂ ಹಸಿರು ಬಿಳಿ ಬಣ್ಣದ ಚಾದರವನ್ನು ಹೊದ್ದು ಹೋಗಿ ಬರುವ ಪ್ರಯಾಣಿಕರನ್ನು ಸ್ವಾಗತಿಸುವಂತೆ ತೋರುತ್ತಿದ್ದವು. ಕೌಳಿ ಒಂದು ತರಹದ ಮುಳ್ಳಿನ ಗಿಡ ಅಂತಲೇ ಹೇಳಬಹುದು. ಅಷ್ಟೇನೂ ಎತ್ತರಕ್ಕೆ ಬೆಳೆಯದೇ ಒಂದು ತರಹದ ಪೊದೆಯ ತರ ಹರಡಿಕೊಂಡು ಇರುತ್ತವೆ. ಅದರ ಮುಳ್ಳು ಅತ್ಯಂತ ಚೂಪಾಗಿದ್ದು ಚುಚ್ಚಿದರೆ ದಿನಗಟ್ಟಲೇ ನೋವು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಅದರ ಕಾಯಿ ಅತೀ ಹುಳಿಯಾಗಿದ್ದು(ತಿಂದರೆ ಮುಖ ಸಿಂಡರಿಸುವಷ್ಟು), ಹಣ್ಣು ಸಿಹಿ ಮಿಶ್ರಿತ ಹುಳಿ ಹೊಂದಿರುತ್ತದೆ. ಕೌಳಿಕಾಯಿ ಉಪ್ಪಿನಕಾಯಿ ಅತ್ಯಂತ ಜನಪ್ರಿಯವಾಗಿದ್ದು, ಬಹಳ ಜನರ ಪ್ರಶಂಸೆಗೂ ಪಾತ್ರವಾಗಿದೆ.

ಮಾರ್ಚ ಮುಗಿದು ಎಪ್ರಿಲ್ ಶುರುವಾಗುತ್ತ ಇದ್ದಂತೆ ಹಸಿರು ಬಿಳಿ ಕಾಯಿಗಳು ಕಂದು ಬಣ್ಣಕ್ಕೆ ತಿರುಗಿ ನಿಧಾನಕ್ಕೆ ಹಣ್ಣಾಗಲು ಶುರುವಾಗುತ್ತದೆ. ನಮ್ಮ ಹದ್ದಿನ ಕಣ್ಣು ಅವೆಲ್ಲನ್ನೂ ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತವೆ ಎಂದು ಮತ್ತೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಲ್ಲಲ್ಲಿ ಸೈಕಲ್ ಸವಾರರು, ಕಾರಲ್ಲಿ ಹೋಗುವವರು ತಮ್ಮ ವಾಹನವನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ರೋಡಿಗೆ ಸ್ವಲ್ಪ ಎತ್ತರದಲ್ಲಿರುವ ದಿಬ್ಬವನ್ನು ಹತ್ತಿ ಏನನ್ನೋ ಹುಡುಕುತ್ತಿರುವುದು ಈ ಸಮಯದಲ್ಲಿ ಸರ್ವೇ ಸಾಮಾನ್ಯ. ಎಷ್ಟು ಜನರು ಬಂದರೂ, ನಮಗೇನೂ ಆತಂಕವಾಗುವುದಿಲ್ಲ. ಏಕೆಂದರೆ ಆಯಕಟ್ಟಿನ ಜಾಗಗಳೆಲ್ಲ ನಮಗೆ ಗೊತ್ತಿರುತ್ತಲ್ಲ! ಅವರೆಲ್ಲ ಎಷ್ಟೇ ತಿಣುಕಾಡಿದರೂ ನಮಗೆ ಗೊತ್ತಿರುವಷ್ಟು ಒಳ್ಳೆಯ ಹಣ್ಣು ಸಿಗುವುದಿಲ್ಲ. ಅನೇಕ ವರ್ಷಗಳ ಅನುಭವದಿಂದ ಗಳಿಸಿಕೊಂಡ "ಸ್ಕಿಲ್" ಅದು.

ಯಾವುದೋ ಒಂದು ಶುಭ ಮುಹೂರ್ತವನ್ನು ನಿರ್ಧರಿಸಿಕೊಂಡ ನಂತರ ನಾವು ಒಂದೆರಡು ಪ್ಲಾಸ್ಟಿಕ್ ಕೊಟ್ಟೆಗಳನ್ನು ಹಿಡಿದು ಅನುವಾಗುತ್ತಿದ್ದೆವು. ಎಲ್ಲ ಗಿಡಗಳ ಮೇಲೂ ಮುಗಿ ಬೀಳುತ್ತಿರಲ್ಲಿಲ್ಲ. ಮೊದಲೇ ನಿರ್ಧರಿಸಿಕೊಂಡ, ಉಳಿದವರಿಗ್ಯಾರಿಗೂ ಸುಲಭವಾಗಿ ಭೇದಿಸಲಾಗದ ಪೊದೆಗಳ ಮೇಲೆ ಮಾತ್ರ ನಮ್ಮ ಕಣ್ಣು. ಕಷ್ಟದ ಹಾದಿಯ ತುದಿಗೆ ಸಂತೋಷವಿದೆ ಎನ್ನುವುದು ಇವತ್ತಿಗೂ ಸತ್ಯವೇ ಅಲ್ಲವೆ? ಮಾಮೂಲಿ ಹಣ್ಣುಗಳ ಥರ ಮರ ಹತ್ತೋ, ಉದ್ದನೆಯ ಕೋಲು ಉಪಯೋಗಿಸೋ ಕೊಯ್ಯಬಹುದಾದ ಹಣ್ಣು ಇದು ಅಂತ ನೀವು ಅಂದುಕೊಂಡಿದ್ದರೆ ನಿಮ್ಮ ಮೇಲೆ ನನಗೆ ಸಂಪೂರ್ಣ ಸಹಾನುಭೂತಿಯಿದೆ. ಏಕೆಂದರೆ ಮೊದಲೇ ಹೇಳಿದಂತೆ ಗಿಡವೆಲ್ಲ ಮುಳ್ಳು ಮಯ. ಒಂಥರಾ ಪೊದೆ ಪೊದೆಗಳ ತರ ಗಿಡ ಬೇರೆ. ಮೇಲಿನಿಂದ ನೋಡಿದರೆ ಹಣ್ಣುಗಳು ಸುಲಭವಾಗಿ ಕೈಗೆಟುಕುವಂತೆ ಕಾಣುತ್ತವೆ. ಸರಿಯಾದ ವಿಧಾನವಿಲ್ಲದೇ ಕೊಯ್ಯಲು ಹೋದಿರೋ, ಎರಡು ದಿನ ನೀವು ನೋವು ಶನಿ ಅನುಭವಿಸುವುದು ನಿಶ್ಚಿತ. ಮೊದಲು ಗಿಡವನ್ನು ಅಥವಾ ಪೊದೆಯನ್ನು ನಿಧಾನವಾಗಿ ಅವಲೋಕಿಸಬೇಕು. ಗುರಿಯನ್ನು ತಲುಪಲು ಯಾವ ವಿಧಾನವನ್ನು ಅನುಸರಿಸಬೇಕೆಂಬುದರ ಸರಿಯಾದ ಉಪಾಯ ನಿಮ್ಮಲ್ಲಿರಬೇಕು. ಪೊದೆಯ ಮುಂದಿನ ಭಾಗದಿಂದಲೋ, ಹಿಂದಿನಿಂದಲೋ, ಅಥವಾ ಬದಿಯಿಂದಲೋ ನುಗ್ಗುವುದು ನಿಶ್ಚಯವಾದ ಮೇಲೆ, ನಿಧಾನಕ್ಕೆ ಮುಳ್ಳುಗಳ ಚಕ್ರವ್ಯೂಹವನ್ನು ಭೇದಿಸಬೇಕು. ಇದು ಧಾಳಿಯ ಅತ್ಯಂತ ಮಹತ್ವದ ಘಟ್ಟ. ಇಲ್ಲಿ ನಮಗೆ ಅಥವಾ ನಮ್ಮ ಸೈನ್ಯಕ್ಕೆ ಸ್ವಲ್ಪ ನೋವು, ಹಿನ್ನಡೆ ನಿಶ್ಚಿತ. ಆದರೂ ಕುಗ್ಗದೇ, ಮುನ್ನುಗ್ಗಬೇಕು. ಚಕ್ರವ್ಯೂಹ ಭೇದಿಸಿದರೆ ನಿಮಗೆ ಒಂದು ಆಯಕಟ್ಟಿನ ಜಾಗ ಸಿಗುವುದು ಗ್ಯಾರಂಟಿ. ಇಲ್ಲಿ ಸ್ವಲ್ಪ ವಿಶ್ರಮಿಸಿ, ನಮ್ಮ ಸ್ಟ್ರಾಟಜಿ ಯನ್ನು ಪುನರ್ ಅವಲೋಕಿಸಬಹುದು. ಮುಂದಿನ ನಡೆ ಸ್ವಲ್ಪ ನಿಧಾನಕ್ಕೆ ಸಾಗುತ್ತದೆ. ಮಿಲಿಟರಿ ಸೈನ್ಯದ ತರ ನಿಧಾನಕ್ಕೆ ಗುರಿಯತ್ತ ತೆವಳಿ, ಅಕ್ಕ ಪಕ್ಕದ ಮುಳ್ಳುಗಳನ್ನು ಗಮನಿಸುತ್ತಾ,ನಿಧಾನಕ್ಕೆ ಎದ್ದು, ಅದೆಲ್ಲೋ ಎರಡು ಹೆಣೆಗಳ ನಡುವೆ ಅಡಗಿಕೊಂಡು ಕೂತಿದ್ದ ಕಪ್ಪನೆಯ ಮಿರಿಮಿರಿ ಮಿಂಚುವ ಹಣ್ಣನ್ನು ಕೊಯ್ದು, ಯಾವ ವೇಗದಲ್ಲಿ ನಿಮ್ಮ ಕೈಯನ್ನು ತೂರಿದ್ದೀರೊ, ಅದೇ ವೇಗದಲ್ಲಿ ಹಿಂತೆಗೆದುಕೊಂಡು, ಇನ್ನೊಂದು ಕೈಯ್ಯಲ್ಲಿರುವ ಪ್ಲಾಸ್ಟಿಕ್ ಕೊಟ್ಟೆಯೊಳಗೆ ಹಣ್ಣನ್ನು ಸೇರಿಸಿದರೆ ಗೆದ್ದಂತೆ. ಇಂಥ ಹಲವಾರು ನಡೆಗಳ ಬಳಿಕ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಹಲವಾರು ಹಣ್ಣುಗಳು ನಗುತ್ತ ಕುಳಿತಿರುತ್ತವೆ (ಅದರ ಎರಡರಷ್ಟು ನಮ್ಮ ಹೊಟ್ಟೆಯೊಳಗೆ ಆಗಲೇ ಸೇರಿರುತ್ತವೆ, ಆ ಮಾತು ಬೇರೆ). ಧಾಳಿ ಯಶಸ್ವಿಯಾಗಿ ಮುಗಿದ ಮೇಲೆ ಮತ್ತೊಮ್ಮೆ ಚಕ್ರವ್ಯೂಹ ಭೇದಿಸಿ ಹೊರಬಂದರೆ ನಿರಾಳ. ಒಂದು ಸಾರ್ತಿ ಮೈ ಕೈಗಾದ ತರಚು, ಕಾಲಿನ ಮುಳ್ಳು ಇವನ್ನೆಲ್ಲ ಪರಿಶೀಲಿಸಿ, ಸ್ವಲ್ಪ ವಿಶ್ರಮಿಸಿ, ಇಷ್ಟೆಲ್ಲ ಪರಿಶ್ರಮ ಪಟ್ಟಿದ್ದು ನಿಜಕ್ಕೂ ಸಾರ್ಥಕ ಎಂದು ನಮ್ಮನ್ನೇ ನಂಬಿಸಲು ಮತ್ತೆರಡು ಹಣ್ಣನ್ನು ಬಾಯಿಗೆಸೆದು ಚಪ್ಪರಿಸುತ್ತಾ ಸೈನ್ಯ ಮುಂದೆ ಸಾಗುತ್ತದೆ. ಈಗ ಹೇಳಿ, ಯಾವ ಮಿಲಿಟರಿ ಕಾರ್ಯಾಚರಣೆಗಿಂತ ಭಿನ್ನ ನಮ್ಮ ಪರಾಕ್ರಮ?

