Thursday, April 24, 2008

ಈರನ ತರ್ಕವೂ... ಎಲೆಕ್ಸನ್ನೂ.....

ಸ್ವಲ್ಪ ಗೂನು ಬೆನ್ನು, ಹಂಚಿ ಕಡ್ಡಿಯಂತ ಕಾಲು, ಬಾಯಲ್ಲಿ ಸದಾ ಮೂರು ಹೊತ್ತು ಎಲೆಯಡಿಕೆ, ಸಣ್ಣ ತಲೆಗೊಂದು ಹಾಳೆ ಟೋಪಿ ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿದ ಜೀವಿಯೊಂದು ಮನೆ ಕಡೆ ಪುಟುಪುಟನೇ ಬರುತ್ತಿದೆ ಅಂದ್ರೆ ಅದು ಈರನೇ ಅಂತ ನಿಸ್ಸಂಶಯವಾಗಿ ಹೇಳಿ ಬಿಡಬಹುದು. ಅವನು ಹಲವಾರು ವರ್ಷಗಳಿಂದ ರಾಂಭಟ್ಟರ ಮನೆಯ ಸದಸ್ಯನಂತೇ ಖಾಯಂ ಕೆಲಸಕ್ಕೆ ಇದ್ದವನು. ಹಣ್ಣು ಹಣ್ಣು ಮುದುಕನಾಗಿ, ಬಡಕಲಾಗಿದ್ದ ಅವನನ್ನು ನೋಡಿದರೆ ಯಾರಿಗೂ ಇವನು ಕೆಲಸ ಮಾಡಬಹುದು ಎಂದೇ ಅನ್ನಿಸುತ್ತಿರಲಿಲ್ಲ. ಆದರೂ ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು, ಸಿಕ್ಕ ದುಡ್ಡಲ್ಲೇ ಹೇಗೋ ಅವನಿಗೆ ಬೇಕಾದಷ್ಟು ಖರ್ಚು ಮಾಡಿಕೊಂಡು ಹಾಯಾಗಿದ್ದ. ಅಪ್ಪ ಆಗಾಗ ಅವನನ್ನು ತೋಟದಲ್ಲಿದ್ದ ತೆಂಗಿನಕಾಯಿಗಳನ್ನು ಕೆಡವಲು ಕರೆಯುತ್ತಿದ್ದರು.

ಸಪೂರ ಕಾಲುಗಳ ಈರ, ತೆಂಗಿನ ಮರ ಹತ್ತಿ ಕಾಯಿ ಕಿತ್ತು ಕೆಳಗೆ ಹಾಕುವುದನ್ನು ನೋಡುವುದೇ ಒಂದು ಮಜ. ಎರಡೂ ಕಾಲುಗಳಿಗೆ ಹಗ್ಗದ ತಳೆಯೊಂದನ್ನು ಸಿಕ್ಕಿಸಿ, ವೇಗವಾಗಿ ಮರ ಹತ್ತಿ, ನೋಡು ನೋಡುತ್ತಿದಂತೆಯೇ ಕಾಯಿಗಳನ್ನು ಕಿತ್ತು ಕೆಳಕ್ಕೆ ಎಸೆದು, ಸರ್ರನೇ ಮರದಿಂದ ಜಾರಿ ನೆಲಕ್ಕಿಳಿಯುತಿದ್ದ ಪರಿಯೇ ನನಗೊಂದು ಬೆರಗು. ಎಷ್ಟು ವರ್ಷಗಳಿಂದ ಇದೇ ಕೆಲಸವನ್ನು ಮಾಡುತ್ತಿದ್ದನೋ ಅವನು? ಎಂತಾ ಎತ್ತರದ ಮರವಾದರೂ ಲೀಲಾಜಾಲವಾಗಿ ಹತ್ತಬಲ್ಲ ಚಾಕಚಕ್ಯತೆ ಅವನಲ್ಲಿತ್ತು.

