Monday, March 17, 2008

ಮೂಕ ಹಕ್ಕಿಯು ಹಾಡುತಿದೆ..

ವಾರಂತ್ಯದಲ್ಲೂ ನಗರದ ಜಂಜಡದಿಂದ ಅಷ್ಟು ದೂರ ಬಂದು, ಈ ಹಸಿರು ಹಿನ್ನೆಲೆಯಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುವ ನದಿಯ ಹರವನ್ನು ದಿಟ್ಟಿಸುತ್ತಾ ಕಾಲ ಕಳೆಯುವುದು ಕೇವಲ ಅವಳ ನೆನಪನ್ನು ಮರೆಯಲೋಸ್ಕರವಾ?ಅಥವಾ ನನ್ನನ್ನೇ ನಾನು ಮರೆಯಲಾ? ಗೊತ್ತಾಗುತ್ತಿಲ್ಲ! . ಆದರೆ ಒಂದಂತೂ ನಿಜ. ಹಸಿರು ಸೆರಗು ಹೊದ್ದಿರುವ ವನದೇವತೆಯ ಮಡಿಲಲ್ಲಿ ಮೈಚಾಚಿ,ದಿವ್ಯ ಏಕಾಂತದಲ್ಲಿ ಎಲ್ಲವನ್ನೂ ಮರೆತು ಹೋಗುವುದು ಎಷ್ಟು ಆಪ್ಯಾಯಮಾನ ಗೊತ್ತಾ?

ಅವಳೂ ನನ್ನ ಪಕ್ಕದಲ್ಲೇ ಕುಳಿತು ಮೌನದೊಳಕ್ಕೇ ಪಿಸುಗುಟ್ಟಿದ್ದರೆ ಇನ್ನೂ ಹಿತವಾಗಿರುತ್ತಿತ್ತೆಂದು ಒಮ್ಮೊಮ್ಮೆ ಅನಿಸುವುದಿದೆ.ಆದರೆ ಆಗ ಏಕಾಂತದ ರಸಘಳಿಗೆಯನ್ನು ಸವಿಯುವ ಭಾಗ್ಯ ತಪ್ಪಿಹೋಗುತ್ತಿತ್ತೇನೋ. ಏಕಾಂತದ ರಂಗಸ್ಥಳದಲ್ಲಿ ಕೇವಲ ನನ್ನೆದೆಯ ಪಿಸುಮಾತುಗಳ ಧ್ವನಿಗಳಿಗೆ ಜಾಗವಿದೆ.ಮಾತು ಮೂಕವಾಗಿ, ಮೌನ ಧ್ವನಿಯಾಗಿ, ಒಂಟಿ ಹಕ್ಕಿ ಗರಿಗೆದರಿ ಅಲ್ಲಿ ಕುಣಿಯಬೇಕು. ನನ್ನ ದುಃಖ ದುಮ್ಮಾನಗಳು ಸದ್ದಿಲ್ಲದೇ ಬಂದು ರಂಗಸ್ಥಳದಲ್ಲಿ ಗಿರಿಗಿಟ್ಲಿಯಾಗಿ ಕುಣಿದು ಸುಸ್ತಾಗಿ, ನೇಪಥ್ಯಕ್ಕೆ ಸರಿದು ಅನಿರ್ವಚನೀಯವಾದ ಭಾವವೊಂದಕ್ಕೆ ಎಡೆ ಮಾಡಿಕೊಡಬೇಕು. ಆ ಸುಖಕ್ಕಾಗಿಯೇ ಅಲ್ಲವೇ ನಾನು, ಕುಣಿಕೆ ಬಿಚ್ಚಿದೊಡನೆಯೇ ಅಮ್ಮನ ಬಳಿ ಓಡಿ ಬರುವ ಪುಟ್ಟ ಕರುವಿನ ತರ ಪದೇ ಪದೇ ಇಲ್ಲಿಗೆ ಓಡಿ ಬರುತ್ತಿರುವುದು?

