Wednesday, March 17, 2010

ಸಂದಿಗ್ಧ

ಹಾಸಿಗೆಗೆ ತಲೆ ಕೊಟ್ಟರೆ ಸಾಕು, ಒತ್ತರಿಸಿಕೊಂಡು ಬರುವಷ್ಟು ನಿದ್ದೆ. ಒಂದು ವಾರದಿಂದ ಆಫೀಸ್ ಕೆಲಸದ ಒತ್ತಡ, ಡೆಡ್ ಲೈನಿನ ಆತಂಕ ಎಲ್ಲಾ ಸೇರಿ ತಲೆ ಚಿಟ್ಟು ಹಿಡಿದು ಹೋಗಿತ್ತು. ಇವತ್ತು ಸ್ವಲ್ಪ ನಿರಾಳ. ಅದಕ್ಕೇ ಇಷ್ಟೊಂದು ನಿದ್ದೆ ಬರ್ತಾ ಇರಬೇಕು. ಇನ್ನೇನು ದಿಂಬಿಗೆ ತಲೆ ಕೊಡಬೇಕು, ಅಷ್ಟರಲ್ಲೇ ಮಗಳು ಒಂದು ನೋಟ್ ಬುಕ್ ಹಿಡಿದುಕೊಂಡು ಬಂದಳು. "ಅಪ್ಪಾ, ವಿವೇಕಾನಂದರ ಬಗ್ಗೆ ಒಂದು ಭಾಷಣ ಬರ್ದುಕೊಡು, ಪ್ಲೀಸ್. ನಾಡಿದ್ದು ನಮ್ಮ ಸ್ಕೂಲಲ್ಲಿ ಕಾಂಪಿಟೇಶನ್ ಇದೆ. ನಾನು ಹೆಸ್ರು ಕೊಟ್ಟಿದ್ದೀನಿ" ಅಂತ. ಅವಳಿಗೂ ನಿದ್ದೆ ಜೋರಾಗಿ ಬಂದಿದೆ ಅಂತ ಅವಳ ಕಣ್ಣುಗಳೇ ಹೇಳುತ್ತಿದ್ದವು. ಸಾಮಾನ್ಯವಾಗಿ ಒಂಬತ್ತೂವರೆಗೆಲ್ಲಾ ಮಲಗುವವಳು ಇವತ್ತು ನನಗಾಗಿ ಹತ್ತು ಘಂಟೆಯ ತನಕ ಕಾಯ್ದಿದ್ದಾಳೆ.

ನಾನು ತಕ್ಷಣಕ್ಕೆ ಏನೂ ಹೇಳಲಿಲ್ಲ. ಮನಸ್ಸೆಲ್ಲ ಖಾಲಿ ಖಾಲಿ. ನಾನು ಸುಮ್ಮನಿದ್ದುದನ್ನು ನೋಡಿ ಅವಳೇ ಶುರು ಮಾಡಿದಳು. "ಮೊನ್ನೆನೇ ಹೇಳಿದ್ರು ಸ್ಕೂಲಲ್ಲಿ. ಅಮ್ಮ ಹೇಳಿದ್ರು, ನೀನು ಚೆನ್ನಾಗಿ ಭಾಷಣ ಬರ್ದುಕೊಡ್ತೀಯಾ ಅಂತ. ಮೊನ್ನೆಯಿಂದ ನೀನು ಸಿಕ್ಕೇ ಇಲ್ಲಾ ನನಗೆ. ಅಮ್ಮಾ ನಂಗೆ ಪ್ರಾಮಿಸ್ ಮಾಡಿದ್ರು ನಿನ್ನೆನೇ ಬರೆಸಿ ಕೊಡ್ತಿನಿ ಅಂತ. ಇವತ್ತಾದ್ರೂ ರೆಡಿ ಆಗಿಲ್ಲ, ಏನು ಮಾಡ್ಲಿ ನಾನು?". ಅವಳ ಜೋಲು ಮೋರೆ ನೋಡಿ ನನಗೆ ತುಂಬಾ ಬೇಜಾರಾಯ್ತು. "ವಿವೇಕಾನಂದರ ಬಗ್ಗೆ ತುಂಬಾ ಗೊತ್ತು ನಿಂಗೆ ಅಂತ ಅಮ್ಮ ಹೇಳಿದ್ಳು. ಈಗ ಒಂದು ೧೦ ನಿಮಿಷದಲ್ಲಿ ಬರೆದು ಕೊಡಕ್ಕೆ ಆಗಲ್ವಾ?" ಒಂದು ಮುಗ್ಧ ಪ್ರಶ್ನೆ!. ನಾನು ನಿಟ್ಟುಸಿರು ಬಿಟ್ಟೆ. ಮಧ್ಯದಲ್ಲಿ ಇವಳದ್ದು ಸಂಧಾನ. "ಪುಟ್ಟಿ, ಅಪ್ಪಂಗೆ ತುಂಬಾ ಸುಸ್ತಾಗಿದೆ ಇವತ್ತು, ನಾಳೆ ಬರೆದುಕೊಟ್ರೆ ಆಗಲ್ವಾ?". "ನಾಳೆ ಬರೆದುಕೊಟ್ಟರೆ ನಾನು ಪ್ರಿಪೇರ್ ಆಗೋದು ಯಾವಾಗ?, ನಾಡಿದ್ದೇ ಕಾಂಪಿಟೇಶನ್ನು" ಅವಳ ಸಂದಿಗ್ಧ!. ಕೊನೆಗೆ ನಾನೇ ಸೂಚಿಸಿದೆ. "ಒಂದು ಕೆಲ್ಸ ಮಾಡೋಣ ಪುಟ್ಟೀ, ನಾಳೆ ಬೆಳಿಗ್ಗೆ ಬೇಗ ಎದ್ದು ಬರೆದುಕೊಡ್ತೀನಿ ಆಯ್ತಾ? ನಾಳೆನೆಲ್ಲಾ ನೀನು ಪ್ರಿಪೇರ್ ಆಗಬಹುದು." ಈಗ ಸ್ವಲ್ಪ ಗೆಲುವಾಯ್ತು ಅವಳ ಮುಖ. "ಮರೀಬೇಡಿ ಅಪ್ಪಾ ಬೆಳಿಗ್ಗೆ, ಗುಡ್ ನೈಟ್" ಅಂತ ವಾಪಾಸ್ ಹೋದಳು.

"ನೀನ್ಯಾಕೆ ಮುಂಚೆನೇ ಹೇಳ್ಲಿಲ್ಲ ನಂಗೆ?" ನಾನು ಹೆಂಡತಿಯ ಮೇಲೆ ರೇಗಿದೆ. "ಸುಮ್ನೆ ನನ್ನ ಮೇಲೆ ಕೂಗ್ಬೇಡಿ ನೀವು. ನಿಮಗೆಲ್ಲಿ ಟೈಮ್ ಇತ್ತು? ದಿನಾ ರಾತ್ರಿ ಎಷ್ಟು ಗಂಟೆಗೆ ಬರ್ತಿದೀರಾ ಅಂತ ಗೊತ್ತು ತಾನೇ ನಿಮಗೆ? ನಿಮಗಿರೋ ಟೆನ್ಷನ್ನಲ್ಲಿ ಇದೊಂದು ಬೇರೆ ಕೇಡು ಅಂತ ಹೇಳ್ಲಿಲ್ಲ ನಾನು." ಅವಳಿಗೂ ರೇಗಿರಬೇಕು. ಸುಮ್ಮನೆ ಹಾಸಿಗೆ ಮೇಲೆ ಬಿದ್ದುಕೊಂಡೆ. ಒಂತರಾ ಅಸಹಾಯಕತನ, ಬೇಜಾರು, ದುಃಖ ಎಲ್ಲವೂ ಆವರಿಸಿಕೊಂಡಿತು ನನ್ನನ್ನು. ನಿದ್ದೆ ಸಂಪೂರ್ಣವಾಗಿ ಹಾರಿಹೋಗಿತ್ತು. ಮಗಳಿಗಾಗಿ ದಿನಕ್ಕೆ ಒಂದು ಅರ್ಧ ತಾಸಾದರೂ ಮೀಸಲಿಡಲು ನನಗೇಕೆ ಸಾಧ್ಯವಾಗುತ್ತಿಲ್ಲ? ಇತ್ತೀಚೆಗಂತೂ ಆಫೀಸಿಗೆ ಹೋದ ಮೇಲೆ ಮನೆ ಕಡೆ, ಮನೆಯವರ ಕಡೆ ಒಂಚೂರೂ ಗಮನ ಕೊಡಲೇ ಆಗುತ್ತಿಲ್ಲ, ಅಷ್ಟೆಲ್ಲ ಒತ್ತಡ. ನಿಜಕ್ಕೂ ಇಷ್ಟೆಲ್ಲಾ ಒತ್ತಡದಲ್ಲಿ ಕೆಲಸ ಮಾಡಲೇ ಬೇಕಾ? ಅಥವಾ ವಿನಾಕಾರಣ ನಾನೇ ಕೆಲಸಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೇನಾ? ಒಂದೂ ತಿಳಿಯುತ್ತಿಲ್ಲ. "ನೀನು ಕೆಲಸ ಮತ್ತು ಸಂಸಾರ ಎರಡನ್ನೂ ನಿಭಾಯಿಸುವುದರಲ್ಲಿ ಸೋತಿದ್ದೀಯಾ" ಎಂದು ಮನಸ್ಸು ಪದೇಪದೇ ಹೇಳಲು ಶುರುಮಾಡಿತು. ಸುಮ್ಮನೆ ತಲೆಕೊಡವಿದೆ.

ಹಾಸಿಗೆಯ ಮೇಲೆ ಬಿದ್ದುಕೊಂಡೇ ಯೋಚಿಸಲು ಶುರುಮಾಡಿದೆ. ಮನಸ್ಸು ಬೇಡವೆಂದರೂ ಹಿಂದೆ ಓಡಿತು. ನಾವು ಚಿಕ್ಕವರಿದ್ದಾಗ ಪ್ರತೀ ಸಲ ಸ್ವಾತಂತ್ರೋತ್ಸವಕ್ಕೂ, ಗಣರಾಜ್ಯ ದಿನದಂದೂ ಅಪ್ಪ ತಪ್ಪದೇ ಭಾಷಣ ಬರೆದುಕೊಡುತ್ತಿದ್ದರು. ಅದನ್ನು ಬಾಯಿಪಾಠ ಮಾಡಿಕೊಂಡು ಹೋಗಿ ನಾವು ಶಾಲೆಯಲ್ಲಿ ಹೇಳುತ್ತಿದ್ದೆವು. ಹೈಸ್ಕೂಲ್ ಗೆ ಬಂದ ಮೇಲೆ ಪ್ರತೀ ವರ್ಷವೂ ಮಾರಿಗುಡಿಯಲ್ಲಿ ಆಗುವ ನವರಾತ್ರಿ ಸ್ಪರ್ಧೆಯಲ್ಲಿ ಖಾಯಂ ಆಗಿ ಅಪ್ಪ ಬರೆದುಕೊಟ್ಟ ಪ್ರಬಂಧವನ್ನು ಬರೆದು ನಾನು ಪ್ರೈಜ್ ಗೆದ್ದಿದ್ದೆ. ಸ್ಕೂಲ್ ಮತ್ತು ಹೈಸ್ಕೂಲಿನಲ್ಲಿ ಆಗುವ ಯಾವುದೇ ತರಹದ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅಪ್ಪ ನಮ್ಮನ್ನು ಯಾವಾಗಲೂ ಹುರಿದುಂಬಿಸುತ್ತಿದ್ದರು, ಅಲ್ಲದೇ ತಾವು ಜೊತೆಗೆ ಕುಳಿತು ಸಹಾಯಮಾಡುತ್ತಿದ್ದರು. ಅವರೂ ಶಾಲಾ ಶಿಕ್ಷಕರಾಗಿದ್ದುದು ಇವಕ್ಕೆಲ್ಲ ಮೂಲ ಪ್ರೇರಣೆಯಾಗಿದ್ದಿರಬೇಕು, ಆದರೆ ಈಗ ಯೋಚಿಸಿದರೆ ಅವರ ಶೃದ್ಧೆ ಮತ್ತು ಉತ್ಸಾಹ ಬೆರಗು ಹುಟ್ಟಿಸುವಷ್ಟು ಅಸಾಧಾರಣವಾಗಿತ್ತು. ಪ್ರತೀ ವರ್ಷ ನಡೆಯುವ ವಿಜ್ಞಾನ ಮಾದರಿ ನಿರ್ಮಾಣ ಸ್ಪರ್ಧೆಯಲ್ಲಿ ಅವರು "ನೂಕ್ಲಿಯರ್ ರಿಯಾಕ್ಟರ್’ ಅಥವಾ ’ಗೋಬರ್ ಗ್ಯಾಸ್" ಮಾಡೆಲ್ ಮಾಡಿಕೊಡುವಾಗ ತೆಗೆದುಕೊಂಡ ಶ್ರಮ, ಉತ್ಸಾಹ, ಅಲ್ಲದೆ ಅವು ಹೇಗೆ ಕೆಲಸಮಾಡುತ್ತವೆ ಎಂಬುದರ ವಿವರಣೆ ಇಂದಿಗೂ ನನ್ನ ಕಣ್ಣ ಮುಂದಿದೆ. ಅವಕ್ಕೆಲ್ಲ ಪ್ರಥಮ ಸ್ಥಾನ ಬಂದಾಗ ನನಗಾದ ಸಂತೋಷ, ಮಾತುಗಳಲ್ಲಿ ಹಿಡಿಸಲಾರದಷ್ಟು!. ದಿನಪತ್ರಿಕೆಗಳಲ್ಲಿ ಬರುವ ಪದಬಂಧವನ್ನು ಬಿಡಿಸುವಾಗಲೆಲ್ಲ ಅವರು ನನ್ನನ್ನು ಕರೆದು ಹತ್ತಿರ ಕುರಿಸಿಕೊಳ್ಳುತ್ತಿದ್ದರು. ಅಲ್ಲದೆ ಆ ಶಬ್ದಗಳು ಹೇಗೆ ಉದ್ಭವವಾದವು ಎಂಬುದನ್ನೂ ವಿವರಿಸುತ್ತಿದ್ದರು. ಅವರ ಶಾಲಾ ಲೈಬ್ರರಿಯಿಂದ ಹಲವಾರು ಒಳ್ಳೆಯ ಕನ್ನಡ ಪುಸ್ತಕಗಳನ್ನು ತಂದು ಕೊಡುತ್ತಿದ್ದರು. ನಮ್ಮ ರಜಾಕಾಲದ ಬಹುಪಾಲನ್ನು ನಾವು ಅವನ್ನು ಓದಿಕಳೆಯುತ್ತಿದ್ದೆವು. ಹೀಗೆ ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಎಲ್ಲವನ್ನೂ ಅವರು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದರು.

ಹಾಗಾದರೆ ನಮ್ಮ ಪಾಲಕರು ನಮಗೆ ಮೀಸಲಿಟ್ಟಷ್ಟು "ಕ್ವಾಲಿಟಿ ಟೈಮ್", ನಾವು ನಮ್ಮ ಮಕ್ಕಳಿಗೆ ಕೊಡುವುದು ಅಷ್ಟು ಕಷ್ಟವೇ? ನಾವೇ ಸೃಷ್ಟಿಸಿಕೊಂಡ ಅಥವಾ ನಮ್ಮ ಕೆಲಸದ ರೀತಿಯ ಮಾನಸಿಕ ಒತ್ತಡ, ರಸ್ತೆ ಟ್ರಾಫಿಕ್ಕಲ್ಲೇ ದಿನಕ್ಕೆ ಮೂರು ನಾಲ್ಕು ತಾಸು ಕಳೆಯುವ ಅನಿವಾರ್ಯತೆ, ನಮ್ಮಲ್ಲಿರುವ ಆಸಕ್ತಿ ಅಥವಾ ಶೃದ್ಧೆಯ ಕೊರತೆ ಇವೆಲ್ಲವೂ ಇದಕ್ಕೆ ಕಾರಣವಿರಬಹುದಾ?. ಕಾರಣ ಯಾವುದೇ ಇರಬಹುದು, ಆದರೆ ತಲೆಮಾರಿನಿಂದ ತಲೆಮಾರಿಗೆ ಹೀಗೆ ಅಭಿರುಚಿಗಳು ಮತ್ತು ಆಸಕ್ತಿಗಳು ಸೋರಿಹೋಗುತ್ತಾ ಇದ್ದರೆ ಮುಂದೆ ಜೀವನ ಬರೀ ಯಾಂತ್ರಿಕವಾಗುವುದಿಲ್ಲವೆ? ಯಾವಾಗ ಕೇಳಿದರೂ ’ನಂಗೆ ಈಗ ಟೈಮ್ ಇಲ್ಲ, ಬೇರೆ ಕೆಲಸಗಳಿವೆ" ಅನ್ನೋ ರೆಡಿಮೇಡ್ ಉತ್ತರವನ್ನು ಮನಸ್ಸು ಸದಾ ಕೊಡುತ್ತಲೇ ಇರುತ್ತದೆ. "ಸಂಗೀತವನ್ನು ಸೀರಿಯಸ್ಸಾಗಿ ಕಲೀಬೇಕು" ಅಂತ ೮ ತಿಂಗಳ ಹಿಂದೆ ಅನ್ಕೊಂಡಿದ್ದೆ. "ಸಿಗೋದೊಂದು ರವಿವಾರ,ಅವತ್ತೂ ಪ್ರಾಕ್ಟೀಸ್ ಮಾಡ್ತಾ ಕುಳಿತರೆ ಅಷ್ಟೇ" ಅಂತ ಮನಸ್ಸು ಕಾರಣ ಹೇಳಿತು. ಅಲ್ಲಿಗೆ ಅದರ ಕಥೆ ಮುಗೀತು. "ಹೊಸ ಮನೆಗೆ ಒಂದು ಚೆಂದನೆಯ ಪೇಂಟಿಂಗ್ ಬಿಡಿಸಿ ಹಾಲ್ ನಲ್ಲೇ ತೂಗುಹಾಕಬೇಕು" ಅಂತ ಪೇಪರ್,ಹೊಸ ಬಣ್ಣ ಎಲ್ಲಾ ತಂದಿದಾಯ್ತು, "ಸಿಕ್ಕಾಪಟ್ಟೆ ಸಣ್ಣ ಹಿಡಿದು ಮಾಡೋ ಕೆಲಸ ಈ ಚಿತ್ರ ಬರೆದು ಪೇಂಟಿಂಗು ಮಾಡೋದು, ಮುಂದಿನ ವಾರ ಟೈಮ್ ಮಾಡ್ಕೊಂಡು ಮಾಡಕ್ಕಾಗಲ್ವಾ?" ಅಂತ ಅಂದುಕೊಂಡಿದ್ದೇ ಸರಿ, ಆ ಮುಂದಿನವಾರ ಬಂದೇ ಇಲ್ಲ! ಯಾವುದೇ ಒಂದು ಅತೀ ತಾಳ್ಮೆ ಮತ್ತು ಶ್ರದ್ಧೆ ಬೇಡುವ ಕೆಲಸವನ್ನು ಸರಿಯಾಗಿ ಮಾಡಿದ್ದೇ ದಾಖಲೆಯಿಲ್ಲ. ಬರೀ ಸಮಯದ ಅಭಾವ ಇದಕ್ಕೆಲ್ಲ ಕಾರಣವಾಗಿರಬಹುದಾ? "ಹೌದು" ಅನ್ನಲು ಮನಸ್ಸು ಯಾಕೋ ಒಪ್ತಾ ಇಲ್ಲ! ಉತ್ತರ ಎಲ್ಲೋ ನನ್ನಲ್ಲೇ ಇದೆ. ಒಂಥರಾ ಎಲ್ಲವನ್ನೂ ಓದಿದ್ದೂ, ಪರೀಕ್ಷೆಯಲ್ಲಿ ಏನೂ ಬರೆಯಲಿಕ್ಕಾಗದ ವಿದ್ಯಾರ್ಥಿಯ ಪರಿಸ್ಥಿತಿಯಂತೆ ಮನಸು ವಿಲವಿಲ ಒದ್ದಾಡಿತು.

