Friday, January 25, 2008

ದಾಸವಾಳ ಶಳಕೆ



ಮೊನ್ನೆ ಕ್ರಿಸ್ಮಸ್ ರಜೆಯಲ್ಲಿ ಊರಿಗೆ ಹೋದಾಗ ಮೊದಲು ಕಣ್ಣಿಗೆ ಬಿದ್ದಿದ್ದು ಮನೆಯ ಅಂಗಳದ ತುದಿ ಭಾಗದಲ್ಲಿದ್ದ ಎರಡು ಕೆಂಪು ದಾಸವಾಳ ಗಿಡಗಳು. ಯಾವತ್ತೂ ಮೈತುಂಬ ಹೂ ತಳೆದು ಬೀಗುತ್ತಿರುತ್ತಿದ್ದ ಗಿಡಗಳು ಕಂದು ಬಣ್ಣಕ್ಕೆ ತಿರುಗಿ, ಎಲೆಗಳೆಲ್ಲಾ ಉದುರಿ ಹೋಗಿ, ಇನ್ನೇನು ಸಾಯುವ ಸ್ಥಿತಿಯಲ್ಲಿ ಇದ್ದವು. ಅಮ್ಮನ್ನ ಕೇಳಿದರೆ "ಅವಕೆ ಬೇರು ಹುಳ ಬಂದು ಹೋಜು. ಇನ್ನು ಬದಕದು ಎಂತದನಪಾ" ಅಂದಳು.ಯಾಕೋ ಅಂಗಳದ ಲಕ್ಷಣವೇ ಕಳೆದುಹೋಗಿದೆ ಅಂತ ಅನಿಸಿ ಮನಸ್ಸಿಗೆ ಪಿಚ್ಚೆನಿಸಿತು.


