Thursday, July 23, 2009

ರಾಖಿ ಸ್ವಯಂವರ

ನಾಣಿ ಆಫೀಸಿಗೆ ಬಂದಾಗಿನಿಂದ ಯಾಕೋ ಬಹಳ ಬೇಜಾರಲ್ಲಿ ಇದ್ದ ಹಾಗೆ ಕಾಣಿಸ್ತು. ೧೦ ಗಂಟೆ ಕಾಫಿಗೆ ಹೋದಾಗ ಸುಮ್ಮನೆ ಅವನನ್ನು ಮಾತಿಗೆಳೆದೆ. "ಯಾಕೋ ನಾಣಿ ಒಂತರಾ ಇದ್ದೀಯಾ?" ಅಂತ ಕೇಳಿದ್ದಕ್ಕೇ ಅವನಿಗೆ ತನ್ನ ದುಃಖವನ್ನು ತೋಡಿಕೊಳ್ಳಲು ಯಾರೋ ಇದ್ದಾರೆ ಅನ್ನಿಸಿತೋ ಏನೋ, ಸಣ್ಣ ಮುಖ ಮಾಡಿಕೊಂಡು "ನಿನ್ನೆ ರಾಖಿ ಕಾ ಸ್ವಯಂವರ್" ನೋಡಿದ್ಯಾ? ಎಂದು ಕೇಳಿದ. "ಅದೇನೂ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಅಲ್ಲವಲ್ಲಾ ನಾನು ಅಷ್ಟೊಂದು ಆಸಕ್ತಿಯಿಂದ ನೋಡೊದಿಕ್ಕೆ. ಯಾವಾಗೋ ಒಂದು ಸಲ ವಾರದ ಹಿಂದೆ ನೋಡಿದ್ದೆ ಕಣೋ, ಒಳ್ಳೇ ಕಾಮೆಡಿ ಸೀರಿಯಲ್ಲು ಬಿಡು" ಎಂದು ಉಡಾಫೆಯಾಗಿ ಮಾತು ಹಾರಿಸಿದೆ.

"ಅಲ್ಲಾ ಕಣೋ, ಅದರಲ್ಲಿ ಅಂಥದೇನು ಇದೆ ಅಂತಾ ನೀನು ಬೇಜಾರು ಮಾಡಿಕೊಂಡಿರುವುದು? ನಾನೇನೋ ನಿಮ್ಮ ಊರು ಕಡೆಗೆ ತುಂಬಾ ಮಳೆಯಾಗ್ತಿದೆಯಲ್ಲಾ, ನಿಮ್ಮ ತೋಟಕ್ಕೆ ಏನಾದ್ರೂ ತೊಂದರೆಯಾಗಿದೆಯೇನೋ ಅಂದುಕೊಂಡೆ. ನೀನ್ಯಾವುದೋ ಸಿಲ್ಲಿ ವಿಷಯಕ್ಕೆಲ್ಲಾ ತಲೆ ಹಾಳು ಮಾಡಿಕೊಂದಿದ್ದಿಯಲ್ಲೋ" ಎಂದು ಅವನ ಗಾಯಕ್ಕೆ ಇನ್ನಷ್ಟು ಉಪ್ಪುಸುರಿದೆ.ನಾನು ಅವನು ಹೇಳಿದ್ದರಲ್ಲಿ ಒಂಚೂರೂ ಆಸಕ್ತಿ ತೋರದೇ, ಅವನನ್ನು ಹಳಿದಿದ್ದಕ್ಕೆ ಇನ್ನೂ ಬೇಜಾರಾಗಿರಬೇಕು. "ಹೋಗ್ಲಿ ಬಿಡು, ಹೋಗಿ ಹೋಗಿ ನಿನ್ನ ಕೈಲಿ ಹೇಳಿದ್ನಲ್ಲಾ" ಎಂದು ತನ್ನನ್ನೇ ದೂಷಿಸಿಕೊಂಡ.

