Thursday, February 14, 2008

ಮೆಜೆಸ್ಟಿಕ್ ಮಾಲಕಂಸ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಮಾಲಕಂಸ್ ರಾಗ ಬಹಳ ಪ್ರಚಲಿತ ರಾಗ. ಭಕ್ತಿ ಮತ್ತು ಗಂಭೀರ ರಸ ಪ್ರಧಾನವಾದ ಈ ರಾಗ, ರಾತ್ರಿ ರಾಗಗಳಲ್ಲಿ ಅತ್ಯಂತ ಜನಪ್ರಿಯ ರಾಗ ಕೂಡ. ಇದೇ ಸ್ವರ ಪ್ರಸ್ಥಾನ ಗಳುಳ್ಳ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಪದ್ಧತಿಯಲ್ಲಿ ಹಿಂದೋಳ ಎಂದೂ ಕರೆಯುತ್ತಾರೆ. ಇದೂ ಕೂಡ ಆ ಪದ್ಧತಿಯಲ್ಲಿ ಅತ್ಯಂತ ಜನಪ್ರಿಯ ರಾಗ.

ಯೂಟ್ಯೂಬಲ್ಲಿ ಹುಡುಕುತ್ತಿರುವಾಗ ಮಾಲಕಂಸ್ ರಾಗದ ಮೇಲೆ ಆಧಾರವಾದ ಎರಡು ಒಳ್ಳೆಯ ಚಿತ್ರಗೀತೆಗಳ ಕ್ಲಿಪ್ ಗಳು ಸಿಕ್ಕವು. ನನಗೆ ಇವು ತುಂಬಾ ಹಿಡಿಸಿದವು. ಬಹುಷ ಎಲ್ಲರಿಗೂ ಇಷ್ಟವಾಗಬಹುದು.

ಮೊದಲನೆಯದು ತೆಲುಗಿನ ಪ್ರಸಿದ್ಧ ಚಿತ್ರ "ಶಂಕರಾಭರಣಂ" ಚಿತ್ರದ ಹಾಡು. ತ್ಯಾಗರಾಜರ ಪ್ರಸಿದ್ಧ ಕೀರ್ತನೆಯಾದ "ಸಾಮಜ ವರಗಮನಾ", ಎಸ್. ಜಾನಕಿ ಮತ್ತು ಎಸ್.ಪಿ.ಬಿ ಯವರ ಮಧುರ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹಿಂದೋಳ ರಾಗದ ಅತ್ಯುತ್ತಮ ನಿದರ್ಶನ ಈ ಹಾಡಿನಲ್ಲಿ ಇದೆ ಅಂದರೆ ತಪ್ಪಾಗಲಾರದು. ಎಷ್ಟು ಸಲ ಕೇಳಿದರೂ, ಮತ್ತೆ ಮತ್ತೆ ಕೇಳುವಂತೆ ಮಾಡುವ ಮೋಡಿ ಈ ಹಾಡಿನಲ್ಲಿದೆ.

ಎರಡನೆಯದು, ಹಿಂದಿ ಚಿತ್ರವೊಂದರ ಹಾಡು. ಹಾಡಿನಲ್ಲಿ ಇಬ್ಬರು ಕಥಕ ನೃತ್ಯಗಾತಿಯವರ ನಡುವೆ ಸ್ಪರ್ಧೆ ನಡೆಯುತ್ತಿದೆ. ಇದು ಯಾವ ಚಿತ್ರ, ಮತ್ತು ಹಾಡಿದವರು ಯಾರು ಎಂಬುದು ಗೊತ್ತಿಲ್ಲ. ಆದರೇ ಹಾಡಿನ ಸಾಹಿತ್ಯ ಮಾತ್ರ ಮನಸೆಳೆಯುತ್ತದೆ. ಮಾಲಕಂಸ್ ರಾಗದ ಪಕಡ್ ಮತ್ತು ರಾಗದ ಸೂಕ್ತ ಪರಿಚಯವನ್ನು ಈ ಹಾಡು ಅತ್ಯಂತ ಸಮರ್ಪಕವಾಗಿ ಮಾಡಿಕೊಡುತ್ತದೆ.ಹಾಡು ಕೇಳುತ್ತಿದಂತೆಯೇ, ಮಾಲಕಂಸ್ ರಾಗದ ಮಾಧುರ್ಯ ನಿಮ್ಮನ್ನು ಮಾಯಾಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ.

ನಿಮಗೆ ಹಾಡುಗಳು ಇಷ್ಟವಾದರೆ ನಾನು ಧನ್ಯ.

7 comments:

ಶಾಂತಲಾ ಭಂಡಿ (ಸನ್ನಿಧಿ) said...

ಇಷ್ಟವಾಯ್ತು ಮಧು.

Sandeepa said...

ಅದ್ಬುತ.. ಅತ್ಯದ್ಬುತ..

Unknown said...

ಶಾಂತಲಕ್ಕ ಮತ್ತು ಸಂದೀಪ್ ಅವರೇ,
ಹಾಡುಗಳು ನಿಮಗೂ ಇಷ್ಟವಾಗಿದ್ದು ಬಹಳ ಸಂತೋಷ. ಹೀಗೆ ಪ್ರೋತ್ಸಾಹಿಸುತ್ತಾ ಇರಿ.

ತೇಜಸ್ವಿನಿ ಹೆಗಡೆ said...

ಮಧು ಕೇಳಲು ತುಂಬಾ ಇಂಪಾಗಿವೆ ಹಾಡುಗಳು.

Sree said...

ನಿಮ್ಮ ಸಂಗೀತಾಸಕ್ತಿ ನೋಡಿ ಖುಷಿಯಾಯ್ತು. ಕರ್ನಾಟಕ ಸಂಗೀತ ಪದ್ಧತಿಯಲ್ಲಿ ರಾಗದ ಹೆಸರು ’ಹಿಂದೋಳ’, "ಡ’ಕಾರ ಇಲ್ಲ:)

Unknown said...

ಶ್ರೀಯವರೆ,
ತಿದ್ದಿದಕ್ಕೆ ಧನ್ಯವಾದಗಳು. ಕ್ಷಮೆಯಿರಲಿ. ಹೀಗೆ ಬರ್ತಾ ಇರಿ.
ಅಂದ ಹಾಗೆ ಹಿಂದುಸ್ತಾನಿ ಪದ್ಧತಿಯಲ್ಲಿ ಹಿಂಡೋಳ ಅನ್ನುವ ರಾಗವೂ ಇದೆ. ಕೇಳೀದೀರಾ?
ನಿಮ್ಮ ಲೇಖನಗಳನ್ನು ಓದುತ್ತಿರುತ್ತೇನೆ. ತುಂಬಾ ಪಾಂಡಿತ್ಯ ಪೂರ್ಣವಾಗಿರುತ್ತೆ.

Vani Bhat said...

Really very nice......