ಎಂಥಾ ಹುಚ್ಚು? ಆ ಹುಳಿ ಹುಳಿ ಹಣ್ಣನ್ನು ತಿನ್ನಲು ಇಷ್ಟೊಂದು ಪರಿಶ್ರಮವೇ? ಎಂದು ನೀವು ಆಶ್ಚರ್ಯ ಪಡಬಹುದು (ಮನೆಯಲ್ಲಿ ನಮ್ಮ ಹಿರಿಯರ ಅಭಿಪ್ರಾಯ ಇದಕ್ಕಿಂತ ತೀರ ಭಿನ್ನವೇನೂ ಇರುತ್ತಿರಲಿಲ್ಲ ಎನ್ನುವುದು ವಿಪರ್ಯಾಸ). ಕೈ ಕೆಸರಾದರೆ ಬಾಯಿ ಮೊಸರು ಎಂದು ಹಿರಿಯರು ಹೇಳಿಲ್ಲವೇ?. ಹಾಂ ಮರೆತಿದ್ದೆ, ಕೌಳಿ ಕಾಯಿ ಅಥವಾ ಹಣ್ಣುಗಳನ್ನು ಕೊಯ್ದಾಗ ಅವುಗಳ ತೊಟ್ಟಲ್ಲಿ ಬಿಳಿ ಬಣ್ಣದ ಹಾಲೊಂದು ಒಸರುತ್ತದೆ. ನಮ್ಮ ಕಾರ್ಯಾಚರಣೆ ಮುಗಿದಾಗ ನಮ್ಮ ಕೈಯೆಲ್ಲ ಆ ಅಂಟಿನಿಂದ ಸಂಪೂರ್ಣ ಕೆಸರಾಗಿ ಅದನ್ನು ತೆಗೆಯಲು ನಾವು ಒಂದರ್ಧ ಎಣ್ಣೆ ತಟ್ಟೆಯನ್ನೋ, ಸಾಕಷ್ಟು ಚಿಮಣಿ ಎಣ್ಣೆಯನ್ನೋ ಖರ್ಚು ಮಾಡಬೇಕಾಗಿ ಬರುತ್ತಿತ್ತು .ಹಾಗೆ ನೋಡಿದರೆ ನಮ್ಮ ಕೈ ಅಕ್ಷರಶಃ ಕೆಸರಾಗಿರುತ್ತಿತ್ತು. ಎಷ್ಟೋ ಸಲ ಕಾಲು,ತಲೆಗೆಲ್ಲ ಮುಳ್ಳು ಚುಚ್ಚಿಸಿಕೊಂಡು ವಾರಗಟ್ಟಲೆ ತೊಂದರೆ ಪಟ್ಟಿದ್ದಿದೆ. ಮನೆಯಲ್ಲಿ ಎಷ್ಟೋ ಸಲ ಬೈಯ್ಯಿಸಿಕೊಂಡರೂ, ನೋವು ಅನುಭವಿಸಿಯೂ, ಹಣ್ಣಿನ ರುಚಿ ಪ್ರತೀ ವರ್ಷವೂ ನಮ್ಮನ್ನು ಅಲ್ಲಿ ಎಳೆಯುತ್ತಿತ್ತು. ಬೇಸಿಗೆ ರಜೆಯ ಪ್ರಮುಖ ಆಕರ್ಷಣೆ ನನಗಂತೂ ಅದೇ ಆಗಿತ್ತು.

ಮೊನ್ನೆ ಮಾರ್ಚಲ್ಲಿ ಊರಿಗೆ ಹೋದಾಗ ನೋಡುತ್ತೇನೆ ಏನಾಶ್ಚರ್ಯ? ರೋಡಿನ ಎರಡುದ್ದಕ್ಕೂ ಒಂದೇ ಒಂದು ಕೌಳಿ ಮಟ್ಟಿಯ ಕುರುಹಿಲ್ಲ. ರೋಡ್ ಅಗಲ ಮಾಡುತ್ತಾರಂತೆ, ಅದಕ್ಕೆ ಅಕ್ಕ ಪಕ್ಕದಲ್ಲಿರುವ ಗಿಡ, ಪೊದೆಗಳನ್ನೆಲ್ಲ ನಿರ್ದ್ಯಾಕ್ಷಿಣ್ಯವಾಗಿ ಸಂಪೂರ್ಣವಾಗಿ ಸವರಿಬಿಟ್ಟಿದ್ದಾರಂತೆ. ಎಂಥ ವಿಪರ್ಯಾಸ! ಒಂದು ತಲೆಮಾರಿನ ಬೇಸಿಗೆ ರಜೆಯ ಖುಷಿಯ ನೆನಪುಗಳನ್ನೆಲ್ಲ ನಿರ್ನಾಮ ಮಾಡಿದ ಪಾಪ ಅವರನ್ನು ತಟ್ಟದೇ ಬಿಟ್ಟೀತೆ? ಮನಸ್ಸೆಲ್ಲ ವಿಷಾದಮಯ!. ಎಷ್ಟೊಂದು ವರ್ಷಗಳಿಂದ ರಸ್ತೆಯಂಚಿನ ಸೌಂದರ್ಯವನ್ನು ಹೆಚ್ಚಿಸಿದ್ದಲ್ಲದೇ, ಏನೇನೂ ಪ್ರತಿಯಾಗಿ ಬಯಸದೇ, ಎಷ್ಟೋ ಪ್ರಯಾಣಿಕರ, ನಮ್ಮಂಥ ಅನೇಕ ಜನಕೆ ಸಂತಸ ನೀಡಿದ್ದ ಗಿಡಗಳನ್ನು ನೆನೆಸಿಕೊಂಡರೆ ನಿಜವಾಗಿ ಬೇಸರವಾಗುತ್ತದೆ. ಕೌಳಿ ಮಟ್ಟಿಗಳೆಲ್ಲವನ್ನು ಕಳೆದುಕೊಂಡು ಬಿಸಿಲಲ್ಲಿ ಬೇಯುತ್ತಿರುವ ರಸ್ತೆ ಪಕ್ಕದ ದಿಬ್ಬಗಳು ಮೂಕವಾಗಿ ರೋದಿಸುತ್ತದ್ದಂತೆ ಅನಿಸಿ ಅಲ್ಲಿ ಜಾಸ್ತಿ ಹೊತ್ತು ನಿಲ್ಲಲಾಗಲಿಲ್ಲ. ಈ ಸಲದ ಬೇಸಿಗೆ, ವಾತಾವರಣವೊಂದೇ ಅಲ್ಲ, ಮನಸ್ಸನ್ನೂ ಶುಷ್ಕವಾಗಿಸುತ್ತದೆಯೋ ಎಂದು ಗಾಭರಿಯಾಯ್ತು.

Friday, March 18, 2011

ಹೊಸ ಚಿಗುರು

ಪುಟ್ಟ ಪಾದ ದಿಟ್ಟ ನೋಟ
ತೊದಲ ನುಡಿವ ಹಕ್ಕಿ ಕಂಠ
ಮುಗ್ಧ ನಯನ, ಸ್ನಿಗ್ಧ ನಗು
ಬೆರಗು ಬಿನ್ನಾಣಕೊಂದು ಹೆಸರು

ತುಟಿಯ ಬಿರಿಯೆ ತುಂಟ ಹಾಸ
ಹರಿಸಿ ಸುತ್ತ ಖುಶಿಯ ಹೊಳೆಯ
ಇಳಿಸಿ ಇಳೆಗೆ ಸ್ವರ್ಗ ಲೋಕ
ಮರೆಸಿ ಸಕಲ ದುಃಖ ದುಗುಡ

ನಲಿವು ನಗೆಯ ಹೊನಲು ನಿತ್ಯ
ಯಾಕೆ ಬೇಕು ಜಗದ ಮಿಥ್ಯ?
ಮೈಯ ಮುರಿವ ಸೊಬಗೇ ನೃತ್ಯ
ಉರಿವ ಸೂರ್ಯನಷ್ಟೆ ಸತ್ಯ

ಹೊಸದು ಆಸೆ ಹೊಸದು ಕನಸು
ಮಮತೆಯೊಡಲ ಬೆಳಗಿ ಜೀವ
ಹರುಷ ಭಾವ ತುಂಬಿ ಎದೆಯ
ಎನಿತು ಧನ್ಯ ಬಾಳ ಪಯಣ

Wednesday, November 17, 2010

ಆಶಾ ಭಾವ

ಸೋಲು ಗೆಲುವು ಸಹಜ ಬಾಳು
ನೋವು ನಲಿವು ಅದರ ಬಿಂಬ
ಮಾವು ಬೇವು ಸಮನೆ ಮೇಳೆ
ತಾನೆ ಸವಿಯ ನಿಜದ ಸ್ವಾದ

ಬದುಕು ಬರೀ ಹೂವ ಹಾಸಿಗೆಯೆ?
ಹಲವು ಮುಳ್ಳ ಕಠಿಣ ಹಾದಿ
ಭರವಸೆಗಳೇ ನಾಳಿನಾಸರೆ
ಸಾವಿರ ಸಿರಿಗನಸುಗಳಿಗೆ ನಾಂದಿ

ಶಿಶಿರದಲಿ ಎಲೆಯುದುರಿಸಿಯೂ ಗಿಡ
ಚಿಗುರದೇ ಮತ್ತೆ ವಸಂತದಲಿ?
ಸಾವಿರದಲೆಗಳ ಎದುರಿಸಿಯೂ ದಡ
ನಿಲ್ಲದೇ ನಿಶ್ಚಲ ಛಲದಲ್ಲಿ?