ಅವನ ಮತ್ತೊಂದು ವಿಶೇಷತೆ ಅಂದರೆ ಅವನ ಬಾಯಿ. ಬಹುಷಃ ಮಲಗಿದ್ದಾಗ ಮಾತ್ರ ಅದಕ್ಕೆ ವಿಶ್ರಾಂತಿ ಕೊಡುತ್ತಿದ್ದ ಅವನು. ಯಾವುದೇ ಕೆಲಸ ಮಾಡುವಾಗಲೂ ಮಾತಾಡುತ್ತಲೇ ಇರಬೇಕು. ಅಪ್ಪ ಆಗಾಗ "ಈರಾ, ನಿಂದು ಮರದ್ದ ಬಾಯಾಗಿದ್ರೆ ಇಷ್ಟೊತ್ತಿಗೆ ವಡೆದು ಹೋಗ್ತಿತ್ತು ನೋಡು" ಅಂತ ಛೇಡಿಸುತ್ತಿದ್ದರು. ಅದಕ್ಕೆಲ್ಲಾ ಅವನು ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. "ಇರಬೋದ್ರಾ" ಎಂದಂದು ಮತ್ತೆ ಅವನ ಕಾಯಕವನ್ನು ಮುಂದುವರೆಸುತ್ತಿದ್ದ. ನಮಗೆಲ್ಲ ಅವನ ವಾಚಾಳಿತನ ತಮಾಷೆಯ ವಿಷಯವಾಗಿತ್ತು. ಆಗಾಗ ಯಾವ್ಯಾವ್ದೋ ವಿಷಯಗಳನ್ನು ಎತ್ತಿ, ಅವನ ಬಾಯಿಂದ ಉದುರುವ ಅಣಿಮುತ್ತುಗಳನ್ನು ಕೇಳಿ ನಗಾಡಿಕೊಳ್ಳುತ್ತಿದ್ದೆವು.

ಹಬ್ಬದ ದಿನ ಬೆಳಿಗ್ಗೆ ಜಗಲಿಯಲ್ಲಿ ಖುರ್ಚಿ ಹಾಕಿಕೊಂಡು ಕುಳಿತು ಪೇಪರ ಓದುತ್ತಿದ್ದವನಿಗೆ ಈರ ಮನೆ ಕಡೆ ಬರುತ್ತಿರುವುದು ಕಂಡಿತು. ಸಮಯ ನೋಡಿದರೆ ಇನ್ನೂ ಎಂಟು ಗಂಟೆ. ಅವನು ಇನ್ನೂ ಸ್ವಲ್ಪ ದೂರದ್ದಲ್ಲಿದ್ದಂತೆಯೇ ನಾನು "ಎನೋ ಈರಾ, ಇಷ್ಟು ಬೇಗಾ ಬಂದು ಬಿಟ್ಟಿದ್ದೀಯಾ" ಎಂದು ಕೇಳಿದೆ. ಹತ್ತಿರಾ ಬಂದವನೇ "ಓ, ಮರಿ ಹೆಗಡೇರು....ಹಬ್ಬಕ್ಕೆ ಮನೆಗೆ ಬಂದವ್ರೆ. ಬೆಂಗ್ಳೂರಿಂದಾ ಯಾವಾಗಾ ಬಂದ್ರಾ?" ಎಂದು ಕೇಳಿದ. ನಾನು "ನಿನ್ನೆ" ಎಂದು ಹೇಳಿ ಸುಮ್ಮನಾದೆ. "ಹೆಗ್ಡೇರು ಕಾಯಿ ಕೊಯ್ಯಕ್ಕೆ ಬಾ ಅಂದಿದ್ರು. ಮುಗಸಕಂಡೇ ಭಟ್ಟರ ಮನೆಗೆ ಹೋಗವಾ ಅಂತಾ ಬೆಗ್ಗನೇ ಬಂದೆ. ಹೆಗಡ್ರಿಲ್ಲ್ರಾ? ಎಂದು ಪ್ರಶ್ನೆ ಹಾಕಿದ. ನಾನು ಒಳಗೆ ಹೋಗಿ, ಯಾವ್ಯಾವ ಮರದ್ದು ಕಾಯಿ ಕೀಳಿಸುವುದು ಎಂದು ತಿಳಿದುಕೊಂಡು, ಈರನ ಹತ್ತಿರ "ನಡ್ಯಾ, ನಾನೇ ಬರ್ತೆ ಇವತ್ತು. ನಿನ್ನ ಹತ್ರಾ ಮಾತಾಡದ್ದೇ ಬಾಳ ದಿನಾ ಆಯ್ತು" ಎಂದು ಕತ್ತಿ, ತಳೆ, ಗೋಣಿಚೀಲ ಹಿಡಿದುಕೊಂಡು ಹೊರಟೆ. "ಈ ಮುದಕನ ಹತ್ರ ಎಂತಾ ಇರ್ತದ್ರಾ ಮಾತಾಡದು? ನೀವೇ ಹೇಳ್ಬೇಕು ಬೆಂಗ್ಳೂರಲ್ಲಿದ್ದವ್ರು" ಎಂದವನೇ ಬಾಯಲ್ಲಿದ್ದ ಎಲೆಯಡಿಕೆಯನ್ನು ಉಗಿದು ನನ್ನ ಜೊತೆಗೆ ಮಾತಾಡಲು ಅನುವಾದ. ಬೆಳಿಗ್ಗೆ ಬೆಳಿಗ್ಗೆನೇ ಒಳ್ಳೆ ಟೈಮ್ ಪಾಸ್ ಆಯ್ತು ಅಂತ ನನಗೆ ಒಳಗೊಳಗೇ ಸಂತೋಷವಾಯ್ತು.