"ಏನಾಯ್ತೋ"?, ಈಗ ನಾನು ಸಂತೈಸುವ ಧ್ವನಿ ಮಾಡಿದೆ. "ಇಲ್ಲ ಕಣೋ, ಅವಳೆಷ್ಟು ಮುಗ್ಧ ಹುಡುಗಿ ಗೊತ್ತಾ? ಆದ್ರೆ ಅಲ್ಲಿ ಅವಳನ್ನು ಮದ್ವೆ ಆಗಕೆ ಬಂದಿರೋವ್ರೆಲ್ಲಾ ಒಬ್ಬರಿಗಿಂತ ಒಬ್ಬರು ದೊಡ್ಡ ನೌಟಂಕಿಗಳು ಕಣೋ, ಒಬ್ಬರೂ ಸರಿಯಿಲ್ಲ" ಎಂದು ಗೊಣಗಿದ. "ಓಹೋ ಹೀಗಾ ವಿಷಯ? ಗೊತ್ತಾಯ್ತು ಬಿಡು. ಅಲ್ಲಾ ಕಣೋ ನಾಣಿ, ನೀನು ಇಷ್ಟು ಸ್ಮಾರ್ಟ್ ಇದೀಯಾ, ರಾಖಿ ಅಂದ್ರೆ ಇಷ್ಟ ಬೇರೆ, ನೀನ್ಯಾಕೋ ಅದಕ್ಕೆ ಅಪ್ಲೈ ಮಾಡಿಲ್ಲಾ? ನೀನು ಹೋಗಿದ್ರೆ ನಿಂಗೇ ಅವಳು ಒಲಿಯೋದ್ರಲ್ಲಿ ಡೌಟೇ ಇರಲಿಲ್ಲ ನೋಡು" ಎಂದು ಛೇಡಿಸಿದೆ. "ಅಲ್ಲಿ ಸೌತ್ ಇಂಡಿಯಾದವ್ರನ್ನು ಯಾರನ್ನೂ ತಗೋಳ್ಲಿಲ್ಲ ಕಣೋ", ನಾಣಿ ಸೀರಿಯಸ್ಸಾಗೇ ಹೇಳಿದ. "ಹೌದೇನೋ?, ಇದು ತುಂಬಾ ಅನ್ಯಾಯನಪ್ಪಾ , ಎಂಡಿಟಿವಿ ಮೇಲೆ ಕೇಸ್ ಹಾಕ್ಬೇಕು ನೋಡು. ಏನಂದುಕೊಂಡು ಬಿಟ್ಟಿದಾರೆ ಅವ್ರು? ದಕ್ಷಿಣ ಭಾರತದವ್ರು ಎಲ್ಲಾ ರಾಖಿನ ಮದ್ವೆಯಾಗೊಕ್ಕೆ ನಾಲಾಯಕ್ಕಾ? ’ದಿಸ್ ಇಸ್ ಟೂ ಮಚ್’ ಎಂದು ನಾಣಿನ ಸಪೋರ್ಟ ಮಾಡಿದೆ.