ನಿನ್ನೆಗಳಾ ಕಹಿ ಇಂದಿಗೇ ಮರೆತು
ಬೆಳಕ ದಾರಿಯನು ಹುಡುಕಬೇಕು
ಕಹಿನೆನಪಿಗೆ ಸಿಹಿಲೇಪವ ಬೆರೆಸಿ
ಕತ್ತಲೆಯ ಮೀರಲಿ ಬದುಕು

Sunday, July 18, 2010

ಆರ್ದ್ರ

ಆರಿದ್ರೆ ಮಳೆಯ ಇನ್ನೊಂದು ದೊಡ್ಡ ನೆಗಸು ಭೂಮಿಯನ್ನು ಅಪ್ಪಳಿಸಲು ಶುರುಮಾಡಿತ್ತು. ಕಪ್ಪಿಟ್ಟ ಆಕಾಶ, ಜೋರಾಗುತ್ತಿದ್ದ ಮಳೆ ಜಿರಲೆಯ ಶಬ್ದ, ಮಳೆ ಜೋರಾಗುವುದರ ಸೂಚನೆಯನ್ನು ಮೊದಲೇ ಕೊಟ್ಟಿದ್ದವು. ರಚ್ಚೆ ಹಿಡಿದ ಮಗುವಿನ ನಿರಂತರ ರೋದನದಂತೆ ಮಳೆ ಒಂದೇ ಸಮನೆ ಹೊಯ್ಯುತ್ತಲೇ ಇತ್ತು. ಮಳೆಯ ಆರ್ಭಟಕ್ಕೆ ಸುತ್ತಲಿನ ಪಕೃತಿಯ ಸಕಲ ಚರಾಚರ ವಸ್ತುಗಳೆಲ್ಲ ದಿಗ್ಮೂಢಗೊಂಡಂತೆ ಮೌನವಾಗಿ ನಿಂತು ಮಳೆಯ ನೀರಲ್ಲೇ ಮೀಯುತ್ತಿದ್ದವು. ಮಳೆಯ ’ಧೋ’ ಸದ್ದು ಜಾಸ್ತಿಯಾದಂತೆಲ್ಲ ಎದೆಯ ಮೂಲೆಯಲ್ಲೆಲ್ಲೋ ಅವ್ಯಕ್ತ ವೇದನೆ ಆವರಿಸಿಕೊಳ್ಳಲಾರಂಭಿಸಿತು. "ಕೊರ್ರೋ" ಎಂದೊದರುವ ಮಳೆ ಜಿರಲೆಯ ಧ್ವನಿ, ವೇದನೆಯ ಅಸ್ತಿತ್ವಕ್ಕೆ ವಿಚಿತ್ರವಾದ ಹಿನ್ನೆಲೆಯನ್ನು ಒದಗಿಸಲೇ ಇನ್ನೂ ಜೋರಾಗುತ್ತಿದೆಯೆನ್ನುವ ಸಂಶಯ ಮನದಲ್ಲಿ ಪಿಶಾಚಿಯಂತೆ ಕಾಡಲಾರಂಬಿಸಿತು. "ಇಲ್ಲ, ಇವೆಲ್ಲಗಳಿಂದ ನಾನು ಹೊರಬರಲೇ ಬೇಕು, ಏಷ್ಟು ದಿನ ಹೀಗೇ?" ಮನಸ್ಸು ಸಾವಿರದೊಂದನೇ ಬಾರಿ ಬುದ್ಧಿ ಹೇಳಿತು. ಮನಸ್ಸು ಹೇಳಿದ್ದನೆಲ್ಲ ಹೃದಯ ಕೇಳುವಂತಿದ್ದರೆ ಜಗತ್ತಿನಲ್ಲಿ ಯಾರಿಗೂ ಯಾತನೆಗಳೇ ಇರುತ್ತಿರಲಿಲ್ಲವೇನೋ.

ಇದೇ ಮಳೆಯ ತರವೇ ಅಲ್ಲವೇ ಅವಳಲ್ಲಿ ರಚ್ಚೆ ಹಿಡಿದಿದ್ದು? ಅಷ್ಟು ದೈನೇಸಿಯಾಗಿ ಬೇಡಿಕೊಂಡರೂ ಅವಳ ಮನಸ್ಸಿನಲ್ಲಿ ಒಂದು ಚೂರೂ ಜಾಗ ಕೊಡಲಿಲ್ಲವೇಕೆ ಎಂದು ಈಗ ಯೋಚಿಸಿದರೆ ನನ್ನ ಆಗಿನ ಪರಿಸ್ಥಿತಿಯ ಬಗ್ಗೆ ಸ್ವಲ್ಪ ಅನುಕಂಪವೂ, ಬೇಸರವೂ ಆಗುತ್ತದೆ. ಎಷ್ಟು ಕಠಿಣವಾಗಿ, ಕಡ್ಡಿ ಮುರಿದಂತೆ ಹೇಳಿಬಿಟ್ಟಳಲ್ಲ, "ವಿಕ್ಕಿ, ನಿನ್ನಲ್ಲಿ ಅಂಥದೇನಿದೆ ಅಂತ ನಾನು ನಿನ್ನನ್ನು ಇಷ್ಟಪಡಲಿ? ದಯವಿಟ್ಟು ನನಗೆ ತೊಂದರೆ ಕೊಡಬೇಡ". ಒಂದೇ ವಾಕ್ಯದಲ್ಲಿ ಮನಸು ಮುರಿದಿದ್ದಳು. ಆ ಕ್ಷಣದಲ್ಲೇ ಭೂಮಿ ಬಾಯ್ಕಳೆದು ನನ್ನನ್ನು ನುಂಗಬಾರದೇ ಎನ್ನಿಸಿತ್ತು. ನೆನೆಸಿಕೊಂಡರೆ ಈಗಲೂ ಮೈ ಝುಂ ಎನ್ನುತ್ತದೆ. ಬಾಯಲ್ಲಿ ಮಾತೊಂದೂ ಹೊರಟಿರಲಿಲ್ಲ. ಆ ಕ್ಷಣದಷ್ಟು ದುರ್ಬಲತೆಯನ್ನು ನಾನು ಯಾವತ್ತೂ ಅನುಭವಿಸಿರಲಿಲ್ಲ. ಅವಳು ನನ್ನ ಪ್ರೀತಿಯನ್ನು ಧಿಕ್ಕರಿಸಿದ ರೀತಿಗೋ, ಅಥವಾ ನನಗೆ ಅಪಾರ ಹೆಮ್ಮೆಯಿದ್ದ ನನ್ನ ವ್ಯಕ್ತಿತ್ವದ ಅಸ್ತಿತ್ವವನ್ನೇ ಅವಳು ಬೆದಕಿದ್ದಕ್ಕೋ ಗೊತ್ತಿಲ್ಲ, ಮನಸ್ಸಿಗೆ ವಿಪರೀತ ಘಾಸಿಯಾಗಿತ್ತು. ಅಂದಿನಿಂದ ಈ ಭಯಾನಕ ಯಾತನಾ ಜಗತ್ತಿಗೆ ಬಿದ್ದಿದ್ದೆ.

ಎಷ್ಟು ಬೇಡ ಬೇಡವೆಂದರೂ ಮನಸ್ಸು ಮತ್ತೆ ಮತ್ತೆ ಅಲ್ಲೇ ಎಳೆಯುತ್ತಿತ್ತು. "ನಿನ್ನಲ್ಲಿ ಅಂಥದ್ದೇನಿದೆ?", ಎಷ್ಟು ಸಲೀಸಾಗಿ ಕೇಳಿಬಿಟ್ಟಳಲ್ಲ! ಆ ಪ್ರಶ್ನೆ ನನ್ನಲ್ಲಿ ಉಂಟು ಮಾಡಿದ ತಳಮಳಗಳ ಪರಿಣಾಮ ಅವಳಿಗೆ ಗೊತ್ತಿರಲಿಕ್ಕಿಲ್ಲ. ಹಾಗಾದರೆ ಅಷ್ಟೆಲ್ಲ ದಿನ ನನ್ನ ಜೊತೆ ಸುತ್ತಾಡಿದ್ದು? ಕಣ್ಣಲ್ಲೇ ಪ್ರೀತಿ ತೋರಿದ್ದು? ಮಾತು ಸುಳ್ಳಾಡಬಹುದು, ಕಣ್ಣು? ನಟನೆಯಿದ್ದೀತಾ? ಅಷ್ಟು ದಿನ ಪ್ರೀತಿಯ ಸೆಲೆಯೇ ಉಕ್ಕಿ ಹರಿಯುತ್ತಲಿದೆ ಎಂದೆನಿಸುತ್ತಿದ್ದ ತುಂಬುಗಣ್ಣುಗಳಲ್ಲಿ ತಣ್ಣನೆಯ ಕ್ರೌರ್ಯವಿದ್ದೀತಾ? ಛೇ! ಇದ್ದಿರಲಿಕ್ಕಿಲ್ಲ. ಎಂತೆಲ್ಲ ಯೋಚನೆಗಳು? ಅವಳ ಬಗ್ಗೆ ಕೆಟ್ಟದಾಗಿ ಯೋಚಿಸಲೂ ಮನಸ್ಸು ಆಸ್ಪದ ಕೊಡುತ್ತಿಲ್ಲ. ಅವಳ ಬಗ್ಗೆ ಮನಸ್ಸಿನ ಯಾವುದೋ ಮೂಲೆಯಲ್ಲಿ ಮೋಹ ಉಳಿದುಕೊಂಡಿರಬೇಕು. ಅಷ್ಟೊಂದು ಉತ್ಕಟವಾಗಿಯಲ್ಲವೇ ನಾನು ಅವಳ ಮೋಹಕ್ಕೆ ಒಳಗಾಗಿದ್ದು? ನನಗೆ ಗೊತ್ತಿಲ್ಲದ ಹಾಗೆ ಕಣ್ಣು ಮಂಜು ಮಂಜು. ಕೆನ್ನೆಯ ಮೇಲೆ ತಾನಾಗಿಯೇ ಹರಿದು ಬಂದ ಕಣ್ಣೀರನ್ನು ಒರೆಸಿಕೊಂಡೆ.

ಹೊರಗೆ ಮಳೆ ಕಮ್ಮಿಯಾಗುವ ಲಕ್ಷಣವೇ ಕಾಣಲಿಲ್ಲ. ಆರಿದ್ರೆ ಮಳೆ, ಹೋಗುವಾಗ ಜಾಸ್ತಿ ಹೊಯ್ಯುತ್ತದಂತೆ. ನಾಳೆಯಿಂದ ಪುನರ್ವಸು. ಇವತ್ತೇ ಆಕಾಶವೆಲ್ಲ ಖಾಲಿಯಾಗುವಂತೆ ಹೊಯ್ಯುತ್ತಲೇ ಇರುತ್ತೇನೆ ಎಂಬ ಹುನ್ನಾರವನ್ನು ನಡೆಸಿದೆಯೋ ಎಂಬಂತೆ ಮಳೆ ಪಿರಿಪಿರಿ ನಡೆಸಿತ್ತು. "ಆರಿದ್ರೆ ಮಳೆ ಆರದಂತೆ ಹೊಯ್ಯುತ್ತದೆ", ಅಮ್ಮ ಹೇಳಿದ್ದು ನೆನಪಾಯ್ತು. ಈ ಹಾಳಾದ ನೆನಪುಗಳೂ ಮಳೆಯಂತೇ. ಆರದಂತೆ ಮನಸ್ಸಿನ ಅಂಗಳದಲ್ಲಿ ಬಿಟ್ಟೂ ಬಿಟ್ಟೂ ಹೊಯ್ಯುತ್ತಲೇ ಇರುತ್ತವೆ. ಮನಸ್ಸಿನ ತುಂಬ ರಾಡಿಯೆಬ್ಬಿಸಿ.

