Monday, September 21, 2009

ಕತ್ತಲೆಯಿಂದ ಬೆಳಕಿನೆಡೆಗೆ

ಕರೆಂಟು(ವಿದ್ಯುತ್ ಶಕ್ತಿ), ಮಾನವ ಸಮಾಜದಲ್ಲಿ ಆದ ಅತ್ಯಂತ ಉಪಯೋಗಿ ಮತ್ತು ಕ್ರಾಂತಿಕಾರಕವಾದ ಸಂಶೋಧನೆ ಎಂದು ನೀವು ಬಲವಾಗಿ ನಂಬಿದ್ದಲ್ಲಿ, ನೀವೊಮ್ಮೆ ಅವಶ್ಯವಾಗಿ ನಮ್ಮೂರಿಗೆ ಬಂದು ಹೋಗಲೇ ಬೇಕು. ಯಾಕೆಂದರೆ ನಮ್ಮೂರಿನಲ್ಲಿ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯಗಳು ನಿಮಗೆ ದೊರೆಯುವುದಲ್ಲಿ ಸಂಶಯವೇ ಇಲ್ಲ.

ನಾವು ಊರಿಗೆ ಹೋದಾಗ ಯಾವತ್ತೂ ಸಹ ಕರೆಂಟು ಇರುವುದೇ ಇಲ್ಲ. ನಾವೂ ಸಹ "ಕರೆಂಟ್ ಯಾವಾಗ ತೆಗೆದರು?, ಎಷ್ಟು ಹೊತ್ತಿಗೆ ಬರಬಹುದು?" ಎಂಬ ಪ್ರಶ್ನೆಗಳನ್ನು ಕೇಳುವ ಸಾಹಸ ಮಾಡುವುದಿಲ್ಲ.ಯಾಕೆಂದರೆ ಅಲ್ಲಿ ಯಾರಿಗೂ ಕರೆಂಟು ಬಂದಿದ್ದು ಮತ್ತು ಹೋಗಿದ್ದರ ಅರಿವು ಮತ್ತು ಜ್ನಾಪಕ ಇರುವುದು ಸಾಧ್ಯವೇ ಇಲ್ಲ. "ಟೈಮ್ ಎಂಡ್ ಟೈಡ್ ವೇಟ್ ಫಾರ್ ನನ್" ಎಂಬ ಆಂಗ್ಲ ಸೂಕ್ತಿಯನ್ನು ನಮ್ಮೂರಿನಲ್ಲಿ "ಟೈಮ್ ಎಂಡ್ ಕರೆಂಟ್ ವೇಟ್ ಫಾರ್ ನನ್" ಎಂದು ಅವಶ್ಯವಾಗಿ ಮಾರ್ಪಡಿಸಬಹುದು. ಅಪರೂಪಕ್ಕೊಮ್ಮೆ ಮನೆಯ ಮೇನ್ ಸ್ವಿಚ್ಚಲ್ಲಿ ಕೆಂಪು ದೀಪ ಉರಿಯುವುದನ್ನು ನೋಡಿದರೆ ನಮಗೆ ಖುಶಿಯಂತೂ ಖಂಡಿತವಾಗಿ ಆಗುವುದಿಲ್ಲ. ಆದರೆ ಆಶ್ಚರ್ಯವಾಗಿ "ಒಹ್, ಕರೆಂಟಿದ್ದು ಇವತ್ತು!" ಎಂಬ ಶಬ್ಧಗಳು ನಮ್ಮ ಬಾಯಿಂದ ನಮಗೆ ಗೊತ್ತಿಲ್ಲದಂತೆಯೇ ಹೊರಗೆಬಿದ್ದುಹೋಗಿರುತ್ತವೆ.

