Wednesday, March 17, 2010

ಸಂದಿಗ್ಧ

ಹಾಸಿಗೆಗೆ ತಲೆ ಕೊಟ್ಟರೆ ಸಾಕು, ಒತ್ತರಿಸಿಕೊಂಡು ಬರುವಷ್ಟು ನಿದ್ದೆ. ಒಂದು ವಾರದಿಂದ ಆಫೀಸ್ ಕೆಲಸದ ಒತ್ತಡ, ಡೆಡ್ ಲೈನಿನ ಆತಂಕ ಎಲ್ಲಾ ಸೇರಿ ತಲೆ ಚಿಟ್ಟು ಹಿಡಿದು ಹೋಗಿತ್ತು. ಇವತ್ತು ಸ್ವಲ್ಪ ನಿರಾಳ. ಅದಕ್ಕೇ ಇಷ್ಟೊಂದು ನಿದ್ದೆ ಬರ್ತಾ ಇರಬೇಕು. ಇನ್ನೇನು ದಿಂಬಿಗೆ ತಲೆ ಕೊಡಬೇಕು, ಅಷ್ಟರಲ್ಲೇ ಮಗಳು ಒಂದು ನೋಟ್ ಬುಕ್ ಹಿಡಿದುಕೊಂಡು ಬಂದಳು. "ಅಪ್ಪಾ, ವಿವೇಕಾನಂದರ ಬಗ್ಗೆ ಒಂದು ಭಾಷಣ ಬರ್ದುಕೊಡು, ಪ್ಲೀಸ್. ನಾಡಿದ್ದು ನಮ್ಮ ಸ್ಕೂಲಲ್ಲಿ ಕಾಂಪಿಟೇಶನ್ ಇದೆ. ನಾನು ಹೆಸ್ರು ಕೊಟ್ಟಿದ್ದೀನಿ" ಅಂತ. ಅವಳಿಗೂ ನಿದ್ದೆ ಜೋರಾಗಿ ಬಂದಿದೆ ಅಂತ ಅವಳ ಕಣ್ಣುಗಳೇ ಹೇಳುತ್ತಿದ್ದವು. ಸಾಮಾನ್ಯವಾಗಿ ಒಂಬತ್ತೂವರೆಗೆಲ್ಲಾ ಮಲಗುವವಳು ಇವತ್ತು ನನಗಾಗಿ ಹತ್ತು ಘಂಟೆಯ ತನಕ ಕಾಯ್ದಿದ್ದಾಳೆ.

ನಾನು ತಕ್ಷಣಕ್ಕೆ ಏನೂ ಹೇಳಲಿಲ್ಲ. ಮನಸ್ಸೆಲ್ಲ ಖಾಲಿ ಖಾಲಿ. ನಾನು ಸುಮ್ಮನಿದ್ದುದನ್ನು ನೋಡಿ ಅವಳೇ ಶುರು ಮಾಡಿದಳು. "ಮೊನ್ನೆನೇ ಹೇಳಿದ್ರು ಸ್ಕೂಲಲ್ಲಿ. ಅಮ್ಮ ಹೇಳಿದ್ರು, ನೀನು ಚೆನ್ನಾಗಿ ಭಾಷಣ ಬರ್ದುಕೊಡ್ತೀಯಾ ಅಂತ. ಮೊನ್ನೆಯಿಂದ ನೀನು ಸಿಕ್ಕೇ ಇಲ್ಲಾ ನನಗೆ. ಅಮ್ಮಾ ನಂಗೆ ಪ್ರಾಮಿಸ್ ಮಾಡಿದ್ರು ನಿನ್ನೆನೇ ಬರೆಸಿ ಕೊಡ್ತಿನಿ ಅಂತ. ಇವತ್ತಾದ್ರೂ ರೆಡಿ ಆಗಿಲ್ಲ, ಏನು ಮಾಡ್ಲಿ ನಾನು?". ಅವಳ ಜೋಲು ಮೋರೆ ನೋಡಿ ನನಗೆ ತುಂಬಾ ಬೇಜಾರಾಯ್ತು. "ವಿವೇಕಾನಂದರ ಬಗ್ಗೆ ತುಂಬಾ ಗೊತ್ತು ನಿಂಗೆ ಅಂತ ಅಮ್ಮ ಹೇಳಿದ್ಳು. ಈಗ ಒಂದು ೧೦ ನಿಮಿಷದಲ್ಲಿ ಬರೆದು ಕೊಡಕ್ಕೆ ಆಗಲ್ವಾ?" ಒಂದು ಮುಗ್ಧ ಪ್ರಶ್ನೆ!. ನಾನು ನಿಟ್ಟುಸಿರು ಬಿಟ್ಟೆ. ಮಧ್ಯದಲ್ಲಿ ಇವಳದ್ದು ಸಂಧಾನ. "ಪುಟ್ಟಿ, ಅಪ್ಪಂಗೆ ತುಂಬಾ ಸುಸ್ತಾಗಿದೆ ಇವತ್ತು, ನಾಳೆ ಬರೆದುಕೊಟ್ರೆ ಆಗಲ್ವಾ?". "ನಾಳೆ ಬರೆದುಕೊಟ್ಟರೆ ನಾನು ಪ್ರಿಪೇರ್ ಆಗೋದು ಯಾವಾಗ?, ನಾಡಿದ್ದೇ ಕಾಂಪಿಟೇಶನ್ನು" ಅವಳ ಸಂದಿಗ್ಧ!. ಕೊನೆಗೆ ನಾನೇ ಸೂಚಿಸಿದೆ. "ಒಂದು ಕೆಲ್ಸ ಮಾಡೋಣ ಪುಟ್ಟೀ, ನಾಳೆ ಬೆಳಿಗ್ಗೆ ಬೇಗ ಎದ್ದು ಬರೆದುಕೊಡ್ತೀನಿ ಆಯ್ತಾ? ನಾಳೆನೆಲ್ಲಾ ನೀನು ಪ್ರಿಪೇರ್ ಆಗಬಹುದು." ಈಗ ಸ್ವಲ್ಪ ಗೆಲುವಾಯ್ತು ಅವಳ ಮುಖ. "ಮರೀಬೇಡಿ ಅಪ್ಪಾ ಬೆಳಿಗ್ಗೆ, ಗುಡ್ ನೈಟ್" ಅಂತ ವಾಪಾಸ್ ಹೋದಳು.