ಅವತ್ತು ಯಾಕೆ ಹಾಗೆ ಏನನ್ನೂ ಮಾತಾಡದೇ ಬಂದೆನೆಂಬುದು ಇಂದಿಗೂ ಸೋಜಿಗ. ಈಗ ಯೋಚಿಸಿದರೆ, ಅವತ್ತು ಅವಳ ಮಾತಿನ ಸ್ಥಿತಪ್ರಜ್ಞೆ ನನ್ನನ್ನು ಮೂಕವಾಗಿಸಿರಬೇಕೆಂದೇ ಅನ್ನಿಸುತ್ತದೆ. ಅವಳ ಮುಖದಲ್ಲಿ ಯಾವುದೇ ತರಹದ ದುಃಖವಾಗಲೀ, ಆಶ್ಚರ್ಯವಾಗಲೀ ಅಥವಾ ಸಿಟ್ಟಾಗಲೀ ಕಂಡಿರಲಿಲ್ಲ. ಎಲ್ಲ ಮೊದಲೇ ಗೊತ್ತಿದ್ದ ಹಾಗೆ, ಹೀಗೇ ಕೇಳುತ್ತಾನೆ ಎಂದು ಮುಂಚೆಯೇ ಊಹಿಸಿದ್ದ ಹಾಗೆ, ಎಲ್ಲವೂ ಪೂರ್ವ ನಿರ್ಧಾರಿತ ಯೋಜನೆಯ ಹಾಗೆ. ಯೋಚಿಸಲು ಒಂದು ನಿಮಿಷವೂ ತೆಗೆದುಕೊಂಡಿರಲಿಲ್ಲ. ಬಿಟ್ಟ ಬಾಣದ ಹಾಗೆ ಉತ್ತರ. ನಿಜ, ಅದೇ ನನ್ನ ಅಹಂಗೆ ಅಷ್ಟೊಂದು ಪೆಟ್ಟು ಕೊಟ್ಟಿದ್ದು. "ವಿಕ್ಕೀ, ನನಗೆ ಗೊತ್ತು, ನೀನು ನನಗೆ ಅರ್ಹನಿಲ್ಲ" ಎಂಬ ನೇರ ಮಾತು. ತುಟಿಯಂಚಲ್ಲಿ ಕಿರುನಗೆಯೊಂದು ಹಾದು ಹೋಯಿತು. ಎಲ್ಲ ಸನ್ನಿವೇಶಗಳಲ್ಲೂ ಎಲ್ಲರೂ ನಮ್ಮ ಅಹಂ ಅನ್ನು ಸಂತೋಷಪಡಿಸಬೇಕೆಂದು ನಾವು ಆಶಿಸುತ್ತೇವೆಲ್ಲ? ಪ್ರೀತಿಯ ಮಾತುಗಳಲ್ಲಿ, ಪ್ರೇಮ ಸಲ್ಲಾಪಗಳಲ್ಲಿ, ಹೊಗಳುವಿಕೆಯ ಮೆಚ್ಚುಗೆಗಳಲ್ಲಿ ಎಲ್ಲದರಲ್ಲೂ. ಕೊನೆಗೆ ಪ್ರೀತಿಯ ತಿರಸ್ಕಾರದಲ್ಲೂ!

ಅವಳೇ ಅಲ್ಲವೇ ನನ್ನನ್ನು ಹುಡುಕಿಕೊಂಡು ಬಂದಿದ್ದು? ಕಾಲೇಜಿನ ಗ್ಯಾದರಿಂಗ್ ನ ಮರುದಿನ?. "ಎಷ್ಟೊಂದು ಚೆನ್ನಾಗಿ ಹಾಡುತ್ತೀರಿ ನೀವು?" ಅವತ್ತು ಅವಳ ಮಾತುಗಳು ಉಂಟು ಮಾಡಿದ ಪುಳಕ ಇವತ್ತಿಗೂ ಮರೆಯುವ ಹಾಗೇ ಇಲ್ಲ. ಅದೇ ಮುಗ್ಧ ನಗು, ಅದೇ ಪ್ರೀತಿಯ ಕಣ್ಣುಗಳು. ಮೊದಲ ಸಾರಿ ಯಾರಾದರೂ ನನ್ನನು ಹೊಗಳಿದ್ದು. ವಾಸ್ತವವೇ, ಕನಸೇ ಎಂದು ಅರಿವಾಗಲು ಸ್ವಲ್ಪ ಹೊತ್ತು ಹಿಡಿದಿತ್ತು. ಸಣ್ಣದೊಂದು ಸಂಕೋಚದ ನಗೆ ನಕ್ಕು ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕಿದ್ದೆ. "ಥ್ಯಾಂಕ್ಸೇ ಹೇಳಲಿಲ್ಲ ನೀವು?", ಅವಳು ಬಿಡುವ ತರಹ ಕಾಣಲಿಲ್ಲ. "ಬೇಡ ಬಿಡಿ, ಥ್ಯಾಂಕ್ಸ್ ಬದಲು ನನ್ಜೊತೆ ಒಂದು ಕಾಫಿ ಕುಡಿಬಹುದಲ್ವಾ?". ನನಗೋ ದಿಗಿಲು. ಇಷ್ಟೊಂದು ನೇರ ಮಾತು! ಹೃದಯ ಬಾಯಿಗೆ ಬಂದಂತೆ. ಯಾವತ್ತೂ ಹಾಗೆಲ್ಲ ಹುಡುಗಿಯರ ಜೊತೆ ಒಂಟಿಯಾಗಿ ಮಾತಾಡೇ ಅಭ್ಯಾಸವಿಲ್ಲ. ನನ್ನ ಭಯ ಅವಳಿಗೆ ಗೊತ್ತಾಗಿರಬೇಕು, "ಪರವಾಗಿಲ್ಲ, ನನ್ಜೊತೆ ಒಂದು ಕಾಫಿ ಕುಡಿದರೆ ಜಗತ್ತೇನೂ ಮುಳುಗಲ್ಲ,ಬನ್ನಿ", ಈ ಸಲ ಇನ್ನೂ ಅಧಿಕಾರಯುತ ಧ್ವನಿ. ನಿರಾಕರಿಸಲು ಸಾಧ್ಯವೇ ಇರಲಿಲ್ಲ. ಸುಮ್ಮನೆ ಅವಳನ್ನು ಹಿಂಬಾಲಿಸಿದ್ದೆ. ನಾನೇನು ಮಾತಾಡಿದ್ದೇನೋ, ಅವಳೇನು ಕೇಳಿದ್ದಳೋ ಒಂದೂ ನೆನಪಿಲ್ಲ. ಅವಳ ಕಣ್ಣುಗಳಲ್ಲಿ ಕರಗಿ ಹೋಗಿದ್ದೊಂದು ನೆನಪಿದೆ.

ನನ್ನ ಖಾಯಂ ಸಂಗಾತಿಯಾಗಿದ್ದ ತಿರಸ್ಕಾರ, ಕೀಳರಿಮೆಗಳ ಸ್ನೇಹವನ್ನು ಮರೆತಿದ್ದೇ ಅವಳ ಸಂಗದಲ್ಲಿ. ಸಂಕೋಚದ ಮುದ್ದೆಯಾಗಿದ್ದ ನನ್ನನ್ನು ಆ ಚಿಪ್ಪಿನಿಂದ ಹೊರಗೆ ಬರಲು ಸಹಾಯಮಾಡಿದ್ದು ಅವಳ ಉಲ್ಲಾಸಭರಿತ ಮಾತುಗಳು, ಜೀವನೋತ್ಸಾಹ ಉಕ್ಕಿ ಹರಿಯುತ್ತಿದ್ದ ಕಣ್ಣುಗಳು. ನನ್ನ ಬದುಕಿನಲ್ಲಿ ಯಾವುದರ ಕೊರತೆಯಿತ್ತೋ ಅದನ್ನು ಸಂಪೂರ್ಣವಾಗಿ ತುಂಬಲು ಅವಳೊಬ್ಬಳಿಂದಲೇ ಸಾಧ್ಯವೆಂದು ನಾನು ಆಗ ನಂಬಿದ್ದೆ. ಅವಳ ಪ್ರೀತಿಯ ಮಾತುಗಳಿಗಾಗಿ ಎಷ್ಟು ಸಾರ್ತಿ ನಾನು ನನ್ನ ಸಂಕೋಚದ ಸಂಕೋಲೆಗಳನ್ನು ಮುರಿದು ಧಾವಿಸಿ ಓಡಿ ಬರುತ್ತಿದ್ದೇನೋ ನನಗೇ ತಿಳಿಯದು. ಅವಳು ಪ್ರಯತ್ನಪೂರ್ವಕವಾಗಿ ನನ್ನ ಕೀಳರಿಮೆಯನ್ನು ತೊಡೆಯಲು ಪ್ರೀತಿಯ ಮಾತುಗಳ ಸಹಾಯ ತೆಗೆದುಕೊಂಡಿದ್ದಳಾ ಅಥವಾ ಕೇವಲ ಅವಳ (ಪ್ರೀತಿಯ?) ಸಾನಿಧ್ಯ ನನ್ನಲ್ಲಿ ಅಷ್ಟೊಂದು ಆತ್ಮವಿಶ್ವಾಸವನ್ನು ಮೂಡಿಸಿತ್ತೊ ಗೊತ್ತಿಲ್ಲ. ಒಟ್ಟಿನಲ್ಲಿ ನಾನು ನನಗೇ ಅಚ್ಚರಿಯಾಗುವಷ್ಟು ಬದಲಾಗಿದ್ದಂತೂ ನಿಜ. ಅವಳೇ ಹೇಳಿದ್ದಳಲ್ಲ, "ವಿಕ್ಕಿ ನಿನ್ನ ಕಂಗಳಲ್ಲಿ ಈಗ ಅಪೂರ್ವವಾದ ಹೊಳಪೊಂದು ಕಾಣುತ್ತಿದೆ" ಅಂತ. ಆತ್ಮ ವಿಶ್ವಾಸದ ಸೆಲೆ ನನ್ನಲ್ಲೂ ಚಿಗುರತೊಡಗಿತ್ತು, ಅವಳೇ ಅದನ್ನ ಚಿವುಟಿ ಕೊಲ್ಲುವದರ ತನಕ!

ಮಯೂರ ಯಾವತ್ತೋ ಹೇಳಿದ್ದು ಈಗ ನೆನಪಾಗುತ್ತಿದೆ. ಯಾಕೋ ಗೊತ್ತಿಲ್ಲ. "ವಿಕ್ಕಿ, ನೀನು ಹೀಗೆ ಡ್ರೆಸ್ ಮಾಡಿಕೊಂಡು, ಅದೇ ಹರಕಲು ಚೀಲವನ್ನು ಏರಿಸಿಕೊಂಡು ಎಲ್ಲ ಕಡೆ ತಿರುಗುತ್ತಿದ್ದರೆ, ಯಾವ ಹುಡುಗಿಯೂ ನಿನ್ನನ್ನು ಪ್ರೀತಿ ಮಾಡುವುದಿಲ್ಲ ನೋಡು" ಎಂದು. ನನ್ನನ್ನು ರೇಗಿಸಲು ಹೇಳಿದ್ದೋ ಅಥವಾ ಅವನಿಗೆ ಹೊಸದೊಂದು ಗರ್ಲ್ ಫ್ರೆಂಡ್ ದೊರಕಿದ ಅಹಂನಲ್ಲಿ ಹೇಳಿದ್ದೋ ಗೊತ್ತಿಲ್ಲ. ಆದರೆ ಸಿಟ್ಟು ನೆತ್ತಿಗೇರಿತ್ತು. "ಯಾರಾದ್ರೂ ನನ್ನನ್ನು ಪ್ರೀತಿ ಮಾಡಲೇಬೇಕು ಅಂತ ನಾನು ಬದುಕ್ತಾ ಇಲ್ಲ" ಸಟ್ಟಂತ ಹೇಳಿದ್ದೆ. ಅವನು ಮಾತು ತಿರುಗಿಸಿದ್ದ. "ಹಾಗಲ್ವೋ, ನೋಡು ಚೆನ್ನಾಗಿ ಡ್ರೆಸ್ ಮಾಡಿಕೊಂಡು ಓಡಾಡ್ತಾ ಇದ್ರೆ ನಾಲ್ಕು ಜನ ಗುರುತಿಸ್ತಾರೆ, ಏನೋ ಒಂದು ಚಾರ್ಮ್ ಇರತ್ತೆ. ನಿನ್ನಲ್ಲಿ ಏನು ಬೇಕಾದರೂ ಮಾಡಬಲ್ಲ ಆತ್ಮ ವಿಶ್ವಾಸವಿದೆ ಅಂತ ಅನ್ನಿಸತ್ತೆ, ಯೋಚನೆ ಮಾಡು". ಒಳ್ಳೆಯ ಡ್ರೆಸ್ ಹಾಕಿಕೊಂಡರೆ ಆತ್ಮ ವಿಶ್ವಾಸ ಬೆಳೆಯುತ್ತದೆಯೋ, ಅಥವಾ ನಮ್ಮಲ್ಲಿ ಆತ್ಮ ವಿಶ್ವಾಸ ಪುಟಿಯುತ್ತಿದ್ದರೆ ಒಳ್ಳೆ ಡ್ರೆಸ್ ಮಾಡಿಕೊಳ್ಳಬೇಕೆಂಬ ಹಂಬಲ ತಾನೇ ತಾನಾಗೇ ಮೊಳೆಯುತ್ತದೆಯೋ ಅರ್ಥವಾಗಿರಲಿಲ್ಲ. ಅವೆರಡು ಒಂದಕ್ಕೊಂದು ಪೂರಕವೋ, ಅಥವಾ ಒಂದರ ಮೇಲೊಂದು ಅವಲಂಬಿತವೋ ಅವತ್ತಿಗೂ, ಇವತ್ತಿಗೂ ಗೊತ್ತಾಗಿಲ್ಲ.