ಈಗಿನ ಮಕ್ಕಳದಂತೂ ವಯಸ್ಸಿಗೆ ಮೀರಿದ ಮಾತು, ವರ್ತನೆ. ನಮ್ಮ ಅಪ್ಪ ಅಮ್ಮಂದಿರಿಗೆ ಹೀಗೆಲ್ಲ ಅನ್ನಿಸಿದ್ದು ನನಗೆ ಅನುಮಾನ. ಅವರ ಗ್ರಹಿಕಾ ಸಾಮರ್ಥ್ಯ ಕೂಡಾ ಜಾಸ್ತಿ. ಟೀವಿಯಲ್ಲಿ ಬರೋ ಕಾರ್ಯಕ್ರಮಗಳನ್ನು ನೋಡಿದ್ರೆ ಗೊತ್ತಾಗಲ್ವೆ? ಎಷ್ಟು ಬೇಗ ಹೇಳಿ ಕೊಟ್ಟಿದ್ದನೆಲ್ಲ ಕಲಿತುಬಿಡ್ತಾರೆ? ನಾಲ್ಕು ಜನರ ಎದುರು ನಿಂತು ಮಾತನಾಡುವುದಕ್ಕೂ, ಹಾಡುವುದಕ್ಕೂ ಒಂಚೂರು ಭಯವಿಲ್ಲ!. ಐದನೇತ್ತಿಯಲ್ಲಿದ್ದಾಗ ಅಪ್ಪ ಹೇಳಿಕೊಟ್ಟಿದ್ದ "ಸಾರೇ ಜಹಾಂಸೆ ಅಚ್ಛಾ"ವನ್ನು ಹಾಡನ್ನು ಯಾವುದೋ ಸ್ಪರ್ಧೆಯಲ್ಲಿ ಹಾಡಿ ಮುಗಿಸೋವಷ್ಟರಲ್ಲಿ ನಾನು ಬೆವೆತುಹೋಗಿದ್ದೆ. ಅದೂ ಕೊನೆ ಸಾಲನ್ನು ಮರೆತು ಹೇಗೋ ತಪ್ಪು ತಪ್ಪು ಹಾಡಿ ಅಪ್ಪನ ಹತ್ತಿರ ಬೈಸಿಕೊಂಡಿದ್ದೆ. ಈಗಿನ ಮಕ್ಕಳಿಗೆ ಸಿಗುತ್ತಿರುವ ಸವಲತ್ತು, ಅವಕಾಶ, ಅಪ್ಪ ಅಮ್ಮಂದಿರ ಪ್ರೋತ್ಸಾಹ ಎಲ್ಲ ಕಾರಣವಿರಬಹುದು, ಆದರೆ ಅವರ ಸಾಮರ್ಥ್ಯವನ್ನಂತೂ ಕಡೆಗಣಿಸುವ ಮಾತೇ ಇಲ್ಲ. ಬಹುಷಃ ಇದೂ ನನ್ನ ಆತಂಕಕ್ಕೂ ಒಂದು ಕಾರಣವಿರಬೇಕು. ಅವರ ಬೌದ್ಧಿಕ ಸಾಮರ್ಥ್ಯವನ್ನು ನಾವು ಸರಿಯಾದ ದಾರಿಯಲ್ಲಿ ತೊಡಗಿಸಿ ಮಾರ್ಗದರ್ಶನ ನೀಡುತ್ತಿದ್ದೇವೆಯಾ ಅನ್ನುವುದು. ಆ ಕೆಲಸವನ್ನು ಅಪ್ಪ ಎಷ್ಟು ಚೆನ್ನಾಗಿ ನಿರ್ವಹಿಸಿದ್ದರು ಅನ್ನುವುದನ್ನು ಈಗ ಯೋಚಿಸಿದರೆ ಅವರ ಬಗ್ಗೆ ಹೆಮ್ಮೆಯನಿಸುತ್ತದೆ. ಆದರೂ ಎಷ್ಟೋ ಸಲ ನಾವು ಅವರನ್ನು ನಿರಾಸೆಗೊಳಿಸಿದ್ದುಂಟು. "ತಬಲಾ ಸಾಥ್ ಕೊಡುವಷ್ಟಾದರೂ ತಬಲಾ ಕಲಿ" ಅಂದು ಅವರು ಎಷ್ಟು ಸಲ ಹೇಳಿದ್ದರೋ ಏನೋ? ಆವಾಗ ಅದು ತಲೆಯೊಳಗೆ ಇಳಿಯಲೇ ಇಲ್ಲ. ಈಗ ಅದರ ಬಗ್ಗೆ ಪಶ್ಚಾತಾಪವಿದೆ. "ನಾನು ಸರಿಯಾಗಿ ಸಾಧಿಸಲಾಗದಿದ್ದನ್ನು ಮಕ್ಕಳು ಕಲಿತು ಸಾಧಿಸಲಿ" ಅನ್ನುವ ಆಸೆ ಎಲ್ಲ ಪಾಲಕರಿಗೂ ಇರುತ್ತದೆಯಲ್ಲವೆ? ನಾಲ್ಕು ಜನರ ಮುಂದೆ ಅದರ ಬಗ್ಗೆ ಹೇಳಿಕೊಳ್ಳುವಾಗ ಅವರ ಕಣ್ಣಲ್ಲಿದ್ದ ಬೇಸರ, ಹತಾಶೆ ಆಗ ಗೊತ್ತಾಗುತ್ತಿರಲಿಲ್ಲ. ಈಗ ಅದರ ಅರಿವಾಗುತ್ತಿದೆ. "ಇವನ ಹತ್ತಿರ ಈಗ ಮೂರು ದಿನ ಕೇಳುವಷ್ಟು ಸಂಗೀತದ ಕಲೆಕ್ಷನ್ ಇದೆ" ಎಂದು ಈಗ ಅಪ್ಪ ಹೆಮ್ಮೆಯಿಂದ ಬೀಗುವಾಗ ಅವರ ಕಣ್ಣಲ್ಲಿನ ಹೊಳಪು ಖುಶಿ ಕೊಡುತ್ತದೆ. ಯಾವುದೋ ಅತೀ ಕ್ಲಿಷ್ಟವಾದ ರಾಗವನ್ನು ಅಪ್ಪನಿಗೆ ಕೇಳಿಸಿ, ಇದು ಹೀಗೆ ಎಂದು ವಿವರಿಸುವಾಗ ಅಪ್ಪನಿಗಾಗುವ ಸಂತೋಷ ಅವನು ಮಾತನಾಡದೆಯೂ ಗೊತ್ತಾಗುತ್ತದೆ. ಮಕ್ಕಳು ನಮ್ಮ ಆಸೆಗೆ ತಕ್ಕುದಾಗಿ ವಿಶಿಷ್ಟವಾದುದನ್ನು ಸಾಧಿಸಿದಾಗ ಆಗುವ ಸಂತಸದ ಮಹತ್ವ ಈಗ ನನಗೆ ಯಾರೂ ಹೇಳಿಕೊಡದೇ ಅರ್ಥವಾಗುತ್ತದೆ.

ಎಲ್ಲಿಂದೋ ಶುರುವಾದ ಯೋಚನೆಗಳು ಎಲ್ಲಿಗೋ ಕರೆದುಕೊಂಡು ಹೋದವು. ಎಷ್ಟೋ ಗೊಂದಲಗಳಿದ್ದರೂ ಮನಸ್ಸು ಒಂದು ತಹಬದಿಗೆ ಬಂದ ಹಾಗೆ ಅನ್ನಿಸಿತು. "ನಿನ್ನ ಆತಂಕ ಅತ್ಯಂತ ಸಹಜ, ಅತಿಯಾಗಿ ಯೋಚಿಸುವುದನ್ನು ಬಿಡು, ಬರೀ ನೆಗೆಟಿವ್ ಆಗಿ ಯೋಚನೆ ಮಾಡುತ್ತಿದ್ದೀಯಾ" ಎಂದು ಮನಸ್ಸು ಎಚ್ಚರಿಸಲು ಶುರು ಮಾಡಿತು. ಬಹುಷಃ ನಾನು ಸುಮ್ಮನೆ ಆತಂಕಪಡುತ್ತಿದ್ದೇನೆ ಅನ್ನಿಸಿತು. ಎಲ್ಲ ಪಾಲಕರೂ ಈ ಸನ್ನಿವೇಶವನ್ನು ದಾಟಿಯೇ ಮುಂದೆ ಬಂದಿರುತ್ತಾರೆ. ನನ್ನ ಅಪ್ಪನಿಗೂ ಹೀಗೆ ಅನ್ನಿಸಿರಬಹುದು. "ಯೋಚನೆ ಮಾಡುವುದನ್ನು ಬಿಡು, ಯೋಚನೆಗಳನ್ನು ಕಾರ್ಯರೂಪಕ್ಕೆ ತಾ" ಎಂದು ಮನಸು ಹೇಳತೊಡಗಿತು. ನಿಜ, ಅಪ್ಪ ಹೇಳಿಕೊಟ್ಟ ರೀತಿಗಳು ನನಗೆ ಪಾಠವಾಗಬೇಕು. ಎಷ್ಟೋ ಸಲ ಹಾಗಾಗಿರುತ್ತದೆ. ನಾವು ಯಾರ್ಯಾರನ್ನೋ ನಮ್ಮ "ರೋಲ್ ಮಾಡೆಲ್" ಆಗಿ ಇಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಹತ್ತಿರವೇ ಇರುವ ನಮ್ಮವರ ಮಹತ್ವ ಗೊತ್ತಾಗುವುದೇ ಇಲ್ಲ. ನಮ್ಮ ಅಪ್ಪ, ಅಮ್ಮ, ಅಕ್ಕ, ತಮ್ಮಂದಿರಿಂದಲೇ ಕಲಿಯುವುದೇ ಬೇಕಾದಷ್ಟಿರುತ್ತವೆ. " ಅಂಗೈನಲ್ಲೇಬೆಣ್ಣೆ ಇಟ್ಟುಕೊಂಡು ಊರಲ್ಲೆಲ್ಲ ತುಪ್ಪ ಹುಡುಕಿದ ಹಾಗೆ" ನಾವು ಎಲ್ಲೋ ಸ್ಪೂರ್ತಿಗಾಗಿ ಹುಡುಕುತ್ತಲೇ ಇರುತ್ತವೆ. ಇಲ್ಲ, ಇನ್ನು ಮೇಲೆ ಎಷ್ಟು ಕಷ್ಟವಾದರೂ ಒಂದಷ್ಟು ಸಮಯವನ್ನು ಮಗಳಿಗಾಗಿಯೇ ಮೀಸಲಿಡುತ್ತೇನೆ ಎಂದು ಧೃಢ ನಿರ್ಧಾರ ಮಾಡಿಕೊಂಡೆ.

ರಾತ್ರಿಯ ನೀರವವನ್ನು ಭೇದಿಸಿ ಒಂದೇ ಸಮನೆ ಮೊಬೈಲು ಕಿರ್ರನೆ ಕೀರಿ ನನ್ನ ಯೋಚನಾ ಸರಣಿಯನ್ನು ನಿಲ್ಲಿಸಿತು. ಹೆಂಡತಿ ಅಸ್ಪಷ್ಟವಾಗಿ ಗೊಣಗಿದ್ದು ಕೇಳಿತು. ಈ ರಾತ್ರಿಯಲ್ಲಿ ಯಾರಪ್ಪಾ ಫೋನ್ ಮಾಡಿದವರು ಅಂತ ಕುತೂಹಲದಲ್ಲಿ ನೋಡಿದರೆ ಸಂದೀಪ್, ನನ್ನ ಪ್ರಾಜೆಕ್ಟ ಮ್ಯಾನೇಜರು. ಮನಸ್ಸು ಏನೋ ಕೆಟ್ಟದನ್ನು ಊಹಿಸಿತು. ಈ ಮಧ್ಯರಾತ್ರಿ ಮ್ಯಾನೇಜರಿನಿಂದ ಫೋನ್ ಬರುವುದೆಂದರೆ ಒಳ್ಳೆ ಸುದ್ದಿಯಾಗಿರಲು ಸಾಧ್ಯವೇ? ಆಚೆಕಡೆಯಿಂದ ಸ್ವಲ್ಪ ಕಂಗಾಲಾದ ಧ್ವನಿ. ಏನೋ "ರಿಲೀಸ್ ಸ್ಟಾಪರ್" ಅಂತೆ, ತುಂಬಾ ಅರ್ಜೆಂಟ್ ಪ್ರಾಬ್ಲಮ್ಮು, ಬೆಳಿಗ್ಗೆ ಏಳು ಗಂಟೆಗೆ ಕಸ್ಟಮರ್ ಕಾಲ್ ಇದೆ. ಆರು-ಆರುವರೆಗೆ ಆಫೀಸ್ ಗೆ ಬರಲು ಬುಲಾವ್. ಏನೋ ಡಿಸ್ಕಸ್ ಮಾಡಬೇಕಂತೆ. ಸರಿ ಅಂತ ಫೋನ್ ಇಟ್ಟೆ. "ಬರ್ತೀನಿ, ಬರ್ತೀನಿ" ಅಂತ ಹೆದರಿಸುತ್ತಾ ಇದ್ದ ನಿದ್ರೆ ಈಗ ಸಂಪೂರ್ಣವಾಗಿ ಹೊರಟು ಹೋಯ್ತು. ಹಾಸಿಗೆಯಲ್ಲಿ ಸುಮ್ಮನೇ ಹೊರಳಾಡಲು ಮನಸ್ಸಾಗಲಿಲ್ಲ. ಎದ್ದು ಮುಖ ತೊಳೆದುಕೊಂಡು ಹಾಲ್ ಗೆ ಬಂದು ಕೂತೆ. ತಕ್ಷಣ ಪುಟ್ಟಿಯ ಭಾಷಣ ನೆನಪಾಯ್ತು. ಒಂದು ಬಿಳಿ ಹಾಳೆ ತೆಗೆದುಕೊಂಡು ಬರೆಯಲು ಶುರು ಮಾಡಿದೆ. ವಿವೇಕಾನಂದರ "ನಾಡಿಗೆ ಕರೆ" ಪುಸ್ತಕ ನೆನಪಾಯ್ತು. ಎಂಥಹ ಧೀಮಂತ ವ್ಯಕ್ತಿತ್ವ? "ಏಳಿ..ಏದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ" ಅವರದ್ದೇ ಮಾತುಗಳು. ಬಹುಷಃ ನನಗೇ ಹೇಳಿದ್ದಿರಬೇಕು. ಮೈಮೇಲೆ ಏನೋ ಆವೇಶ ಬಂದವರ ಹಾಗೆ ಬರೆಯುತ್ತಲೇ ಹೋದೆ.

Monday, September 21, 2009

ಕತ್ತಲೆಯಿಂದ ಬೆಳಕಿನೆಡೆಗೆ

ಕರೆಂಟು(ವಿದ್ಯುತ್ ಶಕ್ತಿ), ಮಾನವ ಸಮಾಜದಲ್ಲಿ ಆದ ಅತ್ಯಂತ ಉಪಯೋಗಿ ಮತ್ತು ಕ್ರಾಂತಿಕಾರಕವಾದ ಸಂಶೋಧನೆ ಎಂದು ನೀವು ಬಲವಾಗಿ ನಂಬಿದ್ದಲ್ಲಿ, ನೀವೊಮ್ಮೆ ಅವಶ್ಯವಾಗಿ ನಮ್ಮೂರಿಗೆ ಬಂದು ಹೋಗಲೇ ಬೇಕು. ಯಾಕೆಂದರೆ ನಮ್ಮೂರಿನಲ್ಲಿ ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯಗಳು ನಿಮಗೆ ದೊರೆಯುವುದಲ್ಲಿ ಸಂಶಯವೇ ಇಲ್ಲ.

ನಾವು ಊರಿಗೆ ಹೋದಾಗ ಯಾವತ್ತೂ ಸಹ ಕರೆಂಟು ಇರುವುದೇ ಇಲ್ಲ. ನಾವೂ ಸಹ "ಕರೆಂಟ್ ಯಾವಾಗ ತೆಗೆದರು?, ಎಷ್ಟು ಹೊತ್ತಿಗೆ ಬರಬಹುದು?" ಎಂಬ ಪ್ರಶ್ನೆಗಳನ್ನು ಕೇಳುವ ಸಾಹಸ ಮಾಡುವುದಿಲ್ಲ.ಯಾಕೆಂದರೆ ಅಲ್ಲಿ ಯಾರಿಗೂ ಕರೆಂಟು ಬಂದಿದ್ದು ಮತ್ತು ಹೋಗಿದ್ದರ ಅರಿವು ಮತ್ತು ಜ್ನಾಪಕ ಇರುವುದು ಸಾಧ್ಯವೇ ಇಲ್ಲ. "ಟೈಮ್ ಎಂಡ್ ಟೈಡ್ ವೇಟ್ ಫಾರ್ ನನ್" ಎಂಬ ಆಂಗ್ಲ ಸೂಕ್ತಿಯನ್ನು ನಮ್ಮೂರಿನಲ್ಲಿ "ಟೈಮ್ ಎಂಡ್ ಕರೆಂಟ್ ವೇಟ್ ಫಾರ್ ನನ್" ಎಂದು ಅವಶ್ಯವಾಗಿ ಮಾರ್ಪಡಿಸಬಹುದು. ಅಪರೂಪಕ್ಕೊಮ್ಮೆ ಮನೆಯ ಮೇನ್ ಸ್ವಿಚ್ಚಲ್ಲಿ ಕೆಂಪು ದೀಪ ಉರಿಯುವುದನ್ನು ನೋಡಿದರೆ ನಮಗೆ ಖುಶಿಯಂತೂ ಖಂಡಿತವಾಗಿ ಆಗುವುದಿಲ್ಲ. ಆದರೆ ಆಶ್ಚರ್ಯವಾಗಿ "ಒಹ್, ಕರೆಂಟಿದ್ದು ಇವತ್ತು!" ಎಂಬ ಶಬ್ಧಗಳು ನಮ್ಮ ಬಾಯಿಂದ ನಮಗೆ ಗೊತ್ತಿಲ್ಲದಂತೆಯೇ ಹೊರಗೆಬಿದ್ದುಹೋಗಿರುತ್ತವೆ.

ಬೆಂಗಳೂರಿನಂತ ನಗರಗಳಲ್ಲಿ ಜನರು ಎಷ್ಟರ ಮಟ್ಟಿಗೆ ಕರೆಂಟಿನ ಮೇಲೆ ಅವಲಂಬಿಸಿದ್ದಾರೆ ಎಂದು ಯೋಚಿಸಿದಾಗ ನನಗೆ ನಮ್ಮೂರಿನ ವಿದ್ಯುತ್ ಇಲಾಖೆಯ ಮೇಲೆ ಅಭಿಮಾನ ಉಕ್ಕಿ ಹರಿಯುತ್ತದೆ. ನೀವೇ ಯೋಚನೆ ಮಾಡಿ, ಬೆಳಿಗ್ಗೆ ಸ್ನಾನಕ್ಕೆ ಗೀಸರ್ರಿನಿಂದ ಹಿಡಿದು, ರಾತ್ರಿ ಟೀವಿ ನೋಡಿ ಮಲಗುವವರೆಗೂ ನಮಗೆ ಕರೆಂಟು ಎಲ್ಲದಕ್ಕೂ ಬೇಕೇ ಬೇಕು. ಒಂದು ಐದು ನಿಮಿಷ ಕರೆಂಟ್ ಇಲ್ಲದಿದ್ದರೂ ನಾವು ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಲೇ ಇರುತ್ತೇವೆ. ಜನರೆಲ್ಲವೂ ಹೀಗೆ ಯಾವುದೇ ವಸ್ತುವಿನ ಮೇಲೆ ಅತಿಯಾಗಿ ಅವಲಂಬಿಸಿವುದು ಉತ್ತಮ ನಾಗರೀಕ ಸಮಾಜದ ಲಕ್ಷಣಗಳಲ್ಲ ಎಂದೇ ನಾನು ಭಾವಿಸುತ್ತೇನೆ. ಗಾಂಧೀಜಿಯವರೂ ಇದನ್ನೇ ಅಲ್ಲವೇ ಹೇಳಿದ್ದು? "ನಮ್ಮ ಹಳ್ಳಿಗಳು ಎಲ್ಲಿಯ ತನಕ ಸ್ವಾವಲಂಬಿಗಳಾಗುವುದಿಲ್ಲವೋ, ಅಲ್ಲಿಯ ತನಕ ನಮ್ಮ ದೇಶದ ಉದ್ಧಾರ ಸಾಧ್ಯವಿಲ್ಲ" ಎಂದು? ಬಹುಷಃ ನಮ್ಮೂರಿನ ವಿದ್ಯುತ್ ಇಲಾಖೆಗೂ ಗಾಂಧೀಜಿಯ ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮೇಲಿನಿಂದ ನಿಯಮಾವಳಿ ಬಂದಿರಬೇಕು. ಇಂತ ಉತ್ತಮ ನಿಯಮಗಳನ್ನು ಪಾಲಿಸಿ, ಉಳಿದವರಿಗೆಲ್ಲ ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟ ನಮ್ಮೂರಿನ ವಿದ್ಯುತ್ ಇಲಾಖೆಯನ್ನು ಜನರು ವಿನಾಕಾರಣ ನಿಂದಿಸುವುದು ನೋಡಿದರೆ ನನಗೆ ನಮ್ಮ ಜನರು ಗಾಂಧೀಜಿಯ ತತ್ವಗಳನ್ನು ಪಾಲಿಸುತ್ತಲೇ ಇಲ್ಲವೆಂಬುದನ್ನು ಮತ್ತೆ ಮತ್ತೆ ಖಾತ್ರಿಯಾಗುತ್ತದೆ.