ನಾಣಿ ಈಗ ಸ್ವಲ್ಪ ಗೆಲುವಾದ. ಹೌದು ಕಣೋ, ಅಲ್ಲಿ ಬಂದಿರೋರೆಲ್ಲಾ ನಾರ್ಥ್ ಇಂಡಿಯಾದವರೇ. ಸಿಕ್ಕಾಪಟ್ಟೆ ದುಡ್ಡಿದ್ದವರು ಎಂದು ನಿಡುಸುಯ್ದ. "ಇನ್ನೇನು? ಯಾರೋ ದುಡ್ಡಿಲ್ಲದ ಬಿಕನಾಸಿನ ಮದ್ವೆ ಆಗ್ತಾಳಾ ಅವಳು?" ಅಂತ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದರೆ ನಾಣಿಯ ಸೂಕ್ಷ್ಮ ಮನಸಿಗೆ ಇನ್ನೂ ಬೇಜಾರು ಮಾಡುವುದು ಬೇಡವೆನಿಸಿತು. "ಅದಕ್ಯಾಕೆ ಇಷ್ಟೆಲ್ಲಾ ಬೇಜಾರು ಮಾಡ್ಕೊಂಡಿದೀಯೋ? ಅವಳನ್ನ ಮದ್ವೆ ಮಾಡ್ಕೊಳ್ಳೋವಂತ ದುರ್ಗತಿ ಯಾರಿಗಿದೆಯೋ, ಅವ್ರೇ ಮದ್ವೆ ಮಾಡ್ಕೋತಾರೆ ಬಿಡು" ಎಂದು ಸಮಾಧಾನ ಮಾಡಿದೆ. ನಾಣಿಗೆ ನನ್ನ ಕುಹಕ ಸರಿಯಾಗಿ ಅರ್ಥವಾಗಲಿಲ್ಲ. "ನಿನ್ನೆ ಶೋದಲ್ಲಿ ಏನಾಯ್ತು ಗೊತ್ತಾ?" ಎಂದು ಮತ್ತೆ ಫ್ಲಾಶ್ ಬ್ಯಾಕಿಗೆ ಹೋದ. ನಾನೂ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ಕೇಳಲು ಶುರುಮಾಡಿದೆ. ಅವನ್ಯಾರೋ "ಲವ್" ಅಂತೆ. ಎಲ್ಲಾರ ಎದುರಿಗೂ ಅವಳ ಹಣೆಗೆ ಮುತ್ತು ಕೊಟ್ಬಿಟ್ಟ ಕಣೊ. ಸ್ವಲ್ಪಾನೂ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ಲ, ಥೂ" ಎಂದು ಯಾರಿಗೋ ಉಗಿದ. ನನಗೆ ಇನ್ನೂ ತಮಾಷೆಯೆನಿಸಿತು. "ನಂಗೊಂದು ಡೌಟು ಕಣೋ, ರಾಖಿನೇ ಏನೋ ಮಾಡ್ತಿರಬೇಕು. ಎಲ್ಲಾರಿಗೂ ಯಾಕೆ ಹಾಗೆ ಮಾಡ್ಬೇಕು ಅನ್ನಿಸುತ್ತೋ ಏನೋ, ಅವ್ನು ಮಿಖಾ ಮೊದ್ಲು, ಬಿಗ್ ಬಾಸ್ ಅಲ್ಲಿ ಅಭಿಷೇಕ್, ಎಲ್ಲಾರೂ ಹಾಗೇ ಮಾಡಿದ್ರು ನೋಡು. ಅಥವಾ ಕ್ಯಾಮೆರಾ ಎದುರು ಬಂದ ಕೂಡಲೇ ಅವ್ರಿಗೆಲ್ಲಾ ಹಾಗೆ ಮಾಡಬೇಕು ಅನ್ನಿಸುತ್ತೋ ಏನೋ, ಪಾಪ" ಎಂದು ತಮಾಷೆ ಮಾಡಿದೆ. ನಾಣಿಗೆ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣಿಸಿತು. "ರಾಖಿ ಯಾಕೆ ಏನು ಮಾಡ್ತಾಳೆ? ಈ ಹುಡುಗರಿಗೆ ಸ್ವಲ್ಪಾನೂ ಕಂಟ್ರೋಲ್ ಅನ್ನೋದೇ ಇಲ್ಲ ನೋಡು. ಟೀವಿನಲ್ಲಿ ಎಷ್ಟೊಂದು ಜನ ತಮ್ಮನ್ನು ನೋಡ್ತಿದಾರೆ ಅನ್ನೋ ಖಬರೂ ಇಲ್ಲ" ಎಂದ. "ಅವ್ರು ಮಾಡ್ತಿರೋದೇ ತಮ್ಮನ್ನ ಜನರು ಟೀವಿಲಿ ನೋಡಲಿ ಅಂತ ಕಣೋ, ಅವ್ರೆಲ್ಲಾ ಏನು? ರಾಖಿನೂ ಇಷ್ಟೆಲ್ಲಾ ಮಾಡ್ತಿರೋದು ಯಾಕೆ? ಒಂದಷ್ಟು ಪ್ರಚಾರ ಸಿಗ್ಲಿ, ಸಿನೆಮಾಗಳಲ್ಲಂತೂ ಅವ್ಳಿಗೆ ಯಾರೂ ಚಾನ್ಸ್ ಕೊಡ್ತಾ ಇಲ್ಲ. ಹೀಗಾದ್ರೂ ಮಾಡಿ ಒಂದಷ್ಟು ದುಡ್ಡುಗಿಡ್ಡು ಮಾಡ್ಕೊಳ್ಳೊಣಾ ಅಂತ ಅಷ್ಟೇ!" ಎಂದು ನಾನು ಬೆಂಕಿಗೆ ಸ್ವಲ್ಪ ತುಪ್ಪ ಸುರಿದೆ. "ಅದು ಬೇರೆ ತಿಂಗಳುಗಟ್ಟಲೆ ಅಂಥಾ ಪ್ಯಾಲೆಸಿನಂತ ಹೋಟೆಲ್ಲಿನಲ್ಲಿ ವಸತಿ, ಊಟ, ಜೊತೆಗೆ ಏಳೆಂಟು ಹುಡುಗರ ಜೊತೆ ಫ್ಲರ್ಟ್ ಮಾಡೋ ಅವಕಾಶ, ಪುಕ್ಕಟೆ ಮದುವೆ, ಏನು ಚಾನ್ಸಪ್ಪಾ ಅವಳದ್ದು! ನಾಣಿ, ನಮ್ಮ ಮದುವೆನೂ ಎಂಡಿಟಿವಿಯವ್ರು ಮಾಡಿಕೊಡ್ತಾರಾ ಕೇಳೋ" ಎಂದು ರೇಗಿಸಿದೆ.