ಇಲ್ಲಿಯೂ ಅದೇ ಜಿಜ್ಞಾಸೆ. ಅವಳ ಪ್ರೀತಿ ಅಪೇಕ್ಷಿಸಲು ನಾನು ಪ್ರಯತ್ನಪಟ್ಟಿದ್ದು ನನ್ನಲ್ಲಿ ಹೊಸದಾಗಿ ಮೂಡಿದ ಆತ್ಮವಿಶ್ವಾಸದ ನೆಲೆಯಿಂದಲೋ, ಅಥವಾ ಅವಳ ಸಾನಿಧ್ಯ ತರಬಹುದಾದಂತಹ ಪ್ರೀತಿಯ ಬೆಳಕಿನಲ್ಲಿ, ನನಗೇ ಹೊಸದಾಗಿದ್ದ ನನ್ನ ವ್ಯಕ್ತಿತ್ವದ ಆಯಾಮವೊಂದನ್ನು ಹುಡುಕುವ ಸ್ವಾರ್ಥದಿಂದಲೋ? ಪ್ರೀತಿಯ ಕರುಣಾಸ್ಥಾಯಿಯಿಂದ ಆತ್ಮವಿಶ್ವಾಸ ಒಡಮೂಡಿದ್ದೋ ಅಥವಾ ಕೇವಲ ಅವಳ ಸಂಗದಿಂದ ಹುಟ್ಟಿರಬಹುದಾದ ಆತ್ಮವಿಶ್ವಾಸದ ಸೆಲೆ ನನ್ನದೇ ವ್ಯಕ್ತಿತ್ವದಲ್ಲಿ ಸುಪ್ತವಾಗಿದ್ದ ಪ್ರೀತಿಯ ಅಲೆಗಳನ್ನು ಉದ್ದೀಪನಗೊಳಿಸಿದ್ದೊ? ಎಷ್ಟೊಂದು ಗೋಜಲು ಗೋಜಲು! ಆದರೆ ಒಂದಂತೂ ನಿಜ. ಅವಳ ತಿರಸ್ಕಾರದಿಂದ ನಾನು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದೆ. ನನ್ನ ಆತ್ಮವಿಶ್ವಾಸ ಮತ್ತೆ ಪಾತಾಳಕ್ಕಿಳಿದು ಹೋಗಿತ್ತು. ಯಾವ ಪ್ರೀತಿಯ ಭಾವ ನನ್ನ ಅಂತರಂಗದಲ್ಲಿ ಹೊಸ ಹುಮ್ಮಸ್ಸು, ಹೊಸ ವಿಶ್ವಾಸವನ್ನು ಹುಟ್ಟಿಸಿತ್ತೋ ಅದೇ ಮತ್ತೆ ಎಲ್ಲವನ್ನೂ ಮರೆಸಿ ಹಳೆಯ ಸ್ಥಿತಿಗೆ ನನ್ನನ್ನು ನೂಕಿದ ವಿಪರ್ಯಾಸಕ್ಕೆ ನಾನೇ ಸಾಕ್ಷಿಯಾಗಿದ್ದೆ. ಪ್ರೀತಿಯ ಮೋಹಕ ಜಗತ್ತಿನ ಆಸರೆಯನ್ನು ಪಡೆಯಹೋದವನು ಮನಸ್ಸುಗಳ ನಡುವಿನ, ಮನುಷ್ಯರ ನಡುವಿನ ನಂಬುಗೆಯ ಮೇಲೇ ವಿಶ್ವಾಸವಿಲ್ಲದ ಲೋಕದ ಕಾಳಚಕ್ರದಲ್ಲಿ ಕಳೆದುಹೋಗಿದ್ದೆ.

ದೊಡ್ಡದೊಂದು ನಿಟ್ಟುಸಿರು ನನಗೆ ಅರಿವಿಲ್ಲದೆಯೇ ಹೊರಬಿತ್ತು. ಇಷ್ಟ್ಯಾಕೆ ವೇದನೆ ನೀಡುತ್ತಿವೆ ಹಳೆಯ ನೆನಪುಗಳು? ಪ್ರೀತಿಯ ಮೋಹಕ್ಕಿಂತ ಅದರ ತಿರಸ್ಕಾರದ ನೆನಪುಗಳ ವ್ಯಾಮೋಹವೇ ಹೆಚ್ಚು ಸಂವೇದಾನಾಶೀಲವೇ ಎಂಬ ಸಂಶಯ ಮನಸ್ಸಿನಲ್ಲೊಮ್ಮೆ ಮೂಡಿ ಮರೆಯಾಯಿತು. ಏನೇ ಆಗಲಿ, ಈ ವೇದನೆಗಳ ವ್ಯಾಪ್ತಿಯಿಂದ ಹೊರಬರಬೇಕಾದ ಅನಿವಾರ್ಯತೆ ನನಗೀಗ ನಿಧಾನವಾಗಿ ಅರಿವಾಗತೊಡಗಿತು. ಆವಾಗಿನ ತಳಮಳಗಳನ್ನೆಲ್ಲ ಈಗ ಸಮಚಿತ್ತದಲ್ಲಿ ನಿಂತು ನೋಡಿದರೆ ಹಲವಾರು ಹೊಸ ವಿಷಯಗಳೇ ಗೋಚರವಾಗಬಹುದೇನೋ. ಬಗೆ ಬಗೆ ಅನುಭವಗಳಿಂದ ನಾವು ಕಲಿಯಬೇಕಾಗಿದ್ದು ಇಷ್ಟೇನೇ ಅಥವಾ ಅವು ಉಂಟು ಮಾಡಿದ ಪರಿಣಾಮಗಳ ವಿಸ್ತಾರ ಇಷ್ಟೇ ಎಂದು ಹೇಗೆ ಹೇಳುವುದು? ಎಲ್ಲ ಅನುಭವಗಳನ್ನೂ ನಮ್ಮ ಮನಸ್ಸು ತನ್ನ ಬೌದ್ಧಿಕ ಮತ್ತು ವೈಚಾರಿಕತೆಯ ಪರಿಮಿತಿಯ ಮೂಸೆಯಲ್ಲಿ ಹಾಕಿ ವಿಶ್ಲೇಷಿಸಿ, ಅದರಿಂದ ಹಲವು ತನಗೆ ಸರಿತೋರಿದ ಅಥವಾ ಪ್ರಿಯವಾದ ಭಾವಗಳನ್ನು ನಿಶ್ಚಯಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ನಾನು ಅನುಭವಿಸುತ್ತಿರುವ ವೇದನೆ, ನಾನೇ ಬಯಸಿ ಹಿಂದೆ ಹೋದ ಪ್ರೀತಿ ಮರೀಚಿಕೆಯಿಂದಲೇ ಹುಟ್ಟಿದ್ದರಿಂದ ಮನಸ್ಸಿಗೆ ಸ್ವಯಂವೇದ್ಯವಾಗಲು ಕಷ್ಟವಾಗಲಿಕ್ಕಿಲ್ಲ. ನಿಜ, ಆ ಭಾವನೆ ಸುಳಿದಂತೆ ಹೃದಯ ನಿರಾಳವಾಯಿತು. ಪ್ರೀತಿಯ ಭಾವ ನಿರಾಕರಣೆಯ ದುಃಖವನ್ನೂ, ತಿರಸ್ಕಾರದ ನೋವನ್ನೂ, ವೇದನೆಯ ವಾಸ್ತವದ ಜೊತೆಗೆ ಆತ್ಮವಿಶ್ವಾಸವನ್ನೂ ಕಲಿಸಬಲ್ಲದೆಂಬ ಭರವಸೆಯ ಭಾವ ಮನದಲ್ಲಿ ಉದಯಿಸಿ ಉಲ್ಲಾಸ ಮೂಡಿಸಿತು.

ನಿಧಾನವಾಗಿ ಹೊರಗೆ ಕಣ್ಣು ಹಾಯಿಸಿದೆ. ಮಳೆಯ ಆರ್ಭಟ ಬಹಳಷ್ಟು ಕಮ್ಮಿಯಾಗಿತ್ತು. ಎಲ್ಲೋ ಒಂದೆರಡು ಮಳೆಹನಿಗಳು ಸುರಿದುಹೋದ ಮಳೆಯ ನೆನಪನ್ನು ಇನ್ನೂ ಜೀವಂತವಿಡುವ ಪ್ರಯತ್ನ ನಡೆಸಿದ್ದವು. ಶುಭ್ರವಾದ ಆಕಾಶವನ್ನು ಮುತ್ತಿ ಕಪ್ಪಿಡಲು ಹವಣಿಸುತ್ತಿದ್ದ ಮಳೆಮೋಡವನ್ನು ಭೇದಿಸಿಯಾದರೂ, ಭೂಮಿಯನ್ನು ತಲುಪಿ ತಮ್ಮ ಅಸ್ತಿತ್ವನ್ನು ಕಂಡುಕೊಳ್ಳಲು ಹವಣಿಸುತ್ತಿದ್ದ ಸೂರ್ಯಕಿರಣಗಳ ಉತ್ಸಾಹ, ನನ್ನಲ್ಲಿ ಸ್ಪೂರ್ತಿಯನ್ನು ಹುಟ್ಟಿಸಲಾರಂಭಿಸಿತು. ಮೋಡಗಳ ಪ್ರತಿರೋಧವನ್ನು ಲೆಕ್ಕಿಸದೇ ಭೂಮಿಯನ್ನು ತಲುಪಿ ಕತ್ತಲೆಯ ಕೀಳರಿಮೆಯನ್ನು ಸಂಪೂರ್ಣವಾಗಿ ತೊಡೆದುಹಾಕುತ್ತೇವೆ ಎಂಬ ಆತ್ಮ ವಿಶ್ವಾಸದಿಂದ ಪ್ರಕಾಶಿಸುತ್ತಿರುವ ಹೊನ್ನಕಿರಣಗಳು, ಮರಳಿ ಉದಯಿಸುತ್ತಿದ್ದ ನನ್ನ ಮನದ ಹಂಬಲದ ಸಂಕೇತವೋ ಎನ್ನುವಂತೆ ಭಾಸವಾದವು.

Thursday, April 22, 2010

"ಬಾಳ ನರ್ತಕ" ಕವನ ಸಂಕಲನ ಬಿಡುಗಡೆ ಸಮಾರಂಭ

ಆತ್ಮೀಯರೇ,

ನನ್ನ ತಂದೆಯವರು ಬರೆದ ಕೆಲವು ಕವನಗಳ ಪುಸ್ತಕರೂಪ, "ಬಾಳ ನರ್ತಕ" ದ ಬಿಡುಗಡೆ ಸಮಾರಂಭವನ್ನು ಇದೇ ಶನಿವಾರ ದಿನಾಂಕ ೨೪ ರಂದು ಶಿರಸಿ ತಾಲೂಕಿನ ಯಡಳ್ಳಿಯ "ವಿದ್ಯೋದಯ" ಸಭಾಭವನದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಏರ್ಪಡಿಸಿದ್ದೇವೆ. "ಆಗ್ರಾ ಗಾಯಕಿ ಕಲಾವೃಂದ" ಯಡಳ್ಳಿ ಇವರ ವತಿಯಿಂದ ಸಂಗೀತ ಸಂಜೆ ಕೂಡ ಇದೇ ಸಂದರ್ಭದಲ್ಲಿ ನಡೆಯಲಿದೆ.