"ದೀಪದ ಬುಡದಲ್ಲಿ ಕತ್ತಲೆ" ಎಂಬ ನಾಣ್ಣುಡಿಯನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ. ನಮ್ಮೂರನ್ನು ನೋಡಿದರೆ ನನಗೆ ಈ ಮಾತು ಅಕ್ಷರಶ ನಿಜವೆನ್ನಿಸುತ್ತದೆ. ನಮ್ಮೂರಿನ ಪಕ್ಕದಲ್ಲೇ ಲಿಂಗನಮಕ್ಕಿ ಜಲಾಶಯದಿಂದ ವಿದ್ಯುತ್ ತಯಾರಿಸಿ ರಾಜ್ಯಕ್ಕೆಲ್ಲಾ ಹಂಚಲಾಗುತ್ತಿದೆ. ಇನ್ನು ಕಾಳಿ ನದಿಗೆ ಹಲವಾರು ಕಡೆ ಅಣೆಕಟ್ಟು ಕಟ್ಟಿ, ವಿದ್ಯುತ್ ತಯಾರಿಸುತ್ತಲೇ ಇದ್ದಾರೆ. ಇವೆಲ್ಲಾ ನಮ್ಮೂರಿಗೆ ಬಹಳ ಹತ್ತಿರವಿದ್ದುದರಿಂದಲೇ ನಮಗೆ ವಿದ್ಯುತ್ತನ್ನು ಕೊಡಲಾಗುತ್ತಿಲ್ಲ ಎಂದು ವಾದಿಸುವ ಅನೇಕ ನಿಷ್ಠುರವಾದಿಗಳ ಗುಂಪೊಂದು ನಮ್ಮೂರಿನಲ್ಲಿದೆ. ಅದಕ್ಕೆಂದೇ ಅವರು ತದಡಿಯಲ್ಲಿ ಸ್ತಾಪಿಸಲಾಗುತ್ತಿರುವ ಉಷ್ಣಸ್ಥಾವರದ ಬಗ್ಗೆ ಇಷ್ಟೊಂದು ಕಠಿಣ ನಿಲುವು ತಳೆದಿರುವುದು. ದೂರದ ಬಳ್ಳಾರಿಯಲ್ಲೋ, ಕೋಲಾರದಲ್ಲಿ ಇವನ್ನು ಸ್ಥಾಪಿಸಿದರೆ ನಮಗೂ ಕೊಂಚ ಉಪಯೋಗವಾಗಬಹುದು ಎಂಬ ದೂರಾಲೋಚನೆ ಈ ಗುಂಪಿನದು.

ಇವೆಲ್ಲ ಕಾರಣಗಳಿಗೇ ಇರಬೇಕು, ನಮ್ಮೂರ ಜನರು ಕರೆಂಟ್ ಇರುವುದರ ಬಗ್ಗೆ ಮತ್ತೆ ಇಲ್ಲದರ ಬಗ್ಗೆ ಅಷ್ಟೊಂದೇನೂ ತಲೆ ಕೆಡಿಸಿಕೊಂಡಿಲ್ಲ. ತಲೆಕೆಡಿಸಿಕೊಂಡರೂ ಸಹ ಮಾಡಬಹುದಾಗಿದ್ದು ಏನೂ ಇಲ್ಲ ಎಂಬುದು ಅವರಿಗೆ ಯಾವಾಗಲೋ ತಿಳಿದುಹೋಗಿದೆ. ನಮಗೆಲ್ಲರಿಗೂ "ಅಭಾವ ವೈರಾಗ್ಯ" ಕಾಡುತ್ತಿದೆ ಎಂದು ನೀವು ಅಂದುಕೊಂಡಿದ್ದರೆ ಖಂಡಿತವಾಗಿಯೂ ಅದು ನಿಮ್ಮ ತಪ್ಪು ಕಲ್ಪನೆ ಎಂದು ಈಗಲೇ ಸ್ಪಷ್ಟ ಪಡಿಸಿಬಿಡುತ್ತೇನೆ. ನಿಜ ಹೇಳಬೇಕೆಂದರೆ ಕರೆಂಟ್ ಇದ್ದರೆ ಮಾತ್ರ ನಮಗೆ ಸದಾ ಕಿರಿಕಿರಿಯಾಗುತ್ತಲೇ ಇರುತ್ತದೆ. ನಾವ್ಯಾವುದೋ ಕುತೂಹಲಕಾರಿಯಾದ ಕ್ರಿಕೆಟ್ ಮ್ಯಾಚ್ ನೋಡಬೇಕಾದರೆ ಇನ್ನೇನು ಲಾಸ್ಟ್ ಓವರ್ ಇದೆ ಅನ್ನುವಾಗ ಕರೆಂಟ್ ಹೋಗುತ್ತದೆಯೋ ಇಲ್ಲವೋ ಅಂತ ಹೇಳಲು ಯಾವುದೇ ಕಾಮನ್ ಸೆನ್ಸಿನ ಅಗತ್ಯವೇ ಇಲ್ಲ!. ಯಾವುದೋ ಹಾಡಿನ ಸ್ಪರ್ಧೆಯಲ್ಲಿ ನಮ್ಮೂರಿನ ಯಾವುದೋ ಹುಡುಗಿ ಹಾಡುತ್ತಿದ್ದಾಳೆ, ಅದನ್ನು ಮಾತ್ರ ಮಿಸ್ ಮಾಡಿಕೊಳ್ಳಬಾರದು ಅಂದುಕೊಂಡರೆ ಇನ್ನೇನು ಅವಳು ಹಾಡಲು ಶುರು ಮಾಡಬೇಕು, ನಾವು ಬಿಟ್ಟಬಾಯಿ ತೆರೆದುಕೊಂಡು ನೋಡಲು ಕಾಯುತ್ತಿರುತ್ತೇವೆ, ಪಕ್! ಎಂದು ಕರೆಂಟು ಮಾಯ. "೧೨.೩೦ಗೆ ಸವಿರುಚಿ ಕಾರ್ಯಕ್ರಮ ಇದ್ದು, ಇವತ್ತು ಅದೆಂತೋ ಅತ್ತೆ-ಸೊಸೆ ಸ್ಪೆಶಲ್ ಇದ್ದಡಾ", ಎಂದು ಅಮ್ಮ ಅಡುಗೆ ಕೆಲಸವನ್ನೆಲ್ಲ ಬೇಗ ಮುಗಿಸಿ ಟೀವಿ ಮುಂದೆ ಕುಳಿತಿದ್ದಾಳೆ, ಸರಿಯಾಗಿ ೧೨.೨೫ಕ್ಕೆ ಕರೆಂಟು ಹೋಗಿದ್ದು ಮತ್ತೆ ಬರುವುದು ೧೨.೫೫ಕ್ಕೆ. ಅಮ್ಮ ಗಡಿಬಿಡಿಯಲ್ಲಿ ಟೀವಿ ಸ್ವಿಚ್ ಹಾಕಿದರೆ, "ವೀಕ್ಷಕರೆ, ನಿಮಗಾಗಿ ಬಿಸಿಬಿಸಿ ತಿಂಡಿ ತಯಾರು" ಎಂದು ನಿರೂಪಕಿ ಉಲಿಯುತ್ತಿರುತ್ತಾಳೆ. "ಈ ಹಾಳು ಕರೆಂಟು ಈಗ್ಲೇ ಹೋಗಕ್ಕಾಯಿತ್ತ ಹಂಗರೆ?" ಎಂದು ಅಮ್ಮನಿಂದ ಕರೆಂಟಿನವರಿಗೆ ಸಹಸ್ರನಾಮಾವಳಿ ಮಾತ್ರ ತಪ್ಪುವುದಿಲ್ಲ.

ಇವೆಲ್ಲ ತೀರ ಕ್ಷುಲ್ಲಕ ವಿಷಯಗಳಾಯ್ತು. ಮನೆಗೆ ಯಾರೋ ಅಪರೂಪದ ನೆಂಟರು ಬರುತ್ತಿದ್ದಾರೆ ಎಂದು ಲೇಟಾಗಿ ಗೊತ್ತಾಗಿರುತ್ತದೆ. ಕರೆಂಟನ್ನೇ ನಂಬಿ ಏನೋ ಸ್ಪೆಷಲ್ ಮಾಡಬೇಕೆಂದು ಅಮ್ಮ ಅಂದುಕೊಂಡಿದ್ದರೆ, ಸರಿಯಾಗಿ ಇನ್ನೇನು ಮಿಕ್ಸಿ ಸ್ವಿಚ್ ಹಾಕಬೇಕು, ಕರೆಂಟು ಮಾಯ! ರುಬ್ಬುವುದಕ್ಕೆ ಅವಳು ಒರಳನ್ನೇ ನಂಬಬೇಕು, ಇಲ್ಲ ಸ್ಪೆಷಲ್ ಅಡುಗೆಯನ್ನೇ ಬಿಡಬೇಕು!. ಅಪ್ಪನಿಗೆ ಪೇಟೆಯಲ್ಲಿ ಬ್ಯಾಂಕಿನ ಕೆಲಸ ಲೇಟಾಗಿ ಜ್ನಾಪಕವಾಗಿದೆ. ಇನ್ನೇನು ಕಪಾಟು ತೆಗೆದು ಪಾಸ್ ಬುಕ್ ಹುಡುಕಬೇಕು, ಕರೆಂಟು ಮಾಯ! ಗಡಿಬಿಡಿಯಲ್ಲಿ ಟಾರ್ಚ್ ಅಪ್ಪನ ಕೈಗೇ ಸಿಗುತ್ತಿಲ್ಲ. ಎಲ್ಲಾ ಅಧ್ವಾನ!. ಆವಾಗ ನೋಡಬೇಕು ಒಬ್ಬೊಬ್ಬರನ್ನ, ಇನ್ನೇನು ಉಕ್ಕಲು ಸಿದ್ಧವಾಗಿರುವ ಜ್ವಾಲಾಮುಖಿಗಳು! ಮಧ್ಯೆ ನಾವೆಲ್ಲಾದರೂ ಸಿಕ್ಕಿಕೊಂಡೆವೋ ಮುಗೀತು ಕಥೆ.

ಕರೆಂಟ್ ಇಲ್ಲದೇ ಇದ್ದ ದಿನ ಮಾತ್ರ ನಾವೆಲ್ಲ ನಿರಾಳವಾಗಿರುತ್ತೇವೆ, ಬೆಳಿಗ್ಗೆ ಬೆಳಿಗ್ಗೆಯೇ ಕರೆಂಟು ಇಲ್ಲದಿದ್ದರೆ ಅಮ್ಮನ ಮುಖದಲ್ಲಿ ಏನೋ ಸಮಾಧಾನ. ಆರಾಮಾಗಿ ಅವಳ ಕೆಲಸಗಳಲ್ಲಿ ತೊಡಗಿಕೊಂಡಿರುತ್ತಾಳೆ, ಮಧ್ಯ ಕರೆಂಟ್ ಬಂದರೂ ಸಹ ಅವಳು ಅಷ್ಟೇನೂ ಎಕ್ಸೈಟ್ ಆಗುವುದಿಲ್ಲ. ಯಾಕೆಂದರೆ ಅವಳಿಗೆ ಗೊತ್ತು, ಸಧ್ಯದಲ್ಲೇ ಅದು ಮತ್ತೆ ಹೋಗಲಿದೆ ಎನ್ನುವುದು. ನನಗೆ ನಿಜವಾಗಿಯೂ ಆಶ್ಚರ್ಯವಾಗುವುದು ಕರೆಂಟ್ ಲೈನ್ ಮೆನ್ ಗಳ ಅದ್ಭುತ ಕಾರ್ಯವೈಖರಿಗೆ. ಅವರು ಹೇಗೆ ಇಷ್ಟು ಹೊತ್ತಿಗೆ ಈ ಏರಿಯಾದಲ್ಲಿ ಕರೆಂಟು ತೆಗೆಯಬೇಕೆಂದು ನಿರ್ಧಾರಿಸುತ್ತಾರೋ ಏನೋ? ನಾವೇನೋ ಮಹತ್ವವಾದ ಕೆಲಸ ಮಾಡುತ್ತಿರುವ ಸೂಚನೆ ಅವರಿಗೆ ಹೇಗೆ ತಿಳಿಯುತ್ತದೆಯೋ ಏನೋ? ಎಂಬ ಪ್ರಶ್ನೆ ನನ್ನಲ್ಲಿ ಆಗಾಗ ಉದ್ಭವವಾಗುತ್ತಾ ಇರುತ್ತದೆ. ಅದೂ ಒಂದೇ ಏರಿಯಾದಲ್ಲಿ ಎಷ್ಟೊಂದು ಲೈನುಗಳು!, ಊರಿನ ಒಂದು ಪಾರ್ಶ್ವಕ್ಕಿರುವ ಮನೆಗಳಿಗೆಲ್ಲಾ ಸಂಪಖಂಡ ಲೈನು, ಇನ್ನೊಂದು ಪಾರ್ಶ್ವಕ್ಕಿರುವ ಮನೆಗಳಿಗೆಲ್ಲಾ ಸಿದ್ದಾಪುರ ಲೈನು, ನೆರೆಮನೆಯವರದು ಮಾತ್ರ ಶಿರಸಿ ಪಟ್ಟಣದ ಲೈನು! ಒಂದು ಲೈನಿನಲಿ ಕರೆಂಟಿದ್ದರೆ ಇನ್ನೊಂದರಲ್ಲಿ ಇಲ್ಲ! ಇಲ್ಲಿ ಕರೆಂಟು ಬಂದರೆ ಅಲ್ಲಿ ಹೋಗುತ್ತದೆ. ಒಟ್ಟಿನಲ್ಲಿ "ಬೇರೆಯವರ ದುಃಖ ನಮ್ಮ ಸಂತೋಷ" ಅನ್ನುವುದು ಇದಕ್ಕೇ ಇರಬೇಕು. ಲೈನ್ ಮೆನ್ ಗಳು ಇಷ್ಟೆಲ್ಲಾ ಲೈನುಗಳ ಮಧ್ಯೆ ಆಟವಾಡುತ್ತಾ, ಅಲ್ಲಿ ತೆಗೆದು, ಇಲ್ಲಿ ಹಾಕಿ, ಈ ಲೈನಿನಲ್ಲಿ ಎಷ್ಟು ಸಲ ತೆಗೆದೆವು, ಎಷ್ಟು ಸಾರ್ತಿ ಕೊಟ್ಟೆವು? ಮತ್ತೆ ಯಾವಾಗ ತೆಗಿಯಬೇಕು? ಎಂದೆಲ್ಲಾ ಲೆಕ್ಕಾಚಾರ ಮಾಡಬೇಕು. ಇವೆಲ್ಲ ಏನು ಮಕ್ಕಳಾಟದ ಕೆಲಸಗಳೇ? ಇಷ್ಟೆಲ್ಲ ತಲೆ ಖರ್ಚು ಮಾಡಿಯೂ ಸಲ ಜನರ ಕೈಲಿ ಬೈಸಿಕೊಳ್ಳುವ ಅವರ ಬಗ್ಗೆ ನನಗೆ ನಿಜವಾದ ಸಂತಾಪವಿದೆ.

ಅಪರೂಪಕ್ಕೊಮ್ಮೆ ಇಡೀ ದಿನ ಕರೆಂಟಿದ್ದರೆ ಇನ್ನೂ ಕಿರಿಕಿರಿ. ನಾವೆಲ್ಲ ಕರೆಂಟು ಈಗ ಹೋಗಬಹುದು, ಆಗ ಹೋಗಬಹುದು ಎಂದು ಜಾತಕ ಪಕ್ಷಿಯಂತೆ ಕಾಯುತ್ತಲೇ ಇರುತ್ತೇವೆ. ಇದೊಂದು ವಿಚಿತ್ರವಾದ ಮಾನಸಿಕ ಹಿಂಸೆ. ಇವತ್ತು ಲೈನ್ ಮೆನ್ ಗಳಿಗೆ ರಜೆಯಿರಬೇಕೆಂದು ನಾವು ಮಾತಾಡಿಕೊಳ್ಳುತ್ತೇವೆ. ಇಲ್ಲದೇ ಹೋದರೆ ಇಡೀ ದಿನ ಕರೆಂಟಿರುವುದೆಂದರೆ ಏನು ತಮಾಷೆಯೆ? ಒಟ್ಟಿನಲ್ಲಿ ಲೈನ್ ಮೆನ್ ಗಳು ಅವರ ಕರ್ತವ್ಯವನ್ನು ಸರಿಯಾಗಿ ಮಾಡದಿದ್ದರೂ ನಮಗೆ ಕಿರಿಕಿರಿ ತಪ್ಪಿದ್ದಲ್ಲ.

ಒಟ್ಟಿನಲ್ಲಿ ಅದರ ಅಸ್ತಿತ್ವದಲ್ಲೂ, ಅಭಾವದಲ್ಲೂ, ಅಭಾವದ ಅಸ್ತಿತ್ವದಲ್ಲೂ ಇಷ್ಟೆಲ್ಲ ಮಾನಸಿಕ ತೊಂದರೆ, ಕಿರಿಕಿರಿ ಕೊಡುವ ಕರೆಂಟನ್ನು ನಾವು ಇಷ್ಟಪಡುವುದಾದರೂ ಹೇಗೆ? ನೀವೇ ಹೇಳಿ.

Thursday, July 23, 2009

ರಾಖಿ ಸ್ವಯಂವರ

ನಾಣಿ ಆಫೀಸಿಗೆ ಬಂದಾಗಿನಿಂದ ಯಾಕೋ ಬಹಳ ಬೇಜಾರಲ್ಲಿ ಇದ್ದ ಹಾಗೆ ಕಾಣಿಸ್ತು. ೧೦ ಗಂಟೆ ಕಾಫಿಗೆ ಹೋದಾಗ ಸುಮ್ಮನೆ ಅವನನ್ನು ಮಾತಿಗೆಳೆದೆ. "ಯಾಕೋ ನಾಣಿ ಒಂತರಾ ಇದ್ದೀಯಾ?" ಅಂತ ಕೇಳಿದ್ದಕ್ಕೇ ಅವನಿಗೆ ತನ್ನ ದುಃಖವನ್ನು ತೋಡಿಕೊಳ್ಳಲು ಯಾರೋ ಇದ್ದಾರೆ ಅನ್ನಿಸಿತೋ ಏನೋ, ಸಣ್ಣ ಮುಖ ಮಾಡಿಕೊಂಡು "ನಿನ್ನೆ ರಾಖಿ ಕಾ ಸ್ವಯಂವರ್" ನೋಡಿದ್ಯಾ? ಎಂದು ಕೇಳಿದ. "ಅದೇನೂ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಅಲ್ಲವಲ್ಲಾ ನಾನು ಅಷ್ಟೊಂದು ಆಸಕ್ತಿಯಿಂದ ನೋಡೊದಿಕ್ಕೆ. ಯಾವಾಗೋ ಒಂದು ಸಲ ವಾರದ ಹಿಂದೆ ನೋಡಿದ್ದೆ ಕಣೋ, ಒಳ್ಳೇ ಕಾಮೆಡಿ ಸೀರಿಯಲ್ಲು ಬಿಡು" ಎಂದು ಉಡಾಫೆಯಾಗಿ ಮಾತು ಹಾರಿಸಿದೆ.

"ಅಲ್ಲಾ ಕಣೋ, ಅದರಲ್ಲಿ ಅಂಥದೇನು ಇದೆ ಅಂತಾ ನೀನು ಬೇಜಾರು ಮಾಡಿಕೊಂಡಿರುವುದು? ನಾನೇನೋ ನಿಮ್ಮ ಊರು ಕಡೆಗೆ ತುಂಬಾ ಮಳೆಯಾಗ್ತಿದೆಯಲ್ಲಾ, ನಿಮ್ಮ ತೋಟಕ್ಕೆ ಏನಾದ್ರೂ ತೊಂದರೆಯಾಗಿದೆಯೇನೋ ಅಂದುಕೊಂಡೆ. ನೀನ್ಯಾವುದೋ ಸಿಲ್ಲಿ ವಿಷಯಕ್ಕೆಲ್ಲಾ ತಲೆ ಹಾಳು ಮಾಡಿಕೊಂದಿದ್ದಿಯಲ್ಲೋ" ಎಂದು ಅವನ ಗಾಯಕ್ಕೆ ಇನ್ನಷ್ಟು ಉಪ್ಪುಸುರಿದೆ.ನಾನು ಅವನು ಹೇಳಿದ್ದರಲ್ಲಿ ಒಂಚೂರೂ ಆಸಕ್ತಿ ತೋರದೇ, ಅವನನ್ನು ಹಳಿದಿದ್ದಕ್ಕೆ ಇನ್ನೂ ಬೇಜಾರಾಗಿರಬೇಕು. "ಹೋಗ್ಲಿ ಬಿಡು, ಹೋಗಿ ಹೋಗಿ ನಿನ್ನ ಕೈಲಿ ಹೇಳಿದ್ನಲ್ಲಾ" ಎಂದು ತನ್ನನ್ನೇ ದೂಷಿಸಿಕೊಂಡ.

