Monday, June 23, 2008

ಈ ಸಂಭಾಷಣೆ...

ಸಾಕಷ್ಟು ಪ್ರೀತಿ, ಆರಿದ್ರೆ ಮಳೆಯಂಥ ಮಾತು

ಅರೆಪಾವು ತುಂಟತನ, ಆಗಾಗ ಥೇಟ್ ಮಗು

ಯಾವಾಗಲೊಮ್ಮೆ ಹುಸಿಮುನಿಸು, ಮೌನದ ಬಿಗು

ಪುಟ್ಟ ವಿರಾಮ, ಮರುಕ್ಷಣ ಗೆಜ್ಜೆಸದ್ದಿನ ನಗು



ಪ್ರಶ್ನೆ ಕೇಳುವಾಗಲೆಲ್ಲ ತುಸು ತಗ್ಗಿದಂತೆ ದನಿ

ಕಾತರತೆ, ಕಾದಂತೆ ಎಲೆತುದಿಗೆ ಪುಟ್ಟ ಮಳೆಹನಿ

ಉತ್ತರಕ್ಕೊಮ್ಮೆ ಬುದ್ಧ, ಇನ್ನೊಮ್ಮೆ ಶುದ್ಧ ವಜ್ರಮುನಿ

ಅಪರೂಪಕ್ಕೊಮ್ಮೊಮ್ಮೆ ಬರೀ ಹಠಮಾರಿ ಪುಟಾಣಿ!



ಹೇಳಿದಷ್ಟೂ ಸಾಲದು, ಮಾತಾಡಿದಷ್ಟೂ ಸಾಕಾಗದು

"ಮತ್ತೆ?" ಪ್ರಶ್ನೆ ತುಟಿಯಂಚಲ್ಲಿ ಎಂದೂ ಸಾಯದು

ನಿಶ್ಯಬ್ಧ, ನಿಟ್ಟುಸಿರು, ನಗು ದಿನದಿನವೂ ಹೊಸಹೊಸದು

ಕಿವಿಯಂಚಲ್ಲೇ ಗಾಂಧರ್ವಲೋಕ ಮೂಡಿಹದು ನಿಜದು



ಅನುರಾಗದಾಲಾಪದ ಮೋಹಕ ಅಲೆಗಳಲ್ಲಿ ತೇಲಾಡಿ

ಕಳೆದುಹೋಗುತ್ತಿರುವ ಕಾಲಪುರುಷನನೂ ಪರಿಪರಿ ಕಾಡಿ,

ಮೌನದಾಗಸದಲ್ಲಿ ಮೆಲುದನಿಯ ಕಾಮನಬಿಲ್ಲು ಹೂಡಿ

ಹಾಡುತ್ತಲೇ ಇದೆ ಈ ನಿತ್ಯ ನೂತನೆ, ಸಲ್ಲಾಪದ ಮೋಡಿ