ಹದಿನೆಂಟು ವರ್ಷದ ಹಿಂದೆ ಇಲ್ಲಿ ಮನೆ ಮಾಡಿದಾಗ ಅಂಗಳದಲ್ಲಿ ಸಣ್ಣ ಹೂದೋಟ ಮಾಡಲು ಅಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಎಲ್ಲೆಲ್ಲಿಂದೋ ತಂದ ಗುಲಾಬಿ, ಡೇರೆ, ಜಿನಿಯ ಮುಂತಾದ ಗಿಡಗಳು ನೆಟ್ಟು ತಿಂಗಳೊಳಗೇ, ನಾವು ಇನ್ನೇನು ಹೂ ತಳೆಯಬಹುದು ಅನ್ನೋ ಆಸೆಯಲ್ಲಿದ್ದಾಗಲೇ ಇದ್ದಕ್ಕಿದ್ದ ಹಾಗೆ ಬಾಡಿ ಸತ್ತು ಹೋಗುತ್ತಿದ್ದವು. ಹಿಂದೆ ಇದ್ದವರು ಅತಿಯಾಗಿ ಬಳಸಿದ ರಾಸಾಯನಿಕ ಗೊಬ್ಬರದ ಪರಿಣಾಮವೋ ಅಥವ ಅಂಗಳದ ಅಂಚಿನಲ್ಲಿರುವ ಅಪ್ಪೆ ಮಾವಿನ ಮರದ ಗೊಳಲಿಗೊ ಎಷ್ಟು ಮುತುವರ್ಜಿಯಿಂದ ನೋಡಿಕೊಂಡರೂ ಹೂಗಿಡಗಳು ಬಹಳ ದಿನ ಬಾಳುತ್ತಿರಲಿಲ್ಲ. ಈ ನಿರಾಶೆಯ ನಡುವೆಯೂ, ಅಜ್ಜನ ಮನೆಯಿಂದ ತಂದು ನೆಟ್ಟಿದ್ದ ಎರಡು ಕೆಂಪು ದಾಸವಾಳ ಗಿಡಗಳು ಮಾತ್ರ ಯಾವುದೇ ಆರೈಕೆಯೇ ಇಲ್ಲದೇ ಸೊಂಪಾಗಿ ಬೆಳೆದುನಿಂತು ಅಮ್ಮನ ಅಸಹನೆಯನ್ನು ಹೆಚ್ಚು ಮಾಡುತ್ತಿದ್ದವು. " ಇವು ನೋಡು, ಎಂತದೂ ವಾಗಾತಿ ಇಲ್ದೆ ಹ್ಯಾಂಗೆ ಬೆಳೆದ್ ನಿಂತಿದ್ದು ಹೇಳಿ" ಅಂತ ಆಗಾಗ ಹೇಳ್ತಾನೆ ಇರೋರು. ನಮಗೂ ಕೂಡ ಬಹುಶಃ ಗುಲಾಬಿ, ಡೇರೆ ಮುಂತಾದ ಬಣ್ಣ ಬಣ್ಣದ ಹೂಗಳ ಮುಂದೆ ದಾಸವಾಳದ ಆಕರ್ಷಣೆ ಸ್ವಲ್ಪ ಕಡಿಮೆಯೇ ಅನಿಸುತ್ತಿತ್ತು. ಆದರೆ ಬೆಳೆದಂತೆಲ್ಲ ಎರಡೂ ಗಿಡಗಳು ಎಲೆಗಳೇ ಕಾಣದಂತೆ ಮೈತುಂಬಾ ಹೂಗಳನ್ನು ತಳೆಯತೊಡಗಿದವು. ಬೆಳಿಗ್ಗೆ ಎದ್ದು ಮನೆ ಮುಂದಿನ ಬಾಗಿಲು ತೆರೆದು ನೊಡಿದರೆ ಅಂಗಳದ ತುದಿಗೆ ಕೆಂಡ ಸುರಿಯುತ್ತಿದೆಯೋ ಅನ್ನುವಂತೆ ಭಾಸವಾಗುತ್ತಿತ್ತು. ಅಂಗಳದ ತುದಿಯಲ್ಲಿ ಎರಡೂ ದಿಕ್ಕಿನಲ್ಲಿ ದೃಷ್ಟಿ ಬೊಟ್ಟಿನ ತರಹ ದಾಸವಾಳ ಗಿಡಗಳು ನಳನಳಿಸುತ್ತಿದ್ದವು. ದಿನವೂ ಬೆಳಿಗ್ಗೆ ಎದ್ದು ದೇವರ ಪೂಜೆಗೆ ಹೂ ಕೊಯ್ಯಲು ಹೋಗುತ್ತಿದ್ದ ನನಗೆ ಈ ಎರಡು ದಾಸವಾಳ ಗಿಡಗಳು ಅಕ್ಷಯ ಪಾತ್ರೆಗಳಂತೆ ಕಂಡಿದ್ದು ಸುಳ್ಳಲ್ಲ. ಎರಡು ಗಿಡಗಳಲ್ಲಿ ಒಂದನ್ನು ಆಯ್ದುಕೊಂಡು ನನ್ನ ಕೈಗೆ ಎಟುಕುತ್ತಿದ್ದ ಹೂವುಗಳನ್ನು ಕಿತ್ತು ಬುಟ್ಟಿಗೆ ಹಾಕುತ್ತಿದಂತೇ ನಿಮಿಷಾರ್ಧದಲ್ಲಿ ಹೂಬುಟ್ಟಿ ತುಂಬಿರುತಿತ್ತು. ನನ್ನ ಬೆಳಗ್ಗಿನ ಶ್ರಮವನ್ನು ಎಷ್ಟೊ ಕಡಿಮೆ ಮಾಡುತ್ತಿದ್ದ ಆ ಗಿಡಗಳ ಬಗ್ಗೆ ಸಹಜವಾಗಿ ನನಗೆ ಅಭಿಮಾನವಿತ್ತು.


