Monday, June 23, 2008

ಈ ಸಂಭಾಷಣೆ...

ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು

ಅರೆಪಾವು ತುಂಟತನ, ಆಗಾಗ ಥೇಟ್ ಮಗು

ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು

ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು



ಪ್ರಶ್ನೆ ಕೇಳುವಾಗಲೆಲ್ಲ ತುಸು ತಗ್ಗಿದಂತೆ ದನಿ

ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ

ಉತ್ತರಕ್ಕೊಮ್ಮೆ ಬುದ್ಧ, ಇನ್ನೊಮ್ಮೆ ಶುದ್ಧ ವಜ್ರಮುನಿ

ಅಪರೂಪಕ್ಕೊಮ್ಮೊಮ್ಮೆ ಬರೀ ಹಠಮಾರಿ ಪುಟಾಣಿ!



ಹೇಳಿದಷ್ಟೂ ಸಾಲದು, ಮಾತಾಡಿದಷ್ಟೂ ಸಾಕಾಗದು

"ಮತ್ತೆ?" ಪ್ರಶ್ನೆ ತುಟಿಯಂಚಲ್ಲಿ ಎಂದೂ ಸಾಯದು

ನಿಶ್ಯಬ್ಧ, ನಿಟ್ಟುಸಿರು, ನಗು ದಿನದಿನವೂ ಹೊಸಹೊಸದು

ಕಿವಿಯಂಚಲ್ಲೇ ಗಾಂಧರ್ವಲೋಕ ಮೂಡಿಹದು ನಿಜದು



ಅನುರಾಗದಾಲಾಪದ ಮೋಹಕ ಅಲೆಗಳಲ್ಲಿ ತೇಲಾಡಿ

ಕಳೆದುಹೋಗುತ್ತಿರುವ ಕಾಲಪುರುಷನನೂ ಪರಿಪರಿ ಕಾಡಿ,

ಮೌನದಾಗಸದಲ್ಲಿ ಮೆಲುದನಿಯ ಕಾಮನಬಿಲ್ಲು ಹೂಡಿ

ಹಾಡುತ್ತಲೇ ಇದೆ ಈ ನಿತ್ಯ ನೂತನೆ, ಸಲ್ಲಾಪದ ಮೋಡಿ

12 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
ಆಹಾ...ಸೊಗಸು, ಬಲುಸೊಗಸು.
ಕವನದ ತುಂಬೆಲ್ಲ ನಾದಿನಿಯ ನಾದ. :)
ಮಧುಬನ ಮೆ ರಾಧಿಕಾ...
ಸುಂದರವಾಗಿದೆ. ಸದಾ ಎಲ್ಲವೂ ಹೀಗೆಯೇ ಹೊಸಹುರುಪು ಕೊಡಲಿ.

Unknown said...

ಅಕ್ಕಾ,

ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು.
ನಿಜ, ಮಧುವನದಲ್ಲಿ ರಾಧೆಯ ಗೆಜ್ಜೆ ದನಿ ಕೇಳಿದರೇ ಅದಕ್ಕೊಂದು ಕಳೆ. ಅಲ್ಲವೇ?
ಹೀಗೆ ಬರ್ತಾ ಇರಿ, ನಿಮ್ಮ ಪ್ರೀತಿ ಸದಾ ಹೀಗೇ ಇರಲಿ.
~ಮಧು

ತೇಜಸ್ವಿನಿ ಹೆಗಡೆ said...

ಮಧು,

ಪ್ರೇಮ ಕನ್ನಿಕೆಗೆ ಮಾಡಿರುವ ಕವನದ ‘ಅರ್ಚನೆ’ ತುಂಬಾ ಚೆನ್ನಾಗಿದೆ..;-) ಸುಂದರ ಸಾಲುಗಳಿಂದ ಕೂಡಿರುವ ಕವನ ಹಾಡಿಕೊಳ್ಳುವಂತೆಯೂ ಇದೆ.

"ಪ್ರಶ್ನೆ ಕೇಳುವಾಗಲೆಲ್ಲ ತುಸು ತಗ್ಗಿದಂತೆ ದನಿ
ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ
ಉತ್ತರಕ್ಕೊಮ್ಮೆ ಬುದ್ಧ, ಇನ್ನೊಮ್ಮೆ ಶುದ್ಧ ವಜ್ರಮುನಿ
ಅಪರೂಪಕ್ಕೊಮ್ಮೊಮ್ಮೆ ಬರೀ ಹಠಮಾರಿ ಪುಟಾಣಿ!"

ವ್ಹಾಹ್! ತುಂಬಾ ಇಷ್ಟವಾಯಿತು..