ಅವಳು ಬಿಟ್ಟು ಹೋದಾಗ ನನ್ನನಾವರಿಸಿಕೊಂಡ ಭಾವ ಎಂತಹುದೆಂಬುದು ಹೇಳುವುದು ಕಷ್ಟ. ಅನಾಥ ಭಾವ ರಪ್ಪನೇ ಮುಖಕ್ಕೆ ರಾಚಿತ್ತು. ದುಃಖವೇ ಹಾಗಲ್ಲವೇ ? ಸದಾ ಸುಖದ ನೆರಳಿನಲ್ಲೇ ಇದ್ದು, ಸಮಯಸಾಧಕನಂತೆ ಹೊಂಚು ಹಾಕಿ ಇದ್ದಕ್ಕಿದ್ದ ಹಾಗೆ ತನ್ನ ಕಬಂಧ ಬಾಹುಗಳನ್ನು ಚಾಚಿ ಆಪೋಶನ ತೆಗೆದುಕೊಂಡುಬಿಡುತ್ತದೆ.ಅದಕ್ಕೆ ನಿಧಾನವೆಂಬುದೇ ಗೊತ್ತಿಲ್ಲ. ಅಮಾವಾಸ್ಯೆಯ ಕತ್ತಲಿನಂತೆ ಗಾಢವಾಗಿ ಕವಿದು ಒಂದೇ ಕ್ಷಣದಲ್ಲಿ ಎಲ್ಲಾವನ್ನೂ ಆವರಿಸಿಕೊಂಡು ಬಿಡುತ್ತದೆ. ನನಗೂ ಹಾಗೇ ಆಗಿತ್ತು. ದೀಪದ ದಾರಿಯಲ್ಲಿ ನಡೆಯುತ್ತಿದ್ದವನಿಗೆ ಇದ್ದಕಿದ್ದ ಹಾಗೆ ಕಣ್ಣುಗಳು ಕುರುಡಾದ ಹಾಗೆ. ಹಲವು ದಿನಗಳಲ್ಲೇ ನಾನು ಒಂಟಿತನದ ದಾಸನಾಗಿಬಿಟ್ಟಿದ್ದೆ. ಆದರೆ ಒಂಟಿತನ ದುಃಖದಂತಲ್ಲ. ಅದು ನಿಧಾನವಾಗಿ ನನ್ನನ್ನು ತನ್ನ ಪರಿಧಿಯೊಳಕ್ಕೆ ಸೆಳೆದುಕೊಂಡಿತು. ಮೊದ ಮೊದಲು ಒಂಟಿತನದ ಮೌನ, ಕತ್ತಲು ಎಲ್ಲವೂ ಆಪ್ಯಾಯಮಾನವೆನ್ನಿಸುತ್ತಿತ್ತು. ಆದರೆ ದಿನ ಕಳೆದಂತೆ ಗೊತ್ತಾಗುತ್ತಾ ಹೋಯಿತು. ಬೆಳಕು ಬೇಕೆಂದರೆ ಒಂಟಿತನದ ಕತ್ತಲ ಮನೆಗೆ ಕಿಟಕಿಗಳೇ ಇಲ್ಲ!.

ಒಂಟಿತನದ ಲೋಕದಲ್ಲಿ ಬಾಳು ಬಹಳ ದುರ್ಭರವಾಗಿತ್ತು. ಕತ್ತಲು ದಿಗಿಲುಕ್ಕಿಸುತ್ತಿತ್ತು. ಅವ್ಯಕ್ತ ಮೌನ ಮೂಗಿಗೆ ಅಡರಿ ಉಸಿರುಗಟ್ಟಿಸುವ ವಾತಾವರಣ. ಎಲ್ಲೋ ಗೋಚರಿಸಿಬಹುದಾದ ಪುಟ್ಟ ಬೆಳಕಿನ ಕಿರಣವನ್ನು ಹುಡುಕಿ,ದುಃಖದ ವ್ಯಾಪ್ತಿಯಿಂದ ಹೊರಬರಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಲವು ದಿನ ಆ ಕತ್ತಲಲ್ಲೇ ಅಂಬೆಗಾಲಿಟ್ಟು ತೆವಳಿ ಹುಡುಕಿದ ಮೇಲೆಯೇ ಕಂಡಿದ್ದು ನನಗೆ ಈ ಏಕಾಂತದ ಪುಟ್ಟ ಬೆಳಕಿಂಡಿ. ಅವತ್ತು ಎಷ್ಟು ಸಂತೋಷವಾಗಿತ್ತು ಗೊತ್ತಾ?ಮೊದಲ ಬಾರಿ ನನ್ನೆದೆಯ ಹಕ್ಕಿ ರೆಕ್ಕೆ ಬಿಚ್ಚಿ ಗರಿಗೆದರಿ ಹಾಡಿತ್ತು.