"ನೀನ್ಯಾಕೆ ಮುಂಚೆನೇ ಹೇಳ್ಲಿಲ್ಲ ನಂಗೆ?" ನಾನು ಹೆಂಡತಿಯ ಮೇಲೆ ರೇಗಿದೆ. "ಸುಮ್ನೆ ನನ್ನ ಮೇಲೆ ಕೂಗ್ಬೇಡಿ ನೀವು. ನಿಮಗೆಲ್ಲಿ ಟೈಮ್ ಇತ್ತು? ದಿನಾ ರಾತ್ರಿ ಎಷ್ಟು ಗಂಟೆಗೆ ಬರ್ತಿದೀರಾ ಅಂತ ಗೊತ್ತು ತಾನೇ ನಿಮಗೆ? ನಿಮಗಿರೋ ಟೆನ್ಷನ್ನಲ್ಲಿ ಇದೊಂದು ಬೇರೆ ಕೇಡು ಅಂತ ಹೇಳ್ಲಿಲ್ಲ ನಾನು." ಅವಳಿಗೂ ರೇಗಿರಬೇಕು. ಸುಮ್ಮನೆ ಹಾಸಿಗೆ ಮೇಲೆ ಬಿದ್ದುಕೊಂಡೆ. ಒಂತರಾ ಅಸಹಾಯಕತನ, ಬೇಜಾರು, ದುಃಖ ಎಲ್ಲವೂ ಆವರಿಸಿಕೊಂಡಿತು ನನ್ನನ್ನು. ನಿದ್ದೆ ಸಂಪೂರ್ಣವಾಗಿ ಹಾರಿಹೋಗಿತ್ತು. ಮಗಳಿಗಾಗಿ ದಿನಕ್ಕೆ ಒಂದು ಅರ್ಧ ತಾಸಾದರೂ ಮೀಸಲಿಡಲು ನನಗೇಕೆ ಸಾಧ್ಯವಾಗುತ್ತಿಲ್ಲ? ಇತ್ತೀಚೆಗಂತೂ ಆಫೀಸಿಗೆ ಹೋದ ಮೇಲೆ ಮನೆ ಕಡೆ, ಮನೆಯವರ ಕಡೆ ಒಂಚೂರೂ ಗಮನ ಕೊಡಲೇ ಆಗುತ್ತಿಲ್ಲ, ಅಷ್ಟೆಲ್ಲ ಒತ್ತಡ. ನಿಜಕ್ಕೂ ಇಷ್ಟೆಲ್ಲಾ ಒತ್ತಡದಲ್ಲಿ ಕೆಲಸ ಮಾಡಲೇ ಬೇಕಾ? ಅಥವಾ ವಿನಾಕಾರಣ ನಾನೇ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇನಾ? ಒಂದೂ ತಿಳಿಯುತ್ತಿಲ್ಲ. "ನೀನು ಕೆಲಸ ಮತ್ತು ಸಂಸಾರ ಎರಡನ್ನೂ ನಿಭಾಯಿಸುವುದರಲ್ಲಿ ಸೋತಿದ್ದೀಯಾ" ಎಂದು ಮನಸ್ಸು ಪದೇಪದೇ ಹೇಳಲು ಶುರುಮಾಡಿತು. ಸುಮ್ಮನೆ ತಲೆಕೊಡವಿದೆ.