ಸಹೃದಯ ಕಲಾಭಿಮಾನಿಗಳಿಗೆಲ್ಲ ಆದರದ ಸ್ವಾಗತ

Wednesday, March 17, 2010

ಸಂದಿಗ್ಧ

ಹಾಸಿಗೆಗೆ ತಲೆ ಕೊಟ್ಟರೆ ಸಾಕು, ಒತ್ತರಿಸಿಕೊಂಡು ಬರುವಷ್ಟು ನಿದ್ದೆ. ಒಂದು ವಾರದಿಂದ ಆಫೀಸ್ ಕೆಲಸದ ಒತ್ತಡ, ಡೆಡ್ ಲೈನಿನ ಆತಂಕ ಎಲ್ಲಾ ಸೇರಿ ತಲೆ ಚಿಟ್ಟು ಹಿಡಿದು ಹೋಗಿತ್ತು. ಇವತ್ತು ಸ್ವಲ್ಪ ನಿರಾಳ. ಅದಕ್ಕೇ ಇಷ್ಟೊಂದು ನಿದ್ದೆ ಬರ್ತಾ ಇರಬೇಕು. ಇನ್ನೇನು ದಿಂಬಿಗೆ ತಲೆ ಕೊಡಬೇಕು, ಅಷ್ಟರಲ್ಲೇ ಮಗಳು ಒಂದು ನೋಟ್ ಬುಕ್ ಹಿಡಿದುಕೊಂಡು ಬಂದಳು. "ಅಪ್ಪಾ, ವಿವೇಕಾನಂದರ ಬಗ್ಗೆ ಒಂದು ಭಾಷಣ ಬರ್ದುಕೊಡು, ಪ್ಲೀಸ್. ನಾಡಿದ್ದು ನಮ್ಮ ಸ್ಕೂಲಲ್ಲಿ ಕಾಂಪಿಟೇಶನ್ ಇದೆ. ನಾನು ಹೆಸ್ರು ಕೊಟ್ಟಿದ್ದೀನಿ" ಅಂತ. ಅವಳಿಗೂ ನಿದ್ದೆ ಜೋರಾಗಿ ಬಂದಿದೆ ಅಂತ ಅವಳ ಕಣ್ಣುಗಳೇ ಹೇಳುತ್ತಿದ್ದವು. ಸಾಮಾನ್ಯವಾಗಿ ಒಂಬತ್ತೂವರೆಗೆಲ್ಲಾ ಮಲಗುವವಳು ಇವತ್ತು ನನಗಾಗಿ ಹತ್ತು ಘಂಟೆಯ ತನಕ ಕಾಯ್ದಿದ್ದಾಳೆ.

ನಾನು ತಕ್ಷಣಕ್ಕೆ ಏನೂ ಹೇಳಲಿಲ್ಲ. ಮನಸ್ಸೆಲ್ಲ ಖಾಲಿ ಖಾಲಿ. ನಾನು ಸುಮ್ಮನಿದ್ದುದನ್ನು ನೋಡಿ ಅವಳೇ ಶುರು ಮಾಡಿದಳು. "ಮೊನ್ನೆನೇ ಹೇಳಿದ್ರು ಸ್ಕೂಲಲ್ಲಿ. ಅಮ್ಮ ಹೇಳಿದ್ರು, ನೀನು ಚೆನ್ನಾಗಿ ಭಾಷಣ ಬರ್ದುಕೊಡ್ತೀಯಾ ಅಂತ. ಮೊನ್ನೆಯಿಂದ ನೀನು ಸಿಕ್ಕೇ ಇಲ್ಲಾ ನನಗೆ. ಅಮ್ಮಾ ನಂಗೆ ಪ್ರಾಮಿಸ್ ಮಾಡಿದ್ರು ನಿನ್ನೆನೇ ಬರೆಸಿ ಕೊಡ್ತಿನಿ ಅಂತ. ಇವತ್ತಾದ್ರೂ ರೆಡಿ ಆಗಿಲ್ಲ, ಏನು ಮಾಡ್ಲಿ ನಾನು?". ಅವಳ ಜೋಲು ಮೋರೆ ನೋಡಿ ನನಗೆ ತುಂಬಾ ಬೇಜಾರಾಯ್ತು. "ವಿವೇಕಾನಂದರ ಬಗ್ಗೆ ತುಂಬಾ ಗೊತ್ತು ನಿಂಗೆ ಅಂತ ಅಮ್ಮ ಹೇಳಿದ್ಳು. ಈಗ ಒಂದು ೧೦ ನಿಮಿಷದಲ್ಲಿ ಬರೆದು ಕೊಡಕ್ಕೆ ಆಗಲ್ವಾ?" ಒಂದು ಮುಗ್ಧ ಪ್ರಶ್ನೆ!. ನಾನು ನಿಟ್ಟುಸಿರು ಬಿಟ್ಟೆ. ಮಧ್ಯದಲ್ಲಿ ಇವಳದ್ದು ಸಂಧಾನ. "ಪುಟ್ಟಿ, ಅಪ್ಪಂಗೆ ತುಂಬಾ ಸುಸ್ತಾಗಿದೆ ಇವತ್ತು, ನಾಳೆ ಬರೆದುಕೊಟ್ರೆ ಆಗಲ್ವಾ?". "ನಾಳೆ ಬರೆದುಕೊಟ್ಟರೆ ನಾನು ಪ್ರಿಪೇರ್ ಆಗೋದು ಯಾವಾಗ?, ನಾಡಿದ್ದೇ ಕಾಂಪಿಟೇಶನ್ನು" ಅವಳ ಸಂದಿಗ್ಧ!. ಕೊನೆಗೆ ನಾನೇ ಸೂಚಿಸಿದೆ. "ಒಂದು ಕೆಲ್ಸ ಮಾಡೋಣ ಪುಟ್ಟೀ, ನಾಳೆ ಬೆಳಿಗ್ಗೆ ಬೇಗ ಎದ್ದು ಬರೆದುಕೊಡ್ತೀನಿ ಆಯ್ತಾ? ನಾಳೆನೆಲ್ಲಾ ನೀನು ಪ್ರಿಪೇರ್ ಆಗಬಹುದು." ಈಗ ಸ್ವಲ್ಪ ಗೆಲುವಾಯ್ತು ಅವಳ ಮುಖ. "ಮರೀಬೇಡಿ ಅಪ್ಪಾ ಬೆಳಿಗ್ಗೆ, ಗುಡ್ ನೈಟ್" ಅಂತ ವಾಪಾಸ್ ಹೋದಳು.

"ನೀನ್ಯಾಕೆ ಮುಂಚೆನೇ ಹೇಳ್ಲಿಲ್ಲ ನಂಗೆ?" ನಾನು ಹೆಂಡತಿಯ ಮೇಲೆ ರೇಗಿದೆ. "ಸುಮ್ನೆ ನನ್ನ ಮೇಲೆ ಕೂಗ್ಬೇಡಿ ನೀವು. ನಿಮಗೆಲ್ಲಿ ಟೈಮ್ ಇತ್ತು? ದಿನಾ ರಾತ್ರಿ ಎಷ್ಟು ಗಂಟೆಗೆ ಬರ್ತಿದೀರಾ ಅಂತ ಗೊತ್ತು ತಾನೇ ನಿಮಗೆ? ನಿಮಗಿರೋ ಟೆನ್ಷನ್ನಲ್ಲಿ ಇದೊಂದು ಬೇರೆ ಕೇಡು ಅಂತ ಹೇಳ್ಲಿಲ್ಲ ನಾನು." ಅವಳಿಗೂ ರೇಗಿರಬೇಕು. ಸುಮ್ಮನೆ ಹಾಸಿಗೆ ಮೇಲೆ ಬಿದ್ದುಕೊಂಡೆ. ಒಂತರಾ ಅಸಹಾಯಕತನ, ಬೇಜಾರು, ದುಃಖ ಎಲ್ಲವೂ ಆವರಿಸಿಕೊಂಡಿತು ನನ್ನನ್ನು. ನಿದ್ದೆ ಸಂಪೂರ್ಣವಾಗಿ ಹಾರಿಹೋಗಿತ್ತು. ಮಗಳಿಗಾಗಿ ದಿನಕ್ಕೆ ಒಂದು ಅರ್ಧ ತಾಸಾದರೂ ಮೀಸಲಿಡಲು ನನಗೇಕೆ ಸಾಧ್ಯವಾಗುತ್ತಿಲ್ಲ? ಇತ್ತೀಚೆಗಂತೂ ಆಫೀಸಿಗೆ ಹೋದ ಮೇಲೆ ಮನೆ ಕಡೆ, ಮನೆಯವರ ಕಡೆ ಒಂಚೂರೂ ಗಮನ ಕೊಡಲೇ ಆಗುತ್ತಿಲ್ಲ, ಅಷ್ಟೆಲ್ಲ ಒತ್ತಡ. ನಿಜಕ್ಕೂ ಇಷ್ಟೆಲ್ಲಾ ಒತ್ತಡದಲ್ಲಿ ಕೆಲಸ ಮಾಡಲೇ ಬೇಕಾ? ಅಥವಾ ವಿನಾಕಾರಣ ನಾನೇ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇನಾ? ಒಂದೂ ತಿಳಿಯುತ್ತಿಲ್ಲ. "ನೀನು ಕೆಲಸ ಮತ್ತು ಸಂಸಾರ ಎರಡನ್ನೂ ನಿಭಾಯಿಸುವುದರಲ್ಲಿ ಸೋತಿದ್ದೀಯಾ" ಎಂದು ಮನಸ್ಸು ಪದೇಪದೇ ಹೇಳಲು ಶುರುಮಾಡಿತು. ಸುಮ್ಮನೆ ತಲೆಕೊಡವಿದೆ.