ಒಂಟಿತನಕ್ಕೂ ಏಕಾಂತಕ್ಕೂ ಇರುವ ವ್ಯತ್ಯಾಸ ದಿನಕಳೆದಂತೆ ಅನುಭವಕ್ಕೆ ಬರತೊಡಗಿತು. ಏಕಾಂತದಲ್ಲಿ ಮನಸ್ಸು ಮತ್ತೆ ಹಗುರ. ಏಕಾಂತದಲ್ಲಿ ನಾನು ಕೇವಲ ನಾನಾಗುತ್ತೇನೆ. ನನ್ನೊಳಗಿನ ಮೌನ ನನ್ನೊಡನೇ ಮಾತನಾಡಲು ಶುರು ಮಾಡಿಬಿಡುತ್ತದೆ!. ನೆನಪುಗಳು ಅಲ್ಲಿ ಕಾಡುವುದಿಲ್ಲ, ಬದಲು ದುಃಖಗಳಿಗೆ ಸಾಂತ್ವನ ಕೊಡುವ ಸಂಜೀವಿನಿಗಳಾಗುತ್ತವೆ. ನಮ್ಮ ತಪ್ಪನ್ನು ಎತ್ತಿ ತೋರಿಸಿ ತಿಳಿ ಹೇಳುವ ವೇದಾಂತಿಗಳಾಗುತ್ತವೆ. ಎಂಥ ಸೋಜಿಗವಲ್ಲವೇ?

ಹಸಿರು ಮುಂಚಿನಿಂದಲೂ ನನ್ನ ಇಷ್ಟವಾದ ಬಣ್ಣ. ಏಕಾಂತವನ್ನು ಅನುಭವಿಸಲು ಹಸಿರು ಹಿನ್ನೆಲೆ ಇದ್ದರೆಷ್ಟು ಚೆನ್ನ ಎಂದು ಯೋಚನೆ ಮನಸ್ಸಿನಲ್ಲಿ ಸುಳಿದ ತಕ್ಷಣವೇ ಇಲ್ಲಿಗೆ ಹೊರಟು ಬಂದಿದ್ದೆ. ಕಾಡಿನ ದುರ್ಗಮ ದಾರಿಗಳಲ್ಲಿ ಕಳೆದುಹೋಗಿ, ದಾರಿ ಮಧ್ಯೆ ಝುಳು ಝುಳು ಹರಿಯುವ ನೀರಿಗೆ ತಲೆಯೊಡ್ಡಿ, ಅಲ್ಲಲ್ಲಿ ಮರಗಳಲ್ಲಿ ಅಡಗಿ ಕುಳಿತು ಚೀರುತ್ತಿರುವ ಜೀರುಂಡೆಗಳ ಹಾಡಿಗೆ ತಲೆದೂಗುತ್ತಾ, ನಮ್ಮನ್ನು ನಾವೇ ಮರೆಯುವುದಿದೆಯಲ್ಲಾ ಅದರ ರೋಮಾಂಚನವನ್ನು ಶಬ್ಧಗಳಲ್ಲಿ ಹಿಡಿಯಲು ಆಗದು. ಏನಿದ್ದರೂ ಅನುಭವಿಸಿಯೇ ತೀರಬೇಕು. "ಸದ್ದಿರದ ಪಸರುಡೆಯ ಮಲೆನಾಡ ಬನಗಳಲ್ಲಿ, ಹರಿವ ತೊರೆಯಂಚಿನಲಿ ಗುಡಿಸಲೊಂದಿರಲಿ"ಎಂದು ಕುವೆಂಪು ಆಸೆಪಟ್ಟಿದ್ದು ಇದಕ್ಕಾಗಿಯೇ ಅಲ್ಲವೇ? ಸೂರ್ಯನನ್ನೇ ಚುಂಬಿಸಲು ನಿಂತಿರುವಂತೆ ಮುಗಿಲೆತ್ತರಕ್ಕೆ ನಿಂತಿರುವ ಗಿರಿಶಿಖರಗಳನ್ನು ನೋಡುತ್ತಾ ನನ್ನೆಲ್ಲಾ ಅಹಂಕಾರ ಬೆಳಗ್ಗಿನ ಇಬ್ಬನಿಯಂತೆ ಕ್ಷಣಾರ್ಧದಲ್ಲಿ ಮರೆಮಾಯ. ಎದುರಾದ ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ ಮುನ್ನುಗಿ ಹರಿಯುವ ನದಿ ನನಗೆ ಸ್ಪೂರ್ತಿ. ಪ್ರಕೃತಿಯೆದುರು ಮಾನವ ಎಷ್ಟೊಂದು ಕುಬ್ಜ ಅಲ್ಲವೇ?