"ಏನಾಯ್ತೋ"?, ಈಗ ನಾನು ಸಂತೈಸುವ ಧ್ವನಿ ಮಾಡಿದೆ. "ಇಲ್ಲ ಕಣೋ, ಅವಳೆಷ್ಟು ಮುಗ್ಧ ಹುಡುಗಿ ಗೊತ್ತಾ? ಆದ್ರೆ ಅಲ್ಲಿ ಅವಳನ್ನು ಮದ್ವೆ ಆಗಕೆ ಬಂದಿರೋವ್ರೆಲ್ಲಾ ಒಬ್ಬರಿಗಿಂತ ಒಬ್ಬರು ದೊಡ್ಡ ನೌಟಂಕಿಗಳು ಕಣೋ, ಒಬ್ಬರೂ ಸರಿಯಿಲ್ಲ" ಎಂದು ಗೊಣಗಿದ. "ಓಹೋ ಹೀಗಾ ವಿಷಯ? ಗೊತ್ತಾಯ್ತು ಬಿಡು. ಅಲ್ಲಾ ಕಣೋ ನಾಣಿ, ನೀನು ಇಷ್ಟು ಸ್ಮಾರ್ಟ್ ಇದೀಯಾ, ರಾಖಿ ಅಂದ್ರೆ ಇಷ್ಟ ಬೇರೆ, ನೀನ್ಯಾಕೋ ಅದಕ್ಕೆ ಅಪ್ಲೈ ಮಾಡಿಲ್ಲಾ? ನೀನು ಹೋಗಿದ್ರೆ ನಿಂಗೇ ಅವಳು ಒಲಿಯೋದ್ರಲ್ಲಿ ಡೌಟೇ ಇರಲಿಲ್ಲ ನೋಡು" ಎಂದು ಛೇಡಿಸಿದೆ. "ಅಲ್ಲಿ ಸೌತ್ ಇಂಡಿಯಾದವ್ರನ್ನು ಯಾರನ್ನೂ ತಗೋಳ್ಲಿಲ್ಲ ಕಣೋ", ನಾಣಿ ಸೀರಿಯಸ್ಸಾಗೇ ಹೇಳಿದ. "ಹೌದೇನೋ?, ಇದು ತುಂಬಾ ಅನ್ಯಾಯನಪ್ಪಾ , ಎಂಡಿಟಿವಿ ಮೇಲೆ ಕೇಸ್ ಹಾಕ್ಬೇಕು ನೋಡು. ಏನಂದುಕೊಂಡು ಬಿಟ್ಟಿದಾರೆ ಅವ್ರು? ದಕ್ಷಿಣ ಭಾರತದವ್ರು ಎಲ್ಲಾ ರಾಖಿನ ಮದ್ವೆಯಾಗೊಕ್ಕೆ ನಾಲಾಯಕ್ಕಾ? ’ದಿಸ್ ಇಸ್ ಟೂ ಮಚ್’ ಎಂದು ನಾಣಿನ ಸಪೋರ್ಟ ಮಾಡಿದೆ.

ನಾಣಿ ಈಗ ಸ್ವಲ್ಪ ಗೆಲುವಾದ. ಹೌದು ಕಣೋ, ಅಲ್ಲಿ ಬಂದಿರೋರೆಲ್ಲಾ ನಾರ್ಥ್ ಇಂಡಿಯಾದವರೇ. ಸಿಕ್ಕಾಪಟ್ಟೆ ದುಡ್ಡಿದ್ದವರು ಎಂದು ನಿಡುಸುಯ್ದ. "ಇನ್ನೇನು? ಯಾರೋ ದುಡ್ಡಿಲ್ಲದ ಬಿಕನಾಸಿನ ಮದ್ವೆ ಆಗ್ತಾಳಾ ಅವಳು?" ಅಂತ ಬಾಯಿ ತುದಿಗೆ ಬಂದು ಬಿಟ್ಟಿತ್ತು. ಆದರೆ ನಾಣಿಯ ಸೂಕ್ಷ್ಮ ಮನಸಿಗೆ ಇನ್ನೂ ಬೇಜಾರು ಮಾಡುವುದು ಬೇಡವೆನಿಸಿತು. "ಅದಕ್ಯಾಕೆ ಇಷ್ಟೆಲ್ಲಾ ಬೇಜಾರು ಮಾಡ್ಕೊಂಡಿದೀಯೋ? ಅವಳನ್ನ ಮದ್ವೆ ಮಾಡ್ಕೊಳ್ಳೋವಂತ ದುರ್ಗತಿ ಯಾರಿಗಿದೆಯೋ, ಅವ್ರೇ ಮದ್ವೆ ಮಾಡ್ಕೋತಾರೆ ಬಿಡು" ಎಂದು ಸಮಾಧಾನ ಮಾಡಿದೆ. ನಾಣಿಗೆ ನನ್ನ ಕುಹಕ ಸರಿಯಾಗಿ ಅರ್ಥವಾಗಲಿಲ್ಲ. "ನಿನ್ನೆ ಶೋದಲ್ಲಿ ಏನಾಯ್ತು ಗೊತ್ತಾ?" ಎಂದು ಮತ್ತೆ ಫ್ಲಾಶ್ ಬ್ಯಾಕಿಗೆ ಹೋದ. ನಾನೂ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ಕೇಳಲು ಶುರುಮಾಡಿದೆ. ಅವನ್ಯಾರೋ "ಲವ್" ಅಂತೆ. ಎಲ್ಲಾರ ಎದುರಿಗೂ ಅವಳ ಹಣೆಗೆ ಮುತ್ತು ಕೊಟ್ಬಿಟ್ಟ ಕಣೊ. ಸ್ವಲ್ಪಾನೂ ನಾಚಿಕೆ ಮಾನ ಮರ್ಯಾದೆ ಒಂದೂ ಇಲ್ಲ, ಥೂ" ಎಂದು ಯಾರಿಗೋ ಉಗಿದ. ನನಗೆ ಇನ್ನೂ ತಮಾಷೆಯೆನಿಸಿತು. "ನಂಗೊಂದು ಡೌಟು ಕಣೋ, ರಾಖಿನೇ ಏನೋ ಮಾಡ್ತಿರಬೇಕು. ಎಲ್ಲಾರಿಗೂ ಯಾಕೆ ಹಾಗೆ ಮಾಡ್ಬೇಕು ಅನ್ನಿಸುತ್ತೋ ಏನೋ, ಅವ್ನು ಮಿಖಾ ಮೊದ್ಲು, ಬಿಗ್ ಬಾಸ್ ಅಲ್ಲಿ ಅಭಿಷೇಕ್, ಎಲ್ಲಾರೂ ಹಾಗೇ ಮಾಡಿದ್ರು ನೋಡು. ಅಥವಾ ಕ್ಯಾಮೆರಾ ಎದುರು ಬಂದ ಕೂಡಲೇ ಅವ್ರಿಗೆಲ್ಲಾ ಹಾಗೆ ಮಾಡಬೇಕು ಅನ್ನಿಸುತ್ತೋ ಏನೋ, ಪಾಪ" ಎಂದು ತಮಾಷೆ ಮಾಡಿದೆ. ನಾಣಿಗೆ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣಿಸಿತು. "ರಾಖಿ ಯಾಕೆ ಏನು ಮಾಡ್ತಾಳೆ? ಈ ಹುಡುಗರಿಗೆ ಸ್ವಲ್ಪಾನೂ ಕಂಟ್ರೋಲ್ ಅನ್ನೋದೇ ಇಲ್ಲ ನೋಡು. ಟೀವಿನಲ್ಲಿ ಎಷ್ಟೊಂದು ಜನ ತಮ್ಮನ್ನು ನೋಡ್ತಿದಾರೆ ಅನ್ನೋ ಖಬರೂ ಇಲ್ಲ" ಎಂದ. "ಅವ್ರು ಮಾಡ್ತಿರೋದೇ ತಮ್ಮನ್ನ ಜನರು ಟೀವಿಲಿ ನೋಡಲಿ ಅಂತ ಕಣೋ, ಅವ್ರೆಲ್ಲಾ ಏನು? ರಾಖಿನೂ ಇಷ್ಟೆಲ್ಲಾ ಮಾಡ್ತಿರೋದು ಯಾಕೆ? ಒಂದಷ್ಟು ಪ್ರಚಾರ ಸಿಗ್ಲಿ, ಸಿನೆಮಾಗಳಲ್ಲಂತೂ ಅವ್ಳಿಗೆ ಯಾರೂ ಚಾನ್ಸ್ ಕೊಡ್ತಾ ಇಲ್ಲ. ಹೀಗಾದ್ರೂ ಮಾಡಿ ಒಂದಷ್ಟು ದುಡ್ಡುಗಿಡ್ಡು ಮಾಡ್ಕೊಳ್ಳೊಣಾ ಅಂತ ಅಷ್ಟೇ!" ಎಂದು ನಾನು ಬೆಂಕಿಗೆ ಸ್ವಲ್ಪ ತುಪ್ಪ ಸುರಿದೆ. "ಅದು ಬೇರೆ ತಿಂಗಳುಗಟ್ಟಲೆ ಅಂಥಾ ಪ್ಯಾಲೆಸಿನಂತ ಹೋಟೆಲ್ಲಿನಲ್ಲಿ ವಸತಿ, ಊಟ, ಜೊತೆಗೆ ಏಳೆಂಟು ಹುಡುಗರ ಜೊತೆ ಫ್ಲರ್ಟ್ ಮಾಡೋ ಅವಕಾಶ, ಪುಕ್ಕಟೆ ಮದುವೆ, ಏನು ಚಾನ್ಸಪ್ಪಾ ಅವಳದ್ದು! ನಾಣಿ, ನಮ್ಮ ಮದುವೆನೂ ಎಂಡಿಟಿವಿಯವ್ರು ಮಾಡಿಕೊಡ್ತಾರಾ ಕೇಳೋ" ಎಂದು ರೇಗಿಸಿದೆ.

ನಾಣಿ ಸ್ವಲ್ಪ ತಬ್ಬಿಬ್ಬಾದ. ವಿಷಯ ಎಲ್ಲಿಂದೆಲ್ಲೋ ಹೋಗುತ್ತಿದೆ ಅಂತ ಅನ್ನಿಸಲು ಶುರುವಾಗಿರಬೇಕು ಅವನಿಗೆ. "ಅದರಲ್ಲೇನಪ್ಪಾ ತಪ್ಪು? ಪ್ರಚಾರ ಪಡೆಯಲು ಯಾರ್ಯಾರೋ ಏನೇನೋ ಮಾಡ್ತಾರೆ. ತನಗೆ ಇಷ್ಟವಾದ ಹುಡುಗನನ್ನು ಆಯ್ಕೆ ಮಾಡೋ ಸ್ವಾತಂತ್ರವೂ ಇಲ್ವಾ? " ಎಂದು ಮರುಪ್ರಶ್ನೆ ಹಾಕಿದ. "ಇದೆಯಪ್ಪಾ ಇದೆ, ಇಂಡಿಯಾದಲ್ಲಿ ಯಾರಿಗೆ ಏನು ಬೇಕೋ ಮಾಡಬಹುದು, ಅನ್ನಿಸಿದನ್ನು ಎಲ್ಲರ ಎದುರಿಗೂ ಹೇಳಬಹುದು. ಮೊನ್ನೆ ನಮ್ಮ ಸೆಂಟ್ರಲ್ ಮಿನಿಸ್ಟರ್ರು ಹೇಳ್ಲಿಲ್ವಾ? " ಟೀವಿ ಜಾಸ್ತಿ ನೋಡಿದ್ರೆ ಮಕ್ಕಳಾಗೋದು ಕಮ್ಮಿ ಆಗುತ್ತೆ ಅಂತಾ? ಇನ್ನೋಬ್ರು ಮಿನಿಸ್ಟರ್ರು ಶಾಲೆಗಳಲ್ಲಿ ಪರೀಕ್ಷೆಗಳನ್ನೇ ತೆಗೆದುಬಿಡೋಣ ಅಂತ ಹೇಳಲಿಲ್ವಾ? ತಲೆಬುಡ ಇಲ್ಲದೆ ಮಾತಾಡ್ತಾರೆ. ಏನು ಬೇಕಾದ್ರೂ ಹೇಳಿ, ಏನು ಬೇಕಾದರೂ ಮಾಡಿ ದಕ್ಕಿಸೋಕೊಳ್ಳಬಹುದು ಬಿಡು ಈ ದೇಶದಲ್ಲಿ. ಸಾಮಾಜಿಕ ಜವಾಬ್ದಾರಿ, ಪ್ರಾಮಾಣಿಕ ಕಳಕಳಿ ಅನ್ನೋದೇ ಇಲ್ಲ ಯಾರಿಗೂ! ರಾಜಕಾರಣಿಗಳಿಗೂ ಇಲ್ಲ, ಸಿಲಿಬ್ರೆಟಿಗಳಿಗೂ ಇಲ್ಲ, ಎಲ್ಲರನ್ನೂ ನಿಗ್ರಹಿಸಬೇಕಾದ ಮೀಡಿಯಾದರಿಗಂತೂ ಮೊದಲೇ ಇಲ್ಲ. ಎಲ್ಲರೂ ಸೇರಿ ಜನರ ದಾರಿತಪ್ಪಿಸೋ ಕೆಲ್ಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡ್ತಾ ಇದಾರೆ" ನಾನು ಸ್ವಲ್ಪ ಅಸಹನೆಯಿಂದಲೇ ಹೇಳಿದೆ.

"ಹೋಗ್ಲಿ ಬಿಡಪ್ಪಾ, ನಮಗ್ಯಾಕೆ ಅವ್ರ ಉಸಾಬರಿ? ನಮ್ಮ ಪಾಡಿಗೆ ನಾವಿದ್ರೆ ಆಯ್ತು ಬಿಡು" ಎಂದು ನಾಣಿ ಮೆತ್ತಗೆ ನನ್ನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ. ಇವನ ಹತ್ರ ಮಾತಾಡಿದರೆ ಉಪಯೋಗವಿಲ್ಲ ಎಂದೆನಿಸಿರಬೇಕು ಅವನಿಗೆ. ಹಾಗೆ ನೋಡಿದ್ರೆ, ಅವನ ಪ್ರಕಾರ ರಾಖಿಗೆ ಒಳ್ಳೇ ಗಂಡು ಹುಡುಕುವುದೂ ಕೂಡ ಬಹುದೊಡ್ಡ ಸಾಮಾಜಿಕ ಜವಾಬ್ದಾರಿನೇ. ಅವನಿಗೆ ಸಂಪೂರ್ಣವಾಗಿ ಸಮಾಧಾನವಾಗಿಲ್ಲವೆಂಬುದು ಅವನ ಮುಖದಲ್ಲೇ ಎದ್ದು ಕಾಣುತ್ತಿತ್ತು, ಆದರೆ ಮುಂದೆ ಮಾತಾಡಿದರೆ ತನ್ನ ಬುಡಕ್ಕೇ ಬರಬಹುದು ಎನ್ನಿಸಿತೆನೋ, ಸುಮ್ಮನಾದ.

"ಇನ್ನೂ ಎಷ್ಟು ದಿನ ನಡೆಯುತ್ತಪ್ಪಾ, ಅವಳ ವಿಚಾರಣೆ? ಯಾವಾಗಂತೆ ಮದುವೆ?" ನಾನು ಕುತೂಹಲದಿಂದ ಕೇಳಿದೆ. "ಸಧ್ಯದಲ್ಲೇ ಆಗುತ್ತೆ ಬಿಡು. ಇನ್ನೇನು ಬರೀ ನಾಲ್ಕು ಜನ ಉಳ್ಕೊಂಡಿದಾರೆ ಅಷ್ಟೆ. ಅವ್ರ ಮನೆಗೆಲ್ಲಾ ಹೋಗಿ ಯಾರು ಬೆಸ್ಟು ಅಂತ ಡಿಸೈಡ್ ಮಾಡ್ತಾಳೆ, ಆಮೇಲೆ ಇನ್ನೇನು ಮದುವೆನೇ" ಎಂದ ನಾಣಿ. ಅವನ ಮನಸ್ಸಿನಲಿ ಇದ್ದಿದ್ದು ಸಮಾಧಾನವೋ, ಅಸೂಯೆಯೋ ಗೊತ್ತಾಗಲಿಲ್ಲ. "ಅಲ್ಲಾ ನಾಣಿ ಒಂದು ವಿಷಯ ಗೊತ್ತಾಗ್ತ ಇಲ್ಲ ನೋಡು ನನಗೆ. ಎಲ್ಲಾ ರಿಯಾಲಿಟಿ ಶೋಗಳಲ್ಲಿ ಪಬ್ಲಿಕ್ ವೋಟ್ ಮಾಡೋ ಅವಕಾಶ ಇರುತ್ತೆ ಅಲ್ವಾ? ಇದರಲ್ಲಿ ಯಾಕೆ ಇಲ್ಲಾ? ನಮಗೂ ಅವಳ ಗಂಡನನ್ನು ಆಯ್ಕೆ ಮಾಡೋದಿಕ್ಕೆ ಚಾನ್ಸು ಸಿಗಬೇಕು ಕಣೋ. ಛೇ" ಎಂದು ಅಣಕಿಸಿದೆ. ನಾಣಿಗೆ ಸಡನ್ನಾಗಿ ಜ್ನಾನೋದಯವಾಯ್ತು! "ಹೌದಲ್ವೋ, ಆ ಆಪ್ಷನ್ನೇ ಕೊಟ್ಟಿಲ್ಲ ನೋಡು ಎಂಡಿಟಿವಿಯವರು, ನಾವೇ ರಾಖಿಗೆ ಹೇಳ್ಬಹುದಿತ್ತು ಇಂಥವನನ್ನು ಮದ್ವೆ ಆಗು ಅಂತಾ. ಎಂತಾ ಅನ್ಯಾಯ, ಛೇ" ಎಂದು ಅಲವತ್ತುಗೊಂಡ. ಅವನ ತಳಮಳ ನೋಡಿ ನನಗೆ ನಗು ಬಂತು. "ಇನ್ನೇನು ಸ್ವಲ್ಪ ದಿನಕ್ಕೇ ಶೋ ಮುಗಿದುಹೋಗುತ್ತೆ. ಆಮೇಲೆ ರಾಖಿನ ನೋಡೋದಿಕ್ಕೇ ಆಗಲ್ಲ" ಎಂದು ಬೇಜಾರಲ್ಲಿ ಹೇಳಿದ. "ಚಿಂತೆ ಮಾಡಬೇಡ್ವೋ, ಇನ್ನೊಂದು ಸ್ವಲ್ಪ ದಿನ ಬಿಟ್ಟು ’ರಾಖಿ ಕಾ ಡೈವೋರ್ಸ್’ ಅಥವಾ ’ರಾಖಿ ಕಾ ಪುನರ್ ಸ್ವಯಂವರ್" ಅಂತಾ ಶೋ ಮತ್ತೆ ಬರುತ್ತೆ. ಆವಾಗ ಮತ್ತೆ ನೋಡುವೆಯಂತೆ ರಾಖಿನ" ಎಂದು ತಮಾಷೆ ಮಾಡಿದೆ. ನಾಣಿ ಪೆಚ್ಚು ನಗು ನಕ್ಕ. "ಇದನ್ನೇ ಮಾತಾಡ್ತಾ ಇದ್ದರೆ, ಕೆಲ್ಸಾ ಯಾರು ಮಾಡೋದು, ನಡಿ, ರಾಖಿನ ಯಾರು ಮದುವೆ ಆದರೆ ನಮಗೇನಂತೆ? ಬಾ" ಎಂದು ಬಲವಂತವಾಗಿ ನಾಣಿನ ಎಳೆದುಕೊಂಡು ಹೋದೆ.

Tuesday, March 3, 2009

ಹಸಿರು ಹೀರೋ ಪೆನ್ನು.

ಜೋಷಿ ಮಾಸ್ತರ್ ರ ಸಮಾಜದ ಕ್ಲಾಸು ಮುಗಿದ್ರೆ ಸೀದಾ ಮನೇಗೇ ಅನ್ನೋ ವಿಷಯ ನೆನಪಾದಾಗ ಪುಟ್ಟನಿಗೆ ಒಂತರಾ ಖುಶಿಯಾಯ್ತು. ಶನಿವಾರ ಅಂದ್ರೆ ಯಾಕೋ ಗೊತ್ತಿಲ್ಲ, ಬೆಳಿಗ್ಗೆಯಿಂದ್ಲೇ ಪುಟ್ಟನಿಗೆ ಸಿಕ್ಕಾಪಟ್ಟೆ ಉತ್ಸಾಹ, ಬಹುಷಃ ಬರೀ ಅರ್ಧ ದಿನ ಅಷ್ಟೇ ಶಾಲೆ ಇರೋದು ಅನ್ನೋದ್ರಿಂದಾನೇ ಇರಬೇಕು. ಸಂಜೆ ಹೊತ್ತು ಪಕ್ಕದ್ಮನೆ ಮಲ್ಲಿ ಜೊತೆ ಒಂದ್ನಾಲ್ಕು ರೌಂಡ್ ಬ್ಯಾಡ್ಮಿಂಟನ್ ಆಡಬಹುದು ಅನ್ನೋ ಸಂತೋಷ ಬೇರೆ. ದಿನಾ ಸಂಜೆನೂ "ಹೋಮ್ ವರ್ಕ್ ಮಾಡೋ" ಅಂದು ಗೋಳು ಹೊಯ್ಕೊಳೊ ಅಮ್ಮನ ಕಾಟ ಬೇರೆ ಇರೋದಿಲ್ಲ. ಹಾಗಾಗಿ ಪುಟ್ಟನಿಗೆ ರವಿವಾರಕ್ಕಿಂತಲೂ ಶನಿವಾರನೇ ಅತ್ಯಂತ ಖುಶಿ ಕೊಡೋ ದಿನ. ಆದರೆ ಇವತ್ತು ಅವನಿಗೆ ಮನೆಗೆ ಬೇಗ ಹೋಗಬೇಕು ಅನ್ನಿಸಲು ಬೇರೆಯೇ ಕಾರಣವಿತ್ತು.

ಜೋಷಿ ಮಾಸ್ತರ್ರು ಬೋರ್ಡ್ ಕಡೆ ತಿರುಗಿ ಭಾರತದ ನಕ್ಷೆಯಲ್ಲಿ ಗುಜರಾತಿನ ಹತ್ತಿರ ತಿದ್ದತಾ ಇದ್ದರು. ಅದನ್ನು ಗಮನಿಸೋ ಮನಸ್ಸು ಪುಟ್ಟನಿಗೆ ಇದ್ದಂತಿರಲಿಲ್ಲ. ಅವನು ಮನಸ್ಸು ಬೇರೆ ಯಾವುದೋ ವಿಷಯದ ಬಗ್ಗೆ ಗಿರಕಿ ಹೊಡೀತಾನೇ ಇತ್ತು. ಎಲ್ಲ ನಡೆದಿದ್ದು ಬೆಳಗಿನ ಎರಡನೇ ಗಣಿತದ ಪಿರಿಯಡ್ಡಲ್ಲಿ. ಪಕ್ಕಕ್ಕೆ ಕುಳಿತ ಸಂಧ್ಯಾನ ಸ್ಕೂಲ್ ಬ್ಯಾಗು ಸ್ವಲ್ಪ ತೆರೆದುಕೊಂಡಿತ್ತು, ಅದರ ಒಂದು ಮೂಲೆಯಲ್ಲಿ ಹಸಿರು ಕಲರಿನ ಹೀರೋ ಪೆನ್ನೊಂದು ಅಸ್ತವ್ಯಸ್ತವಾಗಿ ಬಿದ್ದುಕೊಂಡಿರುವುದು ಪುಟ್ಟನಿಗೆ ಕಂಡುಹೋಗಿತ್ತು. ಅದರ ಕ್ಯಾಪು ಒಂದು ಸ್ವಲ್ಪ ವಾರೆಯಾಗಿತ್ತು. ಆ ಪೆನ್ನನ್ನು ಪುಟ್ಟ ಸಾಕಷ್ಟು ಸಲ ಸಂಧ್ಯಾನ ಜ್ಯಾಮೆಟ್ರಿ ಬಾಕ್ಸಲ್ಲಿ ನೋಡಿದ್ದ.ಆದರೆ ಇವತ್ತು ಪೆನ್ನು ಬಾಕ್ಸಿನ ಹೊರಗಿತ್ತು. ಸಂಧ್ಯಾ ಪಕ್ಕಕ್ಕೆ ತಿರುಗಿ ಲೆಕ್ಕ ಬಿಡಿಸುತ್ತಾ ಇದ್ದಳು. ಪುಟ್ಟನಿಗೆ ತಾನು ಯಾಕೆ ಹಾಗೆ ಮಾಡಿದೆ ಅಂತ ಈಗ್ಲೂ ಗೊತ್ತಾಗ್ತಾನೇ ಇಲ್ಲ. ಆದರೆ ಆ ಕ್ಷಣಕ್ಕೆ ಮಾತ್ರ ಮೆಲ್ಲಗೆ ಕೈ ಹಾಕಿ ಆ ಹೀರೋ ಪೆನ್ನನ್ನು ತೆಗೆದು ತನ್ನ ಬ್ಯಾಗಿಗೆ ಸೇರಿಸಿಕೊಂಡಿದ್ದ.

ಅವನ ಹತ್ರ ಪೆನ್ನೇ ಇಲ್ಲ ಅಂತೇನೂ ಇಲ್ಲ. ನಾಲ್ಕನೇತಿಯಲ್ಲಿ ಇದ್ದಾಗ ಅವನಪ್ಪ ಒಂದು ನೀಲಿ ಕಲರಿನ ಶಾಯಿ ಪೆನ್ನೊಂದನ್ನು ಕೊಡಿಸಿದ್ದರು. ಮೊದಲೊಂದು ವರ್ಷ ಆ ಪೆನ್ನು ಚೆನ್ನಾಗೇ ಬರೀತಿತ್ತು. ಅದರ ನಿಬ್ಬು ಒಂಥರಾ ಹಾಳೇನೇ ಹರೀತಾ ಇದೆ ಅಂತ ಬಹಳ ಅನಿಸಿದರೂ ಬರ್ತಾ ಬರ್ತಾ ಪುಟ್ಟನಿಗೆ ಅದು ಅಭ್ಯಾಸವಾಗಿ ಹೋಗಿತ್ತು. ಆದರೆ ಈಗೊಂದು ೮-೧೦ ತಿಂಗಳಿಂದ ಮಾತ್ರ ಯಾಕೋ ಅದು ಸಿಕ್ಕಾಪಟ್ಟೆ ತೊಂದರೆ ಕೊಡಲು ಶುರು ಮಾಡಿತ್ತು. ಬರೀತಾ ಬರೀತಾ ಸಡನ್ನಾಗಿ ನಿಂತೇ ಬಿಡುತ್ತಿತ್ತು. ಹಾಗಾದಾಗೆಲ್ಲಾ ಅದನ್ನು ನಾಲ್ಕು ಸಾರಿ ಕೊಡವಿ ಒಂದೆರಡು ಶಾಯಿ ಹುಂಡನ್ನು ಪಟ್ಟಿಯ ಮೇಲೋ, ಬೆಂಚಿನ ಮೇಲೋ ಬೀಳಿಸಿ, ನಿಬ್ಬನ್ನು ಅದಕ್ಕೆ ಒತ್ತಿ ಹಿಡಿದು ಶಾಯಿಯನ್ನು ಅದಕ್ಕೆ ಕುಡಿಸಿದರೆ ಮಾತ್ರ ಮತ್ತೆ ಪೆನ್ನು ಬರೆಯಲು ಶುರು ಮಾಡುತ್ತಿತ್ತು. ಪುಟ್ಟನ ಯಾವುದೇ ಪಟ್ಟಿ ತೆಗೆದು ನೋಡಿದ್ರೆ ಅಲ್ಲಲ್ಲಿ ಆ ಪೆನ್ನಿನ ಸಾಹಸದ ಕುರುಹು ಕಂಡೇ ಬಿಡುತ್ತದೆ.ಒಂದೆರಡು ಸಲ ಅವನ ಬಿಳಿ ಯುನೀಫಾರ್ಮ ಮೇಲೂ ಶಾಯಿ ಚೆಲ್ಲಿಕೊಂಡು ಅಮ್ಮನ ಕೈಲಿ ಬೈಸಿಕೊಂಡಿದ್ದ. ಅದು ಶುರುವಾಗಿ ತಿಂಗಳಲ್ಲೇ ಅವನು ಹೊಸಾ ಪೆನ್ನು ಬೇಕು ಅಂತ ಅಪ್ಪನ ಹತ್ರ ಬೇಡಿಕೆ ಇಟ್ಟಿದ್ದ. ಅವನಪ್ಪ ಅದನ್ನು ಅಷ್ಟೊಂದೇನೂ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಇನ್ನೂ ಒಂದು ವರ್ಷ ಅದರಲ್ಲೇ ನಿಭಾಯಿಸು ಅಂದು ಹೇಳಿ ಅವನನ್ನು ಸಾಗಹಾಕಿದ್ದರು. ಮೊನ್ನೆ ಮೊನ್ನೆ ಅದರ ಕಾಟ ಜಾಸ್ತಿಯಾದಾಗ ಮತ್ತೊಮ್ಮೆ ಪುಟ್ಟ ಬೇಡಿಕೆ ಇಟ್ಟಿದ್ದ. ಈ ಸಲ ಅವನಪ್ಪ ಸ್ಟ್ರಿಕ್ಟಾಗಿ "ನೀನು ಆರನೆತ್ತಿ ವಾರ್ಷಿಕ ಪರೀಕ್ಷೆಯಲ್ಲಿ ಹತ್ತು ನಂಬರೊಳಗೆ" ಬಂದರೆ ಮಾತ್ರ ಒಂದು ಹೀರೊ ಪೆನ್ನು ತೆಗೆಸಿಕೊಡುತ್ತೇನೆ ಎಂದು ಹೇಳಿಬಿಟ್ಟಿದ್ದರು. ಪುಟ್ಟನಿಗೆ ಏಕಕಾಲದಲ್ಲೇ ದುಃಖವೂ, ಸಂತೋಷವೂ ಆಗಿತ್ತು. ಸರಿಯಾಗಿ ಓದಿದರೆ ಕ್ಲಾಸಿನಲ್ಲಿ ಹತ್ತರೊಳಗೆ ಬರುವುದು ಅಷ್ಟೊಂದೇನೂ ಕಷ್ಟವಾಗಿರಲಿಲ್ಲ. ಹಾಗಾಗೇ ಅವನು ಕಳೆದ ತಿಂಗಳಿಂದ ಬೆಳಿಗ್ಗೆ ೬ ಗಂಟೆಗೇ ಎದ್ದು ಮುಕ್ಕಾಲು ತಾಸು ಓದಲು ಶುರುಮಾಡಿಬಿಟ್ಟಿದ್ದ, ಅವನಮ್ಮನಿಗೂ ಆಶ್ಚರ್ಯವಾಗುವಂತೆ.

ಹೀರೊ ಪೆನ್ನು ಸಾಧಾರಣವಾದ ಪೆನ್ನಂತೂ ಅಲ್ಲ ಅನ್ನುವುದು ಪುಟ್ಟನಿಗೆ ಯಾವಾಗಲೋ ಖಾತ್ರಿಯಾಗಿ ಹೋಗಿತ್ತು. ಪಕ್ಕದ್ಮನೆ ಮಲ್ಲಿ ಹತ್ರ ವರ್ಷದ ಹಿಂದೇ ಹೀರೊ ಪೆನ್ನು ಇತ್ತು. ಅವನ ಕ್ಲಾಸಲ್ಲಿ ಹಲವಾರು ಹುಡುಗರ ಕೈಯಲ್ಲಿ ಹೀರೋ ಪೆನ್ನು ಆಗಲೇ ಇತ್ತು. ಅವರೆಲ್ಲರ ಬಾಯಲ್ಲಿ ಅದರ ಗುಣಗಾನಗಳನ್ನು ಕೇಳಿ ಕೇಳಿ ಪುಟ್ಟನಿಗೆ ತನ್ನ ಹತ್ತಿರನೂ ಒಂದು ಹೀರೊ ಪೆನ್ನು ಇರಬೇಕಿತ್ತೆಂದು ತೀವ್ರವಾಗಿ ಅನಿಸಲು ಶುರುವಾಗಿತ್ತು. ಪೆನ್ನಿನೊಳಗೇ ಹೊಕ್ಕಿಕೊಂಡಂತೆ ಇದ್ದ ಅದರ ನಿಬ್ಬು, ಮೆಲ್ಲಗೆ ಜಾರುವ ಅದರ ಕ್ಯಾಪು, ಎರಡೆರಡು ಕಲರ್ರಿನ ವಿನ್ಯಾಸ, ಬೆರಳು ಹಿಡಿವಲ್ಲಿನ ನುಣುಪು ಎಲ್ಲವೂ ಪುಟ್ಟನಿಗೆ ಬಹಳ ಇಷ್ಟವಾಗಿತ್ತು. ಶಾಯಿ ಕಕ್ಕುವುದು, ಮಧ್ಯದಲ್ಲೇ ನಿಂತುಬಿಡುವುದು, ಹಾಳೆಯನ್ನೇ ಕೊರೆಯುವಂತೆ ಓಡುವುದು ಇಂಥಹ ಕೆಟ್ಟ ಚಾಳಿಗಳೇನೂ ಅದಕ್ಕೆ ಇಲ್ಲ ಅನ್ನುವುದನ್ನು ಅವನು ಹಲವು ಸಹಪಾಠಿಗಳ ಬಾಯಲ್ಲಿ ಕೇಳಿತಿಳಿದುಕೊಂಡಿದ್ದ. ಮಲ್ಲಿ ಹತ್ರ ಕಾಡಿಬೇಡಿ, ಒಂದು ಸಲ ತಾನೂ ಅವನ ಪೆನ್ನು ತೆಗೆದುಕೊಂಡು ಬರೆಯಲು ಪ್ರಯತ್ನ ಪಟ್ಟಿದ್ದ. ಅದೂ ಒಂದು ತರ ಹಾಳೆಯನ್ನೇ ಕೊರೆದ ಹಾಗೇ ಪುಟ್ಟನಿಗೆ ಅನ್ನಿಸಿತ್ತು. ಮಲ್ಲಿಗೆ ಅದನ್ನು ಹೇಳಿದರೆ, ಅವನು ಅದು ಹಾಗೆಲ್ಲ ಬೇರೆಯವರು ಬರೆದರೆ ಸರಿಯಾಗಿ ಬರೆಯುವುದಿಲ್ಲವೆಂದೂ, ಅದು ಅವನು ಹಿಡಿದರೆ ಮಾತ್ರ ಸರಿಯಾಗಿ ಬರೆಯುತ್ತದೆ ಎಂದೂ ಹೇಳಿದ್ದ. ಪುಟ್ಟನಿಗೆ ಹೀಗೆ ತಮ್ಮ ಮಾತೊಂದನ್ನೇ ಕೇಳುವಂತ ಪೆನ್ನೊಂದಿದ್ದರೆ ಎಷ್ಟು ಚೆನ್ನ ಎಂದೆನಿಸಿ, ಹೀರೋ ಪೆನ್ನಿನ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿತ್ತು.ಇವೆಲ್ಲ ಕಾರಣಗಳಿಗಾಗಿಯೇ ಪುಟ್ಟನಿಗೆ ಇವತ್ತು ಸಂಧ್ಯಾಳ ಬ್ಯಾಗಿನೊಳಗೆ ಆ ಹೀರೋ ಪೆನ್ನು ಕಂಡಕೂಡಲೇ ತೆಗೆದುಕೊಳ್ಳಬೇಕೆಂದು ಬಲವಾಗಿ ಅನ್ನಿಸಿ, ಹಾಗೆ ಮಾಡಿಬಿಟ್ಟಿದ್ದ.

ಮಧ್ಯಾಹ್ನ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ, ಪುಟ್ಟ ಮೆಲ್ಲಗೆ ತನ್ನ ಬ್ಯಾಗಿನಿಂದ ಹೀರೋ ಪೆನ್ನನ್ನು ಹೊರಗೆ ತೆಗೆದ. ಅದರ ಹೊಂಬಣ್ಣದ ಕ್ಯಾಪು ಮಿರಿಮಿರಿ ಮಿಂಚುತ್ತಿತ್ತು. ಪಟ್ಟಿಯೊಂದರ ಹಿಂಭಾಗದ ಮೇಲೆ ಪೆನ್ನಿನಿಂದ ಬರೆಯಲು ಪ್ರಯತ್ನಿಸಿದ. ಆದರೆ ಪುಟ್ಟನ ಉತ್ಸಾಹಕ್ಕೆ ತಣ್ಣೀರೆರೆಚುವಂತೆ, ಪೆನ್ನು ಬರೆಯುತ್ತಾನೇ ಇಲ್ಲ! ಬರೀ ಕರಕರ ಶಬ್ದ ಮಾತ್ರ ಮಾಡುತ್ತಿದೆ. ಪುಟ್ಟ ಅಭ್ಯಾಸ ಬಲದಿಂದ ಎರಡು ಸಲ ಪೆನ್ನನ್ನು ಕೊಡವಿದ, ಊಹುಂ, ಒಂಚೂರೂ ಶಾಯಿಯೂ ಬೀಳಲಿಲ್ಲ. ಪುಟ್ಟ ಒಂದುಸಲ ಪೆಚ್ಚಾದರೂ, ಸಾವರಿಸಿಕೊಂಡು ಅದರ ಕೆಳಭಾಗವನ್ನು ಬಿಚ್ಚಿ, ಶಾಯಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಲು ಪ್ರಯತ್ನಿಸಿದ. ಆಗಲೇ ಗೊತ್ತಾಗಿದ್ದು ಅವನಿಗೆ, ಹೀರೋ ಪೆನ್ನು ಬೇರೆ ಶಾಯಿ ಪೆನ್ನುಗಳಿಗಿಂತ ನಿಜಕ್ಕೂ ಭಿನ್ನವಾಗಿದೆ ಎನ್ನುವುದು. ಅದರ ಮೇಲುಭಾಗಕ್ಕೆ ಅಂಟಿಕೊಂಡಂತೇ ಒಂದು ಉದ್ದನೆಯ ರಬ್ಬರ್ ಟ್ಯೂಬು ಇತ್ತು. ಅದರಲ್ಲೇ ಶಾಯಿ ತುಂಬುತ್ತಾರೇನೋ ಎಂದು ಅವನಿಗೆ ಅನಿಸಿತು. ಟ್ಯೂಬನ್ನು ಪೆನ್ನಿನಿಂದ ಬೇರ್ಪಡಿಸಲು ಪ್ರಯತ್ನಿಸಿದ. ಇಲ್ಲ, ಅದು ಗಟ್ಟಿಯಾಗಿ ಅಂಟಿಕೊಂಡೇ ಇತ್ತು. ಅದರಲ್ಲಿ ಶಾಯಿ ಹೇಗೆ ತುಂಬುವುದು ಎನ್ನುವುದೇ ಪುಟ್ಟನಿಗೆ ಗೊತ್ತಾಗಲಿಲ್ಲ. ಈಗ ಪುಟ್ಟ ನಿಜಕ್ಕೂ ಗೊಂದಲಕ್ಕೆ ಬಿದ್ದ. ಹೀರೋ ಪೆನ್ನಿನ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡರೂ, ಇದೊಂದರ ಬಗ್ಗೆ ಯಾರ ಹತ್ತಿರನೂ ಕೇಳಲಿಲ್ಲವಲ್ಲ ಎಂದು ಪೇಚಾಡಿಕೊಂಡ. ಆದರೆ ಈಗೇನೂ ಮಾಡುವಂತಿರಲಿಲ್ಲ.

ಸಂಜೆಯ ತನಕವೂ ಅವನಿಗೆ ಇದರದ್ದೇ ಯೋಚನೆಯಾಯ್ತು. ಮಲ್ಲಿಯ ಹತ್ತಿರ ಕೇಳೋಣವೆಂದರೆ ಅವನು ಮೊದಲೇ ಸಂಶಯ ಪಿಶಾಚಿ. ಒಂದು ಉತ್ತರ ಹೇಳಲು ೧೦ ಪ್ರಶ್ನೆ ಕೇಳುತ್ತಾನೆ. ಯಾಕೋ ಅವನ ಹತ್ತಿರ ಕೇಳುವುದು ಅಷ್ಟೊಂದು ಒಳ್ಳೆಯದೆಲ್ಲವೆಂದು ಒಳಮನಸು ಹೇಳತೊಡಗಿತು. ಅಷ್ಟರಲ್ಲೇ ಪುಟ್ಟನ ಅಮ್ಮ ಅವನನ್ನು ಕರೆದು, ಇವತ್ತು ಅಕ್ಕನನ್ನು ಅವಳ ಭರತನಾಟ್ಯ ಕ್ಲಾಸಿಗೆ ಕರೆದುಕೊಂಡು ಹೋಗಿ, ಕ್ಲಾಸು ಮುಗಿದ ಮೇಲೆ ವಾಪಸ್ಸು ಅವಳ ಜೊತೆಯೇ ಬರಬೇಕೆಂದು ತಾಕೀತು ಮಾಡಿಬಿಟ್ಟಳು. ಅವನಪ್ಪ ಮನೆಗೆ ಬೇಗ ಬರದಿದ್ದದೆ ಬಹಳಷ್ಟು ಶನಿವಾರ ಈ ಕೆಲಸ ಪುಟ್ಟನ ಪಾಲಿಗೆ ಬರುತ್ತಿತ್ತು. ಅಕ್ಕನಿಗೆ ಹೆದರಿಕೆ ಅಂತಲ್ಲ, ಆದರೂ ಅವಳ ಜೊತೆ ಯಾರಾದರೂ ಇದ್ದರೆ ಅನುಕೂಲ ಅಂತೆನಿಸಿ ಅಮ್ಮ ಹಾಗೆ ಮಾಡುತ್ತಿದ್ದರು. ಪುಟ್ಟನಿಗೆ ಅದರಿಂದ ಖುಶಿಯೇ ಆಯಿತು. ಮಲ್ಲಿಯ ಜೊತೆ ಬ್ಯಾಡ್ಮಿಂಟನ್ ಆಡಲೂ ಇವತ್ತು ಅವನಿಗೆ ಮನಸ್ಸಿರಲಿಲ್ಲ.