ಆದರೆ ನನ್ನ ನಿರೀಕ್ಷೆಗೆ ವಿರುದ್ಧವಾಗಿ ಈರ ಜಾಸ್ತಿ ಮಾತಾಡುವ ಇರಾದೆಯನ್ನೇನೂ ತೋರಿಸಲಿಲ್ಲ. ನಾನೇ ಯಾವ್ಯಾವ್ದೋ ವಿಷಯಗಳನ್ನು ಎತ್ತಿ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಎಲ್ಲದಕ್ಕೂ ಅವನದು ಚುಟುಕಾದ ಉತ್ತರ.ಇವತ್ಯಾಕೋ ಅವನ ಮೂಡ್ ಸರಿಯಿಲ್ಲದಿರಬಹುದು ಎಂದು ನಾನೂ ಜಾಸ್ತಿ ಮಾತಾಡದೇ ಅವನ ಕೆಲಸ ಮುಗಿಯುವವರೆಗೂ ಸುಮ್ಮನಿದ್ದೆ. ಕೆಡವಿದ ಕಾಯಿಗಳೆಲ್ಲವನ್ನೂ ಚೀಲಕ್ಕೆ ತುಂಬಿ ಈರನ ಬೆನ್ನಿಗೆ ಹೊರಿಸಿ ನಾನು, ಅವನು ಮನೆ ಕಡೆ ಪಾದ ಬೆಳೆಸಿದೆವು. ಕೊಟ್ಟಿಗೆ ಹತ್ತಿರ ಚೀಲವನ್ನು ಧೊಪ್ಪನೆ ಇಳಿಸಿ, ಪಕ್ಕದಲ್ಲೇ ಇದ್ದ ಕಟ್ಟೆಯ ಮೇಲೆ ಕುಳಿತವನೇ ಈರ, "ಹೆಗ್ಡೇರೇ, ಎಲೆಕ್ಸನ್ನು ಬಂತಲ್ರಾ, ಈ ಸಲ ಮುಖ್ಯಮಂತ್ರಿ ಯಾರಾಗ್ತಾರ್ರಾ?" ಎಂದು ಕೇಳಿಯೇ ಬಿಟ್ಟ. ನಾನು ನಿಂತಲ್ಲಿಯೇ ಎಡವಿ ಬೀಳೋದಂದೇ ಬಾಕಿ. ಬೆಳಿಗ್ಗೆ ಬೆಳಿಗ್ಗೇನೇ ಇಂಥ ಗಹನ ಗಂಭೀರ, ಮಿಲಿಯನ್ ಡಾಲರ್ ಪ್ರಶ್ನೆಯನ್ನು ನಾನು ಈರನ ಬಾಯಿಂದಂತೂ ನಿರೀಕ್ಷಿಸಿರಲಿಲ್ಲ. ಏನು ಉತ್ತರ ಕೊಡಬೇಕೆಂದೇ ನನಗೆ ತೋಚಲಿಲ್ಲ. ನಾನು ನೇರವಾಗಿ ಉತ್ತರಿಸಿದರೆ, ಈ ಮುದುಕನ ತಲೆಯೊಳಗಿರಬಹುದಾದ ಅನೇಕ ಸ್ವಾರಸ್ಯಕರ ವಿಚಾರಗಳು ತಪ್ಪಿಹೋಗಬಹುದು ಎಂದೆಣಿಸಿ, ಸ್ವಲ್ಪ ನಿಧಾನಕ್ಕೆ "ನಾನೆಂತಾ ಜ್ಯೋತಿಷಿನೆನಾss ಯಾರು ಮುಖ್ಯಮಂತ್ರಿ ಆಗ್ತಾರೆ ಹೇಳಕ್ಕೆ? ನಂಗೆಂತಾ ಗೊತ್ತು? ನಿಂಗೆ ಯಾರು ಆಗ್ಬೇಕು ಅಂತದೇ?" ಎಂದು ಅವನಿಗೇ ಮರುಪ್ರಶ್ನೆ ಹಾಕಿದೆ. ಸಟ್ಟನೇ ಬಂತು ಉತ್ತರ. "ನೀವು ನನ್ನಾ ಕೇಳಿದ್ರೆ ನಮ್ಮ ಬಂಗಾರಪ್ಪನೋರು ಆಗ್ಬೇಕು ನೋಡಿ ಮತ್ತೆ ಇನ್ನೊಂದು ಸರ್ತಿ.