ಆದರೆ ಈ ಕೆಂಪು ದಾಸವಾಳ ಗಿಡಗಳು ಅಚ್ಚಳಿಯದಂತೆ ನನ್ನ ಸ್ಮೃತಿಪಟಲದಲ್ಲಿ ದಾಖಲಾಗಲು ಇನ್ನೊಂದು ಬಲವಾದ ಕಾರಣವಿದೆ. ಚಿಕ್ಕವನಿದ್ದಾಗ ಸ್ವಲ್ಪ ಜಾಸ್ತಿನೇ ತುಂಟನಾಗಿದ್ದ ನನ್ನನ್ನು ಹೆದರಿಸಲು ಮತ್ತು ಶಿಕ್ಷಿಸಲು ಅಮ್ಮ ಉಪಯೋಗಿಸುತ್ತಿದ್ದಿದ್ದು ಆ ಕೆಂಪು ದಾಸವಾಳ ಗಿಡಗಳ ಸಣ್ಣ ರೆಂಬೆಯನ್ನು. ಇನ್ನೂ ಚಿಗುರು-ಚಿಗುರಾಗಿರುವ ಗಿಡದ ತುದಿಯನ್ನು ಒಂದು ಅಡಿಯಷ್ಟು ಮುರಿದು, ಬುಡದಲ್ಲಿರುವ ಎಲೆಗಳನ್ನು ಕಿತ್ತಿದರೆ "ಶಳಕೆ" ರೆಡಿ. ಉದ್ದಕ್ಕೆ, ಸಪೂರವಾಗಿ ಇರುತ್ತಿದ್ದ ಈ ಶಳಕೆಯಿಂದ ಕಾಲ ಮೇಲೆ ಬಿದ್ದ ಹೊಡೆತಗಳು ಅಸಾಧ್ಯ ಉರಿಯನ್ನು ಉಂಟು ಮಾಡುತ್ತಿದ್ದವು.ಆಗಾಗ ಹೋಮ್ ವರ್ಕ್ ಮಾಡಲು ನಿರಾಕರಿಸುತ್ತಿದ್ದ ಅಥವಾ ಅಕ್ಕನ ಜೊತೆ ಜಗಳ ಮಾಡುತ್ತಿದ್ದ ನಾನು, ಅಮ್ಮ "ಶಳಕೆ ಮುರ್ಕಂಡು ಬರ್ತಿ ನೋಡು" ಅಂದ ಕೂಡ್ಲೆ ನೆಟ್ಟಗಾಗಿ ಬಿಡುತ್ತಿದ್ದೆ. ಆದರೂ ಕೂಡ ಒಮ್ಮೊಮ್ಮೆ ನನ್ನ ತುಂಟತನ ಮಿತಿ ಮೀರಿದಾಗ, ಅಮ್ಮ ತಾಳ್ಮೆ ಕಳೆದುಕೊಂಡು ಶಳಕೆಯ ರುಚಿ ಮುಟ್ಟಿಸುತ್ತಿದ್ದರು. ಅಮ್ಮ ಶಳಕೆ ಮುರಿದುಕೊಂಡು ಬರಲು ದಾಸವಾಳ ಗಿಡದ ಕಡೆ ಹೋಗುತ್ತಿದ್ದಂತೆಯೇ, ಶಳಕೆ ಉಂಟು ಮಾಡಬಹುದಾದ ಉರಿಯ ಅನುಭವವಿದ್ದ ನಾನು ಅಳಲು ಶುರು ಮಾಡಿ ಬಿಡುತ್ತಿದ್ದೆ (ಬಹುಶಃ ಅದು ಜಾಸ್ತಿ ಹೊಡೆತಗಳಿಂದ ತಪ್ಪಿಸಿಕೊಳ್ಳಲು ಮಾಡುತ್ತಿದ್ದ ಉಪಾಯ ಕೂಡ ಆಗಿತ್ತು ಅನ್ನಿಸುತ್ತೆ). ಆದರೆ ಅಮ್ಮ ಬಿಡುತ್ತಿರಲಿಲ್ಲ. ಛಬಕ್, ಛಬಕ್ ಅಂತ ನಾಲ್ಕು ಸಲ ಬೀಸುವುದೊರೊಳಗೆ ನನ್ನ ಸುಕೋಮಲ (?) ಚರ್ಮಕ್ಕೆ ತಾಗಿ ಶಳಕೆ ಚೂರು ಚೂರಾಗಿ ಮುರಿದು ಹೋಗುತ್ತಿತ್ತು. ಆ ಕ್ಷಣಕ್ಕೆ ತುಂಬಾ ಉರಿಯೆನಿಸಿದರೂ, ಶಳಕೆಯ ನೋವಿನ ಪ್ರಭಾವ ಬಹಳ ಹೊತ್ತು ಇರುತ್ತಿರಲಿಲ್ಲ. ಆದರೂ ಎಷ್ಟೋ ಸಲ ಸಿಟ್ಟು ಬಂದು, ದಾಸವಾಳ ಗಿಡದ ಎಳೆ ರೆಂಬೆಗಳನ್ನೆ ಮುರಿದು ಹಾಕಿ ಬಿಡುತ್ತಿದ್ದೆ ನಾನು. ಏಳೆ ರೆಂಬೆಗಳು ಇದ್ದರೆ ತಾನೆ ಅಮ್ಮನಿಗೆ ಶಳಕೆ ಮಾಡಲಿಕ್ಕೆ ಆಗೋದು ? (ಆಗೆಲ್ಲ ಕತ್ತಿ ಮುಂತಾದ ಸಲಕರಣೆಗಳು ನನ್ನ ಕೈಗೆ ಸಿಲುಕದಂತೆ ಇಟ್ಟಿರೋರು. ಇಲ್ಲದೆ ಹೋದ್ರೆ ಬಹುಶಃ ಗಿಡಗಳಿಗೆ ಇನ್ನೂ ಹೆಚ್ಚಿನ ಹಾನಿ ಮಾಡ್ತಿದ್ದೆ ಅನ್ಸುತ್ತೆ). ದಾಸವಾಳ ಗಿಡಗಳು ಮಾತ್ರ ತಮಗೇನೂ ಆಗೇ ಇಲ್ಲದ ಹಾಗೆ, ಅವೂ ಕೂಡ ನನ್ನ ಮೇಲೆ ಸೇಡು ತೀರಿಸಿಕೊಳ್ಳುವ ಹುನ್ನಾರದಿಂದ ಅಮ್ಮನ ಜೊತೆ ಶಾಮೀಲಾಗಿವೆ ಎನಿಸುವಂತೆ ೧೫ ದಿನಕ್ಕೆ ಮತ್ತೆ ಚಿಗುರಿ ನಿಲ್ಲುತ್ತಿದ್ದವು.