ಮತ್ತೆ ಹಿಂದಿರುಗಿ ಹೋಗಲು ಇಷ್ಟವಿಲ್ಲ.ಆದರೇನು ಮಾಡಲಿ ?ಹೋಗುವುದು ಅನಿವಾರ್ಯ. ಹಿಂದೆ ಋಷಿಮುನಿಗಳು ಇಂಥ ಕಾಡುಗಳ ಮಧ್ಯೆ ಆಶ್ರಮ ಮಾಡಿಕೊಂಡು ದೇವರನ್ನು ಹುಡುಕುತ್ತಿದ್ದರಂತೆ. ಎಂಥಾ ಪುಣ್ಯವಂತರಲ್ಲವೇ ಅವರು? ಲೌಕಿಕದ ಅನುಭೂತಿಯಿಂದ ವಿಮುಕ್ತನಾಗಿ ಸರ್ವನಿಯಾಮಕನನ್ನು ಹುಡುಕಲು ಇದಕ್ಕಿಂತ ಒಳ್ಳೆಯ ಜಾಗ ಬೇರೇನಿದ್ದೀತು? ದೇವರನ್ನೇ ಹುಡುಕಬೇಕೆಂಬ ಹಠ ನನಗಿಲ್ಲ. ಆದರೆ ಇಲ್ಲಿ ಕಳೆದ ಹಲವು ಘಳಿಗೆಗಳನ್ನು ಮನತೃಪ್ತಿಯಾಗಿ ಸವಿದ ಸಾರ್ಥಕ್ಯಭಾವ ನನ್ನಲ್ಲಿದೆ.ಮತ್ತೆ ಬರುತ್ತೇನೆ. ದಣಿದ ಮನಕ್ಕೆ ಉತ್ಸಾಹದ ತಪಃಶಕ್ತಿಯನ್ನು ತುಂಬಲು!.

ಒಂಟಿತನದ ಮನೆಯಲ್ಲಿ ಬಂದಿಯಾಗಿರುವ ಎಲ್ಲರಿಗೂ ಯಾರಾದರೂ ಬಂದು ದಿವ್ಯ ಏಕಾಂತದ ಸನ್ನಿಧಿಯನ್ನು ತೋರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಆದರೆ ಅದೂ ಕಷ್ಟವಲ್ಲವೇ ? ಒಳಗಿದ್ದವರನ್ನು ಕೂಗೋಣವೆಂದರೆ ಒಂಟಿತನದ ಮನೆಗೆ ಕಿಟಕಿಗಳೇ ಇಲ್ಲವಲ್ಲ? ಏಕಾಂತದ ಸನ್ನಿಧಿಯನ್ನು ಒಳಗಿದ್ದವರೇ ಹೇಗೋ ಹುಡುಕಿಕೊಳ್ಳಬೇಕು!

3 comments:

chetana said...

ಒಂಟಿತನದ ಮನೆಗೆ ಕಿಟಕಿಗಳೇ ಇಲ್ಲ...
ಇಡಿಯ ಬರಹವೇ ಕಾಡುತ್ತಿದೆ, ಅದರಲ್ಲೂ ಈ ಕೊನೆಯ ಸಾಲು...

ಚೇತನಾ ತೀರ್ಥಹಳ್ಳಿ.

Unknown said...

ಚೇತನಾರವರೇ,
ನಿಮಗೆ ಲೇಖನ ಹಿಡಿಸಿದ್ದು ನನಗೆ ಬಹಳ ಸಂತೋಷ. ಹೀಗೆ ಬಂದು ಆಶೀರ್ವದಿಸಿ, ತಪ್ಪಿದ್ದರೆ ತಿದ್ದಿ.
ನೀವು ಪ್ರತಿಕ್ರಿಯಿಸಿದ್ದು ಇನ್ನೂ ಬರೆಯುವ ಹುಮ್ಮಸ್ಸು ತುಂಬಿದೆ. ಅನಂತ ಧನ್ಯವಾದಗಳು.

ಪ್ರಶಾಂತ ಯಾಳವಾರಮಠ said...

ಚೆನ್ನಾಗಿ ಬರೆದಿದ್ದಿರಿ
ಕರ್ನಾಟಕ ವಿಶ್ವ ವಿದ್ಯಾಲಯದ ಹಿಂದೆ ಇರುವ "ನಿಸರ್ಗಾ" ದಿಬ್ಬದ ಮೇಲೆ ಕುಳಿತು
ಅನುಬವಿಸಿದ ಎಕಾಂತದ ಆನಂದವನ್ನ ನೆನಪಿಸಿದಿರಿ
ನಿಮಗೊಂದು ತ್ಯಾಂಕ್ಸ...
ಬೆಂಗಳೂರಿಗೆ ಬಂದು ಅಂಥ್ಹ ಆನಂದವನ್ನ ಕಳೆದುಕೊಂಡಿದ್ದಿನೀ
:(:(