ನಾಣಿ ಸ್ವಲ್ಪ ತಬ್ಬಿಬ್ಬಾದ. ವಿಷಯ ಎಲ್ಲಿಂದೆಲ್ಲೋ ಹೋಗುತ್ತಿದೆ ಅಂತ ಅನ್ನಿಸಲು ಶುರುವಾಗಿರಬೇಕು ಅವನಿಗೆ. "ಅದರಲ್ಲೇನಪ್ಪಾ ತಪ್ಪು? ಪ್ರಚಾರ ಪಡೆಯಲು ಯಾರ್ಯಾರೋ ಏನೇನೋ ಮಾಡ್ತಾರೆ. ತನಗೆ ಇಷ್ಟವಾದ ಹುಡುಗನನ್ನು ಆಯ್ಕೆ ಮಾಡೋ ಸ್ವಾತಂತ್ರವೂ ಇಲ್ವಾ? " ಎಂದು ಮರುಪ್ರಶ್ನೆ ಹಾಕಿದ. "ಇದೆಯಪ್ಪಾ ಇದೆ, ಇಂಡಿಯಾದಲ್ಲಿ ಯಾರಿಗೆ ಏನು ಬೇಕೋ ಮಾಡಬಹುದು, ಅನ್ನಿಸಿದನ್ನು ಎಲ್ಲರ ಎದುರಿಗೂ ಹೇಳಬಹುದು. ಮೊನ್ನೆ ನಮ್ಮ ಸೆಂಟ್ರಲ್ ಮಿನಿಸ್ಟರ್ರು ಹೇಳ್ಲಿಲ್ವಾ? " ಟೀವಿ ಜಾಸ್ತಿ ನೋಡಿದ್ರೆ ಮಕ್ಕಳಾಗೋದು ಕಮ್ಮಿ ಆಗುತ್ತೆ ಅಂತಾ? ಇನ್ನೋಬ್ರು ಮಿನಿಸ್ಟರ್ರು ಶಾಲೆಗಳಲ್ಲಿ ಪರೀಕ್ಷೆಗಳನ್ನೇ ತೆಗೆದುಬಿಡೋಣ ಅಂತ ಹೇಳಲಿಲ್ವಾ? ತಲೆಬುಡ ಇಲ್ಲದೆ ಮಾತಾಡ್ತಾರೆ. ಏನು ಬೇಕಾದ್ರೂ ಹೇಳಿ, ಏನು ಬೇಕಾದರೂ ಮಾಡಿ ದಕ್ಕಿಸೋಕೊಳ್ಳಬಹುದು ಬಿಡು ಈ ದೇಶದಲ್ಲಿ. ಸಾಮಾಜಿಕ ಜವಾಬ್ದಾರಿ, ಪ್ರಾಮಾಣಿಕ ಕಳಕಳಿ ಅನ್ನೋದೇ ಇಲ್ಲ ಯಾರಿಗೂ! ರಾಜಕಾರಣಿಗಳಿಗೂ ಇಲ್ಲ, ಸಿಲಿಬ್ರೆಟಿಗಳಿಗೂ ಇಲ್ಲ, ಎಲ್ಲರನ್ನೂ ನಿಗ್ರಹಿಸಬೇಕಾದ ಮೀಡಿಯಾದರಿಗಂತೂ ಮೊದಲೇ ಇಲ್ಲ. ಎಲ್ಲರೂ ಸೇರಿ ಜನರ ದಾರಿತಪ್ಪಿಸೋ ಕೆಲ್ಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡ್ತಾ ಇದಾರೆ" ನಾನು ಸ್ವಲ್ಪ ಅಸಹನೆಯಿಂದಲೇ ಹೇಳಿದೆ.