ಸದಾ ಕಾಲ ಹೀಗೇ ಇರಲಿ ನಿಮ್ಮಿಬ್ಬರ ಜೋಡಿ..
ಕವನ ಸುಧೆಯ ಹರಿಸಲಿ ಸಲ್ಲಾಪದ ಮೋಡಿ.

ಮನಸ್ವಿನಿ said...

ಮಧು,

ಸೊಗಸಾಗಿದೆ ಕವನ.
"ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ " ವಾವ್ ಸುಂದರವಾಗಿದೆ.

Unknown said...

ತೇಜಕ್ಕಾ,
ನಿಮ್ಮ ಹಾರೈಕೆಗೆ ತುಂಬಾ ತುಂಬಾ ಥಾಂಕ್ಸ್ :-)

ಮನಸ್ವಿನಿಯವರೇ,
ನೀವು ಬ್ಲಾಗಿಗೆ ಬಂದಿದ್ದು ಬಹಳ ಸಂತೋಷ. ಕವನ ನಿಮಗೆ ಮೆಚ್ಚುಗೆಯಾಗಿದ್ದು ಇನ್ನೂ ಸಂತೋಷ.
ಹೀಗೇ ಬರ್ತಾ ಇರಿ. ಧನ್ಯವಾದಗಳು

~ಮಧು

ಗಣಪತಿ ಬುಗಡಿ said...

ಯೆನಾ ಮಧು ಭಯನ್ಕರ ಕವಿ ಆಗೊಜ್ಯಲೊ..
ಜೊರ 'ಪ್ರೆಮ-ಅರ್ಚನೆ' ನದೆಸಿದ್ದೆ.. ಕಾಣ್ತು
ಮತ್ತೆ.. ತುಮ್ ಬಾ ಚೆನ್ನಗಿ ಬರದ್ದೆ..

Unknown said...

ಲೇ ಗಪ್ಪತಿ, ಕವಿ ಗಿವಿ ಹೇಳೆಲ್ಲಾ ಹೇಳಿ ಹೆದರಸಡ್ದೋ ಯನ್ನಾ! ಏನೋ ಬರದ್ದಿ.
ಹಿಂಗೇ ಬರ್ದಿದನ್ನೆಲ್ಲಾ ಓದ್ತಾ ಇರು. ಥಾಂಕ್ಸ್.
~ಮಧು

Jesh Bhat said...
This comment has been removed by the author.
Unknown said...

ಪ್ರಿಯ ಆತ್ಮೀಯ ಸ್ನೇಹಿತರೆ,

ನಿಮ್ಮ ಅಂತರ್ಜಾಲ ಮಧುವನ ಬಹಳ ಸುಂದರವಾಗಿದೆ.

ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

http://kannadahanigalu.com/

ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

ಹಾಗೆಯೇ ಸಾದ್ಯವಾದಲ್ಲಿ ನಿಮ್ಮಲ್ಲೂ ಕವನ, ಚುಟುಕ, ಕವಿತೆ, ಹಾಸ್ಯ ಮುಂತಾದವುಗಳಿದ್ದರೆ ನಿಮ್ಮ ಹೆಸರಿನಲ್ಲಿ ಪ್ರಕಟಿಸಬಹುದು.

ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

ಧನ್ಯವಾದಗಳೊಂದಿಗೆ.....
Kannadahanigalu Team
kannadajokes@gmail.com

ರಾಘು ತೆಳಗಡಿ said...

ಹೇಯ್ ಮಧು, ನನ್ನ-ನನ್ನವಳ (ಇನ್ನು ಮದುವೆ ಆಗಿಲ್ಲ ಕಣ್ರೀ!) ನಡುವಿನ ಮಾತೆ ನಿಮ್ಮ ಕವನ ಅನ್ಸತ್ತೆ? ಕನಸಲ್ಲಿ ಬಂದಿದ್ವಾ ನಾವಿಬ್ರು :) ? ಮತ್ತೆ....ಮತ್ತೆ.....ಹೀಗೆ ನನ್ನ ಪ್ರಶ್ನೆಗೆ ನನ್ನವಳ ಉತ್ತರ ಮತ್ತೆ.... ಮತ್ತೆ.....! ಅಮೆಲಿನದೆಲ್ಲ ಹೇಳೋಲ್ಲಮ್ಮ...... :) ಇಷ್ಟವಾಯಿತು ಕವನ. ಬರೀತಾ ಇರು.

shivu.k said...

"ಮೌನದಾಗಸದಲ್ಲಿ ಮೆಲುದನಿಯ ಕಾಮನಬಿಲ್ಲು ಹೂಡಿ"
ತುಂಬಾ ಚೆನ್ನಾಗಿದೆ ಆಕ್ಷರದ ಸಾಲು....
ಕವನ ತುಂಬಾ ಚೆನ್ನಾಗಿದೆ...ಮುಂದುವರಿಸಿ.

Divya A L said...

Soooperrr!!! :)