ಹಾಸಿಗೆಯ ಮೇಲೆ ಬಿದ್ದುಕೊಂಡೇ ಯೋಚಿಸಲು ಶುರುಮಾಡಿದೆ. ಮನಸ್ಸು ಬೇಡವೆಂದರೂ ಹಿಂದೆ ಓಡಿತು. ನಾವು ಚಿಕ್ಕವರಿದ್ದಾಗ ಪ್ರತೀ ಸಲ ಸ್ವಾತಂತ್ರೋತ್ಸವಕ್ಕೂ, ಗಣರಾಜ್ಯ ದಿನದಂದೂ ಅಪ್ಪ ತಪ್ಪದೇ ಭಾಷಣ ಬರೆದುಕೊಡುತ್ತಿದ್ದರು. ಅದನ್ನು ಬಾಯಿಪಾಠ ಮಾಡಿಕೊಂಡು ಹೋಗಿ ನಾವು ಶಾಲೆಯಲ್ಲಿ ಹೇಳುತ್ತಿದ್ದೆವು. ಹೈಸ್ಕೂಲ್ ಗೆ ಬಂದ ಮೇಲೆ ಪ್ರತೀ ವರ್ಷವೂ ಮಾರಿಗುಡಿಯಲ್ಲಿ ಆಗುವ ನವರಾತ್ರಿ ಸ್ಪರ್ಧೆಯಲ್ಲಿ ಖಾಯಂ ಆಗಿ ಅಪ್ಪ ಬರೆದುಕೊಟ್ಟ ಪ್ರಬಂಧವನ್ನು ಬರೆದು ನಾನು ಪ್ರೈಜ್ ಗೆದ್ದಿದ್ದೆ. ಸ್ಕೂಲ್ ಮತ್ತು ಹೈಸ್ಕೂಲಿನಲ್ಲಿ ಆಗುವ ಯಾವುದೇ ತರಹದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅಪ್ಪ ನಮ್ಮನ್ನು ಯಾವಾಗಲೂ ಹುರಿದುಂಬಿಸುತ್ತಿದ್ದರು, ಅಲ್ಲದೇ ತಾವು ಜೊತೆಗೆ ಕುಳಿತು ಸಹಾಯಮಾಡುತ್ತಿದ್ದರು. ಅವರೂ ಶಾಲಾ ಶಿಕ್ಷಕರಾಗಿದ್ದುದು ಇವಕ್ಕೆಲ್ಲ ಮೂಲ ಪ್ರೇರಣೆಯಾಗಿದ್ದಿರಬೇಕು, ಆದರೆ ಈಗ ಯೋಚಿಸಿದರೆ ಅವರ ಶೃದ್ಧೆ ಮತ್ತು ಉತ್ಸಾಹ ಬೆರಗು ಹುಟ್ಟಿಸುವಷ್ಟು ಅಸಾಧಾರಣವಾಗಿತ್ತು. ಪ್ರತೀ ವರ್ಷ ನಡೆಯುವ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅವರು "ನೂಕ್ಲಿಯರ್ ರಿಯಾಕ್ಟರ್’ ಅಥವಾ ’ಗೋಬರ್ ಗ್ಯಾಸ್" ಮಾಡೆಲ್ ಮಾಡಿಕೊಡುವಾಗ ತೆಗೆದುಕೊಂಡ ಶ್ರಮ, ಉತ್ಸಾಹ, ಅಲ್ಲದೆ ಅವು ಹೇಗೆ ಕೆಲಸಮಾಡುತ್ತವೆ ಎಂಬುದರ ವಿವರಣೆ ಇಂದಿಗೂ ನನ್ನ ಕಣ್ಣ ಮುಂದಿದೆ. ಅವಕ್ಕೆಲ್ಲ ಪ್ರಥಮ ಸ್ಥಾನ ಬಂದಾಗ ನನಗಾದ ಸಂತೋಷ, ಮಾತುಗಳಲ್ಲಿ ಹಿಡಿಸಲಾರದಷ್ಟು!. ದಿನಪತ್ರಿಕೆಗಳಲ್ಲಿ ಬರುವ ಪದಬಂಧವನ್ನು ಬಿಡಿಸುವಾಗಲೆಲ್ಲ ಅವರು ನನ್ನನ್ನು ಕರೆದು ಹತ್ತಿರ ಕುರಿಸಿಕೊಳ್ಳುತ್ತಿದ್ದರು. ಅಲ್ಲದೆ ಆ ಶಬ್ದಗಳು ಹೇಗೆ ಉದ್ಭವವಾದವು ಎಂಬುದನ್ನೂ ವಿವರಿಸುತ್ತಿದ್ದರು. ಅವರ ಶಾಲಾ ಲೈಬ್ರರಿಯಿಂದ ಹಲವಾರು ಒಳ್ಳೆಯ ಕನ್ನಡ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ನಮ್ಮ ರಜಾಕಾಲದ ಬಹುಪಾಲನ್ನು ನಾವು ಅವನ್ನು ಓದಿಕಳೆಯುತ್ತಿದ್ದೆವು. ಹೀಗೆ ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲವನ್ನೂ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು.