ಹಾಸಿಗೆಯ ಮೇಲೆ ಬಿದ್ದುಕೊಂಡೇ ಯೋಚಿಸಲು ಶುರುಮಾಡಿದೆ. ಮನಸ್ಸು ಬೇಡವೆಂದರೂ ಹಿಂದೆ ಓಡಿತು. ನಾವು ಚಿಕ್ಕವರಿದ್ದಾಗ ಪ್ರತೀ ಸಲ ಸ್ವಾತಂತ್ರೋತ್ಸವಕ್ಕೂ, ಗಣರಾಜ್ಯ ದಿನದಂದೂ ಅಪ್ಪ ತಪ್ಪದೇ ಭಾಷಣ ಬರೆದುಕೊಡುತ್ತಿದ್ದರು. ಅದನ್ನು ಬಾಯಿಪಾಠ ಮಾಡಿಕೊಂಡು ಹೋಗಿ ನಾವು ಶಾಲೆಯಲ್ಲಿ ಹೇಳುತ್ತಿದ್ದೆವು. ಹೈಸ್ಕೂಲ್ ಗೆ ಬಂದ ಮೇಲೆ ಪ್ರತೀ ವರ್ಷವೂ ಮಾರಿಗುಡಿಯಲ್ಲಿ ಆಗುವ ನವರಾತ್ರಿ ಸ್ಪರ್ಧೆಯಲ್ಲಿ ಖಾಯಂ ಆಗಿ ಅಪ್ಪ ಬರೆದುಕೊಟ್ಟ ಪ್ರಬಂಧವನ್ನು ಬರೆದು ನಾನು ಪ್ರೈಜ್ ಗೆದ್ದಿದ್ದೆ. ಸ್ಕೂಲ್ ಮತ್ತು ಹೈಸ್ಕೂಲಿನಲ್ಲಿ ಆಗುವ ಯಾವುದೇ ತರಹದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅಪ್ಪ ನಮ್ಮನ್ನು ಯಾವಾಗಲೂ ಹುರಿದುಂಬಿಸುತ್ತಿದ್ದರು, ಅಲ್ಲದೇ ತಾವು ಜೊತೆಗೆ ಕುಳಿತು ಸಹಾಯಮಾಡುತ್ತಿದ್ದರು. ಅವರೂ ಶಾಲಾ ಶಿಕ್ಷಕರಾಗಿದ್ದುದು ಇವಕ್ಕೆಲ್ಲ ಮೂಲ ಪ್ರೇರಣೆಯಾಗಿದ್ದಿರಬೇಕು, ಆದರೆ ಈಗ ಯೋಚಿಸಿದರೆ ಅವರ ಶೃದ್ಧೆ ಮತ್ತು ಉತ್ಸಾಹ ಬೆರಗು ಹುಟ್ಟಿಸುವಷ್ಟು ಅಸಾಧಾರಣವಾಗಿತ್ತು. ಪ್ರತೀ ವರ್ಷ ನಡೆಯುವ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅವರು "ನೂಕ್ಲಿಯರ್ ರಿಯಾಕ್ಟರ್’ ಅಥವಾ ’ಗೋಬರ್ ಗ್ಯಾಸ್" ಮಾಡೆಲ್ ಮಾಡಿಕೊಡುವಾಗ ತೆಗೆದುಕೊಂಡ ಶ್ರಮ, ಉತ್ಸಾಹ, ಅಲ್ಲದೆ ಅವು ಹೇಗೆ ಕೆಲಸಮಾಡುತ್ತವೆ ಎಂಬುದರ ವಿವರಣೆ ಇಂದಿಗೂ ನನ್ನ ಕಣ್ಣ ಮುಂದಿದೆ. ಅವಕ್ಕೆಲ್ಲ ಪ್ರಥಮ ಸ್ಥಾನ ಬಂದಾಗ ನನಗಾದ ಸಂತೋಷ, ಮಾತುಗಳಲ್ಲಿ ಹಿಡಿಸಲಾರದಷ್ಟು!. ದಿನಪತ್ರಿಕೆಗಳಲ್ಲಿ ಬರುವ ಪದಬಂಧವನ್ನು ಬಿಡಿಸುವಾಗಲೆಲ್ಲ ಅವರು ನನ್ನನ್ನು ಕರೆದು ಹತ್ತಿರ ಕುರಿಸಿಕೊಳ್ಳುತ್ತಿದ್ದರು. ಅಲ್ಲದೆ ಆ ಶಬ್ದಗಳು ಹೇಗೆ ಉದ್ಭವವಾದವು ಎಂಬುದನ್ನೂ ವಿವರಿಸುತ್ತಿದ್ದರು. ಅವರ ಶಾಲಾ ಲೈಬ್ರರಿಯಿಂದ ಹಲವಾರು ಒಳ್ಳೆಯ ಕನ್ನಡ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ನಮ್ಮ ರಜಾಕಾಲದ ಬಹುಪಾಲನ್ನು ನಾವು ಅವನ್ನು ಓದಿಕಳೆಯುತ್ತಿದ್ದೆವು. ಹೀಗೆ ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲವನ್ನೂ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು.

ಹಾಗಾದರೆ ನಮ್ಮ ಪಾಲಕರು ನಮಗೆ ಮೀಸಲಿಟ್ಟಷ್ಟು "ಕ್ವಾಲಿಟಿ ಟೈಮ್", ನಾವು ನಮ್ಮ ಮಕ್ಕಳಿಗೆ ಕೊಡುವುದು ಅಷ್ಟು ಕಷ್ಟವೇ? ನಾವೇ ಸೃಷ್ಟಿಸಿಕೊಂಡ ಅಥವಾ ನಮ್ಮ ಕೆಲಸದ ರೀತಿಯ ಮಾನಸಿಕ ಒತ್ತಡ, ರಸ್ತೆ ಟ್ರಾಫಿಕ್ಕಲ್ಲೇ ದಿನಕ್ಕೆ ಮೂರು ನಾಲ್ಕು ತಾಸು ಕಳೆಯುವ ಅನಿವಾರ್ಯತೆ, ನಮ್ಮಲ್ಲಿರುವ ಆಸಕ್ತಿ ಅಥವಾ ಶೃದ್ಧೆಯ ಕೊರತೆ ಇವೆಲ್ಲವೂ ಇದಕ್ಕೆ ಕಾರಣವಿರಬಹುದಾ?. ಕಾರಣ ಯಾವುದೇ ಇರಬಹುದು, ಆದರೆ ತಲೆಮಾರಿನಿಂದ ತಲೆಮಾರಿಗೆ ಹೀಗೆ ಅಭಿರುಚಿಗಳು ಮತ್ತು ಆಸಕ್ತಿಗಳು ಸೋರಿಹೋಗುತ್ತಾ ಇದ್ದರೆ ಮುಂದೆ ಜೀವನ ಬರೀ ಯಾಂತ್ರಿಕವಾಗುವುದಿಲ್ಲವೆ? ಯಾವಾಗ ಕೇಳಿದರೂ ’ನಂಗೆ ಈಗ ಟೈಮ್ ಇಲ್ಲ, ಬೇರೆ ಕೆಲಸಗಳಿವೆ" ಅನ್ನೋ ರೆಡಿಮೇಡ್ ಉತ್ತರವನ್ನು ಮನಸ್ಸು ಸದಾ ಕೊಡುತ್ತಲೇ ಇರುತ್ತದೆ. "ಸಂಗೀತವನ್ನು ಸೀರಿಯಸ್ಸಾಗಿ ಕಲೀಬೇಕು" ಅಂತ ೮ ತಿಂಗಳ ಹಿಂದೆ ಅನ್ಕೊಂಡಿದ್ದೆ. "ಸಿಗೋದೊಂದು ರವಿವಾರ,ಅವತ್ತೂ ಪ್ರಾಕ್ಟೀಸ್ ಮಾಡ್ತಾ ಕುಳಿತರೆ ಅಷ್ಟೇ" ಅಂತ ಮನಸ್ಸು ಕಾರಣ ಹೇಳಿತು. ಅಲ್ಲಿಗೆ ಅದರ ಕಥೆ ಮುಗೀತು. "ಹೊಸ ಮನೆಗೆ ಒಂದು ಚೆಂದನೆಯ ಪೇಂಟಿಂಗ್ ಬಿಡಿಸಿ ಹಾಲ್ ನಲ್ಲೇ ತೂಗುಹಾಕಬೇಕು" ಅಂತ ಪೇಪರ್,ಹೊಸ ಬಣ್ಣ ಎಲ್ಲಾ ತಂದಿದಾಯ್ತು, "ಸಿಕ್ಕಾಪಟ್ಟೆ ಸಣ್ಣ ಹಿಡಿದು ಮಾಡೋ ಕೆಲಸ ಈ ಚಿತ್ರ ಬರೆದು ಪೇಂಟಿಂಗು ಮಾಡೋದು, ಮುಂದಿನ ವಾರ ಟೈಮ್ ಮಾಡ್ಕೊಂಡು ಮಾಡಕ್ಕಾಗಲ್ವಾ?" ಅಂತ ಅಂದುಕೊಂಡಿದ್ದೇ ಸರಿ, ಆ ಮುಂದಿನವಾರ ಬಂದೇ ಇಲ್ಲ! ಯಾವುದೇ ಒಂದು ಅತೀ ತಾಳ್ಮೆ ಮತ್ತು ಶ್ರದ್ಧೆ ಬೇಡುವ ಕೆಲಸವನ್ನು ಸರಿಯಾಗಿ ಮಾಡಿದ್ದೇ ದಾಖಲೆಯಿಲ್ಲ. ಬರೀ ಸಮಯದ ಅಭಾವ ಇದಕ್ಕೆಲ್ಲ ಕಾರಣವಾಗಿರಬಹುದಾ? "ಹೌದು" ಅನ್ನಲು ಮನಸ್ಸು ಯಾಕೋ ಒಪ್ತಾ ಇಲ್ಲ! ಉತ್ತರ ಎಲ್ಲೋ ನನ್ನಲ್ಲೇ ಇದೆ. ಒಂಥರಾ ಎಲ್ಲವನ್ನೂ ಓದಿದ್ದೂ, ಪರೀಕ್ಷೆಯಲ್ಲಿ ಏನೂ ಬರೆಯಲಿಕ್ಕಾಗದ ವಿದ್ಯಾರ್ಥಿಯ ಪರಿಸ್ಥಿತಿಯಂತೆ ಮನಸು ವಿಲವಿಲ ಒದ್ದಾಡಿತು.