"ಹೋಗ್ಲಿ ಬಿಡಪ್ಪಾ, ನಮಗ್ಯಾಕೆ ಅವ್ರ ಉಸಾಬರಿ? ನಮ್ಮ ಪಾಡಿಗೆ ನಾವಿದ್ರೆ ಆಯ್ತು ಬಿಡು" ಎಂದು ನಾಣಿ ಮೆತ್ತಗೆ ನನ್ನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ. ಇವನ ಹತ್ರ ಮಾತಾಡಿದರೆ ಉಪಯೋಗವಿಲ್ಲ ಎಂದೆನಿಸಿರಬೇಕು ಅವನಿಗೆ. ಹಾಗೆ ನೋಡಿದ್ರೆ, ಅವನ ಪ್ರಕಾರ ರಾಖಿಗೆ ಒಳ್ಳೇ ಗಂಡು ಹುಡುಕುವುದೂ ಕೂಡ ಬಹುದೊಡ್ಡ ಸಾಮಾಜಿಕ ಜವಾಬ್ದಾರಿನೇ. ಅವನಿಗೆ ಸಂಪೂರ್ಣವಾಗಿ ಸಮಾಧಾನವಾಗಿಲ್ಲವೆಂಬುದು ಅವನ ಮುಖದಲ್ಲೇ ಎದ್ದು ಕಾಣುತ್ತಿತ್ತು, ಆದರೆ ಮುಂದೆ ಮಾತಾಡಿದರೆ ತನ್ನ ಬುಡಕ್ಕೇ ಬರಬಹುದು ಎನ್ನಿಸಿತೆನೋ, ಸುಮ್ಮನಾದ.

"ಇನ್ನೂ ಎಷ್ಟು ದಿನ ನಡೆಯುತ್ತಪ್ಪಾ, ಅವಳ ವಿಚಾರಣೆ? ಯಾವಾಗಂತೆ ಮದುವೆ?" ನಾನು ಕುತೂಹಲದಿಂದ ಕೇಳಿದೆ. "ಸಧ್ಯದಲ್ಲೇ ಆಗುತ್ತೆ ಬಿಡು. ಇನ್ನೇನು ಬರೀ ನಾಲ್ಕು ಜನ ಉಳ್ಕೊಂಡಿದಾರೆ ಅಷ್ಟೆ. ಅವ್ರ ಮನೆಗೆಲ್ಲಾ ಹೋಗಿ ಯಾರು ಬೆಸ್ಟು ಅಂತ ಡಿಸೈಡ್ ಮಾಡ್ತಾಳೆ, ಆಮೇಲೆ ಇನ್ನೇನು ಮದುವೆನೇ" ಎಂದ ನಾಣಿ. ಅವನ ಮನಸ್ಸಿನಲಿ ಇದ್ದಿದ್ದು ಸಮಾಧಾನವೋ, ಅಸೂಯೆಯೋ ಗೊತ್ತಾಗಲಿಲ್ಲ. "ಅಲ್ಲಾ ನಾಣಿ ಒಂದು ವಿಷಯ ಗೊತ್ತಾಗ್ತ ಇಲ್ಲ ನೋಡು ನನಗೆ. ಎಲ್ಲಾ ರಿಯಾಲಿಟಿ ಶೋಗಳಲ್ಲಿ ಪಬ್ಲಿಕ್ ವೋಟ್ ಮಾಡೋ ಅವಕಾಶ ಇರುತ್ತೆ ಅಲ್ವಾ? ಇದರಲ್ಲಿ ಯಾಕೆ ಇಲ್ಲಾ? ನಮಗೂ ಅವಳ ಗಂಡನನ್ನು ಆಯ್ಕೆ ಮಾಡೋದಿಕ್ಕೆ ಚಾನ್ಸು ಸಿಗಬೇಕು ಕಣೋ. ಛೇ" ಎಂದು ಅಣಕಿಸಿದೆ. ನಾಣಿಗೆ ಸಡನ್ನಾಗಿ ಜ್ನಾನೋದಯವಾಯ್ತು! "ಹೌದಲ್ವೋ, ಆ ಆಪ್ಷನ್ನೇ ಕೊಟ್ಟಿಲ್ಲ ನೋಡು ಎಂಡಿಟಿವಿಯವರು, ನಾವೇ ರಾಖಿಗೆ ಹೇಳ್ಬಹುದಿತ್ತು ಇಂಥವನನ್ನು ಮದ್ವೆ ಆಗು ಅಂತಾ. ಎಂತಾ ಅನ್ಯಾಯ, ಛೇ" ಎಂದು ಅಲವತ್ತುಗೊಂಡ. ಅವನ ತಳಮಳ ನೋಡಿ ನನಗೆ ನಗು ಬಂತು. "ಇನ್ನೇನು ಸ್ವಲ್ಪ ದಿನಕ್ಕೇ ಶೋ ಮುಗಿದುಹೋಗುತ್ತೆ. ಆಮೇಲೆ ರಾಖಿನ ನೋಡೋದಿಕ್ಕೇ ಆಗಲ್ಲ" ಎಂದು ಬೇಜಾರಲ್ಲಿ ಹೇಳಿದ. "ಚಿಂತೆ ಮಾಡಬೇಡ್ವೋ, ಇನ್ನೊಂದು ಸ್ವಲ್ಪ ದಿನ ಬಿಟ್ಟು ’ರಾಖಿ ಕಾ ಡೈವೋರ್ಸ್’ ಅಥವಾ ’ರಾಖಿ ಕಾ ಪುನರ್ ಸ್ವಯಂವರ್" ಅಂತಾ ಶೋ ಮತ್ತೆ ಬರುತ್ತೆ. ಆವಾಗ ಮತ್ತೆ ನೋಡುವೆಯಂತೆ ರಾಖಿನ" ಎಂದು ತಮಾಷೆ ಮಾಡಿದೆ. ನಾಣಿ ಪೆಚ್ಚು ನಗು ನಕ್ಕ. "ಇದನ್ನೇ ಮಾತಾಡ್ತಾ ಇದ್ದರೆ, ಕೆಲ್ಸಾ ಯಾರು ಮಾಡೋದು, ನಡಿ, ರಾಖಿನ ಯಾರು ಮದುವೆ ಆದರೆ ನಮಗೇನಂತೆ? ಬಾ" ಎಂದು ಬಲವಂತವಾಗಿ ನಾಣಿನ ಎಳೆದುಕೊಂಡು ಹೋದೆ.