ಅಕ್ಕನ ಭರತನಾಟ್ಯ ಕ್ಲಾಸು ಬಹಳ ದೂರವೇನಿರಲಿಲ್ಲ. ಅಗಸನ ಕಟ್ಟೆ ಕೆರೆ ದಾಟಿ ಆ ಕೆರೆ ಏರಿ ಮೇಲಿರುವ ವಿಷ್ಣು ಮಠದ ತನಕ ಹೋಗಬೇಕು ಅಷ್ಟೇ. ಅಲ್ಲಿ ಒಬ್ಬ ಮೇಷ್ಟ್ರು ಪ್ರತೀ ಶನಿವಾರ ಸುತ್ತಮುತ್ತಲಿನ ಊರ ಹೆಣ್ಣುಮಕ್ಕಳಿಗೆ ಭರತ ನಾಟ್ಯ ಕಲಿಸುತ್ತಿದ್ದರು. ಅವರು ಮೂಲ ಮೈಸೂರಿನವರು, ಹೆಸರು ವಿಷ್ಣು ಶರ್ಮ, ಅನ್ನುವುದಷ್ಟೇ ಎಲ್ಲರಿಗೂ ಗೊತ್ತಿದ್ದಿದ್ದು. ಪುಟ್ಟನಿಗೆ ಗಂಡು ಮೇಷ್ಟರೊಬ್ಬರು ಹೆಣ್ಣುಮಕ್ಕಳಿಗೆ ಭರತನಾಟ್ಯ ಕಲಿಸುತ್ತಾರೆ ಎನ್ನುವುದೇ ಒಂದು ಸೋಜಿಗವಾಗಿತ್ತು. ದಾರಿ ಮಧ್ಯೆ ಅಕ್ಕನ ಹತ್ತಿರ ಹೀರೋ ಪೆನ್ನಿನ ಬಗ್ಗೆ ಕೇಳಬೇಕು ಎಂದೆನ್ನಿಸಿದರೂ ಪೂರ್ತಿಯಾಗಿ ಧೈರ್ಯ ಸಾಕಾಗಲಿಲ್ಲ. ಅಕ್ಕನೂ ಯಾವುದೋ ಡ್ಯಾನ್ಸ್ ಸ್ಟೆಪ್ಪಿನ ಗುಂಗಿನಲ್ಲೇ ಇದ್ದಳು. ಸುಮ್ಮನೆ ಅವಳ ಜೊತೆ ಹೆಜ್ಜೆಹಾಕಿದ. ಇವರು ಹೋಗುವಷ್ಟರಲ್ಲೇ ಕ್ಲಾಸು ಶುರುವಾಗಿಬಿಟ್ಟಿತ್ತು. ಪುಟ್ಟನ ಅಕ್ಕ ಓಡೋಡಿ ಹೋಗಿ ಮುಂದಿನ ಸಾಲಿನಲ್ಲೇ ಸೇರಿಕೊಂಡಳು. ಪುಟ್ಟ ಅಲ್ಲಿಯೇ ಇದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಳಿತುಕೊಂಡ . ಪ್ರತೀ ಸಲ ಅಕ್ಕನ ಜೊತೆ ಬಂದಾಗಲೂ ಅಲ್ಲಿ ಸಮಯ ಕಳೆಯುವುದು ಪುಟ್ಟನಿಗೆ ಬಹುಕಷ್ಟಕರವಾದ ಸಂಗತಿಯಾಗಿತ್ತು. ಸಿಮೆಂಟ್ ಕಟ್ಟೆಯ ಮೇಲೆ ಕುಳಿತು ಪಕ್ಕದಲ್ಲೇ ಇದ್ದ ಕಿಟಕಿಯಿಂದ ವಿಷ್ಣು ಮಠಕ್ಕೆ ಬರುತ್ತಿದ್ದ ಭಕ್ತಾದಿಗಳನ್ನು ನೋಡುತ್ತಲೇ ಹೇಗೋ ಒಂದುತಾಸನ್ನು ಕಷ್ಟದಿಂದ ಕಳೆಯುತ್ತಿದ್ದ. ಆದರೆ ಇವತ್ಯಾಕೋ ಅವನಿಗೆ ಅಕ್ಕ ಡ್ಯಾನ್ಸು ಮಾಡುತ್ತಿರುವದನ್ನು ನೋಡಬೇಕೆನ್ನಿಸಿತು. ಸುಮ್ಮನೆ ನೋಡುತ್ತಾ ಕುಳಿತ. ಕಿಟಕಿಯಿಂದ ಒಳಗೆ ಬರುತ್ತಿದ್ದ ಬಿಸಿಲುಕೋಲು ಡ್ಯಾನ್ಸ್ ಮಾಡುತ್ತಿದ್ದ ಹುಡುಗಿಯರ ಕಾಲುಗಳ ಮಧ್ಯೆ ಸಿಲುಕಿ ವಿಚಿತ್ರವಾದ ಬೆಳಕಿನ ವಿನ್ಯಾಸವನ್ನು ಸೃಷ್ಟಿಮಾಡುತ್ತಿತ್ತು. ಮೇಷ್ಟ್ರು ಎಲ್ಲರ ಬಳಿಗೂ ಸಾಗಿ ಸ್ಟೆಪ್ ತಪ್ಪಿದ್ದರೆ ಸರಿಮಾಡುತ್ತಿದ್ದರು. ಮೇಷ್ಟ್ರ ಜೊತೆ ಎಲ್ಲರೂ "ಮೆಲ್ಲ ಮೆಲ್ಲನೆ ಬಂದನೆ, ಗೋಪಮ್ಮಾ ಕೇಳೆ, ಮೆಲ್ಲಮೆಲ್ಲನೇ ಬಂದನೇ.." ಎಂದು ಲಯಬಧ್ಧವಾಗಿ ಹಾಡುತ್ತಾ ಡ್ಯಾನ್ಸ್ ಮಾಡುತ್ತಾ ಇದ್ದರು. ಪುಟ್ಟ ಅಕ್ಕನ ಬದಲಾಗುತ್ತಿದ್ದ ಮುಖಚರ್ಯೆಯನ್ನೇ ಗಮನಿಸುತ್ತಿದ್ದ. "ಮೆಲ್ಲ ಮೆಲ್ಲನೆ ಬಂದನೇ, ಗೋಪಮ್ಮಾ ಕೇಳೆ" ಎಂದು ಹಾಡುವಾಗ ಒಂಚೂರು ಕಾತರ ಭಾವ, "ಮೆಲ್ಲ ಮೆಲ್ಲಗೆ ಬಂದು ಗಲ್ಲಕೆ ಮುತ್ತ ಕೊಟ್ಟು" ಎಂದು ಗಲ್ಲದ ಮೇಲೆ ತೋರು ಬೆರಳಿಡುವಾಗಿನ ಒಂಚೂರು ನಾಚಿಕೆ, "ಕೇಳದೇ ಓಡಿಹೋದ ಗೊಲ್ಲಗೆ ಬುದ್ಧಿಯ ಹೇಳೆ" ಎಂದು ಹಾಡುವಾಗಿನ ಹುಸಿಮುನಿಸು, ಎಷ್ಟೆಲ್ಲಾ ಭಾವಗಳು! ಮುಂದೆ ಅಕ್ಕ ಒಳ್ಳೆ ಡ್ಯಾನ್ಸರ್ ಖಂಡಿತ ಆಗುತ್ತಾಳೆ ಅನ್ನಿಸಿತು ಪುಟ್ಟನಿಗೆ.

ಹಾಗೇ ಎಷ್ಟು ಹೊತ್ತಾಯಿತೋ ಗೊತ್ತಿಲ್ಲ. ಹುಡುಗಿಯೊಬ್ಬಳು ಕಾಲು ಸೋತುಹೋಯಿತೆಂಬಂತೆ ಬಂದು ಪುಟ್ಟನ ಪಕ್ಕಕ್ಕೇ ಬಂದು ಕುಳಿತಳು. ಅವಳ ಮುಖದಿಂದ ಬೆವರು ನಲ್ಲಿ ನೀರಿನ ತರ ಧಾರಾಕಾರವಾಗಿ ಹರಿಯುತ್ತಿತ್ತು. ಡ್ಯಾನ್ಸ್ ಮಾಡುವುದು ಅಷ್ಟೆಲ್ಲಾ ಕಷ್ಟವಿರಬಹುದೆಂದು ಪುಟ್ಟ ಯಾವತ್ತೂ ಊಹಿಸಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲೇ ಕುಳಿತು ಸುಧಾರಿಸಿಕೊಂಡ ಮೇಲೆ ಅವಳು ಹಿಂದೆಲ್ಲೋ ಹೋಗಿ ಸ್ಕೂಲ್ ಬ್ಯಾಗೊಂದನ್ನು ಹಿಡಿದುಕೊಂಡು ಬಂದಳು. ಪುಟ್ಟ ನೋಡುತ್ತಿದ್ದಂತೆಯೇ ಅದರಲ್ಲಿಂದ ಪಟ್ಟಿಯೊಂದನ್ನು ತೆಗೆದು, ಕೆಂಪು ಹಳದಿ ಬಣ್ಣದ ಜ್ಯಾಮೆಟ್ರಿ ಬಾಕ್ಸಿನಿಂದ ಪೆನ್ನು ತೆಗೆದು ಏನೋ ಬರೆಯತೊಡಗಿದಳು. ಪುಟ್ಟ ನೋಡುತ್ತಾನೆ, ಏನಾಶ್ಚರ್ಯ! ಅವಳ ಕೈಲಿರುವುದೂ ಹೀರೋ ಪೆನ್ನೇ. ಹೇಳಿಕೊಳ್ಳದಾದಷ್ಟು ಸಂತಸವಾಯಿತು ಅವನಿಗೆ. ಅಪ್ರಯತ್ನಪೂರ್ವಕವಾಗಿ "ಅದು ಹೀರೋ ಪೆನ್ನಾ?" ಅನ್ನೋ ಉದ್ಘಾರ ಅವನ ಬಾಯಿಂದ ಬಿದ್ದೇ ಹೋಗಿತ್ತು. ಬರೆಯುತ್ತಿದ್ದ ಹುಡುಗಿ, ತನ್ನ ಕೈಯಲ್ಲಿರುವುದು ಕೊಹಿನೂರ್ ವಜ್ರವೇ ಎಂಬಂತೆ ಗತ್ತಿನಿಂದ ಪುಟ್ಟನ ಕಡೆ ನೋಡಿ ತಲೆಯಾಡಿಸಿದಳು. ತನಗೇನೂ ಗೊತ್ತೇ ಇಲ್ಲ ಎಂಬಂತೆ ಪುಟ್ಟ "ಅದಕ್ಕೆ ಶಾಯಿ ತುಂಬುವುದು ಹೇಗೆ ಗೊತ್ತಾ?" ಎಂದು ಕೇಳಿದ. ಆ ಪ್ರಶ್ನೆ ಕೇಳುವಾಗ ಸಾಧ್ಯವಾದಷ್ಟು ಮುಗ್ಧ ಮುಖ ಮಾಡಲು ಅವನು ಪ್ರಯತ್ನಪಟ್ಟಿದ್ದು ಎದ್ದುಕಾಣುತ್ತಿತ್ತು. ಆದರೆ ಆ ಹುಡುಗಿಯ ಅಹಂಗೆ ಸ್ವಲ್ಪ ಘಾಸಿಯಾಗಿರಬೇಕು. ಅಂಥಾ ಪೆನ್ನು ಇಟ್ಟುಕೊಂಡು ಯಕಶ್ಚಿತ್ ಅದಕ್ಕೆ ಶಾಯಿ ತುಂಬುವುದು ಹೇಗೆ ಅನ್ನುವುದು ಗೊತ್ತಿಲ್ಲವೆಂದರೆ ಮರ್ಯಾದೆ ಪ್ರಶ್ನೆ ಅಲ್ಲವೇ? "ಓ, ಶಾಯಿ ತುಂಬೋದಾ? ಅದೇನ್ ಮಹಾ? ಹೀಗೆ" ಎನ್ನುತ್ತಾ, ಅದರ ಕೆಳಭಾಗವನ್ನು ಸಂಪೂರ್ಣ ಕಳಚಿ, ಪೆನ್ನನ್ನು ತಲೆಕೆಳಗು ಮಾಡಿ, ರಬ್ಬರ್ ಟ್ಯೂಬ್ ಒತ್ತಿ ಹಿಡಿದು ಹೇಗೆ ಇಂಕ್ ಬಾಟಲಲ್ಲಿ ಇಡಬೇಕು ಎಂದು ತೋರಿಸಿದಳು. ಪುಟ್ಟನಿಗೆ ಈಗ ಸಮಾಧಾನವಾಯಿತು. "ಓ ಹಾಗಾ?" ಎಂದು ತಲೆತೂಗಿದ. ಹುಡುಗಿ ಬರೆಯುವುದನ್ನು ಮುಂದುವರಿಸಿದಳು.

ಅಕ್ಕನ ಜೊತೆ ವಾಪಾಸ್ ಮನೆಗೆ ಬರುತ್ತಿದ್ದಾಗ ಅವನ ಕಾಲುಗಳು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಜಗತ್ತನ್ನೇ ಗೆದ್ದಷ್ಟು ಹುರುಪು ಅವನ ಮೈಮನಗಳಲ್ಲಿ. ಆದರೂ ಸುಸ್ತಾದ ಅಕ್ಕನ ಕಾಲುಗಳಿಗೆ ಜೊತೆ ನೀಡಲು ಅವನು ಸಾವಕಾಶವಾಗಿಯೇ ಬರಬೇಕಾಯಿತು. ಮನೆಗೆ ಬಂದ ಮೇಲೆ ಅವನು ಮಾಡಿದ ಮೊದಲ ಕೆಲಸವೇ ತನ್ನ ರೂಮ್ ನ ಬಾಗಿಲು ಹಾಕಿಕೊಂಡು ಹೀರೋ ಪೆನ್ನಿಗೆ ಶಾಯಿ ತುಂಬಲು ಪ್ರಯತ್ನಿಸಿದ್ದು. ಸುಮಾರು ಹೊತ್ತು ಒದ್ದಾಡಿದ ನಂತರ ಅದರ ರಬ್ಬರ್ ಟ್ಯೂಬಿನಲ್ಲಿ ಒಂಚೂರು ಶಾಯಿಯನ್ನು ತುಂಬಲು ಸಾಧ್ಯವಾಯಿತು ಅವನಿಗೆ. ಸ್ಕೂಲ್ ಬ್ಯಾಗಿನಿಂದ ಪಟ್ಟಿಯೊಂದನ್ನು ತೆರೆದು ಅದರಲ್ಲಿ ಬರೆಯಲಾರಂಭಿಸಿದ. ಆಹಾ ಎಷ್ಟು ಸುಲಲಿತವಾಗಿ ಓಡುತ್ತಿದೆ ಪೆನ್ನು! ಪುಟ್ಟನಿಗೆ ಹಾಳೆಯ ಮೇಲೆ ಬರೆದ ಅನುಭವವೇ ಆಗುತ್ತಿಲ್ಲ. ಪೆನ್ನು ಅವನ ಕೈಯಲ್ಲಿ ಸರಾಗವಾಗಿ ಹರಿಯುತ್ತಿದೆ! ಪುಟ್ಟನಿಗೆ ಬರೆಯುವುದನ್ನು ನಿಲ್ಲಿಸಬೇಕು ಎಂದೆನ್ನಿಸುತ್ತಲೇ ಇಲ್ಲ. ಹಾಗೇ ಎಷ್ಟು ಹೊತ್ತು ಬರೆದನೋ ಅವನಿಗೇ ಗೊತ್ತು. ಕೊನೆಗೊಮ್ಮೆ ಕೈಯೆಲ್ಲಾ ಜೋಮು ಹಿಡಿದ ಹಾಗೆ ಅನ್ನಿಸಿದಾಗ ಪೆನ್ನನ್ನು ಮುಚ್ಚಿಟ್ಟು, ಮೆಲ್ಲಗೆ ತನ್ನ ಸ್ಕೂಲ್ ಬ್ಯಾಗಿಗೆ ಸೇರಿಸಿದ.

ಪುಟ್ಟನ ರವಿವಾರವೆಲ್ಲಾ ಇದರ ಸಂಭ್ರಮದಲ್ಲೇ ಕಳೆದುಹೋಯ್ತು.ಆದರೆ ರಾತ್ರಿಯಾದಂತೆಲ್ಲಾ ಅವನಿಗೊಂದು ಅವ್ಯಕ್ತ ಭಯ ಆವರಿಸಿಕೊಳ್ಳತೊಡಗಿತು. ತಾನು ಪೆನ್ನು ಕದ್ದಿದ್ದು ಸಂಧ್ಯಾಳಿಗೆ ಗೊತ್ತಾದರೆ? ಇಷ್ಟು ಹೊತ್ತಿಗಂತೂ ಅವಳಿಗೆ ತನ್ನ ಪೆನ್ನು ಕಳೆದುಹೋಗಿರುವುದು ಖಂಡಿತವಾಗಿ ಗೊತ್ತಾಗಿರುತ್ತದೆ. ನಾಳೆ ಶಾಲೆಯಲ್ಲಿ ಮಾಸ್ತರ್ರಿಗೆ ಹೇಳಿ ಎಲ್ಲರ ಸ್ಕೂಲ್ ಬ್ಯಾಗ್ ಗಳನ್ನು ಹುಡುಕಿಸಿದರೆ? ಅದರ ಕಲ್ಪನೆ ಬಂದ ಕೂಡಲೇ ಪುಟ್ಟ ನಿಜವಾಗಿಯೂ ಕಂಗಾಲಾದ. ಹೀರೋ ಪೆನ್ನನ್ನು ಬ್ಯಾಗಿನಿಂದ ತೆಗೆದು ಮನೆಯಲ್ಲೇ ಎಲ್ಲೋ ಅಡಗಿಸಿಡಬೇಕೆಂದು ಅನಿಸಿತೊಡಗಿತು. ಆದರೆ ಅಡಗಿಸಿಡುವುದಾದರೂ ಎಲ್ಲಿ? ಅಕ್ಕನ, ಅಮ್ಮನ ಕಣ್ಣಿಂದ ತಪ್ಪಿಸಿ ಇಡುವುದು ಅಸಾಧ್ಯವೆಂದೇ ಅವನ ಮನಸು ಹೇಳತೊಡಗಿತು. ಅದಲ್ಲದೇ ಅಮ್ಮನ ಕೈಲಿ ಸಿಕ್ಕಿಹಾಕಿಕೊಂಡರೆ ಪರಿಸ್ಥಿತಿ ಇನ್ನೂ ಗಂಭೀರವಾಗುವುದರಲ್ಲಿ ಪುಟ್ಟನಿಗೆ ಎಳ್ಳಷ್ಟೂ ಸಂಶಯವಿರಲಿಲ್ಲ. ಈ ವಿಚಿತ್ರ ಸಂಕೋಲೆಯಲ್ಲಿ ಸಿಕ್ಕಿಬಿದ್ದಿದ್ದಕಾಗಿ ಪುಟ್ಟನಿಗೆ ಬಹಳ ಬೇಸರ, ದುಃಖ ಎರಡೂ ಆಯಿತು. ಈ ಸಂದಿಗ್ಧದ ಮುಂದೆ ಹೀರೋ ಪೆನ್ನಿನ ಸಂಭ್ರಮ ಪೂರ್ತಿಯಾಗಿ ಕರಗಿಹೋಯ್ತು. ರಾತ್ರಿ ಊಟಕ್ಕೆ ಕುಳಿತಾಗ ಪುಟ್ಟನ ಅನ್ಯಮನಸ್ಕತೆಯನ್ನು ಅಮ್ಮ ಗಮನಿಸಿ, "ಎನಾಯ್ತೋ ಪುಟ್ಟಾ?" ಅಂದು ಕೇಳಿಯೂ ಇದ್ದರು. ಪುಟ್ಟನಿಗೆ ಊಟ ಸರಿಯಾಗಿ ಇಳಿಯಲೂ ಇಲ್ಲ. ರಾತ್ರಿ ನಿದ್ದೆಯೂ ಸರಿಯಾಗಿ ಬರಲಿಲ್ಲ. ಬೆಳಗ್ಗಿನ ಜಾವದಲ್ಲೆಲ್ಲೋ ಪುಟ್ಟನಿಗೆ ಕನಸಿನಲ್ಲಿ ಸಂಧ್ಯಾ ಬಂದು "ನನ್ನ ಪೆನ್ನು ಕದ್ದಿದ್ದಕ್ಕೆ ನಿನಗೆ ಸರಿಯಾದ ಶಾಸ್ತಿ ಮಾಡುತ್ತೀನಿ ನೋಡು" ಎಂದು ಅಣಕಿಸಿದ ಹಾಗೆ ಆಯಿತು. ಪುಟ್ಟನಿಗೆ ಸಟ್ಟನೇ ಎಚ್ಚರವಾಯಿತು. ಅವನ ಮೈಯೆಲ್ಲ ಸಿಕ್ಕಾಪಟ್ಟೆ ಬೆವರಿ ಹೋಗಿತ್ತು. ಆಮೇಲೆ ಅವನಿಗೆ ನಿದ್ರೆ ಬರಲೇ ಇಲ್ಲ.