ಈಗಿನ ಮಕ್ಕಳದಂತೂ ವಯಸ್ಸಿಗೆ ಮೀರಿದ ಮಾತು, ವರ್ತನೆ. ನಮ್ಮ ಅಪ್ಪ ಅಮ್ಮಂದಿರಿಗೆ ಹೀಗೆಲ್ಲ ಅನ್ನಿಸಿದ್ದು ನನಗೆ ಅನುಮಾನ. ಅವರ ಗ್ರಹಿಕಾ ಸಾಮರ್ಥ್ಯ ಕೂಡಾ ಜಾಸ್ತಿ. ಟೀವಿಯಲ್ಲಿ ಬರೋ ಕಾರ್ಯಕ್ರಮಗಳನ್ನು ನೋಡಿದ್ರೆ ಗೊತ್ತಾಗಲ್ವೆ? ಎಷ್ಟು ಬೇಗ ಹೇಳಿ ಕೊಟ್ಟಿದ್ದನೆಲ್ಲ ಕಲಿತುಬಿಡ್ತಾರೆ? ನಾಲ್ಕು ಜನರ ಎದುರು ನಿಂತು ಮಾತನಾಡುವುದಕ್ಕೂ, ಹಾಡುವುದಕ್ಕೂ ಒಂಚೂರು ಭಯವಿಲ್ಲ!. ಐದನೇತ್ತಿಯಲ್ಲಿದ್ದಾಗ ಅಪ್ಪ ಹೇಳಿಕೊಟ್ಟಿದ್ದ "ಸಾರೇ ಜಹಾಂಸೆ ಅಚ್ಛಾ"ವನ್ನು ಹಾಡನ್ನು ಯಾವುದೋ ಸ್ಪರ್ಧೆಯಲ್ಲಿ ಹಾಡಿ ಮುಗಿಸೋವಷ್ಟರಲ್ಲಿ ನಾನು ಬೆವೆತುಹೋಗಿದ್ದೆ. ಅದೂ ಕೊನೆ ಸಾಲನ್ನು ಮರೆತು ಹೇಗೋ ತಪ್ಪು ತಪ್ಪು ಹಾಡಿ ಅಪ್ಪನ ಹತ್ತಿರ ಬೈಸಿಕೊಂಡಿದ್ದೆ. ಈಗಿನ ಮಕ್ಕಳಿಗೆ ಸಿಗುತ್ತಿರುವ ಸವಲತ್ತು, ಅವಕಾಶ, ಅಪ್ಪ ಅಮ್ಮಂದಿರ ಪ್ರೋತ್ಸಾಹ ಎಲ್ಲ ಕಾರಣವಿರಬಹುದು, ಆದರೆ ಅವರ ಸಾಮರ್ಥ್ಯವನ್ನಂತೂ ಕಡೆಗಣಿಸುವ ಮಾತೇ ಇಲ್ಲ. ಬಹುಷಃ ಇದೂ ನನ್ನ ಆತಂಕಕ್ಕೂ ಒಂದು ಕಾರಣವಿರಬೇಕು. ಅವರ ಬೌದ್ಧಿಕ ಸಾಮರ್ಥ್ಯವನ್ನು ನಾವು ಸರಿಯಾದ ದಾರಿಯಲ್ಲಿ ತೊಡಗಿಸಿ ಮಾರ್ಗದರ್ಶನ ನೀಡುತ್ತಿದ್ದೇವೆಯಾ ಅನ್ನುವುದು. ಆ ಕೆಲಸವನ್ನು ಅಪ್ಪ ಎಷ್ಟು ಚೆನ್ನಾಗಿ ನಿರ್ವಹಿಸಿದ್ದರು ಅನ್ನುವುದನ್ನು ಈಗ ಯೋಚಿಸಿದರೆ ಅವರ ಬಗ್ಗೆ ಹೆಮ್ಮೆಯನಿಸುತ್ತದೆ. ಆದರೂ ಎಷ್ಟೋ ಸಲ ನಾವು ಅವರನ್ನು ನಿರಾಸೆಗೊಳಿಸಿದ್ದುಂಟು. "ತಬಲಾ ಸಾಥ್ ಕೊಡುವಷ್ಟಾದರೂ ತಬಲಾ ಕಲಿ" ಅಂದು ಅವರು ಎಷ್ಟು ಸಲ ಹೇಳಿದ್ದರೋ ಏನೋ? ಆವಾಗ ಅದು ತಲೆಯೊಳಗೆ ಇಳಿಯಲೇ ಇಲ್ಲ. ಈಗ ಅದರ ಬಗ್ಗೆ ಪಶ್ಚಾತಾಪವಿದೆ. "ನಾನು ಸರಿಯಾಗಿ ಸಾಧಿಸಲಾಗದಿದ್ದನ್ನು ಮಕ್ಕಳು ಕಲಿತು ಸಾಧಿಸಲಿ" ಅನ್ನುವ ಆಸೆ ಎಲ್ಲ ಪಾಲಕರಿಗೂ ಇರುತ್ತದೆಯಲ್ಲವೆ? ನಾಲ್ಕು ಜನರ ಮುಂದೆ ಅದರ ಬಗ್ಗೆ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿದ್ದ ಬೇಸರ, ಹತಾಶೆ ಆಗ ಗೊತ್ತಾಗುತ್ತಿರಲಿಲ್ಲ. ಈಗ ಅದರ ಅರಿವಾಗುತ್ತಿದೆ. "ಇವನ ಹತ್ತಿರ ಈಗ ಮೂರು ದಿನ ಕೇಳುವಷ್ಟು ಸಂಗೀತದ ಕಲೆಕ್ಷನ್ ಇದೆ" ಎಂದು ಈಗ ಅಪ್ಪ ಹೆಮ್ಮೆಯಿಂದ ಬೀಗುವಾಗ ಅವರ ಕಣ್ಣಲ್ಲಿನ ಹೊಳಪು ಖುಶಿ ಕೊಡುತ್ತದೆ. ಯಾವುದೋ ಅತೀ ಕ್ಲಿಷ್ಟವಾದ ರಾಗವನ್ನು ಅಪ್ಪನಿಗೆ ಕೇಳಿಸಿ, ಇದು ಹೀಗೆ ಎಂದು ವಿವರಿಸುವಾಗ ಅಪ್ಪನಿಗಾಗುವ ಸಂತೋಷ ಅವನು ಮಾತನಾಡದೆಯೂ ಗೊತ್ತಾಗುತ್ತದೆ. ಮಕ್ಕಳು ನಮ್ಮ ಆಸೆಗೆ ತಕ್ಕುದಾಗಿ ವಿಶಿಷ್ಟವಾದುದನ್ನು ಸಾಧಿಸಿದಾಗ ಆಗುವ ಸಂತಸದ ಮಹತ್ವ ಈಗ ನನಗೆ ಯಾರೂ ಹೇಳಿಕೊಡದೇ ಅರ್ಥವಾಗುತ್ತದೆ.

ಎಲ್ಲಿಂದೋ ಶುರುವಾದ ಯೋಚನೆಗಳು ಎಲ್ಲಿಗೋ ಕರೆದುಕೊಂಡು ಹೋದವು. ಎಷ್ಟೋ ಗೊಂದಲಗಳಿದ್ದರೂ ಮನಸ್ಸು ಒಂದು ತಹಬದಿಗೆ ಬಂದ ಹಾಗೆ ಅನ್ನಿಸಿತು. "ನಿನ್ನ ಆತಂಕ ಅತ್ಯಂತ ಸಹಜ, ಅತಿಯಾಗಿ ಯೋಚಿಸುವುದನ್ನು ಬಿಡು, ಬರೀ ನೆಗೆಟಿವ್ ಆಗಿ ಯೋಚನೆ ಮಾಡುತ್ತಿದ್ದೀಯಾ" ಎಂದು ಮನಸ್ಸು ಎಚ್ಚರಿಸಲು ಶುರು ಮಾಡಿತು. ಬಹುಷಃ ನಾನು ಸುಮ್ಮನೆ ಆತಂಕಪಡುತ್ತಿದ್ದೇನೆ ಅನ್ನಿಸಿತು. ಎಲ್ಲ ಪಾಲಕರೂ ಈ ಸನ್ನಿವೇಶವನ್ನು ದಾಟಿಯೇ ಮುಂದೆ ಬಂದಿರುತ್ತಾರೆ. ನನ್ನ ಅಪ್ಪನಿಗೂ ಹೀಗೆ ಅನ್ನಿಸಿರಬಹುದು. "ಯೋಚನೆ ಮಾಡುವುದನ್ನು ಬಿಡು, ಯೋಚನೆಗಳನ್ನು ಕಾರ್ಯರೂಪಕ್ಕೆ ತಾ" ಎಂದು ಮನಸು ಹೇಳತೊಡಗಿತು. ನಿಜ, ಅಪ್ಪ ಹೇಳಿಕೊಟ್ಟ ರೀತಿಗಳು ನನಗೆ ಪಾಠವಾಗಬೇಕು. ಎಷ್ಟೋ ಸಲ ಹಾಗಾಗಿರುತ್ತದೆ. ನಾವು ಯಾರ್ಯಾರನ್ನೋ ನಮ್ಮ "ರೋಲ್ ಮಾಡೆಲ್" ಆಗಿ ಇಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಹತ್ತಿರವೇ ಇರುವ ನಮ್ಮವರ ಮಹತ್ವ ಗೊತ್ತಾಗುವುದೇ ಇಲ್ಲ. ನಮ್ಮ ಅಪ್ಪ, ಅಮ್ಮ, ಅಕ್ಕ, ತಮ್ಮಂದಿರಿಂದಲೇ ಕಲಿಯುವುದೇ ಬೇಕಾದಷ್ಟಿರುತ್ತವೆ. " ಅಂಗೈನಲ್ಲೇಬೆಣ್ಣೆ ಇಟ್ಟುಕೊಂಡು ಊರಲ್ಲೆಲ್ಲ ತುಪ್ಪ ಹುಡುಕಿದ ಹಾಗೆ" ನಾವು ಎಲ್ಲೋ ಸ್ಪೂರ್ತಿಗಾಗಿ ಹುಡುಕುತ್ತಲೇ ಇರುತ್ತವೆ. ಇಲ್ಲ, ಇನ್ನು ಮೇಲೆ ಎಷ್ಟು ಕಷ್ಟವಾದರೂ ಒಂದಷ್ಟು ಸಮಯವನ್ನು ಮಗಳಿಗಾಗಿಯೇ ಮೀಸಲಿಡುತ್ತೇನೆ ಎಂದು ಧೃಢ ನಿರ್ಧಾರ ಮಾಡಿಕೊಂಡೆ.

ರಾತ್ರಿಯ ನೀರವವನ್ನು ಭೇದಿಸಿ ಒಂದೇ ಸಮನೆ ಮೊಬೈಲು ಕಿರ್ರನೆ ಕೀರಿ ನನ್ನ ಯೋಚನಾ ಸರಣಿಯನ್ನು ನಿಲ್ಲಿಸಿತು. ಹೆಂಡತಿ ಅಸ್ಪಷ್ಟವಾಗಿ ಗೊಣಗಿದ್ದು ಕೇಳಿತು. ಈ ರಾತ್ರಿಯಲ್ಲಿ ಯಾರಪ್ಪಾ ಫೋನ್ ಮಾಡಿದವರು ಅಂತ ಕುತೂಹಲದಲ್ಲಿ ನೋಡಿದರೆ ಸಂದೀಪ್, ನನ್ನ ಪ್ರಾಜೆಕ್ಟ ಮ್ಯಾನೇಜರು. ಮನಸ್ಸು ಏನೋ ಕೆಟ್ಟದನ್ನು ಊಹಿಸಿತು. ಈ ಮಧ್ಯರಾತ್ರಿ ಮ್ಯಾನೇಜರಿನಿಂದ ಫೋನ್ ಬರುವುದೆಂದರೆ ಒಳ್ಳೆ ಸುದ್ದಿಯಾಗಿರಲು ಸಾಧ್ಯವೇ? ಆಚೆಕಡೆಯಿಂದ ಸ್ವಲ್ಪ ಕಂಗಾಲಾದ ಧ್ವನಿ. ಏನೋ "ರಿಲೀಸ್ ಸ್ಟಾಪರ್" ಅಂತೆ, ತುಂಬಾ ಅರ್ಜೆಂಟ್ ಪ್ರಾಬ್ಲಮ್ಮು, ಬೆಳಿಗ್ಗೆ ಏಳು ಗಂಟೆಗೆ ಕಸ್ಟಮರ್ ಕಾಲ್ ಇದೆ. ಆರು-ಆರುವರೆಗೆ ಆಫೀಸ್ ಗೆ ಬರಲು ಬುಲಾವ್. ಏನೋ ಡಿಸ್ಕಸ್ ಮಾಡಬೇಕಂತೆ. ಸರಿ ಅಂತ ಫೋನ್ ಇಟ್ಟೆ. "ಬರ್ತೀನಿ, ಬರ್ತೀನಿ" ಅಂತ ಹೆದರಿಸುತ್ತಾ ಇದ್ದ ನಿದ್ರೆ ಈಗ ಸಂಪೂರ್ಣವಾಗಿ ಹೊರಟು ಹೋಯ್ತು. ಹಾಸಿಗೆಯಲ್ಲಿ ಸುಮ್ಮನೇ ಹೊರಳಾಡಲು ಮನಸ್ಸಾಗಲಿಲ್ಲ. ಎದ್ದು ಮುಖ ತೊಳೆದುಕೊಂಡು ಹಾಲ್ ಗೆ ಬಂದು ಕೂತೆ. ತಕ್ಷಣ ಪುಟ್ಟಿಯ ಭಾಷಣ ನೆನಪಾಯ್ತು. ಒಂದು ಬಿಳಿ ಹಾಳೆ ತೆಗೆದುಕೊಂಡು ಬರೆಯಲು ಶುರು ಮಾಡಿದೆ. ವಿವೇಕಾನಂದರ "ನಾಡಿಗೆ ಕರೆ" ಪುಸ್ತಕ ನೆನಪಾಯ್ತು. ಎಂಥಹ ಧೀಮಂತ ವ್ಯಕ್ತಿತ್ವ? "ಏಳಿ..ಏದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ" ಅವರದ್ದೇ ಮಾತುಗಳು. ಬಹುಷಃ ನನಗೇ ಹೇಳಿದ್ದಿರಬೇಕು. ಮೈಮೇಲೆ ಏನೋ ಆವೇಶ ಬಂದವರ ಹಾಗೆ ಬರೆಯುತ್ತಲೇ ಹೋದೆ.