ಶಳಕೆಯ ಮಾತು ಬಂದಾಗೆಲ್ಲ ನನಗೆ ಇನ್ನೊಂದು ಅನುಭವ ನೆನಪಿಗೆ ಬರುತ್ತೆ. ಚಿಕ್ಕವರಿದ್ದಾಗ ನನಗೆ ಹಾಗು ನನ್ನ ಅಕ್ಕನಿಗೆ ಕನ್ನಡ ವರ್ಣಮಾಲೆಯ "ಆ" ಅಕ್ಷರ ಸರಿಯಾಗಿ ಬರೆಯಲು ಬರುತ್ತಿರಲಿಲ್ಲ. ಅದೇನು ಕಾರಣವೋ ಗೊತ್ತಿಲ್ಲ ಆದ್ರೆ ನಮ್ಮಿಬ್ಬರಿಗೂ ಆ ತೊಂದರೆ ಇದ್ದಿದ್ದು ಮಾತ್ರ ನಿಜ. ಅಮ್ಮ ಎಷ್ಟೊ ಸಲ ತಿದ್ದಿಸಿದರೂ, ಸರಾಸರಿಯಾಗಿ ೪ ರಲ್ಲಿ ೩ ಸಲ ನಾವು ತಪ್ಪು ಬರೆದು ಅಮ್ಮನ ಸಹನೆಯನ್ನು ಪರೀಕ್ಷಿಸುತ್ತಿದ್ದೆವು. ಅಕ್ಕನ ಜೊತೆ ಹೇಗೊ ಏಗಿ ಏಗಿ ಹೈರಾಣಾಗಿದ್ದ ಅಮ್ಮ ನಾನೂ ಅದೇ ತಪ್ಪು ಮಾಡಲು ಶುರು ಮಾಡಿದ ಕೂಡಲೆ (ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅಂತಾರಲ್ಲ ಹಾಗೆ) ನಿಜವಾಗಿಯೂ ನಿರಾಶರಾಗಿರಬೇಕು. ಹಾಗಂತ ಬರೆಯಲು ಬರ್ತಾನೇ ಇರ್ಲಿಲ್ಲ ಅಂತೇನಿಲ್ಲ ಆದರೆ ಪದೇ ಪದೇ ತಪ್ಪು ಮಾಡುತ್ತಿದ್ವಿ. ಅಮ್ಮ ಬೇರೇನೂ ಉಪಾಯ ಕಾಣದೆ ಶಳಕೆಯ ಮೊರೆ ಹೋಗುತ್ತಿದ್ದರು. ತಮಾಶೆಯ ವಿಷಯ ಅಂದ್ರೆ ೪ ಶಳಕೆಯ ಏಟು ಬಿದ್ದ ಕೂಡಲೆ ಅಕ್ಕ ಅಳ್ತಾ ಅಳ್ತಾ ಸರಿಯಾಗಿ "ಆ" ಬರೆಯುತ್ತಿದ್ದಳಂತೆ (ಎಂಥಾ ಮಹಿಮೆ ನೋಡಿ ಶಳಕೆದು). ಸಹಜವಾಗಿ ಅವಳು ಜಾಸ್ತಿ ಶಳಕೆಯೇಟು ತಿಂದಿದ್ದಾಳೆ. ಅಮ್ಮ ಅದೇ ಪ್ರಯೋಗವನ್ನು ನನ್ನ ಮೇಲೆ ಪ್ರಯತ್ನಿಸಿದಾಗ ನಾನು ಏಟು ಬಿದ್ದಷ್ಟೂ ಅಳು ಜಾಸ್ತಿ ಮಾಡುತ್ತಿದ್ದನೆ ಹೊರತೂ "ಆ" ವನ್ನು ಸರಿಯಾಗಿ ಬರೆಯುತ್ತಿರಲಿಲ್ಲ. ಸರಿ, ಅಮ್ಮ "ಇದು ಉದ್ಧಾರ ಆಗೋ ಜಾತಿ ಅಲ್ಲ" ಅನ್ಕೊಂಡು ಹೊಡೆಯೋದನ್ನು ನಿಲ್ಲಿಸುತ್ತಿದ್ದರು. ಹಾಗಾಗಿ ಅಕ್ಕನಿಗೆ ಹೋಲಿಸಿದರೆ ನಾನು ಸ್ವಲ್ಪ ಜಾಸ್ತಿ ಅದೃಷ್ಟವಂತ ಅಂತಾನೇ ಅನ್ನಬಹುದು. ಈಗಲೂ ಅಕ್ಕ ಮಾತಿಗೆ ಮಾತು ಬಂದಾಗ "ಮಾಣಿ, ನಾನು ತಿಂದಿದ್ರ ಅರ್ಧದಷ್ಟು ಹೊಡ್ತಾ ನೀನು ತಿಂಜಿಲ್ಲೆ" ಅಂತಾ ಹೇಳೋದಿದೆ.