7 comments:

sunaath said...

ಮಧು,
ಮೂರು ತಿಂಗಳ ಬಳಿಕ ಬರೆದಿದ್ದೀರಿ.
ಆದರೆ, ಬರೆದದ್ದು super ಆಗಿದೆ. ಹಾಸ್ಯದ ಹೊದಿಕೆಯಲ್ಲಿ ಸುಂದರ ವಿಚಾರಗಳ ಮಿಂಚು ಹೊಡೆಸಿದ್ದೀರಿ.
ತುಂಬಾ ಖುಶಿ ಆತು.

Ittigecement said...

ಮಧು...,
ಬರಹ ಸೂಪರ್...!

ನಮ್ಮನೆಯಲ್ಲಿ ..
ಬೇಸರ ಬಂದು ನಗಬೇಕಿದ್ದರೆ ಆ ಕಾರ್ಯಕ್ರಮ ಹಚ್ಚುತ್ತೇವೆ...
ನಮಗಂತೂ ಸಿಕ್ಕಾಪಟ್ಟೆ ನಗು ಬರುತ್ತದೆ...

ನೀವು ಹೇಳಿದ ಹಾಗೆ "ರಾಖಿ ಕಾ ಸ್ವಯಂವರ"
ಏಕತಾ ಕಪೂರ್ ಧಾರವಾಹಿಗಳ ಹಾಗೆ...
ಕೊನೆಯಿಲ್ಲದ ಸೀರಿಯಲ್ಲುಗಳು...

ಚಿತ್ರಾ said...