ಬೆಂಗಳೂರಿನಂತ ನಗರಗಳಲ್ಲಿ ಜನರು ಎಷ್ಟರ ಮಟ್ಟಿಗೆ ಕರೆಂಟಿನ ಮೇಲೆ ಅವಲಂಬಿಸಿದ್ದಾರೆ ಎಂದು ಯೋಚಿಸಿದಾಗ ನನಗೆ ನಮ್ಮೂರಿನ ವಿದ್ಯುತ್ ಇಲಾಖೆಯ ಮೇಲೆ ಅಭಿಮಾನ ಉಕ್ಕಿ ಹರಿಯುತ್ತದೆ. ನೀವೇ ಯೋಚನೆ ಮಾಡಿ, ಬೆಳಿಗ್ಗೆ ಸ್ನಾನಕ್ಕೆ ಗೀಸರ್ರಿನಿಂದ ಹಿಡಿದು, ರಾತ್ರಿ ಟೀವಿ ನೋಡಿ ಮಲಗುವವರೆಗೂ ನಮಗೆ ಕರೆಂಟು ಎಲ್ಲದಕ್ಕೂ ಬೇಕೇ ಬೇಕು. ಒಂದು ಐದು ನಿಮಿಷ ಕರೆಂಟ್ ಇಲ್ಲದಿದ್ದರೂ ನಾವು ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಲೇ ಇರುತ್ತೇವೆ. ಜನರೆಲ್ಲವೂ ಹೀಗೆ ಯಾವುದೇ ವಸ್ತುವಿನ ಮೇಲೆ ಅತಿಯಾಗಿ ಅವಲಂಬಿಸಿವುದು ಉತ್ತಮ ನಾಗರೀಕ ಸಮಾಜದ ಲಕ್ಷಣಗಳಲ್ಲ ಎಂದೇ ನಾನು ಭಾವಿಸುತ್ತೇನೆ. ಗಾಂಧೀಜಿಯವರೂ ಇದನ್ನೇ ಅಲ್ಲವೇ ಹೇಳಿದ್ದು? "ನಮ್ಮ ಹಳ್ಳಿಗಳು ಎಲ್ಲಿಯ ತನಕ ಸ್ವಾವಲಂಬಿಗಳಾಗುವುದಿಲ್ಲವೋ, ಅಲ್ಲಿಯ ತನಕ ನಮ್ಮ ದೇಶದ ಉದ್ಧಾರ ಸಾಧ್ಯವಿಲ್ಲ" ಎಂದು? ಬಹುಷಃ ನಮ್ಮೂರಿನ ವಿದ್ಯುತ್ ಇಲಾಖೆಗೂ ಗಾಂಧೀಜಿಯ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮೇಲಿನಿಂದ ನಿಯಮಾವಳಿ ಬಂದಿರಬೇಕು. ಇಂತ ಉತ್ತಮ ನಿಯಮಗಳನ್ನು ಪಾಲಿಸಿ, ಉಳಿದವರಿಗೆಲ್ಲ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟ ನಮ್ಮೂರಿನ ವಿದ್ಯುತ್ ಇಲಾಖೆಯನ್ನು ಜನರು ವಿನಾಕಾರಣ ನಿಂದಿಸುವುದು ನೋಡಿದರೆ ನನಗೆ ನಮ್ಮ ಜನರು ಗಾಂಧೀಜಿಯ ತತ್ವಗಳನ್ನು ಪಾಲಿಸುತ್ತಲೇ ಇಲ್ಲವೆಂಬುದನ್ನು ಮತ್ತೆ ಮತ್ತೆ ಖಾತ್ರಿಯಾಗುತ್ತದೆ.