ನಮಗೆ ಹೋಲಿಸಿದರೆ, ಈಗಿನ ತಲೆಮಾರಿನ ಮಕ್ಕಳು ಸ್ವಲ್ಪ ಅದೃಷ್ಟವಂತರು ಅನ್ನಿಸುತ್ತೆ. ನಾನು ನೋಡಿರೊ ಪ್ರಕಾರ ಈಗಿನ ಕಾಲದ ಮಕ್ಕಳು ನಮ್ಮಷ್ಟು ಹೊಡೆತ ತಿನ್ನಲ್ಲ. ಬಹುಷಃ ಈಗಿನ ಪೋಷಕರಲ್ಲಿ ಜಾಸ್ತಿ ತಾಳ್ಮೆ ಇರಬೇಕು. ಅಲ್ಲದೇ ಬಹಳಷ್ಟು ಸಂಸಾರಗಳಲ್ಲಿ ಒಂದೇ ಮಗು ಇದ್ದು ಅಕ್ಕ-ತಮ್ಮ, ಅಣ್ಣ-ತಂಗಿ ಹೀಗೆ ಇದ್ದಾಗ ಸೃಷ್ಟಿಸೋ ಅಸಾಧ್ಯ ಗಲಾಟೆಗಳು, ತರಲೆಗಳು ಕಮ್ಮಿ ಆಗುತ್ತಿರಬೇಕು. ಇಷ್ಟೆಲ್ಲಾ ಏಟುಗಳನ್ನ ತಿಂದ್ರೂ ನಮಗೆ ಯಾವತ್ತೂ ನಮ್ಮಮ್ಮ ಅತಿಯಾಗಿ ಅಥವಾ ಅವಶ್ಯಕತೆ ಇಲ್ಲದೆ ದಂಡಿಸುತ್ತಿದ್ದರೆಂದು ಅನ್ನಿಸುತ್ತಿರಲ್ಲಿಲ್ಲ. ಈಗಲೂ ಅನ್ನಿಸಲ್ಲ. ನಮ್ಮ ತುಂಟಾಟಗಳನ್ನು ಮಿತಿಯಲ್ಲಿ ಇಡಲು, ಶಿಸ್ತುಬದ್ಧವಾದ ಜೀವನವನ್ನು ಮೈಗೂಡಿಸಿಕೊಳ್ಳಲು ಅದು ಆಗ ಅವಶ್ಯಕವಾಗಿತ್ತು ಅಂತಾನೆ ನನ್ನ ಅಭಿಪ್ರಾಯ.


ಇನ್ನೇನು ಸಾಯೋ ಸ್ಠಿತಿಯಲ್ಲಿರುವ ಕೆಂಪು ದಾಸವಾಳ ಗಿಡಗಳನ್ನು ನೋಡಿದ ಕೂಡಲೆ, ಹಿಂದಿನ ನೆನಪುಗಳೆಲ್ಲಾ ಒತ್ತರಿಸಿಕೊಂಡು ಬಂದವು. ಮನೆ ಅಂಗಳದಿಂದ ಶಾಶ್ವತವಾಗಿ ಕಣ್ಮರೆಯಾದರೂ ನನ್ನ ಮನಸ್ಸಿನಂಗಳದ ಮೂಲೆಯಲ್ಲೆಲ್ಲೋ ಆ ಎರಡು ದಾಸವಾಳ ಗಿಡಗಳು ಶಳಕೆಯ ಪ್ರಭಾವದಿಂದ ಹಚ್ಚ ಹಸಿರಾಗಿ ನಿಲ್ಲುವುದರಲ್ಲಿ ಸಂಶಯವೇ ಇಲ್ಲ.

3 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಧು...

"ಬ್ಲಾಗ್ ಮಂಡಲ"ಕ್ಕೆ ಸ್ವಾಗತ. ಮನೆಯಂಗಳ,ದಾಸವಾಳದ ಗಿಡ, ಅದರ ಶಳಕೆ, ನೆನಪಿನಂಗಳ, ಅಲ್ಲಿ ಮತ್ತೆ ಹಸಿರಾಗಿ ನಿಂತ ದಾಸವಾಳದ ಗಿಡ, ಹೂವು, ಅಮ್ಮ, ಅಕ್ಕ, ಆ ಬರೆದ ನೆನಪು... ವಾವ್, ಎಲ್ಲವೂ ಚೆನ್ನಾಗಿವೆ.
ದಾಸವಾಳದ ಗಿಡದ ನೆನಪಿಂದ ಶುರುವಾದ ನೆನಪಿನ ಸಸಿಗಳನ್ನೆಲ್ಲ ತಂದು ನೆಟ್ಟು ಇಲ್ಲಿ ಬೆಳೆಸುತ್ತಿರು.

Unknown said...

ಒಳ್ಳೇ ಪ್ರೋತ್ಸಾಹದ ಮಾತುಗಳಿಗೆ ತುಂಬಾ ಥ್ಯಾಂಕ್ಸ್ ಅಕ್ಕಾ. ಬರೆದಿದ್ದನೆಲ್ಲ ಹೀಗೆ ಓದಿ ಪ್ರೋತ್ಸಾಹಿಸುತ್ತಾ ಇರಿ.
~ಮಧು

ತೇಜಸ್ವಿನಿ ಹೆಗಡೆ said...

ಮಧುಸೂದನ್...

ನಿಮ್ಮ ದಾಸವಾಳ ಶಳಕೆ ತುಂಬಾ ಚೆನ್ನಾಗಿದೆ. ಗಣಪತಿಗೆ ಬಲು ಇಷ್ಟವಾದದ್ದು ಕೆಂಪು ದಾಸವಾಳ. ವಿಘ್ನಹರನಾದ ಅವನ ಆಶೀರ್ವಾದದಿಂದ ನಿಮ್ಮ ಬರವಣಿಗೆಯೂ ಅವ್ಯಾಹತವಾಗಿ ಸಾಗಲಿ ಎಂದು ಹಾರೈಸುವೆ. ಬರೆಯುತ್ತಿರಿ.