ಚೊಲೋ ಇರ್ತದೆ" ಎಂದ. ಅದೇನೂ ನನಗೆ ಆಶ್ಚರ್ಯ ತರಲಿಲ್ಲ. ಯಾಕೆಂದರೆ ಈರನ ಮನೆಯವರೆಲ್ಲರೂ ಬಂಗಾರಪ್ಪನ ಪರಮ ಭಕ್ತರು. ಬಂಗಾರಪ್ಪನೋರು ಮುಖ್ಯಮಂತ್ರಿ ಆದಾಗ ಈರನ ಮಗನಿಗೊಂದು ಅಗಸೇಬಾಗಿಲಲ್ಲಿ ಸಣ್ಣ ಪಾನ್ ಅಂಗಡಿ ಹಾಕಿಕೊಳ್ಳಲು ಆರ್ಥಿಕ ಸಹಾಯ ಮಾಡಿದ್ದರು. ಅವನ ಮನೆ ನಡೆಯಲು ಆ ಪಾನ್ ಅಂಗಡಿ ಎಷ್ಟೋ ರೀತಿಯಲ್ಲಿ ಸಹಾಯ ಮಾಡಿದೆ. ಹಾಗಾಗಿ ಈರನಿಗೆ ಮತ್ತೆ ಬಂಗಾರಪ್ಪನವರೇ ಮುಖ್ಯಮಂತ್ರಿ ಆಗಲಿ ಎಂದನ್ನಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ಯಾವಾಗ ಕೇಳಿದ್ದರೂ ಬಹುಷಃ ಅವನಿಂದ ಅದೇ ಉತ್ತರ ಸಿಗುತ್ತಿತ್ತು.

"ಅಲ್ದಾ, ಬಂಗಾರಪ್ಪನವರಿಗೆ ವಯಸ್ಸಾಗ್ಲಿಲ್ಲೇನಾ ಈಗಾ? ಈ ವಯಸ್ಸಲ್ಲಿ ಮುಖ್ಯಮಂತ್ರಿ ಆದರೇ ಅವರ ಹತ್ರಾ ಎಂತಾ ಮಾಡಕ್ಕೇ ಆಗತ್ತಾ?" ನಾನು ಇನ್ನೂ ಕೆದಕಿದೆ. "ಹ್ವಾಯ್, ವಯಸ್ಸಾದ್ರೆ ಎಂಥಾ ಆಯ್ತು? ಎಷ್ಟು ಗಟ್ಟಿ ಅದಾರೆ ಅವ್ರು. ಈ ವಯಸ್ಸಲ್ಲು ಬೇಕಾದ್ರೆ ಡೊಳ್ಳು ಕಟ್ಕೊಂಡು ಕುಣಿತಾರೆ ಗೊತ್ತಾ? ಅಲ್ಲಾ ನನ್ನ ನೋಡಿ ಬೇಕಾರೆ. ನಾನೂ ಬೇಕಾರೆ ಡೊಳ್ಳು ಕುಣಿತೆ ಗೊತ್ತಾ ನಿಮಗೆ? ಕಾಲು ಸ್ವಲ್ಪ ತೊಂದ್ರೆ ಕೊಡ್ತದೆ ಹೇಳದು ಬಿಟ್ರೆ ಆರಾಮಾಗೇ ಇದ್ದೆ ನಾನೂವಾ. ಮನೆ ನಡ್ಸಕಂಡು ಹೋಗ್ತಾ ಇಲ್ವಾ ಈಗ? ಮನೆ ನಡೆಸ್ದಾಂಗೆಯಾ ರಾಜ್ಯ ಆಳೋದು.ವಯಸ್ಸಾಯ್ತು ಹೇಳಿ ಮನ್ಸ್ರನ್ನ ಅಸಲಗ್ಯ ಮಾಡ್ಬೇಡಿ ನೀವು ಹಾಂಗೆಲ್ಲಾ" ಎಂದು ಅವನದೇ ವಿಶಿಷ್ಟ ಶೈಲಿಯಲ್ಲಿ ನನ್ನನ್ನು ಅಣಕಿಸುವಂತೆ ಹೇಳಿದ. ನಾನು ಈಗ ಧಾಟಿ ಬದಲಾಯಿಸಿ "ಹೋಗ್ಲಿ ಬಂಗಾರಪ್ಪನವ್ರು ಈಗ ಯಾವ ಪಕ್ಷದಲ್ಲಿದಾರೆ ಹೇಳಾದ್ರೂ ಗೊತ್ತನಾ ನಿಂಗೆ?" ಎಂದು ಕೇಳಿದೆ. "ಅದ್ನೆಲ್ಲಾ ಕಟ್ಕಂಡು ನಮಗೆಂತಾ ಆಗ್ಬೇಕಾಗದೆ? ಅವ್ರು ಯಾವ ಪಕ್ಷದಲ್ಲಿದ್ರೆಂತಾ? ನಮ್ಮ ಮಗ ಹೇಳ್ತಾ ಯಾವ ಚಿತ್ರಕ್ಕೆ ವೋಟ್ ಹಾಕ್ಬೇಕು ಹೇಳಿ. ಅದಕ್ಕೆ ಹಾಕಿ ಬಂದ್ರಾಯ್ತು