ಹಾಗಾದರೆ ನಮ್ಮ ಪಾಲಕರು ನಮಗೆ ಮೀಸಲಿಟ್ಟಷ್ಟು "ಕ್ವಾಲಿಟಿ ಟೈಮ್", ನಾವು ನಮ್ಮ ಮಕ್ಕಳಿಗೆ ಕೊಡುವುದು ಅಷ್ಟು ಕಷ್ಟವೇ? ನಾವೇ ಸೃಷ್ಟಿಸಿಕೊಂಡ ಅಥವಾ ನಮ್ಮ ಕೆಲಸದ ರೀತಿಯ ಮಾನಸಿಕ ಒತ್ತಡ, ರಸ್ತೆ ಟ್ರಾಫಿಕ್ಕಲ್ಲೇ ದಿನಕ್ಕೆ ಮೂರು ನಾಲ್ಕು ತಾಸು ಕಳೆಯುವ ಅನಿವಾರ್ಯತೆ, ನಮ್ಮಲ್ಲಿರುವ ಆಸಕ್ತಿ ಅಥವಾ ಶೃದ್ಧೆಯ ಕೊರತೆ ಇವೆಲ್ಲವೂ ಇದಕ್ಕೆ ಕಾರಣವಿರಬಹುದಾ?. ಕಾರಣ ಯಾವುದೇ ಇರಬಹುದು, ಆದರೆ ತಲೆಮಾರಿನಿಂದ ತಲೆಮಾರಿಗೆ ಹೀಗೆ ಅಭಿರುಚಿಗಳು ಮತ್ತು ಆಸಕ್ತಿಗಳು ಸೋರಿಹೋಗುತ್ತಾ ಇದ್ದರೆ ಮುಂದೆ ಜೀವನ ಬರೀ ಯಾಂತ್ರಿಕವಾಗುವುದಿಲ್ಲವೆ? ಯಾವಾಗ ಕೇಳಿದರೂ ’ನಂಗೆ ಈಗ ಟೈಮ್ ಇಲ್ಲ, ಬೇರೆ ಕೆಲಸಗಳಿವೆ" ಅನ್ನೋ ರೆಡಿಮೇಡ್ ಉತ್ತರವನ್ನು ಮನಸ್ಸು ಸದಾ ಕೊಡುತ್ತಲೇ ಇರುತ್ತದೆ. "ಸಂಗೀತವನ್ನು ಸೀರಿಯಸ್ಸಾಗಿ ಕಲೀಬೇಕು" ಅಂತ ೮ ತಿಂಗಳ ಹಿಂದೆ ಅನ್ಕೊಂಡಿದ್ದೆ. "ಸಿಗೋದೊಂದು ರವಿವಾರ,ಅವತ್ತೂ ಪ್ರಾಕ್ಟೀಸ್ ಮಾಡ್ತಾ ಕುಳಿತರೆ ಅಷ್ಟೇ" ಅಂತ ಮನಸ್ಸು ಕಾರಣ ಹೇಳಿತು. ಅಲ್ಲಿಗೆ ಅದರ ಕಥೆ ಮುಗೀತು. "ಹೊಸ ಮನೆಗೆ ಒಂದು ಚೆಂದನೆಯ ಪೇಂಟಿಂಗ್ ಬಿಡಿಸಿ ಹಾಲ್ ನಲ್ಲೇ ತೂಗುಹಾಕಬೇಕು" ಅಂತ ಪೇಪರ್,ಹೊಸ ಬಣ್ಣ ಎಲ್ಲಾ ತಂದಿದಾಯ್ತು, "ಸಿಕ್ಕಾಪಟ್ಟೆ ಸಣ್ಣ ಹಿಡಿದು ಮಾಡೋ ಕೆಲಸ ಈ ಚಿತ್ರ ಬರೆದು ಪೇಂಟಿಂಗು ಮಾಡೋದು, ಮುಂದಿನ ವಾರ ಟೈಮ್ ಮಾಡ್ಕೊಂಡು ಮಾಡಕ್ಕಾಗಲ್ವಾ?" ಅಂತ ಅಂದುಕೊಂಡಿದ್ದೇ ಸರಿ, ಆ ಮುಂದಿನವಾರ ಬಂದೇ ಇಲ್ಲ! ಯಾವುದೇ ಒಂದು ಅತೀ ತಾಳ್ಮೆ ಮತ್ತು ಶ್ರದ್ಧೆ ಬೇಡುವ ಕೆಲಸವನ್ನು ಸರಿಯಾಗಿ ಮಾಡಿದ್ದೇ ದಾಖಲೆಯಿಲ್ಲ. ಬರೀ ಸಮಯದ ಅಭಾವ ಇದಕ್ಕೆಲ್ಲ ಕಾರಣವಾಗಿರಬಹುದಾ? "ಹೌದು" ಅನ್ನಲು ಮನಸ್ಸು ಯಾಕೋ ಒಪ್ತಾ ಇಲ್ಲ! ಉತ್ತರ ಎಲ್ಲೋ ನನ್ನಲ್ಲೇ ಇದೆ. ಒಂಥರಾ ಎಲ್ಲವನ್ನೂ ಓದಿದ್ದೂ, ಪರೀಕ್ಷೆಯಲ್ಲಿ ಏನೂ ಬರೆಯಲಿಕ್ಕಾಗದ ವಿದ್ಯಾರ್ಥಿಯ ಪರಿಸ್ಥಿತಿಯಂತೆ ಮನಸು ವಿಲವಿಲ ಒದ್ದಾಡಿತು.