"ದೀಪದ ಬುಡದಲ್ಲಿ ಕತ್ತಲೆ" ಎಂಬ ನಾಣ್ಣುಡಿಯನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ. ನಮ್ಮೂರನ್ನು ನೋಡಿದರೆ ನನಗೆ ಈ ಮಾತು ಅಕ್ಷರಶ ನಿಜವೆನ್ನಿಸುತ್ತದೆ. ನಮ್ಮೂರಿನ ಪಕ್ಕದಲ್ಲೇ ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್ ತಯಾರಿಸಿ ರಾಜ್ಯಕ್ಕೆಲ್ಲಾ ಹಂಚಲಾಗುತ್ತಿದೆ. ಇನ್ನು ಕಾಳಿ ನದಿಗೆ ಹಲವಾರು ಕಡೆ ಅಣೆಕಟ್ಟು ಕಟ್ಟಿ, ವಿದ್ಯುತ್ ತಯಾರಿಸುತ್ತಲೇ ಇದ್ದಾರೆ. ಇವೆಲ್ಲಾ ನಮ್ಮೂರಿಗೆ ಬಹಳ ಹತ್ತಿರವಿದ್ದುದರಿಂದಲೇ ನಮಗೆ ವಿದ್ಯುತ್ತನ್ನು ಕೊಡಲಾಗುತ್ತಿಲ್ಲ ಎಂದು ವಾದಿಸುವ ಅನೇಕ ನಿಷ್ಠುರವಾದಿಗಳ ಗುಂಪೊಂದು ನಮ್ಮೂರಿನಲ್ಲಿದೆ. ಅದಕ್ಕೆಂದೇ ಅವರು ತದಡಿಯಲ್ಲಿ ಸ್ತಾಪಿಸಲಾಗುತ್ತಿರುವ ಉಷ್ಣಸ್ಥಾವರದ ಬಗ್ಗೆ ಇಷ್ಟೊಂದು ಕಠಿಣ ನಿಲುವು ತಳೆದಿರುವುದು. ದೂರದ ಬಳ್ಳಾರಿಯಲ್ಲೋ, ಕೋಲಾರದಲ್ಲಿ ಇವನ್ನು ಸ್ಥಾಪಿಸಿದರೆ ನಮಗೂ ಕೊಂಚ ಉಪಯೋಗವಾಗಬಹುದು ಎಂಬ ದೂರಾಲೋಚನೆ ಈ ಗುಂಪಿನದು.

ಇವೆಲ್ಲ ಕಾರಣಗಳಿಗೇ ಇರಬೇಕು, ನಮ್ಮೂರ ಜನರು ಕರೆಂಟ್ ಇರುವುದರ ಬಗ್ಗೆ ಮತ್ತೆ ಇಲ್ಲದರ ಬಗ್ಗೆ ಅಷ್ಟೊಂದೇನೂ ತಲೆ ಕೆಡಿಸಿಕೊಂಡಿಲ್ಲ. ತಲೆಕೆಡಿಸಿಕೊಂಡರೂ ಸಹ ಮಾಡಬಹುದಾಗಿದ್ದು ಏನೂ ಇಲ್ಲ ಎಂಬುದು ಅವರಿಗೆ ಯಾವಾಗಲೋ ತಿಳಿದುಹೋಗಿದೆ. ನಮಗೆಲ್ಲರಿಗೂ "ಅಭಾವ ವೈರಾಗ್ಯ" ಕಾಡುತ್ತಿದೆ ಎಂದು ನೀವು ಅಂದುಕೊಂಡಿದ್ದರೆ ಖಂಡಿತವಾಗಿಯೂ ಅದು ನಿಮ್ಮ ತಪ್ಪು ಕಲ್ಪನೆ ಎಂದು ಈಗಲೇ ಸ್ಪಷ್ಟ ಪಡಿಸಿಬಿಡುತ್ತೇನೆ. ನಿಜ ಹೇಳಬೇಕೆಂದರೆ ಕರೆಂಟ್ ಇದ್ದರೆ ಮಾತ್ರ ನಮಗೆ ಸದಾ ಕಿರಿಕಿರಿಯಾಗುತ್ತಲೇ ಇರುತ್ತದೆ. ನಾವ್ಯಾವುದೋ ಕುತೂಹಲಕಾರಿಯಾದ ಕ್ರಿಕೆಟ್ ಮ್ಯಾಚ್ ನೋಡಬೇಕಾದರೆ ಇನ್ನೇನು ಲಾಸ್ಟ್ ಓವರ್ ಇದೆ ಅನ್ನುವಾಗ ಕರೆಂಟ್ ಹೋಗುತ್ತದೆಯೋ ಇಲ್ಲವೋ ಅಂತ ಹೇಳಲು ಯಾವುದೇ ಕಾಮನ್ ಸೆನ್ಸಿನ ಅಗತ್ಯವೇ ಇಲ್ಲ!. ಯಾವುದೋ ಹಾಡಿನ ಸ್ಪರ್ಧೆಯಲ್ಲಿ ನಮ್ಮೂರಿನ ಯಾವುದೋ ಹುಡುಗಿ ಹಾಡುತ್ತಿದ್ದಾಳೆ, ಅದನ್ನು ಮಾತ್ರ ಮಿಸ್ ಮಾಡಿಕೊಳ್ಳಬಾರದು ಅಂದುಕೊಂಡರೆ ಇನ್ನೇನು ಅವಳು ಹಾಡಲು ಶುರು ಮಾಡಬೇಕು, ನಾವು ಬಿಟ್ಟಬಾಯಿ ತೆರೆದುಕೊಂಡು ನೋಡಲು ಕಾಯುತ್ತಿರುತ್ತೇವೆ, ಪಕ್! ಎಂದು ಕರೆಂಟು ಮಾಯ. "೧೨.೩೦ಗೆ ಸವಿರುಚಿ ಕಾರ್ಯಕ್ರಮ ಇದ್ದು, ಇವತ್ತು ಅದೆಂತೋ ಅತ್ತೆ-ಸೊಸೆ ಸ್ಪೆಶಲ್ ಇದ್ದಡಾ", ಎಂದು ಅಮ್ಮ ಅಡುಗೆ ಕೆಲಸವನ್ನೆಲ್ಲ ಬೇಗ ಮುಗಿಸಿ ಟೀವಿ ಮುಂದೆ ಕುಳಿತಿದ್ದಾಳೆ, ಸರಿಯಾಗಿ ೧೨.೨೫ಕ್ಕೆ ಕರೆಂಟು ಹೋಗಿದ್ದು ಮತ್ತೆ ಬರುವುದು ೧೨.೫೫ಕ್ಕೆ. ಅಮ್ಮ ಗಡಿಬಿಡಿಯಲ್ಲಿ ಟೀವಿ ಸ್ವಿಚ್ ಹಾಕಿದರೆ, "ವೀಕ್ಷಕರೆ, ನಿಮಗಾಗಿ ಬಿಸಿಬಿಸಿ ತಿಂಡಿ ತಯಾರು" ಎಂದು ನಿರೂಪಕಿ ಉಲಿಯುತ್ತಿರುತ್ತಾಳೆ. "ಈ ಹಾಳು ಕರೆಂಟು ಈಗ್ಲೇ ಹೋಗಕ್ಕಾಯಿತ್ತ ಹಂಗರೆ?" ಎಂದು ಅಮ್ಮನಿಂದ ಕರೆಂಟಿನವರಿಗೆ ಸಹಸ್ರನಾಮಾವಳಿ ಮಾತ್ರ ತಪ್ಪುವುದಿಲ್ಲ.

ಇವೆಲ್ಲ ತೀರ ಕ್ಷುಲ್ಲಕ ವಿಷಯಗಳಾಯ್ತು. ಮನೆಗೆ ಯಾರೋ ಅಪರೂಪದ ನೆಂಟರು ಬರುತ್ತಿದ್ದಾರೆ ಎಂದು ಲೇಟಾಗಿ ಗೊತ್ತಾಗಿರುತ್ತದೆ. ಕರೆಂಟನ್ನೇ ನಂಬಿ ಏನೋ ಸ್ಪೆಷಲ್ ಮಾಡಬೇಕೆಂದು ಅಮ್ಮ ಅಂದುಕೊಂಡಿದ್ದರೆ, ಸರಿಯಾಗಿ ಇನ್ನೇನು ಮಿಕ್ಸಿ ಸ್ವಿಚ್ ಹಾಕಬೇಕು, ಕರೆಂಟು ಮಾಯ! ರುಬ್ಬುವುದಕ್ಕೆ ಅವಳು ಒರಳನ್ನೇ ನಂಬಬೇಕು, ಇಲ್ಲ ಸ್ಪೆಷಲ್ ಅಡುಗೆಯನ್ನೇ ಬಿಡಬೇಕು!. ಅಪ್ಪನಿಗೆ ಪೇಟೆಯಲ್ಲಿ ಬ್ಯಾಂಕಿನ ಕೆಲಸ ಲೇಟಾಗಿ ಜ್ನಾಪಕವಾಗಿದೆ. ಇನ್ನೇನು ಕಪಾಟು ತೆಗೆದು ಪಾಸ್ ಬುಕ್ ಹುಡುಕಬೇಕು, ಕರೆಂಟು ಮಾಯ! ಗಡಿಬಿಡಿಯಲ್ಲಿ ಟಾರ್ಚ್ ಅಪ್ಪನ ಕೈಗೇ ಸಿಗುತ್ತಿಲ್ಲ. ಎಲ್ಲಾ ಅಧ್ವಾನ!. ಆವಾಗ ನೋಡಬೇಕು ಒಬ್ಬೊಬ್ಬರನ್ನ, ಇನ್ನೇನು ಉಕ್ಕಲು ಸಿದ್ಧವಾಗಿರುವ ಜ್ವಾಲಾಮುಖಿಗಳು! ಮಧ್ಯೆ ನಾವೆಲ್ಲಾದರೂ ಸಿಕ್ಕಿಕೊಂಡೆವೋ ಮುಗೀತು ಕಥೆ.

ಕರೆಂಟ್ ಇಲ್ಲದೇ ಇದ್ದ ದಿನ ಮಾತ್ರ ನಾವೆಲ್ಲ ನಿರಾಳವಾಗಿರುತ್ತೇವೆ, ಬೆಳಿಗ್ಗೆ ಬೆಳಿಗ್ಗೆಯೇ ಕರೆಂಟು ಇಲ್ಲದಿದ್ದರೆ ಅಮ್ಮನ ಮುಖದಲ್ಲಿ ಏನೋ ಸಮಾಧಾನ. ಆರಾಮಾಗಿ ಅವಳ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾಳೆ, ಮಧ್ಯ ಕರೆಂಟ್ ಬಂದರೂ ಸಹ ಅವಳು ಅಷ್ಟೇನೂ ಎಕ್ಸೈಟ್ ಆಗುವುದಿಲ್ಲ. ಯಾಕೆಂದರೆ ಅವಳಿಗೆ ಗೊತ್ತು, ಸಧ್ಯದಲ್ಲೇ ಅದು ಮತ್ತೆ ಹೋಗಲಿದೆ ಎನ್ನುವುದು. ನನಗೆ ನಿಜವಾಗಿಯೂ ಆಶ್ಚರ್ಯವಾಗುವುದು ಕರೆಂಟ್ ಲೈನ್ ಮೆನ್ ಗಳ ಅದ್ಭುತ ಕಾರ್ಯವೈಖರಿಗೆ. ಅವರು ಹೇಗೆ ಇಷ್ಟು ಹೊತ್ತಿಗೆ ಈ ಏರಿಯಾದಲ್ಲಿ ಕರೆಂಟು ತೆಗೆಯಬೇಕೆಂದು ನಿರ್ಧಾರಿಸುತ್ತಾರೋ ಏನೋ? ನಾವೇನೋ ಮಹತ್ವವಾದ ಕೆಲಸ ಮಾಡುತ್ತಿರುವ ಸೂಚನೆ ಅವರಿಗೆ ಹೇಗೆ ತಿಳಿಯುತ್ತದೆಯೋ ಏನೋ? ಎಂಬ ಪ್ರಶ್ನೆ ನನ್ನಲ್ಲಿ ಆಗಾಗ ಉದ್ಭವವಾಗುತ್ತಾ ಇರುತ್ತದೆ. ಅದೂ ಒಂದೇ ಏರಿಯಾದಲ್ಲಿ ಎಷ್ಟೊಂದು ಲೈನುಗಳು!, ಊರಿನ ಒಂದು ಪಾರ್ಶ್ವಕ್ಕಿರುವ ಮನೆಗಳಿಗೆಲ್ಲಾ ಸಂಪಖಂಡ ಲೈನು, ಇನ್ನೊಂದು ಪಾರ್ಶ್ವಕ್ಕಿರುವ ಮನೆಗಳಿಗೆಲ್ಲಾ ಸಿದ್ದಾಪುರ ಲೈನು, ನೆರೆಮನೆಯವರದು ಮಾತ್ರ ಶಿರಸಿ ಪಟ್ಟಣದ ಲೈನು! ಒಂದು ಲೈನಿನಲಿ ಕರೆಂಟಿದ್ದರೆ ಇನ್ನೊಂದರಲ್ಲಿ ಇಲ್ಲ! ಇಲ್ಲಿ ಕರೆಂಟು ಬಂದರೆ ಅಲ್ಲಿ ಹೋಗುತ್ತದೆ. ಒಟ್ಟಿನಲ್ಲಿ "ಬೇರೆಯವರ ದುಃಖ ನಮ್ಮ ಸಂತೋಷ" ಅನ್ನುವುದು ಇದಕ್ಕೇ ಇರಬೇಕು. ಲೈನ್ ಮೆನ್ ಗಳು ಇಷ್ಟೆಲ್ಲಾ ಲೈನುಗಳ ಮಧ್ಯೆ ಆಟವಾಡುತ್ತಾ, ಅಲ್ಲಿ ತೆಗೆದು, ಇಲ್ಲಿ ಹಾಕಿ, ಈ ಲೈನಿನಲ್ಲಿ ಎಷ್ಟು ಸಲ ತೆಗೆದೆವು, ಎಷ್ಟು ಸಾರ್ತಿ ಕೊಟ್ಟೆವು? ಮತ್ತೆ ಯಾವಾಗ ತೆಗಿಯಬೇಕು? ಎಂದೆಲ್ಲಾ ಲೆಕ್ಕಾಚಾರ ಮಾಡಬೇಕು. ಇವೆಲ್ಲ ಏನು ಮಕ್ಕಳಾಟದ ಕೆಲಸಗಳೇ? ಇಷ್ಟೆಲ್ಲ ತಲೆ ಖರ್ಚು ಮಾಡಿಯೂ ಸಲ ಜನರ ಕೈಲಿ ಬೈಸಿಕೊಳ್ಳುವ ಅವರ ಬಗ್ಗೆ ನನಗೆ ನಿಜವಾದ ಸಂತಾಪವಿದೆ.

ಅಪರೂಪಕ್ಕೊಮ್ಮೆ ಇಡೀ ದಿನ ಕರೆಂಟಿದ್ದರೆ ಇನ್ನೂ ಕಿರಿಕಿರಿ. ನಾವೆಲ್ಲ ಕರೆಂಟು ಈಗ ಹೋಗಬಹುದು, ಆಗ ಹೋಗಬಹುದು ಎಂದು ಜಾತಕ ಪಕ್ಷಿಯಂತೆ ಕಾಯುತ್ತಲೇ ಇರುತ್ತೇವೆ. ಇದೊಂದು ವಿಚಿತ್ರವಾದ ಮಾನಸಿಕ ಹಿಂಸೆ. ಇವತ್ತು ಲೈನ್ ಮೆನ್ ಗಳಿಗೆ ರಜೆಯಿರಬೇಕೆಂದು ನಾವು ಮಾತಾಡಿಕೊಳ್ಳುತ್ತೇವೆ. ಇಲ್ಲದೇ ಹೋದರೆ ಇಡೀ ದಿನ ಕರೆಂಟಿರುವುದೆಂದರೆ ಏನು ತಮಾಷೆಯೆ? ಒಟ್ಟಿನಲ್ಲಿ ಲೈನ್ ಮೆನ್ ಗಳು ಅವರ ಕರ್ತವ್ಯವನ್ನು ಸರಿಯಾಗಿ ಮಾಡದಿದ್ದರೂ ನಮಗೆ ಕಿರಿಕಿರಿ ತಪ್ಪಿದ್ದಲ್ಲ.

ಒಟ್ಟಿನಲ್ಲಿ ಅದರ ಅಸ್ತಿತ್ವದಲ್ಲೂ, ಅಭಾವದಲ್ಲೂ, ಅಭಾವದ ಅಸ್ತಿತ್ವದಲ್ಲೂ ಇಷ್ಟೆಲ್ಲ ಮಾನಸಿಕ ತೊಂದರೆ, ಕಿರಿಕಿರಿ ಕೊಡುವ ಕರೆಂಟನ್ನು ನಾವು ಇಷ್ಟಪಡುವುದಾದರೂ ಹೇಗೆ? ನೀವೇ ಹೇಳಿ.