ಯಾವತ್ತಿನಂತೆ ಅವನಿಗೆ ಬೇಗ ಎದ್ದು ಓದಲಾಗಲಿಲ್ಲ. "ಆರಂಭಶೂರ" ಎಂದು ಅವನಮ್ಮ ಪುಟ್ಟನನ್ನು ತಿಂಡಿತಿನ್ನುವಾಗ ಕೆಣಕಿದರು. ಪುಟ್ಟ ಏನೂ ಹೇಳಲಿಲ್ಲ. ಅವನ ಕಣ್ಣೆಲ್ಲಾ ಕೆಂಪಾಗಿಹೋಗಿತ್ತು. ಆದರೆ ಮನಸ್ಸು ಒಂದು ತಹಬದಿಗೆ ಬಂದಿತ್ತು. ಅವತ್ತು ಶಾಲೆಗೆ ಹೋಗಲು ಅವನಿಗೆ ಎಲ್ಲಿಲ್ಲದ ಅವಸರ. ಶಾಲೆಗೆ ಹೋದ ತಕ್ಷಣ ಅವನು ಮಾಡಿದ ಮೊದಲ ಕೆಲಸವೇ ಸಂಧ್ಯಾ ಬಳಿ ಹೋಗಿ "ನಿನ್ನ ಹೀರೋ ಪೆನ್ನು, ಶನಿವಾರ ಶಾಲೆಯಿಂದ ಮನೆಗೆ ಹೋಗುವ ಗಡಿಬಿಡಿಯಲ್ಲಿ ನಿನ್ನ ಬ್ಯಾಗಿನಿಂದ ಬಿದ್ದುಹೋಗಿತ್ತು, ನಾನು ಇಟ್ಟುಕೊಂಡಿದ್ದೆ, ತಗೋ" ಎಂದು ಹೀರೋ ಪೆನ್ನನ್ನು ವಾಪಾಸ್ ಮಾಡಿದ್ದು. ಸಂಧ್ಯಾಳಿಗೆ ಅತ್ಯಂತ ಸಂತೋಷವಾದ ಹಾಗೆ ತೋರಿತು. "ಓ ಹೌದಾ? ನಾನು ಮನೆಯೆಲ್ಲಾ ಹುಡುಕಿದೆ, ಎಲ್ಲೂ ಸಿಗಲಿಲ್ಲ, ಕಳೆದುಹೋಯಿತು ಎಂದು ಬಹಳ ಬೇಜಾರಾಗಿತ್ತು. ಥ್ಯಾಂಕ್ಸ್" ಎಂದು ಹೇಳಿ ಅವಳ ಬ್ಯಾಗಿನಿಂದ ಚಾಕಲೇಟೊಂದನ್ನು ತೆಗೆದು ಪುಟ್ಟನಿಗೆ ಕೊಟ್ಟಳು. ಪುಟ್ಟನ ಮನಸ್ಸು ಈಗ ನಿರಾಳವಾಯ್ತು. ಚಾಕಲೇಟನ್ನು ಬಾಯಲ್ಲಿ ಹಾಕಿ, ಸುಮ್ಮನೆ ಬಂದು ಬೆಂಚಿನಲ್ಲಿ ಕುಳಿತ. ಇನ್ನು ದಿನವೂ ಬೆಳಿಗ್ಗೆ ಒಂದು ತಾಸು ಓದಿ ಹೇಗಾದರೂ ೧೦ ನಂಬರೊಳಗೆ ಬರಲೇ ಬೇಕು ಎಂದು ಮನಸ್ಸಿನಲ್ಲೇ ಧೃಢ ನಿರ್ಧಾರ ಮಾಡಿಕೊಂಡ. ಅಪ್ಪನ ಹತ್ತಿರ ಮಾತ್ರ "ನನಗೆ ಹಸಿರು ಕಲರಿನ ಹೀರೋ ಪೆನ್ನೇ ತೆಗೆಸಿಕೊಡು" ಎಂದು ಬೇಡಿಕೆ ಇಡಬೇಕೆಂದೂ ಅವನಿಗೆ ಅನ್ನಿಸಿತು.


Thursday, January 29, 2009

ಜೊತೆಯಾದವಳಿಗೆ

ಬೆರಳ ತುದಿಯಲಿ ಸರಿದ ವರುಷಗಳ
ಸುರಿವ ಮಳೆಯಲಿ ಕುಣಿದ ಹರುಷವ
ಮರೆವ ನೆಪದಲಿ ಕಳೆದ ನೆನಪುಗಳ
ಮರಳಿ ತರಲಿ ಶುಭದಿನದ ಘಳಿಗೆ

ಮತ್ತೆಬಂದ ನವವಸಂತ ತರಲಿ
ನಿತ್ಯ ನವಿರ ಒಲವ ಹೊಳಹು
ಸುತ್ತಮುತ್ತ ಕವಿದಕಪ್ಪ ಭೇದಿಸಿ
ಕತ್ತಲಿನ ದೀಪದಂತಿರಲಿ ಬಾಳು

ಹತ್ತುಹಲವು ನೋವುನಲಿವ
ಮೆತ್ತಗಾಗಿಸುವ ಸೋಲುಗೆಲುವ
ಬಾಳಪಥದಿ ನಗುತ ನಡೆದು
ನಾಳೆಗನಸುಗಳ ಭರವಸೆಯಾಗು

Friday, January 16, 2009

ನಿನ್ನೆ ನಾಳೆಗಳ ನಡುವೆ

ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ
ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ
ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ
ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ!

ನಡೆವ ನೆಲದಲ್ಲಿ ನೆನೆದ ನೆತ್ತರ ನೋಡಿನೋಡಿಯೂ
ಮೋಸದ ಮರೆಯಲ್ಲಿ ಮೌನಕ್ಕೆ ಮಾತಾಗಿದ್ದೀವೆ
ಸಭ್ಯತೆಯ ಸೋಗಿನ ಸೆರಗ ಸುತ್ತಿಕೊಂಡೇ ಸಾಗಿದ್ದೇವೆ
ನಾವು,ನಮಗೆ ವರ್ತಮಾನದ ತಲ್ಲಣಗಳಿಲ್ಲ!

ಕನಸ ಕಣ್ಣು ಕಸಿವ ಕೆಲಸಕೆಂದೂ ಕುಗ್ಗದೆ
ಬಸಿವ ಬೆವರ ಭಾರಕೂ ಬಸವಳಿದು ಬಿದ್ದಿಲ್ಲ
ಕಾದಿರಿಸಿದ ಕಾಮನೆಗಳ ಕತ್ತಲಲ್ಲೇ ಕಾದಿದ್ದೇವೆ
ನಾವು,ನಮಗೆ ನಾಳೆಗಳ ಹಂಗಿಲ್ಲ!

Sunday, October 26, 2008

ಪತ್ರ ಬರೆಯಲಾ ಇಲ್ಲ ಎಸ್ಸೆಮೆಸ್ಸು ಕಳಿಸಲಾ......

ಪ್ರತೀ ಸಾರ್ತಿ ಊರಿಗೆ ಹೋದಾಗಲೂ ಮೆತ್ತಿ(ಅಟ್ಟ) ಹತ್ತಿ ಅಪ್ಪನ ಹಳೇ ಲೈಬ್ರರಿನೋ ಅಥವಾ ಇನ್ಯಾವುದೋ ಹಳೆ ವಸ್ತುಗಳನ್ನು ಶೋಧಿಸುವುದು ನನಗೆ ಅತ್ಯಂತ ಪ್ರಿಯವಾದ ಕೆಲಸ.ಧೂಳು ಹಿಡಿದ ಹಳೇ ಪುಸ್ತಕಗಳನ್ನೆಲ್ಲಾ ಇನ್ನೊಮ್ಮೆ ತಿರುವಿಹಾಕಿ, ಹಳೆದ್ಯಾವುದೋ ಮಾರ್ಕ್ಸ್ ಕಾರ್ಡುಗಳನ್ನೊಮ್ಮೆ ನೋಡಿ ಕಣ್ತುಂಬಾ ಸಂತೋಷಪಟ್ಟರೆ ಆ ದಿನ ಸಾರ್ಥಕ. ಬೆಳಿಗ್ಗೆ ಬೆಳಿಗ್ಗೆನೇ ಮೆತ್ತಿ ಹತ್ತಿ ಕೂತು ಬಿಟ್ಟರೆ ಮಧ್ಯಾಹ್ನ ಅಮ್ಮ ಊಟಕ್ಕೆ ಕರೆಯುವ ತನಕಾನೂ ನಾನು ಅಲ್ಲೇ ಸ್ಥಾಪಿತನಾಗಿರುತ್ತೇನೆ. ಅಪರೂಪಕ್ಕೊಮ್ಮೆ ಮನೆಗೆ ಬಂದರೂ ಮಾತಾಡದೇ ಪುಸ್ತಕ ಹಿಡಿದುಕೊಂಡು ಕೂಡ್ತಾನೆ ಅನ್ನೋದು ಅಮ್ಮನ ದೊಡ್ಡ ಕಂಪ್ಲೇಂಟು. ಆದರೆ ನನಗ್ಯಾಕೋ ಹಾಗೇ ಮನೆಗೆ ಹೋದಾಗಲೆಲ್ಲಾ ಮೆತ್ತಿ ಹತ್ತಿ ಒಂದೊಪ್ಪತ್ತು ಕಳೆಯದೇ ಇದ್ದರೆ ಏನೋ ಕಳೆದುಕೊಂಡ ಹಾಗೆ.

ಹಾಗೆ ನೋಡಿದರೆ ಹಳ್ಳಿಮನೆಗಳಲ್ಲಿ ಮೆತ್ತಿಗೆ ಬಹಳ ಪ್ರಮುಖವಾದ ಸ್ಥಾನವಿದೆ. ಮನೆಯ ಸಾಂಸ್ಕೃತಿಕ ಕೇಂದ್ರವೆಂದು ಯಾವುದನ್ನಾದರೂ ಕರೆಯಬಹುದಾದರೆ ನಿಸ್ಸಂದೇಹವಾಗಿ ಅದು ಮೆತ್ತಿಗೇ ಸೇರಬೇಕು.ಮಕ್ಕಳಿಗೆ ಹತ್ತಿ ಇಳಿದು ಆಟವಾಡಲಿಕ್ಕೆ, ಕಣ್ಣುಮುಚ್ಚಾಲೆ ಆಡುವುದಕ್ಕೆ, ಮನೆಗಳಲ್ಲಿ ಪೂಜೆ ಸಮಾರಂಭಗಳಾದರೆ "ಇಸ್ಪೀಟ್" ಆಡಲಿಕ್ಕೆ ಅತ್ಯಂತ ಪ್ರಶಸ್ತ ಜಾಗ ಅದು. ಅದರ ಉಪಯೋಗಗಳನ್ನು ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಚಿಕ್ಕು, ಮಾವು ಮುಂತಾದ ಹಣ್ಣುಗಳನ್ನು ಮಕ್ಕಳ ಕಣ್ಣಿಗೆ ಕಾಣದಂತೆ ಮುಚ್ಚಿಡಲು, ದಿನಬಳಕೆ ಉಪಯೋಗಿಸದ ಆದರೆ ದೊಡ್ಡ ಸಮಾರಂಭಗಳಿಗೆ ಬೇಕಾಗುವಂತಹ ದೊಡ್ಡ ದೊಡ್ಡ ಪಾತ್ರೆಗಳನ್ನು ಶೇಖರಿಸಿಡಲು, ಕಂಬಳಿ, ಚಾದರ ಇನ್ನೂ ಹಲವಾರು ಹಾಸಿಗೆ ಸಾಮಗ್ರಿಗಳನ್ನು ಶೇಖರಿಸಿಡಲು, ಇನ್ನೂ ಎಷ್ಟೋ. ನಾವು ಮಕ್ಕಳಿದ್ದಾಗ ಇಷ್ಟೆಲ್ಲಾ ವಸ್ತುಗಳಿದ್ದ ಮೆತ್ತಿ ಸಹಜವಾಗಿ ಒಂತರಾ ನಿಧಿ ಇದ್ದ ಹಾಗೇ ಅನ್ನಿಸುತ್ತಿತ್ತು. ಪ್ರತೀ ಸಲ ಮೆತ್ತಿ ಹತ್ತಿದಾಗಲೂ ಹೊಸಾ ಹೊಸ ವಸ್ತುಗಳು ಕಾಣ್ತಾ ಇದ್ದರೆ ಯಾವ ಮಕ್ಕಳಿಗೆ ತಾನೆ ಸಂತೋಷವಾಗಲಿಕ್ಕಿಲ್ಲ? ಅದೊಂದು ಸದಾ "ಟ್ರೆಶರ್ ಹಂಟ್" ಇದ್ದ ಹಾಗೆಯೇ. ಹಾಗೆಯೇ ಮನೆಯ ಗಜಿಬಿಜಿಯಿಂದ ಸ್ವಲ್ಪ ವಿರಾಮ ಬೇಕೆಂದರೂ, ಮೆತ್ತಿ ಹತ್ತಿ ಕುಳಿತು ಬಿಟ್ಟರೆ ಅದೊಂದು ಹೊಸ ಲೋಕವೇ ಸರಿ. ಹಾಗಾಗಿ ಏಕಾಗ್ರತೆಯಿಂದ ಪುಸ್ತಕ ಓದಲಿಕ್ಕೆ(ಅಕಾಡೆಮಿಕ್ ಪುಸ್ತಕಗಳಲ್ಲ, ಕಥೆ ಪುಸ್ತಕಗಳು!) ಮತ್ತು ಕವನ ಗಿವನ ಗೀಜಲಿಕ್ಕೆ ಮೆತ್ತಿಗಿಂತ ಪ್ರಶಸ್ತವಾದ ಜಾಗ ನಮಗಂತೂ ಸಿಕ್ಕುತ್ತಿರಲಿಲ್ಲ. ಧೋ ಎಂದು ಮಳೆ ಸುರಿಯುವಾಗ ಮೆತ್ತಿ ಹತ್ತಿ, ಜಗತ್ತಿನ ಅರಿವೇ ಇಲ್ಲದಂತೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಕಥೆ ಕಾದಂಬರಿ ಓದುವ ಅನುಭೂತಿಯನ್ನು ಯಾವುದಕ್ಕೂ ಹೋಲಿಸಲು ಬರುವುದಿಲ್ಲ ಎಂದರೆ ಹಲವಾರು ಜನರಾದರೂ ನನ್ನನ್ನು ಅನುಮೋದಿಸುತ್ತಾರೆಂಬ ಭರವಸೆ ನನಗಿದೆ.

ಈ ಸಾರ್ತಿ ಮೆತ್ತಿ ಹತ್ತಿ ಹಳೆದ್ಯಾವುದೋ ಟ್ರಂಕನ್ನು ಶೋಧಿಸುತ್ತಿರುವಾಗ ಹಳೆಯ ಒಂದಷ್ಟು ಪತ್ರಗಳ ಗಂಟು ನನ್ನ ಕೈಸೇರಿತು. ಬಹಳ ಹಳೆಯದೇನಲ್ಲ, ಸುಮಾರು ೬-೭ ವರ್ಷದ ಹಿಂದಿನವು ಅಷ್ಟೇ. ನಾನು ಬೆಳಗಾವಿಯಲ್ಲಿ ಓದುತ್ತಿರುವಾಗ ಅಕ್ಕ ಕುಮಟಾದಲ್ಲಿ ಬಿಯೆಡ್ ಓದುತ್ತಿದ್ದಳು. ಆಗ ಸುಮಾರು ಒಂದು ವರ್ಷಗಳ ಕಾಲ ನಾವು ವಾರವಾರವೂ ಬರೆದುಕೊಂಡ ಪತ್ರಗಳ ಗಂಟು ಅದು. ಅದನ್ನು ಓದಿಕೊಂಡಾಗ ನನಗೆ ಆದ ಸಂತೋಷ ಅಷ್ಟಿಷ್ಟಲ್ಲ. ಇಡೀ ದಿನವೂ ಅದರ ಗುಂಗಿನಲ್ಲೇ ಇದ್ದೆ. ತುಂಬಾ ವೈಯಕ್ತಿಕ ಎನಿಸಿದರೂ ಬರೆದು ಎಲ್ಲರಲ್ಲೂ ಹಂಚಿಕೊಳ್ಳಬೇಕೆಂದು ಬಲವಾಗಿ ಅನ್ನಿಸಿ ಬಿಟ್ಟಿತು. ಆವಾಗಿನ್ನೂ ಮೊಬೈಲುಗಳು ಬಂದಿರಲಿಲ್ಲ. ನಾನು ಅಕ್ಕನಿಗೆ ಫೋನ್ ಮಾಡುವುದು ಬಹಳಾನೇ ಕಡಿಮೆ ಇತ್ತು. ಎಲ್ಲೋ ತಿಂಗಳಿಗೊಮ್ಮೆ ಮಾಡುತ್ತಿದ್ದೆ ಅಷ್ಟೇ. ಆದರೆ ಪತ್ರವನ್ನು ಮಾತ್ರ ತಪ್ಪದೇ ವಾರ ವಾರ ಬರೆದುಕೊಳ್ಳುತ್ತಿದ್ದವು. ನಾನು ಗೆಳೆಯರ ಜೊತೆ ರೂಮ್ ಮಾಡಿದ್ದರೆ ಅಕ್ಕ ಒಬ್ಬನೇ ರೂಮ್ ಮಾಡಿಕೊಂಡಿದ್ದಳು. ತಿಳಿನೀಲಿ ಇನ್ ಲ್ಯಾಂಡ್ ಪತ್ರಗಳಲ್ಲಿ ಸಾಧ್ಯವಾದಷ್ಟು ವಿಷಯಗಳನ್ನು ತುಂಬಿ (ಪತ್ರ ಅರ್ಧ ಬರೆದುಬಿಟ್ಟಾಗ ಇನ್ನೂ ಬಹಳಷ್ಟಿದೆ ಬರೆಯುವುದು ಅನ್ನಿಸಿಬಿಡುತ್ತಿತ್ತು, ಹಾಗಾಗಿ ಬರೆಯುತ್ತಾ ಹೋದ ಹಾಗೆ ಅಕ್ಷರಗಳ ಗಾತ್ರ ಸಣ್ಣದಾಗುತ್ತಾ ಹೋಗುತ್ತಿತ್ತು!) ಕಳಿಸುತ್ತಿದ್ದೆವು. ಈಗ ಆ ಪತ್ರಗಳನ್ನು ಓದಿದಾಗ ಅದರಲ್ಲಿದ್ದ ಪ್ರೀತಿ, ಕಾಳಜಿ, ನಮ್ಮ ಆವಾಗಿನ ಮನಸ್ಥಿತಿ ಎಲ್ಲಾ ನೋಡಿ ಒಂತರಾ ವಿಚಿತ್ರವಾದ ಖುಷಿಯಾಯ್ತು.