ಈಗಿನ ಮಕ್ಕಳದಂತೂ ವಯಸ್ಸಿಗೆ ಮೀರಿದ ಮಾತು, ವರ್ತನೆ. ನಮ್ಮ ಅಪ್ಪ ಅಮ್ಮಂದಿರಿಗೆ ಹೀಗೆಲ್ಲ ಅನ್ನಿಸಿದ್ದು ನನಗೆ ಅನುಮಾನ. ಅವರ ಗ್ರಹಿಕಾ ಸಾಮರ್ಥ್ಯ ಕೂಡಾ ಜಾಸ್ತಿ. ಟೀವಿಯಲ್ಲಿ ಬರೋ ಕಾರ್ಯಕ್ರಮಗಳನ್ನು ನೋಡಿದ್ರೆ ಗೊತ್ತಾಗಲ್ವೆ? ಎಷ್ಟು ಬೇಗ ಹೇಳಿ ಕೊಟ್ಟಿದ್ದನೆಲ್ಲ ಕಲಿತುಬಿಡ್ತಾರೆ? ನಾಲ್ಕು ಜನರ ಎದುರು ನಿಂತು ಮಾತನಾಡುವುದಕ್ಕೂ, ಹಾಡುವುದಕ್ಕೂ ಒಂಚೂರು ಭಯವಿಲ್ಲ!. ಐದನೇತ್ತಿಯಲ್ಲಿದ್ದಾಗ ಅಪ್ಪ ಹೇಳಿಕೊಟ್ಟಿದ್ದ "ಸಾರೇ ಜಹಾಂಸೆ ಅಚ್ಛಾ"ವನ್ನು ಹಾಡನ್ನು ಯಾವುದೋ ಸ್ಪರ್ಧೆಯಲ್ಲಿ ಹಾಡಿ ಮುಗಿಸೋವಷ್ಟರಲ್ಲಿ ನಾನು ಬೆವೆತುಹೋಗಿದ್ದೆ. ಅದೂ ಕೊನೆ ಸಾಲನ್ನು ಮರೆತು ಹೇಗೋ ತಪ್ಪು ತಪ್ಪು ಹಾಡಿ ಅಪ್ಪನ ಹತ್ತಿರ ಬೈಸಿಕೊಂಡಿದ್ದೆ. ಈಗಿನ ಮಕ್ಕಳಿಗೆ ಸಿಗುತ್ತಿರುವ ಸವಲತ್ತು, ಅವಕಾಶ, ಅಪ್ಪ ಅಮ್ಮಂದಿರ ಪ್ರೋತ್ಸಾಹ ಎಲ್ಲ ಕಾರಣವಿರಬಹುದು, ಆದರೆ ಅವರ ಸಾಮರ್ಥ್ಯವನ್ನಂತೂ ಕಡೆಗಣಿಸುವ ಮಾತೇ ಇಲ್ಲ. ಬಹುಷಃ ಇದೂ ನನ್ನ ಆತಂಕಕ್ಕೂ ಒಂದು ಕಾರಣವಿರಬೇಕು. ಅವರ ಬೌದ್ಧಿಕ ಸಾಮರ್ಥ್ಯವನ್ನು ನಾವು ಸರಿಯಾದ ದಾರಿಯಲ್ಲಿ ತೊಡಗಿಸಿ ಮಾರ್ಗದರ್ಶನ ನೀಡುತ್ತಿದ್ದೇವೆಯಾ ಅನ್ನುವುದು. ಆ ಕೆಲಸವನ್ನು ಅಪ್ಪ ಎಷ್ಟು ಚೆನ್ನಾಗಿ ನಿರ್ವಹಿಸಿದ್ದರು ಅನ್ನುವುದನ್ನು ಈಗ ಯೋಚಿಸಿದರೆ ಅವರ ಬಗ್ಗೆ ಹೆಮ್ಮೆಯನಿಸುತ್ತದೆ. ಆದರೂ ಎಷ್ಟೋ ಸಲ ನಾವು ಅವರನ್ನು ನಿರಾಸೆಗೊಳಿಸಿದ್ದುಂಟು. "ತಬಲಾ ಸಾಥ್ ಕೊಡುವಷ್ಟಾದರೂ ತಬಲಾ ಕಲಿ" ಅಂದು ಅವರು ಎಷ್ಟು ಸಲ ಹೇಳಿದ್ದರೋ ಏನೋ? ಆವಾಗ ಅದು ತಲೆಯೊಳಗೆ ಇಳಿಯಲೇ ಇಲ್ಲ. ಈಗ ಅದರ ಬಗ್ಗೆ ಪಶ್ಚಾತಾಪವಿದೆ. "ನಾನು ಸರಿಯಾಗಿ ಸಾಧಿಸಲಾಗದಿದ್ದನ್ನು ಮಕ್ಕಳು ಕಲಿತು ಸಾಧಿಸಲಿ" ಅನ್ನುವ ಆಸೆ ಎಲ್ಲ ಪಾಲಕರಿಗೂ ಇರುತ್ತದೆಯಲ್ಲವೆ? ನಾಲ್ಕು ಜನರ ಮುಂದೆ ಅದರ ಬಗ್ಗೆ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿದ್ದ ಬೇಸರ, ಹತಾಶೆ ಆಗ ಗೊತ್ತಾಗುತ್ತಿರಲಿಲ್ಲ. ಈಗ ಅದರ ಅರಿವಾಗುತ್ತಿದೆ. "ಇವನ ಹತ್ತಿರ ಈಗ ಮೂರು ದಿನ ಕೇಳುವಷ್ಟು ಸಂಗೀತದ ಕಲೆಕ್ಷನ್ ಇದೆ" ಎಂದು ಈಗ ಅಪ್ಪ ಹೆಮ್ಮೆಯಿಂದ ಬೀಗುವಾಗ ಅವರ ಕಣ್ಣಲ್ಲಿನ ಹೊಳಪು ಖುಶಿ ಕೊಡುತ್ತದೆ. ಯಾವುದೋ ಅತೀ ಕ್ಲಿಷ್ಟವಾದ ರಾಗವನ್ನು ಅಪ್ಪನಿಗೆ ಕೇಳಿಸಿ, ಇದು ಹೀಗೆ ಎಂದು ವಿವರಿಸುವಾಗ ಅಪ್ಪನಿಗಾಗುವ ಸಂತೋಷ ಅವನು ಮಾತನಾಡದೆಯೂ ಗೊತ್ತಾಗುತ್ತದೆ. ಮಕ್ಕಳು ನಮ್ಮ ಆಸೆಗೆ ತಕ್ಕುದಾಗಿ ವಿಶಿಷ್ಟವಾದುದನ್ನು ಸಾಧಿಸಿದಾಗ ಆಗುವ ಸಂತಸದ ಮಹತ್ವ ಈಗ ನನಗೆ ಯಾರೂ ಹೇಳಿಕೊಡದೇ ಅರ್ಥವಾಗುತ್ತದೆ.