ಅಷ್ಟೇಯಾ" ಅಂದ. ಇನ್ನು ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲ ಅನ್ನಿಸಿತು. ಆದರೂ ಇಷ್ಟಕ್ಕೆ ಬಿಟ್ಟ್ರೆ ಎಂತಾ ಚಂದ ಎನ್ನಿಸಿ "ವಯಸ್ಸಾದವ್ರೆಲ್ಲಾ ರಾಜ್ಯ ಚೊಲೋ ಆಳ್ತಾರೆ ಅಂದ್ರೆ ದೇವೇಗೌಡ್ರೇ ಮುಖ್ಯಮಂತ್ರಿ ಆಗ್ಬಹುದಲ್ಲಾ?" ಎಂಬ ಹೊಸಾ ತರ್ಕ ಮುಂದಿಟ್ಟೆ. ಈರನಿಗೆ ಯಾಕೋ ಸ್ವಲ್ಪ ಸಿಟ್ಟು ಬಂದ ಹಾಗೆ ಕಾಣ್ತು. "ನೀವು ಅವ್ರ ಸುದ್ದಿ ಮಾತ್ರ ಎತ್ಬೇಡಿ ನನ್ನತ್ರಾ" ಎಂದ. ಅಷ್ಟರಲ್ಲಿ ಅಮ್ಮ ಒಳಗಿಂದ ಬಾಳೆ ಎಲೆಯಲ್ಲಿ ಅವಲಕ್ಕಿ, ಒಂದು ಲೋಟ ಚಾ ಹಿಡಿದುಕೊಂಡು ಬಂದು ಕಟ್ಟೆ ಮೇಲಿಟ್ಟರು. ಈರ ಬಂದ ಸಿಟ್ಟನೆಲ್ಲ ಹಾಕಿಕೊಂಡಿದ್ದ ಎಲೆಯಡಿಕೆಯ ಮೇಲೆ ತೀರಿಸುವಂತೆ, ಅದನ್ನು ಪಕ್ಕಕ್ಕೇ ಜೋರಾಗಿ ಉಗುಳಿ, "ಈಗ ಆಸ್ರಿಗೆ ಎಲ್ಲಾ ಬ್ಯಾಡ್ರಾ ಅಮಾ, ಮನ್ಲೇ ಮಾಡ್ಕಂಡು ಬಂದೆ. ನೀವು ಒಂದೆರಡು ಅಡಿಕೆ ಇದ್ರೆ ಕೊಡಿ, ಕವಳ ಸಂಚಿ ಖಾಲಿಯಾಗೋಗದೆ" ಎಂದ. ಅಮ್ಮ ಗೊಣಗುತ್ತಾ "ನಿಂಗೆ ಅಡಿಕೆ ಕೊಟ್ಟು ಪೂರೈಸೈಕಾಗಲ್ಲಾ ನೋಡು. ದಿನಕ್ಕೆ ಸಾವ್ರ ಸಲ ಕವಳ ಹಾಕ್ತೆ. ನಂಗೆ ಬೇಕಾದಷ್ಟು ಕೆಲ್ಸ ಅದೆ. ಈಗ ಅಟ್ಟ ಹತ್ತಿ ಮತ್ತೆ ಅಡಕೆ ತರ್ಲಿಕ್ಕೆ ನನ್ನ ಕೈಯಲ್ಲಂತೂ ಆಗಲ್ಲ" ಎಂದು ಹೇಳಿ ವಾಪಸ್ ಹೋದರು. ಅಮ್ಮ ಹೇಳಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇರಲಿಲ್ಲ. ಅವನು ಹೊಸದಾಗಿ ಯಾವಾಗ ಎಲೆಯಡಿಕೆ ಹಾಕಿಕೊಂಡಿದ್ದನೋ, ನನಗಂತೂ ಗೊತ್ತೇ ಆಗಿರಲಿಲ್ಲ. ಈರನಿಗ್ಯಾಕೋ ಕೊಟ್ಟ ಅವಲಕ್ಕಿ, ಚಾ ಗಿಂತಲೂ ಅಡಿಕೆಯೇ ಮೇಲೆಯೇ ಜಾಸ್ತಿ ಒಲವಿದ್ದ ಹಾಗೇ ಕಂಡಿತು. ಅವನು ನನ್ನನ್ನು ಮತ್ತೆ ಅದರ ಅವಶ್ಯಕತೆಯ ಬಗ್ಗೆ ಕೊರೆಯುವುದಕ್ಕಿಂತ ಮುಂಚೆ ನಾನೇ ಎದ್ದು ಹೋಗಿ ಡಬ್ಬದಿಂದ ೪ ಅಡಿಕೆ ತಂದು ಅವನ ಕೈಗೆ ಹಾಕಿದೆ.