ಮೊದ ಮೊದಲು ಪತ್ರ ಬರೆಯಲು ಶುರು ಮಾಡಿದಾಗ ನಾನು ಉಮೇದಿಯಿಂದ ಒಂದೆರಡು ಸಾರ್ತಿ ಇಂಗ್ಲೀಶಲ್ಲೇ ಪತ್ರ ಬರೆದಿದ್ದೆ. ಆದರೆ ಹಾಗೆ ಬರೆದ ಪತ್ರವೊಂದು ಅಪ್ಪನ ಕೈಗೆ ಸಿಕ್ಕಿ, ಅಪ್ಪ ಅದರಲ್ಲಿ ಹಲವಾರು ವ್ಯಾಕರಣ ದೋಷಗಳನ್ನೆಲ್ಲಾ ಗುರುತಿಸಿ ಇಟ್ಟಿದ್ದರು(ಎಷ್ಟೆಂದ್ರೂ ಮೇಷ್ಟ್ರಲ್ವೇ?). ಅದನ್ನು ನೋಡಿದ ಮೇಲೆ ನನ್ನ ಇಂಗ್ಲೀಷ್ ಜ್ನಾನದ ಮೇಲೆ ನನಗೇ ವಿಪರೀತ ಅಭಿಮಾನ ಹುಟ್ಟಿ ಇಂಗ್ಲೀಷಲ್ಲಿ ಪತ್ರ ಬರೆಯುವ ಸಾಹಸವನ್ನು ಬಿಟ್ಟುಬಿಟ್ಟಿದ್ದೆ. ಮೊನ್ನೆ ಅಪ್ಪ ಗುರುತಿಸಿದ್ದ ತಪ್ಪುಗಳನ್ನೆಲ್ಲ ಮತ್ತೆ ನೋಡಿದಾಗ ನನಗೆ ನಗು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಎಷ್ಟು ಕೆಟ್ಟದಾಗಿ ಬರೆದಿದ್ದೆನೆಂದರೆ, ಈಗ ನನ್ನ ಇಂಗ್ಲೀಷು ಸಿಕ್ಕಾಪಟ್ಟೆ ಸುಧಾರಿಸಿದೆ ಎಂದೆನಿಸುವಷ್ಟು!. ಆಮೇಲಿನ ಪತ್ರಗಳನ್ನೆಲ್ಲಾ ತೆಪ್ಪಗೆ ಹವ್ಯಕ ಭಾಷೆಯಲ್ಲೇ ಬರೆದಿದ್ದೆ!. ನಾನು ಆಗಿನ್ನೂ ನನ್ನ ವಿದ್ಯಾಭ್ಯಾಸ ಮುಗಿಸುತ್ತಾ ಬಂದಿದ್ದೆ. ಅಕ್ಕ ಆಗ ತಾನೇ ಎಮ್ಮೆಸ್ಸಿಯನ್ನು ಅರ್ಧದಲ್ಲೇ ಬಿಟ್ಟು ಬಿಯೆಡ್ ಮಾಡಲು ಬಂದಿದ್ದಳು. ಹಾಗಾಗಿ ನಮ್ಮ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಸಹಜವಾಗಿ ನಮಗೆ ಆತಂಕ ಮತ್ತು ನಿರೀಕ್ಷೆಗಳಿದ್ದವು. ಅವು ಪ್ರತೀ ಪತ್ರಗಳಲ್ಲೂ ಎದ್ದು ತೋರುತ್ತಿದ್ದವು.

ಪ್ರಾರಂಭದ ಲೋಕಾಭಿರಾಮದ ಮಾತುಗಳೆಲ್ಲಾ ಮುಗಿದ ಮೇಲೆ ನಮ್ಮ ಅಭ್ಯಾಸಕ್ಕೆ ಆಗುತ್ತಿದ ತೊಂದರೆಗಳು(?), ಅಥವಾ ಪರೀಕ್ಷೆಯಲ್ಲಿ ಕಮ್ಮಿ ಮಾರ್ಕ್ಸ್ ಬಿದ್ದಿದ್ದಕ್ಕೆ ಕಾರಣಗಳು, ಇಂಥದ್ದೇ ಪತ್ರದ ಕೇಂದ್ರ ವಿಷಯಗಳಾಗಿ ಮೂಡುತ್ತಿದ್ದವು. "ಈ ವಾರ ಲೆಸೆನ್ ಪ್ಲಾನ್ ಮಾಡಿದೆ. ನನಗಂತೂ ಬಯೋಲಜಿಯಲ್ಲಿ ಸೆಲ್ ಡಿವಿಷನ್ ಟಾಪಿಕ್ ಇದೆ. ಇದು ಮಕ್ಕಳಿಗೆ ಅರ್ಥವಾಗುವುದು ಕಷ್ಟ. ಮಿಟೋಸಿಸ್ ಅರ್ಥವಾದರೂ ಮಿಯಾಸಿಸ್ ಅರ್ಥವಾಗುವುದೇ ಇಲ್ಲ. ಹೇಗೆ ಅರ್ಥ ಮಾಡಿಸಬೇಕೋ ತಿಳಿಯುತ್ತಿಲ್ಲ. ಸಂಪೂರ್ಣ ಪಾಠ ಮುಗಿದ ಮೇಲೆ ಅವರಿಗೆ ೨೫ ಮಾರ್ಕ್ಸ್ ಟೆಸ್ಟ್ ಬೇರೆ ಮಾಡಬೇಕು. ಇದರ ಜೊತೆ "ಟೀಚಿಂಗ್ ಏಡ್" ಬೇರೆ ಮಾಡಬೇಕು. ಅದೂ ಥರ್ಮೋಕೋಲಲ್ಲೇ ಮಾಡಬೇಕಂತೆ" ಅನ್ನೋ ಸಾಧಾರಣವಾದ ಕಷ್ಟದಿಂದ ಹಿಡಿದು "ಇಲ್ಲಿ ನನ್ನ ಪಾಠ ಎಲ್ಲಾ ಚೆನ್ನಾಗಿ ನಡೆಯುತ್ತಿದೆ, ಆದರೆ ಎಷ್ಟು ಚೆನ್ನಾಗಿ ಪಾಠ ಮಾಡಿದರೂ ಅಷ್ಟೇ, "ಉತ್ತಮ ಪಾಠ" ಎಂದು ಬರೆಯುವುದಿಲ್ಲ. ಪಾಠ ತುಂಬಾ ಚೆನ್ನಾಗಿದೆ ಎಂದು ಬಾಯಲ್ಲಿ ಹೇಳುತ್ತಾರೆ. ಆದರೆ "ಡಿಮೆರಿಟ್ಸ್" ಕಾಲಮ್ಮಿನಲ್ಲಿ ಏನಾದರೂ ಸಿಲ್ಲಿ ಮಿಸ್ಟೇಕನ್ನು ಬರೆದಿರುತ್ತಾರೆ (ಉದಾ: ಬ್ಲಾಕ್ ಬೋರ್ಡ್ ವರ್ಕ್ ಸುಧಾರಿಸಬೇಕು, ಸಾಲುಗಳು ನೇರವಾಗಿರಬೇಕು ಇಂಥದ್ದು) ಹೀಗೆ ಮಾಡಿದರೆ ಇಂಟರ್ನಲ್ ಮಾರ್ಕ್ಸ್ ಬೀಳುವುದೇ ಕಷ್ಟ" ಅನ್ನೋ ಗಂಭೀರ ಕಷ್ಟದ ಬಗ್ಗೆ ಅಕ್ಕ ಸಾಮಾನ್ಯವಾಗಿ ಬರೆಯುತ್ತಿದ್ದಳು. ನನ್ನ ಕಷ್ಟಗಳಂತೂ ಸದಾ ಪರೀಕ್ಷೆಯ ಸುತ್ತಮುತ್ತಲೇ ತಿರುಗುತ್ತಿದ್ದವು. "ನನ್ನ ಐಸಿ-೨ ಲ್ಯಾಬ್ ಸರಿನೇ ಆಜಿಲ್ಲೆ. ಎಲ್ಲಾ ಸರಿ ಮಾಡಿದಿದ್ದಿ, ಆದ್ರೂ "ಪಾರ್ಶಿಯಲ್ ಔಟ್ ಪುಟ್" ಬಂಜು. ನಮ್ಮ ಬ್ಯಾಚಲ್ಲಿ ಇನ್ನೂ ೫-೬ ಜನಕ್ಕೆ ಹಾಂಗೇ ಆಜು. ಈ ಇಲೆಕ್ಟ್ರಾನಿಕ್ಸ್ ಲ್ಯಾಬಿನ ಹಣೆಬರಹಾನೇ ಇಷ್ಟು. ಒಂದೂ ಸರಿಯಾಗಿ ವರ್ಕ್ ಆಗ್ತಿಲ್ಲೆ. ನಿನ್ನೆ ಸಿಕ್ಕಾಪಟ್ಟೆ ಟೆನ್ಶನ್ ಆಗೋಗಿತ್ತು. ಈಗ ಅಡ್ಡಿಲ್ಲೆ" ಅನ್ನೋ ದೌರ್ಭಾಗ್ಯದಿಂದ ಹಿಡಿದು "ನಂಗಳ ಕ್ಲಾಸ್ ಟೈಮ್ ಹ್ಯಾಂಗೆ ಗೊತ್ತಿದ್ದ? ಮಧ್ಯಾಹ್ನ ೧ ರಿಂದಾ ೫ ರ ತನಕ. ಊಟ ಮಾಡ್ಕ್ಯಂಡು ಹೋದ್ರಂತೂ ಪೂರ್ತಿ ನಿದ್ದೆ ಬಂದು ಬಿಡ್ತು. ಮೇಲಿಂದ ಸಿಕ್ಕಾಪಟ್ಟೆ ಸೆಖೆ ಬೇರೆ" ಅನ್ನೋ ಸರ್ವೇಸಾಧಾರಣವಾದ ಕಷ್ಟಗಳನ್ನೂ ಬರೆದುಕೊಳ್ಳುತ್ತಿದ್ದೆ. ಮುಕ್ಕಾಲು ಭಾಗ ನಮ್ಮ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದರಲ್ಲೇ ಮುಗಿದುಹೋಗುತ್ತಿತ್ತು.

ಅಕ್ಕಂದಿರಿಗೆ ಯಾವತ್ತಿದ್ರೂ ಜಾಸ್ತಿ ಕಾಳಜಿ ಅಲ್ವೇ? ಹಾಗಾಗಿ ಸುಮಾರಷ್ಟು ಸಲಹೆ ಸೂಚನೆಗಳನ್ನು ಅಕ್ಕ ಪ್ರತೀ ಪತ್ರದಲ್ಲೂ ತಪ್ಪದೇ ನೀಡುತ್ತಿದ್ದಳು. "ನೀನು ಸರಿಯಾಗಿ ಓದು. ಎಷ್ಟೇ ಹೆವೀ ವರ್ಕ್ ಮಾಡು, ಆದರೆ ಆರೋಗ್ಯವನ್ನು ಹಾಳುಮಾಡಿಕೊಂಡು ಬಿಡಬೇಡ.ನಿದ್ದೆ ಸರಿಯಾಗಿ ಮಾಡು(ಇದನ್ನು ಹೇಳುವುದು ನಿಜಕ್ಕೂ ಅನವಶ್ಯಕವಾಗಿತ್ತು), ಇಲ್ಲದೇ ಇದ್ದರೆ ನಿನಗೆ ಆರಾಂ ಇರುವುದಿಲ್ಲ" ಅನ್ನೋ ಟಿಪಿಕಲ್ ಕಾಳಜಿ ಸಾಲುಗಳ ಜೊತೆಗೆ "ಪರೀಕ್ಷೆ ಚೆನ್ನಾಗಿ ಮಾಡು. ಸಿಲ್ಲಿ ಮಿಸ್ಟೇಕ್ ಮಾಡಬೇಡಾ. ಪ್ರಾಕ್ಟಿಕಲ್ ಎಕ್ಸಾಂನ ಬಹಳ ಕೇರ್ ನಿಂದ ಮಾಡು. ಗಡಬಡೆ ಮಾಡಿಕೊಳ್ಳಬೇಡಾ(ನನ್ನ ವೀಕ್ ನೆಸ್ ಅವಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು)" ಅನ್ನೋ ಗಂಭೀರ ಸಲಹೆಗಳನ್ನೂ ನೀಡುತ್ತಿದ್ದಳು. ಅವಳು ಅಷ್ಟೆಲ್ಲಾ ಹೇಳಿದ ಮೇಲೆ ನಾನು ಯಾಕೆ ಸುಮ್ಮನಿರಬೇಕೆಂದು ನಾನೂ ಒಂದೆರಡು ಸಾಲು ಬರೆದು ಹಾಕುತ್ತಿದ್ದೆ." ನೀನೂ ರಾಶಿ ನಿದ್ದೆಗೆಟ್ಟು ಓದಡಾ. ಸರಿಯಾಗಿ ಓದು.ಗಡಿಬಿಡಿ ಮಾಡ್ಕ್ಯಂಡು ತಪ್ಪು ಮಾಡಡಾ(ಅವಳ ಬಾಣ ತಿರುಗಿ ಅವಳಿಗೇ!) ಅಂತಾನೂ, ಆರೋಗ್ಯ ಸರಿ ನೋಡ್ಕ್ಯ. ಲೆಸ್ಸೆನ್ಸು ಹೇಳಿ ಆಡುಗೆ ಸರೀ ಮಾಡ್ಕ್ಯಳದ್ದೇ ಕಡಿಗೆ ಬಿಯೆಡ್ ಮುಗಸತನಕಾ ನನ್ನಂಗೆ ಆಗಿ(ತೆಳ್ಳಗಾಗಿ) ಬಂದು ಬಿಡಡಾ ಎಂದೆಲ್ಲಾ ಸಣ್ಣ ಜೋಕ್ ಕಟ್ ಮಾಡಿಬಿಟ್ಟಿದ್ದೂ ಇದೆ. ಇನ್ನೊಂದು ಸಲವಂತೂ ಯಾವುದೋ ದೊಡ್ಡ ಫಿಲೋಸಫರ್ ತರಾ "ಇಂಟೆಲಿಜೆನ್ಸ್ ಎಂಡ್ ಎಬಿಲಿಟಿ ಆರ್ ನಥಿಂಗ್ ಟು ಡು ವಿಥ್ ಯುವರ್ ಮಾರ್ಕ್ಸ್" ಅಂತೆಲ್ಲಾ ಡೈಲಾಗ್ ಹೊಡೆದಿದ್ದೂ ಇದೆ. ಈಗ ಅದನ್ನೆಲ್ಲ ಓದಿ ನಗುವೋ ನಗು. ಒಟ್ಟಿನಲ್ಲಿ ನನಗೆ ಬೇಜಾರಾದ್ರೆ ಅವಳು ಸಮಾಧಾನ ಹೇಳೋದು, ಅವಳಿಗೆ ಬೇಜಾರಾದ್ರೆ ನಾನು ಸಮಾಧಾನ ಹೇಳೋದು.ಸಮಾಧಾನ ಹೇಳ್ಲಿ ಅಂತಾನೇ ಅಷ್ಟೆಲ್ಲಾ ಕಷ್ಟಗಳನ್ನು ಹೇಳಿಕೊಳ್ತಿದ್ವಾ ಅಂತ ಈಗ ಗುಮಾನಿ ಬರ್ತಿದೆ.

ಅಕ್ಕ ಕುಮಟಾದಲ್ಲಿ ಇರೋದ್ರಿಂದ ಮನೆಗೆ ಸಾಧಾರಣವಾಗಿ ವಾರಕ್ಕೊಮ್ಮೆಯೋ, ಎರಡು ವಾರಕ್ಕೊಮ್ಮೆಯೋ ಹೋಗಿ ಬರುತ್ತಿದ್ದಳು.ಆದರೆ ನಾನು ಹೋಗುವುದು ಎರಡು ತಿಂಗಳಿಗೋ ಅಥವಾ ೩ ತಿಂಗಳಿಗೋ ಒಮ್ಮೆಯಾಗಿತ್ತು. ಹಾಗಾಗಿ ಮನೆ ಸುದ್ದಿಯನ್ನೆಲ್ಲ ಪತ್ರದಲ್ಲಿ ಸಂಕ್ಷಿಪ್ತವಾಗಿ ಅಕ್ಕ ಹಂಚಿಕೊಳ್ಳುತ್ತಿದ್ದಳು. "ಮೊನ್ನೆ ಬಾಳೂರಲ್ಲಿ ಪಲ್ಲಕ್ಕಿ ಉತ್ಸವ ಇತ್ತು,ವಿನುತಾನ ಅಣ್ಣನ ಕ್ಲಿನಿಕ್ಕು ಇವತ್ತು ಹೊಸಪೇಟೆ ರೋಡಲ್ಲಿ ಓಪನ್ ಆತು, ಮುಂದಿನ ವಾರ ಆಯಿ ಬಟ್ಟೆ ತರಲೆ ತಾಳಗುಪ್ಪಕ್ಕೆ ಹೋಗ್ತಿ ಹೇಳಿದ್ದು,ಇಂಥದ್ದೇ. ಕೆಲವೊಂದು ಸಲ ನಮ್ಮನೆ ಸದಸ್ಯರಂತೇ ಇರುವ ನಾಯಿ,ಆಕಳುಗಳ ಬಗ್ಗೆಯೂ ಮಾತು ಬರುತ್ತಿತ್ತು. "ನಮ್ಮನೆ ಹಂಡಿ(ದನ) ಕರ ಒಂಚೂರು ಚಂದ ಇಲ್ಲೆ. ಮುಸುಡಿ ಮೇಲೆಲ್ಲಾ ಚುಕ್ಕಿ ಚುಕ್ಕಿ ಇದ್ದು. ಹಂಡಿ ಭಾಳಾನೇ ಬಡಿ ಬಿದ್ದೋಜು. ಕೆಚ್ಚಲ ಬಾವು ಆಗಿತ್ತು. ಕರಿಯಲೇ ಕೊಡ್ತಿತ್ತಿಲ್ಲೆ, ಸಿಕ್ಕಾಪಟ್ಟೆ ಓದೀತಿತ್ತು. ಗ್ರೇಸಿಯಂತೂ ಪಕ್ಕಾ ಹಡಬೆ ನಾಯಿ ಆದಾಂಗೆ ಆಜು. ಕಂಡಕಂಡಿದ್ದೆಲ್ಲಾ ಮುಕ್ತು. ಪಾತ್ರೆ ತೊಳೆಯುವ ಸುಗುಡನ್ನೂ ತಿಂಬಲೆ ಹಣಕಿದ್ದು" ಅನ್ನೋ ಸಾಲುಗಳನ್ನು ಈಗ ಓದಿದರೆ ಯಾಕೋ ಅವುಗಳ ನೆನಪುಗಳೆಲ್ಲಾ ಮತ್ತೆ ಮರುಕಳಿಸಿ ಒಂತರಾ ಖುಷಿ, ಒಂತರಾ ದುಃಖನೂ ಆಗುತ್ತದೆ.

ಹೇಳ್ತಾ ಹೋದರೆ ಮುಗಿಯುವುದೇ ಇಲ್ಲ.ಅಷ್ಟು ಸಣ್ಣ ಪತ್ರದೊಳಗೆ ಎಷ್ಟೆಲ್ಲಾ ವಿಷಯಗಳನ್ನೆಲ್ಲಾ ತುಂಬಿಸುತ್ತಿದ್ದೆವು ಎಂದು ವಿಸ್ಮಯವಾಗುತ್ತದೆ. ನಮಗೆ ಆ ಪತ್ರಗಳು ಕೇವಲ ಯೋಗಕ್ಷೇಮ ತಿಳಿಸುವ ಸಾಧನಗಳಾಗಿರಲಿಲ್ಲ. ನಮ್ಮ ಎಲ್ಲಾ ಆತಂಕಗಳು, ಸಣ್ಣಪುಟ್ಟ ಖುಷಿಗಳು, ಬೇಜಾರು, ವೇದನೆ, ಛಲ, ಪ್ರೀತಿ, ಕಾಳಜಿ, ಇನ್ನು ಎಷ್ಟೋ ಭಾವಗಳು ಮಿಳಿತಗೊಂಡು ಅಕ್ಷರ ರೂಪ ಪಡೆಯುತ್ತಿದ್ದವು.ನಮ್ಮ ಆ ಕಾಲದ ಮನೋಸ್ಥಿತಿಯ ಪ್ರತಿಬಿಂಬವೇ ಆಗಿದ್ದ ಆ ಪತ್ರಗಳ ಗಂಟನ್ನೆಲ್ಲ ಜೋಪಾನವಾಗಿ ತಂದಿಟ್ಟುಕೊಂಡಿದ್ದೇನೆ. ನನ್ನ ಹತ್ತಿರವಿರುವ ಪುಸ್ತಕಗಳ ತೂಕವೇ ಒಂದಾದರೆ, ಈ ಪತ್ರಗಳ ತೂಕವೇ ಒಂದು. ಇನ್ನೂ ಹಲವು ವರ್ಷಗಳ ನಂತರ ಅವನ್ನು ಓದಿದರೂ ಮಾಂತ್ರಿಕ ಪೆಟ್ಟಿಗೆ ತೆಗೆದಂತೆ ನೆನಪುಗಳ ಭಂಡಾರ ಮನಸ್ಸಿನ ಪರದೆ ಮೇಲೆ ಹರಡಿಕೊಳ್ಳುವುದರಲ್ಲಿ ನನಗೆ ಸಂಶಯವೇ ಇಲ್ಲ. ಈಗಿನ ಮೊಬೈಲು ಯುಗದಲ್ಲಿ ಪತ್ರ ಬರೆಯುವ ವ್ಯವಧಾನ, ಪುರುಸೊತ್ತು, ತಾಳ್ಮೆಯಂತೂ ಯಾರಿಗೂ ಇಲ್ಲ. ಆದರೆ ಪತ್ರ ಬರೆಯುವ ಖುಷಿ ಮತ್ತು ಪತ್ರಕ್ಕಾಗಿ ಕಾಯುವ ತವಕವನ್ನು ಎಂಥ ಪ್ರೀತಿಯ ಎಸ್ಸೆಮ್ಮೆಸ್ಸುಗಳೂ, ಕಾಲ್ ಗಳೂ ತಂದುಕೊಡುವುದಿಲ್ಲವೆಂಬುದು ಮಾತ್ರ ಉರಿಯುವ ಸೂರ್ಯನಷ್ಟೇ ಸತ್ಯ.