ಎಲ್ಲಿಂದೋ ಶುರುವಾದ ಯೋಚನೆಗಳು ಎಲ್ಲಿಗೋ ಕರೆದುಕೊಂಡು ಹೋದವು. ಎಷ್ಟೋ ಗೊಂದಲಗಳಿದ್ದರೂ ಮನಸ್ಸು ಒಂದು ತಹಬದಿಗೆ ಬಂದ ಹಾಗೆ ಅನ್ನಿಸಿತು. "ನಿನ್ನ ಆತಂಕ ಅತ್ಯಂತ ಸಹಜ, ಅತಿಯಾಗಿ ಯೋಚಿಸುವುದನ್ನು ಬಿಡು, ಬರೀ ನೆಗೆಟಿವ್ ಆಗಿ ಯೋಚನೆ ಮಾಡುತ್ತಿದ್ದೀಯಾ" ಎಂದು ಮನಸ್ಸು ಎಚ್ಚರಿಸಲು ಶುರು ಮಾಡಿತು. ಬಹುಷಃ ನಾನು ಸುಮ್ಮನೆ ಆತಂಕಪಡುತ್ತಿದ್ದೇನೆ ಅನ್ನಿಸಿತು. ಎಲ್ಲ ಪಾಲಕರೂ ಈ ಸನ್ನಿವೇಶವನ್ನು ದಾಟಿಯೇ ಮುಂದೆ ಬಂದಿರುತ್ತಾರೆ. ನನ್ನ ಅಪ್ಪನಿಗೂ ಹೀಗೆ ಅನ್ನಿಸಿರಬಹುದು. "ಯೋಚನೆ ಮಾಡುವುದನ್ನು ಬಿಡು, ಯೋಚನೆಗಳನ್ನು ಕಾರ್ಯರೂಪಕ್ಕೆ ತಾ" ಎಂದು ಮನಸು ಹೇಳತೊಡಗಿತು. ನಿಜ, ಅಪ್ಪ ಹೇಳಿಕೊಟ್ಟ ರೀತಿಗಳು ನನಗೆ ಪಾಠವಾಗಬೇಕು. ಎಷ್ಟೋ ಸಲ ಹಾಗಾಗಿರುತ್ತದೆ. ನಾವು ಯಾರ್ಯಾರನ್ನೋ ನಮ್ಮ "ರೋಲ್ ಮಾಡೆಲ್" ಆಗಿ ಇಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಹತ್ತಿರವೇ ಇರುವ ನಮ್ಮವರ ಮಹತ್ವ ಗೊತ್ತಾಗುವುದೇ ಇಲ್ಲ. ನಮ್ಮ ಅಪ್ಪ, ಅಮ್ಮ, ಅಕ್ಕ, ತಮ್ಮಂದಿರಿಂದಲೇ ಕಲಿಯುವುದೇ ಬೇಕಾದಷ್ಟಿರುತ್ತವೆ. " ಅಂಗೈನಲ್ಲೇಬೆಣ್ಣೆ ಇಟ್ಟುಕೊಂಡು ಊರಲ್ಲೆಲ್ಲ ತುಪ್ಪ ಹುಡುಕಿದ ಹಾಗೆ" ನಾವು ಎಲ್ಲೋ ಸ್ಪೂರ್ತಿಗಾಗಿ ಹುಡುಕುತ್ತಲೇ ಇರುತ್ತವೆ. ಇಲ್ಲ, ಇನ್ನು ಮೇಲೆ ಎಷ್ಟು ಕಷ್ಟವಾದರೂ ಒಂದಷ್ಟು ಸಮಯವನ್ನು ಮಗಳಿಗಾಗಿಯೇ ಮೀಸಲಿಡುತ್ತೇನೆ ಎಂದು ಧೃಢ ನಿರ್ಧಾರ ಮಾಡಿಕೊಂಡೆ.

