Tuesday, December 20, 2011

ಬದಲಾವಣೆ

ಬದಲಿಸಬೇಕಂತೆ ಹಳೆಯ ಬಚ್ಚಲಮನೆಯ
ಜಾರೋ ಕಲ್ಲು,ಮಸಿಹಿಡಿದ ಗೋಡೆ
ಕಿರ್ರೆನುವ ಬಾಗಿಲು,ಸುರಿವ ಸೂರು
ಒಂದೇ ಎರಡೇ,ನಡೆದೀತು ಎಷ್ಟು ದಿನ? ಒಂದೇ ವರಾತ

ನೋಡಿ ಆ ಹಂಡೆ,ಓಬೀರಾಯನ ಕಾಲದ್ದು
ಛೇ! ಒಂಚೂರೂ ಪ್ರಜ್ಞೆಯಿಲ್ಲ ನಿಮಗೆ
ಕರೆಂಟು ದೀಪವಿಲ್ಲ, ಬಟ್ಟೆಗೆ ಜಾಗವಿಲ್ಲ
ಕಿವಿ ಮೇಲೆ ಬಿದ್ದೀತೆ ನನ್ನ ಗೊಣಗಾಟ? ಹೇಳಿ ಪ್ರಯೋಜನವಿಲ್ಲ

ನೋಡಿದ್ದೀರಾ ಅವರ ಮನೆಯ ಬಾಥ್ರೂಮು?
ಥಳಥಳಿಸುವ ಟೈಲ್ಸುಗಳು, ದಂತದ ಹೊಳಪಿನಬೇಸಿನ್ನು,
ಝಗಮಗಿಸುವ ಲೈಟುಗಳು! ಗೊತ್ತೆ
ಈಗೆಲ್ಲ ಅವನ್ನು ನೋಡಿಯೇ ಅಳೆಯುತ್ತಾರೆ ನಿಮ್ಮ ರಸಿಕತೆಯ

ತೆಗೆಯಿರಿ ಈ ಪ್ಲಾಸ್ಟಿಕ್ ನಲ್ಲಿ, ಬರೀ ತಣ್ಣೀರು ಇದರಲ್ಲಿ
ಅದರ ಪೈಪು ಬೇರೆ, ನೋಡಿ ಗೋಡೆಯೆಲ್ಲ ಹಾಳು
ನೋಡಿಲ್ಲವೇ ಹೊಸ ಜಾಗ್ವಾರು,ಹಿಂಡ್ವೇರು?
ಎಡಕ್ಕೆ ಬಿಸಿನೀರು, ಮೇಲೆ ಶವರ್ರು,ಇದ್ದೇ ಇದೆಯಲ್ಲ ತಣ್ಣೀರು

ನಿಜ, ಬದಲಾಗಿವೆ ನಮ್ಮ ದೃಷ್ಟಿ, ಸೌಂದರ್ಯ ಪ್ರಜ್ಞೆ
ಹಳೆಯದೆ? ಛೀ! ಕಿತ್ತು ಬೀಸಾಕಿ ನಿರ್ದಾಕ್ಷಿಣ್ಯವಾಗಿ
ಮನೆ ತುಂಬಿಸಿಕೊಳ್ಳಿ ಹೊಚ್ಚ ಹೊಸದರ ಹೊಳಪ
ದುಡಿಯುವುದೆಲ್ಲ ಉಳಿಸಲೇ? ಭ್ರಾಂತು ನಿಮಗೆ, ರಾಜನಂತೆ ಬದುಕಿ

ಹೊಸದೆಂದ ಮಾತ್ರಕೆ ಬೇರೆಯಾಗಬಹುದೇ ಅನುಭೂತಿ
ಬದಲಾದೀತೆ ನೀರಿನ ಬಿಸಿ, ಹೊಗೆಯ ಹಸಿ?
ಬೇಕೆಂದಾಗ ನವೀಕರಿಸಬಹುದು ಹಳೆಯದನೆಲ್ಲ
ಅನ್ನುವರಿಗೆಲ್ಲ ಒಂದೇ ಪ್ರಶ್ನೆ, ಹೊಸತಾಗಿಸ ಬಲ್ಲಿರೇ ಹಳೆಯ ನೆನಪ?