ಮಧು,
ಬಹಳ ದಿನಗಳ ಬಳಿಕ ಬರೆದಿದ್ದೀರ. ತುಂಬಾ ಚೆನ್ನಾಗಿ, ಹಾಸ್ಯಮಯವಾಗಿ ಬಂದಿದೆ. ನಾವು ಸಹ ಮನೆಯಲ್ಲಿ ಇದನ್ನೊಂದು ' ಕಾಮೆಡಿ ಸೀರಿಯಲ್ " ಆಗೇ ನೋಡುತ್ತೇವೆ.
ಕಡೆಯ ವಾಕ್ಯಗಳಂತೂ ( ರಾಖೀ ಕಾ ಡೈವೋರ್ಸ್, ರಾಖೀ ಕಾ ಸ್ವಯಂವರ ಸೀಸನ್ ೨ ಇತ್ಯಾದಿ ) , ನಮ್ಮ ಮನೆಯಲ್ಲಿ ನಾವು ಮಾತನಾಡಿದ್ದನ್ನು ಕೇಳಿಸಿಕೊಂಡು ಬರೆದಂತಿದೆ !!!
ಪಾಪ ನಾಣಿ. ಈ ಕಾರ್ಯಕ್ರಮದಿಂದ ಸ್ಪೂರ್ತಿಗೊಂಡು ಯಾವುದಾದರು ಕನ್ನಡ ಚಾನೆಲ್ ಇಂಥದೇ ಕಾರ್ಯಕ್ರಮ ಶುರು ಮಾಡಬಹುದು. ಅದರಲ್ಲಿ ಖಂಡಿತಾ ದಕ್ಷಿಣ ಭಾರತೀಯರನ್ನು ತಿರಸ್ಕರಿಸದ ಕಾರಣ ನಾಣಿ ಗೊಂದು ಚಾನ್ಸ್ ಸಿಕ್ಕ ಬಹುದು !

Sachin said...

Ri Madhu,
Haasyada honalanne harisibittiddiri kanri neevu.
Naani ya sthiti nodi ayyo paap anistu..:-)

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
"ಇನ್ನೊಂದು ಸ್ವಲ್ಪ ದಿನ ಬಿಟ್ಟು ’ರಾಖಿ ಕಾ ಡೈವೋರ್ಸ್’ ಅಥವಾ ’ರಾಖಿ ಕಾ ಪುನರ್ ಸ್ವಯಂವರ್" ಅಂತಾ ಶೋ ಮತ್ತೆ ಬರುತ್ತೆ."
ನಗು ಬಂತು.
ನೀ ಬರೆದ ರೀತಿ ಯಾವತ್ತೂ ಇಷ್ಟವೇ. ಬರೀತಿರು.

ತೇಜಸ್ವಿನಿ ಹೆಗಡೆ said...

ಮಧು,

ಅದೆಷ್ಟೋ ಚಾನೆಲ್‌ಗಳಲ್ಲಿ ನಗೆಯನ್ನುಕ್ಕಿಸುವ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಉದಾಹರಣೆಗೆ "ಹಸ್ ಬಲಿಯೇ.." "ಕುರಿಗಳು ಸಾರ್ ಕುರಿಗಳು.." ಇತ್ಯಾದಿ. ಆದರೆ ಇದ್ಯಾವವೂ ರಾಖಿ ಕಾ ಸ್ವಯಂವರ್ ಕಾರ್ಯಕ್ರಮವನ್ನು ಬೀಟ್ ಮಾಡಲಾರವು ನೋಡು. ಯಾರಾದರೂ ತುಂಬಾ ಡಿಪ್ರೆಸ್ ಆಗಿದ್ದರೆ ಅಂತಹವರಿಗೆ ಈ ಪ್ರೋಗ್ರಾಂ ತೋರಿಸಬೇಕು. ಒಮ್ಮೆಯೂ ನಗದಿದ್ದರೆ ಹೇಳು.. ನಿಜಕ್ಕೂ ರಾಖಿ ಗ್ರೇಟ್. ಅದೆಷ್ಟೋ ಜನರ ಮೊಗದಲ್ಲಿ ನಗೆಬುಗ್ಗೆಯನ್ನು ಚಿಮ್ಮಿಸುವಲ್ಲಿ ಸಫಲಳಾಗಿದ್ದಾಳೆ. ಇನ್ನು ಎನ್‌ಡಿಟಿವಿ ಚಾನಲ್.. ಪಾಪ ಅದನ್ನೂ ಈ ಮೊದಲು ಮೂಸುವವರೂ ಇರಲಿಲ್ಲ. ಇವಳಿಂದಾಗಿ ಇದರ ಹೆಸರೂ ಮೇಲಕ್ಕೆ ಬರುತ್ತಿದೆ..:) ಎಲ್ಲಾ ಉದರನಿಮಿತ್ತಂ ಬಹುಕೃತ ವೇಷಂ.."

ಲೇಖನ ತುಂಬಾ ಇಷ್ಟ ಆಯಿತು. ಕೊನೆಯ ಸಾಲುಗಳಂತೂ ಮತ್ತೂ ನಗು ಬರಿಸುವಂತಿವೆ..:)

Lakshmi Shashidhar Chaitanya said...

punches are too good ! oLLe sense of humour ide nimage.