ರಾತ್ರಿಯ ನೀರವವನ್ನು ಭೇದಿಸಿ ಒಂದೇ ಸಮನೆ ಮೊಬೈಲು ಕಿರ್ರನೆ ಕೀರಿ ನನ್ನ ಯೋಚನಾ ಸರಣಿಯನ್ನು ನಿಲ್ಲಿಸಿತು. ಹೆಂಡತಿ ಅಸ್ಪಷ್ಟವಾಗಿ ಗೊಣಗಿದ್ದು ಕೇಳಿತು. ಈ ರಾತ್ರಿಯಲ್ಲಿ ಯಾರಪ್ಪಾ ಫೋನ್ ಮಾಡಿದವರು ಅಂತ ಕುತೂಹಲದಲ್ಲಿ ನೋಡಿದರೆ ಸಂದೀಪ್, ನನ್ನ ಪ್ರಾಜೆಕ್ಟ ಮ್ಯಾನೇಜರು. ಮನಸ್ಸು ಏನೋ ಕೆಟ್ಟದನ್ನು ಊಹಿಸಿತು. ಈ ಮಧ್ಯರಾತ್ರಿ ಮ್ಯಾನೇಜರಿನಿಂದ ಫೋನ್ ಬರುವುದೆಂದರೆ ಒಳ್ಳೆ ಸುದ್ದಿಯಾಗಿರಲು ಸಾಧ್ಯವೇ? ಆಚೆಕಡೆಯಿಂದ ಸ್ವಲ್ಪ ಕಂಗಾಲಾದ ಧ್ವನಿ. ಏನೋ "ರಿಲೀಸ್ ಸ್ಟಾಪರ್" ಅಂತೆ, ತುಂಬಾ ಅರ್ಜೆಂಟ್ ಪ್ರಾಬ್ಲಮ್ಮು, ಬೆಳಿಗ್ಗೆ ಏಳು ಗಂಟೆಗೆ ಕಸ್ಟಮರ್ ಕಾಲ್ ಇದೆ. ಆರು-ಆರುವರೆಗೆ ಆಫೀಸ್ ಗೆ ಬರಲು ಬುಲಾವ್. ಏನೋ ಡಿಸ್ಕಸ್ ಮಾಡಬೇಕಂತೆ. ಸರಿ ಅಂತ ಫೋನ್ ಇಟ್ಟೆ. "ಬರ್ತೀನಿ, ಬರ್ತೀನಿ" ಅಂತ ಹೆದರಿಸುತ್ತಾ ಇದ್ದ ನಿದ್ರೆ ಈಗ ಸಂಪೂರ್ಣವಾಗಿ ಹೊರಟು ಹೋಯ್ತು. ಹಾಸಿಗೆಯಲ್ಲಿ ಸುಮ್ಮನೇ ಹೊರಳಾಡಲು ಮನಸ್ಸಾಗಲಿಲ್ಲ. ಎದ್ದು ಮುಖ ತೊಳೆದುಕೊಂಡು ಹಾಲ್ ಗೆ ಬಂದು ಕೂತೆ. ತಕ್ಷಣ ಪುಟ್ಟಿಯ ಭಾಷಣ ನೆನಪಾಯ್ತು. ಒಂದು ಬಿಳಿ ಹಾಳೆ ತೆಗೆದುಕೊಂಡು ಬರೆಯಲು ಶುರು ಮಾಡಿದೆ. ವಿವೇಕಾನಂದರ "ನಾಡಿಗೆ ಕರೆ" ಪುಸ್ತಕ ನೆನಪಾಯ್ತು. ಎಂಥಹ ಧೀಮಂತ ವ್ಯಕ್ತಿತ್ವ? "ಏಳಿ..ಏದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ" ಅವರದ್ದೇ ಮಾತುಗಳು. ಬಹುಷಃ ನನಗೇ ಹೇಳಿದ್ದಿರಬೇಕು. ಮೈಮೇಲೆ ಏನೋ ಆವೇಶ ಬಂದವರ ಹಾಗೆ ಬರೆಯುತ್ತಲೇ ಹೋದೆ.