ಈರ ಅವಲಕ್ಕಿ ಖಾಲಿ ಮಾಡುತ್ತಿರುವಂತೆಯೇ ನಾನು ಮತ್ತೆ ಕೇಳಿದೆ. "ಅಲ್ವಾ, ದೇವೇಗೌಡ್ರು ಮುಖ್ಯಮಂತ್ರಿ ಆಗೋದು ಬ್ಯಾಡ ಹೇಳಿ ಎಂತಕ್ಕೆ ಹೇಳಿ ಹೇಳಿಲ್ವಲ್ಲಾ ನೀನು?". "ಅದು... ಈ ಸರಾಯಿ ಮಾರೋದು ನಿಲ್ಲಿಸ್ದವ್ರು ದೇವೇಗೌಡ್ರೇ ಅಲ್ವ್ರಾ. ಅದಕ್ಕೆ ಬೇಡ ಅಂದೆ" ಅಂದ. ಅವನ ಯೋಚನೆಗಳಿಗೆ ಇಂಥ ಆಯಾಮಗಳೂ ಇರುತ್ತವೆ ಎನ್ನುವುದು ನನಗೆ ಗೊತ್ತಿರಲಿಲ್ಲ. "ಥೋ, ಮಾರಾಯ..ಸಾರಾಯಿ ಮಾರೋದ್ನಾ ನಿಲ್ಲಿಸ್ದವ್ರು ದೇವೇಗೌಡ್ರು ಅಲ್ಲ ಮಾರಾಯ. ಬಿಜೆಪಿಯವ್ರು" ಎಂದೆ. "ಯಾರಾದ್ರೆ ಎಂತದು? ಒಟ್ನಲ್ಲಿ ದೇವೇಗೌಡ್ರ ಮಗ ಮುಖ್ಯಮಂತ್ರಿ ಆಗಿದ್ದಾಗ ಅಲ್ದಾ ನಿಲ್ಸಿದ್ದು.ಒಟ್ನಲ್ಲಿ ನಮ್ಮ ಟೈಮ್ ಸರಿಯಿರ್ಲಿಲ್ಲ.ಅದಕ್ಕೆಯಾ ಬಂಗಾರಪ್ನೋರಿಗೆ ವೋಟ್ ಹಾಕದು ನಾನು" ಎಂದ. ಪ್ಯಾಕೆಟ್ ಸರಾಯಿ ಮಾರೋದು ನಿಲ್ಲಿಸಿದಕ್ಕೂ, ಈರನ ಟೈಮ್ ಸರಿಯಿಲ್ಲದಿರದಕ್ಕೂ ರಿಲೇಟ್ ಮಾಡಲು ನನಗಂತೂ ಬಹಳ ಕಷ್ಟವಾಗಲಿಲ್ಲ. ದಿನವೂ ಸಂಜೆ ೭ ಗಂಟೆ ಆಗುತ್ತಿದಂತೆಯೇ ಈರ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡು ಉತ್ತರಾಭಿಮುಖವಾಗಿ ನೀಲೆಕಣಿ ಕಡೆಗೆ ಹೋಗುವುದು ಯಾವ ಗನಗಂಭೀರ ಉದ್ದೇಶಕ್ಕೆ ಎನ್ನುವುದು ಇಡೀ ಊರಿಗೆ ಗೊತ್ತು.ಇಂತಿಪ್ಪ ಈರನಿಗೆ ಧಿಡೀರ್ ಎಂದು ಪ್ಯಾಕೆಟ್ ಸಾರಾಯಿ ನಿಷೇಧ ಮಾಡಿಬಿಟ್ಟರೆ ಎಷ್ಟು ಕಷ್ಟವಾಗಿರಲಿಕ್ಕಿಲ್ಲ?. ಆ ಕಾರ್ಯಕ್ಕೆ ಮುಂದಾದ ಜನರನ್ನು ಅವನು ಜೀವಮಾನದಲ್ಲಿ ಕ್ಷಮಿಸುವುದು ಸುಳ್ಳು. ಈ ವಿಷಯ ಮತ್ತೆ ಮುಂದುವರಿಸಿದರೆ ಈರನ ಮೂಡ್ ಮತ್ತೆ ಯಾವ ಕಡೆ ತಿರುಗುತ್ತದೆಯೋ ಎಂದು ಹೆದರಿ ನಾನು ಮಾತುಕತೆಯನ್ನು ಅಲ್ಲಿಯೇ ನಿಲ್ಲಿಸಿಬಿಟ್ಟೆ.