5 comments:

ತೇಜಸ್ವಿನಿ ಹೆಗಡೆ said...

ಭವಿಷ್ಯತ್ತಿನ ಸಂದಿಗ್ಧತೆಯನ್ನು ತುಂಬಾ ಚೆನ್ನಾಗಿ ತಿಳಿಸಿದ್ದೀಯ. ಇದು ಇಂದಿನ ಹಾಗೂ ಮುಂದಿನ ಬಹುತೇಕ ಹೆತ್ತವರ ಮಾನಸಿಕ ತುಮುಲಕ್ಕೆ ಕನ್ನಡಿ ಹಿಡಿವಂತಿದೆ. ಹಿಂದೆಯೂ ಹೆತ್ತವರಿಗೆ ಬೇರೆ ರೀತಿಯ ಸಂದಿಗ್ಧತೆ ಇತ್ತು. ಒತ್ತಡಗಳಿದ್ದವು. ಆದರೆ ಕಾಲಕ್ಕೆ ತಕ್ಕಂತೇ ಅವು ರೂಪಾಂತರಗೊಂಡಿವೆ/ಗೊಳ್ಳುತ್ತವೆ ಅಷ್ಟೇ. ಸಮಸ್ಯೆಗಳು ಬರುತ್ತಲೇ ಇರುತ್ತವೆ. ಅದಕ್ಕೆ ಅಂಜಿ ಓಡಬಾರದು, ಹತಾಶಗೊಳ್ಳಬಾರದು. ಎದುರಿಸಿ ಛಲದಿಂದ ಬೇಧಿಸಿ ನಡೆದರೆ ಎಲ್ಲವೂ ಸರಳ ಸುಗಮವಾಗುವುದು. ವಿವೇಕಾನಂದರ ಆ ಮಾತುಗಳು ಎಂತಹ ಜಡ ಮನುಜನನ್ನೂ ಹೊಡೆದೆಬ್ಬಿಸುವಂತಿವೆ.

ಉತ್ತಮ ಲೇಖನ. ಚೆನ್ನಾಗಿದೆ. ಅಂದ ಹಾಗೆ ಮಗಳ ಸ್ಪರ್ಧೆ ಹೇಗಾಯಿತು? ಆರೋಗ್ಯಕರ ಸ್ಪರ್ಧಾ ಮನೋಭಾವ ಒಳ್ಳೆಯದು, ಗೆಲುವು ನಂಬರಿಗೆ ಮಾತ್ರ ಸೀಮಿತವಲ್ಲ ಎನ್ನುವುದನ್ನೂ ಅವಳಿಗೆ ಮನಗಾಣಿಸಿಬಿಡು ಮತ್ತೆ. :) :-p

sunaath said...

ಮಧು,
ನೀವು ಬರೆದದ್ದು ರಿಹರ್ಸಲ್ ಅನ್ಕೋತೀನಿ.

ಸಾಗರದಾಚೆಯ ಇಂಚರ said...

ಭವಿಷ್ಯದ ಬಗೆಗೆ ತುಂಬಾ ಚೆನ್ನಾಗಿ ಹೇಳಿದ್ದಿರಿ
ನಿಮ್ಮ ಶೈಲಿ ಇಷ್ಟವಾಯಿತು

ವಿ.ರಾ.ಹೆ. said...

ಇಷ್ಟವಾಯಿತು. ಸರಳವಾಗಿ ಹೇಳಬೇಕಾದ್ದನ್ನು ಹೇಳುತ್ತಿದೆ ಕತೆ.

Harisha - ಹರೀಶ said...

ಸೂಪರ್.. ಭೂತ-ವರ್ತಮಾನಗಳ comparison ಸಖತ್ತಾಗಿದೆ..