ಆದರೆ ಈರ ನಿಲ್ಲಿಸುವ ಲಕ್ಷಣವಿರಲಿಲ್ಲ." ನೀವು ಬರೀ ನನ್ನ ಕೇಳಿದ್ದೇ ಆಯ್ತು. ನೀವು ಯಾರಿಗೆ ವೋಟ್ ಹಾಕ್ತ್ರಿ? ಬಂಗಾರಪ್ಪನವ್ರಿಗೇ ಹಾಕಿ" ಎಂದ. ನಾನು ತಲೆ ಆಡಿಸಿದೆ. ಇನ್ನೇನೂ ಹೇಳಲು ಬಾಯಿತೆರೆದರೆ ನನ್ನ ಮಾತುಗಳೆಲ್ಲವೂ ನನಗೇ ತಿರುಗುಬಾಣವಾಗುವ ಸಾಧ್ಯತೆಯಿತ್ತು. "ಎಲೆಕ್ಷನ್ ದಿನಾ ನಿಮ್ಗೆ ರಜೆ ಅದ್ಯಾ? ವೋಟ್ ಹಾಕಕ್ಕೆ ಬೆಂಗ್ಳೂರಿಂದ ಬರದು ಹೌದಾ?" ಎಂದು ಕೇಳಿದ. "ಹ್ಮ್...ನೋಡಣಾ. ಬರ್ಬೇಕು ಅಂತದೆ. ಎಂತಾ ಆಗ್ತದೆ ಗೊತ್ತಿಲ್ಲ. ಈ ಎಲೆಕ್ಷನ್ ನಾಟಕಾ ಎಲ್ಲ ನೋಡಿದ್ರೆ ಯಾರಿಗೂ ವೋಟ್ ಹಾಕದೇ ಬ್ಯಾಡ ಅನ್ನಸ್ತದೆ ಮಾರಾಯಾ" ಎಂದು ತುಸು ಬೇಸರದ ಧ್ವನಿಯಲ್ಲೇ ಹೇಳಿದೆ. "ಹ್ವಾಯ್, ನೀವು ಹಿಂಗೆ ಹೇಳಿದ್ರೆ ಹೆಂಗ್ರಾ? ನಿಮ್ಮಂಥ ಹುಡುಗ್ರು, ಓದ್ದವ್ರು ವೋಟ್ ಹಾಕ್ಲೇ ಬೇಕ್ರಾ. ನಾವಾರೇ ಓದದವ್ರು, ಜಾಸ್ತಿ ತೆಳಿಯದಿಲ್ಲಾ. ನೀವು ಪ್ರಪಂಚ ಕಂಡವ್ರು. ನಿಮಗೆ ಗೊತ್ತಿರ್ತದೆ ಅಲ್ರಾ, ಯಾರಿಗೆ ವೋಟ್ ಹಾಕ್ಬೇಕು, ಯಾರಿಗೆ ಹಾಕ್ಬಾರ್ದು ಅಂತೆಲ್ಲಾ? ನೀವು ವಿದ್ಯಾವಂತರು ವೋಟ್ ಹಾಕ್ದೇ ಇದ್ದ್ರೆ ಎಂಥೆಂತದೋ ಜನ ಆರ್ಸಿ ಬರ್ತಾರೆ. ವೋಟ್ ಹಾಳು ಮಾಡ್ಬೇಡ್ರಿ ಮಾರಾಯ್ರಾ. ರಜೆ ಹಾಕಾದ್ರೂ ಬಂದು ವೋಟ್ ಮಾಡಿ ಹೋಗಿ" ಎಂದು ಕಳಕಳಿಯ ಧ್ವನಿಯಲ್ಲಿ ಹೇಳಿದ. ಈರನಿಗಿದ್ದ ಕಳಕಳಿ ಎಲ್ಲ ವಿದ್ಯಾವಂತರಲ್ಲೂ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ನನಗೆ ಅನ್ನಿಸಿತು. ಈರ ಮುಂದುವರಿಸಿ " ನಾನು ಭಟ್ಟರಿಗೂ ಹೇಳ್ದೆ. ಭಟ್ಟ್ರ ಮಗಳು ಕಾಲೇಜಿಗೆ ಹೋಗ್ಲಿಕ್ಕೆ ಹಣಕಿ ೩ ವರ್ಷ ಆಗ್ತಾ ಬಂತು. ಅವ್ರೂ ವೋಟ್ ಹಾಕ್ಬಹುದೇನಪಾ. ಎರಡು ತಿಂಗ್ಳ ಹಿಂದೆ ಹೀಪನಳ್ಳಿ ಶಾಲೆಲೇ ಅದೆಂತೋ ಹೆಸರು ಬರೆಸ್ಕಂಡು ಹೋದ್ರು. ನಮ್ಮ ಗೋವಿಂದಂಗೆ ಈ ವರ್ಷ ೧೮ ತುಂಬ್ತು. ಅವ್ನ ಕಳ್ಸಿಕೊಟ್ಟಿದ್ದೆ. ಈಗ ಮೊನ್ನೆ ಮೊನ್ನೆ ಅದೆಂತೋ ಮಶಿನ್ನಾಗೆ ಫೋಟೋ ತೆಗಸಿ ಒಂದು ಕಾರ್ಡ್ ಕೊಟ್ರಪ್ಪಾ. ಅವ್ನುವಾ ಈ ಸಲ ವೋಟ್ ಮಾಡ್ಬಹುದಂತೆ. ಆದ್ರೆ ಭಟ್ಟ್ರ ಮಗಳು ಹೋದಂಗೆ ಇಲ್ಲ. ಅಲ್ಲಾ ಆ ಹುಡಗಿಗಂತೂ ಬುದ್ಧಿ ಇಲ್ಲ.ಭಟ್ಟ್ರಾದ್ರೂ ಕಳ್ಸಿಕೊಡ್ಬೇಕಾ ಇಲ್ಲ್ವಾ? ನಾ ಹೇಳ್ದೆ. ಭಟ್ಟರೆಲ್ಲಿ ಕೇಳ್ತಾರೆ ನನ್ನ ಮಾತಾ? ಮುದಕಾ ವಟವಟಗುಡ್ತಾನೆ ಅಂತಾರೆ . ಹೋಗ್ಲಿ ಬಿಡಿ.ಎಂತಾ ಮಾಡಕ್ಕೆ ಆಗ್ತದೇ ಅಲ್ರಾ? ಎಂದು ತನ್ನ ಬೇಸರ ತೋಡಿಕೊಂಡ. ನಾನು ಸುಮ್ಮನೆ ಅವನನ್ನು ಸಮ್ಮತಿಸಿದೆ.

ಇನ್ನೂ ಒಂದಷ್ಟು ಹೊತ್ತು ಮಾತಾಡುತ್ತಿದ್ದನೇನೋ. ಆದರೆ ನಾನು ಸುಮ್ಮನಿದ್ದದನ್ನು ನೋಡಿ "ನಿಮ್ಮ ಹತ್ರ ಮಾತಾಡ್ತಾ ಇದ್ರೆ ಹೀಂಗೆ ಮಧ್ಯಾಹ್ನ ಆಗೋಗ್ತದೆ. ಭಟ್ಟ್ರು ಆಮೇಲೆ ಕೋಲು ಹಿಡ್ಕಂಡು ಕಾಯ್ತಿರ್ತಾರೆ" ಅಂದವನೇ "ಹೆಗಡೇರಿಗೆ, ನೀವೇ ಹೇಳ್ಬಿಡಿ. ಸಂಜೆ ಬಂದು ದುಡ್ಡು ಇಸ್ಕಂಡು ಹೋಗ್ತೆ. ಬರ್ಲಾ? ಬರ್ತೆ ಅಮಾ.."ಎಂದವನೇ ಎದ್ದು ಹೋಗೇ ಬಿಟ್ಟ. ನಾನು ಸ್ವಲ್ಪ ಹೊತ್ತು ಅವನ ಹೋದ ದಾರಿಯನ್ನೇ ನೋಡ್ತಾ ಇದ್ದೆ. ಮನಸ್ಸಿನಲ್ಲಿ ಮಾತ್ರ, ಯಾವುದೇ ಕಾರಣಕ್ಕೆ ತಪ್ಪಿಸದೇ ವೋಟ್ ಮಾತ್ರ ಹಾಕಲೇ ಬೇಕೆಂದು ಧೃಢವಾಗಿ ನಿರ್ಧರಿಸಿಕೊಂಡೆ. ನೀವೂ ಅಷ್ಟೇ. ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಆಯ್ತಾ? ಗೊತ್ತಾದ್ರೆ ಈರ ಬಹಳ ಬೇಜಾರು ಮಾಡ್ಕೋತಾನೆ!